ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖಪುಟ

By Staff
|
Google Oneindia Kannada News

ಪ್ರಿಯ ಕನ್ನಡಿಗ/ ಕನ್ನಡತಿ,

ಯಾರಿಗೂ ಹೇಳದೇ ಕೇಳದೇ ಇಷ್ಟು ದಿನ ನಾಪತ್ತೆ ಆಗಿರುವ ನನ್ನ ಬಗ್ಗೆ ನಿನಗೆ ತುಂಬಾ ಕೋಪ ಬಂದಿರಬಹುದು. ಅಲ್ವಾ? ನಿನಗೆ ಚೆನ್ನಾಗಿ ತಿಳಿದಿರುವ ಹಾಗೆ, ನಾನು ಜಾಸ್ತಿ ಎಲ್ಲೂ ಹೊರಗೆ ಹೋಗಲ್ಲ, ಹೋದರೂ ನಿನಗೆ ಒಂದು ಮಾತು ಹೇಳದೆ ಹೋದವನೇ ಅಲ್ಲ. ನಿಜತಾನೆ?

ವಿಶ್ವಕನ್ನಡ ಸಮ್ಮೇಳನ ವರದಿ ಮಾಡಲು ಅಮೆರಿಕಾಗೆ ಮೂರು ದಿವಸ ಅಂತ ಹೋದವನು ಮೂವತ್ತು ದಿವಸ ಇದ್ದುಬಿಟ್ಟೆ. ಅದು ನಿಂಗೆ ಗೊತ್ತು. ಅಲ್ಲಿಂದ ಬೆಂಗಳೂರಿಗೆ ಬಂದವನು ಸ್ವಲ್ಪ ವಿಶ್ರಾಂತಿ ಪಡೆದು ನಿನಗೆ ಪತ್ರ ಬರೆಯೋಣ ಅನ್ನುವಷ್ಟರಲ್ಲೇ ಹಾಳಾದ್ದು ಕಾಯಿಲೆ ಬಿದ್ದೆ. ಈ ಮಧ್ಯೆ ನಿತ್ಯದ ಕೆಲಸ ಬೆಟ್ಟದಷ್ಟು ಬೆಳೆದು ನಿಂತಿದೆ. ಇಮೇಲ್‌ಗಳಿಗೆ ಉತ್ತರ ಬರೆಯಲಾಗುತ್ತಿಲ್ಲ. ಅಕೌಂಟು ಓಪನ್‌ ಮಾಡಿದರೆ ಜಗತ್ತಿನ ನಾನಾ ಮೂಲೆಗಳಿಂದ ಬಂದ ಪತ್ರಗಳು, ಬರಹಗಳು, ಕಂಪ್ಲೇಂಟುಗಳು ಮತ್ತು ಕಾಂಪ್ಲಿಮೆಂಟುಗಳು. ಯಾವುದಕ್ಕೆ ಉತ್ತರಿಸಲಿ, ಯಾವುದನ್ನು ಬಿಡಲಿ. ಇಂಥ ಗೊಂದಲದ ಸ್ಥಿತಿಯಲ್ಲಿ ಏನೂ ಮಾಡದೇ ಸುಮ್ಮನೆ ರಗ್ಗು ಹೊದ್ದುಕೊಂಡು ಮಲಗುವುದೇ ಕ್ಷೇಮ ಅಂತ ಭಾವಿಸಿ ಇನ್‌ಡೋರ್‌ ಪ್ರಪಂಚದಲ್ಲಿ ಕ್ಲೋಸ್‌ ಡೋರ್‌ ಡೊರೋತಿ ಆಗಿಬಿಟ್ಟಿದ್ದೆ. ಹೇಗಿದ್ದರೂ ಬೆಂಗಳೂರಿನಲ್ಲಿ ದಿನಕ್ಕೆ ನಾಲಕ್ಕು ಬಾರಿ ಮಳೆ ಹುಯ್ಯುತ್ತಿರುವುದರಿಂದ ಕೆಲಸ ಬಿಟ್ಟು ಮನೆಯಲ್ಲಿರುವುದಕ್ಕೆ ಚೆನ್ನಾಗಿರತ್ತೆ. ಯಾವುದೇ ಜವಾಬ್ದಾರಿ ಇಲ್ಲದ ಸುಖಕ್ಕೆ ಈ ಮನಸ್ಸು ಯಾವಾಗಾದರೊಮ್ಮೆ ಹಾತೊರೆಯುತ್ತೆ! ಹಾಗಾಗಿ ನನ್ನ ಮನಸ್ಸನ್ನು ನಾನೇ ಸಂತೈಸಿಕೊಳ್ಳುತ್ತಿದ್ದೆ.

