• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅನ್ನ ದೇವರ ಮುಂದೆ ಇನ್ನ ದೇವರಿಲ್ಲ .. ಇದು ಮೊಸರವಲಕ್ಕಿ ಮಹಾತ್ಮೆ!

By Staff
|

2007ನೇ ಇಸವಿಯ ಈ ದಿನಗಳ ವಿಸ್ತುತ ಚಿತ್ರವನ್ನು ನಿಮ್ಮ ಊಹೆಗೇ ಬಿಟ್ಟು, 1950ರ ಕತೆ ಹೇಳುತ್ತೇನೆ. ಲಿಪಿಕಾರ ಮಾತ್ರ ನಾನು, ಕಥಾ ನಾಯಕ ನಮ್ಮ ರಾಜಾರಾಯರು!

ಬೆಂಗಳೂರಿನಂಥ ಊರಿನಲ್ಲಿ ಬಾಡಿಗೆ ಮನೆ ಹಿಡಿದು, ಒಂದು ಮಗುವಿನ ತುಂಬು ಸಂಸಾರ ಮಾಡುವುದು ಕತ್ತಿಯ ಅಲಗಿನ ಮೇಲೆ ನಡೆದ ಹಾಗೆ. ನೀರು ಬಂದರೆ ಅವತ್ತು ಹಾಲು ಬಂದಿರುವುದಿಲ್ಲ. ಎರಡೂ ಬಂದಿದ್ದರೆ ಸಂಜೆ ಆಲ್ಕೋಹಾಲಿಗೆ ಸಂಚಕಾರ.

ಮೂರನೇ ಕ್ಲಾಸು ಓದುವ ಮಗನ ವಿದ್ಯಾಭ್ಯಾಸ ಚೆನ್ನಾಗಿ ನಡೆಯಬೇಕಾದರೆ ತಂದೆ ಹಗಲೆಲ್ಲ ಸೈಕಲ್ಲು ಹೊಡೆಯಬೇಕು, ತಾಯಿ ಎನಿಸಿಕೊಂಡವಳಿಗೆ ಹಗಲು ರಾತ್ರಿ ಎಂಬ ಭೇದಭಾವವಿಲ್ಲ. ಪರಂತು, ಸಂಸಾರದ ತಕ್ಕಡಿ ಯಾವತ್ತೂ ಸರಿಯಾಗಿ ತೂಗಿದ್ದೇ ಇಲ್ಲ. ಆಕಸ್ಮಾತ್‌ ತೂಗಿದ ಹಾಗೆ ಕಂಡರೆ ಅದು ಬನಶಂಕರಿ ರಾಮಕ್ಕನ ಫುಟ್‌ಪಾತ್‌ ತರಕಾರಿ ವ್ಯಾಪಾರವೇ ಆಗಿರಬೇಕು.

ಪರಿಸ್ಥಿತಿಗಳು ಹೀಗಿರುವಾಗ ನೆಂಟರು ಇಷ್ಟರು ಎಂಬ ಲೇಬಲ್‌ ಅಂಟಿಸಿಕೊಂಡವರು ಘಾಟಿ ಸುಬ್ರಮಣ್ಯ ಜಾತ್ರೆಗೆ ಹೊರಡುತ್ತಾರೆ. ಕರ್ನಾಟಕದ ಟೋಪೋಗ್ರಫಿ ಇವತ್ತು ಹೇಗಿದೆ ಎಂದರೆ, ನೀವು ಯಾವುದೇ ಊರಿಗೆ ಹೋಗಿ ಬೆಂಗಳೂರು ಮುಖಾಂತರವೇ ಹಾದು ಹೋಗಬೇಕು! ನಿಮ್ಮ ಮನೆಯಲ್ಲಿ ನೆಂಟರು ಮೂರು ಸೂಟ್‌ಕೇಸ್‌ ಇಡುತ್ತಾರೆ. ಅದನ್ನು ನೋಡಿಕೊಳ್ಳುವುದಕ್ಕೆ ತಾವೂ ಇರುತ್ತಾರೆ. ಗಂಡ ಹೆಂಡತಿ ಆತನ ಇಬ್ಬರು ತುಂಟ ಮಕ್ಕಳು, ಪರಾಧೀನ ಅಜ್ಜಿ ಅಜ್ಜ ಎಲ್ಲಾ ಸೇರಿ ಜನ ಅರ್ಧ ಡಜನ್‌. ಮೂರೇ ದಿನ ಅಷ್ಟೆ ತಾನೆ! ನಮಗೆ ತೀರ ಬೇಕಾದವರು ತಾನೇ. ಮನೆಯಲ್ಲಿ ಗಿಜಿಗಿಜಿ. ಮೇಲ್‌-ಕೆಳ ಮಧ್ಯಮ ವರ್ಗದ ನಮ್ಮ ಇವತ್ತಿನ ನಾಯಕ ಇದ್ದಲ್ಲೇ ಎತ್ತಂಗಡಿ!

