• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಂದಿನ ವಿಶ್ವ ಕನ್ನಡ ಸಮ್ಮೇಳನ ಎಲ್ಲಿ ನಡೆಯುತ್ತದೆ?

By ಎಸ್‌.ಕೆ. ಶಾಮಸುಂದರ
|

ಮುಂದಿನ ವಿಶ್ವ ಕನ್ನಡ ಸಮ್ಮೇಳನ ಎಲ್ಲಿ ನಡೆಯುತ್ತದೆ? ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಇದೀಗ ತಾನೆ ಬೆಂಗಳೂರನ್ನು ತಲುಪಿರುವ ಸುದ್ದಿಯ ಪ್ರಕಾರ ನಾಲ್ಕನೇ ಅಕ್ಕ- ವಿಶ್ವ ಕನ್ನಡ ಸಮ್ಮೇಳನ ಉತ್ತರ ಅಮೆರಿಕಾದ ರಾಜಧಾನಿ ವಾಷಿಂಗ್‌ಟನ್‌ ಡಿಸಿ ಪ್ರದೇಶದಲ್ಲಿ ವ್ಯವಸ್ಥೆಗೊಳಿಸಲಾಗುತ್ತದೆ. ಡಿಸಿ ಪ್ರದೇಶಗಳನ್ನು ಒಳಗೊಳ್ಳುವ ವಾಷಿಂಗ್‌ಟನ್‌, ಮೇರಿಲ್ಯಾಂಡ್‌ ಮತ್ತು ವರ್ಜಿನಿಯಾ ನೆಲದಲ್ಲಿ ವಾಸವಾಗಿರುವ ಸುಮಾರು 2000 ಕನ್ನಡ ಕುಟುಂಬಗಳನ್ನು ಪ್ರತಿನಿಧಿಸುವ ಕಾವೇರಿ ಕನ್ನಡ ಸಂಘವು 2006ರ ಕನ್ನಡ ಸಮ್ಮೇಳನದ ಆತಿಥ್ಯ ವಹಿಸಿಕೊಳ್ಳಲು ನಿರ್ಧರಿಸಿದೆ.

ಸಮ್ಮೇಳನದ ಜವಾಬ್ದಾರಿ ಹೊತ್ತುಕೊಳ್ಳುವುದು ಬಾಳೆಹಣ್ಣು ತಿಂದಷ್ಟು ಸುಲಭವಲ್ಲ. ಮೂಲಭೂತವಾಗಿ ಆತಿಥ್ಯ ವಹಿಸಿಕೊಳ್ಳಲು ಮುಂದೆ ಬರುವ ಒಂದು ಸಂಘ ಪರಿವಾರದ ಹತ್ತೂ ಸಮಸ್ತರು ಮೊದಲು ತಮ್ಮ ತತ್ವಶಃ ಒಪ್ಪಿಗೆ ಸೂಚಿಸಬೇಕು . ಆನಂತರ ಬೃಹತ್‌ ಸಮ್ಮೇಳನ ನಡೆಸುವುದು ಕಾರ್ಯಸಾಧುವೆ? ಅದಕ್ಕೆ ಅಗತ್ಯವಾದ ಸಾಮಾನು ಸರಂಜಾಮು ಸಲಕರಣೆ ಜೋಡಿಸುವುದು ನಮ್ಮಿಂದಾಗುತ್ತದೆಯೇ ? ಹಣ ಯಾರು ಕೊಡುತ್ತಾರೆ? ಯಾರಾದರೂ ಕೊಡಬಹುದು. ಆದರೆ, ಹಣ ಸಂಗ್ರಹಣೆ ಮತ್ತು ಮಾನವ ಸಂಪನ್ಮೂಲದ ಜೋಡಣೆಯನ್ನು ಸಮರ್ಪಕವಾಗಿ ಮಾಡುವರಾದರೂ ಯಾರು?

