ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಹಬ್ಬದಲ್ಲಿ ನನ್ನ ನಲ್ಮೆಯ ಕವನಗಳು!

By Staff
|
Google Oneindia Kannada News


ಈ ವರ್ಷದ ಒಂದು ಚಳಿಗಾಲದ ಸಂಜೆ(ಶುಕ್ರವಾರ ಸಂಜೆ 5ಕ್ಕೆ, ಸ್ಥಳ : ರವೀಂದ್ರ ಕಲಾಕ್ಷೇತ್ರ), ನಿಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ಯಲಿದೆ. ಮೆಟ್ರೋ ಹಬ್ಬ-ದಲ್ಲಿ ಮಂಚೇ-ನ-ಹ-ಳ್ಳಿಗೂ ಪಾಲು ಸಿಕ್ಕಿತು ಎಂಬಂತೆ, ಕವಿಗಳ ಕವನಗಳಿಗೆ ವೇದಿಕೆ ಸಿಕ್ಕಿದೆ. ಖ್ಯಾತನಾಮರ ಬಾಯಲ್ಲಿ ಅವರು ಮೆಚ್ಚಿದ ಕವನಗಳನ್ನು ಕೇಳೋದು ಇಷ್ಟ... ತುಸು ಕಷ್ಟ... ನೀವೇನಂತೀರಾ?

ಎಸ್ಕೆ. ಶಾಮಸುಂದರ
[email protected]

ಬೆಂಗಳೂರು : ಮಡಚಿಟ್ಟ ಸ್ವೆಟರ್‌ಗಳು ಚಳಿಗಾಲದಲ್ಲಿ ಕಪಾಟಿನಿಂದ ಹೊರಬರುತ್ತವೆ. ಎದೆಬದಿ ಹುದುಗಿರುವ ಕಲೆಗಳು ಅರಳುವುದಕ್ಕೆ ಶುರುವಾಗುವುದು ಇದೇ ಕಾಲಕ್ಕೆ. ಎಲೆಗಳು ತಂತಾನೆ ಧರೆಗಿಳಿಯುವ ಸಮಯಕ್ಕೆ ಸರಿಯಾಗಿ ನಮ್ಮ ಕಲಾಪ್ರಕಾರಗಳು ಗರಿಗೆದರುವ ಸನ್ನಾಹವೆ ಇದು. ನಡುಮನೆಯಲ್ಲಿ ಮಂಡಿಯೂರಿ ದೇವರನಾಮ ಹಾಡುವ ಕಿಶೋರಿಯ ಹುಮ್ಮಸ್ಸು ಉಸಿರುಬಿಗಿದು ಊದುವ ಬಿಸ್ಮಿಲ್ಲಾರ ತಪಸ್ಸು , ಹಗ್ಗದ ಮೇಲೆ ಸರಿದೂಗಿಸಿಕೊಳ್ಳುತ್ತಾ ಹೆಜ್ಜೆಹಾಕುವ ದೊಂಬರ ಹುಡುಗಿಯ ಕಸರತ್ತು ..ಕಣ್ಣಲ್ಲಿ ಕಣ್ಣಾಗಿ ಕ್ರೋಶ ಹಾಕುತ್ತಾ ಸ್ವೆಟರು ಹೆಣೆಯುವ ಅವಳ ಏಕಾಗ್ರತೆಯನ್ನೆಲ್ಲ ಇದೆ ಮಾಗಿ ಚಳಿ ಹೊದ್ದು ಅನುಭವಿಸಬೇಕು.

