• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಂದನ್ ರಾಜಕೀಯಕ್ಕೆ ಬನ್ನಿ; ನಿಮ್ಮ ಹಿಂದೆ ನಾವಿದ್ದೇವೆ!

By Staff
|

ಸಮೃದ್ಧ ಸಂಸ್ಕೃತಿ ಮತ್ತು ಪರಂಪರೆಯಿಂದ ಖ್ಯಾತವಾಗಿದ್ದ ಕರ್ನಾಟಕ, ಇತ್ತೀಚಿನ ಹೊಲಸು ರಾಜಕಾರಣದಿಂದ ಕುಖ್ಯಾತವಾಗುತ್ತಿದೆ! ಕರ್ನಾಟಕ ಪ್ರಕಾಶಿಸುವಂತೆ ಆಗಲು ಮತ್ತು ದಾರಿಗೆಟ್ಟು ನಿಂತಿರುವ ನಮ್ಮ ಯುವಜನಾಂಗಕ್ಕೆ ಒಂದು ಹಿಡಿ ಬೆಳಕು ಬದುಕು ನೀಡಲು, ನಂದನ್ ನಿಲೇಕಣಿಯಂಥವರು ರಾಜಕೀಯಕ್ಕೆ ಬರಬೇಕು. ರೌಡಿಗಳು, ದಗಲಬಾಜಿ ನಾಯಕರು, ಕಳ್ಳಕಾಕರ ಹಾವಳಿಯಿಂದ ಜನತೆಯನ್ನು ರಕ್ಷಿಸಿ ನವ ಕರ್ನಾಟಕ ನಿರ್ಮಾಣಕ್ಕೆ ದಾರಿ ಮಾಡಿಕೊಡಬೇಕು. ಇನ್ಫೋಸಿಸ್ ಬಿಟ್ಟು, ಸಾಫ್ಟ್ ವೇರ್ ಕ್ರಾಂತಿಯನ್ನು ಹುಡುಗರ ಕೈಗೆ ಕೊಟ್ಟು ನಮ್ಮ ಜತೆ ಬರ್ತೀರಾ ನಂದನ್?

ಎಸ್.ಕೆ.ಶಾಮಸುಂದರ

ಪ್ರೀತಿಯ ನಂದನ್ ಅವರಿಗೆ, ಹೇಗಿದ್ದೀರಿ ನಂದನ್? ಭೇಟಿಯಾಗಿ ಬಹಳ ದಿನಗಳಾದುವು ಅಲ್ಲವೇ? ನಿಜ ಹೇಳ್ಬೇಕೂಂದ್ರೆ, ತಿಂಗಳುಗಳೇ ಕಳೆದಿವೆ, ಇರಲಿ. ಮೊದಲನೆಯದಾಗಿ ನಿಮಗೆ ಹಾಗೂ ನಿಮ್ಮ ತಂಡದವರಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆ ಹಾಗೂ ಕೃತಜ್ಞತೆಗಳು. ನಿರ್ದಿಷ್ಟ ಮೌಲ್ಯಗಳು, ಕ್ರಿಯಾತ್ಮಕ ನಿಲುವು ಹಾಗೂ ಗುರಿಮುಟ್ಟುವ ಛಲವಿದ್ದರೆ, ಕಿರಾಣಿ ಅಂಗಡಿಯಿಂದ ಹಿಡಿದು ಕಾರ್ಪೊರೇಟ್ ಕಂಪನಿಗಳವರೆಗೆ - ಪ್ರಪಂಚದ ಯಾವುದೇ ಉದ್ಯಮವನ್ನು ಲಾಭಕರವಾಗಿ ಮುನ್ನಡೆಸಲು ಸಾಧ್ಯ ಎಂಬುದನ್ನು ನೀವು ಸಾಧಿಸಿತೋರಿಸಿದ್ದೀರಿ. ಆ ಮುಖಾಂತರ ಇತರರಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದೀರಿ. ನಿಮ್ಮೀ ಗೆಲುವು ನಮ್ಮೆಲ್ಲರಿಗೂ ಅನುಕರಣೀಯ ಮಾತ್ರ ಅಲ್ಲ, ಹೆಮ್ಮೆ ಸಹ.