ಈ ಎಲ್ಲ ಪ್ರಶ್ನೆಗಳನ್ನು ಗಮನದಲ್ಲಿಟ್ಟು ಕಾವೇರಿ ಅಧ್ಯಕ್ಷ ಹರೀಶ್‌ ಹಿರೇಮಠ್‌ ಅಕ್ಟೋಬರ್‌ 10ನೇ ತಾರೀಕಿನಂದು ‘ನಾಡಿ ಹಿಡಿದು ನೋಡುವ’ ಒಂದು ಸಭೆ ಕರೆದಿದ್ದರು. ಆ ಸಭೆಯಲ್ಲಿ 22 ಮಂದಿ ಹಿರೀಕರು-ಉತ್ಸಾಹಿಗಳು ಪಾಲ್ಗೊಂಡರು. ಫಲಿತಾಂಶ : 17 ಮಂದಿ ಸಮ್ಮೇಳನಕ್ಕೆ ಎಸ್‌ ಅಂದರು. ಮೂರು ಮಂದಿ ಷರತ್ತುಗಳಿಗೆ ಬದ್ಧವಾದ ಒಪ್ಪಿಗೆ ಸೂಚಿಸಿದರು. ಇನ್ನಿಬ್ಬರು ಬೇಡಪ್ಪಾ ಎಂದಿದ್ದರು.

ಆ ಸಭೆಯ ನಂತರ ಕಾವೇರಿಯಲ್ಲಿ ಸಮ್ಮೇಳನದ ಸಸಿ ಚಿಗುರೊಡೆಯುತ್ತ ಸಾಗಿತು. ಅದರಂತೆ ಕಾವೇರಿಯ ಮಾಜಿ ಅಧ್ಯಕ್ಷರುಗಳಾದ ಸುರೇಶ್‌ ರಾಮಚಂದ್ರ ಮತ್ತು ರವಿ ಡೆಂಕಣಿಕೋಟೆ ಅವರುಗಳಿಗೆ ಒಂದು ವರದಿ ಸಲ್ಲಿಸುವಂತೆ ಕೇಳಿಕೊಂಡಿತು. ಆ ವರದಿಯನ್ನು ಎಳೆಎಳೆಯಾಗಿ ವಿಮರ್ಶಿಸಿ ಸಮ್ಮೇಳನ ಆಯೋಜಿಸುವ ಬಗ್ಗೆ ಅಧಿಕೃತ ನಿರ್ಧಾರಕ್ಕೆ ಬರಲು ವಿಶೇಷ ಸರ್ವಸದಸ್ಯರ ಸಭೆಯನ್ನು ಕರೆಯಲಾಗಿತ್ತು.

ಆ ಸಭೆ ನಿನ್ನೆ , ಅಂದರೆ ಅಕ್ಟೋಬರ್‌ 24ರ ಮಧ್ಯಾನ್ಹ ರಾಕ್‌ವಿಲೆಯ ಮನ್ರೋ ರಸ್ತೆಯಲ್ಲಿರುವ ಎಕ್ಸಿಕ್ಯುಟಿವ್‌ ಆಫಿಸ್‌ ಬಿಲ್ಡಿಂಗ್‌ನಲ್ಲಿ ನಡೆಯಿತು. ಸಭೆಯಲ್ಲಿ ಚರ್ಚಿಸಲಾಗುವ ವಿಷಯವನ್ನು ಕಾವೇರಿ ಹೀಗೆ ಕರೆದಿತ್ತು :

‘2006ರ ಸಮ್ಮೇಳನವನ್ನು ಕಾವೇರಿ ಕನ್ನಡ ಸಂಘ ವ್ಯವಸ್ಥೆಗೊಳಿಸುವ ನಿಟ್ಟಿನಲ್ಲಿ ಪರಿಣಿತರು ತಯಾರಿಸಿದ ಕಾರ್ಯಸಾಧು ವರದಿಯ ಮಂಡನೆ, ಪರಿಶೀಲನೆ ಮತ್ತು ಚರ್ಚೆ. ಅಂತೆಯೇ ಈ ಸಭೆ ನಾಲ್ಕನೇ ವಿಶ್ವ ಸಮ್ಮೇಳನದ ಪೂರ್ವಭಾವಿ , ಪ್ರಾಥಮಿಕ ಸಭೆಯೂ ಆಗಿರುತ್ತದೆ’

