ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈತ ಕನ್ನಡ ಪ್ರೇಮಿ! ಜೊತೆಗೆ ಜಯಲಲಿತಾ ಭಕ್ತ!

By Staff
|
Google Oneindia Kannada News


ಜಯಲಲಿತಾ ಪಕ್ಷದ ಬಂಟ, ಅಪ್ಪಟ ಕನ್ನಡಿಗ. ಕಚೇರಿಯಲ್ಲಿ ಎದುರಿಗೆ ಕೂತು ಈತ ಜಯಲಲಿತಾ, ರಾಜಕಾರಣ, ಕನ್ನಡ ಸಾಹಿತ್ಯ, ಕನ್ನಡ ಪ್ರೀತಿ, ಕನ್ನಡ ಚಳವಳಿ, ತಮಿಳರ ಶ್ರಮ ಎಂದು ಮಾತಾಡುತ್ತಲೇ ಇದ್ದರು.

(ಹಿಂದಿನ ಪುಟದಿಂದ)

ಕನ್ನಡಕ್ಕಾಗಿ ಜೈಲು :

Krishna Raju under custody of policeಭಾರತದಲ್ಲಿ ನ್ಯಾಯ ನಿಷ್ಕರ್ಷೆ ನಿಧಾನ ಅಂತ ಯಾರು ಹೇಳಿದ್ದು? ರಾಜು ಅವರ ಕೇಸು ಆರೇ ವರ್ಷಗಳಲ್ಲಿ ಬಗೆಹರಿಯಿತು. ಬೆಂಗಳೂರು ಮೆಟ್ರೋಪಾಲಿಟನ್‌ ನ್ಯಾಯಮೂರ್ತಿ ಸನ್ಮಾನ್ಯ ಬೂತೆ ಅವರು 07/10/06ರಂದು ಇವರ ಕೇಸಿನ ವಿಚಾರಣೆ ನಡೆಸಿ ರಾಜು ಮತ್ತವರ ಗೆಳೆಯರಿಗೆ 200 ರೂಪಾಯಿ ದಂಡ ವಿಧಿಸಿದರು.

‘ಕನ್ನಡಕ್ಕಾಗಿ ನಾನು ಹೋರಾಡಿದ್ದು, ಅಪರಾಧವನ್ನೇನೂ ಮಾಡಿಲ್ಲ ಆದ್ದರಿಂದ ಒಂದು ರೂಪಾಯಿನೂ ಕಟ್ಟುವುದಿಲ್ಲ ’ ಎಂದು ರಾಜು ಕೋರ್ಟಿಗೆ ತಿಳಿಸಿದರು. ಅದಕ್ಕೆ ನ್ಯಾಯಮೂರ್ತಿಗಳು ದುಡ್ಡು ಕಟ್ಟದಿದ್ದರೆ ಐದು ದಿವಸ ಜೈಲಿಗೆ ಹೋಗು ಎಂದರು. ರಾಜು ‘ಜೀ ಹುಜೂರ್‌’ ಎಂದರು. ಪರಪ್ಪನ ಅಗ್ರಹಾರ ಸೆರೆಮನೆಯಲ್ಲಿ ಐದು ದಿವಸ ಇದ್ದು ಅಕ್ಟೋಬರ್‌ 11ರಂದು ಬಿಡುಗಡೆ ಆದರು.

ಎಂಜಿಆರ್‌ ದೊಡ್ಡತನ :

ರಾಜು ಸಂಗಡ ಮಾತನಾಡುತ್ತಾ ಹೋದರೆ ತುಂಬಾ ಸ್ವಾರಸ್ಯವಾದ ಉಪಕತೆಗಳು ಸಿಗುತ್ತವೆ. ನವ್ಯ, ನವೋದಯ, ಬಂಡಾಯ ಸಾಹಿತ್ಯದ ಮಜಲುಗಳನ್ನು ಉದ್ವಿಗ್ನಗೊಳ್ಳದೆ ಹೇಳುತ್ತಾರೆ. ಪ್ರಗತಿಶೀಲ ಚಳವಳಿಯ ಅನಕೃ, ಮ.ರಾಮಮೂರ್ತಿ ಅವರ ಒಡನಾಟದ ರಸನಿಮಿಷಗಳನ್ನು ಮೆಲಕುಹಾಕುತ್ತಾರೆ. ಗೋಕಾಕ್‌ ಚಳವಳಿಯಲ್ಲಿ ಚಾಮರಾಜಪೇಟೆ ಗೋಲಿಬಾರ್‌ನಲ್ಲಿ ಅಸುನೀಗಿದ ಅರಸಪ್ಪನಿಗೆ ಎಂಜಿಆರ್‌ ಆಗಿನ ಕಾಲಕ್ಕೇ 15 ಸಾವಿರ ರೂಪಾಯಿ ಕೊಟ್ಟಿದ್ದನ್ನು ಹೇಳುತ್ತಾರೆ.

ಮುಖ್ಯಮಂತ್ರಿ ಆದ ಒಂದು ತಿಂಗಳಿಗೆ ‘ನಡಿಗರ ತಿಲಕಂ’ ಬೆಂಗಳೂರಿಗೆ ಕಾರಲ್ಲಿ ಬಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರೀತಿಯಿಂದ ಭಾಗವಹಿಸಿದ್ದನ್ನು ಸ್ಮರಿಸಿಕೊಳ್ಳುತ್ತಾರೆ. ‘ಎಲ್ಲಾ ವಿಚಾರಕ್ಕೂ ಕಾವೇರಿ ನೀರನ್ನೇ ಮಾನದಂಡವಾಗಿ ಮಾಡಬಾರದು ಸಾರ್‌ ಅದರಿಂದ ಏನ್‌ ಪ್ರಯೋಜನ’ ಎಂದು ಕೇಳುತ್ತಾರೆ.

