• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ರಾಮ’ನಾಮ ಪಾಯಸಕ್ಕೆ ‘ಶ್ಯಾಮ’ ನಾಮ ಸಕ್ಕರೆ!

By Staff
|

ಕ್ಯಾಲೆಂಡರ್‌ಗಳಲ್ಲಿನ ರಾಮನ ಪೋಟೋ ನೋಡುತ್ತಲೇ, ರಾಮನವಮಿ ದಿನ ಪಾನಕ-ಕೋಸಂಬರಿ ತಿನ್ನುತ್ತಲೇ ದೊಡ್ಡವರಾದವರು ನಾವು! ಈ ರಾಮನ ಫೋಟೊ ಕಂಡಾಗ, ಜ್ಞಾಪಕ ಶಾಲೆ ಹಾಳೆಗಳು, ತಮ್ಮಷ್ಟಕ್ಕೆ ತಾವೇ ಇಲ್ಲಿ ತೆರೆದುಕೊಂಡಿವೆ!

ಕ್ಷಣಕ್ಷಣಕ್ಕೂ ಚರಿತ್ರೆಗೆ ಜನ್ಮ ನೀಡುತ್ತಾ ಕಾಲ ಹೇಗೆಲ್ಲ ರೂಪಾಂತರಗೊಳ್ಳುತ್ತಾ ಬರತ್ತೆ ನೋಡಿ. ನೋಡುನೋಡುತ್ತಿದ್ದಂತೆಯೇ ರೂಪಾಂತರಗೊಂಡ ಆ ಗೋಲಿ, ಉರುಳುತ್ತಾ ಮತ್ತೆ ಅಲ್ಲೆ ಬಂದು ನಿಲ್ಲುತ್ತಿದೆ! ನಿಂತು ಮುಂದಕ್ಕೆ ಹೋಗುತ್ತಿದೆ! ರಾಮ ರಾಮ!

ಮೊನ್ನೆ ಯುಗಾದಿಯಾಯಿತು. ನಿನ್ನೆ ರಾಮನವಮಿಯಾಯಿತು. ನಾಳೆ ಇನ್ನೊಂದು. ನಾಡಿದ್ದು ಮತ್ತೊಂದು. ಆದರೆ ಕಾಲ ಬೆಳೆದಂತೆ ಮನುಷ್ಯ ಬದುಕುವುದೇ ಇಲ್ಲ. ಗೋಡೆ ಮೇಲಿನ ಕ್ಯಾಲೆಂಡರ್‌ನಂತೆ, ಒಂದೇ ಕಡೆ ನಿಂತಿರುತ್ತಾನೆ! ಕಾಪಾಡೋ ರಾಮ!

ರಾಮನೇ ಆಗಲಿ ಭೀಮನೇ ಆಗಲಿ ಮುದ್ದುಮೊಗದ ಸರಸ್ವತಿಯೇ ಆಗಲಿ, ಇಂಥ ಚಿತ್ತಾಪಹಾರಿ ದೃಶ್ಯಗಳನ್ನು ಮನದ ಜ್ಞಾಪಕ ಶಾಲೆಯ ಹಾಳೆಗಳಲ್ಲಿ ಸ್ಕ್ಯಾನ್‌ ಮಾಡಿಕೊಳ್ಳುತ್ತಲೇ ಬೆಳೆದವನು ನಾನು. ಆದರೀಗ, ದೇವಸ್ಥಾನಗಳಿಗೆ ಹೋಗುವುದಕ್ಕೆ ಟೈಮೇ ಇಲ್ಲ. ಆಕ್ರಲಿಕ್‌ ಪೇಂಟಿಂಗ್‌ ಮಾಡಿದ ಮನೆಗೋಡೆಗೆ ಮೊಳೆ ಹೊಡೆಯುವ ಹಾಗಿಲ್ಲ. ನಿನ್ನನ್ನು ಇನ್ನೆಲ್ಲಿ ಕಾಣಲಿ ಅಯೋಧ್ಯಾ ರಾಮಾ?

