ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ದಟ್ಸ್‌ ಕನ್ನಡ’ದ ಕಷ್ಟ-ಸುಖ ಮತ್ತು ಉಪ್ಪಿಟ್ಟು ಮಹಾತ್ಮೆ!

By Staff
|
Google Oneindia Kannada News

Delicious uppittu
ಉಪ್ಪಿಟ್ಟೇ ನಿನ್ನ ಮಹಿಮೆ ಅಪಾರ!

ನಮ್ಮ ವೆಬ್‌ಸೈಟಿನಲ್ಲಿ ಇತ್ತೀಚೆಗೆ ಸಾಹಿತ್ಯಿಕವಾಗಿ ಗೇಲಿಮಾಡುತ್ತ ಮಾಡುತ್ತ, ಕನ್ನಡಿಗರ ಸದಭಿರುಚಿಗೆ ಪ್ರತೀಕವೇ ಆಗಿರುವ ಉಪ್ಪಿಟ್ಟನ್ನು ನಿಂದಿಸುವ ಲೇಖನವೊಂದು ಪ್ರಕಟವಾಗಿತ್ತು. ಲೇಖಕರ ಅಭಿಪ್ರಾಯ ಸ್ವಾತಂತ್ರ್ಯವನ್ನು ಗೌರವಿಸಿ ಆ ಲೇಖನವನ್ನು ಪ್ರಕಟಣೆಗೆ ಪಾಸ್‌ ಮಾಡಲಾಗಿತ್ತು. ದುರದೃಷ್ಟದ ಸಂಗತಿಯೆಂದರೆ ಏಳು ಖಂಡಗಳನ್ನು ಸುತ್ತಿದರು 175 ದೇಶಗಳಲ್ಲಿ ಅಲೆದರು ಕಾಣಸಿಗದ, ಉಪ್ಪಿಟೆಂಬ ತಿಂಡಿಯ ಬಗ್ಗೆ ಅಪಸ್ವರ ಎತ್ತುವ ಲೇಖನ ಅದಾಗಿತ್ತು. ಭರತಖಂಡದ ದಕ್ಷಿಣ ದಿಕ್ಕಿನ ನಾಲಕ್ಕು ಪ್ರಾಂತ್ಯಗಳಲ್ಲಿ ಮಾತ್ರ ಮನೆಮಾತಾಗಿರುವ ಉಪ್ಪಿಟ್ಟನ್ನು ತಪ್ಪಿಟ್ಟೆಂದು ಬಣ್ಣಿಸಿದ್ದನ್ನು ಓದಿದ ಮಹಾಜನತೆ ನಮ್ಮ ಪೋರ್ಟಲ್‌ ವಿರುದ್ಧ ತಿರುಗಿಬಿದ್ದರು, ಉರಿದುಬಿದ್ದರು.

ಲೇಖನವನ್ನು ಖಂಡತುಂಡವಾಗಿ ಖಂಡಿಸುವ 93 ಪ್ರತಿಕ್ರಿಯೆಗಳು ಫೀಡ್‌ಬ್ಯಾಕ್‌ ಕೊಳವೆಯಲ್ಲಿ ನುಗ್ಗಿಬಂದವು. ನಮಗೆ ಸಾಕುಸಾಕಾಯಿತು. ಅವುಗಳಲ್ಲಿ ಉಪ್ಪಿಟ್ಟನ್ನು ಸಮರ್ಥಿಸಿಕೊಳ್ಳುತ್ತಾ ಹಸಿಮೆಣಸಿಗಿಂತ ಖಾರವಾಗಿದ್ದ ಪ್ರತಿಕ್ರಿಯೆಗಳ ಪ್ರಮಾಣ ಶೇ. 99.99.

ಉಪ್ಪಿಟ್ಟು-ತಪ್ಪಿಟ್ಟು ಲೇಖನ ಓದಿದ ತುಂಬಾ ತುಂಬಾ ಮಂದಿ ಮನಸ್ಸಿಗೆ ಬಹಳ ಬೇಜಾರು ಮಾಡಿಕೊಂಡಿದ್ದಾರೆ. ಕೆಲವರು ನಮ್ಮ ವೆಬ್‌ಸೈಟಿನ ಬಗ್ಗೆ ಸಿಟ್ಟು ಮಾಡಿಕೊಂಡಿದ್ದಾರೆ ಕೂಡ. ಈ ವಿಚಾರದ ಬಗ್ಗೆ ಅಲ್ಲಲ್ಲಿ ಚರ್ಚೆಗಳು, ಗುಸುಗುಸುಗಳು, ಪಿಸಿಪಿಸಿಗಳು ಸಾಕು ಬೇಕಾದಷ್ಟು ನಡೆದಿವೆ. ಅಲ್ಲಿಂದಿಲ್ಲಿಯತನಕ ಕನ್ನಡ ಬಾಂಧವರು ಇ-ಮೇಲ್‌ ಬರೆದು, ಟೀಕಿಸಿ ನಮ್ಮ ಎಡಿಟೋರಿಯಲ್‌ ನಿಲುವಿನ ಬಗ್ಗೆ ಕೊಂಕು ಮಾತುಗಳನ್ನಾಡಿದ್ದಾರೆ. ಒಬ್ಬಾಕೆಯಂತೂ ನಿಮ್ಮ ವೆಬ್‌ಸೈಟಿನ ಏಳೇಳು ಜನ್ಮದ ನಂಟು ಇಂದಿಗೆ ಬಗೆಹರಿಯಿತು ಎಂದೂ ಜರೆದಿದ್ದಾರೆ.

