ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಟ್ಸ್‌ಕನ್ನಡ ನೆಟ್ಟಿಗರಿಗೆ ರಾಜ್ಯೋತ್ಸವ ಪ್ರಶಸ್ತಿ!?

By Staff
|
Google Oneindia Kannada News


ಕಾಸಿಗೊಂದು, ಕೊಸರಿಗೊಂದು ಎಂಬಂತೆ ಎಲ್ಲೆಡೆ ಪ್ರಶಸ್ತಿಗಳು ಸಿಗುತ್ತಿವೆ. ಸಾಧಕರಿಗಿಂತಲೂ ಪ್ರಶಸ್ತಿಗಳ ಸಂಖ್ಯೆಯೇ ಹೆಚ್ಚಾದಂತಿದೆ! ಈ ಮಧ್ಯೆ‘ ಪ್ರಶಸ್ತಿ ಸಿಕ್ಕಿದ್ದಾ ಅಥವಾ ಪಡೆದದ್ದಾ?’ ಎಂಬ ಕುಹಕವನ್ನು ಪ್ರಶಸ್ತಿ ವಿಜೇತರು ಎದುರಿಸಬೇಕಾಗಿದೆ!

2006 Rajyotsava Award goes to ThatsKannada netzians!ಕನ್ನಡನಾಡಿನಲ್ಲಿ ಅರ್ಹರನ್ನು ಮಾತ್ರ ಅರಸುತ್ತಾ ಸರಿರಾತ್ರಿಯ ಬೇತಾಳನಂತೆ ಅಂಡಲೆಯುತ್ತಿರುವ ಅನೇಕಾನೇಕ ಪ್ರಶಸ್ತಿಗಳಿವೆ. ಯೋಗ್ಯರನ್ನು ಹುಡುಕಿಕೊಂಡು ಕರ್ನಾಟಕದ ಗಲ್ಲಿಗಲ್ಲಿ ತಿರುಗುತ್ತಿವೆ. ಹೀಗೆ, ಅನಾಥವಾಗಿರುವ ಪ್ರಶಸ್ತಿಗಳಿಗೆ ನೀವು ಯಾವುದಾದರೂ ರೀತಿಯಲ್ಲಿ ಸಹಾಯ ಮಾಡುತ್ತೀರಾ?

ನೃಪತುಂಗನಿಂದ ಮೊದಲಾಗಿ ಕೆಂಪೇಗೌಡನವರೆಗೆ ಅಲ್ಲಿಂದೀಚೆಗೆ ಶ್ರೀರಾಮಪುರಂ 4ನೇ ಕ್ರಾಸ್‌ ಸಿದ್ಧಿವಿನಾಯಕ ಬಳಗದವರು ವಾರ್ಡ್‌ ನಂ 102ರ ಕಾರ್ಪೋರೇಟರ್‌ ಕೆಂಚಣ್ಣನ ಸ್ಮರಣಾರ್ಥ ಯಾರಿಗೆ ಬೇಕಾದರೂ ನೀಡಬಹುದಾದಂತಹ ಪ್ರಶಸ್ತಿಗಳಿವೆ. ಆದರೆ, ಈ ಬಾರಿ ಯಾರಿಗೆ ಕೊಡಬೇಕು, ಯಾರಿಗೆ ಕೊಡಬಾರದು ಎಂಬುದರ ಬಗ್ಗೆ ಪ್ರಶಸ್ತಿ ಆಯ್ಕೆ ಸಮಿತಿಗೆ ಪ್ರತೀವರ್ಷ ಗೊಂದಲ ಉಂಟಾಗುತ್ತದೆ. ಈ ಬಗೆಯ ಕನ್‌ಫೂಷನ್‌ ಹೋಗಲಾಡಿಸಲು ಏನಾದರೂ ಮದ್ದು ಇದೆಯಾ? ನೀವು, ತಿಳಿದವರು ಮಾರ್ಗದರ್ಶನ ನೀಡುವಿರಾ?

