ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಫಿಲಂ ಅಕಾಡೆಮಿ ಲಿಂಗೈಕ್ಯ!

By Staff
|
Google Oneindia Kannada News

Ktaka Film Academy moved to trash?
ಕರ್ನಾಟಕ ಫಿಲಂ ಅಕಾಡೆಮಿ ಬಫ್ ಪೇಪರ್ ಮೇಲೆ ಸ್ಥಾಪನೆಯಾಗಿ ಐದು ತಿಂಗಳಾದವು. ಸಿನಿಮಾ ಸಂಸ್ಕೃತಿ ಹಬ್ಬುವ ಈ ಸಂಸ್ಥೆ ಕಾರ್ಯಾರಂಭ ಮಾಡುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ. ಇದು ಏನನ್ನು ಸೂಚಿಸುತ್ತದೆ?

* ಎಸ್ಕೆ. ಶಾಮಸುಂದರ

ಚಲನಚಿತ್ರ ಸಂಸ್ಕೃತಿಯನ್ನು ಪೋಷಿಸುವ ಉದ್ದೇಶದಿಂದ ಸುಮಾರು ಹತ್ತು ವರ್ಷಗಳ ಹಿಂದೆ ನಮ್ಮ ರಾಜ್ಯದಲ್ಲಿ ಕರ್ನಾಟಕ ಫಿಲಂ ಅಕಾಡೆಮಿ ಎಂಬ ಸಂಸ್ಥೆ ಸ್ಥಾಪನೆ ಆಗಿತ್ತು, ನೆನಪಿದೆಯಾ? ಆಗ ಹಣಕಾಸು ಸಚಿವ ಸಿದ್ದರಾಮಯ್ಯ ಮತ್ತು ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಚಿವರಾಗಿದ್ದ ಎಂ. ನಾಣಯ್ಯ ಅವರು ಈ ಅಕಾಡೆಮಿ ಬಗೆಗೆ ತುಂಬಾ ಉತ್ಸುಕರಾಗಿದ್ದರು. ಆದರೆ ಕೆಲವು ಕನ್ನಡಿಗರ ಕ್ಷುಲ್ಲಕ ಆಸೆಗಳ ಫಲವಾಗಿ ಅಕಾಡೆಮಿ ಕಣ್ಣುತೆರೆಯುವ ಮುನ್ನ ರೆಪ್ಪೆಮುಚ್ಚಿತು.

ಅಕಾಡೆಮಿಯ ಸದಸ್ಯತ್ವ ಆಸನದ ಹಪಾಹಪಿ, ಅಧ್ಯಕ್ಷ ಪದವಿ ಕುರ್ಚಿಯ ಮೇಲೆ ಅನೇಕರ ಕಣ್ಣು ಏಕಕಾಲಕ್ಕೆ ಬಿದ್ದದ್ದರಿಂದ ಇವತ್ತಿಗೆ ದಶಮಾನೋತ್ಸವ ಸಂಭ್ರಮದಲ್ಲಿ ತೊಡಗಿಕೊಂಡಿರಬೇಕಾಗಿದ್ದ ಫಿಲಂ ಅಕಾಡೆಮಿ ಹುಟ್ಟುವುದಕ್ಕಿಂತ ಮುಂಚೆಯೇ ನೆಗೆದು ಬಿದ್ದು ನೆಲ್ಲಿಕಾಯಿ ಆಯಿತು. ಆದರೂ, ಚೊಚ್ಚಿಲ ಪ್ರಣಯ ಫಲ ಅಬಾರ್ಷನ್ ಆದ ನಂತರವೂ, ಚಲನಚಿತ್ರ ಸಂಸ್ಕೃತಿ ರಾಜ್ಯದಲ್ಲಿ ಬೇರೂರುವುದಕ್ಕೆ ಪ್ರೀತಿಯಿಲ್ಲದಿದ್ದರೂ, ಕೆಲವರ ಅಧಿಕಾರ ಸ್ಥಾನಮಾನದ ಆಸೆಗಳ ಒತ್ತಾಸೆಯಿಂದಾಗಿ ಫಿಲಂ ಅಕಾಡೆಮಿ ಸ್ಥಾಪನೆಗೆ ಮತ್ತೆ 2008ರಲ್ಲಿ ರೆಕ್ಕಪುಕ್ಕ ಬಂತು.

