• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಸ್‌.ಕೆ. ಶಾಮಸುಂದರ

By Staff
|

ಎಷ್ಟೊಂದು ಪತ್ರಿಕೆಗಳು. ಎಷ್ಟೊಂದು ಪುಸ್ತಕಗಳು. ಒಮ್ಮೆ ಪುಸ್ತಕಪೇಟೆಯಲ್ಲೊಂದು ಸುತ್ತು ಹೋಗಿಬನ್ನಿ ; ನೋಡಿದಷ್ಟೂ ಪುಸ್ತಕಗಳ ಸಾಲುಸಾಲು! ಓದುಗ ಮಹಾಶಯ ಕಳೆದುಹೋಗಿದ್ದಾನೆ ಎನ್ನುವ ದೂರಿನ ನಡುವೆಯೂ ಪ್ರಕಟಣೆಯ ಕೆಲಸ ನಿರಂತರವಾಗಿದೆ ; ಏರುಮುಖವಾಗಿಯೇ ಇದೆ.

ಪ್ರಕಟಣೆಯಲ್ಲಿ ಎರಡು ವಿಧ. ದಿನಪತ್ರಿಕೆಗಳು ಹಾಗೂ ನಿಯತಕಾಲಿಕೆಗಳು ಒಂದು ಕಡೆಯಿದ್ದರೆ, ಸಂದರ್ಭ ಗ್ರಂಥಗಳು, ಸ್ಮರಣ ಸಂಚಿಕೆಗಳು, ಸಾಹಿತ್ಯ ಕೃತಿಗಳು, ವಿಷಯ ಆಕರಗಳು ಇನ್ನೊಂದು ಕಡೆ. ಎರಡೂ ರೀತಿಯ ಪ್ರಕಟಣೆಯ ಹಿಂದೆ ಶ್ರಮ ಹಾಗೂ ಶಿಸ್ತು ಬೇಡುವ ಅಕ್ಷರ ವ್ಯವಸಾಯ ಇದ್ದೇ ಇರುತ್ತದೆ. ಆದರೆ ಪುಸ್ತಕವೊಂದನ್ನು ಕೈಗೆತ್ತಿಕೊಳ್ಳುವುದಕ್ಕೂ ಪತ್ರಿಕೆಯಾಂದನ್ನು ಕೈಗೆತ್ತಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಪತ್ರಿಕೆ ಆ ಕ್ಷಣದ ಅಗತ್ಯ ಮಾತ್ರ. ಪುಸ್ತಕದ ವಿಷಯವೇ ಬೇರೆ; ಅದು ನಮ್ಮೊಂದಿಗೇ ನಡೆಯುವ ಹಾಗೂ ನಡೆಸುವ ಮಿತ್ರನಿದ್ದಂತೆ! ಪುಸ್ತಕವೊಂದಕ್ಕೆ ಮುಖಾಮುಖಿಯಾಗುವುದೆಂದರೆ, ಆ ಪುಸ್ತಕ ಪ್ರಕಟಣೆಯ ಹಿಂದಿನ ಶ್ರಮ, ಕನಸುಗಳು, ವಿಚಾರಧಾರೆ, ಖುಷಿ-ಕಣ್ಣೀರು ಇತ್ಯಾದಿಗಳಿಗೆ ಮುಖಾಮುಖಿಯಾಗುವುದೆಂದೇ ಅರ್ಥ.

ಪ್ರತಿ ಪುಸ್ತಕದ ಹಿಂದೆಯೂ ಒಬ್ಬ ಲೇಖಕ ಇದ್ದೇ ಇರುತ್ತಾನೆ. ಆದರೆ ಸಂದರ್ಭ -ಸಂಭಾವನಾ- ಸ್ಮರಣಕೃತಿಗಳಲ್ಲಿ ಲೇಖಕರ ಹಿಂಡೇ ಇರುತ್ತದೆ. ಇದೊಂದು ರೀತಿ ನವಿಲುಗರಿಗಳ ಗುಚ್ಛವಿದ್ದಂತೆ. ಈ ಗರಿಗಳನ್ನೆಲ್ಲ ಸೂತ್ರರೂಪದಲ್ಲಿ ಬಂಧಿಸಿರುವ ಸಂಪಾದಕ ಎನ್ನುವ ಹೆಸರಿನ ಪಾಪದ ಮನುಷ್ಯನೊಬ್ಬರಿನುತ್ತಾನೆ. ಆತನ ಕಷ್ಟಗಳಿದೆಯಲ್ಲ , ಅದೊಂದು ರಾಮಾಯಣ.