‘ಪ್ರಶಸ್ತಿ’ ಎಂಬ ಪದ ಜಿಗುಪ್ಸೆ ಮತ್ತು ಅಸಹ್ಯ ಹುಟ್ಟಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ನಿತ್ಯ ಒಂದಲ್ಲ ಒಂದು ಪ್ರಶಸ್ತಿಯನ್ನು ಯಾರೋ ಕೊಡುತ್ತಿರುತ್ತಾರೆ, ಇನ್ನಾರೋ ಪಡೆದುಕೊಳ್ಳುತ್ತಿರುತ್ತಾರೆ. ಕೊನೆಗೂ ಉಳಿಯುವುದು ನಾವು ಮಾಡಿದ ಒಳ್ಳೆಯ-ಜನೋಪಯೋಗಿ ಕೆಲಸಗಳೇ ಹೊರತು ಪ್ರಶಸ್ತಿಗಳಲ್ಲ ಎಂದು ಮನವರಿಕೆಯಾಗುವ ತನಕ ಪ್ರಶಸ್ತಿ ಪರಾಕುಗಳ ಯುಗ ಸಾಗುತ್ತಲೇ ಇರುತ್ತದೆ. ಸಾವಿರಾರು ಮಂದಿ ದೃಷ್ಟಿಹೀನರಿಗೆ ಡಾ. ಮೋದಿ ಉಚಿತವಾಗಿ ಕಣ್ಣು ಪರೀಕ್ಷೆ , ಶಸ್ತ್ರಚಿಕಿತ್ಸೆ ಮಾಡಿ ಕೊನೆಗೆ ಕಣ್ಣು ಮುಚ್ಚಿದರು. ಅವರಿಗೆ ಪದ್ಮಪ್ರಶಸ್ತಿ ಇಂದ ಚೆಂಡು ಹೂವಿನವರೆಗೆ ಎಲ್ಲ ಪ್ರಶಸ್ತಿಗಳು ಬಂದಿದ್ದವು. ಆಪರೇಷನ್‌ ಮಾಡಿಸಿಕೊಂಡು ಕಣ್ಣು ಸರಿಪಡಿಸಿಕೊಂಡವರು ಮೋದಿಯನ್ನು ಮರೆತರು, ಪ್ರಶಸ್ತಿಗಳನ್ನು ಮನೆಯಲ್ಲೇ ಬಿಟ್ಟು ಮೋದಿ ಸ್ವರ್ಗವಾಸಿಗಳಾದರು. ಈಗ ಆ ಪ್ರಶಸ್ತಿಗಳ ಪರಿಸ್ಥಿತಿ ಏನು? ಅವುಗಳ ಆಯಸ್ಸು ಅಷ್ಟೇನಾ?

ಪ್ರಶಸ್ತಿಗಳನ್ನು ತೆಗೆದುಕೊಂಡು ಜನ ಏನು ಮಾಡುತ್ತಾರೆ? ನನಗೆ ಗೊತ್ತಿಲ್ಲ .ಬಿನ್ನವತ್ತಳೆಗೆ ಚಿನ್ನದ ಬಣ್ಣದ ಗಿಲಾವ್‌ ಇರುವ ಫ್ರೇಂ ಹಾಕಿಸಿ ಎದುರು ಗೋಡೆಗೆ ನೇತು ಹಾಕಿರುತ್ತಾರೆ. ಮನೆಗೆ ಬಂದವರು ಫೋಟೋ ನೋಡಿ ಓಹೋ ಇವರು ಇಷ್ಟು ದೊಡ್ಡ ಮನುಷ್ಯರಾ ಎಂದು ಅಮಾಯಕರು ಹುಬ್ಬೇರಿಸುತ್ತಾರೆ. ಪ್ರಶಸ್ತಿ-ಗಿಶಸ್ತಿಗಳ ಬಗ್ಗೆ ಸ್ವಲ್ಪ ಅರಿತವರು ಸಣ್ಣಗೆ ನಕ್ಕು ಮಾತು-ನೋಟ ಬದಲಾಯಿಸುತ್ತಾರೆ. ಅಷ್ಟರ ಮಟ್ಟಿಗೆ ಇವತ್ತು ಕರ್ನಾಟಕದಲ್ಲಿ ಪ್ರಶಸ್ತಿಗಳು ಸಸ್ತಾ ಎನಿಸಿಬಿಟ್ಟಿದೆ. ಸಾವಿರಾರು ಪ್ರಶಸ್ತಿಗಳು, ಸಾವಿರಾರು ಸಂಘ ಸಂಸ್ಥೆಗಳು, ಲಕ್ಷಾಂತರ ಮಂದಿ ಸಾಧಕರು, ಸಾಧಕಿಯರು. ಕರ್ನಾಟಕದ ಪ್ರತಿಯಾಬ್ಬ ಪ್ರಜೆಗೂ ಒಂದಲ್ಲ ಒಂದು ಪ್ರಶಸ್ತಿ ಕೊಟ್ಟರೂ ಇನ್ನೂ ಉಳಿಯುವಷ್ಟು ಪ್ರಶಸ್ತಿಗಳು ಉಗ್ರಾಣದಲ್ಲಿ ದಾಸ್ತಾನಿದೆ. ಅವನ್ನೆಲ್ಲ ಏನು ಮಾಡುವುದು?