ನಿಜ ಹೇಳಬೇಕೆಂದರೆ, ಹೇಳಲೇಬೇಕು. ದಟ್ಸ್‌ಕನ್ನಡ ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡುವ ಯಾರೂ ಉಪ್ಪಿಟ್ಟು ವಿರೋಧಿಗಳಲ್ಲ. ಕಂಪನಿಯಲ್ಲಿ ಕೆಲಸ ಮಾಡುವ 140 ನೌಕರರಲ್ಲಿ ಕನ್ನಡಕ್ಕಾಗಿ ಕೀಬೋರ್ಡ್‌ ಮುಟ್ಟುವ ನಾವೈದು ಮಂದಿಯಲ್ಲಿ ಪ್ರತಿಯಾಬ್ಬರೂ ಸ್ವತಃ ಉಪ್ಪಿಟ್ಟು ಮಾಡುತ್ತಾರೆ. ನೀವು ಹೂಂ ಎಂದರೆ ಮಾಡಿಕೊಡಬಲ್ಲರು. ನಿಮ್ಮಂತೆ ಉಪ್ಪಿಟ್ಟು ಭಕ್ತರೇ ಆಗಿದ್ದಾರೆ.

ಪ್ರತಿದಿನ ನೂರಾರು ಬಗೆಯ ವಿಷಯಗಳು , ವೈಚಿತ್ರ್ಯಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತವೆ. ಆಗೊಮ್ಮೆ ಈಗೊಮ್ಮೆ ಕಣ್ತಪ್ಪಿನಿಂದಲೋ ಆಯ್ಕೆಯ ದೋಷದಿಂದಲೋ ಪುರಂದರದಾಸರಿಗೆ ಸಮನಾದ ಉಪ್ಪಿಟ್ಟನ್ನು ಹಗುರವಾಗಿ ಕಾಣುವಂಥ ಲೇಖನಗಳು ಅಭಿಪ್ರಾಯಗಳು ನುಸುಳಿಬಿಡುತ್ತವೆ. ಮಾನ್ಯ ವಾಚಕರು ಈ ಅನಾಹುತವನ್ನು ಉದಾರ ಮನಸ್ಸಿನಿಂದ ಕ್ಷಮಿಸಬೇಕು. ದೊಡ್ಡ ಮನಸ್ಸು ಮಾಡಿ ಕನ್ನಡಿಗರೇ ಮಾಡಿದ ತಪ್ಪನ್ನು ಉಪ್ಪಿಟ್ಟೆಂದು ಪರಿಭಾವಿಸಿಕೊಂಡು ಹೊಟ್ಟೆಗೆ ಹಾಕಿಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇವೆ.

ಉಪ್ಪಿಟ್ಟು ಒಳ್ಳೆಯ ತಿಂಡಿ. ಅನುಮಾನವೇ ಇಲ್ಲ. ಸುಲಭವಾಗಿ ಮಾಡಬಹುದು ಎಂದಲ್ಲ. ಉಪ್ಪಿಟ್ಟನ್ನು ಮಾಡುವುದು ಒಂದು ಕಲೆ, ಬಣ್ಣನೆಗೆ ನಿಲುಕದ ರುಚಿ ಅಭಿರುಚಿ. ಕನ್ನಡಿಗರ ಸರಳತೆಗೆ ಮೃದು ಧೋರಣೆಯ ದ್ಯೋತಕ ಎಂದರೂ ತಪ್ಪೇನಲ್ಲ. ಇಂಥ ಸರಳ ಸುಂದರವಾದ ತಿಂಡಿಯನ್ನು ಒಪ್ಪವಾಗಿ ತಯಾರಿಸುವ ಕ್ರಮವನ್ನು ಇದೇ ಪುಟಗಳಲ್ಲಿ ಸದ್ಯದಲ್ಲೇ ಬೆಳಕು ಕಾಣಿಸಲಾಗುವುದು. ಸಹೃದಯ ಓದುಗರು ಅಲ್ಲಿಯತನಕ ತಾಳ್ಮೆವಹಿಸಬೇಕಾಗಿ ಪ್ರಾರ್ಥನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X