ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1968ರ ಎಸ್ಸೆಸ್ಸೆಲ್ಸಿಯಿಂದ ಈಗಿನ ಸಿಇಟಿ ಗಡಿಬಿಡಿವರೆಗೆ..

By Super
|
Google Oneindia Kannada News

ಮೊನ್ನೆ ಎಸ್ಸೆಸ್ಸೆಲ್ಸಿ ರಿಸಲ್ಟ್‌ ಬಂತು. ಇಂದು ಕಾಲೇಜು ಬೇಟೆ, ನಾಳೆ ಸಿಇಟಿ ಸಂಗ್ರಾಮ.. ಇದೊಂದು ವರ್ತುಲ. ಈ ಹೊತ್ತಿನಲ್ಲಿ ನನ್ನ ಜೊತೆ ಎಸ್ಸೆಸ್ಸೆಲ್ಸಿ ನೆನಪಿನ ದೋಣಿಯಲ್ಲಿ ಪಯಣಿಸಿ.. ಸಿಇಟಿ ಕುದುರೆ ಮೇಲೆ ಕುಳಿತೇ, ನನ್ನ ಪ್ರಶ್ನೆಗೆ ಉತ್ತರ ನೀಡಿ... ಪ್ಲೀಸ್‌...

ಎಸ್ಸೆಸ್ಸೆಲ್ಸಿ ಪರೀಕ್ಷೆ ಮತ್ತುಆ ಕಾಲಘಟ್ಟದ ಮನೋಭಾವಗಳ ಬಗೆಗೆ ನಮ್ಮ ಓದುಗ ವೃಂದ ಬರೆದುಕೊಂಡ ಹಲಕೆಲವು ಅಭಿಪ್ರಾಯಗಳನ್ನು ತದೇಕಚಿತ್ತದಿಂದ ಓದಿದೆ. ಲಕ್ಷಾಂತರ ಮನಸ್ಸುಗಳನ್ನು , ಅನುಭವಗಳನ್ನು, ನೆನಪುಗಳನ್ನು ಮೀಟುವ ಅಭಿಪ್ರಾಯ ಸರಣಿ ಚೇತೋಹಾರಿಯಾಗಿದೆ ಹಾಗೂ ಮನೋಜ್ಞವಾಗಿವೆ. ಅಟ್ಟದ ಮೇಲೆ ಕಟ್ಟಿಟ್ಟಿದ್ದ ನನ್ನ ಎಸ್ಸೆಸ್ಸೆಲ್ಸಿ ನೆನಪುಗಳನ್ನು ನೇವರಿಸಲು ನೆರವಾಗಿವೆ. ಜ್ಞಾಪಕ ಚಿತ್ರಶಾಲೆಯ ಸಹಪಾಠಿಗಳಿಗೆ ಮೆನಿ ಥ್ಯಾಂಕ್ಸ್‌.

ಮಳೆ-ಬೆಳೆ-ಬಿಸಿಲು ಆಗ ಎಷ್ಟು ಪ್ರಮಾಣದಲ್ಲಿತ್ತೋ, ಈಗಲೂ ಅಷ್ಟೇ ಪ್ರಮಾಣದಲ್ಲಿರುವ ಚಿತ್ರದುರ್ಗದಲ್ಲಿ ನಾನು ಎಸ್ಸೆಸ್ಸೆಲ್ಸಿ ಪರೀಕ್ಷೆ ಕಟ್ಟಿದಾಗ ಇಸವಿ 1968. ವಿದ್ಯಾಭ್ಯಾಸ ಮಾಡುವುದೆಂದರೆ ಆಟ ಊಟ ಓಟದಷ್ಟೇ ಸಲೀಸಾಗಿದ್ದ ಕಾಲವದು. ಒಂದನೆ ತರಗತಿಗೆ ಹೇಗೆ ಶಾಲೆಗೆ ಹೋಗುತ್ತಿದ್ದೆನೋ ಹಾಗೆಯೇ ಹತ್ತನೆ ತರಗತಿಗೂ ಹೋದವನು ನಾನು. ನಾನೊಬ್ಬನೆ ಅಲ್ಲ ನನಗಿಂತ ಬುದ್ಧಿವಂತರು ಅನ್ನುವುದನ್ನು ಬಿಟ್ಟರೆ ನನ್ನ ಸೋದರ ಸೋದರಿಯರೆಲ್ಲ ಶಾಲೆ-ಪಾಠ-ಪ್ರವಚನದ ವಿಚಾರದಲ್ಲಿ ಒಂದೆ ತಾಯಿಮಕ್ಕಳು.

