• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಸ್‌.ಕೆ ಶಾಮಸುಂದರ

By Staff
|

ವಿದೇಶದಲ್ಲಿ ಕುಳಿತು ಕನ್ನಡ ಬರೆಯುವವರನ್ನು, ಕನ್ನಡದಲ್ಲಿ ಹಾಡುವವರನ್ನು ಕನ್ನಡಿಗರು ಸಹಿಸಿಕೊಳ್ಳುವುದಿಲ್ಲ. ಬೆಂಗಳೂರು ಏರ್‌ಪೋರ್ಟ್‌ನಿಂದ ವಿಮಾನಹತ್ತಿ ದೂರಹೋಗುವವರನ್ನು ದೇಶಭ್ರಷ್ಟರಂತೆ ಕಾಣುವ ಜಾಯಮಾನ ಈಚೆಗೆ ಹೆಚ್ಚಾಗುತ್ತಿದೆ!

S.K.Shama Sundara ಎಸ್‌.ಕೆ ಶಾಮಸುಂದರ
shama@oneindia.in

ವಾಷಿಂಗ್ಟನ್‌ : ಕಳೆದ ಇಪ್ಪತ್ತು ವರ್ಷಗಳಿಂದ ಈಚೆಗೆ ಕನ್ನಡ ಶಬ್ದಭಂಡಾರವನ್ನು ಕಲಕಿದ ಪದಸಮೂಹಗಳಲ್ಲಿ ಎದ್ದುಕಾಣುವ ಪದ ‘ಕರಣ’. ಕನ್ನಡಿಗರ ನಾಲಗೆಗಳಲ್ಲಿ, ಪ್ರಜ್ಞೆಯ ಪದರಗಳಲ್ಲಿ ನುಲಿದಾಡುವ ಈ ‘ಕರಣ’ ಪದಕ್ಕೆ ಬಾಲಂಗೋಚಿಯಾಗುವ ಅನೇಕ ಸಂಗತಿಗಳುಂಟು.

ಅವುಗಳಲ್ಲಿ ಪ್ರಬಲವಾದದ್ದು ‘ಜಾಗತೀಕರಣ’. ಏನು ಬೇಕಾದರೂ ಈ ಜಾಗತೀಕರಣ ಎನ್ನುವ ಪದದಲ್ಲಿ ಲೀನವಾಗಬಹುದು. ಹವಾಮಾನದ ಜಾಗತೀಕರಣ, ಔದ್ಯಮಿಕ ಜಾಗತೀಕರಣ, ಶಿಕ್ಷಣದ ಜಾಗತೀಕರಣ, ಭಯೋತ್ಪಾದಕತೆಯ ಜಾಗತೀಕರಣ, ಅಪರಾಧದ ಜಾಗತೀಕರಣ ಮುಂತಾದುವು.

ಸಾಮಾನ್ಯವಾಗಿ ಈ ಎಲ್ಲ ಜಾಗತೀಕರಣಗಳನ್ನು ಭಾರತೀಯರು ಅಭದ್ರತೆಯ ಭಯದಿಂದ, ಸ್ವದೇಶಿ ಭಾವನೆಗಳಿಗೆ ಸಂಚಕಾರ ತರುತ್ತವೆ ಎಂಬ ಗುಮಾನಿಯಿಂದ ನೋಡುವುದುಂಟು. ಜಾಗತೀಕರಣದ ಗಾಂಭೀರ್ಯ ಮರೆಯಾಗಿ ತಮಾಷೆಯಾಗುವ ಸಂದರ್ಭಗಳಲ್ಲಿ ಕೆಲವು ಪತ್ರಕರ್ತರು ‘ನಾಗತೀಕರಣ’ ಎಂದು ಗೇಲಿಮಾಡುವುದೂ ಉಂಟು.

ಜಾಗತೀಕರಣದ ‘ಕಬಂಧಬಾಹುಗಳು’ ಅಯಸ್ಕಾಂತದಂತೆ, ಯಮಪಾಶದಂತೆ, ಕೆಲವೊಮ್ಮೆ ಪ್ರೇಯಸಿಯಂತೆ ಸೆಳೆಯುತ್ತವೆ. ಆದರೆ, ವಿಜ್ಞಾನ-ತಂತ್ರಜ್ಞಾನಗಳ ಅನುಕೂಲಗಳಿಗೆ, ಫಾರಿನ್‌ ಯುನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುವುದಕ್ಕೆ, ಅಲ್ಲೇ ಕೆಲಸ ಕಂಡುಕೊಳ್ಳುವುದಕ್ಕೆ, ಜತೆಗಿರುವಷ್ಟು ದಿವಸ ಮಡದಿ, ಮನೆಯಿಂದ ಹೊರನಡೆಯುವವರೆಗೆ ಮಕ್ಕಳು, ಹೈಪಾಥಿಕೇಶನ್‌ ತೀರುವಳಿ ಆಗುವವರೆಗೆ ಮನೆ ಮಾಡಿಕೊಂಡು ‘ಹಾಯಾಗಿ’ರುವುದಕ್ಕೆ ಅನ್ವಯಿಸುವುದಿಲ್ಲ.

