ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಲು-ಸಕ್ಕರೆಯಂಥ ಹೊಸಕಾರು ಬಂದಿದೆ ಕೊಳ್ಳಿರೋ ನೀವೆಲ್ಲ

By Staff
|
Google Oneindia Kannada News


ಒಂದು ಕಾಲದಲ್ಲಿ ಕಾರು, ಶ್ರೀಮಂತರ ಸ್ವತ್ತಾಗಿತ್ತು.ಆದರೆ ಪೈಸೆಗೆ ಪೈಸೆ ಕೂಡಿಟ್ಟು, ತಲೆಗೆ ಕೆಲಸ ಕೊಟ್ಟ ಮಧ್ಯಮವರ್ಗದವರು ಸಹಾ ಇಂದು, ಕಾರುಗಳನ್ನು ಗರಾಜ್‌ಯಿಲ್ಲದ ಮನೆಮುಂದೆ ನಿಲ್ಲಿಸುತ್ತಿದ್ದಾರೆ! ಹೀಗಾಗಿಯೇ ಕಾರಿನ ಕ್ರೇಜ್‌ ಹೆಚ್ಚುತ್ತಲೇ ಇದೆ... ಹೊಸ ವರ್ಷಕ್ಕೆ ನಿಮಗೂ ಹೊಸ ಕಾರುಬೇಕಾ ಸಾರ್‌.

New Car for the New Year !!ಬೆಂಗಳೂರು : ಇಸವಿ 2007 ಯಾರಿಗೆ ಯಾವ ಶುಭ, ಅಶುಭ ಫಲ ತರುವುದೋ ಹೇಳಲಾರೆನು. ಆದರೆ ಕಾರುಗಳನ್ನು ಇಷ್ಟಪಡುವವರಿಗೆ ಹೊಸ ವರ್ಷ ಅನೇಕ ಆಯ್ಕೆಗಳನ್ನು ಬಿಚ್ಚಿಡುತ್ತಿರುವುದು ಖರೆ. ಪದೇಪದೇ ಕಾರು ಬದಲಾಯಿಸುವ ಅಭ್ಯಾಸ ರೂಢಿಸಿಕೊಂಡವರಿಗೆ ಹೊಸ ಸಂವತ್ಸರದಲ್ಲಿ ಹೊಸ ಕಾರುಯೋಗ ಖಂಡಿತ. ಹಾಗಂತ ದೈವಜ್ಞ ಸೋಮಯಾಜಿಗಳು ಸದ್ಯದಲ್ಲೇ ಭವಿಷ್ಯ ನುಡಿಯುವ ಸಾಧ್ಯತೆಗಳನ್ನು ಅಲ್ಲಗೆಳೆಯುವುಂತಿಲ್ಲ!

ಕಾರು ಉತ್ಪಾದಿಸುವ ಕಂಪನಿಗಳಲ್ಲಿ ಸಿವಿಯರ್‌ ಕಾಂಪಿಟಿಷನ್‌ ಅಂದ್ರೆ ತೀವ್ರ ಪೈಪೋಟಿ ಕಂಡುಬರುತ್ತಿದೆ. ಏನಿಲ್ಲ ಎಂದರೂ 2007ರಲ್ಲಿ ಕನಿಷ್ಠ 18 ಬಗೆಯ ಕಾರುಗಳು ಮಾರುಕಟ್ಟೆಗೆ ಲಗ್ಗೆ ಹಾಕುವುದರಲ್ಲಿ ಅನುಮಾನವಿಲ್ಲ.. ಕಾರುಗಳ ಬೆಲೆಯಲ್ಲಿ ಹೆಚ್ಚಳ ಮತ್ತು ಕಾರು ಸಾಲದ ಮೇಲಿನ ಬಡ್ಡಿ ಹೆಚ್ಚಳವಾಗಿರುವ ಸಮಾಚಾರ ಸದ್ಯಕ್ಕೆ ಇಲ್ಲಿ ಬೇಡ.

