• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮರಳ ಹಲಗೆ ಮೇಲೆ ಮನುಷ್ಯ ಸ್ವಭಾವಗಳ ಬರೆದ ಜೋಕುಮಾರ!

By Staff
|

ನಮ್ಮ ರಾಜಾರಾಯರು ಅಂಥವರು. ಪಳಗಿದ ಪತ್ರಕರ್ತರಾಗಿದ್ದ ಅವರು ತೀರಿಕೊಂಡು, ಮೊನ್ನೆಗೆ ಒಂದು ವರ್ಷ ತುಂಬಿತು. ನ್ಯೂಸ್‌, ಸ್ಕೂಪು, ಪೇಜು, ಲೇಔಟ್‌... ಎಲ್ಲಾ ಮರೆತು ಅವರು ಜೋಕು ಜೀಕುತ್ತಾ ಕುಳಿತರೆಂದರೆ ಕಲಿಯುಗ ದ್ವಾಪರವಾಗುತ್ತಿತ್ತು!

Serious tramp : Karanam Raja Raoಭವಬಂಧನ ಕಳಚಿಕೊಳ್ಳುವುದಕ್ಕೆ ತತ್ವಜ್ಞಾನವೇ ಬೇಕಂತಿಲ್ಲ. ಮನೋವಿಜ್ಞಾನವೇ ಆಗಬೇಕೆಂದೇನೂ ಇಲ್ಲ. ಸಾರಿಗಿಂತ ತಿಳಿ ಹಾಸ್ಯದ ಜೋಕು ಹೇಳಿ ಅಥವಾ ಕೇಳಿ ಹಗುರಾಗದವನೇ ಪಾಪಿ, ಪರದೇಶಿ. ಎಲ್ಲೋ ಹುಟ್ಟಿ ಇನ್ನೆಲ್ಲೋ ಹರಿದು ಮತ್ತೆಲ್ಲೋ ಬೆಸಗೊಳ್ಳುವ ಭವಸಾಗರ ದಾಟುವುದಕ್ಕೆ ನಗೆಯೇ ಹಾಯಿದೋಣಿ.

ನೀವೂ ಜೋಕು ಹೇಳುತ್ತೀರಾ ? ಬರೆಯುತ್ತೀರಾ ? ನನಗೆ ಗೊತ್ತು . ನೀವು ಎಸ್‌ಎಂಎಸ್‌ನೊಳಗೆ ತೂರಿಬಂದ ಸರ್ದಾರ್‌ಜಿ ಜೋಕನ್ನು ನನ್ನ ನಂಬರ್‌(99001 62593)ಗೂ ಫಾರ್‌ವರ್ಡ್‌ ಮಾಡ್ತೀರಿ ಅಂತ. ಜೋಕುಗಳನ್ನು ಸರ್ವೆಸಾಮಾನ್ಯ ಎಲ್ಲರೂ ಹೊಡಿತಾರೆ. ಕೆಲವರು ಬೋರು ಹೊಡೆಸುತ್ತಾರೆ ಎನ್ನುವ ನೋವು ನಿರಾಕರಿಸಿದರೆ ಲವಲವಿಕೆಯ ಜೋಕುಗಳನ್ನು ಆಸ್ವಾದಿಸದೆ ಬದುಕು ದೂಡುವುದಕ್ಕೆ ಹೇಗೆ ಸಾಧ್ಯ?

ನಮ್ಮ ರಾಜಾರಾಯರು ಅಂಥವರು. ಪಳಗಿದ ಪತ್ರಕರ್ತರಾಗಿದ್ದ ಅವರು ತೀರಿಕೊಂಡು ಮೊನ್ನೆಮೊನ್ನೆಗೆ ಒಂದು ವರ್ಷ ತುಂಬಿತು. ನ್ಯೂಸ್‌, ಸ್ಕೂಪು, ಪೇಜು, ಲೇಔಟ್‌... ಎಲ್ಲಾ ಮರೆತು ಅವರು ಜೋಕು ಜೀಕುತ್ತಾ ಕುಳಿತರೆಂದರೆ ಕಲಿಯುಗ ದ್ವಾಪರವಾಗುತ್ತಿತ್ತು! ಅವರನ್ನು ಬೀಚಿಯ ತಮ್ಮ ಅಥವಾ ತಿಮ್ಮ ಎಂದು ನೀವು ಭಾವಿಸಿಕೊಳ್ಳಬಹುದು. ಜೋಕು ಹೇಳುವುದಕ್ಕೆ ಅವರಿಗೆ ಸಮಯ ಸಂದರ್ಭ ಬೇಕಿರಲಿಲ್ಲ, ಠಳ್ಳನೆ ಚಟಾಕಿ ಬೀಸುವುದಕ್ಕೆ ಅವರು ಯಾರ ಅಪ್ಪಣೆಯನ್ನೂ ಬೇಡುತ್ತಿರಲಿಲ್ಲ.

