ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ವಿಡಿಯೋ ಹಾಕಿದರೆ ನಮ್ಮಗಂಟೇನು ಹೋಗೋದಿಲ್ಲ!

By Staff
|
Google Oneindia Kannada News

ಪ್ರಿಯ ಓದುಗ,

ಕನ್ನಡ ವಿಡಿಯೋ ಹಾಕಿದರೆ ನಮ್ಮಗಂಟೇನು ಹೋಗೋದಿಲ್ಲ!ಕನ್ನಡ ಚಲನಚಿತ್ರಗಳಿಗೆ ದಟ್ಸ್ ಕನ್ನಡ ಡಾಟ್ ಕಾಮ್ ಜಾಸ್ತಿ ಪ್ರಚಾರ ಕೊಡುತ್ತಿಲ್ಲ ಎನ್ನುವುದು ನಮ್ಮ ವೆಬ್ ಸೈಟ್ ಮೇಲೆ ಇರುವ ನಾನಾ ಆಪಾದನೆಗಳಲ್ಲಿ ಮೊದಲನೆಯದು. "ಕನ್ನಡದಲ್ಲಿ ನಿರ್ಮಾಣವಾಗುವ ಪ್ರತಿಯೊಂದು ಕನ್ನಡ ಚಿತ್ರದ ಪೂರ್ಣ ವಿವರಗಳನ್ನು ನಾವು ಓದಬೇಕು, ಫೋಟೋಗಳು,ವಿಡಿಯೋಗಳು, ಸುದ್ದಿಗಳು, ಸಂದರ್ಶನಗಳು, ಪ್ರದರ್ಶನ ಕೇಂದ್ರದ ವಿವರ, ಚಿತ್ರಗಳ ಸೋಲುಗೆಲುವಿನ ಲೆಕ್ಕಾಚಾರಗಳನ್ನು ನೀವು ಕಾಲಕಾಲಕ್ಕೆ ಸರಬರಾಜು ಮಾಡುತ್ತಿಲ್ಲ ಯಾಕೆ ? ದಟ್ಸ್ ಕನ್ನಡ ಈ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ" ಎಂದು ಪೋರ್ಟಲ್ ನ ಅಭಿಮಾನಿಗಳನೇಕರು ದಿನಬೆಳಗಾದರೆ ಲೊಚಗುಟ್ಟುತ್ತಿರುತ್ತಾರೆ.

ಕನ್ನಡ ಚಿತ್ರಗಳಿಗೆ (ರೀಮೇಕ್ ಅಲ್ಲ !)ಮಾತ್ರ ಮಣೆ ಹಾಕಬೇಕು ಹಾಗೂ ಕನ್ನಡ ನಟ ನಟಿ ನಿರ್ದೇಶಕ ತಂತ್ರಜ್ಞ ಮತ್ತೆಲ್ಲರನ್ನೂ ಅಂತರ್ ಜಾಲದಲ್ಲಿ ದಟ್ಸ್ ಕನ್ನಡ ನಿತ್ಯ ಮೆರೆಸಬೇಕು ಎನ್ನುವುದು ಮಹಾಜನತೆಯ ಅಪೇಕ್ಷೆ. ಆ ಮೂಲಕ ಕನ್ನಡಚಿತ್ರಗಳು ಬೆಳೆಯಲು ಅವಕಾಶವಾಗುತ್ತದೆ ಎನ್ನುವುದು ಅವರೆಲ್ಲರ ನಿರೀಕ್ಷೆ.

