ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌.ಕೆ. ಶಾಮಸುಂದರ

By Staff
|
Google Oneindia Kannada News

ಜನವರಿ 30ರಂದು ಡೆಟ್ರಾಯಿಟ್‌ನಲ್ಲಿ ನಿಧಿ ಸಂಗ್ರಹ, ಹರಿದುಬರಲಿ ನೆರವು ಸುನಾಮಿಯಂತೆ.

S.K.Shama Sundara ಎಸ್‌.ಕೆ. ಶಾಮಸುಂದರ
[email protected]

NRI Kannadigas offer to help Tsunami Victims 2004ರ ಕೊನೆಯಲ್ಲಿ ಎರಗಿದ ಸುನಾಮಿ ಕೊಲೆಗಡುಕ ಅಲೆಗಳಿಂದಾದ ಹಾನಿ ಅದೆಷ್ಟೇ ಇರಲಿ- ಈ ಅಲೆಗಳಿಂದಾಗಿ ಇಡೀ ಜಗತ್ತು ಮೈಕೊಡವಿಕೊಂಡೆದ್ದು ಸಂತ್ರಸ್ತರ ನೆರವಿಗಾಗಿ ಕೈಜೋಡಿಸಿತಲ್ಲ , ಆ ಒಗ್ಗಟ್ಟಿನ ಬೆಲೆ ದೊಡ್ಡದು. ಜಗತ್ತಿನ ನಕಾಶೆಯಿಂದ ‘ಕರುಣೆ, ಮಾನವೀಯತೆ’ ಎನ್ನುವ ಮೌಲ್ಯಗಳು ನಶಿಸಿಹೋದವು ಎನ್ನುವ ಆತಂಕ ದಟ್ಟವಾಗುತ್ತಿದ್ದ ಹೊತ್ತಿನಲ್ಲಿ ದೊಡ್ಡರೀತಿಯಲ್ಲಿ ವ್ಯಕ್ತಗೊಂಡ ‘ಮಾನವೀಯತೆ’ ಮನುಕುಲ ನೆಮ್ಮದಿಯ ಉಸಿರುಬಿಡುವಂತದ್ದು . ನಿಜ, ಮನುಷ್ಯತ್ವ ಇನ್ನೂ ಉಳಿದಿದೆ. ಕನಿಷ್ಠ, ಸುನಾಮಿಯಂಥ ಪ್ರಾಕೃತಿಕ ದುರಂತಗಳ ಸಂದರ್ಭದಲ್ಲಾದರೂ ವ್ಯಕ್ತಗೊಳ್ಳುವಷ್ಟರ ಮಟ್ಟಿಗೆ ಮಾನವೀಯತೆ ನಮ್ಮಲ್ಲಿನ್ನೂ ಉಳಿದಿದೆ.

ಆಫ್ಘನ್‌ನ ಕಣಿವೆಗಳಲ್ಲಿನ ಗಂಧಕದ ಕಮಟಿನ್ನೂ ಕರಗಿಲ್ಲ . ಇರಾಕ್‌ನಲ್ಲಿ ಗುಂಡಿನ ಚಕಮಕಿಯ ಸದ್ದಿನ್ನೂ ಅಡಗಿಲ್ಲ . ಕಾಶ್ಮೀರ ಕೊಳ್ಳದಲ್ಲಿನ ನೆತ್ತರ ಕಲೆಗಳನ್ನು ಯಾವ ಮಳೆಯೂ ತೊಳೆಯಲು ಸಾಧ್ಯವಾಗಿಲ್ಲ . ಇದೆಲ್ಲ ದುರಂತಕ್ಕೆ ಪ್ರತ್ಯಕ್ಷವಾಗಿ/ಪರೋಕ್ಷವಾಗಿ ಕಾರಣವಾಗಿರುವ ಅಮೆರಿಕಾ ಈಹೊತ್ತು ಸುನಾಮಿ ಸಂತ್ರಸ್ತರ ನೆರವಿಗಾಗಿ ಉದಾರ ಹಸ್ತ ಚಾಚಿದೆ. ಇದು ಮಾನವೀಯತೆಯ ಗೆಲುವು.

ಶ್ರೀಮಂತ ದೇಶಗಳ ಮಾತು ಪಕ್ಕಕ್ಕಿರಲಿ. ದೇಶದೊಳಗಿನ ಹಳ್ಳಿಹಳ್ಳಿಗಳಿಂದಲೂ ಸುನಾಮಿ ಸಂತ್ರಸ್ತರಿಗೆ ಶಕ್ತ್ಯಾನುಸಾರ ನೆರವು ಹರಿದುಬಂದಿದೆ. ಕಂದಮ್ಮನ ಬಾಟಲಿ ಹಾಲಿನ ದುಡ್ಡು , ಮಕ್ಕಳ ಸಂಜೆ ಕುರುಕಲಿನ ಕಾಸು, ರದ್ದಾದ ಯಾವುದೋ ಮೇಜುವಾನಿಯ ಹಣ, ಕೋಟ್ಯಂತರ ಕಾರ್ಮಿಕರ-ದಿನಗೂಲಿ ನೌಕರರ ತಿಂಗಳ ವೇತನದ ಒಂದಂಶ ಸುನಾಮಿ ಸಂತ್ರಸ್ತರಿಗಾಗಿ ಸಂದಾಯವಾಗಿದೆ, ಆಗುತ್ತಿದೆ. ಸರಳುಗಳ ಹಿಂದಿನ ಖೈದಿಗಳೂ ನೆರವು ನೀಡುವಲ್ಲಿ ಹಿಂದೆ ಬಿದ್ದಿಲ್ಲ . ಮುಧೋಳ, ಕಲಘಟಗಿ, ತಗಡೂರು, ಸಿದ್ಧಾಪುರಗಳಂಥ ಊರುಗಳಿಂದಲೇ ನೆರವು ಹರಿದುಬರುತ್ತಿರುವಾಗ, ಜಾಗತಿಕ ಕನ್ನಡಿಗರು- ವಿಶೇಷವಾಗಿ ಅಮೆರಿಕನ್ನಡಿಗರು ಸುಮ್ಮನಿದ್ದಾರಾ?