ನಾನು ಎಲ್ಲೇ ಅಡಗಿರಲಿ, ಸ್ನೇಹಿತರು ಸುಮ್ಮನೆ ಬಿಟ್ಟಾರಾ? ನನ್ನ ನಂಬರಿಗೆ ಫೋನು ತಿರುಗಿಸಿದ್ದೇ ತಿರುಗಿಸಿದ್ದು. ತಮಾಷಿ ಗೊತ್ತಾ? ನಾನಂತೂ ಸೆಲ್‌ ಫೋನು ಎತ್ತುವುದಕ್ಕೇ ಹೋಗಲಿಲ್ಲ ! ಹಾಗೆ ಮಾಡುವುದರಿಂದ ಅರ್ಧ ಬೇಜಾರು ಅರ್ಧ ಸಂತೋಷ ಆಗತ್ತೆ. ಮೊದಲನೆಯದು ನಿನಗೆ, ಎರಡನೆಯದು ನನಗೆ!

ಸದಾ ಚಟುವಟಿಕೆಯಿಂದ ಓಡಾಡುವವರು ಒಂದು ಮೂಲೆಯಲ್ಲಿ ಬಿದ್ದರೆ ಮನಸ್ಸಿಗೆ ಏನೋ ಒಂಥರಾ ಬೇಜಾರು ಆಗತ್ತೆ ನೋಡು, ಅಂಥ ಬೇಜಾರು ನನಗೆ ಆಯಿತು. ಅದಿರಲಿ. ಚೆನ್ನಾಗಿ ಉಂಡು-ತಿಂದು ಹಾಯಾಗಿರುವ ನನಗೆ ಅದೇನು ಏನು ದೊಡ್ಡ ರೋಗ ಬಂದಿತ್ತು ಅಂದಿಯಾ?

ಆವತ್ತು ಯಾಕೋ ಎದೆ ನೋವು ಬಂದಂಗಾಯಿತು. ರಿಬ್‌ಕೇಜ್‌ನಲ್ಲಿ ಸಣ್ಣಗೆ ನೋವು. ಎಡಗೈ ನೋವು ಬೇರೆ. ಹೃದಯ ಸಂಬಂಧಿ ಕಾಯಿಲೆ ಇದ್ದರೆ ಹಾಗೆಲ್ಲ ಸಿಂಪ್‌ಟಮ್‌ ಇರತ್ತೆ ಅಂತ ಯಾರೋ ಹೇಳಿದ್ದು ಕೇಳಿದ್ದೆ. ಹೆಂಗಾದರೂ ಆಗಲಿ ವಸಿ ಡಾಕಟರ್‌ಗೆ ತೋರಿಸುವ ಅಂತ ಜಯನಗರದ ಒಂದು ಆಸ್ಪತ್ರೆಗೆ ಹೋದೆ. ಒಂದೇ ಒಂದು ಇಸಿಜಿ ಮಾಡಿದ್ದೇ ತಡ , ನಿಮ್ಮ ಹಾರ್ಟ್‌ನಲ್ಲಿ ಒಂದು ತೂತು ಆಗೈತೆ ಅಂತ ಚೀಟಿ ಬರೆದು ಕೈಗಿಟ್ಟ , ಆವಯ್ಯ. ಚೀಟಿ ಜೇಬಿನಲ್ಲಿ ತುರುಕಿಕೊಂಡವನೇ ತಣ್ಣಗೆ ಮನೆಗೆ ಬಂದೆ. ಆಕಸ್ಮಾತ್‌ ಆಪರೇಷನ್ನು ಗೀಪರೇಷನ್ನು ಅಂತ ಪರಿಸ್ಥಿ ತಿ ಬಂದರೆ ಯಾವುದಕ್ಕೂ ತಯ್ಯಾರು ಇರೋಣ ಅಂತ ಮತ್ತೆ ಹಾಸಿಗೆಯಿಂದ ಪುಟಿದೆದ್ದು ಬಂದೆ. ಮೊದಲು ಆರೋಗ್ಯ ವಿಮೆ ಕಚೇರಿಗೆ ಹೋಗಬೇಕು. ಅವರ ಇಪ್ಪತ್ತೆಂಟು ನಿಯಮಗಳನ್ನು ತಿಳಿದುಕೊಳ್ಳಬೇಕು, ತಿಳಿದುಕೊಂಡು ಅರ್ಥೈಸಿಕೊಳ್ಳಬೇಕು , ಆನಂತರ ಹಾಗೆಯೇ ನಡೆದುಕೊಳ್ಳಬೇಕು. ಇದು ನಿನ್ನಂತೆ ನನಗೂ ಕಷ್ಟವೇ. ಒಂದು ಫೋನು ಅಥವಾ ಒಂದೆರಡು ಇಮೇಲ್‌ನಲ್ಲಿ ಈ ಕೆಲಸಗಳೆಲ್ಲ ಆಗುವಂತಿದ್ದರೆ ಎಷ್ಟು ಅನುಕೂಲ ಆಗುತ್ತಿತ್ತು ಗೊತ್ತಾ? ನಾನು ಇರುವುದು ಭಾರತದಲ್ಲಿ ಎಂದು ಗೊತ್ತಿದ್ದರೂ ಈ ಮಾತು ಹೇಳುತ್ತಿದ್ದೇನೆ, ಇರಿಟೇಟ್‌ ಆಗಬೇಡ.