ಬೆಂಗಳೂರಿನ ಈ ಚಳಿಯಲ್ಲಿ ನಾನೂ ಅಲ್ಲಲ್ಲಿ ನೋಡಿದೆ. ದೇಶೀ ಕಲೆಗಳನ್ನು ಬೆಳಗಿಸುವ ಬೆಂಗಳೂರು ಹಬ್ಬ ದೇಶೀ ಸಂಸ್ಕೃತಿಯನ್ನು ಮರೆತಿರುವುದು ಹೊರತುಪಡಿಸಿದರೆ ಉಳಿದದ್ದೆಲ್ಲ ಚೆನ್ನಾಗಿದೆ. ಉಳ್ಳವರನ್ನು ರಮಿಸುವ ಹಬ್ಬ ಎಂದು ಕರೆಯಿಸಿಕೊಳ್ಳುವ ಬೆಂಗಳೂರು ಹಬ್ಬ ದಲ್ಲಿ ಬಿರಿಯುತ್ತಿರುವ ಮೊಗ್ಗುಗಳು ನಾವು ಕಾಣದ್ದೇನಲ್ಲ. ಅವೆಲ್ಲವನ್ನೂ ನಾವು ಲಾಲ್‌ಬಾಗಿನ ಗಾಜಿನಮನೆಯಲ್ಲೋ ಇನ್‌ಫೊಸಿಸ್‌ ಕಾಂಪೌಂಡಿನಲ್ಲೊ ಎಲ್ಲೂ ಇಲ್ಲದಿದ್ದರೆ ಟಿವಿಯಾಳಗೆ ನೋಡಿದ್ದೇವೆ. ಹಲವು ಕಡೆ ಟಿಕೆಟು ಕೊಂಡು ಪಡಕೊಂಡ ಸಂತೋಷ ಇಲ್ಲಿ ಪುಕ್ಕಟೆ ಸಿಕ್ಕಿತು ಎನ್ನುವುದ ಬಿಟ್ಟರೆ ಹೊಸ ಪುಳಕ ಮತ್ತೆಲ್ಲಿದೆ?

ಪರಂತು ಡಿಸೆಂಬರ್‌ 3 ರಿಂದ ಸಿಲಿಕಾನ್‌ ವ್ಯಾಲಿಯಾಳಗೆ ನಡೆಯುತ್ತಿರುವ ಬೆಂಗಳೂರು ಹಬ್ಬ ಹಲವು ಬಣ್ಣಗಳ ರಂಗೋಲಿ ಗೆರೆಗಳನ್ನಂತೂ ಎಳೆದುಕೊಂಡಿದೆ. ಝಲ್‌ ಝಲ್‌ ನೃತ್ಯಗಳಿಗೆ , ಇಂಪಾದ ಸಂಗಿತಕ್ಕೆ ಮನ ಸೂರೆಗೊಳ್ಳುವ ನಾಟಕಕ್ಕೆ ..ಆಯೋಜಕರ, ಪ್ರಾಯೋಜಕರ ಮೋಜು..ಮೇಜವಾನಿಗೆ ಲಾಭ ನಷ್ಟದ ತೆಕ್ಕೆಗೆ ತೆರಕೊಂಡಿದೆ.. ಹೀಗೆ ಒಂದು ಊರಮ್ಮನ ಜಾತ್ರೆ ಒಂದು ಶನಿವಾರ ಸಂತೆ ಒಂದು ಫ್ರೆಂಚ್‌ ಕಾರ್ನಿವಾಲ್‌ ರೀತಿಯ ವಾತಾವರಣ ಕಾರ್ಪೋರೇಟ್‌ ವಲಯಕ್ಕೆ ಅನುವುಗೊಂಡಿದೆ. ಇದು ಇಷ್ಟೇನಾ? ನಮಗೇನಿಲ್ಲವಾ? ನಾವು ಬೆಂಗಳೂರಿನಲ್ಲಿದ್ದೂ , ಹಬ್ಬ ಬೆಂಗಳೂರು ಹಬ್ಬ ಎನಿಸಿಕೊಂಡರೂ ನಮ್ಮ ಕನ್ನಡ ಭಾಷೆಗೆ ಕುರಿತಾದದ್ದು ಏನೂ ಇಲ್ಲವಾ? ಬರೀ ಮೋಸ ಎಂದು ಹಳಿಯುತ್ತಿರುವವರು ಒಂದು ಕ್ಷಣ ನಿಧಾನಿಸಬೇಕು.

ವಿಷಯ ಹೀಗೆಲ್ಲ ಇರುವಾಗ ಕರ್ನಾಟಕದ ಘನ ಸರಕಾರ ಮತ್ತು ಬೆಂಗಳೂರು ಹಬ್ಬದ ಆಯೋಜಕರು ಜಂಟಿಯಾಗಿ ಕನ್ನಡ ಕವನ ವಾಚನ ಕಾರ್ಯಕ್ರಮವನ್ನು ಸಾದರಪಡಿಸುತ್ತಿರುವ ಸಮಾಚಾರ ಇವತ್ತು ಇಮೇಲ್‌ನೊಳಗೆ ಬಂದಿದೆ. ಅಂತೂ ಮೆಟ್ರೋ ಹಬ್ಬದಲ್ಲಿ ಮಂಚೇನಹಳ್ಳಿಗೂ ಪಾಲು ಸಿಕ್ಕಂತಾಯಿತು. ಇರಲಿ. ಕವಿಗಳು, ಕವನಾಸಕ್ತರು ಗಮನಿಸಬೇಕು ; ಕವನ ವಾಚನದ ಈ ಹಬ್ಬಕ್ಕೆ ಒಂದು ವಚನ;

ನನ್ನ ನೆಚ್ಚಿನ ಕವಿತೆ !

