ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಕ್ರಿಯೆ : ನಕ್ಸಲ್ ಚಳವಳಿ ಮತ್ತು ಹಾವಳಿನಕ್ಸಲರು

By Super
|
Google Oneindia Kannada News

The Real faces of Naxals and Naxalism!
ಮಾನ್ಯರೇ,
ಈ ನನ್ನ ಬರಹ,ನಕ್ಸಲ್ ಪರವೂ ಅಲ್ಲ, ವಿರುದ್ಧವೂ ಅಲ್ಲ.. ವ್ಯವಸ್ಥೆ ಹೀಗಿದೆ ಎಂದು ಹೇಳುವುದಷ್ಟೇ ನನ್ನ ಉದ್ದೇಶ. ನಕ್ಸಲ್ ಸಮಸ್ಯೆ ಬಗ್ಗೆ ಮಾತ್ರ ಚರ್ಚಿಸದೇ, ಪರಿಹಾರವನ್ನು ಸಹಾ ನಾನಿಲ್ಲಿ ಹೇಳಿದ್ದೇನೆ.

ಕಾಡುಮೇಡು ಅಲೆಯುತ್ತಾ, ಮನೆಮಂದಿಯ ಆಗಾಗ ನೆನೆಯುತ್ತಾ, ಎಲ್ಲಕ್ಕಿಂತಲೂ ಸಿದ್ಧಾಂತವೇ ದೊಡ್ಡದು ಎಂದು ಅಲೆಯುವುದು ಸಾಮಾನ್ಯದ ಮಾತಲ್ಲ. ಹೆತ್ತವರ ಪಾಲಿಗೆ ಬದುಕಿದ್ದಾಗಲೇ ಇಲ್ಲವಾಗುವ ನೋವು ತಿನ್ನುವುದು ಸುಲಭದ ಸಂಗತಿಯಲ್ಲ. ಈವರೆಗೆ ಜೊತೆಯಲ್ಲಿದ್ದ ಗೆಳೆಯ ಅಥವಾ ಗೆಳತಿಯನ್ನು ಕಳೆದುಕೊಂಡು, ಕೊರಗುವ ಕಷ್ಟ ಅನುಭವಿಸಿದವರಿಗಷ್ಟೇ ಗೊತ್ತು. ಯಾರ ಹಣೆಗೆ ಯಾರ ಗುಂಡೋ? ಮೃತ್ಯು ಎನ್ನುವುದು ಯಾವ ರೂಪದಲ್ಲಿ ಬರುತ್ತೋ? ಬೆಳಗ್ಗೆಯಿಂದ ಜೊತೆಯಲ್ಲಿದ್ದವ ಕೆಲವೇ ಕ್ಷಣಗಳಲ್ಲಿ ಶಾಶ್ವತವಾಗಿ ಇಲ್ಲವಾಗುವ ಮಾಯೆಯ ಜೀರ್ಣಿಸಿಕೊಳ್ಳುವುದು ಕಷ್ಟ. ಇವೆಲ್ಲವನ್ನೂ ನಕ್ಸಲ್ ಹುಡುಗರು ದಕ್ಕಿಸಿಕೊಂಡಿದ್ದಾರೆ. ಇವರಿಗೇನು ಹುಚ್ಚೆ? ಇಂತಹ ಜೀವನ ಶೈಲಿಗೆ ಹೊಂದಿಕೊಳ್ಳಲು ಇವರೇನು ಪೆಪ್ಪರಾ?

ನಾನು, ನನ್ನ ಮಕ್ಕಳು, ನನ್ನ ಹೆಂಡತಿ ಎಂದು ಸುತ್ತಲೂ ಗೆರೆ ಹಾಕಿಕೊಂಡು ಬದುಕುವ ಮನುಷ್ಯರ ಮಧ್ಯೆ, ಪ್ರತ್ಯೇಕವಾಗಿ ನಕ್ಸಲರು ಉಳಿದುಬಿಟ್ಟಿದ್ದಾರೆ. ನಂಬಿದ ಸಿದ್ಧಾಂತ ಎಷ್ಟು ಅರ್ಥವಾಗಿದೆಯೋ ಗೊತ್ತಿಲ್ಲ? ಆದರೆ ಅದಕ್ಕೆ ಅಂಟಿಕೊಂಡವರಿಗೆ, ಬಿಡಲು ಮನಸ್ಸಾಗುತ್ತಿಲ್ಲ. ಬಿಟ್ಟರೆ ಪೊಲೀಸರು ಉಳಿಸುತ್ತಾರೆ ಎಂಬ ನಂಬಿಕೆಯೂ ಇಲ್ಲ.