2007ನೇ ಇಸವಿಯ ಈ ದಿನಗಳ ವಿಸ್ತುತ ಚಿತ್ರವನ್ನು ನಿಮ್ಮ ಊಹೆಗೇ ಬಿಟ್ಟು, 1950ರ ಕತೆ ಹೇಳುತ್ತೇನೆ. ಲಿಪಿಕಾರ ಮಾತ್ರ ನಾನು, ಕಥಾ ನಾಯಕ ನಮ್ಮ ರಾಜಾರಾಯರು.

ತುಮಕೂರು ಜಿಲ್ಲಾ ಶಿರಾ ಪಟ್ಟಣದಲ್ಲೊಂದು ಮಧ್ಯಮವರ್ಗದ ಮನೆ. ಕುಟುಂಬಕ್ಕೆ ಆಗ ಅದೆಂಥದೋ ತೊಂದರೆ. ಮನೆಮಗ ಮುಂದೆ ಓದಬೇಕು. ಸರಿ. ಲೋಯರ್‌ ಸೆಕೆಂಡರಿ ಪರೀಕ್ಷೆ ಕಟ್ಟಲು ರಾಜ ಬೆಂಗಳೂರಿಗೆ ಬಂದ. ಠಿಕಾಣಿ ಹೂಡಿದ್ದು ಅವರ ಭಾವನ ಮನೆಯಲ್ಲಿ. ಮನೆ ಮೆಜಿಸ್ಟಿಕ್‌ನಲ್ಲಿರುವ ಸ್ಟೇಟ್ಸ್‌ ಟಾಕೀಸಿನ ಹತ್ತಿರ.

ಭಾವನಿಗೊಬ್ಬ ಮಗ. ಅವನೇ ರಾಜನ ಗೆಳೆಯ. ಇಬ್ಬರದೂ ಒಂದೇ ಆಟ. ಆಟಕೆ ಚಕ್ಕರ್‌ ಊಟಕೆ ಹಾಜರ್‌ ಲೆಕ್ಕದಿ ಬರಿ ಸೊನ್ನೆ. ರಾಜನ ಭಾವನವರ ಮಡದಿ, ಅಂದರೆ ರಾಜನಿಗೆ ಅಕ್ಕ ಆಗಬೇಕು - ಆಕೆ ಮನೆ ಯಜಮಾನಿ. ಒಂದು ದಿವಸವಾದರೂ ಕಷ್ಟ ಹೇಳಿಕೊಂಡವರಲ್ಲ. ಈ ಬಾಳ ಬುತ್ತಿಯಲಿ ಸಿಹಿಪಾಲು ನಿನಗಿರಲಿ, ಕಹಿಯೆಲ್ಲ ನನಗಿರಲಿ ಅಂತ ಗಂಡನ ಮುಂದೆ ಬರೀ ಐವತ್ತು ವರ್ಷ ಹಾಡಿದಾಕೆ. ಆಕೆಯ ನ್ಯಾಶನಲ್‌ ಆಂಥಮ್‌ ಕೂಡ ಅದೇ.

