• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೀಳ್ಕೊಡುಗೆಗೆ ಅಕ್ಷರ ಸಮಾರಂಭ - ಶಾಮ್

By Staff
|

Farewell to Shikaripura Harihareshwaraಎಂಟು ವರ್ಷಗಳಿಂದ ನಮ್ಮ ಅಂತರ್ ಜಾಲ ತಾಣಕ್ಕೆ ಹೊಂಬೆಳಕ ಹೊನಲು ಶೀರ್ಷಿಕೆಯಲ್ಲಿ ಸಾಪ್ತಾಹಿಕ ಅಂಕಣ ಬರೆದ ಶಿಕಾರಿಪುರ ಹರಿಹರೇಶ್ವರ ಅವರು ಬಿಡುವು ಬಯಸಿದ್ದಾರೆ. ಅವರ ಓದುಗರು, ಅಭಿಮಾನಿಗಳು ಮತ್ತು ನಮ್ಮ ಜಾಲತಾಣದ ಸಂಪಾದಕೀಯ ವಿಭಾಗದ ಪರವಾಗಿ ಹಾರ್ದಿಕವಾಗಿ ಬೀಳ್ಕೊಡುವ ಬರಹವಿದು.

ಅಂಕಣಕಾರ : ಎಸ್ಕೆ. ಶಾಮಸುಂದರ

ದಟ್ಸ್ ಕನ್ನಡ ಅಂತರ್ಜಾಲ ತಾಣದ ಮೊದಲ ಓದುಗ ಹಾಗೂ ಮೊಟ್ಟಮೊದಲ ತಜ್ಞ ಬರಹಗಾರ ಎಂಬ ನಮ್ಮಗಳ ಪ್ರೀತಿಗೆ ಪಾತ್ರರಾದವರು ಶಿಕಾರಿಪುರ ಹರಿಹರೇಶ್ವರ. ಇಸವಿ 2000ದಲ್ಲಿ ನಮ್ಮ ಪತ್ರಿಕೆ ಅಂತರ್ಜಾಲದಲ್ಲಿ ರಂಗಪ್ರವೇಶ ಮಾಡಿದಾಗ ಜೋಗುಳ ಹಾಡಿ ಬರಮಾಡಿಕೊಂಡವರು ಅವರು. ಒಟ್ಟು ಇಪ್ಪತ್ತೇಳು ವರ್ಷದ ವಿದೇಶ ವಾಸಕ್ಕೆ ಗುಡ್ ಬೈ ಹೇಳಿ ಮೈಸೂರಿಗೆ ಹಿಂತಿರುಗಿದ ಸಂದರ್ಭದಲ್ಲಿ ಕೊಂಚಕಾಲ ಮಧ್ಯಂತರ ಪಡೆದುದ ಹೊರತುಪಡಿಸಿದರೆ ಅವರ ಲೇಖನಿಗೂ ದಟ್ಸ್ ಕನ್ನಡ ವಾಚಕವರ್ಗಕ್ಕೂ ಬಿಡಿಸಲಾಗದ ನಂಟು.

ಈ ಅಂಟಿನ ನಂಟನು ಬಲ್ಲವರಾರು. ಎಂಟು ವರ್ಷ ಸತತವಾಗಿ ನಿಯಮಿತವಾಗಿ "ಹೊಂಬೆಳಕ ಹೊನಲು" ಅಂಕಣವನ್ನು ಅಲಂಕರಿಸಿ ಅಂತರ್ಜಾಲ ಮಾಧ್ಯಮದಲ್ಲಿ ಕನ್ನಡಪರಂಪರೆಯ ಹರಿಗೋಲನ್ನು ಮೀಟಿದ ಶ್ರೇಯಸ್ಸು ನಮ್ಮ ಅಂಕಣಕಾರ ಹರಿಹರೇಶ್ವರ ಅವರಿಗೆ ನಿಸ್ಸಂದೇಹವಾಗಿ ಸಲ್ಲುತ್ತದೆ.