ಸುರೇಶ್‌ ರಾಮಚಂದ್ರ ಮತ್ತು ರವಿ ಡೆಂಕಣಿಕೋಟೆ ಪಳಗಿದ ಹುಲಿಗಳು. ಡಿಸಿ ಪ್ರದೇಶದ ಕನ್ನಡಿಗರ ನಾಡಿ ಮಿಡಿತಗಳನ್ನು ಸಾಕಷ್ಟು ಚೆನ್ನಾಗಿಯೇ ಅರಿತವರು. ಈ ಜೋಡಿ ಎರಡು ವಾರದ ಅವಧಿಯಲ್ಲಿ ತಯಾರಿಸಿದ ವರದಿ (Feasibility Report) ಬೆಳ್ಳಿತೆರೆಯಲ್ಲಿ ಮೂಡಿಬಂತು. ಮಹಾಸಭೆ ಚಪ್ಪಾಳೆ ಹೊಡೆಯುವುದರ ಮೂಲಕ ವರದಿಗೆ ತಲೆದೂಗಿತು.

ಒಂದು ಸಮ್ಮೇಳನ ಮಾಡಬೇಕಾದರೆ ಅಮೆರಿಕಾದಲ್ಲಿ ಕನಿಷ್ಠ ಎರಡು ವರ್ಷಗಳ ಸಿದ್ಧತೆ, ಸತತ ಪರಿಶ್ರಮ ಅಗತ್ಯ. ಕಳೆದ ಸೆಪ್ಟೆಂಬರ್‌ನಲ್ಲಿ ಫ್ಲಾರಿಡಾ ಕನ್ನಡಿಗರ ಸಂಘ ಶ್ರೀಗಂಧ ಕನ್ನಡ ಕೂಟ ಮೂರನ ವಿಶ್ವ ಕನ್ನಡ ಸಮ್ಮೇಳನವನ್ನು ನೆರವೇರಿಸಿ ಸೈ ಎನಿಸಿಕೊಂಡಿದೆ.

ಕಾವೇರಿ ಇನ್ನೂ ಚೆನ್ನಾಗಿ , ಹೆಚ್ಚು ಅರ್ಥಪೂರ್ಣವಾಗಿ ಸಮ್ಮೇಳನ ಏರ್ಪಾಟು ಮಾಡಬಲ್ಲದು ಎಂಬ ನಿರೀಕ್ಷೆ ಇಟ್ಟುಕೊಳ್ಳುವುದು ಇನ್ನು ನಿಮ್ಮ ಕೆಲಸ !

ಗಮನಿಸಿ : ಕನ್ನಡ ಸಮ್ಮೇಳನವನ್ನು ಕಾವೇರಿ ಹಮ್ಮಿಕೊಳ್ಳಬೇಕೇ ಅಥವಾ ಬೇಡವೇ ಎಂಬುದಷ್ಟೇ ಮಹಾಸಭೆಯ ಕಳಕಳಿಯಾಗಿತ್ತು. ಸಮ್ಮೇಳನದ ತಾಣ ಯಾವುದು ? ಸಮ್ಮೇಳನ ಸಮಿತಿಯ ಮುಂದಾಳತ್ವವನ್ನು ಯಾರು ವಹಿಸಿಕೊಳ್ಳಬೇಕು? ಕರ್ನಾಟಕದಿಂದ ಯಾರ್ಯಾರನ್ನು ಆಹ್ವಾನಿಸಬೇಕು ಅಥವಾ ಆಹ್ವಾನಿಸಬಾರದು ? ಸಾರಿಗೆ ಮತ್ತು ಪಲಾವಿಗೆ ಬೆಳ್ಳುಳ್ಳಿ ಹಾಕಬೇಕೇ ಅಥವಾ ಇಂಗು ಹಾಕಬೇಕೆ ? ಎಂಬಿತ್ಯಾದಿ ಪ್ರಶ್ನೆಗಳನ್ನು ಸಭೆ ಚರ್ಚೆಗೆ ಎತ್ತಿಕೊಳ್ಳಲಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kaveri Kannada Association WDC to host WKC-2006?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more