ವರ್ಷಗಳುರುಳಿದಂತೆ ನಮ್ಮ ಪಠ್ಯಗಳು ಬದಲಾಗುತ್ತಿದ್ದವು, ಮೇಷ್ಟ್ರು ಬದಲಾಗುತ್ತಿದ್ದರು, ಶಾಲೆಯ ಲೊಕೇಷನ್‌ ಬದಲಾಗುತ್ತಿತು.್ತ ಆದರೆ ನಾನು ಮಾತ್ರ ಬದಲಾಗುತ್ತಿರಲಿಲ್ಲ. ಅದ್ಯಾಕೋ ಗೊತ್ತಿಲ್ಲ. ಬದಲಾವಣೆಗೆ ನಾನು ಪಕ್ಕಾಗಿದ್ದೇನೆ ಎಂದು ಎಸ್ಸೆಸ್ಸೆಲ್ಸಿ ಪಾಸಾದ 39 ವರ್ಷಗಳ ನಂತರ ಚೂರುಪಾರು ಅನ್ನಿಸಿದ್ದು ನಿಜ. ಆದರೆ, ಇಲ್ಲಿ ಏನೇನೂ ಬದಲಾಗುವುದಿಲ್ಲ ಮತ್ತೊಮ್ಮೆ ಖಾತ್ರಿಯಾಗಿದೆ.. ಯಾಕೆಂದರೆ ಕೊನೆಗೂ ಗೆಲ್ಲುವುದು ಸ್ವಭಾವವೇ ಆದುದರಿಂದ ಬದಲಾವಣೆಗೆ ಯಾಕೆ ಮನಸ್ಸು ತೆರೆದುಕೊಳ್ಳಬೇಕು?

‘ಕನ್ನಡ, ಇಂಗ್ಲಿಷು, ಸಮಾಜಶಾಸ್ತ್ರ ಮುಂತಾದ ವಿಷಯಗಳು ಅಂಥದೇನೂ ಕಷ್ಟ ಅಲ್ಲ. ಬುರುಡೆಹೊಡೆದು ಯಾರು ಬೇಕಾದರೂ ಎಸ್ಸೆಸ್ಸೆಲ್ಸಿ ಪಾಸಾಗಬಹುದು. ಆದರೆ ವಿಜ್ಞಾನ-ಗಣಿತ ಹಾಗಲ್ಲರೀ. ಕರೆಕ್ಟಾಗಿದ್ದರೆ ಮಾತ್ರ ಮಾರ್ಕ್ಸ್‌ ಹಾಕ್ತಾರೆ ಇಲ್ಲಾ ಅಂದ್ರೆ ಕೋಳಿಮೊಟ್ಟೆ ಕೊಡ್ತಾರೆ' ಎನ್ನುವ ಮಾತು ಆಗ ತುಂಬಾ ಚಾಲ್ತಿಯಲ್ಲಿತ್ತು. ಇದೇ ನನ್ನ ಎಸ್ಸೆಸ್ಸೆಲ್ಸಿ ಪರೀಕ್ಷೆ ಹೆದರಿಕೆಗೆ ಮುಖ್ಯ ಕಾರಣವಾಗಿತ್ತು.

ಇತರೆ ಸಬ್ಜೆಕ್ಟುಗಳು ಪರವಾಗಿಲ್ಲ, ಆದರೆ ಗಣಿತಕ್ಕೆ ನಾನು ಅದೆಷ್ಟು ದಿಗಿಲು ಬೀಳುತ್ತಿದ್ದೆ ಎಂದರೆ ಅಮೆರಿಕನ್ನರು, ಇಂಗ್ಲೆಂಡಿಗರು ಲ್ಯಾಡೆನ್‌ಗೆ ಕೂಡ ಆಪಾಟಿ ಹೆದರುವುದಿಲ್ಲ !