ಅದರಂತೆ, 2008ರ ಮುಂಗಡಪತ್ರದಲ್ಲಿ ಬಿ.ಎಸ್. ಯಡ್ಯೂರಪ್ಪ ಫಿಲಂ ಅಕಾಡೆಮಿ ಸ್ಥಾಪಿಸುವುದಾಗಿ ಘೋಷಿಸಿದರು. ಆ ಘೋಷಣೆಯಾಗಿ ಇಂದಿಗೆ ಐದು ತಿಂಗಳಾದರೂ ಅಕಾಡೆಮಿ ಸ್ಥಾಪನೆಯಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಬಲ್ಲ ಮೂಲಗಳ ಪ್ರಕಾರ ಪಕ್ಷ ರಾಜಕೀಯ ಮತ್ತು ಸಿನಿಮಾ ರಾಜಕೀಯ ಕಾರಣಗಳಿಂದಾಗಿ ಈ ಬಾರಿಯೂ ಫಿಲಂ ಅಕಾಡೆಮಿ ರಚನೆ ಆಗುವುದಿಲ್ಲ. ಹತ್ತು ವರ್ಷಗಳ ಹಿಂದೆ ನಡೆದ ವಿದ್ಯಮಾನಗಳು ಮರುಕಳಿಸಿ ಫಿಲಂ ಅಕಾಡೆಮಿ ಸಾವಿನ ರೀಮೇಕ್ ಆಗುವುದು ಖಚಿತ ಎಂಬ ಮಾತು ವಿಧಾನಸೌಧ ಮತ್ತು ಗಾಂಧೀನಗರದಿಂದ ಕೇಳಿಬರುತ್ತಿವೆ. ಇತಿಹಾಸದ ಮರುಕಳಿಕೆಯಲ್ಲಿ ಕನ್ನಡಿಗರಿಗೆ ಅದೆಷ್ಟು ಆಸ್ಥೆ?

ರಾಜ್ಯದಲ್ಲಿ ಅನೇಕಾರು ಅಕಾಡೆಮಿಗಳಿವೆ. ಮುಂಗಡಪತ್ರ ಹೊರಬಿದ್ದ ತದನಂತರದಲ್ಲಿ ಎಲ್ಲ ಅಕಾಡೆಮಿಗಳಿಗೂ ಸದಸ್ಯರು, ಅಧ್ಯಕ್ಷರು ನೇಮಕವಾಗಿ ಅವು ತಮ್ಮತಮ್ಮ ಕೆಲಸ ಕಾರ್ಯ ಆರಂಭಿಸಿವೆ. ಆದರೆ ಫಿಲಂ ಅಕಾಡೆಮಿಗೆ ನೇಮಕಾತಿಗಳನ್ನು ಮಾಡುವ ಕಡತ ಮಾತ್ರ ಮುಖ್ಯಮಂತ್ರಿಗಳ ಹವಾನಿಯಂತ್ರಿತ ಕಚೇರಿಯಲ್ಲಿ ತಣ್ಣಗೆ ಮಲಗಿದೆ.

ಅಕಾಡೆಮಿ ರಚನೆಗೆ ಮುಖ್ಯವಾಗಿ ಅಡ್ಡಗಾಲು ಹಾಕುತ್ತಿರುವವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಒಂದು ಪ್ರಭಾವಿ ವರ್ಗ ಎಂದು ಹೇಳಲಾಗುತ್ತಿದೆ. ಅಕಾಡೆಮಿಗೆ ಒಟ್ಟು 14 ಮಂದಿ ಸದಸ್ಯರು ಇರಬೇಕಾಗಿದ್ದು ಅವುಗಳಲ್ಲಿ ಸಿಂಹಪಾಲು ತನ್ನ ಸದಸ್ಯರಿಗೇ ಸಲ್ಲಬೇಕೆಂಬ ಮಂಡಳಿಯ ಹಠದಿಂದಾಗಿ ಅಕಾಡೆಮಿ ಸ್ಥಾಪನೆ ಹೆಜ್ಜೆಹೆಜ್ಜೆಗೂ ಮುಗ್ಗರಿಸಿ ಬೀಳುತ್ತಿದೆ. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ವಾಣಿಜ್ಯ ಮಂಡಳಿ ಅಧ್ಯಕ್ಷರೇ ಅಕಾಡೆಮಿ ಅಧ್ಯಕ್ಷರೂ ಆಗಬೇಕೆಂದು ಹಂಬಲಿಸುತ್ತಿರುವುದು ಅಕಾಡೆಮಿ ಕಲ್ಪನೆಯ ಆಧಾರಸ್ಥಂಭವನ್ನೇ ಅಲುಗಾಡಿಸುತ್ತಿದೆ.