ಒಪ್ಪತಕ್ಕ ಮಾತೇ. ಓದುಗರ ನಿರೀಕ್ಷೆಗಳನ್ನು ಸದಾ ಗೌರವದಿಂದ ಮತ್ತು ಅಷ್ಟೇ ಎಚ್ಚರದಿಂದ ಗಮನಿಸುವ ಕನ್ನಡ ವೆಬ್ ತಾಣ ನಮ್ಮದು. ಹಾಗೆ ನೋಡಿದರೆ ನಮ್ಮ ಓದುಗರ ನಿರೀಕ್ಷೆಯ ಆಳ ಅಗಲ ವಿಶಾಲವಾದುದು. ನೀವು ಕನ್ನಡ ಸಾಹಿತ್ಯವನ್ನು ಕಡೆಗಣಿಸಿದ್ದೀರಿ,ಕ್ರಿಕೆಟ್ ಬಿಟ್ಟರೆ ನಿಮಗೆ ಬೇರೆ ಆಟ ಗೊತ್ತಿಲ್ಲವಾ ? ಸಾಮಾಜಿಕ ಕಳಕಳಿ ಮತ್ತು ಮಾನವೀಯ ವರದಿಗಳು ದಟ್ಸ್ ಕನ್ನಡದಲ್ಲಿ ಮಿಸ್ಸಿಂಗ್! ಕನಸಿನ ಕನ್ಯೆಯರ ಫೋಟೋ ಹಾಕುವಂತೆ ನನ್ನ ಕನಸಿನ ಹುಡುಗನ ಫೋಟೋ ಯಾಕೆ ಅಪ್ ಲೋಡು ಮಾಡುವುದಿಲ್ಲ ? ಕಥೆಗಾರರು ಎಲ್ಲಿಗೆ ಹೋದರು ? ನಮ್ಮ ಕನ್ನಡಕೂಟದ ಡ್ಯಾನ್ಸ್ ಫೋಟೋ ಹಾಕಿಲ್ಲ ! ಯಾವಾಗ ನೋಡಿದ್ರೂ ಬರೀ ಸಿನಿಮಾ ಸುದ್ದಿ ಹಾಕ್ತಾನೇ ಇರ್ತೀರಾ, ಬರ್ತಾ ಬರ್ತಾ ದಟ್ಸ್ ಕನ್ನಡ ಸಿನಿಮಾ ಪತ್ರಿಕೆ ಆಗ್ತಾಯಿದೆ ಎಂಬಿತ್ಯಾದಿ ಟೀಕಾಪ್ರಹಾರಗಳು ನಮ್ಮ ವಿರುದ್ಧ ಬೀಸುತ್ತಿರುತ್ತವೆ.

ನಮ್ಮ ವಾಹಿನಿ ಸಿನಿಮಾ ಪತ್ರಿಕೆ ಅಲ್ಲ. ಸಾಹಿತ್ಯ ಪತ್ರಿಕೆ ಅಲ್ಲ. ಕ್ರೈಂ ಬುಲೆಟಿನ್ ಅಲ್ಲವೇ ಅಲ್ಲ. ರಾಜಕಾರಣ ಮತ್ತು ರಾಜಕೀಯಕ್ಕೇ ಮೀಸಲಾದ ಪತ್ರಿಕೆಯಂತೂ ಅಲ್ಲವೇ ಅಲ್ಲ. ಕನ್ನಡ ಪ್ರಪಂಚದ, ನಮ್ಮ ಸುತ್ತಲಿನ ಆಗುಹೋಗುಗಳನ್ನು ಹಿತಮಿತವಾಗಿ ಬೆರೆಸಿ ಕನ್ನಡ ಓದಿಗೆ ಅಣಿಗೊಳಿಸುವ Inter Continental Kannada Express. ಖಂಡಾಂತರಗಳಲ್ಲಿ ಹಂಚಿಹೋಗಿರುವ ಮತ್ತು ರಾಜ್ಯದ ತಾಲೂಕುಗಳಿಂದ ಬರುತ್ತಿರುವ ಹೊಸ ಓದುಗರನ್ನು ಏಕಕಾಲಕ್ಕೆ ತಲುಪುವ ಅವಿರತ ಪ್ರಯತ್ನ ನಮ್ಮದು. ಜತೆಗೆ, ನಾನಾ ಅಭಿರುಚಿಯ ಓದುಗರು ನಿರೀಕ್ಷಿಸುವ ಎತ್ತರಕ್ಕೆ ಬೆಳೆಯುವ ಆಕಾಂಕ್ಷೆ ನಮ್ಮ ಹೊಟ್ಟೆಯೊಳಗಿದೆ.

