ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಂತಮೂರ್ತಿ ಭಾಷಣದ ಅಸಲಿ ಧ್ವನಿ ಮುದ್ರಿಕೆ!

By Staff
|
Google Oneindia Kannada News


ಅನಂತಮೂರ್ತಿ-ಭೈರಪ್ಪ : ಇಬ್ಬರಲ್ಲಿ ಯಾರು ಸರಿ? ಯಾರು ತಪ್ಪು? ಎನ್ನುವ ಚರ್ಚೆಯ ಚೆಂಡು ಮಾಧ್ಯಮಗಳ ಅಂಗಳದಲ್ಲಿದೆ. ಸತ್ಯಾನ್ವೇಷಣೆಯ ಹಾದಿಯಲ್ಲಿ ನಾವು-ನೀವು ಸಾಗೋಣ. ಈ ನಿಟ್ಟಿನಲ್ಲಿ ಅನಂತಮೂರ್ತಿ ಭಾಷಣದ ಧ್ವನಿಮುದ್ರಿಕೆಯನ್ನು ಪರಾಮರ್ಶಿಸಿ.

ಧ್ವನಿಮುದ್ರಿಕೆಯನ್ನು ಇಲ್ಲಿ ಆಲಿಸಿ

Dr. U.R. Ananthamurthy ‘ಆವರಣ’ಕ್ಕೆ ಸಂಬಂಧಿಸಿದಂತೆ ವಿವಾದದ ಕಿಡಿ ಸಿಡಿಸಿದ ಸಾಹಿತಿ ಯು.ಆರ್‌.ಅನಂತಮೂರ್ತಿ ತುಂಬಾ ಖಿನ್ನರಾಗಿದ್ದಾರೆ. ಪರಕ್ಕಿಂತಲೂ ವಿರೋಧದ ಅಲೆಗಳು ಹೆಚ್ಚಿದ್ದನ್ನು ಕಂಡು ಅವರು ಗಲಿಬಿಲಿಗೊಂಡಿದ್ದಾರೋ? ತಾವು ಹೇಳಿದ್ದನ್ನು ಮಾಧ್ಯಮದವರು ಸರಿಯಾಗಿ ಕೇಳಿಸಿಕೊಂಡಿಲ್ಲ ಎಂದು ಬೇಸರಪಟ್ಟುಕೊಂಡಿದ್ದಾರೋ! ಅಥವಾ ಇಡೀ ವ್ಯವಸ್ಥೆಯ ಬಗೆಗೆ ಅವರಿಗೆ ಜಿಗುಪ್ಸೆ ಬಂದುಬಿಟ್ಟಿತೋ?

ವಿಚಾರಗಳ ನಡುವಿನ ಸಂಘರ್ಷ ವ್ಯಕ್ತಿಗಳ ನಡುವಿನ ಸಂಘರ್ಷವಾಗಿ ಬದಲಾಗುವ ಸಮಾಜ ನಮ್ಮದು. ಏಕೆಂದರೆ, ನಮ್ಮ ಸಮಾಜದಲ್ಲಿ ವ್ಯಕ್ತಿಗಳಿಗೆ ಇರುವಷ್ಟು ಮಹತ್ವ ವಿಚಾರಗಳಿಗಿಲ್ಲ. ಕಾರಣ, ‘ಆವರಣ’ ಪುಸ್ತಕದಲ್ಲಿ ಅಡಕವಾಗಿದೆ ಎನ್ನಲಾದ ಕಥೆ/ಕಂತೆ/ಚರ್ಚೆ/ವಾದ/ವಿವಾದ/ಇತಿಹಾಸ/ಅಟ್ಟಹಾಸಗಳ ವಿಚಾರಗಳೆಲ್ಲ ಮರೆಮಾಚಿ ಪ್ರಸಂಗ ಮಾತ್ರ ಕೆಲವು ಸಾಹಿತಿಗಳು ಮತ್ತು ಅವರ ಹಲವು ಬೆಂಬಲಿಗರ ಅನಿಸಿಕೆ ಮತ್ತು ಪ್ರತಿಕ್ರಿಯೆಗಳ ಸಂತೆಯಲ್ಲಿ ಬಿಕರಿಯಾಗಿತ್ತಿವೆ. ವಿಚಾರ ಮತ್ತು ಸಂಯಮ ಸಿಕ್‌ ಲೀವ್‌ ತೆಗೆದುಕೊಂಡಿರುವುದರಿಂದ ಪಟ್ಟಭದ್ರ ಹಿತಾಸಕ್ತ ಗುಂಪುಗಳು ಹುಟ್ಟುಹಾಕುವ ವಾಗ್ವಾದಗಳ ಸೋಮನ ಕುಣಿತ ಎಲ್ಲೆಲ್ಲೂ ಕಾಣಬರುತ್ತಿದೆ. ಸೆಂಟ್ರಲ್‌ ಕಾಲೇಜಿನಲ್ಲಿ ಆವರಣದ ಬಗೆಗೆ ಇಂಥದೊಂದು ವಿಚಾರ ಸಂಕಿರಣ ನಡೆಯತ್ತೆ ಅನ್ನುವಾಗಲೇ ಈ ವಿವಾದದ ಒಗ್ಗರಣೆ ವಾಸನೆ ಮೂಗಿಗೆ ಬಡಿದಿತ್ತು.