ಕಾವೇರಿ ಸಮಸ್ಯೆ :

ಕಾವೇರಿ ನೀರಿನ ಕುರಿತು ಕೃಷ್ಣರಾಜು ಅವರ ಅಭಿಪ್ರಾಯ ಹೀಗಿದೆ : ‘ನಾವು ಆಷಾಡಭೂತಿಗಳಲ್ಲ ಸಾರ್‌. ಆಗತ್ತೋ ಬಿಡತ್ತೋ? ಗಂಗಾ-ಕಾವೇರಿ ಜೋಡಣೆ ಆಗಬೇಕು ಎನ್ನುವುದು ನಮ್ಮ ಪಾರ್ಟಿಯ ಘೋಷಣೆ. ಕರ್ನಾಟಕದ ಕಾಂಗ್ರೆಸ್‌ ಮತ್ತು ಬಿಜೆಪಿ ಪಾರ್ಟಿ ಜನ ಕಾವೇರಿ ನೀರು ತಮಿಳುನಾಡಿಗೆ ಬಿಡಬಾರದು ಅಂತಾರೆ. ಆದರೆ ತಮಿಳುನಾಡು ಕಾಂಗ್ರೆಸ್‌ ಮತ್ತು ಬಿಜೆಪಿ ನೀರು ಬಿಡಿ ಅಂತಾರೆ ಇದೆಂಥ ಪಾಲಿಸಿ ಸಾರ್‌? ಒಂದು ನಿಲುವು ಎನ್ನುವುದು ಇವರಿಗೆ ಬೇಡವಾ? ಈ ವಿಚಾರದಲ್ಲಿ ನಮ್ಮ (ಎಐಡಿಎಂಕೆ) ನಿಲುವೇನು ಎಂದು ಅಮ್ಮ ಬಳಿ ಕೇಳಿದೆ. ಅದಕ್ಕೆ ಅವರು ರಾಜು ನಿಮ್ಮ ರಾಜ್ಯದ ಹಿತಾಸಕ್ತಿಗಳಿಗೆ ನೀನು ಹೋರಾಡು, ನೀನು ಅಲ್ಲಿ ಅನ್ನ ತಿನ್ತೀಯ, ನಾನು ನನ್ನ ರಾಜ್ಯದ ಹಿತಾಸಕ್ತಿಗೆ ಬಡಿದಾಡುತ್ತೀನಿ ನಾನು ಸಾಪಾಟು ಮಾಡುವುದು ಇಲ್ಲಿ ತಾನೆ? ಅಂದರು.’

‘ರಾಜಕೀಯ ಸಿದ್ಧಾಂತ ಒಬ್ಬೊಬ್ಬರದು ಒಂದೊಂದು ರೀತಿ ಇರ್ತದೆ. ನಾನು ಕಟ್ಟಾ ಜಯಲಲಿತಾ ಅಭಿಮಾನಿ, ಆದರೆ ಕನ್ನಡನಾಡಿನ ಕಣಕಣವೂ ನನಗೆ ಪ್ರೀತಿ’ ಎನ್ನುತ್ತಾ ರಾಜು ಅವರು ಇನ್ನೆರಡು ಮಾತು ಸೇರಿಸಿದರು : ‘ಬೆಂಗಳೂರಿನಲ್ಲಿ ಅಷ್ಟೊಂದು ಬಿಲ್ಡಿಂಗ್‌ ಕಟ್ಟುತ್ತಾ ಇದಾರಲ್ಲಾ, ಯಾರು ಸಾರು ಕೆಲಸ ಮಾಡೋರು? ಟೇಕ್‌ ಎನಿ ಬಿಲ್ಡಿಂಗ್‌ ಅಲ್ಲಿ ಕೆಲ್ಸ ಮಾಡೋರು ತಮಿಳು ಕಾರ್ಮಿಕರು ಸಾರ್‌. ಅವರಿಗೆ ಎರಡು ಹೊತ್ತು ಊಟ ಸಾಕು. ಅವರು ತಂಗುವ ಕೊಳಗೇರಿಗಳನ್ನು ಬೇಕಾಬಿಟ್ಟಿ ಖಾಲಿ ಮಾಡಿಸಬಾರದು. ಅವರಿರುವ ಜಾಗಕ್ಕೆ ಪಟ್ಟ ಕೊಡಿ. ಮಲಗೋದಕ್ಕೆ ಜಾಗಕೊಡಿ ಆವಾಗ ನಾವು ಕನ್ನಡಿಗರು ಇನ್ನೂ ದೊಡ್ಡತನ ತೋರಿಸಿದ ಹಾಗೆ ಆಗತ್ತೆ. ಸಹಬಾಳ್ವೆನೇ ನಮ್ಮ ಗುರಿ ಮತ್ತೆಂಥದಿದೆ ಸಾರ್‌’ ಎನ್ನುತ್ತಾ ಕೃಷ್ಣರಾಜು ಕರೀ ರೆಕ್ಸೀನು ಬ್ಯಾಗ್‌ ಹಿಡಿದುಕೊಂಡು ನಮ್ಮ ಕಚೇರಿಯ ಲಿಫ್ಟ್‌ನೊಳಗೆ ಹೋಗಿ ಗ್ರೌಂಡ್‌ ಬಟನ್‌ ಒತ್ತಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X