ಈ ಕನ್ನಡ ಸಿನಿಮಾ ಪ್ರಪಂಚವಂತೂ ತುಂಬಾ ವಿಚಿತ್ರ. ಉದ್ಯಮ ಸಣ್ಣದಿರಬಹುದು, ಪ್ರೇಕ್ಷಕರು ಮಿತವಾಗಿರಬಹುದು ಆದರೆ ಚಿಕ್ಕದಾಗಿದ್ದರೂ ಉದ್ಯಮವನ್ನು ಚೊಕ್ಕವಾಗಿ ನಿರ್ವಹಿಸುವ ಜಾಣ್ಮೆ ನಮ್ಮ ಚಿತ್ರಮಂದಿಗೆ ಇಲ್ಲ. ಇನ್ನೂ ಓಬಿರಾಯನಕಾಲದ ಪದ್ದತಿಗೆ ಜೋತುಬಿದ್ದವರು ಬಹಳ. ಒಂದು ಸಿನಿಮಾನ ಹೇಗೆ ಪ್ರಚಾರ ಮಾಡಬೇಕೆಂಬ ಕಲೆಯನ್ನು ನಮ್ಮವರು ಇನ್ನೂ ರೂಢಿಸಿಕೊಂಡಿಲ್ಲ. ಗೋಡೆಗಳ ಮೇಲೆ ಭಿತ್ತಿಚಿತ್ರ ಅಂಟಿಸುವುದು ನಿಷೇಧವಾದ ನಂತರ ಅದಕ್ಕೆ ಪರ್ಯಾಯವಾದ ಪ್ರಚಾರ ಸಾಧನಗಳನ್ನು ಹುಡುಕಿಲ್ಲ. ಚಲನಚಿತ್ರ ವಾಣಿಜ್ಯ ಮಂಡಳಿಯ ಥಿಂಕ್ ಟ್ಯಾಂಕಿಗೆ ಹೊಸನೀರು ಬರುವುದೇ ಇಲ್ಲ !ಕೆಲವರು ಬುದ್ಧಿವಂತರಿದ್ದಾರೆ. ಆದರೆ ತುಂಬಾ ಉಡಾಫೆ.

ಕನ್ನಡ ಚಿತ್ರಗಳನ್ನು ವ್ಯವಸ್ಥಿತವಾಗಿ, ವೈಜ್ಞಾನಿಕವಾಗಿ ಪ್ರಚುರಪಡಿಸಬೇಕೆಂದು ನಾವು ಕಂಡಕಂಡ ನಿರ್ದೇಶಕರಿಗೆ, ನಿರ್ಮಾಪಕರಿಗೆ ಮತ್ತು ಪಿಆರ್ ಓ ಗಳಿಗೆ ಹೇಳುತ್ತಿರುತ್ತೇವೆ. ಯಾರೂ ಕಿವಿಗೆ ಹಾಕಿಕೊಳ್ಳುವುದಿಲ್ಲ. ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಡುವ ಮನೋಧರ್ಮ ಅವರಿಗೆ ಮೈವುಂಡಿದೆ. ನೀವು ನಂಬುತ್ತೀರೋ ಬಿಡುತ್ತೀರೋ ಕಡೆಯಪಕ್ಷ ಸ್ಥಿರ ಚಿತ್ರಗಳನ್ನು ಕೂಡ ನಮ್ಮ ನಿರ್ಮಾಪಕರು ಸರಿಯಾಗಿ ಸರಬರಾಜು ಮಾಡುವುದಿಲ್ಲ. ಉದ್ಯಮಕ್ಕೆ ಪ್ರವೇಶಿಸುವ ಹೊಸಬರ ಪರಿಚಯ ಸಮರ್ಪಕವಾಗಿ ಮಾಡಿಕೊಡುವುದಿಲ್ಲ. "ತಾವು ಜಾಣರು, ವಿಭಿನ್ನವಾದ ಕನ್ನಡಚಿತ್ರ ಕೊಡುತ್ತಿರುವವರು. ತಮ್ಮನ್ನು ಪ್ರಪಂಚ ಗುರುತಿಸಿ ಪ್ರೋತ್ಸಾಹಿಸಿ ತಾವಿದ್ದಲ್ಲಿಗೆ ಬಂದು ಬೆನ್ನುತಟ್ಟಬೇಕೆಂಬ ಪೊಗರು ಅನೇಕರಿಗಿದೆ" ಸ್ಥಿತಿ ಹೀಗಿದೆ.