ಚರ್ಚೆಗಳ ತಾಳತಪ್ಪಿ ವಿಚಾರಗಳು ದಾರಿತಪ್ಪಿದ ಮಗನಂತೆ ಅಂಡಲೆಯುವ ದೇಶ ನಮ್ಮದು. ನಿಮಗೆ ಎಷ್ಟು ಉದಾಹರಣೆಗಳು ಬೇಕು? ಮಧ್ಯಾನ್ಹದ ಊಟಕ್ಕೆ ಕೋಳಿಮೊಟ್ಟೆ ಕೊಡಬೇಕೋ ಅಥವಾ ಬಾಳೆಹಣ್ಣು ಸಾಕೋ ಎಂಬ ಬಗ್ಗೆ ರಾಜಕಾರಣಿಗಳಿಂದ ಮೊದಲಾಗಿ ಮಠಾಧಿಪತಿಗಳವರೆಗೆ ಚರ್ಚೆ ನಡೆಯುವ ರಾಜ್ಯ ನಮ್ಮ-ಕರ್ನಾಟಕ.

ಬಿಸಿಬಿಸಿ ಚರ್ಚೆಯ ಭರಾಟೆಯಲ್ಲಿ ಬಿಸಿ ಊಟದ ಕಲ್ಪನೆ ತಣ್ಣಗಾಗಿದ್ದು ನೆನಪಿದೆಯಾ ನಿಮಗೆ?

ಸಾಹಿತ್ಯವಲಯದಲ್ಲಿ ಕೋಳಿ ಜಗಳಗಳು ಇದ್ದದ್ದೇ. ಇರಬೇಕು. ಕಡೆಯದಿದ್ದರೆ ಬೆಣ್ಣೆ ತೇಲುವುದಿಲ್ಲ. ಅನಂತಮೂರ್ತಿ ವರ್ಸ್‌ಸ್‌ ಸುಮತೀಂದ್ರ ನಾಡಿಗ, ಕುವೆಂಪು ವರ್ಸ್‌ಸ್‌ ಬೇಂದ್ರೆ, ಗೋಪಾಲಪ್ಪ ವರ್ಸ್‌ಸ್‌ ಕೃಷ್ಣಪ್ಪ... ಹೀಗೆ ಪತ್ರಕರ್ತರ ರೀತಿ ಒಬ್ಬ ಸಾಹಿತಿಯನ್ನು ಕಂಡರೆ ಇನ್ನೊಬ್ಬ ಸಾಹಿತಿಗೆ ಸಹಿಸುವುದಕ್ಕಾಗುವುದಿಲ್ಲ. 50ರ ದಶಕದಲ್ಲೂ ಇಂಥದೊಂದು ಕೋಳಿಜಗಳ ನಡೆದಿತ್ತು. ಅನಕೃ ಬರೆದ ‘ಸಾಹಿತ್ಯ ಮತ್ತು ಕಾಮಪ್ರಚೋದನೆ’ ಕೃತಿಯನ್ನು ಬೆಂಬಲಿಸಿ, ಖಂಡಿಸಿ ಆಗ ವಾದವಿವಾದಗಳು ಬಿರುಸಾಗಿ ನಡೆದಿತ್ತು.

ವಸ್ತು ಕಾಮವಾದರೂ ಕೂಡ ಜಗಳ ಸಂಯಮ ಮತ್ತು ಸಭ್ಯತೆಯಿಂದ ಕೂಡಿತ್ತು. ಪ್ರಜಾವಾಣಿ ಪತ್ರಿಕೆಯ ಸಂಪಾದಕರಾಗಿದ್ದ ಟಿಎಸ್ಸಾರ್‌ ಅವರು ಚರ್ಚೆಯ ಮಂಚೂಣಿಯಲ್ಲಿದ್ದ ನಿರಂಜನ ಅವರನ್ನು ಬೆಂಬಲಿಸಿದರೆ ಅದೇ ಪತ್ರಿಕೆಯಲ್ಲಿದ್ದ ರಾಮಕೃಷ್ಣಮೂರ್ತಿಗಳು ಅನಕೃ ಅವರನ್ನು ಬೆಂಬಲಿಸಿದ್ದರು. ವಾದ ಪುಂಖಾನುಪುಂಖವಾಗಿ ನಡೆದಿತ್ತು. ಅಲ್ಲಿಂದೀಚೆಗೆ 50 ವರ್ಷಗಳು ಉರುಳಿವೆ. ಆ ಕೃತಿ ಎಲ್ಲಿದೆಯೋ ಯಾರಿಗೂ ಗೊತ್ತಿಲ್ಲ. ಕಾಮ ಕಾಣೆಯಾಗಿದೆ. ಪ್ರಚೋದನೆ ಉಳಿದುಕೊಂಡಿದೆ.