ಪರೀಕ್ಷೆಯಲ್ಲಿ ಎಲ್ಲರೂ ಬುರುಡೆ ಹೊಡೀತಾರಂತೆ ನಾನೂ ಏಕೆ ಹೊಡೆಯಬಾರದು? ಎನ್ನುವುದು ನನ್ನ ನ್ನು ನಾನೇ ಸಮರ್ಥಿಸಿಕೊಳ್ಳುವುದಕ್ಕೆ ಒಳ್ಳೆಯ ಲಾ ಪಾಯಿಂಟಾಗಿತ್ತು. ಸರಿ. ಪರೀಕ್ಷೆಯಲ್ಲಿ ಯಾವ ಪ್ರಶ್ನೆಗೂ ಸರಿಯಾದ ಉತ್ತರ ಗೊತ್ತಿಲ್ಲದಿದ್ದರೂ ಉಸ್ಮಾನ್‌ ಖಾನ್‌ ಲಿಖ್ಯಾ ಲಿಖ್ಯಾ ಚಾಲೀಸ್‌ ಪೇಜ್‌ ಲಿಖ್ಯಾ ಎನ್ನುವ ಜೋಕನ್ನು ನೈಜರೂಪಕ್ಕೆ ತಂದವರಲ್ಲಿ ನಾನೂ ಒಬ್ಬ. ಆಲ್ಜಿಬ್ರಾ, ಜ್ಯಾಮಿಟ್ರಿ, ಎಪ್ಲಸ್‌ಬಿ ಹೋಲ್‌ಸ್ಕ್ವೇರ್‌, ಎಚ್‌ಟುಎಸ್‌ಓಫೋರ್‌, ಫಾಸ್‌ಫರಸ್ಸುಗಳ ಗಂಧಗಾಳಿ ಇರಲಿಲ್ಲ. ಆದರೂ ಅಡಿಷನಲ್‌ ಶೀಟ್ಸ್‌ ಇಸ್ಕೊಂಡು ಸರೀ ಬರೆದುಹಾಕಿದೆ.

ಎಕ್ಸಾಂ ಎಲ್ಲಾ ಆಯಿತು. ಬೇಸಿಗೆ ಆಟಗಳು ಮುಗಿಯುತ್ತಾ ಬಂದವು. ರಿಸಲ್ಟ್‌ ದಿನಾನೂ ಹತ್ತಿರ ಬಂತು. ನಾನು ಪಾಸ್‌ ಆಗಬಹುದು, ಅಥವಾ ನನ್ನನ್ನು ಮಾತ್ರ ಅವರು ಫೇಲು ಮಾಡುವುದಿಲ್ಲ ಎನ್ನುವ ಯಾವುದೇ ಆಧಾರವಿಲ್ಲದ ವಿಶ್ವಾಸ ನನಗೆ ತುಂಬಾ ಇತ್ತು. ಹಾಗಾಗಿ ರಿಸಲ್ಟ್‌ ಬಂದ ಬೆಳಗ್ಗೆ ಎಂಟುಗಂಟೆಯಾದರೂ ಮಲಗಿಕೊಂಡೇ ಇದ್ದೆ. ಆಗೆಲ್ಲ ಫಲಿತಾಂಶ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು.

ನನ್ನ ಕ್ಲಾಸ್‌ಮೇಟ್‌ ಬ್ಯಾಂಕಿನಲ್ಲಿ ಕೃಷಿ ಅಧಿಕಾರಿಯಾಗಿ ನಿವೃತ್ತಿಯಾಗಿರುವ ಆನಂದ, ಚಿಕ್ಕಬಳ್ಳಾಪುರ ಮುನಿಸಿಪಲ್‌ ಕಾಲೇಜಿನಲ್ಲಿ ಪೊಲಿಟಿಕಲ್‌ ಸೈನ್ಸ್‌ ಪ್ರೊಫೆಸರ್‌ ಆಗಿರುವ ಕೆ.ಎನ್‌. ದತ್ತಾತ್ರಿ, ಚಳ್ಳಕೆರೆಯಲ್ಲಿ ಬೇಕರಿ ಇಟ್ಟುಕೊಂಡಿರುವ ಜನಾರ್ದನ ಮತ್ತು ಈಗ ಅದೆಲ್ಲಿದ್ದನೋ ಗೊತ್ತಿಲ್ಲ ಶಿವಸ್ವಾಮಿ, ನಮ್ಮ ಮನೆಗೆ ಬೆಳಗ್ಗೆ ಬೆಳಗ್ಗೆ ಬಂದರು.