ಕೊಂಕಣ ಸುತ್ತಿ ಮೈಲಾರಕ್ಕೆ ಬರುವ ಇಷ್ಟ ನನಗಿಲ್ಲ. ನಿಮ್ಮಲ್ಲಿ ನನ್ನದೊಂದು ನೇರ ಪ್ರಶ್ನೆ. ನೀವ್ಯಾಕೆ ರಾಜಕೀಯಕ್ಕೆ ಕಾಲಿಡಬಾರದು? ಈ ಪ್ರಶ್ನೆ ಮೇಲ್ನೋಟಕ್ಕೆ ನಿಮಗೆ ಹಾಸ್ಯಾಸ್ಪದ ಮತ್ತು ಕಾರ್ಯಸಾಧುವಲ್ಲದ್ದು ಅನಿಸಬಹುದು. ಪರವಾಗಿಲ್ಲ. ದಯವಿಟ್ಟು ದಿಢೀರ್ ಅಂತ ನಿರ್ಣಯಕ್ಕೂ ಬರದೆ ನನ್ನೀ ಪತ್ರವನ್ನು ಪೂರ್ತಿಯಾಗಿ ಓದಿ. ಓದಿದಮೇಲೆ ನನ್ನ ಅಭಿಪ್ರಾಯವನ್ನು ನೀವು ಒಪ್ಪೇ ಒಪ್ತೀರಿ ಅನ್ನೋ ವಿಶ್ವಾಸ ನನಗಿದೆ. ನನ್ನ ಸಾಕಷ್ಟು ಸ್ನೇಹಿತರೂ ಕೂಡ ಇದನ್ನೇ ಹೇಳುತ್ತಾ ಇದ್ದಾರೆ..

ಮೊದಲಿಗೆ, ನಮ್ಮ ರಾಜ್ಯದ ಸದ್ಯದ ಪರಿಸ್ಥಿತಿಯನ್ನೇ ಗಮನಿಸೋಣ :

* ರಾಜಕೀಯವಾಗಿಯಷ್ಟೇ ಅಲ್ಲ ಸಾಂಸ್ಕೃತಿಕವಾಗಿ ಕೂಡಾ ಛಿದ್ರವಾಗಿರುವ ಜನಾಂಗ.

* ರೌಡಿಗಳು, ಗೂಂಡಾಗಳು ಹಾಗೂ ಸಮಾಜಘಾತುಕರು, ಹಣ ಹಾಗೂ ಅಧಿಕಾರಕ್ಕಾಗಿ ನೆಲಮುಗಿಲನ್ನು ಅಗೆಯುತ್ತಿದ್ದಾರೆ.

* ರಾಜ್ಯಕ್ಕೆ ಹರಿದುಬರುತ್ತಿರುವ ಹಣ, ಕೀರ್ತಿ ಹಾಗೂ ಸಂಪತ್ತಿನ ಬಗ್ಗೆ ಹೆಮ್ಮೆಯಿರಲಿ, ಅದರ ಬಗ್ಗೆ ಕಿಂಚಿತ್ತೂ ಅರಿವಿಲ್ಲದೆ ಬೌದ್ಧಿಕ ದಿವಾಳಿತನ ಕರ್ನಾಟಕವನ್ನು ಆಳುತ್ತಿದೆ.

  Dear Nandan, How are you doing?ಈ ಮಧ್ಯೆ ನಮಗಿರುವ ಸದವಕಾಶಗಳೆಂದರೆ : ಸದ್ಯಕ್ಕೆ ರಾಜ್ಯದ ಮೇಲೆ ಹೇರಲ್ಪಟ್ಟಿರುವ ರಾಷ್ಟ್ರಪತಿ ಆಡಳಿತ ಏಪ್ರಿಲ್2008ರ ವರೆಗಂತೂ ಖಾಯಂ. ಕುಲಗೆಟ್ಟ ರಾಜಕಾರಣಿಗಳು ಅವರವರಲ್ಲೆ ಬಡಿದಾಡಿಕೊಳ್ಳುತ್ತಿರುವಾಗ ರಾಜ್ಯಕ್ಕೆ ಹೊಸ ಮತ್ತು ಕ್ರಾಂತಿಕಾರಿಯಾದುದೇನನ್ನಾದರೂ ಮಾಡಲು ನಮಗೆ ಇದಕ್ಕಿಂತ ಉತ್ತಮ ಸಮಯ ಬೇರೆಲ್ಲಿದೆ? ನಮ್ಮ ಒಡನಾಡಿ ಜನಸಾಮಾನ್ಯರಿಗೆ ಸರಳ ಹಾಗೂ ಭ್ರಷ್ಟವಲ್ಲದ, ಮೌಲ್ಯಾಧಾರಿತ, ಜನೋದ್ಧಾರವೇ ಗುರಿಯಾಗುಳ್ಳ ರಾಜಕೀಯ ಪಕ್ಷವೊಂದರ ಸಾಧ್ಯತೆಯ ಅವಕಾಶವಿದೆ. ಹಾಗೂ ಅಂತಹ ಪಕ್ಷವೇನಾದರೂ ಏರ್ಪಟ್ಟಲ್ಲಿ ಜನಾಭಿಪ್ರಾಯವನ್ನು ನಮ್ಮೆಡೆಗೆ ಸೆಳೆದುಕೊಳ್ಳುವುದು. ಜನಸಾಮಾನ್ಯರೆಂದರೆ ನಾವು ನೀವು ಅವರು ಇವರು ಎಲ್ಲರೂ.