ನಾನಾ ದೇಶಗಳಲ್ಲಿ ಹರಡಿಕೊಂಡಿರುವ ನಿವಾಸಿ ಹಾಗೂ ಅನಿವಾಸಿ ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ಅವರು ಪ್ರೀತಿಯ ಹರಿ. ವಿದ್ಯಾರ್ಥಿ ದೆಸೆಯಲ್ಲಿದ್ದಾಗ ದಾವಣಗೆರೆಯಲ್ಲಿ, ನೌಕರಿ ಅರಸಿ ಹೊರಟಾಗ ನೈವೇಲಿಯಲ್ಲಿ, ಆನಂತರ ಮಧ್ಯಪ್ರಾಚ್ಯ ದೇಶಗಳಲ್ಲಿ ಹಾಗೂ ಅಮೆರಿಕಾದ ನೆಲದಲ್ಲಿ ಅನಾಮತ್ತು ಇಪ್ಪತ್ತು ವರ್ಷಗಳ ಕಾಲ ಕನ್ನಡ ಕಾಯಕವನ್ನು ಬೀಜಾಕ್ಷರಮಂತ್ರವೆಂಬಂತೆ ಪಠಿಸಿದ ಹರಿಯವರಿಗೆ ಕನ್ನಡ ಮಾತು-ಅಕ್ಷರಗಳೇ ಪ್ರಾಣವಾಯು ಎಂದರೆ ಅತಿಶಯೋಕ್ತಿಯಲ್ಲ. ಫಿಲಡೆಲ್ಫಿಯ, ಸೆಂಟ್ ಲೂಯಿ ಆನಂತರ ತಮ್ಮ ಬಹುಪಾಲು ಸಮಯವನ್ನು ಉತ್ತರ ಕ್ಯಾಲಿಫೋರ್ನಿಯದ ಕನ್ನಡ ವಿಲಾಸಿಗಳಿಗೆ ಮೀಸಲಿಟ್ಟವರು ಅವರು. ಹರಿಯವರು ಪ್ರತಿಫಲಾಕ್ಷೆಯಿಲ್ಲದೆ ನೆಟ್ಟು ಬೆಳೆಸಿದ, ಕಸಿಮಾಡದ ಕನ್ನಡ ಸಸಿಗಳು ಅನೇಕವಿವೆ.

ಪುಸ್ತಕಗಳನ್ನು ಹೊಂದಿಸುವುದರಿಂದ ಮೊದಲಾಗಿ, ಹಿರಿಯ ಲೇಖಕರನ್ನು ಕಿರಿಯರಿಗೆ ಪರಿಚಯಿಸುತ್ತಾ , ಉದಯೋನ್ಮುಖರ ಬರವಣಿಗೆಗಳನ್ನು ತಿದ್ದಿತೀಡುತ್ತಾ , ಬೆಳೆದು ನಿಂತವರ ಬೆನ್ನುತಟ್ಟುತ್ತಾ ಯುವಕರ ಕನ್ನಡ ಉತ್ಸಾಹಕ್ಕೆ ಶಿಸ್ತು ಮತ್ತು ಸಂಮಯವನ್ನು ಧಾರೆ ಎರೆದ ಕೀರ್ತಿ ಹರಿಯವರ ಜೋಳಿಗೆಯೊಳಗೆ ಭರ್ತಿಯಿದೆ. ಕನ್ನಡ ಕೆಲಸಗಳನ್ನು ಕರಗೋಪಾದಿಯಲ್ಲಿ ಹೊತ್ತು ತಿರುಗಿದ್ದಕ್ಕೆ ಪ್ರತಿಯಾಗಿ ಅವರ ಜುಬ್ಬದ ಜೇಬು ಖಾಲಿಯೂ ಆಗಿದೆ. ಅವರ ಅಪಾರ ಶಿಷ್ಯ ವೃಂದಕ್ಕೆ ಹರಿಯವರು "ಹರಿ ಸರ್ವೋತ್ತಮ ವಾಯು ಜೀವೋತ್ತಮ" ಆದ ಬಗೆ ಹೇಗೆ ಎನ್ನುವುದು ಅವರ ಜೀವನ ಚರಿತ್ರೆ ಬರೆಯಿಸಿಕೊಂಡು ಬೆಳಕಾಗುವವರೆಗೆ ರಹಸ್ಯವಾಗಿರುತ್ತದೆ. ಕನ್ನಡ ಬಾಂಧವರಿಗೆ ತಿಳಿದಿರಲಿ.

ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ಆಳವಾದ ಅಧ್ಯಯನ ಮತ್ತು ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ವಿನೀತ ಪ್ರಭುತ್ವ ಸಂಪಾದಿಸಿರುವ ಹರಿಯವರ ಓದಿನ ಹರವು ಮಿಸ್ಸಿಸಿಪ್ಪಿ ನದಿಯಷ್ಟೆ ವಿಶಾಲ. ಅನೇಕ ಕೃತಿಗಳನ್ನು ರಚಿಸಿ ಪ್ರಕಟಿಸಿರುವ ಅವರ ಬರವಣಿಗೆಯ ಓದು ತುಂಗೆಯಷ್ಟೆ ಸಿಹಿ. ಅಷ್ಟಿಲ್ಲದಿದ್ದರೆ ಅಮೆರಿಕಾದ ಮೂಲೆಯಲ್ಲಿದ್ದ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹುಡುಕಿಕೊಂಡು ಹೋಗುತ್ತಿರಲಿಲ್ಲ.

ಅಮೆರಿಕಾ ಸರಕಾರದ ಸಿವಿಲ್ ಇಂಜಿನಿಯರ್ ನೌಕರಿಯಿಂದ ಎಸ್.ಕೆ. ಹರಿಹರೇಶ್ವರ ಅವರು ನಿವೃತ್ತಿ ಪಡೆದುದು ಬದುಕಿನ ಒಂದು ಅಧ್ಯಾಯ ಅಷ್ಟೆ. ಬಿಡುವು ಎನ್ನುವ ಶಬ್ದ ಅವರ ನಿಘಂಟಿನಲ್ಲಿಲ್ಲ. ಸದ್ಯಕ್ಕೆ ಹರಿ ಹಳೆ ಮೈಸೂರು ಸಂಸ್ಥಾನದ ಪ್ರಜೆ. ಜಿಲ್ಲೆಯ ನಾನಾ ಕನ್ನಡ ಸಂಘ ಸಂಸ್ಥೆಗಳು, ಲೇಖಕರು, ವಿದ್ವಾಂಸರೊಂದಿಗೆ ಅವರದ್ದು ನಿತ್ಯ ಒಡನಾಟ. ಸಾಹಿತ್ಯ ಚರ್ಚೆ, ಲೇಖನ ವ್ಯವಸಾಯ, ಉಪನ್ಯಾಸ ಏನಾದರೊಂದು ಕನ್ನಡ ಕಾರ್ಯಕ್ರಮದಲ್ಲಿ ಅವರು ಅವಿರತನಿರತ. ಒಂದು ದಿವಸ ಕನ್ನಡ ಸಾಹಿತ್ಯ ಸರಸ್ವತಿಯ ಜತೆಗೆ ಸರಸವಾಡದಿದ್ದರೆ, ಗುದ್ದಾಡದಿದ್ದರೆ ಅವರು ಜ್ವರಬಂದು ಹಾಸಿಗೆ ಹಿಡಿಯುವುದು ಗ್ಯಾರಂಟಿ.

ಇಂತಿಪ್ಪ ಹರಿಯವರ ಕೈಗಳು ಇದೀಗ ಸಾಹಿತ್ಯ ಪ್ರಬೇಧದಲ್ಲಿ ಒಂದು ವಿಶಿಷ್ಟ ಅಧ್ಯಯನಕ್ಕೆ ತಂತಾನೆ ಮನಸೋಲುತ್ತಿರುವಂತೆ ನನಗೆ ಭಾಸವಾಗುತ್ತಿದೆ. "ನಿಮ್ಮ ಜೀವನ ಚರಿತ್ರೆ ಬರೀರಿ ಬರೀರಿ" ಎಂದು ನಾನು ಅನೇಕ ಬಾರಿ ಅವರನ್ನು ಕೆಣಕಿದ್ದುಂಟು. ಹೊಂಬೆಳಕ ಹೊನಲು ಅಂಕಣಕ್ಕೆ ಇವತ್ತಿನ ದಿನ ಕೊನೆಯ ಕಂತು ಬರೆದು ವಿದಾಯ ಹೇಳುತ್ತಿರುವ ಹೊತ್ತಿಗೆ ಸರಿಯಾಗಿ ಅವರು ಆತ್ಮ ಚರಿತ್ರೆಯನ್ನು ಬರೆಯಲು ಶುರುಮಾಡಿಕೊಂಡಿದ್ದಾರೋ ಏನೋ? ನನಗೆ ಅನುಮಾನ. ಉಳಿದದ್ದು ಆ ಶ್ರೀಹರಿ ಪರಮಾತ್ಮನಿಗೇ ಗೊತ್ತು.