ಅವರೆಲ್ಲ ಬೇಗ ಎದ್ದು ಸಂತೆಹೊಂಡದ ಪಕ್ಕಇದ್ದ ಪೇಪರ್‌ ಏಜೆಂಟ್‌ ಅಂಗಡಿಗೆ ಹೋಗಿದ್ದರು. ನನ್ನ ರಿಸಲ್ಟ್‌ (ರಿಜಿ. ಸಂಖ್ಯೆ. : 100145)ತಿಳಿದುಕೊಂಡು ಸೀದಾ ನಮ್ಮ ಮನೆಗೆ ಬಂದಿದ್ದರು. ನಾನು ಆಸಾಮಿ ಏಳ್ತಾನೇ ಇಲ್ಲ. ಶಾಮನಿಗೆ ಫೇಲಾಗಿಬಿಟ್ಟಿದೀನಿ ಅಂತ ಭಯ ಅದಕ್ಕೆ ಮಲಗಿದಾನೆ ಎಂದು ಅವರ ಲೆಕ್ಕಾಚಾರ. ನನಗೆ ಅದೆಲ್ಲ ಗೊತ್ತಿಲ್ಲ. ನಿದ್ದೆ ಬರ್ತಾಯಿತ್ತು ಅಥಾವ ಏಳಕ್ಕೇ ಇಷ್ಟಇರಲಿಲ್ಲ, ಮಲಗಿಕೊಂಡೇ ಇದ್ದೆ. ನನ್ನಿಷ್ಟ.

ವಿಜ್ಞಾನ+ರಸಾಯನಶಾಸ್ತ್ರ+ಗಣಿತ ಒಟ್ಟೂಸೇರಿ 105 ಅಂಕಗಳು ಗಳಿಸಿದರೆ ಪಾರ್ಟ್‌ ಪಾಸು ಆಗುತ್ತಿತ್ತು. ಆದರೆ ಪೇಪರ್‌ ಮಿನಿಮಮ್‌ 30 ಇರಲೇಬೇಕು ಎನ್ನುವುದು ಆಗಿನ ನಿಯಮ. ಗಣಿತದಲ್ಲಿ 30 ರಸಾಯನಶಾಸ್ತ್ರದಲ್ಲಿ 48 ಹಾಗೂ ವಿಜ್ಞಾನದಲ್ಲಿ 30 ಎಲ್ಲಾಸೇರಿ 108 ಅಂಕಗಳು ಬಂದು ಎಸ್ಕೆ. ಶಾಮಸುಂದರ ಪಾಸ್‌ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷಾಮಂಡಳಿ ಘೋಷಿಸಿತ್ತು.

ಆದರೆ, ಜಸ್ಟ್‌ ಪಾಸ್‌ ಆಗಿದೀಯ ನಾಚಿಕೆ ಆಗಲ್ವಾ ಎಂದು ಸೈನ್ಸ್‌ ಮತ್ತು ಮ್ಯಾಥ್ಸ್‌ನಲ್ಲಿ ಎಂದೂ 70ಕ್ಕೆ ಕಡಿಮೆ ಅಂಕ ಪಡೆಯದ ನನ್ನ ಅಣ್ಣ ಮತ್ತು ಅಕ್ಕ ಹಂಗಿಸಿದರು. ಸ್ವಲ್ಪ ಬೇಜಾರು ಮಾಡಿಕೊಂಡಿದ್ದೆ. ಆನಂತರ ಅರಿವಾಯಿತು.

ಬಯ್ದು ಹೇಳುವವರು ಒಳ್ಳೆಯದನ್ನೇ ಬಯಸುತ್ತಾರಂತೆ. ಹಂಗಿನರಮನೆಗಿಂತ ಇಂಗಿತದ ಗುಡಿಲೇಸು ಎಂದು ತೀರ್ಮಾನಿಸಿ ಗಣಿತ ವಿಜ್ಞಾನ ವಿಷಯಗಳಿಗೆ ಆವತ್ತೇ ಸಲಾಮು ಹೊಡೆದ ನಾನು, ಇವತ್ತಿನವರೆವಿಗೂ ಅತ್ತ ತಿರುಗಿ ನೋಡಿಲ್ಲ.

‘ಕಲಾವಿಭಾಗವನ್ನುಆಯ್ಕೆ ಮಾಡಿಕೊಂಡವರು ದಡ್ಡರು, ಎಲ್ಲೂ ಸಲ್ಲದವರು, ವೇಸ್ಟ್‌ಬಾಡಿಗಳು' ಎಂಬ ಜನಜನಿತ ತೀರ್ಮಾನಕ್ಕೆ ವಿರುದ್ಧವಾಗಿ ಈಜಿ, ಪಿಯೂಸಿಯಲ್ಲಿ ದಡ್ಡರ ಸೆಕ್ಷೆನ್‌ಗೆ ಭರ್ತಿಯಾದೆ. ‘ಮಾನವಿಕ ಮತ್ತು ಭಾಷಾ ವಿಷಯಗಳನ್ನು ಅಧ್ಯಯನ ವಿಷಯಗಳಾಗಿ ಆಯ್ಕೆಮಾಡಿಕೊಂಡವರಿಗೆ ಒಳ್ಳೆ ಕೆಲಸ ಸಿಗಲ್ಲ, ಒಳ್ಳೆ ಕೆಲಸ - ಕೈತುಂಬ ಸಂಬಳ ಇಲ್ಲದಿದ್ದವನನ್ನು ಯಾವ ಹುಡುಗಿಯೂ ಪ್ರೀತಿಸುವುದಿಲ್ಲ, ಅಂಥವರಿಗೆಲ್ಲ ಭವಿಷ್ಯವೇ ಇಲ್ಲ' ಎಂಬ ಲೋಕೋಕ್ತಿಯನ್ನು ಧಿಕ್ಕರಿಸಿ ನಿಂತೆ.

