ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಡಿಗಟ್ಟಲೇ ಪುಸ್ತಕ ಬಂದಿವೆ.. ಓದು ಜನಮೇಜಯ!

By Staff
|
Google Oneindia Kannada News


ನಿಮ್ಮ ಪ್ರೀತಿಗೆ ಮತ್ತು ಕೆಲವೊಮ್ಮೆ ಸಿಟ್ಟಿಗೆ ಕಾರಣವಾಗುವ ದಟ್ಸ್‌ಕನ್ನಡ ಡಾಟ್‌ಕಾಮ್‌ ಅನೇಕ ಬರಹಗಾರರನ್ನು ಕಂಡಿದೆ. ಸಮರ್ಥ ಬರಹಗಾರರನ್ನು ಚುಂಬಿಸಿ, ಉದಯೋನ್ಮುಖ ಬರಹಗಾರರನ್ನು ಸದಾ ಅಪ್ಪಿಕೊಂಡಿದೆ. ನಮ್ಮ ಪುಟಗಳಲ್ಲಿ ತಪ್ಪದೆ ಅಕ್ಷರ ವ್ಯವಸಾಯ ಮಾಡುವ ಅಂಥ ಮೂವರು ಲೇಖಕರು ನನಗೀಗ ನೆನಪಾಗುತ್ತಿದ್ದಾರೆ.


ಈ ಬಾರಿ ಮುಂಗಾರು ಮಳೆ ಚೆನ್ನಾಗಿ ಬಿದ್ದಿರುವುದರಿಂದ, ಕನ್ನಡನಾಡಿನಲ್ಲಿ ಕನ್ನಡ ಪುಸ್ತಕ ಪೈರು ಹುಲುಸಾಗಿ ಬೆಳೆಯುತ್ತಿದೆ. ಹಾಗಾಗಿ ಪುಸ್ತಕ ಮಾರುಕಟ್ಟೆಯೂ ಬೃಹದಾಕಾರವಾಗಿ ಬೆಳೆಯುತ್ತಿದೆ ಎನ್ನಬೇಕು. ಏನಿಲ್ಲವೆಂದರೂ ತಿಂಗಳಿಗೆ 300ರಿಂದ 400 ಪುಸ್ತಕಗಳು ಬೆಳಕು ಕಾಣುತ್ತವೆ ಎನ್ನುತ್ತಾರೆ ಪುಸ್ತಕ ಮಾರುಕಟ್ಟೆಯಲ್ಲಿ ಪಳಗಿರುವ ಪ್ರಕಾಶಕರು. ನಮ್ಮ ಜನ ಈಚೆಗೆ ಹಾಗೂಹೀಗೂ ಪುಸ್ತಕ ಅಂಗಡಿಗಳಿಗೆ ಹೋಗುವುದನ್ನು ರೂಢಿಮಾಡಿಕೊಳ್ಳುತ್ತಿರುವುದರಿಂದ ಪುಸ್ತಕ ಪೈರು ಅಷ್ಟರಮಟ್ಟಿಗೆ ಸಮೃದ್ಧವಾಗಿದೆ, ಕನ್ನಡ ಹರಡಿಕೊಳ್ಳುತ್ತಿದೆ ಎನ್ನುವುದು ಅವರ ಅಭಿಪ್ರಾಯ.

ವಿದ್ಯಾರ್ಥಿ ಭವನಕ್ಕೆ ಹೋದವರು ಅಂಕಿತ ಪ್ರಕಾಶನಕ್ಕೂ, ಜನಾರ್ದನ ಹೋಟೆಲಿಗೆ ಹೋದವರು ಹಾಗೇನೇ ನವಕರ್ನಾಟಕ ಪುಸ್ತಕ ಮಳಿಗೆಗೂ, ರಾಮಕೃಷ್ಣ ಲಂಚ್‌ ಹೋಂಗೆ ಹೋದವರು ಸಪ್ನ ಬುಕ್‌ ಸ್ಟಾಲ್‌ಗೆ ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಈ ಟ್ರೆಂಡ್ ಬೆಂಗಳೂರಿನಲ್ಲಿ ಕಾಣಿಸಿಕೊಂಡಿರುವುದರಿಂದ ತಾವು ನಂಬಿದ ಉದ್ಯಮಕ್ಕೆ ಅಷ್ಟೇನೂ ಮೋಸ ಇಲ್ಲ ಎನ್ನುತ್ತಾರೆ ಈಚೀಚಿಗೆ ಚೇತರಿಸಿಕೊಳ್ಳುತ್ತಿರುವ ಪುಸ್ತಕ ಅಂಗಡಿಯ ಒಬ್ಬ ಮಾಲೀಕರು.

