ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವರೆಕಾಳು ಪೊಂಗಲ್‌ ಅಂತೆ, ಪೊಂಗಲ್ಲು!

By Staff
|
Google Oneindia Kannada News


ಅವರೆಕಾಳಲ್ಲಿ ಅನೇಕ ತರಹದ ಅಡುಗೆಗಳನ್ನು ಮಾಡಬಹುದು. ಆದರೆ ಅವರೆಕಾಳು ಪೊಂಗಲ್‌ ರೆಸಿಪಿಯನ್ನು ಕಂಡಿಲ್ಲ, ಕೇಳಿಲ್ಲ, ಜೊತೆಗೆ ತಿಂದೂ ಇಲ್ಲ!

ದಟ್ಸ್‌ಕನ್ನಡ ಪುಟಗಳನ್ನು ನಿತ್ಯ ಜಾಲಾಡುವ ಒಬ್ಬ ಸ್ನೇಹಿತರ ಮನೆಗೆ ಮೊನ್ನೆ ಹೋಗಿದ್ದೆ. ಅವರು ಅಂತರ್‌ಜಾಲದ ಬಗ್ಗೆ , ವಿಶೇಷವಾಗಿ ಕನ್ನಡ ಆನ್‌ಲೈನ್‌ ಕುರಿತು ಅನೇಕ ವಿಚಾರಗಳನ್ನು ಹಂಚಿಕೊಂಡರು. ನಮ್ಮ ವೆಬ್‌ಸೈಟಿನ ಅಂದ ಚೆಂದ, ಭಾಷೆ, ವಿಷಯದ ಆಯ್ಕೆ ನಿರೂಪಣೆ ಹೀಗೆ ಪ್ರತಿಯಾಂದು ವಿಚಾರವನ್ನೂ ಕೂಲಂಕಷವಾಗಿ ಚರ್ಚಿಸಿದರು. ನಿಮಗೆ ರೆವಿನ್ಯೂ ಹೇಗೆ ಬರತ್ತೆ ಎಂದೂ ಕೇಳಿದರು. ಅವರ ಆಸಕ್ತಿ ಕಂಡು ಬೆರಗಾದೆ.

ಹಸಿಹಸಿ ಸುದ್ದಿಯಿಂದ ಮೊದಲುಗೊಂಡು ನಾಡಗೀತೆಯ ವಿವಾದ ಕುರಿತ ಚರ್ಚೆ ವಿವಾದಗಳೆಲ್ಲವನ್ನೂ ಮಾತನಾಡಿದ ಅವರು ಒಂದು ವಿಷಯದ ಬಗ್ಗೆ ಮಾತ್ರ ತುಟಿಕ್‌ಪಿಟಕ್‌ ಅನ್ನಲಿಲ್ಲ. ನನಗೆ ಆಮೇಲೆ ಹೊಳೆಯಿತು.

ಕಚೇರಿಗೆ ಬಂದವನೇ ಅವರಿಗೆ ಫೋನ್‌ ಮಾಡಿ.. ಅಲ್ಲಾರೀ ನೀವು ಎಲ್ಲ ಮಾತನಾಡಿದಿರಿ ಆದರೆ ನಮ್ಮ ಅಡುಗೆಮನೆ ಬಗ್ಗೆ ಏನೂ ಹೇಳಲೇ ಇಲ್ಲ. ಕಷ್ಟಪಟ್ಟು ಬರೀತೀವಿ. ನೀವು ಹೆಂಗಸರಾಗಿ ಅದರ ಬಗ್ಗೆ ಆಸಕ್ತಿ ವ್ಯಕ್ತಪಡಿಸದೇ ಇರುವುದು ನನಗೆ ಆಶ್ಚರ್ಯ ಆಯ್ತು ಎಂದು ಹೇಳಿದೆ.

ಆಕೆ ವಿದ್ಯಾವಂತ, ಉದ್ಯೋಗಶೀಲ ಮಹಿಳೆ. ಕೈತುಂಬ ಕೆಲಸ. ಮಕ್ಕಳು, ಮನೆಗೆ ಹೋಗುವವರು ಬರುವವರು ಎಲ್ಲಾ ನಿಭಾಯಿಸಬೇಕು. ಮೂರು ಹೊತ್ತು ಅಡುಗೆಯನ್ನಂತೂ ಮಾಡಿಬಡಿಯಲೇಬೇಕು, ಯಾರು ತಿನ್ನಲಿ, ಬಿಡಲಿ.

