• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೈ ಬೀಸಿ ಕರೆಯುತಿಹಳು ಭೀಮೇಶ್ವರಿ!

By Staff
|


ಚಾಪೆ ಸೇರಿದ ಹಣ್ಣಣ್ಣು ಮುದುಕಿಯಂತೆ ಸದಾ ಗೊಣಗೋದು ನಿಲ್ಲಿಸಿ. ಟ್ರಾಫಿಕ್ ಜಾಮ್‌ನಲ್ಲಿ ನರಳುತ್ತ, ಇರುವ ಮತ್ತು ಬರುವ ತಾಪತ್ರಯಗಳ ಬಗ್ಗೆ ಕೊರಗುತ್ತ, ನಮ್ಮ ಬದುಕಿನ ಬಣ್ಣಗಳೆಲ್ಲವೂ ಮಾಸಿ ಹೋಗಿವೆ ಎಂಬ ಭಾವಹೊತ್ತು, ಶಾಪಗ್ರಸ್ತರಂತೆ ಬದುಕಿದ್ದು ಸಾಕು! ಒಂದು ನೂರು ಗ್ರಾಂ ಲವಲವಿಕೆಯನ್ನು ಅಲ್ಲಿಇಲ್ಲಿ ಸುತ್ತಾಡಿ ಮೊದಲು ಸಂಪಾದಿಸಿ! ಆಮೇಲೆ ನೋಡಿ! ಅಲ್ಲಿಇಲ್ಲಿ ಯಾಕೆ, ಸದ್ಯಕ್ಕೆ ಪಕ್ಕದಲ್ಲಿರೋ ಭೀಮೇಶ್ವರಿಗೆ ಒಂದು ಸಲ ಹೋಗಬಹುದಲ್ವಾ?

Picnic to Bheemeshwariತಿಂಗಳಗಟ್ಟಳೆ ಬರೀ ಪ್ಲಾನಿಂಗು ಮತ್ತೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದೂರದೂರುಗಳಿಗೆ ಪ್ರಯಾಣ ಮಾಡುವುದು ಒಂದು ರೀತಿ. ಪಕ್ಕದಲ್ಲೆ ಇರುವ ನಮ್ಮ ಕರ್ನಾಟಕದ ಸೊಗಸಿನ ಪ್ರವಾಸಿ ತಾಣಗಳ ರಮ್ಯತೆ ಮತ್ತು ಪ್ರವಾಸಾನುಭವಗಳನ್ನು ಸ್ಮೃತಿಪಟಲಕ್ಕೆ ಲೇಪಿಸಿಕೊಳ್ಳುವುದು ಮತ್ತೊಂದು ನೀತಿ..

ಪ್ರಕೃತಿಗೆ ರೀತಿನೀತಿಗಳ ಹಂಗಿಲ್ಲ. ಅದು ಆಡಿದ್ದೇ ಆಟ, ಹೂಡಿದ್ದೇ ಲಗ್ಗೆ. ಅಂತೆಯೇ ನಮ್ಮಗಳ ಪ್ರ್ರವಾಸದ ಹವ್ಯಾಸಕ್ಕೂ ಒಂದು ಕಾಲ ಅಂತನೇ ಇರುವುದಿಲ್ಲ. ಇರಬಾರದು. ಪ್ರತಿಯೊಂದು ಋತು ಕೂಡ ಪ್ರವಾಸಕ್ಕೆ ಯೋಗ್ಯವೇ ಆಗಿರತ್ತೆ.