ಪುಸ್ತಕ ಪ್ರಕಾಶನ ಉದ್ಯಮದಲ್ಲಿ ವರ್ಷಾನುಗಟ್ಟಳೆ ರಾಗಿಬೀಸಿದ ಮತ್ತು ಹಾಗೆನೇ ಬೇರೂರಿದ ಸಂಸ್ಥೆಗಳ ಸಂತಸವನ್ನು ಹೊರಪಡಿಸಿದರೆ, ತಮ್ಮ ಕೃತಿಗಳನ್ನು ತಾವೇ ಪ್ರಕಟಿಸಿ ಓದುಗರಿಗೆ ತಲುಪಿಸುವವರ ಪಡಿಪಾಟಲು ಸಂಕೀರ್ಣವಾಗಿದೆ. ಅಂಥವರಿಗೆಲ್ಲ ದೇವರೇ ದಿಕ್ಕು ಎಂದರೆ ತಪ್ಪಾಗುತ್ತದಾ? ಬೆಂಗಳೂರನ್ನು ಬಿಟ್ಟು , ಧಾರವಾಡವನ್ನು ಬಿಟ್ಟು, ಪುತ್ತೂರು ಮೈಸೂರುಗಳನ್ನು ಬಿಟ್ಟು ರಾಜ್ಯದ ಅನೇಕ ಹಳ್ಳಿ ಪಟ್ಟಣಗಳಲ್ಲೂ ಪುಸ್ತಕಗಳು ಪ್ರಕಾಶಗೊಳ್ಳುತ್ತಲೇ ಇರುತ್ತವೆ. ಅದು ಸುದ್ದಿಯಾಗುವುದಿಲ್ಲ.

ಕೃತಿ ರಚಿಸುವುದು ಅವರವರ ಜಾಣ್ಮೆ , ಅಧ್ಯಯನ, ಸೃಜನಶೀಲತೆ ಮತ್ತು ಕೌಶಲ್ಯಕ್ಕೆ ಬಿಟ್ಟ ವಿಷಯ. ಆದರೆ ಕೃತಿಗಳನ್ನು ಪ್ರಕಾಶಮಾನ ಮಾಡುವುದು ಅಷ್ಟು ಸಲೀಸಲ್ಲ. ಒಂದು ಕೃತಿ ಪ್ರಕಟಗೊಂಡರೂ ಅದು ಮಾರುಕಟ್ಟೆ ಪ್ರವೇಶಿಸಿ ಅಲ್ಲಿಂದ ಓದುಗರನ್ನು ತಲುಪುವ ಪ್ರಯಾಣ, ಬೆಂಗಳೂರಿನಿಂದ ಶಿವನಸಮುದ್ರಕ್ಕೆ ಹೋದಷ್ಟೇ ಆಯಾಸಕರವಾಗಿರುತ್ತದೆ. ಈ ಕಷ್ಟ ಅಸಂಘಟಿತ ಲೇಖಕರು ಮತ್ತು ಅಸಂಘಟಿತ ಪ್ರಕಾಶಕ ವಲಯಗಳಿಗೆ ಹೆಚ್ಚು ಅರ್ಥವಾಗುತ್ತದೆ. ಒಂದೋ ಎರಡೋ ಪುಸ್ತಕ ಬರೆದು ಅಂತೋಇಂತೋ ಪ್ರಕಟಣೆ ಮಾಡಿಸಿಕೊಂಡಿರುವ ಲೇಖಕರಂತೂ ರಾಯಲ್ಟಿ ಎಂಬ ಶಬ್ದವನ್ನೇ ಕೇಳಿರುವುದಿಲ್ಲ.