‘ನಾನು ಎಂದೂ ನಿಮ್ಮದಾಗಲಿ ಅಥವಾ ಇನ್ನಾವುದೇ ವೆಬ್‌ಸೈಟ್‌ನಲ್ಲಿ ರೆಸಿಪಿ ಓದುವುದೇ ಇಲ್ಲಾ ಶಾಮ್‌. ಅದನ್ನೇನು ಓದುವುದು? ಹಳೆ ಮೈಸೂರು ಶೈಲಿಯ ಸಸ್ಯಾಹಾರಿ ಅಡುಗೆ ಅಮ್ಮ ಕಲಿಸಿದ್ದಾರೆ. ದಿನಾ ಅದನ್ನೇ ತಿರುಗಿಸಿ-ಮುರುಗಿಸಿ ಮಾಡೋದಷ್ಟೆ ನನ್ನ ಕೆಲಸ. ಅಡುಗೆ ಮಾಡೋವಾಗ ಏನು ತೋಚತ್ತೋ ಅದನ್ನ ಮಾಡ್ತೀನಿ. ಅಡುಗೆ ಮನೆಗೆ ಹೋದಾಗ ನನ್ನ ರೆಸಿಪೀನ ನಾನೇ ಇನ್‌ವೆಂಟ್‌ ಮಾಡ್ಕೋತೀನಿ ಅಂದರು.

ಅರೆರೆರೇ? ವೆರಿ ಇಂಟರೆಸ್ಟಿಂಗ್‌ ವುಮನ್‌ ಅಂದುಕೊಂಡು ಫೋನು ಇಟ್ಟೆ. ಮತ್ತೆ ಇವತ್ತು ಫೋನ್‌ ಮಾಡಿ ಏನ್‌ ಸಮಾಚಾರಾ , ಏನ್‌ ಅಡುಗೆ ಇವತ್ತೂ ? ಹಲ್ಲುಕಚ್ಚಿಕೊಂಡೇ ಕೇಳಿದೆ. ‘ಬನ್ನಿ ಊಟಕ್ಕೆ , ಅವರೆಕಾಳು ಪೊಂಗಲ್‌ ಮಾಡಿದ್ದೀನಿ ’ ಅಂತು ಧ್ವನಿ!

ನಾನು ಇದುವರೆವಿಗೂ ನನ್ನ ಜನ್ಮದಲ್ಲಿ ಅಂಥ ಅಡುಗೆ ಹೆಸರು ಕೇಳಿರಲಿಲ್ಲ. ಅವರೆಕಾಳು ಐಟಂಗಳು ಬೇಕಾದಷ್ಟಿವೆ. ಆದರೆ ಅದನ್ನು ಹಾಕಿ ಪೊಂಗಲ್‌ ಮಾಡಿದ ಏಕೈಕ ಹೆಂಗಸು ಈಕೆ ಮಾತ್ರ ಇರಬೇಕು ಎಂದು ಮನಸ್ಸಿನಲ್ಲೇ ಹೇಳಿಕೊಂಡೆ. ‘ಹೇಗೇ ಮಾಡ್ತೀರಾ? ಸ್ವಲ್ಪ ಹೇಳ್‌ಕೊಡ್ತೀರಾ?’ ಅಂದದ್ದಕ್ಕೆ ‘ಸಾಯಂಕಾಲ ಫೋನ್‌ ಮಾಡಿ’ ಎಂದು ಮಾತು ಮುಗಿಸಿದರು. ಈ ಹೊತ್ತು ಸಂಜೆ ಮತ್ತೆ ಅವರಿಗೆ ಪೋನ್‌ ಮಾಡಿ, ಅವರೆ ಕಾಳು ಪೊಂಗಲ್‌ ಬಗ್ಗೆ ತಿಳಿದುಕೊಂಡು ಬಂದು ಬರೆಯೋಣ ಅಂತ ಇದ್ದೀನಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X