ಮಕ್ಕಳಿಗೆ ಸ್ಕೂಲು, ನಾಳೆಯಿಂದ ಸೆಮಿನಾರು, ಸೋಮವಾರ ಬೋರ್ಡ್ ಮೀಟಿಂಗು, ಯಾರದ್ದೋ ಮನೆಯ ಗೃಹಪ್ರವೇಶ ಮುಂತಾದ ಕಚಿಪಿಚಿಗಳನ್ನು ನಾವೇ ಮಾಡಿಕೊಂಡದ್ದೇ ವಿನಾ ಅದರಲ್ಲಿ ಪ್ರಕೃತಿಯ ತಪ್ಪೇನಿಲ್ಲ. ನಾವು ಸಿದ್ಧವಿದ್ದರೆ ಪ್ರಕೃತಿಯೂ ಸಿದ್ಧವಿರತ್ತೆ. ನೀವು ಈ ಮಳೆಗಾಲದ ಪ್ರವಾಸಕ್ಕೆ ಸಿದ್ಧರಿದ್ದೀರಾದರೆ ಒಂದು ಐಡಿಯಾ ನಾನು ಕೊಡುತ್ತೇನೆ.

ಮಳೆ ಯಾವಾಗ ಬರತ್ತೋ, ಯಾವಾಗ ನಿಲ್ಲತ್ತೋ ಯಾವನಿಗೆ ಗೊತ್ತು. ಅಂತೂ ಕರ್ನಾಟಕಕ್ಕೆ ಇನ್ನೊಂದು ಮಳೆಗಾಲ ಬಂದಿದೆ. ಮಳೆಗಾಲದ ಸುಖಗಳೇ ಬೇರೆ. ಅದನ್ನು ಹಾಗೇ ಇಡಿಯಾಗಿ ಅನುಭವಿಸುವವನು ಸುಖಿ. ಮೆಜೆಸ್ಟಿಕ್‌ನಲ್ಲಿ, ಜೆಸಿ ರಸ್ತೆಯಲ್ಲಿ, ಬಿಟಿಎಂ ರಸ್ತೆಯಲ್ಲಿ, ಕಲಾಸಿಪಾಳ್ಯದಲ್ಲಿ ಮಳೆ ರೇಜಿಗೆ ವಿಷಯ. ನಿಜ ಒಪ್ಕೊಳಣಾ. ಬಸ್ಸು ಹಿಡಿದು, ಕಾರುತಿರುವಿ, ಫುಟ್‌ಪಾತ್‌ನಲ್ಲಿ ಬೈಕು ಓಡಿಸಿ ರಾತ್ರಿ ಮನೆ ತಲುಪಿದರೆ ಅಬ್ಬಾ ಅರ್ಧ ಸ್ವರ್ಗ. ಮನೆನೂ ತೊರೆದು ಊರಾಚೆ ಹೋಗಿಬಿಟ್ಟರೆ? ನೀವೇ ಲಕ್ಕಿ ಫೆಲೋ.

ಬೇಸಿಗೆ ಕಾಲದಲ್ಲಿ ಇಲ್ಲದ ನೀರನ್ನು ಹುಡುಕಿಕೊಂಡು ಹೋಗುವುದಕ್ಕಿಂತ ಮುಂಗಾರು ಮಳೆ ಹನಿಗಳ ಲೀಲೆಗಳನ್ನು ಕಣ್ಣಲ್ಲಿ ತುಂಬಿಕೊಳ್ಳುವವರೇ ರಸಿಕರು. ಹಾಗೇನೇ, ರಭಸದಿಂದ ಹರಿಯುವ ನೀರಿನ ವಯ್ಯಾರಗಳನ್ನು ಆಸ್ವಾದಿಸುವುದು ಹಮ್‌ಮ್. ಅಲ್ಲೊಂದು ಗಿಡದ ಹಸುರೆಲೆಯನ್ನು ಚಿವುಟಿ ಮೂಸಿನೋಡುವುದು. ಮಳೆ ಸುರಕೊಂಡರೆ ಸುರುದುಕೊಳ್ಳಲಿ. ಅದರಪಾಡಿಗೆ ಅದು. ನೆತ್ತಿಯ ಮೇಲೆ ಒಂದೆರಡು ಹನಿ ನೀರು ಬೀಳಲಿ. ಅದಕ್ಕೇನಂತೆ? ಮಳೆಗಾಲದಲ್ಲಿ ಮಳೆರಾಯನ ಜತೆಗೆ ಇರುವ ಆನಂದ ಮಲೆನಾಡನ್ನು ತೊರೆದು ಬಯಲುಸೀಮೆಗೆ ಬಂದವರಿಗೆಲ್ಲಿ ಗೊತ್ತು.

