• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಬ್ಬಬ್ಬ ಈ ಹೊಳೆಹಬ್ಬ... ಅಬ್ಬಬ್ಬ ಆ ಬಾಡೂಟ!

By Staff
|

ನೀವು ಏನೇ ಹೇಳಿ, ಹಳ್ಳಿಗಳಿಗೆ ಹೋಗಬೇಕು... ಅದರಲ್ಲೂ ಗ್ರಾಮೀಣ ಹಬ್ಬಗಳ ಸೊಗಡು-ಸಂಭ್ರಮ ನೋಡಿಯೇ ಸವಿಯಬೇಕು. ಆ ಗುಂಪಿನ ಮಧ್ಯೆ ನಾವೊಬ್ಬರಾಗಬೇಕು. ಸಾಗರಲ್ಲಿ ಇತ್ತೀಚೆಗೊಂದು ಹೊಳೆಹಬ್ಬ ನಡೆದಿದೆ. ಹಬ್ಬ ಮುಗಿದರೂ ಬಾಡೂಟದ ವಾಸನೆ ಗ್ರಾಮದಲ್ಲಿ ಈಗಲೂ ಇದೆ! ಅದೇ ಅಲ್ವಾ ಹಬ್ಬದ ತಾಕತ್ತೂ ಅಂದ್ರೆ!

ಚಿತ್ರಗಳು : ರಾಘವೇಂದ್ರ ಶರ್ಮಾ

The Sacrificial Sheepನಿಮಗಿದು ಗೊತ್ತಲ್ಲ!

ಕರ್ನಾಟಕದ ಹಳ್ಳಿಗಳಲ್ಲಿ ರೈತರು, ಕೂಲಿನಾಲಿ ಕಾರ್ಮಿಕರು, ಕೆಲಸವಿಲ್ಲದವರು ಮತ್ತು ಸೋಮಾರಿಗಳು ಎಂಥೆಂಥ ಹಬ್ಬಗಳನ್ನು ಆಚರಿಸುತ್ತಾರೆ ಅಂತೀರಿ!

ಯುಗಾದಿ, ಚೌತಿ, ದೀಪಾವಳಿ, ಸಂಕ್ರಾಂತಿ ಇವೆಲ್ಲ ಬಿಡಿ. ಬೋರು. ಆದರೆ ನಮ್ಮ ನಾಡಿನ ಪ್ರತಿಯಾಂದು ಹಳ್ಳಿಯೂ ತನ್ನದೇಯಾದ ವಿಶಿಷ್ಟವಾದ ಹಬ್ಬವನ್ನು ಆಚರಿಸಿಕೊಳ್ಳುತ್ತದಲ್ಲ... ಅದು ಎಂದೂ ನೀರಸವೆನಿಸುವುದಿಲ್ಲ. ಅವರ ಹಬ್ಬಗಳನ್ನು ಕಣ್‌ತುಂಬ ನೋಡಬೇಕು... ಪಾಲು ಪಡೆಯಬೇಕು.

ದೇವಿಯ ಹೆಸರಲ್ಲಿ, ಚಂಡಿಯ ಹೆಸರಲ್ಲಿ, ನೀರಿನ ಹೆಸರಲ್ಲಿ, ದೆವ್ವ ಭೂತ, ಕಾಯಿಲೆ-ಕಸಾಲೆ, ಬರಗಾಲ, ಮಳೆ-ಮೋಡ, ದನ-ಕರು, ಕುರಿ ಹೆಸರಲ್ಲಿ ಸಂಭ್ರಮಿಸುವ ಹಬ್ಬ-ಊರಹಬ್ಬ-ಜಾತ್ರೆ-ಸಿಡಿ-ಮುಡಿ... ಅವರಿಗಷ್ಟೇ, ಆ ಹಳ್ಳಿಗಷ್ಟೇ ಸ್ಪೆಷಲ್‌ ಆದ ಕ್ಷಣಗಳಾಗಿರುತ್ತವೆ, ವರ್ಷಾನುವರ್ಷ.