ಯಾವುದೋ ಬ್ಯಾಂಕಿನ ಕ್ಯಾಲೆಂಡರ್‌ನಲ್ಲಿ ಯಾವಳದ್ದೋ ಚಿತ್ರ ನೋಡುತ್ತಾ, ದಿನಾಂಕಗಳನ್ನು ಹುಡುಕುವವನು ನಾನು. ಹಾಗಾಗಿ ರಾಮ ಸೀತೆ ಆಂಜನೇಯನ ಚಿತ್ರಗಳನ್ನು ಕಾಣಲು ಎಲ್ಲಿಗೇಂತ ಹೋಗಲಿ? ಅವರನ್ನೆಲ್ಲ ಕಂಡು ಮಾತಾಡಬೇಕಾದರೆ ಇಲ್ಲಿಗೇ ಬರಬೇಕು. ದಟ್ಸ್‌ಕನ್ನಡ ಕಚೇರಿಯಲ್ಲಿ ಕುಳಿತು ಇಂಟರ್‌ನೆಟ್ಟಿಗೆ ತಲೆಕೊಡಬೇಕು. ಅಯ್ಯೋ ರಾಮ!

ಇವತ್ತು ಬೆಳಗ್ಗೆ ಕೆಲಸಕ್ಕೆ ಬಂದು ಮೇಲ್‌ ಬಾಕ್ಸ್‌ ತೆರೆದು ನೋಡ್ತೀನಿ. ಮೊದಲು ಕಣ್ಣಿಗೆ ಬಿದ್ದದ್ದು rama.jpg ಫೈಲು. ಭಕ್ತಿಯಿಂದಲೋ ನನ್ನ ಮೇಲಿನ ಇ-ಸ್ನೇಹದಿಂದಲೋ ಅಥವಾ ನವಮಿ ನೆನಪುಗಳನ್ನು ನವೀಕರಿಸಲೋ ಸೀತಾಕಾಂತನ ಚಿತ್ರ ಕಳಿಸಿಕೊಟ್ಟವರು ಆಕ್‌ಸೆನ್‌ಚರ್‌ನ ಮಿತ್ರ ಕೃಷ್ಣಮೂರ್ತಿ. ಭೋಲೇ ರಾಮ್‌!

Mail this to your friend

ಆಗಿನ ಕಾಲದಲ್ಲಿ ಬಿಸಿನೆಸ್‌ ಮಾಡುವವರು ವರ್ಷಕ್ಕೊಮ್ಮೆ ಕ್ಯಾಲೆಂಡರ್‌ ಮಾಡಿಸಿ ಫ್ರೀ ಕಾಪಿ ಹಂಚುತ್ತಿದ್ದರು. ಬಾಲಾಜಿ ಕಾಫಿ ವರ್ಕ್ಸ್‌, ರಾಧಾಕೃಷ್ಣ ಶೆಟ್ಟಿ ಅಂಡ್‌ ಸನ್ಸ್‌, ಚನ್ನಬಸಪ್ಪ ಸ್ಯಾರಿ ಹೌಸ್‌, ಸಿದ್ದೋಜಿರಾವ್‌ ಅಂಡ್‌ ಬ್ರದರ್ಸ್‌ ಅಂತ ಹೇಳಿಕೊಂಡು ನಮ್ಮ ಮನೆಗೆ ಕ್ಯಾಲೆಂಡರುಗಳು ಬರುತ್ತಿದ್ದವು. ಎಲ್ಲೆಲ್ಲಿ ಗೋಡೆಗಳಿವೆಯೋ ಅಲ್ಲೆಲ್ಲ ಮೊಳೆಹೊಡೆದು ಚಂದಕಾಣಿಸುವ ಹಾಗೆ ನೇತುಹಾಕುತ್ತಿದ್ದೆ . ಆ ಕಾಲದಲ್ಲಿಯೇ ಪರಿಚಯವಾದವನು; ನಾಥೂರಾಮ್‌!