ಹೊಸ ಕಾರುಗಳು ರಸ್ತೆಗೆ ಇಳಿಯುವ ಮುಂಚೆ ಭಾರತದಲ್ಲಿ ಹೊಸಹೊಸ ರಸ್ತೆಗಳು ಸಿದ್ಧಗೊಂಡಿದ್ದರೆ ಎಷ್ಟು ಚೆಂದ ಇರುತ್ತಿತ್ತು ಎಂದು ಇವತ್ತು ರಾತ್ರಿ ನಿಮಗೆ ಕನಸು ಬೀಳಬಹುದು. ಏನಂತೀರಾ? ‘ಜೀವನ ಪಥದಲ್ಲಿ ಮುಳ್ಳುಗಳಿರಲಿ ಆದರೆ ಕನಸುಗಳಿಲ್ಲದೆ ಬದುಕಲಾರೆ’ ಎಂದುಯಾರೋ ಹೇಳಿದ್ದು ನೆನಪಿಗೆ ಬರುತ್ತಿದೆ. ನೀವು ಬೆಂಗಳೂರಿನವರಾದರೆ ಇವತ್ತು ರಾತ್ರಿಯೇ ನಿಮಗೆ ಈ ಕನಸು ಬೀಳಲಿ.

ಈಗ ಬನ್ನಿ ಷೋರೂಂಗೆ ಹೋಗೋಣ :