  ಈ ಪತ್ರವನ್ನು ನಿಮಗೇ ಏಕೆ ಬರೆದೆ ಎಂದು ಯೋಚಿಸುತ್ತಿದ್ದೀರಾ? 1. ನೀವಿನ್ನೂ ಯುವಕರು ಹಾಗೂ ಸಮಾಜಕ್ಕೆ ಏನನ್ನಾದರೂ ಒಳ್ಳೆಯದು ಮಾಡಬಹುದು ಎನ್ನುವ ನಂಬಿಕೆ ಹಾಗೂ ಭರವಸೆ ಇಡುವಂತವರು. ಅತ್ಯಂತ ಸಭ್ಯರು ಮತ್ತು ಉತ್ತಮ ನಡವಳಿಕೆಯುಳ್ಳವರು. ನಿಮ್ಮ ಉದ್ಯಮದಲ್ಲಿ ಈ ಮೌಲ್ಯಗಳಿಂದ ಮಹತ್ತಾದುದನ್ನು ಸಾಧಿಸಿ ಲಕ್ಷಾಂತರಜನರಿಗೆ ನೇರವಾಗಿ ಹಾಗೂ ಪರೋಕ್ಷವಾಗಿ ಚೈತನ್ಯ ಹಾಗೂ ಸ್ಫೂರ್ತಿ ನೀಡಿರುವವರು; ನೀಡುತ್ತಿರುವವರು. ಎಲ್ಲಕ್ಕಿಂತ ಮಿಗಿಲಾಗಿ ರಾಜಕೀಯದಿಂದ ಹೆಸರಲ್ಲದಿದ್ದರೂ, ಅಟ್ ಲೀಸ್ಟ್ ಹಣವನ್ನಂತೂ ನಿರೀಕ್ಷೆ ಮಾಡದಿರುವವರು.

  2. ನಮ್ಮ ಯುವಜನಾಂಗಕ್ಕೆ ಅತ್ಯಂತ ಜರೂರಾಗಿ ಬೇಕಾಗಿರುವುದು ಪಾರದರ್ಶಕ ನಾಯಕತ್ವ ಹಾಗೂ ಅಂಥ ಒಳ್ಳೆಯ ನಾಯಕತ್ವ ನಿಮ್ಮಲ್ಲಿ ಸಾಕಾರವಾಗುವ ಎಲ್ಲಾ ಲಕ್ಷಣಗಳೂ ಇವೆ.

  3. ನೀವು ನಮ್ಮ ಭಾರತ ದೇಶದ ಹೆಸರನ್ನು ವಿಶ್ವಾದ್ಯಂತ ಹರಡಲು ಶ್ರಮಿಸಿದವರು. ಅಮೆರಿಕದ ಅಲ್ ಗೋರ್ ಒಬ್ಬ ರಾಜಕಾರಣಿಯಾಗಿ ವಿಶ್ವಾದ್ಯಂತ ಪರಿಸರ ಹಾಗೂ ಗ್ಲೋಬಲ್ ವಾರ್ಮಿಂಗ್ ಬಗ್ಗೆ ತಿಳಿವಳಿಕೆ ಹರಡಬಲ್ಲನಾದರೆ, ನಿಮ್ಮಂತ ಸಜ್ಜನ ಹಾಗೂ ಸಫಲ ಉದ್ಯಮಿ ನಮ್ಮ ರಾಜ್ಯದ ರಾಜಕೀಯಕ್ಕಿಳಿದು ಸಮಾಜದಲ್ಲಿ ಮಾರ್ಪಾಡು ತರಲು ಏಕೆ ಸಾಧ್ಯವಿಲ್ಲ?