ಇನ್ನೊಂದು ಬದಿಯಲ್ಲಿ ನೋಡೋಣ. ಒಂದು ತೆಲುಗು ಅಥವಾ ಒಂದು ತಮಿಳು ಅಥವಾ ಹಿಂದಿ ಚಿತ್ರದ ಮುಹೂರ್ತವಾದರೇ ಸಾಕು.. ನೂರಾರು ಫೋಟೋಗಳು ಮತ್ತು ವಿಡಿಯೋ ಕ್ಲಿಪ್ ಗಳು ಬೇಡಾ ಅಂದರೂ ಸುದ್ದಿಮನೆ ತಲುಪುತ್ತವೆ. ಚಿತ್ರ ಬಿಡುಗಡೆಯಾಗುವ ತನಕ, ಬಿಡುಗಡೆಯಾದ ನಂತರವೂ ಇವು ಪ್ರವಾಹೋಪಾದಿಯಲ್ಲಿ ಹರಿದು ಬರುತ್ತಲೇ ಇರುತ್ತವೆ. ಆದರೆ ನಮ್ಮ ಸ್ಯಾಂಡಲ್ ವುಡ್ ನಲ್ಲಿ? ಲೋ ಬಜೆಟ್ ಚಿತ್ರವಿರಲಿ, ದೊಡ್ಡ ಚಿತ್ರಗಳ ಕತೆಯೂ ಅಷ್ಟೇ.

ಕನ್ನಡ ಭಾಷೆ ಮತ್ತು ಕರ್ನಾಟಕದ ಜನಜೀವನ ಬಿಂಬಿಸುವುದರ ನಡುವೆ ನಮ್ಮ ಚಲನಚಿತ್ರಗಳಿಗೆ ಪ್ರಚಾರ ನೀಡುವುದಕ್ಕಾಗಿಯೇ ದಟ್ಸ ಕನ್ನಡ ಕೂಡ ಕಾದು ಕುಳಿತಿದೆ. ಉತ್ಸಾಹವಿದೆ. ಆದರೆ, ಪುಕ್ಕಟ್ಟೆ ಪ್ರಚಾರ ನೀಡ್ತೇವೆ ಅಂದರೂ ಇಲ್ಲಿ ಕೇಳೋರು ಯಾರು ಇಲ್ಲ. ಇನ್ನು ಜಾಹಿರಾತು ಕೊಡಿ, ಸ್ಪಾನ್ಸಾರ್ ಮಾಡಿ ಅಂದರೆ ಇವರು ಮಾಡ್ತಾರಾ ? ಪಟಾಲಮ್ಮನ ಆಣೆ ಇವೆಲ್ಲ ಸಾಧ್ಯವೇ ಇಲ್ಲ ಬಿಡಿ. ಕನ್ನಡ ಮಾಧ್ಯಮಲೋಕವನ್ನು ವಿಶೇಷವಾಗಿ ಅಂತರ್ ಜಾಲ ಮಾಧ್ಯಮವನ್ನು ಗಾಂಧೀನಗರದ ಸತ್ಯಜಿತ್ ರೇಗಳು, ಸಿಸಿಲ್ ಬಿ ಡಿಮಿಲಿಗಳು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎನ್ನುವುದು ತಾತ್ಪರ್ಯ.

ಚಿತ್ರದ ಆಡಿಯೋ ಅಥವಾ ವಿಡಿಯೋ ಕ್ಲಿಪ್ಪಿಂಗ್ಸ್ ಇರಲಿ, ಕೆಲವು ಸಲ ಒಂದು ಸ್ಟಿಲ್ ಸಹಾ ಸಿಗೋದಿಲ್ಲ. ಮಾಹಿತಿ ಪ್ರಸರಣ ವ್ಯವಸ್ಥೆ ಸ್ಯಾಂಡಲ್ ವುಡ್ ನಲ್ಲಿ ಅಚ್ಚುಕಟ್ಟಾಗಿ ಮಾಡಿದ್ದೇ ಇಲ್ಲ. ನಮ್ಮ ನಿರ್ಮಾಪಕ ಮತ್ತು ನಿರ್ದೇಶಕರು ಈ ಬಗ್ಗೆ ಯೋಚನಾಪರರಾಗುವುದು ಕಡಿಮೆ. ಹೀಗಾಗಿಯೇ ಕನ್ನಡದ ಎಲ್ಲಾ ಪತ್ರಿಕೆಗಳಲ್ಲೂ ಒಂದೇ ಭಂಗಿಯ ಸಿನಿಮಾ ಪೋಟೋಗಳು ಪ್ರಕಟವಾಗುತ್ತವೆ. ಅಲ್ಲದೇ ಕನ್ನಡ ಚಿತ್ರಗಳ ಬಹುತೇಕ ಆಡಿಯೋ ಮತ್ತು ವಿಡಿಯೋ ಗುಣಮಟ್ಟ ನಿಮಗೆ ಗೊತ್ತಿದೆ.