ಫಾದರ್ಸ್‌ ಡೇ, ಮದರ್ಸ್‌ ಡೇ, ವ್ಯಾಲಂಟೈನ್‌ ಹಬ್ಬಗಳಾದ ನಂತರ ನೀವು ಸ್ವಲ್ಪ ಬಿಡುವು ಮಾಡಿಕೊಂಡು, ಕರ್ನಾಟಕದ ಯಾವುದಾದರೊಂದು ಗುಡ್ಡಗಾಡು ಹಳ್ಳಿಗೆ ಪ್ರಯಾಣ ಬೆಳೆಸಿ. ಅಲ್ಲಿನ ಸ್ಥಳೀಯರ ಹಬ್ಬ ಆಚರಣೆಗಳನ್ನು ಕಣ್ಣಾರೆ ನೋಡಿ. ನಮ್ಮ ಹಳ್ಳಿಗಳು ಈಗ ಹೇಗಿವೆ ಎನ್ನುವುದರ ಮುದ್ದಾಂ ಪರಿಚಯವೂ ಆದಂತಾಗುತ್ತದೆ. ಸ್ವಾರಸ್ಯಪೂರ್ಣ ಅನುಭವಗಳು ನಿಮ್ಮ ಆಲ್ಬಂನೊಳಗೆ ಸೇರಿಕೊಳ್ಳುತ್ತವೆ.

ನಿಮಗೆ ಉಚಿತ ಸಲಹೆ ಕೊಡುವುದಷ್ಟೆ ನನ್ನ ಕೆಲಸವಲ್ಲ. ನನಗೂ ಹಳ್ಳಿಗಳು ಗೊತ್ತು. ಆದರೆ ಪೇಟೆ ಸೇರಿದ ಮೇಲೆ ಕೆಟ್ಟುಹೋದೆ. ಕಾವೇರಿ ನೀರಿನ ಜಗಳ, ರೈತರ ಆತ್ಮಹತ್ಯೆ , ಬರಗಾಲ ತಲೆದೋರಿದಾಗಷ್ಟೆ ಹಳ್ಳಿಗಳು ನೆಪ್ಪಿಗೆ ಬರತ್ತೆ. ಆದರೆ, ಏನೊಂದೂ ಕಾರಣವಿಲ್ಲದೆ ಮೊಬೈಲ್‌ ಟವರ್‌ ಇಲ್ಲದ ಹಳ್ಳಿಗೆ ಹೋಗಿ, ಎರಡು ದಿನ ಇದ್ದು ಬರುವ ಆನಂದ ಇದೆಯಲ್ಲ. ಅದು ಬೇಸಗೆಯ ರಾತ್ರಿ ಬೀಳುವ ಮುಂಗಾರಿನ ಕನಸು.

ಸಾಗರದ ಮಿತ್ರ ರಾಘವೇಂದ್ರ ಶರ್ಮ ನನ್ನನ್ನು ಅವರೂರಿಗೆ ಕರೆಯುತ್ತಲೇ ಇರುತ್ತಾರೆ. ಕರೆದೂ ಕರೆದೂ ಸಾಕಾಗಿದ್ದಾರೆ. ‘ಬನ್ನಿ ಸಾರ್‌, ತಲವಾಟಕ್ಕೆ ಬನ್ನಿ. ಗಿಡ ಮರ ಹಸಿರು, ಪುಳಿಚಾರು ಊಟ ಎರಡು ದಿವಸ ಎಂಜಾಯ್‌ ಮಾಡುವಿರಂತೆ ’ ಎನ್ನುವುದು ಅವರ ಆತ್ಮೀಯ ಆಹ್ವಾನ. ನಾಕು ದಿನ ರಜೆ ಹಾಕಿ ಅಲ್ಲಿಗೆ ಹೋಗೋಣ ಅಂದುಕೊಳ್ಳುತ್ತಿರುವಾಗಲೇ, ಮಲೆನಾಡಿನ ಗರ್ಭದಲ್ಲಿ ಆಚರಿಸಲಾಗುವ ಒಂದು ಹಬ್ಬದ ಸುದ್ದಿ ಸಾಗರದಿಂದ ಬಂತು. ಅದರ ಹೆಸರು ಹೊಳೆ ಹಬ್ಬ.

ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುವ ದಿನಗಳಲ್ಲಿ ಕೂಲಿಕಾರ್ಮಿಕರು ಹೆಚ್ಚಿರುವ ಮಲೆನಾಡ ಹಳ್ಳಿ ಹೋಬಳಿಗಳಲ್ಲಿ ಹೊಳೆಹಬ್ಬ ಆಚರಿಸಲಾಗುತ್ತದೆ. ಊರಿನ ಸಮಸ್ತರೊಡಗೂಡಿ ಸಂಭ್ರಮಿಸುವ ವಿಚಿತ್ರ ಹಬ್ಬವದು. ಹಬ್ಬ ಎಂದರೆ ತಿನ್ನುವುದು, ಹೊಸ ವಸ್ತ್ರ ತರುವುದು, ಉಡುವುದು ಸಾಮಾನ್ಯ. ಆದರೆ ಈ ಹಬ್ಬದಲ್ಲಿ ಊರವರೆಲ್ಲ ಕಲೆತು ಒಂದೇ ಒಲೆಯಲ್ಲಿ ಬೇಯಿಸಿದ ಕುರಿ ಮಾಂಸ ತಿನ್ನುತ್ತಾರೆ. ಅದೇ ಈ ಹಬ್ಬದ ಸ್ಪೆಷಾಲಿಟಿ.

ಕುರಿಯ ಕಡಿದು ನಂತರ ಅದರ ತಲೆಯನ್ನು ಮಾತ್ರ ಹಾಗೆಯೆ ಉಳಿಸಿಕೊಂಡು, ಊರಿನ ಪೂಜಾರಿಯಾಬ್ಬ ಅದಕ್ಕೆ ಪೂಜೆ ಮಾಡುವಷ್ಟರಲ್ಲಿ ಉಳಿದವರು ಕುರಿಯ ದೇಹದಿಂದ ಚರ್ಮವನ್ನು ಬೇರ್ಪಡಿಸಿಡುವಲ್ಲಿ ಮಗ್ನರಾಗಿರುತ್ತಾರೆ. ಆ ಸಂದರ್ಭದಲ್ಲಿ ಮಕ್ಕಳಿಗೆ ಕುರಿಯ ಅಂಗಾಂಗಗಳು ಆಟದ ವಸ್ತುಗಳಾಗುತ್ತವೆ. ಸಂಜೆ ವೇಳೆಗೆ ಎಲ್ಲರೂ ಸೇರಿ ಭರ್ಜರಿ ಬಾಡೂಟ ಮಾಡುತ್ತಾರೆ. ‘ಕೊಂದ ಪಾಪ ತಿಂದು ಪರಿಹಾರ’ ಎಂಬ ಸರಳ ಸೂತ್ರದ ನಾಣ್ಣುಡಿ ಪ್ರತಿವರ್ಷ ಇಲ್ಲಿ ಅನಾವರಣವಾಗುತ್ತದೆ.

ನಾನು ಸಾಗರಕ್ಕೆ ಹೋಗಬೇಕಿತ್ತು. ಹೋಗಿದ್ದರೆ ಹೊಳೆಹಬ್ಬ ಕಣ್ಣಾರೆ ನೋಡಲು ಸಿಗುತ್ತಿತ್ತು. ಚಿಂತೆಯಿಲ್ಲ. ಸ್ನೇಹಿತ ಶರ್ಮ ಆ ಹಳ್ಳಿಗೆ ಹೋಗಿ, ದಟ್ಸ್‌ಕನ್ನಡ ಓದುಗರಿಗಾಗಿ ಹೊಳೆಹಬ್ಬದ ನಾಲ್ಕು ಚಿತ್ರಗಳನ್ನು ಸೆರೆಹಿಡಿದು ಕಳಿಸಿದ್ದಾರೆ. ಥ್ಯಾಂಕ್ಯು ಶರ್ಮ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X