ಸಾಮಾಜಿಕ ನ್ಯಾಯ, ಎಲ್ಲರಿಗೂ ಸಮಬಾಳು ಮತ್ತು ಸಮಪಾಲು, ರಕ್ತ ಕ್ರಾಂತಿ ಅನ್ನುವ ಪದಗಳನ್ನು ಬಳಸಿಬಳಸಿ ನಕ್ಸಲರಿಗೂ ಬೇಸರವಾಗಿದೆ. ಆದರೆ ವಿಧಿಯಿಲ್ಲ. ವ್ಯವಸ್ಥೆ ನಕ್ಸಲರನ್ನು ಗೇಲಿ ಮಾಡುತ್ತಿದೆ. ನರಿಯ ಕೂಗು, ಗಿರಿಯ ಮುಟ್ಟೀತೇ? ಎಂಬ ಕುಹಕ, ಅವರನ್ನು ಹಿಂಸಿಸುತ್ತಿದೆ. ಅವರ ಕನಸಿನ ಸಮಾಜ, ನನಸಾಗುವ ದಿನ ದೂರದಲ್ಲಿದೆ ಎಂದು ಹೇಳಿದರೆ, ಅದೊಂದು ಸುಳ್ಳಾದೀತು.

ಸಿರಿತನ ಎನ್ನುವುದು ಅಪ್ಪನಿಂದ ಮಗನಿಗೆ ವರ್ಗಾವಣೆಯಾಗುತ್ತಿದೆ... ಸೈಕಲ್ ತುಳಿಯುತ್ತಿದ್ದವ ಬೈಕು ಓಡಿಸುತ್ತಾನೆ. ಬೈಕಲ್ಲಿ ಸುತ್ತಾಡುತ್ತಿದ್ದವ ಕಾರಲ್ಲಿ ಮೆರೆಯುತ್ತಾನೆ. ಅಂತಸ್ತಿನ ಮೇಲೆ ಅಂತಸ್ತುಗಳು ಬೆಳೆಯುತ್ತವೆ.. ಎಲ್ಲವೂ ಸರಿ.. ಆದರೆ ಬಡವರ ಸ್ಥಿತಿ?

ಅಪ್ಪ ಮಾಡಿದ ಸಾಲಕ್ಕೆ ಮಗ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಅಪ್ಪ ಜೀತ ಮಾಡುತ್ತಿದ್ದ ಜಾಗಕ್ಕೆ ಮಗ ಬಂದಿದ್ದಾನೆ. ಮಗಳ ಮದುವೆಗೆ ಮಾಡಿದ ಸಾಲ ತೀರುವ ಮುನ್ನವೇ, ಇನ್ನೊಬ್ಬ ಮಗಳು ದೊಡ್ಡವಳಾಗಿದ್ದಾಳೆ... ಕಿತ್ತು ತಿನ್ನುವ ಬಡತನ, ಹಿಂಡಿ ಹಿಪ್ಪೆ ಮಾಡುವ ಕಾಯಿಲೆಗಳು.. ನೆರವಿಗೆ ಬಾರದ ಸರ್ಕಾರ, ಅಣಕಿಸುವ ಶ್ರೀಮಂತರು.. ಸೋತ ವ್ಯಕ್ತಿ ವ್ಯವಸ್ಥೆ ವಿರುದ್ಧ ಬಂಡೆದ್ದು ನಿಲ್ಲದೇ ಇನ್ನೇನು ಮಾಡುತ್ತಾನೆ.

ಆತ ಕೈಗೆ ಕೋವಿ ಹಿಡಿಯುತ್ತಾನೆ... ತನ್ನ ಅಗತ್ಯಗಳಿಗಾಗಿ ಮೊದಮೊದಲು ಸುಲಿಗೆ ಮಾಡುತ್ತಾನೆ.. ಸುಲಿಗೆಗೆ ಹೊಂದಿಕೊಂಡ ಮೇಲೆ ಅದರಲ್ಲಿಯೇ ಬದುಕು ಹುಡುಕಿಕೊಳ್ಳಲು ಯತ್ನಿಸುತ್ತಾನೆ. ಕೋವಿ ಕೆಳಗಿಡೋಣ.. ಇದೆಲ್ಲ ತಪ್ಪು ಅನ್ನಿಸುವ ಹೊತ್ತಿಗೆ, ಪೊಲೀಸರ ಫೈಲಲ್ಲಿ ಅವನ ಫೋಟೊ ಬಂದಿರುತ್ತದೆ! ಇಷ್ಟವಿಲ್ಲದಿದ್ದರೂ, ಬದುಕಿರುವಷ್ಟು ದಿನ ಹೆಗಲ ಮೇಲೆ ಕೋವಿ ಮಲಗಿರುತ್ತದೆ.