ಇಂಥ ಜಗಳಗಳು ಓದುಗರ ಪಾಲಿಗೆ ಕಾಸಿಲ್ಲದೇ ಸಿಗುವ ಮನರಂಜನೆಗಳು. ಅದರನ್ನೂ ವೆಬ್‌ಸೈಟ್‌ ಆದರೆ ಫುಲ್‌ ಫ್ರೀ. ಆದರೆ, ಸಂಸ್ಕೃತಿ ರೂಪಿಸುವ ಗುತ್ತಿಗೆ ಪಡೆದುಕೊಂಡ , ಮುಂದಿನ ಪೀಳಿಗೆಯನ್ನು ತಯ್ಯಾರು ಮಾಡುವ ಹೊಣೆಹೊತ್ತುಕೊಂಡ ಚಿಂತಕರು ಮತ್ತು ಸಾಹಿತಿಗಳು ಮತ್ತಿತರ ಬಿಳಿಬಟ್ಟೆ ಗಣ್ಯರು ಬೀದಿ ಜಗಳಕ್ಕೆ ನಿಂತರೆ ಹೇಗೆ ? ಎಂಬುದು ನಮ್ಮ ಕಳವಳ. ಇದೇನು ಕೊಳಾಯಿ ನೀರಿಗೆ ನಿಂತ ಹೆಂಗಸರ ಜಗಳ ಕೆಟ್ಟುಹೋಯಿತಾ?

ಸೆಂಟ್ರಲ್‌ ಕಾಲೇಜಿನಲ್ಲಿ ಎನ್‌.ಎಸ್‌.ಶಂಕರ್‌ ಅವರ ‘ಆವರಣ ಅನಾವರಣ’ ಕೃತಿಯ ಬಿಡುಗಡೆ ಮಾಡಿದ ಅನಂತಮೂರ್ತಿ ಅವರ ಅಂದಿನ ಭಾಷಣ ಇಂದಿನ ವಿವಾದಕ್ಕೆ ಕಾರಣ. ವಿವಾದ ಇಲ್ಲಿಯವರೆವಿಗೂ ಬಂದು ನಿಂತಿದೆ. ಈ ನಿಟ್ಟಿನಲ್ಲಿ ಒಳಗಿಂದೊಳಗೆ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಚರ್ಚೆಯಲ್ಲಿ ದಟ್ಸ್‌ ಕನ್ನಡ ಓದುಗರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಕೆಲವರು ಅತಿಯಾದ ಉತ್ಸಾಹ ತೋರಿಸಿದ್ದಾರೆ! ಎನ್ನುವ ಚಿಂತೆಯನ್ನು ಡಿಲೀಟ್‌ ಮಾಡಿದರೆ ಅನೇಕ ಮೌಲ್ಯಯುತ ಟೀಕೆ-ಟಿಪ್ಪಣಿಗಳು, ದಟ್ಸ್‌ಕನ್ನಡ ಪುಟಗಳಲ್ಲಿ ದಾಖಲಾಗಿವೆ.

‘ಮಾಧ್ಯಮಗಳು ನನ್ನ ಭಾಷಣವನ್ನು ತಿರುಚಿವೆ. ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಹೀಗಾಗಿ ಇನ್ನುಮುಂದೆ ಸಾಹಿತ್ಯ ಸಂಬಂಧಿ ಕಾರ್ಯಕ್ರಮಗಳಲ್ಲಿ ನಾನು ಪಾಲ್ಗೊಳ್ಳುವುದಿಲ್ಲ. ಸಾಹಿತ್ಯ-ವಿಮರ್ಶೆ ಇವೆಲ್ಲವನ್ನೂ ಆಪ್ತವಲಯಕ್ಕೆ ಸೀಮಿತಗೊಳಿಸುತ್ತೇನೆ. ಮಾಧ್ಯಮದವರ ಮುಂದೆ ಏನನ್ನೂ ಹೇಳುವುದಿಲ್ಲ ’ ಎಂದು ಅನಂತಮೂರ್ತಿ ಅಸಮಾಧಾನದಿಂದ, ಸದ್ಯದ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಅನಂತಮೂರ್ತಿ ಹೇಳಿಕೆಯಿಂದಾಗಿ, ವಿವಾದದ ಗೂಬೆ ಈಗ ಮಾಧ್ಯಮಗಳ ಮೇಲೆ ಬಂದು ಕುಳಿತಿದೆ. ಅನಂತಮೂರ್ತಿ ಆವತ್ತು ಏನಂದರು? ಮಾಧ್ಯಮಗಳು ಏನು ಗ್ರಹಿಸಿದವು ಎಂಬುದರ ಬಗ್ಗೆ ಸಹಜ ಕುತೂಹಲ, ದಟ್ಸ್‌ ಕನ್ನಡಕ್ಕಿದೆ. ಹೀಗಾಗಿಯೇ, ಕಾರ್ಯಕ್ರಮದ ಧ್ವನಿ ಮುದ್ರಿಕೆಯನ್ನು ಓದುಗರ ಮುಂದಿಟ್ಟಿದ್ದೇವೆ. ತೀರ್ಮಾನ ಎಂದಿನಂತೆ ಓದುಗ ಪ್ರಭುಗಳದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X