ನಿರ್ಮಾಪಕ ಸಂಘ, ನಿರ್ದೇಶಕರ ಸಂಘ, ಕಲಾವಿದರ ಸಂಘ ಮತ್ತು ಮಂಡಳಿಯ ಚುನಾಯಿತ ಸದಸ್ಯರಿಂದಾಯ್ದ 7 ಮಂದಿಯನ್ನು ಅಕಾಡೆಮಿಗೆ ನೇಮಕಮಾಡಿ ಉಳಿದ ಏಳು ಸ್ಥಾನಗಳಿಗೆ ಚಲನಚಿತ್ರ ಬಲ್ಲ ತಜ್ಞರನ್ನು ಆಯ್ಕೆ ಮಾಡಬೇಕೆಂಬ ಪ್ರಸ್ತಾವನೆ ಇದೆ. ಆದರೆ ತನಗೆ ಇನ್ನೂ ಬೇಕು ಇನ್ನೂ ಬೇಕು ಎಂಬ ಮಂಡಳಿಯ ಬಕಾಸುರ ಬಯಕೆಯಿಂದಾಗಿ ಅಕಾಡೆಮಿ ತಲೆಎತ್ತುವುದೇ ದುಸ್ತರವಾಗಿದೆ. ಹಾಗೆ ನೋಡಿದರೆ, ವಾಣಿಜ್ಯ ಮಂಡಳಿ ಸಿನಿಮಾದ ವ್ಯಾಪಾರಿ ಉದ್ದೇಶಗಳನ್ನು ಕಾಪಾಡುವ ಹೊಣೆಹೊತ್ತಿರುತ್ತದೆ. ತಕ್ಕಡಿ ಹಿಡಿದಿರುವ ಅದಕ್ಕೂ ಸಿನಿಮಾ ಅಕಾಡೆಮಿಯ ಉದ್ದೇಶಗಳಿಗೂ ತುಂಬಾ ವ್ಯತ್ಯಾಸ ಇರುತ್ತದೆ, ಇರಬೇಕು ಎನ್ನುವುದು ಸಿನಿಮಾ ಸಂಸ್ಕೃತಿ ಮತ್ತು ಅಕಾಡೆಮಿಯ ಧೇಯೋದ್ದೇಶಗಳನ್ನು ಮನಗಂಡಿರುವ ತಜ್ಞರ ಅನಿಸಿಕೆ.

ಸ್ವತಃ ಡಾ.ಜಯಮಾಲಾ ಅವರೇ ಅಕಾಡೆಮಿಯ ಅಧ್ಯಕ್ಷಗಿರಿ ಕನ್ಯೆಯಾಗಲು ಸಿದ್ಧರಾಗಿರುವುದು ಸರಕಾರಕ್ಕೆ ನುಂಗಲಾರದ ತುತ್ತಾಗಿದೆ. ಗಿರೀಶ್ ಕಾಸರವಳ್ಳಿ, ಎಸ್. ರಾಮಚಂದ್ರ, ಎಂ. ಭಕ್ತವತ್ಸಲ, ವಿ. ಎನ್ . ಸುಬ್ಬರಾವ್ ಅಧ್ಯಕ್ಷ ಸ್ಥಾನಕ್ಕೆ ಚಾಲ್ತಿಯಲ್ಲಿರುವ ಕೆಲವು ಹೆಸರುಗಳು. (ಇವರಲ್ಲಿ ಯಾರು ಅಧ್ಯಕ್ಷರಾದರೆ ಅಕಾಡೆಮಿ ಸ್ಥಾಪನೆಯ ಮೂಲ ಉದ್ದಿಶ್ಯ ಈಡೇರಬಹುದು? ಊಹೆ ನಿಮಗೆ ಬಿಟ್ಟದ್ದು?). ಆದರೆ, ರಾಜಕೀಯ ಒತ್ತಡ ಕಾರಣಗಳಿಗೆ ಮೇಲಿನ ಯಾರಿಗೂ ಮಣೆ ಹಾಕಲು ಯಡ್ಯೂರಪ್ಪ ಅವರಿಗೆ ಇಷ್ಟವಿಲ್ಲ. ಯಾಕೆಂದರೆ, ಅಧ್ಯಕ್ಷ ಸ್ಥಾನಮಾನಕ್ಕೆ ತುದಿಗಾಲಲ್ಲಿ ನಿಂತಿರುವ ಭಾಜಪದ ಶ್ರುತಿ, ಮದನ್ ಪಟೇಲ್, ಮಹೇಂದರ್ ಮುಂತಾದವರನ್ನು ಆ ಜಾಗಕ್ಕೆ ತಂದರೆ ಬಿಜೆಪಿಗೆ ಅಷ್ಟರಮಟ್ಟಿಗೆ ತಲೆನೋವು ಕಡಿಮೆ ಆಗುತ್ತದೆ ಎನ್ನುವುದು ಯಡ್ಡಿ-ಕಟ್ಟ-ಸದಾನಂದ ಗೌಡರ ರಾಜಕೀಯ ಲೆಕ್ಕಾಚಾರ.