ಹೊಟ್ಟೆ ತುಂಬಿದ ಜನಕ್ಕೆ ನಕ್ಸಲರು ಅರ್ಥವಾಗುವುದಿಲ್ಲ. ನಕ್ಸಲರೇ ಅರ್ಥವಾಗುವುದಿಲ್ಲ ಎಂದ ಮೇಲೆ ನಕ್ಸಲ್ ಸಿದ್ಧಾಂತ ಅರ್ಥವಾಗುವುದು ತುಂಬಾಕಷ್ಟ. ದಾರಿ ತಪ್ಪಿದ ಮಕ್ಕಳು, ಧನಿಕರ ಮನೆಗೆ ನುಗ್ಗುವ ಲೂಟಿಕೋರರು ಹೀಗೆ ನಕ್ಸಲರ ಹೊರ ಮುಖವನ್ನು ಮಾತ್ರ ಅವರು ವಿಮರ್ಶಿಸಬಲ್ಲರು. ಒಳ ಮುಖ ಗೊತ್ತಾಗಿದ್ದರೆ, ಅರ್ಥವಾಗಿದ್ದರೆ, ಅವರೂ ನಕ್ಸಲ್ ಚಳವಳಿಯಲ್ಲಿ ಸಕ್ರಿಯರಾಗಿರುತ್ತಿದ್ದರು.

ಗೆಳೆಯರೇ, ಮೇಲೆ ಹೇಳಿದಂತೆ ನಕ್ಸಲ್ ವಾದಕ್ಕೆ, ನಕ್ಸಲ್ ಚಳವಳಿಗೆ ಸಮರ್ಥನೆ ನೀಡಬಹುದು. ನಕ್ಸಲರ ಸಮರ್ಥಿಸಬಹುದು. ಜಗತ್ತಿನಲ್ಲಿ ಸಮರ್ಥನೆ ನೀಡಲಾಗದ ಸಂಗತಿ ಯಾವುದಿದೆ? ಮಾಡುವ ಪ್ರತಿ ಪಾಪಕ್ಕೂ ಕಾರಣಗಳ ಹುಡುಕಬಹುದು. ಕಾರಣಗಳು ಸತ್ಯಗಳಲ್ಲ.

ತೊಂದರೆಯಿದ್ದರೆ, ದೋಷಗಳಿದ್ದರೆ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಸಂವಿಧಾನವೇ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಪ್ರಜೆಗಳಿಗೆ ನೀಡಿದೆ. ಎಲ್ಲ ಸಮಸ್ಯೆಗೂ ಬಂದೂಕೇ ಪರಿಹಾರ ಎಂದು ಹೊರಟರೇ, ಕೊನೆಗೆ ಹೆಣಗಳಷ್ಟೇ ಉಳಿಯುತ್ತವೆ.

ಪ್ರಮುಖ ವಾಹಿನಿಯಲ್ಲಿ ನಕ್ಸಲರು ಸೇರಿಕೊಳ್ಳಬೇಕು. ಶಾಂತಿ ಮಾರ್ಗದಲ್ಲಿ ಹೋರಾಟವನ್ನು ನಡೆಸಬೇಕು. ಈ ಪರಿಸ್ಥಿತಿ ನಿರ್ಮಾಣಕ್ಕಾಗಿ ಸರ್ಕಾರ ಶ್ರಮಿಸಬೇಕು. ವ್ಯವಸ್ಥೆಯಲ್ಲಿನ ತೂತುಗಳ ಮುಚ್ಚಬೇಕು. ನಕ್ಸಲರ ಬಲಿ ಹಾಕುವುದಕ್ಕಿಂತಲೂ, ನಕ್ಸಲರ ಹುಟ್ಟಿಗೆ ಕಾರಣವಾದ ಅಂಶಗಳ ಗಮನಿಸಬೇಕು. ಎರಡು ಹೊತ್ತು ಊಟ ಮತ್ತು ನೆಮ್ಮದಿಯ ನಿದ್ರೆ ಮಾಡುವ ಅವಕಾಶ ಎಲ್ಲರಿಗೂ ಸಿಗಲಿ.

-ಶಾಂತಿಧೂತ

English summary
The Real faces of Naxals and Naxalism! A write up by Shantidhoota.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X