ಈ ಸಲ ಬೆಂಗಳೂರಿಗೆ ಸಮೀಪವಿರುವ ಭೀಮೇಶ್ವರಿಗೆ ಒಂದು ಟ್ರಿಪ್‌ ಹಾಕಿ. ಮಹಸೀರ್ ಜಾತಿಯ ಜಾತಿಮೀನುಗಳ ತವರುಮನೆ ಎಂಬ ಖ್ಯಾತಿ ಭೀಮೇಶ್ವರಿಗಿದೆ. ಭೀಮೇಶ್ವರಿ ಫಿಶ್ಶಿಂಗ್‌ ಕ್ಯಾಂಪ್‌ ಎಂತಲೇ ಆ ಜಾಗಕ್ಕೆ ಹೆಸರು. ತಂಪು ತಂಪಾದ ಜುಲೈ ಅಥವಾ ಆಗಸ್ಟ್ ಹವೆಯಲ್ಲಿ ಚೆಂದದ ವ್ಯವಸ್ಥೆಗಳಿರುವ ಈ ತಾಣಕ್ಕೆ, ಕಚೇರಿ ಮತ್ತು ಮನೆಯಿಂದ ತಪ್ಪಿಸಿಕೊಂಡು ಎರಡು ದಿನಗಳಮಟ್ಟಿಗೆ ಇನ್ನಾದರೂ ಓಡಿಹೋಗುವುದು ಲೇಸು ಅಂತ ನನಗೂ ಅನ್ನಿಸಿದೆ. ಅಲ್ಲಿ ನಾವೇ ಬಲೆಬೀಸಿ ಮೀನು ಹಿಡಿಯುವುದೊಂದು ಮೋಜು.

ವಾರಾಂತ್ಯದಲ್ಲಿ ಕಾರು ಬಸ್ಸು ಮೋಟರ್‌ಬೈಕುಗಳಲ್ಲಿ ಭೀಮೇಶ್ವರಿ ತಲುಪಿ ನಾವೇ ಬೆಸ್ತರಾಗುವುದಿದೆಯಲ್ಲ ಅದು ಕೊಡುವ ಸಂತಸಗಳನ್ನು ಇನ್ನೊಬ್ಬರು ಯಾಕೆ ಹೊಗಳಬೇಕು. ನಾವೆ ಅನುಭವಿಸೋಣ.