ಈ ಎಲ್ಲ ದುಸ್ಥಿತಿಯ ಹಿನ್ನೆಲೆಯಲ್ಲಿ ಅಕಾಡೆಮಿ ರಚನೆ ಆಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಸಿನಿಮಾ ಸಂಸ್ಕೃತಿಯ ಸಸಿಗಳನ್ನು ಕನ್ನಡದ ನೆಲದಲ್ಲಿ ನೆಡುವುದಕ್ಕೆ ಭೂಮಿಯೇ ಸಿಗುತ್ತಿಲ್ಲ. ಅಕಾಡೆಮಿಯ ಕಲ್ಪನೆ ಮತ್ತು ಕಾರ್ಯಚಟುವಟಿಕೆಗಳಲ್ಲಿ ಆಸ್ಥೆ ಉಳ್ಳವರು ತಿರುವನಂತಪುರಕ್ಕೋ, ಕೊಲ್ಕತ್ತಕ್ಕೋ ಹೋಗಿಬರಬೇಕು.

ವಿಪರ್ಯಾಸ ನೋಡಿ. ದಶಕದ ಹಿಂದೆ ಕರ್ನಾಟಕದಲ್ಲಿ ಚಲನಚಿತ್ರ ಅಕಾಡೆಮಿಯ ಕನಸುಗಳು ಮೊಳೆತವಲ್ಲ; ಆ ಕನಸುಗಳನ್ನು ಕಂಡು ಕೇರಳ ಚಿತ್ರೋದ್ಯಮದ ದಂಗುಬಡಿದಿತ್ತು. ಇಂಥದೊಂದು ಅಕಾಡೆಮಿ ನಮ್ಮಲ್ಲೂ ಆದರೆ ಎಷ್ಟು ಚೆನ್ನ ಎಂದು ಕೇರಳ ಸರ್ಕಾರ ಗಿರೀಶ್ ಕಾಸರವಳ್ಳಿ ಸೇರಿದಂತೆ ಕನ್ನಡ ಚಿತ್ರೋದ್ಯಮದ ಹಲವರೊಂದಿಗೆ ಚರ್ಚೆ ನಡೆಸಿತ್ತು. ಪರಿಣಾಮವಾಗಿ, 1998ರಲ್ಲಿ ಕೇರಳ ಚಲನಚಿತ್ರ ಅಕಾಡೆಮಿ ಅಸ್ತಿತ್ವಕ್ಕೆ ಬಂತು. ಅಲ್ಲೀಗ ಅಕಾಡೆಮಿ ವತಿಯಿಂದ ವರ್ಷಪೂರ್ತಿ ಸಿನಿಮಾ ಚಟುವಟಿಕೆಗಳು. ನಮ್ಮಲ್ಲಿ? ಹಾಂ, ರೀಮೇಕ್ ಮಾಡೋಣ ಬಿಡಿ ಅದಕ್ಕೇನಂತೆ, ಎಂದಿರಾ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X