ಅದೇಕೋ ಏನೊ, ಜಾಗತೀಕರಣವನ್ನು ಸಂಶಯದಿಂದ ಆಸೆಕಂಗಳಿಂದ ಅನಿವಾರ್ಯತೆಯಿಂದ ಸಹಿಸಿಕೊಳ್ಳುವ ಕನ್ನಡಿಗರು ಕನ್ನಡನುಡಿಯ ಜಾಗತೀಕರಣದ ಬಗ್ಗೆ ತಲೆಬಿಸಿಮಾಡಿಕೊಳ್ಳುವುದಿಲ್ಲ. ವಿದೇಶದಲ್ಲಿ ಕುಳಿತು ಕನ್ನಡ ಬರೆಯುವವರನ್ನು, ಕನ್ನಡದಲ್ಲಿ ಹಾಡುವವರನ್ನು ಸಹಿಸಿಕೊಳ್ಳುವುದಿಲ್ಲ. ಬೆಂಗಳೂರು ಏರ್‌ಪೋರ್ಟ್‌ನಿಂದ ವಿಮಾನಹತ್ತಿ ದೂರಹೋಗುವವರನ್ನು ದೇಶಭ್ರಷ್ಟರಂತೆ ಕಾಣುವ ಜಾಯಮಾನ ಈಚೆಗೆ ಹೆಚ್ಚಾಗುತ್ತಿದೆ. ಆದಕಾರಣ ಕನ್ನಡ ನುಡಿ-ಸಂಸ್ಕೃತಿಯ ಜಾಗತೀಕರಣ ಎಂಬ ಕಲ್ಪನೆ ಅರ್ಥವೇ ಆಗುವುದಿಲ್ಲ, ಅಂತೆಯೇ ಚಲನಶೀಲವೂ ಆಗುತ್ತಿಲ್ಲ.

ಬೆಂಗಳೂರಿನಲ್ಲೇ ಕನ್ನಡ ಐಸ್‌ಕ್ರೀಮ್‌ನಂತೆ ಕರಗುತ್ತಿರುವಾಗ ಟಿಂಬಕ್ಟೂ ಕನ್ನಡ ಸಮ್ಮೇಳನದ ಬಗ್ಗೆ ಯಾಕೆ ಚಿಂತಿಸಬೇಕು ಎಂಬ ವಾದ ಇದ್ದರೂ ಇರಬಹುದು.

ಕರ್ನಾಟಕದಿಂದ ಹೊರಗಡೆ ಕನ್ನಡದ ಕಲರವ ಗಟ್ಟಿಯಾಗಿ ಕೇಳಿಸಲಾರಂಭಿಸಿದರೆ ಕರುನಾಡ ನೆಲನಿವಾಸಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದರ ಬಗ್ಗೆ ನನಗೆ ವಿಚಿತ್ರವಾದ ಕುತೂಹಲವಿದೆ.

ಅಕಸ್ಮಾತ್‌ ಪಾಕಿಸ್ತಾನದಲ್ಲಿ ಕನ್ನಡ ಸಂಸ್ಕೃತಿಯ ಒಂದು ಜಾತ್ರೆ ಏರ್ಪಾಟಾದರೆ ನಾವು ಹೇಗೆ ಆಲೋಚಿಸುತ್ತೇವೆ? ಆ ಜಾತ್ರೆಯ ಸದ್ದುಗಳನ್ನು ಒಂದು ದಿನದ ಕ್ರಿಕೆಟ್‌ ಮ್ಯಾಚ್‌ನಂತೆ ನೋಡುತ್ತೇವಾ? ಲಂಡನ್‌ನಲ್ಲಿ ಕನ್ನಡ ಕರಗ ಜರುಗಿದರೆ ವಸಾಹತು ಪ್ರವೃತ್ತಿಯನ್ನು ಮುಂದಿಟ್ಟುಕೊಂಡು ಚರ್ಚಿಸುತ್ತೇವಾ? ರೋಮ್‌ನಲ್ಲಿ ಕನ್ನಡಹಬ್ಬ ನಡೆದರೆ ಮತಾಂತರದ ಹಿನ್ನೆಲೆ-ಮುನ್ನೆಲೆಗಳ ಬಗ್ಗೆ ಚಿಂತೆ ಮಾಡುತ್ತೇವಾ? ಅಮೆರಿಕದಲ್ಲಿ ಸಮ್ಮೇಳನ ನಡೆದರೆ 1 Dollar = Rs 48.20ಎನ್ನುವ ಅಂಕಗಣಿತದಿಂದ ನೋಡುತ್ತೇವಾ?

ನಿಮ್ಮ ಮಣ್ಣಿನ ವಾಸನೆಗಳು ಮತ್ತು ಗ್ಲೋಬಲ್‌ ಸೆಂಟಿಮೆಂಟುಗಳು ಎಲ್ಲಿ ತಾಳೆಯಾಗುತ್ತವೆ ಎನ್ನುವುದೇ ನನ್ನ ಕುತೂಹಲ.

ನುಡಿ ಹಬ್ಬದ ಚಿತ್ರಪಟಗಳು :
ಮತ್ತೆ ಸಿಗೋಣ - 3ನೇ ದಿನ
ಮೆರವಣಿಗೆಯ ನೋಟ- 2ನೇ ದಿನ
ಎಲ್ಲೆಲ್ಲೂ ಹಸನ್ಮುಖಿಗಳು - 1ನೇ ದಿನ
ಎಸ್ಪಿ ಬಾಲಸುಬ್ರಮಣ್ಯಂ ಗಾನ ಸುರಭಿ

Thank you for choosing Thatskannada
shami.sk@greynium.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more