ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌.ಕೆ ಶಾಮಸುಂದರ

By Staff
|
Google Oneindia Kannada News

ಷೇರು ಬೆಲೆ ಥರ ಅಡಕೆ ಬೆಲೆ ಇನ್ನೂ ಏರತ್ತೆ, ಇನ್ನೂ ಜಿಗಿಯತ್ತೆ ಆಮೇಲೆ ಕೊಡೋಣ ಅಂದುಕೊಳ್ಳುತ್ತಾ ನೀವು ಕಾಯುವುದು ಬೇಡ. ಬೆಲೆ ಸಿಕ್ಕಾಗ ಮೂಟೆಗಳನ್ನು ಮಾರುಕಟ್ಟೆಗೆ ಹಾಕಿ, ಗಾಳಿ ಬಂದಾಗ ತೂರಿಕೊಳ್ಳಿ. ಮುಂದಿನ ವರ್ಷ ಮತ್ತೆ ಗೊನೆ ತೂಗುವುವವರೆಗೆ ಕಾಯೋಣಂತೆ!

S.K.Shama Sundara ಎಸ್‌.ಕೆ ಶಾಮಸುಂದರ
[email protected]

Areca ಏಳು ಬೀಳಿನ ಆಟಕ್ಕೆ ಸದಾ ಗುರಿಯಾಗುವ ತೋಟದ ಬೆಳೆಗಳಲ್ಲಿ ಅಡಕೆ ಅಗ್ರಗಣ್ಯ. ಪಾಪಿಯೂ ಇವನೇ, ಪುಣ್ಯವಂತನೂ ಇವನೇ. ಅಡಕೆಯೆಂಬ ಮಾಯಗಾರನ ಬೆಲೆ ಸೆಪ್ಟೆಂಬರ್‌ 26ರ ಮಂಗಳವಾರ ಇದ್ದಕ್ಕಿದ್ದಂತೆ ಗಗನಕ್ಕೆ ಏರಿ ಬೆಳೆಯುವವನನ್ನೂ, ದಳ್ಳಾಳಿಯನ್ನೂ, ಪಾನ್‌ಪರಾಗ್‌ ಉದ್ಯಮವನ್ನೂ, ತಾಂಬೂಲ ಜಗಿಯುವವರನ್ನೂ ಏಕಕಾಲಕ್ಕೆ ಚಕಿತಗೊಳಿಸಿದೆ.

ಒಮ್ಮೆ ನಗು ಮಗದೊಮ್ಮೆ ಅಳು ತರಿಸುವ ಅಡಕೆಯ ಬೆಲೆಯ ಈ ಏರಿಕೆಯಿಂದ ಕೆಲವರಾದರೂ ಬೆಳೆಗಾರರ ಮುಖದಲ್ಲಿ ಸಂತಸ ಮೂಡಿದ್ದರೆ ಅಚ್ಚರಿಯಿಲ್ಲ. ನಿಮಗೇನನ್ನಿಸಿತೊ? ಅಡಕೆ, ಕಾಫಿ ಸಮಾಚಾರ ಬಿಟ್ಟು ಬಹಳ ವರ್ಷವಾಯ್ತು ಮಾರಾಯ್ರೆ, ಈಗ ನಾವೆಲ್ಲ ವೆನಿಲಾ ಜನ ಅಂತೀರಾ?

ಅಡಕೆ ಕೇವಲ ಒಂದು ಬೆಳೆಯಲ್ಲ. ಅಪ್ಪ ಹಾಕಿದ ಗಿಡಗಳಿಂದ ಉದುರುವ ಕಾಂಚಾಣವೂ ಅಲ್ಲ. ಅದೊಂದು ಜೀವನ ಮಾರ್ಗ. ಸಂಪತ್ತು ಮತ್ತು ಆಪತ್ತುಗಳನ್ನು ಯಾವಾಗ ಬೇಕಾದರೂ ತಂದೊಡ್ಡಬಲ್ಲ ಸಾಧನ. ಅಡಕೆಯ ಜತೆಯೇ ಬೆಳೆದವರಾಗಿದ್ದರೆ ನೀವು ಎಲ್ಲೋ ಒಂದು ಕಡೆ ತತ್ವಜ್ಞಾನಿಗಳಾಗಿರುತ್ತೀರ ಖಂಡಿತ.