ಭಾವ ದಕ್ಷಿಣ ಧೃವ, ವಿಶ್ವಾಮಿತ್ರ ಗೋತ್ರ. ಆಯಪ್ಪನಿಗೆ ಸಮಾಧಾನ ತಾಳ್ಮೆ ಮಡಿಗೆ ಬರುವುದಿಲ್ಲ. ಒಣ ಠೇಂಕಾರ, ಮೂಗಿನ ತುದಿಗೇ ಕೋಪ. ಈ ಮಧ್ಯೆ ರಾಜ ಮತ್ತು ಅವನ ಭಾವನ ಮಗ ಕಡ್ಲೆಬೀಜ (ಜಾಸ್ತಿ ತಿಂದು ನಿಕ್‌ನೇಮ್‌ ಪಡೆದುಕೊಂಡಿದ್ದ) ಹೇಗೋ ಪರೀಕ್ಷೆ ಬರೆದರು. ಇಡೀ ಸಮ್ಮರ್‌ ಟೈಂಅನ್ನು ಆಟದಲ್ಲೇ ಕಳೆದರು. ಫಲಿತಾಂಶದ ದಿನ ಬಂತು. ರಾಜ ಪ್ಯಾಸು ಎನಿಸಿಕೊಂಡರೆ ಕಡ್ಲೆಬೀಜ ಢುಂಕಿ ಹೊಡೆದಿದ್ದ.

ಅದೇನು ಅಂಥ ದೊಡ್ಡ ವಿಷಯ ಅಲ್ಲ. ಫೇಲೆ ಆಗದವರು ಯಾರು? ಆದರೆ ಮಗ ನಪಾಸಾಗಿರುವ ವಿಚಾರವನ್ನ ಗಂಡನಿಗೆ ತಿಳಿಸುವುದು ಹೇಗೆ? ಇದು ಅಕ್ಕನ ಕಷ್ಟ. ಭಾವನವರ ವಾಸ್ತವ್ಯ ಸದಾ ಅಟ್ಟದ ಮೇಲೆ. ಅಲ್ಲೇ ಅವರ ಶಯನೋತ್ಸವ. ಬೇಜಾರಾದರೆ ಈಜಿಛೇರ್‌ ಮತ್ತು ಪೇಪರ್‌.

ವಾಸ್ತವದಿಂದ ದೂರ. ವಾಂಛೆಗಳಿಗೆ ಹತ್ತಿರ. ಇಂಥಾ ಮನುಷ್ಯನಿಗೆ...ನಿಮ್ಮ ಮಗ ಫೇಲು ಎನ್ನುವ ಸುದ್ದಿ ಮುಟ್ಟಿಸುವುದು ಯಾವುದೇ ಹೆಂಡತಿಗೆ ದುಸ್ತರ. ರಾಜಾರಾಯರ ಆ ಅಕ್ಕ ಇವತ್ತು ಬದುಕಿದ್ದಾರಾ ಇಲ್ಲವೋ..ವಿಚಾರಿಸಿ ತಿಳಿಯಬೇಕು. ಮುಂಗೋಪಿ ಗಂಡನ ಜತೆ ಏಗಿಏಗಿ ಬಸವಳಿದು ಕೆಲವು ಪಾಠ ಕಲಿತವಳು. ಭಾವನ ವೀಕ್‌ನೆಸ್‌ ತಿಳಿದಿದ್ದ ಅಕ್ಕ ಏನು ಮಾಡಿದಳೆಂದರೆ, ದೊಡ್ಡ ಪಾತ್ರೆಯಲ್ಲಿ ಅವಲಕ್ಕಿ ಕೆನೆ ಮೊಸರಿನ ನೈವೇದ್ಯ ಮಾಡಿಕೊಂಡು ಅಟ್ಟದ ಮೆಟ್ಟಿಲು ಏರಿದಳು.