  • ಮಹೀಂದ್ರ ರೀನಾಲ್ಟ್‌ ಲೋಗನ್‌ ತನ್ನ ಹೊಸ ಕಾರನ್ನು ಏಪ್ರಿಲ್‌ 2007ರಲ್ಲಿ ಬಿಡುಗಡೆ ಮಾಡುತ್ತಿದೆ. ಎಲ್ಲ ಕಂಪನಿಗಳ ಕಾರಿನಂತೆ ಈ ಕಾರೂ ಕೂಡ ಕಮಿಂಗ್‌ ವಿತ್‌ ಎ ಬಿಗ್‌ ಬ್ಯಾಂಗ್‌. ಆಕರ್ಷಕ ಬೆಲೆ ; 4.5ರಿಂದ 5 ಲಕ್ಷ ರೂಪಾಯಿ. ಬೇಗ ಬುಕ್‌ ಮಾಡಿ.
  • ಹುಂಡೈನವರು ಪುಟಾಣಿ ಕಾರು ತರುತ್ತಿದ್ದಾರೆ. ಅದರ ಹೆಸರು ‘ಪ’. ಏಪ್ರಿಲ್‌ನಲ್ಲಿ ಕಾಣಿಸಿಕೊಳ್ಳುವ ಜೆನ್‌ ಎಸ್ಟಿಲೊ ಕಾರಿಗೆ ಎದಿರೇಟು ಕೊಡಲು ಪ ಬರುತ್ತಿದೆ ಎನ್ನುತ್ತಾರೆ ಕಾರುಪಂಡಿತರು. ಮಾರುಕಟ್ಟೆಯಲ್ಲಿ ಢುಂಕಿ ಹೊಡೆದ ದೇವು ಮ್ಯಾಟಿಜ್‌ನ ಹೊಸ ಅವತಾರವೇ ಎಸ್ಟಿಲೊ!
  • ಪ್ರಖ್ಯಾತ ಕಂಪನಿಗಳು ಡೀಸಲ್‌ ಕಾರುಗಳನ್ನು ನಿರ್ಮಿಸಲು ಹಾತೊರೆಯುತ್ತಿರುವುದು ಸ್ಪಷ್ಟವಾಗುತ್ತಿದೆ. ಮಾರುತಿಯವರು ಸ್ವಿಫ್ಟ್‌ ಕಾರನ್ನು ಡೀಸೆಲ್‌ನಲ್ಲಿ ಬಿಡುತ್ತಿದ್ದಾರಂತೆ! ಬೆಲೆ ಆರೂವರೆ ಲಕ್ಷ. ಹುಂಡೈನವರ ಡೀಸಲ್‌ ಕಾರು ಗೆಟ್ಜ್‌ , ಸ್ವಿಫ್ಟ್‌ ಕಾರಿಗೆ ಅಡ್ಡಗಾಲು ಹಾಕಲು ಪ್ರಯತ್ನಿಸುತ್ತಿದ್ದರೆ, ಜನರಲ್‌ ಮೋಟಾರ್ಸ್‌ನವರು ಅವೆಯಾ ಮತ್ತು ಓಪ್‌ಟ್ರಾ ಕಾರುಗಳಿಗೆ ಡೀಸೆಲ್‌ ಗನ್‌ ಹಿಡಿಯುತ್ತಿದ್ದಾರೆ.
  • ದೊಡ್ಡವರಿರುವತನಕ ದೊಡ್ಡಕಾರುಗಳಿಗೆ ಬೇಡಿಕೆ ಇದ್ದೇ ಇರುತ್ತದೆ ಶಿವಾ ಎನ್ನುತ್ತಾರೆ ದೊಡ್ಡವರು. BMW ಅವರ 3 ಸೀರೀಸ್‌ ಚೆನ್ನೈನಲ್ಲಿ ಅಸೆಂಬಲ್‌ ಆಗುತ್ತಿದೆ. ಇನ್ನು 5 ಸೀರೀಸ್‌ನ x5, x3 ಕಾರುಗಳಿಗೆ ಸ್ಪ್ರೇ ಪೇಯಿಂಟಿಂಗ್‌ ಆಗುವುದು ಮಾತ್ರ ಬಾಕಿ ಇದೆ.. 7 ಸಿರೀಸ್‌ ಮಾತುಬಿಡಿ. ಆದು ಇನ್ನಷ್ಟು ಸುಸಜ್ಜಿತಗೊಂಡ ಹಾರ್ಲಿಕ್ಸ್‌ ಕುಡಿದ ಐರಾವತವಾಗಲಿದೆ. ಹೆಂಡದ ದೊರೆಗಳಾದ ಖೋಡೆ, ಮಲ್ಯ, ಆದಿಕೇಶವುಲು, ದೊಡ್ಡದೊಡ್ಡ ಜಾತಿಯ ಶ್ರೀಮಂತ ಮಠಗಳ ಸನ್ಯಾಸಿಗಳು ಮಾತ್ರ ಉಪಯೋಗಿಸುವ ಕಾರುಗಳಿವು ಅಂತ ನೀವು ಭಾವಿಸಿದರೆ ಇವತ್ತಿನ ಕರ್ನಾಟಕದ ಬಗೆಗಿನ ನಿಮ್ಮ ಕಲ್ಪನೆಗೆ ಚ್ಯುತಿಬರುತ್ತದೆ. ಚಿಕ್ಕಕೋಡಿಸಂದ್ರದ ವೆಂಕಟಶಿವ ರೆಡ್ಡಿ, ತಾನೊಂದು BMW ಖರೀದಿಸಿ ತನ್ನ ಮಗಳಿಗೊಂದು ಕೊಡಿಸುತ್ತಾನೆ. ನನಗೆ ಯಾಕೆ 7 ಸಿರೀಸ್‌ ತೆಕ್ಕೊಡಲ್ಲ ಅಂತ ಮಡದಿ ಮುನಿಯಮ್ಮ ಕೋಪಮಾಡಿಕೊಂಡು ಹಳೆಯ ಫೋರ್ಡ್‌ ಕಾರನಲ್ಲೇ ಶಾಪರ್ಸ್‌ ಸ್ಟಾಪ್‌ಗೆ ಹೋಗುವಂತೆ ಡ್ರೆೃವರ್‌ಗೆ ಏಕ್‌ದಂ ಗದರಿಸುತ್ತಾಳೆ.
  • ವೋಕ್ಸ್‌ವ್ಯಾಗನ್‌ನವರು ತಮ್ಮ ಪಾಸಾಟ್‌ ಕಾರನ್ನು ಹಿತ್ತಲ ಬಾಗಿಲಿಂದ ಬಿಡುಗಡೆಗೊಳಿಸಲು ಪ್ಲಾನ್‌ ಹಾಕಿದ್ದಾರೆ. 2007ರ ನಡುಗಾಲದಲ್ಲಿ ಆಮದು ಕೆಟಗರಿಯಲ್ಲಿ ನೀವೀಕಾರನ್ನು ಕೊಂಡುಕೊಳ್ಳಬಹುದು. ಅಕಸ್ಮಾತ್‌ ಈ ಕಾರು ಅಷ್ಟುಇಷ್ಟ ಆಗದಿದ್ದರೆ ಪ್ಲೀಸ್‌ ವೇಯಿಟ್‌, ಡೈಮರ್‌ ಕ್ರೆೃಸ್ಲರ್‌ ಅವರ M ಕ್ಲಾಸ್‌ ಪೀಂಪೀಂ ಎನ್ನುತ್ತದೆ.
  • ಫಿಯಟ್‌ ಕಾರ್‌ ಬಗ್ಗೆ ನನಗಂತೂ ತುಂಬಾ ಆಶ್ಟರ್ಯ ಆಗುತ್ತೇರಿ. ನಾವು ಚಿಕ್ಕವರಿದ್ದಾಗ ನೋಡಿದ್ದು ಮೂರೇ ಕಾರು. ಸ್ಟಾಂಡರ್ಡ್‌, ಫಿಯಟ್‌ ಮತ್ತು ಅಂಬೊಡೆಸಾರ್‌(ಅಂಬಾಸಿಡರ್‌). ಸ್ಟಾಂಡರ್ಡ್‌ ಮತ್ತು ಹಿಂದೂಸ್ತಾನ್‌ ಮೋಟಾರ್ಸ್‌ನ ಅಂಬಾಸಿಡರ್‌ ನಶಿಸಿಹೋದರೂ ಫಿಯಟ್‌ ಮಾತ್ರ ಅಂಗೂಇಂಗೂ ಮಾರುಕಟ್ಟೆಯಲ್ಲಿ ತಳ್ಳಾಡಿಕೊಂಡಿದೆ. ಫಿಯಟ್‌ನವರ ಪೆಟ್ರಾ ಹೊಸರೂಪದಲ್ಲಿ ಬರತ್ತೆ. ಹಾಗೂ ಫಿಯಟ್‌ ಮಾತ್ರ ಇಷ್ಟಪಡುವ ಒಂದು ವರ್ಗ, ಭಾರತದಲ್ಲಿ ಇನ್ನೂ ಇದೆ. ಅವರೆಲ್ಲ ಗ್ರಾಂಡ್‌ ಪುಂಟೊ ರಸ್ತೆಗಿಳಿಯುವುದನ್ನೇ ಕಾಯುತ್ತಿದ್ದಾರೆ...
ನೀವೂ ಹೊಸಕಾರೊಂದನ್ನು ತೊಗೋಳಿ. ಹೊಸ ಬೀಡೊಂದನ್ನು ಕಟ್ಟಿಕೊಳ್ಳಿ. ಎಲ್ಲಾದರೂ ಇರಿ ಎಂತಾದರೂ ಇರಿ ಚೆನ್ನಾಗಿರಿ. ಸಿವಿಕ್‌ ಅಮೆನಿಟೀಸ್‌ಗೆ, ಇನ್‌ಫ್ರಾಸ್ಟ್ರಕ್ಚರ್‌ಗೆ, ವಾಯುಮಾಲಿನ್ಯಕ್ಕೆ ಗೋಲಿ ಹೊಡೆಯಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X