ಪ್ರತಿಯಾಂದು ಸಂಚಿಕೆ-ಸಂಕಲನದ ಯಶಸ್ಸು-ಸೋಲು ಆಯಾ ಕೃತಿಯ ಸಂಪಾದಕನನ್ನು ಅವಲಂಬಿಸಿರುತ್ತದೆ. ಸಂಪಾದಕನ ಶ್ರಮ, ವಿದ್ವತ್ತು , ವ್ಯಕ್ತಿತ್ವ, ಸಂಪರ್ಕ ಹಾಗೂ ತಾಳ್ಮೆ , ಆತ ಸಂಪಾದಿಸುವ ಕೃತಿಯಲ್ಲಿ ಕಾಣುತ್ತದೆ. ಹೀಗಾಗಿ ಸಮಸ್ಯೆ-ಸವಾಲುಗಳ ಜೊತೆಯಲ್ಲೇ ಸಂಪಾದಕನ ಕೆಲಸ ಸಾಗುತ್ತದೆ. ಸಂಪಾದಕರಲ್ಲೂ ಎರಡು ವಿಧ. ಪುನರೂರು ರೀತಿಯ ಸಂಘಟಕರು ಹಾಗೂ ಇಗೋಕನ್ನಡದ ವೆಂಕಟಸುಬ್ಬಯ್ಯನವರಂಥ ಸಂಪಾದಕರು. ಇಬ್ಬರಿಗೂ ಅವರವೇ ಆದ ಅನುಕೂಲಗಳಿವೆ, ಮಿತಿಗಳೂ ಇವೆ. ಆದರೆ ವಿದ್ವತ್ತು ಹಾಗೂ ಸಂಘಟನಾ ಚಾತುರ್ಯ ಎರಡನ್ನೂ ಉಳ್ಳ ವ್ಯಕ್ತಿ ಸಂಪಾದಕನಾಗುತ್ತಾನಲ್ಲ , ಆಗ ಕೃತಿ ಮೂಡಿಬರುವ ಚಂದವೇ ಬೇರೆ. ಟಾಂಪ ನಿವಾಸಿ ಡಾ. ಯು. ಬಿ. ವಾಸುದೇವ್‌ ಅಂಥ ಅಪರೂಪದ ಸಂಪಾದಕರಲ್ಲೊಬ್ಬರು.

ಅಮೆರಿಕಾದ ಒರ್ಲಾಂಡೊ-ಫ್ಲಾರಿಡಾದಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನ-2004ರ ಸ್ಮರಣ ಸಂಚಿಕೆ ‘ವಿಕಾಸ’ದ ಪ್ರಧಾನ ಸಂಪಾದಕರು ಡಾ. ಯು. ಬಿ. ವಾಸುದೇವ್‌. ಅಂತಿಮವಾಗಿ ‘ವಿಕಾಸ’ ಸ್ಮರಣ ಸಂಚಿಕೆ ‘ಅಕ್ಕ’ ಬಳಗವನ್ನು ಪ್ರತಿನಿಧಿಸಿದರೂ, ಸಂಚಿಕೆಯ ಪುಟಪುಟಗಳ ಚೆಂದದ ಹಿಂದೆ ಸಂಪಾದಕರ ವೈಯಕ್ತಿಕ ಶ್ರಮ ಹಾಗೂ ಶ್ರದ್ಧೆಯನ್ನು ಗುರ್ತಿಸಬಹುದು. ಹಾಗೆ ನೋಡಿದರೆ ‘ಅಕ್ಕ’ ವಿಶ್ವಕನ್ನಡ ಸಮ್ಮೇಳನಗಳ ಹಿಂದಿನ ಸ್ಮರಣ ಸಂಚಿಕೆಗಳೂ ಸುಂದರವಾಗಿಯೇ ಇದ್ದವು. ಶಿಕಾರಿಪುರ ಹರಿಹರೇಶ್ವರರ ಸಂಪಾದಕತ್ವದಲ್ಲಿ ಹೊರಬಂದ ಹ್ಯೂಸ್ಟನ್‌ ವಿಶ್ವಕನ್ನಡ ಸಮ್ಮೇಳನದ ‘ದರ್ಶನ’ ಹಾಗೂ ಶ್ರೀನಿವಾಸಭಟ್‌ರ ಸಂಪಾದಕತ್ವದ ಡೆಟ್ರಾಯಿಟ್‌ ಸಮ್ಮೇಳನದ ‘ಸ್ಪಂದನ’ ಸಹೃದಯರ ಪ್ರಶಂಸೆಗೆ ಪಾತ್ರವಾಗಿದ್ದವು. ಈ ಹೆದ್ದಾರಿಯಲ್ಲಿ ಮೂಡಿಬಂದಿರುವ ವಾಸುದೇವ್‌ ಮತ್ತವರ ಬಳಗದ ಶ್ರಮ-ಶ್ರದ್ಧೆಯ ‘ವಿಕಾಸ’ ಹೆಸರಿಗೆ ತಕ್ಕಂತಿದೆ.