ಹೇಗಾದರೂ ಈಗಲಿ ಸೆಕೆಂಡ್‌ ಒಪೀನಿಯನ್‌ ತೆಗೆದುಕೊಳ್ಳೋಣ ಅಂತ ಇನ್ನೊಬ್ಬ ಡಾಕಟರ್‌ ತವ ಹೋದೆ. ಸೀದಾ ಟ್ರೆಡ್‌ ಮಿಲ್‌ ಹತ್ತು, ನಿನಗೆ ಇಸಿಜಿ ಪಾಸಿಜಿ ಬ್ಯಾಡ ಅಂದುಬಿಟ್ಟ ಆತ. ಒಂದು ನಿಮಿಷ ನಡೆಯದವನು ಒಂಬತ್ತು ನಿಮಿಷ TMT ಸೈಕಲ್‌ ತುಳಿದೆ. ಇನ್ನೂ ಸ್ವಲ್ಪ ನಡೆಯುತ್ತಿದ್ದೆ. ಸಾಕು ಇಳಿಯಿರಿ ಅಂತ ನರ್ಸ್‌ಮ್ಮ ಹೇಳ್ತು.

ಜುಜೂಬಿ ಟಿಎಂಟಿ ಟೆಸ್ಟ್‌ಗೆ 910 ರೂಪಾಯಿ ಕೊಟ್ಟು ಆಸ್ಪತ್ರೆಯಿಂದ ಹೊರಗೆ ಬಂದವನೇ ಹೋಟಲ್‌ ಅಂಬಾಭವನ್‌ಗೆ ಬಂದು ಒಂದೇ ಒಂದು ಸಿಗರೇಟು ಹಚ್ಚಿ ಜೋಡಿ ಖಾಲಿದೋಸೆ ಆರ್ಡ್‌ರ್‌ ಮಾಡಿ ಕೂತೆ. ಅಲ್ಲಿ ಬಂದುಹೋಗುವವರ ಹಾರ್ಟ್‌ ಹೇಗಿರಬಹುದು ಎಂದು ಕಣ್ಣಿನಲ್ಲೇ ಇಸಿಜಿ ತೆಗೆಯುತ್ತಿದ್ದೆ.