ವಿಶ್ವದ ವಿವಿಧ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರು ಸುನಾಮಿ ಸಂತ್ರಸ್ತರ ನಿಧಿಗೆ ದೇಣಿಗೆ ನೀಡಿದ್ದಾರೆ. ದಟ್ಸ್‌ಕನ್ನಡ-ವಿಚಿತ್ರಾನ್ನ ಅಂಕಣ ಬರಹವೊಂದರ ಬಹುಮಾನಿತ ಓದುಗರು ತಮ್ಮ ಬಹುಮಾನದ ಮೊತ್ತವನ್ನು ಅಂತರರಾಷ್ಟ್ರೀಯ ರೆಡ್‌ಕ್ರಾಸ್‌ ನಿಧಿಗೆ ದೇಣಿಗೆ ನೀಡಿದ್ದಾರೆ. ಹನಿಹನಿ ಸೇರಿದರೆ ಹಳ್ಳ.

ಈಗ ‘ಅಕ್ಕ’ನ ಸರದಿ. ಅನಿವಾಸಿ ಕನ್ನಡಿಗರ ಪ್ರತಿನಿಧಿಯಾದ ಅಮೆರಿಕ ಕನ್ನಡ ಕೂಟಗಳ ಆಗರ-ಅಕ್ಕ ಸುನಾಮಿ ಸಂತ್ರಸ್ತರಿಗಾಗಿ ನಿಧಿ ಸಂಗ್ರಹಿಸಲು ಮುಂದಾಗಿದೆ. ಮೊದಲ ಹಂತವಾಗಿ, ಜನವರಿ 30ರಂದು ಡೆಟ್ರಾಯಿಟ್‌ ನಗರಿಯಲ್ಲಿ ನಿಧಿ ಸಂಗ್ರಹ ಕಾರ್ಯ ನಡೆಯಲಿದೆ. ನೆರವು ಸಂಗ್ರಹ ಕಾರ್ಯಕ್ರಮಗಳನ್ನು ಅಕ್ಕ ದತ್ತಿ ಸಮಿತಿ ಹಮ್ಮಿಕೊಳ್ಳಲಿದೆ. ಎಲ್ಲ ಕನ್ನಡ ಸಂಘಗಳಿಂದ ಸಂಗ್ರಹವಾಗುವ ದೇಣಿಗೆಯನ್ನು ಒಟ್ಟುಗೂಡಿಸಿ, ಆ ಮೊತ್ತವನ್ನು ಸುನಾಮಿ ಹಾವಳಿಗೆ ತುತ್ತಾದ ಪ್ರದೇಶಗಳಲ್ಲಿನ ಪರಿಹಾರ ಕಾರ್ಯಗಳಿಗಾಗಿ ಕಳುಹಿಸಿಕೊಡಲು ‘ಅಕ್ಕ’ ಉದ್ದೇಶಿಸಿದೆ ಎಂದು ‘ಅಕ್ಕ’ ಅಧ್ಯಕ್ಷ ಡಾ.ಕುದೂರು ಮುರಳಿ ಹಾಗೂ ನಿಕಟಪೂರ್ವ ಅಧ್ಯಕ್ಷ ಅಮರನಾಥ ಗೌಡ ದಟ್ಸ್‌ಕನ್ನಡ.ಕಾಂಗೆ ತಿಳಿಸಿದ್ದಾರೆ.

ಕಷ್ಟಕ್ಕೊದಗಿದವರೇ ನೆಂಟರು ಎನ್ನುವ ಮಾತಿದೆ. ಬಂಧುತ್ವ-ಸ್ನೇಹಕ್ಕೆ ಕನ್ನಡಿಗರು ವಿಶ್ವಮಾನ್ಯರು. ಹೀಗಿರುವಾಗ ಸುನಾಮಿ ಸಂತ್ರಸ್ತರ ಕಣ್ಣೀರೊರೆಸಲು ನೆರವು ನೀಡದಿರುವರಾ? ಆ ನೆರವು ಹರಿದು ಬರಲಿ, ಸುನಾಮಿ ಅಲೆಗಳಂತೆ ಹಿರಿರೂಪದಲ್ಲಿ . ಈಮುನ್ನ ಸುನಾಮಿ ಅಲೆಗಳ ಕ್ರೌರ್ಯರೂಪ ಕಂಡು ಕಂಗೆಟ್ಟವರು, ಈಗ ನೆರವಿನ ಸುನಾಮಿಯಿಂದ ಹೊಸ ಕನಸುಗಳನ್ನು ಕಾಣುವಂತಾಗಲಿ. ‘ಅಕ್ಕ’ನ ದೇಣಿಗೆ ಸಂಗ್ರಹ ಕಾರ್ಯ ಯಶಸ್ವಿಯಾಗಲಿ; ಮಾನವೀಯತೆ ಬಾಳ್ಗೆ.

Do you want to contribute? Contact Dr. Kudur Murali ([email protected]) for more details

Thank you for choosing Thatskannada.com
[email protected]


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X