ಸಮ್ಮೇಳನ ಮುಗಿಯಿತು. ‘ವಿಕಾಸ’ ಸಂಚಿಕೆ ಪ್ರಕಟವಾಗಿ, ಸಮ್ಮೇಳನಕ್ಕೆ ಬಂದಿದ್ದವರ ಕೈಸೇರಿದ್ದೂ ಆಯಿತು ?! ಮುಂದೇನು? ‘ಅಕ್ಕ’ ಬಳಗದ ಕರ್ತವ್ಯವೇನೋ ಇಲ್ಲಿಗೆ ಮುಗಿಯಿತು. ಆದರೆ ಸೂಕ್ಷ್ಮಸಂವೇದನೆಯ ಸಂಪಾದಕರ ಕಾರ್ಯ ಇಷ್ಟಕ್ಕೇ ಮುಗಿಯುತ್ತದೇನು? ಪತ್ರ ಬರೆದು, ಫೋನಾಯಿಸಿ, ಕಾಡಿಬೇಡಿ, ನೆನಪಿನೋಲೆ ಬರೆದು, ಲೇಖನ ಬರೆಸಿಕೊಂಡ ಸಂಪಾದಕನಿಗೆ ಋಣಪ್ರಜ್ಞೆ ಇರುವುದು ಸಹಜವೇ. ಹಾಗಾಗಿ ಸ್ಮರಣ ಸಂಚಿಕೆಗೆ ಲೇಖನ ಬರೆದ ತವರಿನ ಕನ್ನಡ ಲೇಖಕರಿಗೆ ಕೃತಜ್ಞತೆ ಸಲ್ಲಿಸಿದಾಗಲೇ ಸಂಪಾದಕನಿಗೆ ನೆಮ್ಮದಿ. ಈ ಕೃತಜ್ಞತೆ ಸಲ್ಲಿಸುವುದು ಹೇಗೆ? ಅದು ಬಾಯುಪಚಾರವಾಗಬಾರದು. ಹೂವ ತಂದವರಿಗೊಂದು ಹೂ ಪಕಳೆಯನ್ನಾದರೂ ನೀಡಿ ಗೌರವಿಸಬೇಕು! ಅಂಥದೊಂದು ಗೌರವ ಸಮರ್ಪಣೆಯ ಸಮಾರಂಭ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ಇಂಥದೊಂದು ಗೌರವ ಸಂದಾಯದ ಕೆಲಸವನ್ನು ಶಿಕಾರಿಪುರ ಹರಿಹರೇಶ್ವರ ಕೂಡ ಮಾಡಿದ್ದರು. ಶ್ರೀನಿವಾಸ ಭಟ್‌ ಮಾಡಿದರೋ ಇಲ್ಲವೋ ನಮಗೆ ತಿಳಿಯಲಿಲ್ಲ .

ವಾಸುದೇವ್‌ ಅವರ ಪರವಾಗಿ ಅವರ ಸೋದರ ಯು.ಬಿ. ಬಾಲಚಂದ್ರ ಮತ್ತವರ ಪತ್ನಿ, ಭಾರತೀಯ ಲೇಖಕರಿಗೆ ಗೌರವ ಸಮರ್ಪಣೆಯ ಕಾರ್ಯಕ್ರಮವನ್ನು ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಏರ್ಪಡಿಸಿದ್ದರು. ಪ್ರೊ. ಅ.ರಾ.ಮಿತ್ರ, ಪ್ರೊ.ಜಿ. ವೆಂಕಟಸುಬ್ಬಯ್ಯ, ನೀಳಾದೇವಿ, ಎಚ್‌.ಎಸ್‌. ಪಾರ್ವತಿ, ಮಾಸ್ಟರ್‌ ಹಿರಣ್ಣಯ್ಯ, ಬಿ. ಎಸ್‌. ಕೇಶವರಾವ್‌, ಸುಮನಾ, ಶಿಕಾರಿಪುರ ಹರಿಹರೇಶ್ವರ, ಕೊ. ಚೆನ್ನಬಸಪ್ಪ, ಅಪರಂಜಿ. ಶಿವು, ವಿ. ಎನ್‌. ಸುಬ್ಬರಾವ್‌, ಮಂಗಳಾ ಪ್ರಿಯದರ್ಶಿನಿ, ದಟ್ಸ್‌ಕನ್ನಡ ಸಂಪಾದಕ ಶಾಮಸುಂದರ್‌ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇವರಲ್ಲೇನಕರು ಒರ್ಲಾಂಡೊ ಸಮ್ಮೇಳನದಲ್ಲಿ ಭಾಗವಹಿಸಿದ್ದವರೂ ಆದುದರಿಂದ ಗೌರವ ಸಮರ್ಪಣೆಯ ಕಾರ್ಯಕ್ರಮ ಸಮ್ಮೇಳನದ ಅನುಭವಗಳನ್ನು ಹಂಚಿಕೊಳ್ಳುವ, ನೆನಪುಗಳನ್ನು ಮೆಲುಕು ಹಾಕುವ ವೇದಿಕೆಯೂ ಆಯಿತು.

ಅ.ರಾ.ಮಿತ್ರ, ಪಾರ್ವತಿ, ನೀಳಾದೇವಿ, ಶಾಮಸುಂದರ್‌, ಮುಂತಾದವರು ಕಾರ್ಯಕ್ರಮದಲ್ಲಿ ಮಾತನಾಡಿದರು. ವೈಯಕ್ತಿಕ ಆಸಕ್ತಿಯಿಂದ ಲೇಖಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಏರ್ಪಡಿಸಿದ ವಾಸುದೇವ್‌ರ ಬದ್ಧತೆಯನ್ನು ಎಲ್ಲರೂ ಮೆಚ್ಚಿಕೊಂಡರು. ಅಮೆರಿಕಾದಿಂದ ವಾಸುದೇವ್‌ ಅವರು ಕಳುಹಿಸಿದ್ದ ಸಂದೇಶವನ್ನು ಜಯರಾಮರಾವ್‌ ಓದಿದರು.

ಲೇಖಕರನ್ನು ಒಟ್ಟುಗೂಡಿಸುವುದು, ಅವರಿಗೊಂದು ಹೂಗುಚ್ಛ ಹಾಗೂ ಸ್ಮರಣ ಸಂಚಿಕೆಯ ಪ್ರತಿ ನೀಡುವುದು, ಒಟ್ಟಿಗೆ ಕೂತು ಊಟ ಮಾಡುವುದು- ಇವೆಲ್ಲ ಸಾಹಿತ್ಯ ಕಲಿಸುವ ನಾಗರಿಕ ಗುಣಗಳೇ ಅಲ್ಲವೇ.

ಪ್ರತಿಯಾಂದು ಕೆಲಸಕ್ಕೂ ತಾರ್ಕಿಕ ಹಾಗೂ ಅರ್ಥಪೂರ್ಣ ಕೊನೆ ಮುಟ್ಟಿಸುವ ವಾಸುದೇವ್‌ರಂಥ ಸಜ್ಜನರ ಸಂತತಿ ಹೆಚ್ಚಬೇಕು. ಬರಹಗಾರನ ಕೆಲಸವನ್ನು ಮೆಚ್ಚುವ ಹಾಗೂ ಗೌರವಿಸುವ ಇಂತಹ ಸಂಪ್ರದಾಯ ‘ವಿಕಾಸ’ಗೊಳ್ಳಬೇಕು.

Thank you for choosing Thatskannada.com

shami.sk@greynium.com

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more