ಅಡಕೆಯನ್ನು ಬೆಳೆದವರಿಗೆ ಅದರ ಸಂಕಷ್ಟಗಳ ನಿಕಟ ಪರಿಚಯ ಇರುತ್ತದೆ. ಮೊದಲು ಕೆಲಸಗಾರರು ಸಿಗುವುದಿಲ್ಲ. ಬೇಕಾಬಿಟ್ಟಿ ಕೂಲಿ ಕೊಟ್ಟರೂ ಈ ಕಾಲದ ಕೆಲಸಗಾರರು ಮಾಡುವ ಕೆಲಸವೂ ಬೇಕಾಬಿಟ್ಟಿ. ಕೆಲಸ-ಸಂಬಳ-ಯಜಮಾನ ಯಾರಿಗೂ ಗೌರವ ಕೊಡದ ಈ ಕಾಲದಲ್ಲಿ ಕೆಲಸಗಾರರನ್ನು ನಂಬಿ ತೋಟ ಸಿಂಗಾರ ಮಾಡುವುದು ತುಂಬಾ ಕಷ್ಟ.

ಕೆಲಸಗಾರರಷ್ಟೇ ಅಲ್ಲ, ಮನೆಯಲ್ಲೂ ಕೂಡ ಯಾರಿಗೂ ತೋಟದ ಉಸಾಬರಿ ಬೇಡ. ಅಣ್ಣ ತಮ್ಮಂದಿರು ಉನ್ನತ ವ್ಯಾಸಂಗ ಮಾಡಿ ಊರು ಬಿಡುತ್ತಾರೆ. ಕೆಲವರು ದೇಶವನ್ನೇ ತೊರೆಯುತ್ತಾರೆ. ಆದರೆ, ಮನೆಯಲ್ಲೇ ಮಾರು ಕಂಡುಕೊಳ್ಳಲು ತೀರ್ಮಾನಿಸಿದ ಶೀನನಿಗೆ ಮಾತ್ರ ಬದುಕು ಗೋಜಲಾಗಿರುತ್ತದೆ. ಅಡಕೆ ಮಾರಿ ದುಡ್ಡು ಬಂದಾಗ ಹೆಣ್ಣು ಮಕ್ಕಳಿಗೆ ಚಿನ್ನ, ಗಂಡು ಮಕ್ಕಳಿಗೆ ಹೊಸ ಜೀಪು, ತಂದೆಗೆ ಸಮಾಧಾನ ಮಾಡುವುದಕ್ಕಾಗಿ ರುದ್ರ ಹೋಮ ಮಾಡುವುದರ ಮೂಲಕ ಎಲ್ಲರನ್ನೂ ಸಂತುಷ್ಟಗೊಳಿಸಬೇಕು. ಎಸ್‌ಎಸ್‌ಎಲ್‌ಸಿ ಆದ ನಂತರ ಮನೆಯಲ್ಲೇ ಉಳಿದುಕೊಂಡು ಕಳ್ಳಕಾಕರ ಮಧ್ಯೆ ಕೃಷಿಯನ್ನೇ ನಂಬಿ ಬದುಕುತ್ತಿರುವ ಶೀನನ ಹೆಣ ಮಾತ್ರ ಆಗಾಗ ಬಿದ್ದು ಹೋಗುತ್ತಿರುತ್ತದೆ.