ಬರವಣಿಗೆಯ ಹಾಗೆ ಸಂಭಾಷಣೆಯಲ್ಲಿ ಚುರುಕುತನ, ಹಾವಭಾವದಲ್ಲಿ ಯಥೋಚಿತ ಅಭಿನಯ, ಮಾತುಗಳ ಸ್ವಾರಸ್ಯಕ್ಕೆ ತಕ್ಕಂತೆ ಧ್ವನಿಯ ಏರಿಳಿತ. ನಮ್ಮ ನಿಮ್ಮ ನಗೆ ಸ್ಪಂದನಕ್ಕೆ ಮೋಹಗೊಳ್ಳದೆ ತಮ್ಮ ಅನುದಿನದ ಚಟಾಕಿ ಹಾರಿಸುವುದರ ಮುಖಾಂತರವೇ ತನ್ನ ಜೀವನ ದೃಷ್ಟಿಕೋನವನ್ನು ತೆರೆದಿಡುತ್ತಾ 66 ವರ್ಷಗಳನ್ನು ಸವೆಸಿದ ಆಸಾಮಿ.

ಒಂದರ ಮೇಲೊಂದು ಜೋಕು. ತದನಂತರ ಮತ್ತೊಂದು. ಅದರ ತಲೆಮೇಲೆ ಹೊಡೆದಂತೆ ಇನ್ನೊಂದು. ಕೆಲವು ಕಾಲ್ಪನಿಕ , ಹಲವು ತಾವೇ ಕಂಡುಂಡ ಅನುಭವ. ಹಾಸ್ಯದ ನೆಪದಲ್ಲಿ ಮನುಷ್ಯ ಸ್ವಭಾವಗಳನ್ನು ಹಸಿಹಸಿಯಾಗಿ ಮರಳಮೇಲೆ ಬರೆಯುವ ಲೇಖಕ. ಒಂದೆರಡು ಗಂಟೆಗಳಲ್ಲಿ ಎಲ್ಲವೂ ಮುಕ್ತಾಯ ಅಂದುಕೊಳ್ಳುವಷ್ಟರಲ್ಲಿ ಇನ್ನೊಂದು ಪ್ರಸಂಗ ರೆಡಿ.

ಇಂಥವರು ಯಾವ ಕಾಲ ದೇಶಕ್ಕೂ ಹೊರತಲ್ಲ . ಅವರದೇ ಒಂದು ಸಂಕುಲ ಅಥವಾ ಪರಂಪರೆ. ಅವರ ಬದುಕು, ಭಯಾಗ್ರಫಿ ಬರೆಯಲು ಬೇಕಿಲ್ಲದವರ ಬಯೋಜೋಕಾಲಜಿ!