ತೀರಾ ಪ್ರಸಿದ್ಧರಾದ ಬರಹಗಾರರ ಕೃತಿಗಳು ಅಚ್ಚಾಗುವುದೂ ಸುಲಭ. ಅವರುಗಳಿಗೆ ನಾಮಬಲ ಮತ್ತು ಖಾಯಂ ಓದುಗರಿರುವುದರಿಂದ ಕೃತಿಗಳ ಮಾರಾಟ ಚರ್ಚೆ ಮತ್ತು ವಿಮರ್ಶೆಗಳು ಸಾಧ್ಯವಾಗುವುದುಂಟು. ಅಲ್ಲದೆ, ಈ ಬಗೆಯ ಬರಹಗಾರ ವರ್ಗಕ್ಕೆ ಪ್ರಕಾಶಕ ಬೆಂಬಲಿತ ನೆಟ್‌ವರ್ಕ್ ಇರುವುದರಿಂದ ಇನ್ನೂ ಸುಲಭ. ಪ್ರಕಾಶನ ಸಂಸ್ಥೆಗಳಿಗೆ ಗ್ರಂಥಾಲಯಗಳೆಂಬ ಗುಹಾಂತರ ದೇವಾಲಯ ತಲಪುವ ಜಾಣ್ಮೆ ಗೊತ್ತಿರುವುದರಿಂದ, ಪುಸ್ತಕಗಳ ಬಂ‌‌ಡಲ್‌ ಕರಗುತ್ತದೆ.

ಇಷ್ಟಕ್ಕೂ ಕನ್ನಡದಲ್ಲಿ ತುಂಬಾ ಗಮನಾರ್ಹ ಎಂಬಂತಹ ಪುಸ್ತಕ ಯಾವುದು ಬಂದಿದೆ ನೀವೇ ಹೇಳಿ? ಪ್ರಕಟವಾಗುತ್ತಿರುವ ಪುಸ್ತಕಗಳಲ್ಲಿ ಈಚೀಚೆಗೆ ಸಂಕಲನಗಳ ಸಂಖ್ಯೆಯೇ ಅಧಿಕ. ಕರ್ನಾಟಕ ರಾಜ್ಯ ಕೇಂದ್ರ ಗ್ರಂಥಾಲಯಗಳಿಗೆ ಲಗೇಜು ವ್ಯಾನ್‌ಗಳಲ್ಲಿ ರವಾನೆಯಾಗುವ ಪುಸ್ತಕಗಳಲ್ಲಿ ಆಯ್ದ ಲೇಖನಗಳು, ಆಯ್ದ ಕವಿತೆಗಳು, ಸಮಗ್ರ ಲೇಖನಗಳು, ಪುನರ್‌ಮುದ್ರಣಗಳು , ನನ್ನ ಪ್ರೀತಿಯ ಕವನ ಸಂಕಲನಗಳ ಪಾಲೇ ಹೆಚ್ಚು. ನಿಸಾರ್‌ ಅಹಮದ್‌ ಅವರ ನಿತ್ಯೋತ್ಸವ ಕೃತಿ ಈಗ 17ನೇ ಆವೃತ್ತಿ ಕಂಡಿದೆ ಮತ್ತು ಮಾರಾಟ ಚೆನ್ನಾಗಿದೆ ಕೂಡ ಎನ್ನುವ ಉದಾಹರಣೆ ಇಲ್ಲಿ ಬೇಡ.