  4. ಈಗಾಗಲೇ ಈ ವಿಷಯದ ಬಗ್ಗೆ ನೂರಾರು/ಸಾವಿರಾರು ಇಮೇಲು‍ಗಳು ಹರಿದಾಡುತ್ತಿವೆ. ನನ್ನ, ನನ್ನ ಮಿತ್ರರು ಹಾಗೇ ನಮ್ಮಂತಹ ಅನೇಕರು ಈ ಸಾಧ್ಯತೆಯ ಬಗ್ಗೆ ಗಾಢವಾಗಿ ಚರ್ಚಿಸುತ್ತಿದ್ದಾರೆ.

  ಸದ್ಯಕ್ಕೆ ನನ್ನ ಮನಸ್ಸು ಇಂತಹುದೊಂದು ಸಾಧ್ಯತೆಯ ಬಗ್ಗೆ ತೀವ್ರವಾಗಿ, ಗಾಢವಾಗಿ, ನಮ್ರವಾಗಿ, ಆಸೆಯಿಂದ ಯೋಚಿಸುತ್ತಿದೆ : 1. ನಂದನ್ ನೀಲೇಕಣಿಯಂತಹವರೊಬ್ಬರು, ರಾಜಕೀಯ ಪಕ್ಷವೊಂದನ್ನು ಸ್ಥಾಪಿಸುವುದು.

  2. ಸಾಮಾನ್ಯ-ಮಧ್ಯಮವರ್ಗದ, ಹಣಸಂಪಾದನೆಯೊಂದೇ ಜೀವನದ ಗುರಿಯಾಗಿರದ, ನಮ್ಮಂತಹ ವಿದ್ಯಾವಂತ ತರುಣರು ಹಾಗೂ ವಿದ್ಯಾರ್ಥಿಗಳು ಆ ಪಕ್ಷಕ್ಕೆ ಸೇರುವುದು.

  3. ನಮ್ಮ ಮುಗ್ಧ ಜನಸಾಮಾನ್ಯರಿಗೆ, ಒಂದು ಜೇಬಿಗೆ ಹಣಕೊಟ್ಟು ಮತ್ತೊಂದು ಜೇಬಿಂದ ಅದರ ಹತ್ತರಷ್ಟನ್ನು ಕಿತ್ತುಕೊಳ್ಳುವ ಇತರ ರಾಜಕಾರಣಿಗಳ ವಂಚನೆಯ ಬಗ್ಗೆ ತಿಳಿಸುವುದು. ಅವರು ತೋರಿಸುವ ಜುಜುಬಿ ಹಣದಾಸೆಗೆ ಒಳಗಾಗದೆ, ನಮ್ಮನ್ನು ಚುನಾಯಿಸಿದರೆ ಉತ್ತಮ ಆಡಳಿತದ ಭರವಸೆ ಕೊಡುವುದು.

  4. ಸರಿಯಾಗಿ ಕೌನ್ಸೆಲ್ ಮಾಡಿದರೆ ಜನ ಖಂಡಿತಾ ನಮ್ಮನ್ನು ಬೆಂಬಲಿಸುತ್ತಾರೆ.

  5. ರಾಜಕೀಯದ, ರಾಜಕಾರಣಿಗಳ ಬಗೆಗಿನ ಜನರ ಭಯ ಇಂದು ನೆನ್ನೆಯದಲ್ಲ. ರಾಜಕಾರಣಿಗಳ ಭ್ರಷ್ಟಾಚಾರ, ಕೊಳಕುತನ ಹಾಗೂ ಭಂಡತನದಿಂದ ಆ ಭಯ ಸಹಜವಾಗಿ ಹುಟ್ಟಿದೆ. ನಾವು ಮೂಲತಃ ಸುಧಾರಣೆಗೆ ಹೊರಟಿರುವವರಾದ್ದರಿಂದ ಇದರ ಬಗೆಗಿನ ಭಯ ಅನವಶ್ಯಕ.