ಎಲ್ಲ ಋತುಗಳೂ ಹಾಗೇ. ಪ್ರತಿ ಋತುವಿನೊಂದಿಗೆ ಬೆರೆತಿರುವ ಆಹ್ಲಾದ ಮತ್ತು ಅದನ್ನು ಸವಿಯುವುದಕ್ಕೆ ತಕ್ಕುದಾದ ಸಿದ್ಧತಗಳನ್ನು ನಾವೇ ಮಾಡಿಟ್ಟುಕೊಂಡಿರಲೇಬೇಕು. ಈ ಮಳೆಗಾಲದ ಪ್ರವಾಸಕ್ಕೆ ನೀವು ತೆಗೆದುಕೊಳ್ಳಬೇಕಾದ ಎಲ್ಲ ಮುಂಜಾಗ್ರತಾ ಕ್ರಮಗಳು ಪರ್‌ಫೆಕ್ಟ್ ಆಗಿರಲಿ. ಮಳೆಗಾಲದ ಟ್ರಾವೆಲ್‌ ಕಿಟ್‌ ಬಂದೋಬಸ್ತಾಗಿರಲಿ. ಮುಂಚೆಯೆ ಸಾರಿಗೆ ವಾಸ್ತವ್ಯ ಬುಕಿಂಗ್ ಮಾಡಿಸಬೇಕು. ಪ್ರಯಾಣಕ್ಕೆ ಮಾತ್ರ ಅನುಕೂಲಗಳನ್ನು ಚಾಚೂತಪ್ಪದೆ ಮಾಡಿಟ್ಟುಕೊಳ್ಳಬೇಕು. ಅಂದರೆ, ಕಾರ್‌ ಪಂಕ್ಚರ್ ಆದರೆ ಎಂತು? ಡಿಸ್ಟಿಲ್‌ ವಾಟರ್‌ ಖಾಲಿಆಯ್ತಾ? ಇನ್ನೊಂದು ರಗ್ಗು ತಂದಿದ್ದರೆ ಚೆನ್ನಾಗಿತ್ತು. ಪಾಚಿಯ ಮೇಲೆ ಕಾಲಿಡಬಾರದಿತ್ತು. ಇಂಥದ್ದು ಬೇಕಾದಷ್ಟಿರತ್ವೆ.

ಕರ್ನಾಟಕದ ನಡುಮನೆ ಬೆಂಗಳೂರಿನಿಂದ ಭೀಮೇಶ್ವರಿ ತೀರ ದೂರಏನಿಲ್ಲ. ಬೆಂಗಳೂರಿನಿಂದ ಕನಕಪುರ ಮಾರ್ಗವಾಗಿ ಹೋದರೆ ಒಂದು ನೂರು ಕಿಲೋಮೀಟರ್‌ ಆದೀತು. ಈಗ ಮಳೆ ಬಂದಿದೆ, ಬರುತ್ತಿದೆ. ಹೊಸನೀರಿನಗುಂಟ ಮುಳುಗೇಳುತ್ತಿರುವ ತೂಕದ ಬೆಳ್ಳಿಮೀನುಗಳು ನಿಮ್ಮ ಬಲೆಗೆ ಬಿದ್ದೇಬೀಳುತ್ತವೆ.ಯಾಕೆ ಅನುಮಾನಾನಾ?

ಎರಡು ದಿವಸ ಮಳೆಯಲ್ಲಿ ಮಲ್ಲಿಗೆಯಾಗಿದ್ದು ಬರ್ತಾ ಮಧುರ ನೆನಪುಗಳನ್ನು ಡಿಕ್ಕಿಯಲ್ಲಿ ಹಾಕಿಕೊಂಡು ಬರುವಿರಂತೆ. ಮೀನು ಪ್ರಿಯರಾದರೆ ಮೀನುಗಳನ್ನು ಮನೆಗೆ ತಂದು ಫ್ರೈ ಅಥವಾ ಡ್ರೈ ಮಾಡುವಿರಂತೆ. ಸಸ್ಯಾಹಾರಿಗಳಾದರೆ ಹಿಡಿದ ಮೀನನ್ನು ಮತ್ತೆ ನೀರಿಗೆ ಬಿಟ್ಟು ಮಕ್ಕಳು ಬೆರಗಾಗುವುದನ್ನು ನೋಡಿ ನಗುವಿರಂತೆ.

ಬನ್ನಿ, ಭೀಮೇಶ್ವರಿಗೆ ಪ್ಯಾಕಿಂಗ್‌ ಮಾಡೋಣ.

ಹೆಲ್ಪ್ ಬೇಕಾದಾಗ ನನಗೆ ಇಮೇಲ್‌ ಮಾಡಿ ಅಥವಾ ನನ್ನ ಕಲೀಗ್‌ಗೆ ಫೋನ್‌ ಮಾಡಿ -
ಪ್ರಿಯಾ +91-80-6565 3333 / 2518 0888
ಇಮೇಲ್‌ priya@greynium.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more