'ನೀವು ಕನ್ನಡ ವಿಡಿಯೋ ಯಾಕೆ ಹಾಕೋದಿಲ್ಲ?' ಎಂದು ಬಹುತೇಕ ಓದುಗರು ನಮ್ಮನ್ನು ಆಗಾಗ ಕೆಣಕುತ್ತಿರುತ್ತಾರೆ. ಅವರಿಗೆಲ್ಲ ಈ ಮೂಲಕ ಉತ್ತರ ಸಿಕ್ಕಿದೆ ಎಂದು ಭಾವಿಸುತ್ತೇನೆ. ನಮ್ಮ ಮಾನ್ಯ ಓದುಗರು, ಚಿತ್ರ ಕರ್ಮಿಗಳು ದಯವಿಟ್ಟು ಹಳೆ ಅಥವಾ ಹೊಸ ಕನ್ನಡ ಚಿತ್ರಗಳ ಸ್ಟಿಲ್ ಫೋಟೋ, ಹೊಸ ಕನ್ನಡ ಚಲನಚಿತ್ರಗಳ ಸ್ಟಿಲ್ಸ್ , ವಿಡಿಯೋ ಫೈಲುಗಳನ್ನು ದಟ್ಸ್ ಕನ್ನಡಕ್ಕೆ ತಲುಪಿಸುವ ಪ್ರಯತ್ನ ಮಾಡಬೇಕೆಂದು ಕೋರುತ್ತೇನೆ(ಕಾಫಿರೈಟ್ ಸಮಸ್ಯೆ ಬರಬಾರದು). ಚಿತ್ರದ ಟ್ರೈಲರ್, ಹಾಡುಗಳ ತುಣುಕುಗಳು, ಟೈಟಲ್ ಸಾಂಗ್, ಸಂಭಾಷಣೆಯ ತುಣುಕುಗಳು, ನಿರ್ದೇಶಕ, ನಾಯಕ ನಾಯಕಿಯರ ಸಂದರ್ಶನಗಳನ್ನು ಆಸಕ್ತ ಕನ್ನಡ ಚಿತ್ರಾಭಿಮಾನಿಗಳು ವಿಡಿಯೋ ಫೈಲು ಮಾಡಿ ಕಳಿಸಿಕೊಡಬಹುದು.

ವಿಡಿಯೋ ಫೈಲುಗಳ ಗುಣಮಟ್ಟ ಮತ್ತು ಹಕ್ಕು ಸ್ವಾಮ್ಯ ವಿಚಾರಗಳನ್ನು ಪರಿಶೀಲಿಸಿ ನಮ್ಮ ವಾಹಿನಿಯಲ್ಲಿ ಪ್ರಕಟಿಸಲಾಗುವುದು. ಈ ಬಗೆಗೆ ತುಂಬಾ ಆಸಕ್ತಿಯಿರುವ ಚಿತ್ರಪ್ರೇಮಿ ಕನ್ನಡಿಗರು ನಮ್ಮ ನಿರ್ಮಾಪಕ, ನಿರ್ದೇಶಕರ ಬಳಿ ಒಮ್ಮೆ ಮಾತಾಡಿ ವಿಡಿಯೋ ಸಾಮಗ್ರಿಗಳನ್ನು ಪಡೆದು ನಮಗೆ ಕಳಿಸಿಕೊಟ್ಟರೆ ಪ್ರಕಟಿಸುವ ಸಂತೋಷ ನಮ್ಮದು. ಮಾನ್ಯ ಓದುಗರು ಇಮೇಲಿನಲ್ಲಿ ಮನರಂಜನೆ ಸಾಮಗ್ರಿಯ ವಿವರ ಹಾಗೂ ತಮ್ಮ ಆಸಕ್ತಿ, ವಿಳಾಸ, ದೂರವಾಣಿ ಸಂಖ್ಯೆ ಮುಂತಾದ ವಿವರಗಳನ್ನು ಸ್ಪಷ್ಟವಾಗಿ ಬರೆದಿರತಕ್ಕದ್ದು.

-ಸಂಪಾದಕ

([email protected] ವಿಳಾಸಕ್ಕೆ ಬರುವ ಪ್ರತಿಕ್ರಿಯೆಗಳಿಗೆ ಸ್ವಾಗತ ಮತ್ತು ಉತ್ತರ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X