ಭಾವ : ‘ಏನೇ?’

ಅಕ್ಕ : ಏನಿಲ್ಲಾರೀ

ಭಾವ : ಏನಿಲ್ಲಾ ಂದ್ರೆ ?

ಅಕ್ಕ : ರೀ.. ಮತ್ತೆ...

ಭಾವ : ಏನದು ಬೊಗಳೇ

ಅಕ್ಕ : ಏನಿಲ್ಲ ನಮ್ಮ ..

ಭಾವ : ಏನದು ಕೈಯಲ್ಲಿ?

ಅಕ್ಕ : ನಮ್ಮ ಪಕ್ಕದಮನೆಯೋರು ಒಳ್ಳೆ ಮೊಸರಿತ್ತಂತೆ ಕೊಟ್ಟಿದ್ರು..

ಭಾವ : ಅವರಿಗೇನು ನಾಕೆಮ್ಮೆ ಕರೆಯತ್ತೆ .. ಕೊಡ್ತಾರೆ

ಅಕ್ಕ : ಅಲ್ಲರೀ.

ಭಾವ : ಏನು ಅಲ್ಲ..ಬೆಲ್ಲ

ಅಕ್ಕ : ಹೌದು ರೀ.. ಅವಲಕ್ಕಿಗೆ ಮೊಸರಿನ ಜತೆಗೆ ಬೆಲ್ಲನೂ ಹಾಕಿದಿನಿ..ರೀ

ಭಾವ : ಹೂಂ..ಕೊಡು ಕೊಡು ನೋಡೋಣ.

ಕೆನೆ ಮೊಸರಲ್ಲಿ , ತೆನೆ ಬೆಲ್ಲದಲ್ಲಿ ನೆನೆದ ಹುಡುಹುಡಿ ಅವಲಕ್ಕಿ.. ಭಾವನ ಗಂಟಲಲ್ಲಿ ನಿಧಾನವಾಗಿ ಇಳಿಯುತ್ತಿದ್ದಂತೆ ಕೋಪತಾಪಗಳೂ ಪ್ರೊರೇಟಾ ಇಳಿಯತೊಡಗಿದವು. ಅಕ್ಕ ನಿಧಾನವಾಗಿ ಬಾಯಿತೆರೆದಳು.

‘ನಿಮ್ಮ ಮಗ ಸೆಪ್ಟೆಂಬರ್‌ ಪರೀಕ್ಷೆ ಕಟ್ಟಬೇಕು.. ಈಗಿಂದಲೇ ಚೆನ್ನಾಗಿ ಓದ್ಕೋಂತ ಹೇಳಿದೀನಿ.’

ಭಾವನಿಗೆ ಸುದ್ದಿ ಸುಳಿವು ಮುಟ್ಟಿತು. ಕ್ಷಣಾರ್ಧದಲ್ಲಿ ಕೋಪ ತಾರಕಕ್ಕೆ ಏರಿತು. ಆದರೆ, ಅವಲಕ್ಕಿ ಮಹಾತ್ಮೆ..! ಹದವಾಗಿ ಕಲಸಿದ ಮೊಸರವಲಕ್ಕಿಯು ಏರುತ್ತಿದ್ದ ಕೋಪಾಗ್ನಿಯನ್ನು ಜಗ್ಗಿ ಭೂಮಿಗೆ ಎಳೆಯಿತು. ಭಾವನ ಭಾವ ತರಂಗಗಳು ಸಮಸ್ಥಿತಿಗೆ ಬಂದು ತಣ್ಣಗಾದವು..

ಭಾವ ಬಾಯಿಗೆ ಬಿಡುವುತಂದುಕೊಂಡು ಬಾಯಿಬಿಟ್ಟರು : ‘ಫೇಲಾದ್ರೂ ಆದ್ನಲ್ಲಾ ! ಕತ್ತೆ ಭಡವ’

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X