ರಾಜಾರಾಯರು ಮಧುಗಿರಿ ತಾಲೂಕಿನ ಫಲಾರ ಗ್ರಾಮದವರು. ತುಮಕೂರಿನಲ್ಲೇ ಓದಿ ಬೆಳೆದು ದೊಡ್ಡವರಾಗಿ ಬೆಂಗಳೂರಿನಲ್ಲೇ ಜೀವನ ಮುಗಿಸಿದರು. ಸಂಯುಕ್ತ ಕರ್ನಾಟಕ ಪೇಪರ್‌ನಲ್ಲಿ ಮೂರು ದಶಕ ಮಣ್ಣು ಹೊತ್ತು ಯಾವುದೋ ಒಂದು ಲೋಕಲ್‌ ಟೀವಿ ಚಾನಲ್‌ಗೆ ಬರೆದು ಬರೆದು ಬರೆದು ಸುಸ್ತಾದಾಗ ಅಂಗಳಕ್ಕೆ ಬಂದು ಕುಳಿತರೆಂದರೆ ಎಂಥ ನೀರಸ ಸಂಜೆಗೂ ಎಳೆಯಚೆಂದಿರನ ಕಳೆ ತುಂಬ ಬಲ್ಲವರು. ಒಂದೈದು ಹತ್ತು ನಿಮಿಷದ ರಿಲ್ಯಾಕ್ಸೇಷನ್‌ ಸೆಷನ್‌ ಸಾಂಗವಾಗಿ ನೆರವೇರುವುದು.

ಕಾವೇರಿ ಗಲಾಟೆ ಹತ್ತಿ ಉರಿಯುತ್ತಾ ಇದೆಯಲ್ಲಾ ರಾಯರೆ, ಮುಂದೇನು ? ಎಂದು ನಾನು ಪೀಠಿಕೆ ಹಾಕಿದರೆ ‘ಬೆಂಕಿಬಿದ್ದು ಹೋಗಲಿ’ ಎನ್ನುತ್ತಾ ಕಿವಿಗೆ ಬೆಂಕಿಕಡ್ಡಿ ಒಡ್ಡಿ ಮೈಥುನಾನಂದದಲ್ಲಿ ತಲ್ಲೀನರಾಗುತ್ತಿದ್ದರು. ಅಲ್ಲಾ ಸ್ವಾಮಿ ಕಾವೇರಿ ಅಂದರೆ ಬೆಂಕಿ ಬೀಳಲಿ ಅಂತೀರಲ್ಲಾ ಎಂಬ ಮರುಪ್ರಶ್ನೆ ಹಾಕಿದರೆ ‘ನೀರಿಗೆ ಬೆಂಕಿ ಬಿದ್ದರೆ ಏನಾಗತ್ತೇರಿ? ಅಷ್ಟೂ ಗೊತ್ತಗಲ್ವಾ ನಿಮಗೆ’ ಎಂದು ಮಾತು ತಿರುಗಿಸುತ್ತಿದ್ದರು.

ರಾಯರು ಮಾತಾಡುವುದೇ ಹಾಗೆ. ಒಂದು ಮಾತಾಡಿದರೆ ಅದಕ್ಕೊಂದು ಜೋಕನ್ನು ಅಟ್ಯಾಚ್‌ ಮಾಡುತ್ತಿದ್ದರು. ಕನ್ನಡದ ಲಂಗಕ್ಕೆ ಇಂಗ್ಲೀಷ್‌ ರವಿಕೆ, ತೆಲುಗು ದಾವಣಿ ತೊಡಿಸುವಲ್ಲಿ ಜಾಣರು. ವಚನ, ಶ್ಲೋಕ, ಕಾವ್ಯ, ಸರ್ವಜ್ಞ, ವ್ಯಾಸ, ವೇಮನ ಮತ್ತೆಲ್ಲರನ್ನೂ ಕುಳಿತಲ್ಲಿಂದಲೇ ಕರೆಕಳಿಸಿ ಪಟ್ಟಾಂಗ ಮಾಡುತ್ತಿದ್ದರು. ಅಲ್ಲೇ ಒಂದು ಆಸ್ಥಾನ ಅಣಿಯಾಗುತ್ತಿತ್ತು. ಅವರೇ ಅಕ್ಬರ, ಅವರೇ ಬೀರುಬಲ್ಲ. ಆಳ ತಿಳಿಯದೆ ಅವರೊಂದಿಗೆ ನಾನು ಕೈಗೊಂಡ ನೌಕಾಯಾನ ಅದೆಷ್ಟೋ. ಅಂಥ ರಾಜಾರಾಯರೊಂದಿಗೆ ಒಂದು ಸಂಜೆ ನಾನು ಕೈಗೊಂಡ ವಿಹಾರಕ್ಕೆ ನೀವೂ ಸೇರಿಕೊಳ್ಳಬೇಕೆನ್ನುವುದು ನನ್ನಯ ಆಸೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more