ನಿಮಗೊಂದು ಪ್ರಶ್ನೆ :

ಈಗಷ್ಟೇ ಎಸ್ಸೆಸ್ಸೆಲ್ಸಿ ಫಲಿತಾಂಶಗಳು ಪ್ರಕಟವಾಗಿವೆ. ಪಾಸು-ಫೇಲು-ರ್ಯಾಂಕುಗಳ ಗುಂಗಿನಿಂದ ನಮ್ಮಹುಡುಗ ಹುಡುಗಿಯರು ಹೊರಬರಲು ಪ್ರಯತ್ನಿಸುತ್ತಿದ್ದಾರೆ. ಇನ್ನೊಂದೆಡೆ ಪಿಯೂಸಿಗೆ ಪ್ರವೇಶಮಾಡುವ ಧಾವಂತ, ಉದ್ವೇಗ, ತಳಮಳಗಳು ವಿದ್ಯಾರ್ಥಿಗಳನ್ನು ಪೋಷಕರನ್ನು ಏಕಕಾಲಕ್ಕೆ ಆವರಿಸಿಕೊಂಡಿದೆ. ಎಲ್ಲ ತಂದೆತಾಯಿಯರಿಗೂ ತಮ್ಮ ಮಕ್ಕಳು ಬೆಳೆದು ದೊಡ್ಡವರಾಗಿ ವಿದ್ಯಾವಂತರಾಗಿ ಬುದ್ದಿವಂತರಾಗಬೇಕೆಂಬ ಅಪೇಕ್ಷೆ ಇರುವುದರಿಂದ ಒಳ್ಳೆ ಒಳ್ಳೆ ಕಾಲೇಜುಗಳಲ್ಲಿ pcmb, pcmc ಸೀಟು ಪಡೆಯಲು ಚಡಪಡಿಸುತ್ತಿದ್ದಾರೆ.

ಎರಡನೇ ಪಿಯೂಸಿ ಫಲಿತಾಂಶ ಬಂದನಂತರ ಮುಂದೇನು ಎನ್ನುವ ಗೊಂದಲ ಇಲ್ಲಿ ಯಾರಿಗೂ ಇಲ್ಲ. ಟೆಕ್ನಿಕಲ್‌ ಎಜುಕೇಷನ್‌ ಬಿಳಿಕುದುರೆ ಸವಾರಿಗೆ ಸಿದ್ಧರಾಗಿರುವ ಈ ಸಮಾಜಕ್ಕೆ ಅನ್ಯ ಚಿಂತೆಯೇ ಇಲ್ಲ. ಯಾಕೆಂದರೆ ಸಿಇಟಿ ರ್ಯಾಂಕು ಬಂದು ಎಜಿನಿಯರಿಂಗ್‌ ಅಥವಾ ಮೆಡಿಕಲ್‌ ಸೀಟು ಸಿಕ್ಕಿಬಿಟ್ಟರೆ ಅಜ್ಜಿಯೂ ಕೃತಾರ್ಥ. ಈ ದೇಶದ ಮಕ್ಕಳಿಗೆ ಬೇರೆ ಏನೂ ಬೇಡ. ಉತ್ತಮ ಭಾಷಾಪಂಡಿತ, ಗಾಯಕ, ಚಿತ್ರಕಾರ, ಇತಿಹಾಸ-ರಾಜ್ಯಶಾಸ್ತ್ರದ ಉಪನ್ಯಾಸಕ, ಮನೋವಿಜ್ಞಾನ, ಕಳಕಳಿಯ ವಕೀಲ -ಹೀಗೆ ಯಾರೂ ಬೇಡ.. ಇದು ಸರಿಯಾ?

English summary
My sslc days by S. K. Shama Sundara, Chitradurga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X