ಚಿಂತಿಸಬೇಕಾಗಿಲ್ಲ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಯಾರಿಗಾದರೂ ಕೊಟ್ಟರಾಯಿತು ಅದಕ್ಕೇನಂತೆ ಎಂದು ನೀವು ಚಟಾಕಿ ಹಾರಿಸಬಹುದು. ಪಟಾಕಿಹಬ್ಬದ ಈ ನಾಲ್ಕು ದಿವಸಗಳಲ್ಲಿ ಶಬ್ದ ಕೇಳಿ ಕೇಳಿ ತಲೆ ಚಿಟ್ಟುಹಿಡಿದು ಹೋಗಿರುವುದರಿಂದ ಚಟಾಕಿಗಳನ್ನು ಕೇಳಿ ಆನಂದಿಸುವ ಮನೋಸ್ಥಿತಿಯಲ್ಲಿ ನಾನಿವತ್ತು ಇಲ್ಲವಾದ್ದರಿಂದ ನೇರವಾಗಿ ವಿಷಯಕ್ಕೆ ಬರುತ್ತೇನೆ.

ಸಮಾಜದಲ್ಲಿ ನಮಗೆ ಕೆಲವು ಬಗೆಯ ಜನ ಕಾಣಸಿಗುತ್ತಾರೆ. ಅವರ ಕೆಟಗರಿಗಳು ಇಂತಿವೆ :

  • ಏನನ್ನೂ ಸಾಧನೆ ಅಂದುಕೊಳ್ಳದೆ ಮಾಡಿಮುಗಿಸಿ ಸಂತೋಷಿಸುವವರು, ಪ್ರಶಸ್ತಿ ನಿರೀಕ್ಷೆಯನ್ನೂ ಇಟ್ಟುಕೊಳ್ಳದವರು - ಸಿಂಪಲ್‌
  • ತಾವು ಮಾಡಿದ್ದೇ ಅಪಾರ ಆದ್ದರಿಂದ ತಮಗೆ ಪ್ರಶಸ್ತಿ ಕಟ್ಟಿಟ್ಟಬುತ್ತಿ ಎಂದು ಬೀಗುವವರು-ಕಾಂಪ್ಲಿಕೇಟೆಡ್‌
  • ಸಾಧಕರು, ಆದರೆ ಪ್ರಶಸ್ತಿ ಎಂದರೆ ಏನು? ಯಾವುದು? ಯಾರು ಕೊಡುತ್ತಾರೆ? ಎಂದು ಗೊತ್ತಿಲ್ಲದ ಭೋಳೆ ಸ್ವಭಾವದವರು- ಕೂಲ್‌!
  • ಹೊಟ್ಟೆ ಪಾಡಿಗೆ ಕೆಲಸಮಾಡಿ ಪ್ರಶಸ್ತಿಗಾಗಿ ಶತಾಯಗತಾಯ ಹೋರಾಡುವವರು -ಡೇಂಜರಸ್‌
ಮೇಲೆ ತಿಳಿಸಿದ ನಾಲಕ್ಕು ವಿಭಾಗಗಳಲ್ಲಿ ಮೊದಲನೆ ಪೈಕಿಗೆ ಸೇರಿದ ಅಲ್ಪ ಸಂಖ್ಯಾತರಿಗೆ ನನ್ನ ಶುಭಕಾಮನೆಗಳು ಸಲ್ಲುತ್ತವೆ.

ಲಾಸ್ಟ್‌ ಕಿಕ್‌ :

ಕಳೆದ ಏಳು ವರ್ಷಗಳಿಂದ ಪ್ರಶಸ್ತಿ ವಿವಾದಗಳನ್ನು ಕೇಳಿ ಕೇಳಿ ಓದಿ ಓದಿ ಬೇಸತ್ತಿದ್ದರೂ ತಮ್ಮ ಅಸಮಾಧಾನವನ್ನು ಸ್ವಲ್ಪವೂ ತೋರಿಸಿಕೊಳ್ಳದೆ ಸಮಚಿತ್ತದಿಂದ ತಣ್ಣಗಿರುವ ದಟ್ಸ್‌ಕನ್ನಡ ಓದುಗ ಬಂಧು-ಭಗಿನಿಯರಿಗೆ, ಈ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸತತ ಏಳನೇ ಬಾರಿಗೆ ಕೊಡಮಾಡಲಾಗಿದೆ ಎಂದು ಈ ಮೂಲಕ ತಿಳಿಸಲು ಹರ್ಷವಾಗುತ್ತದೆ -ಸಂಪಾದಕ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X