ಕನ್ನಡ ಸಂದರ್ಭದಲ್ಲಿ ಇವತ್ತು ನನಗೆ ಗೋಚರಿಸುತ್ತಿರುವವರೆಲ್ಲ ಚಳವಳಿಗಾರರು, ಉಗ್ರ ಹೋರಾಟಗಾರರು ಅದಕ್ಕೂ ನಾಲಕ್ಕು ಹೆಜ್ಜೆ ಮುಂದೆ ಹೋಗಿ ಕನ್ನಡ ಸೇನಾನಿಗಳು. ಆದರೆ, ಕನ್ನಡಕ್ಕೇ ವಿಶಿಷ್ಟವಾದ ಒಂದು ಕಿಂಕರ ಪಡೆಯನ್ನು ಕನ್ನಡ ಸಾರಸ್ವತ ಸಮಾಜ ಕಂಡಿದೆ. ಖೇದದ ಸಂಗತಿಯೆಂದರೆ ನಾನಂದುಕೊಂಡ ಕಿಂಕರರ ಸಂತತಿ ದಿನೇದಿನೇ ಕ್ಷಿಣಿಸುತ್ತಿದೆ ಅಥವಾ ಕಿಂಕರ ಶಬ್ದಕ್ಕೆ ಬೇರೆಯದೇ ಅರ್ಥ ವ್ಯಾಪ್ತಿ ಬರುತ್ತಿದೆಯೋ ಏನೋ. ಏನಾದರೂ ಆಗಲಿ, ಅಂಕಣ ಬರಹಕ್ಕೆ ವಿದಾಯ ಹೇಳುವಂಥ ಒಂದು ಸನ್ನಿವೇಶದಲ್ಲೂ ಅವರು ಇವತ್ತು ಬರೆದಿರುವ ವಿದ್ವತ್ ಪೂರ್ಣ ಉಪನ್ಯಾಸವನ್ನು ನೀವೆಲ್ಲ ತಪ್ಪದೆ ಓದಬೇಕು. ಜತೆಗೆ, ಅವರ ಮೈಸೂರು ಮನೆ ವಿಳಾಸವನ್ನು ಈ ಕೆಳಗೆ ಕೊಟ್ಟಿರುತ್ತೇನೆ. ಮೈಸೂರಿಗೆ ಹೋದಾಗ ಅವರ ಮನೆಗೆ ನೀವು ತಪ್ಪದೆ ಹೋಗಬೇಕು.

ಸರಸ್ವತಿಪುರಂನಲ್ಲಿರುವ ತೆಂಗಿನತೋಪಿನಲ್ಲಿ ನಿಂತು 'ಹರೀ..' ಎಂದು ಒಮ್ಮೆ ಕೂಗಿದರೆ ಗಂಡ ಹೆಂಡತಿ ಗೇಟಿನ ಬಳಿ ಬಂದು ನಿಮ್ಮನ್ನು ಬರಮಾಡಿಕೊಳ್ಳುತ್ತಾರೆ. ಶುಭವಾಗಲಿ.

*ನಂ. 4, 3ನೇ ಮುಖ್ಯರಸ್ತೆ, 5ನೇ ಅಡ್ದರಸ್ತೆ, ಸರಸ್ವತೀಪುರಂ, ಮೈಸೂರು-570 009; ಫೋನ್: 0821-2544841

ವಿದಾಯ ಭಾಷಣಕ್ಕೆ ವಿದ್ವತ್ ಸ್ಪರ್ಶ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more