ಖರ್ಜೂರದ ಗಿಡಗಳನ್ನು ಮಾತ್ರ ಒಡಲಲ್ಲಿ ತುಂಬಿಕೊಡ ಒಮಾನ್‌ ದೇಶದಲ್ಲಿ ಒಂದು ಗಾದೆ ಮಾತಿದೆ. ‘ಆತನೆತ್ತರವೋ ಖರ್ಜೂರದ ಗಿಡದಷ್ಟು, ಬುದ್ದಿ ಮಾತ್ರ ಅದರ ಬೀಜದಷ್ಟು’ : ಈ ಮಾತು ಕರ್ನಾಟಕದಲ್ಲಿ ಅಡಕೆ ಬೆಳೆಯುವವರಿಗೂ ಅನ್ವಯಿಸತ್ತೆ. ಬುದ್ಧಿವಂತರಾದರೆ ಬೆಳೆಗಾರರು ಬದುಕುತ್ತಾರೆ. ಬುದ್ದಿವಂತರು ಬಹಳಿಲ್ಲ. ಬೆಲೆ ಏರಿದಾಗ ಅಡಕೆ ಮಾರಿ ಆಪತ್ತಿನ ಕಾಲಕ್ಕೆ ದುಡ್ಡು ಕೂಡಿಟ್ಟವನೇ ಜಾಣ. ನಾಳೆ ಹೇಗೋ ಏನೋ ಎನ್ನುವ ಭಯ ಇಲ್ಲದಿದ್ದರೆ ಹೋಗುವುದು ಅಡಕೆಯ ಮಾನವಲ್ಲ, ಮನೆತನದ ಮರ್ಯಾದೆ!

ಶಿವಮೊಗ್ಗದ ಮಾರುಕಟ್ಟೆಯಲ್ಲಿ ನಿನ್ನೆ ಅಡಕೆಯ ಬೆಲೆ 25.000 ರೂ. ತಲುಪಿತ್ತು. ಇದೊಂದು ಐತಿಹಾಸಿಕ ಬೆಲೆ ಎನ್ನುತ್ತಾರೆ ಬೆಳೆಗಾರರು ಮತ್ತು ದಳ್ಳಾಳಿಗಳು. ಆದರೆ ಬೆಟ್ಟೆ ಅಡಕೆ ಬೆಲೆ 19.500 ರೂ.ಗೆ ನಿಂತರೆ ಆಪಿ ಅಡಕೆ ಧಾರಣೆ 20.000 ರೂ. ದಾಟಿತ್ತು. ಶಿರಸಿ ಮಾರುಕಟ್ಟೆಯಲ್ಲಿ ಜಾಲಿ ಅಡಕೆಯ ಬೆಲೆಯೂ ದಿಢೀರ್‌ ಏರಿದ್ದರಿಂದ ಅಡಕೆ ಸಂಸ್ಕೃತಿಯಲ್ಲಿ ಜೀವಿಸುವವರೆಲ್ಲ ಚಕಿತರಾಗಿದ್ದಾರೆ. ಬೆಂಗಳೂರಿನಲ್ಲಿ ಸುಮ್ಮನೆ ಟೈಂ ವೇಸ್ಟ್‌ ಮಾಡಿಕೊಂಡಿದ್ದ ಸೂರ್ಯನಾರಾಯಣ ಐತಾಳರು ಬೆಲೆ ಏರಿಕೆ ಸುದ್ದಿ ಕೇಳಿದಾಕ್ಷಣ ತೀರ್ಥಹಳ್ಳಿಗೆ ಅರ್ಜೆಂಟಾಗಿ ವಾಪಸ್ಸು ಹೋಗಿದ್ದಾರೆ, ನಿನ್ನೆ ರಾತ್ರಿ.

ಷೇರು ಬೆಲೆ ಥರ ಅಡಕೆ ಬೆಲೆ ಇನ್ನೂ ಏರತ್ತೆ , ಇನ್ನೂ ಜಿಗಿಯತ್ತೆ ಆಮೇಲೆ ಕೊಡೋಣ ಅಂದುಕೊಳ್ಳುತ್ತಾ ನೀವು ಕಾಯುವುದು ಬೇಡ. ಬೆಲೆ ಸಿಕ್ಕಾಗ ಮೂಟೆಗಳನ್ನು ಮಾರುಕಟ್ಟೆಗೆ ಹಾಕಿ, ಗಾಳಿ ಬಂದಾಗ ತೂರಿಕೊಳ್ಳಿ. ಮುಂದಿನ ವರ್ಷ ಮತ್ತೆ ಗೊನೆ ತೂಗುವುವವರೆಗೆ ಕಾಯೋಣಂತೆ !

ಪೂರಕ ಓದಿಗೆ :

ಅಡಕೆ ದರದಲ್ಲಿ ಭಾರೀ ಹೆಚ್ಚಳ : ಮಲೆನಾಡಿನಲ್ಲಿ ಸಂತಸ

Thank you for choosing Thatskannada
[email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X