ನನ್ನ ಕತೆ ಏನು? ಫಸ್ಟ್‌ ಒಪಿನಿಯನ್‌ ಕರೆಕ್ಟಾ? ಸೆಕೆಂಡ್‌ ಒಪೀನಿಯನ್‌ ಸರೀನಾ? ಥರ್ಡ್‌ ಒಪೀನಿಯನ್‌ ಪಡೆದರೆ ಹೇಗೆ? ಯೋಚಿಸುವಷ್ಟರಲ್ಲಿ ದೋಸೆ ಬಂತು. ಎರಡನೇ ಸಲ ಚಟ್ನಿ ಹಾಕಿಸಿಕೊಂಡು ತಿಂದು ಮುಗಿಸುವಷ್ಟರಲ್ಲಿ ಎರಡು ಮೂರು ಯೋಚನೆಗಳು ಸುಳಿದಾಡಿದವು. ಯಾವುದಾದರೂ ಒಂದು ಒಪೀನಿಯನ್‌ ಸರಿಯಾಗಿರುತ್ತದೆ. ಅದರಂತೆ ವರ್ತಿಸುವುದು. ಸರಿ ಇಲ್ಲದ ಒಪೀನಿಯನ್‌ ಕೊಟ್ಟ ವರ ವಿರುಧ್ಧ ಕೋರ್ಟಿಗೆ ಹೋಗುವುದಾ? ಒಂದು ತೀರ್ಮಾನಕ್ಕೆ ಬಂದೆ : ಮೊದಲು ಮನೆಗೆ ಹೋಗೋಣ. ಯಾವ ಒಪೀನಿಯನ್ನೂ ಬೇಡ. ಮನುಷ್ಯ ಒಪೀನಿಯನೇಟ್‌ ಆಗಿರುವುದೇ ತಪ್ಪು .

ನಿನಗೆ ಆಶ್ಚರ್ಯ ಆಗಬಹುದು. ಮನೆಗೆ ಹೋಗಿ ಹಾಸಿಗೆ ಮೇಲೆ ಬಿದ್ದರೆ ಕಾಯಿಲೆ ಗುಣವಾಗತ್ತಾ ಅಂತ. ಆಗತ್ತೋ ಬಿಡತ್ತೋ, ನಾನಂತೂ ದಿಂಬಿಗೆ ತಲೆ ಇಟ್ಟೆ. ಇಡುವಷ್ಟರಲ್ಲಿ ಚೆನ್ನೈನಿಂದ ಫೋನು ಬಂತು. ವೀರಪ್ಪನ್‌ ನೆಗೆದು ಬಿದ್ದ ಅಂತ ನಮ್ಮ ಕರೆಸ್ಪಾಂಡೆಂಟ್‌ ತಮಿಳಿಂಗ್ಲಿಷ್‌ನಲ್ಲಿ ಹೇಳಿದ. ಆಫೀಸಿಗೆ ಫೋನು ಮಾಡಿ ವಿಷಯ ತಿಳಿಸಿದವನೇ ವೀರಪ್ಪನ್‌ ಆತ್ಮಕ್ಕೆ ಶಾಂತಿ ಕೋರುತ್ತಾ ಮತ್ತೆ ಮಲಗಿದೆ.

ದುರುಳ ವೀರಪ್ಪನ ಸಾವನ್ನು ಇಡೀ ವಿಶ್ವ ಸೆಲೆಬ್ರೇಟ್‌ ಮಾಡುತ್ತಿರುವಾಗ ಅವನ ಆತ್ಮಕ್ಕೆ ಶಾಂತಿ ಕೋರುವಷ್ಟು ಔದಾರ್ಯ ನನಗೇಕೆ ಎಂದು ನೀನು ಕೇಳಬಹುದು. ದಯವಿಟ್ಟು ತಿಳಿದುಕೊ. ವೀರಪ್ಪನ್‌ ಕ್ರೂರಿ, ಮನುಷ್ಯ ಕುಲಕ್ಕೇ ಅಪಮಾನವಾಗಿದ್ದ, ನಿಜ. ಆದರೆ, ಅವನಲ್ಲಿ ಒಂದು ಗುಣ ಇತ್ತು. ಅವನು ಹೇಳಿದಂತೆ ಮಾಡುತ್ತಿದ್ದ, ಮಾಡಿದಂತೆ ಹೇಳುತ್ತಿದ್ದ. ಮಲ್ಟಿಪಲ್‌ ಪರ್ಸನಾಲಿಟಿ ಇಲ್ಲದವರ ಬಗ್ಗೆ ಚಿಟಿಕೆಯಷ್ಟಾದರೂ ಗೌರವವಿರಲಿ ಅಂತ ಹೇಳುವುದಷ್ಟೇ ನನ್ನ ಈ ಪತ್ರದ ಸಾರ.

ಬೈದ ಬೈ, ನೀನೂ ಹೇಗಿದ್ದೀಯಾ? ನಾನು ಎಲ್ಲಿರುತ್ತೇನೋ ಎನೋ, ನೀನಂತೂ ಆಗಾಗ ಪತ್ರ ಬರೆಯುತ್ತಿರು.

ನಿನ್ನ,

ಶಾಮ್‌,
[email protected]

Thank you for choosing Thatskannada.com
[email protected]


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X