  6. ಇದರಿಂದ ನಮಗೆ ನಷ್ಟವಂತೂ ಇಲ್ಲ. ಅಬ್ಬಬ್ಬಾ ಅಂದರೆ ಏನಾಗಬಹುದು? ನಾವು ಚುನಾವಣೆಯಲ್ಲಿ ಸೋಲಬಹುದು, ಅಷ್ಟೇ. ಆದರೆ ಕನಿಷ್ಠ ಪ್ರಯತ್ನವನ್ನಾದರೂ ಮಾಡಿದ ತೃಪ್ತಿ ನಮ್ಮದಾಗುತ್ತದೆ. ಅಲ್ಲವೇ?

  7. ನಮ್ಮಂತೆಯೇ ಯೋಚಿಸುವ ಸಾವಿರ-ಲಕ್ಷ ಮಂದಿ, ಬರೀ ಯೋಚಿಸಿ ಸುಮ್ಮನಿದ್ದಾರೆ, ಯಾಕೆ? ಅವರು ನೆಚ್ಚುವ ನಾಯಕನ ಕೊರತೆಯಿಂದ. ನಾವು ಸುಮ್ಮನೇ ಕುಳಿತಿರುವುದರಿಂದಲೇ, ಕಳ್ಳಕಾಕರು, ಪುಂಡರು, ಸಮಾಜಘಾತುಕರು ಮೆರೆಯುತ್ತಿದ್ದಾರೆ ಹಾಗೂ ನಾವು ಈ ಸ್ಥಿತಿಗೆ ಮೂಕ ಪ್ರೇಕ್ಷಕರಾಗಿದ್ದೇವೆ.

  8. ನಮ್ಮ ವಿದ್ಯಾವಂತ ಯುವಜನ ಉತ್ತಮ ಅವಕಾಶಗಳ ಕೊರತೆಯಿಂದ ಪರದೇಶಗಳೆಡೆಗೆ ಪಲಾಯನ ಮಾಡುವುದರ ಬದಲು ಈ ಸಾಧ್ಯತೆಯ ಬಗ್ಗೆ ಯೋಚಿಸಲಿ. ನಮಗೆ ಲಭ್ಯವಿರುವ ಟಿ.ವಿ, ರೇಡಿಯೋ, ಇಂಟರ್‍ನೆಟ್‍ನಂತಹ ಸಮೂಹಮಾಧ್ಯಮದ ಮೂಲಕ ಸಾಧ್ಯವಾದಷ್ಟು ಜಾಗೃತಿಯನ್ನು ನಮ್ಮ ಕರ್ನಾಟಕ ರಾಜ್ಯದಲ್ಲಿ ಹರಡಲು ಪ್ರಯತ್ನಿಸೋಣ. ದಾರಿಗೆಟ್ಟು ನಿಂತಿರುವ ನಮ್ಮ ಯುವಜನಾಂಗಕ್ಕೆ ಒಂದು ಹಿಡಿ ಬೆಳಕು ಬದುಕು ನೀಡೋಣ. ಈ ಸಮಯ ನೀವು ಎಲ್ಲಿ ಇದ್ದೀರೋ ನನಗೆ ಗೊತ್ತಿಲ್ಲ. ಎಲ್ಲೇ ಇದ್ದರೂ ತಣ್ಣಗೆ ಕುಳಿತು ಒಂದು ನಿಮಿಷ ಚಿಂತಿಸಿ. ಸಮಗ್ರ ಕರ್ನಾಟಕದ ಹಿತದೃಷ್ಠಿ ನಿಮ್ಮ ಕಣ್ಣಲ್ಲಿ ಸುಳಿದಾಡಲಿ. ತಾಯ್ನಾಡಿನ ಕ್ಷೇಮ ನಿಮ್ಮ ಆದ್ಯತೆಗಳ ಪಟ್ಟಿಯಲ್ಲಿ ಮೊದಲನೆಯದಾಗಲಿ. ನಿಮ್ಮ ಉತ್ತರದ ನಿರೀಕ್ಷೆಯಲ್ಲಿರುವ ನಾವು ಮತ್ತು ನಮ್ಮವರು.

  (ಕನ್ನಡಕ್ಕೆ : ಜಿ.ಹರೀಶ್, ಸಿಡ್ನಿ)

  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X