ನಮ್ಮ ಮಾವ ಕಟ್ಟಿ ಶ್ರೀನಿವಾಸಶಾಸ್ತ್ರಿಗಳ ರೂಮಲ್ಲಿ ದೇವರ ಕ್ಯಾಲೆಂಡರ್‌ಗಳು ಕಣ್ಣು ತುಂಬುತ್ತಿದ್ದವು. ಬೆಳಗ್ಗೆ ಎದ್ದಾಕ್ಷಣ ಬಲಗಡೆ ತಿರುಗಿಕೊಂಡೇ ಏಳಬೇಕು. ಮೊದಲು ದೇವರ ಪಟ ಕಣ್ಣಿಗೆ ಬೀಳಬೇಕು. ‘ಇವರು ಕೈಯುಜ್ಜಿಕೊಂಡು ಕರಾಗ್ರೆ ವಸತೇ ಮೂಲೆ ಲಕ್ಷ್ಮೀ ಕರಮೂಲೇ ಸರಸ್ವತೀ’ ಅಂತ ಮನಸ್ಸಿನಲ್ಲೇ ಶ್ಲೋಕ ಹೇಳಿಕೊಂಡೇಳಬೇಕು. ಅವರು ತೀರಿಕೊಂಡ ಮೇಲೆ ಆ ರೂಮು ಅವರ ಮೊಮ್ಮಗನ ಪಾಲಾಯಿತು. ಆ ಗೋಡೆಗಳಲ್ಲಿ ಇವತ್ತು smash it ಎನ್ನುತ್ತಾ ಹೂಂಕರಿಸುತ್ತಿರುವ Sylvester Stallone ಇದ್ದಾನೆ. ಪಕ್ಕದ ಕೊಣೆಯಲ್ಲಿ ಮೊಮ್ಮಗಳ ವಾಸ. ಅವಳ ಗೋಡೆಯ ಮೇಲೆ ರಾಣಿ ಮುಖರ್ಜಿ ಫೋಟೋ. ಅಲ್ಲಾರೀ..ಫೋಟೋ ನೋಡುತ್ತಾ ಇದ್ದರೆ ರಾಣಿ ನನ್ನನ್ನೇ ನೋಡುತ್ತಿರುವಂತೆ ಕಾಣಿಸತ್ತೆ. ಹೇ ರಾಮ್‌.

ತ್ರೇತಾಯುಗದ ರಾಮನಿಗೆ ಒಂದೇ ಅವತಾರ. ಅದು ರಘುಕುಲ ಸೋಮನ ಅವತಾರ. ಆದರೆ ಕಲಿಯುಗ ರಾಮನಿಗೆ ಎಷ್ಟೊಂದು ಅವತಾರ? ಅವನು ಇನ್ನೂ ಕೂಡ ದಶರಥ ರಾಜನ ಮಗನೆ, ಏಕಪತ್ನೀವ್ರತಸ್ಥನೆ, ಮರ್ಯಾದಾ ಪುರುಷೋತ್ತಮನೆ, ಸೀತೆಯನ್ನು ಕಾಡಿಗಟ್ಟಿದ ರಾಮನೆ, ಕೌಸಲ್ಯಾರಾಮನೆ, ಕಲ್ಯಾಣರಾಮನೆ, ಪಟ್ಟಾಭಿರಾಮನೆ, ಪತಿತ ಪಾವನನೆ. ಜೈ ರಾಮ್‌!

ರಾಮನವಮಿ ಮಾಡದಿದ್ದರೂ ಕೋಸಂಬರಿ ಪಾನಕ ಸವಿಯದಿದ್ದರೂ ರಾಮಚರಿತಮಾನಸ ಪಠಿಸದಿದ್ದರೂ ಅಂತೂ ಇವತ್ತು ರಾಮನಾಮಸ್ಮರಣೆ ಆಯಿತು. ನವಮಿ ತಪ್ಪಿದರೆ ರಾಮ ಕ್ಷಮಿಸನೆ? ದಶಮಿಗೆ ರಾಮನೊಲಿಯನೆ? ರಾಮನಾಮ ಪಾಯಸಕೆ ಸರ್ವನಾಮ ಸಕ್ಕರೆಯಾಗದೆ? ರಾಮಚಂದ್ರ, ರಾಮಪ್ಪ, ರಾಮಮೂರ್ತಿ, ರಾಮಣ್ಣ, ರಾಮ್‌ದಯಾಳ್‌, ರಾಮಶಂಕರ, ರಾಮಪ್ರಸಾದ್‌, ರಾಮಶೇಷ ಎಲ್ಲ ಸ್ನೇಹಿತರನ್ನೂ ಒಮ್ಮೆಗೆ ನೆನೆಸಿಕೊಂಡಂತಾಯಿತು. ಜನ್ಮ ಇಷ್ಟು ಪಾವನವಾಯಿತು. ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು. ಪದುಮನಾಭನ ಪಾದದೊಲುಮೆ ಎನಗಾಯಿತು. ಕಲ್ಯಾಣ ರಾಮ!

ಇನ್ನು ಊಟಕ್ಕೆ ಏಳಿ ಹೊತ್ತಾಯಿತು. ಸೀತಾಕಾಂತ ಸ್ಮರಣೆ ಜಯ್‌ಜಯ್‌ ರಾಮ್‌!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more