ಮೋರ್‌ ದಿ ಮೆರಿಯರ್‌..ಈ ಕಾರ್ಯಕ್ರಮಕ್ಕೆ ಕನ್ನಡ ಕಾವ್ಯ ಪ್ರಪಂಚದಲ್ಲಿ ಆಸಕ್ತಿ ಇರದವರು ಕೂಡ ಪಾಲ್ಗೊಳ್ಳಬಹುದು. ಅದಕ್ಕೊಂದು ಕಾರಣವಿದೆ. ಕನ್ನಡ ಸಾಹಿತ್ಯ ಅದರಲ್ಲೂ ಕನ್ನಡ ಕವನ ಪ್ರಪಂಚದ ಪರಿಮಳಗೊತ್ತಿಲ್ಲದರು ಆದರೆ ಹೆಸರಾಂತ ವ್ಯಕ್ತಿಗಳು ಕನ್ನಡ ಕವನ ವಾಚಿಸುತ್ತಿರುವುದರಿಂದ ನೀವು ಅವರ ಅಭಿಮಾನಿಗಳಾಗಿದ್ದರೆ ಸೀದಾ ಅಲ್ಲಿಗೆ ಹೊಗಿ ಅವರ ನಲ್ಮೆಯ ಕವನವನ್ನು ಕೇಳಿಕೊಂಡು ಬರಬಹುದು. ಸೂಚನೆ : ನಿಧಾನ ಮಾಡಿದರೆ ಕುರ್ಚಿ ಸಿಗುವುದಿಲ್ಲ, ಮುಂಚಿತವಾಗಿ ಅಲ್ಲಿರಬೇಕು..

ಕವನ ಓದುವವರ ಪಟ್ಟಿ ಸ್ವಾರಸ್ಯ ಮೂಡಿಸುತ್ತದೆ. ತಮ್ಮ ಅನುದಿನದ ಕೆಲಸ ಕಾರ್ಪಣ್ಯಗಳನ್ನು ನುಂಗಿಕೊಂಡು ಇವರೆಲ್ಲ ಕವನ ಓದುವ ಕಾಯಕಕ್ಕೆ ಬಾಯಿ ಹಾಕುತ್ತಿರುವುದು ತಮಾಷೆಯಾಗಿರುತ್ತದೆ.

ಮ್ಯಾನೇಜ್‌ಮೆಂಟ್‌ ಗುರು ಮತ್ತು ಆಂಟಿ ಬುಲ್‌ ಶಿಟ್‌ ಕ್ರುಸೇಡರ್‌ ( ಹಾಗಂದರೇನು?) ಎನಿಸಿಕೊಂಡ ರಾಜೀವ್‌ ಗೌಡ, ನಟರತ್ನಾಕರ ಮಾಸ್ಟರ್‌ ಹಿರಣ್ಣಯ್ಯ, ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ ಪ್ರೊಫೆಸರ್‌ ಕಂ ಅನ್‌ಎಂಪ್ಲಾಯ್ಡ್‌ ರಾಜಕಾರಣಿ ಬಿ.ಕೆ. ಚಂದ್ರಶೇಖರ್‌, ಸಕಲಕಲಾವಲ್ಲಭ ರವಿ ಬೆಳಗೆರೆ, ಚಿತ್ರಕಲಾವಿದೆ ಪುಷ್ಪಮಾಲಾ, ಕುಣಿಯುವದ ಬಿಟ್ಟು ಓದಲು ಬರುತ್ತಿರುವ ಪ್ರತಿಭಾ ಪ್ರಹ್ಲಾದ್‌, ತನ್ನ ಹಾಡಿಗೆ ತಾನೆ ನಲಿವ ಪ್ರತಿಭಾ ಅವರೆಲ್ಲ ತಮ್ಮ ತಮ್ಮ ನಲ್ಮೆಯ ಕವನ ಓದುತ್ತಾರೆ ನೀವು ಕೇಳಲೇಬೇಕು.