ನಿಮ್ಮ ಪ್ರೀತಿಗೆ ಮತ್ತು ಕೆಲವೊಮ್ಮೆ ಸಿಟ್ಟಿಗೆ ಕಾರಣವಾಗುವ ದಟ್ಸ್‌ಕನ್ನಡ ಡಾಟ್‌ಕಾಮ್‌ ಅನೇಕ ಬರಹಗಾರರನ್ನು ಕಂಡಿದೆ. ಸಮರ್ಥ ಬರಹಗಾರರನ್ನು ಚುಂಬಿಸಿ ಉದಯೋನ್ಮುಖ ಬರಹಗಾರರನ್ನು ಸದಾ ಅಪ್ಪಿಕೊಂಡಿದೆ. ನಮ್ಮ ಪುಟಗಳಲ್ಲಿ ತಪ್ಪದೆ ಅಕ್ಷರ ವ್ಯವಸಾಯ ಮಾಡುವ ಅಂಥ ಮೂವರು ಲೇಖಕರು ನನಗೀಗ ನೆನಪಾಗುತ್ತಿದ್ದಾರೆ. ಮೂವರೂ ಈಚೆಗೆ ತಮ್ಮ ಕೃತಿಗಳನ್ನು ಬಿಡುಗಡೆ ಮಾಡಿದ್ದಾರೆ.

ತ್ರಿವೇಣಿಯವರು ಅಮೆರಿಕಾದಲ್ಲೆ ಪುಸ್ತಕ ಬಿಡುಗಡೆ ಮಾಡಿದರೆ, ತಮ್ಮ ಕೃತಿ ಬಿಡುಗಡೆಗೋಸ್ಕರ ಕರ್ನಾಟಕ್ಕೆ ಬಂದಿದ್ದ ಗುರುಪ್ರಸಾದ್‌ ಕಾಗಿನೆಲೆ ಮತ್ತು ಶ್ರೀವತ್ಸ ಜೋಶಿ ಅವರು ಪುಸ್ತಕ ಕೈಂಕರ್ಯ ಮುಗಿಸಿ ಈ ಹೊತ್ತು ಅಮೆರಿಕಾಗೆ ಮರಳಿದ್ದಾರೆ. ಈ ತ್ರಿಮೂರ್ತಿಗಳು ಅಮೆರಿಕಾ ವಾಸಿಗಳಾಗಿರುವುದು ಒಂದು ಸನ್ನಿವೇಶ.

ಕೃತಿ ವಿವರಗಳು ಇಲ್ಲಿವೆ. ಆಸಕ್ತರು ಪಡೆದುಕೊಳ್ಳಬಹುದು.

1) ತುಳಸೀವನ : ( ಅಂಕಣ ಬರಹಗಳ ಸಂಕಲನ)
ಲೇಖಕಿ : ತ್ರಿವೇಣಿ ಶ್ರೀನಿವಾಸರಾವ್‌
ಧಾತ್ರೀ ಪ್ರಕಾಶನ, ಹ್ಯಾನೋವರ್‌ ಪಾರ್ಕ್ , ಇಲಿನಾಯ್‌ ಅಮೆರಿಕ.
ಪುಟಗಳು 280 : ಬೆಲೆ : $15.
e-mail : [email protected]
(ದೂರವಾಣಿ : 001- 630-837-1730)

2) ಬಿಳಿಯ ಚಾದರ ( ಕಾದಂಬರಿ)
ಲೇಖಕ : ಗುರುಪ್ರಸಾದ್‌ ಕಾಗಿನೆಲೆ ( ದೂರವಾಣಿ: 001- 507-285-1551)
ಮನೋಹರ ಗ್ರಂಥಮಾಲಾ, ಧಾರವಾಡ.( 0836-2441822 )
ಪುಟಗಳು 200, ಬೆಲೆ : ರೂ. 120
ಲೇಖಕರ ಈಮೇಲ್‌ : [email protected]

3) ಇನ್ನೊಂದಿಷ್ಟು ವಿಚಿತ್ರಾನ್ನ, ಮತ್ತೊಂದಿಷ್ಟು ವಿಚಿತ್ರಾನ್ನ
ಅವಳಿ ಪುಸ್ತಕಗಳು. ಬೆಲೆ : ತಲಾ 135 ರು.ಗಳು ಮತ್ತು ತಲಾ 10 ಡಾಲರ್‌ಗಳು.
ಲೇಖಕರು : ಶ್ರೀವತ್ಸ ಜೋಶಿ ([email protected])
ದೂರವಾಣಿ : 1-240-401-0945
ಪ್ರಕಾಶಕರು : ಗೀತಾ ಬುಕ್‌ ಹೌಸ್‌ , ಮೈಸೂರು
ದೂರವಾಣಿ:0821-2333863

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X