ನಿಸ್ಸೀಮ ಕವಿ ಮತ್ತು ಕಾವ್ಯವಾಚನ ಚತುರ ಚಂದ್ರಶೇಖರ ಕಂಬಾರರು ಅಧ್ಯಕ್ಷತೆ ವಹಿಸುವ ಚಳಿಗಾಲದ ಸಂಜೆಯ ಸಭೆಗೆ ನೀವೂ ಬರಬೇಕು ಎನ್ನುತ್ತಾರೆ ಎಂ. ವಿಠಲಮೂರ್ತಿ ಮತ್ತು ನಂದಿನಿ ಆಳ್ವ.

ಕವನ ಓದುವವರ ಸಂಕ್ಷಿಪ್ತ ಪಟ್ಟಿ ಹೀಗಿದೆ :

ನಾಗಾಭರಣ-ವಿಶ್ವೇಶ್ವರ ಭಟ್‌-ಪೂರ್ಣಿಮಾ ವ್ಯಾಸಲು-ಐ.ಎಂ. ವಿಠಲಮೂರ್ತಿ-ಕೀರ್ತನಾ ರೆಡ್ಡಿ-ಕಿ.ರಂ.ನಾಗರಾಜ-ಮಹೇಶ್‌ ಜೋಶಿ-ಡಾ.ಯಲ್ಲಪ್ಪ ರೆಡ್ಡಿ-ಡಾ. ಪದ್ಮಿನಿ ಪ್ರಸಾದ್‌-ಎಸ್‌.ದಿವಾಕರ್‌- ಪ್ರತಿಭಾನಂದಕುಮಾರ್‌-ಎಚ್‌.ಎಸ್‌. ವೆಂಕಟೇಶಮೂರ್ತಿ-ಎಚ್‌.ಎನ್‌. ಆರತಿ ಮತ್ತಿತರರು.

ನಿಮ್ಮ ಹಾಗೆ ನನಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಕವನ ಓದಬೇಕೆಂದು ಆಸೆ. ಆದರೆ ನಾನು ನೀವು ಗಣ್ಯರಲ್ಲರಾದ್ದರಿಂದ ಅಲ್ಲಿ ಆಸ್ಪದವಿಲ್ಲ. ಆದ್ದರಿಂದ ನಮ್ಮ ನಮ್ಮ ಮೆಚ್ಚಿನ ಕವನಗಳನ್ನು ನಮ್ಮ ಮನೆಯಂಗಳದಲ್ಲಿ, ಗೆಳೆಯರ ಬಳಗದಲ್ಲಿ ಓದಿಕೊಳ್ಳೋಣವಂತೆ. ಕಂಬಾರರು ಬರೆದ ನನ್ನ ನಲ್ಮೆಯ ಕವನದ ನಾಕು ಸಾಲುಗಳನ್ನು ಇಲ್ಲಿ ಬರೆದಿದ್ದೇನೆ. ನಾನು ಅದನ್ನು ಓದಿಕೊಳ್ಳುತ್ತೇನೆ. ಅಂದಹಾಗೆ, ನಿಮ್ಮ ನಲ್ಮೆಯ ಕವನ ಯಾವುದು?

ಬರಗಾಲ ಬಂತೆಂದು ಬರವೆನೋ ಹಾಡಿಗೆ
ಮನಸಿಗೆ ನಿನ್ನ ಕನಸಿಗೆ।
ಹರಿಯುವ ಹಾಡನ್ನ ಕತ್ತಲ್ಲಿ ಅಮುಕದೆ
ಬಿಡಬೇಕೋ ತಮ್ಮಾ ಬಯಲಿಗೆ।
ಆಕಾಶದಲ್ಲಿ ಕೊನೆ ನಕ್ಷತ್ರ ಇರುವತನಕ
ಕನಸು ಇರತಾವಂತ ಹಾಡಬೇಕೋ।।

ಕ್ಷಿತಿಜದ ಕಣ್ಣಲ್ಲಿ ಬೆಳಕು ಹೊಳೆಯೋ ಹಾಂಗ
ಹಾಡಬೇಕೋ ತಮ್ಮ ಹಾಡಬೇಕು।
ಕಲ್ಲಿನ ಎದೆಯಲ್ಲಿ ಜೀವಜಲ ಚಿಲ್ಲೆಂದು
ಚಿಮ್ಮುವಂತಾ ಹಾಡ ಹಾಡಬೇಕು।
ಆಕಾಶದಂಗಳ ಬೆಳದಿಂಗಳೂ ಕೂಡ
ಕಂಗಾಲಾಗುವ ಹಾಡು ಹಾಡಬೇಕು।।

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X