• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಸ್‌.ಕೆ. ಶಾಮಸುಂದರ

By Staff
|

ತುಮಕೂರಿನ ತಂಗಿ ಶಶಿಕಲಾ ವಾಷಿಂಗ್ಟನ್‌ನಲ್ಲಿ ಸಿಕ್ಕಾಗ ಕನ್ನಡಪ್ರಜ್ಞೆ ದೀಪವೊಂದು ಸುಳಿದಂತಾಯಿತು. ಕಥೆ-ಕವಿತೆಯ ಭಾವುಕ ಹೆಣ್ಣುಮಗಳ ಮಾತು-ಚಿತ್ರಾನ್ನದ ಸವಿ ಇನ್ನೂ ಹಸಿ ಹಸಿರು.

S.K.Shama Sundara ಎಸ್‌.ಕೆ. ಶಾಮಸುಂದರ

shami.sk@greynium.com

Shashikala Chandrashekhar‘ಬೆಂಗಳೂರು ಜಯನಗರದ ಜೆ. ಎಸ್‌. ಎಸ್‌. ಸಭಾಂಗಣದಲ್ಲಿ ನನ್ನ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ನೀವು ತಪ್ಪದೆ ಬರಲೇಬೇಕು’ ಎಂದು ಆಕೆ ತುಮಕೂರಿನಿಂದ ಫೋನು ಮಾಡಿ ಕರೆದರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಹಾಗಿರಲಿ, ಕಡೆಯಪಕ್ಷ ‘ಬರಕ್ಕೆ ಆಗ್ತಾ ಇಲ್ಲಾರೀ, ಬಿಡುಗಡೆ ಸಮಾರಂಭಕ್ಕೆ ಹಾರ್ದಿಕ ಶುಭಾಶಯಗಳು’ ಎಂದು ಹೇಳುವಷ್ಟೂ ನನಗೆ ಆವತ್ತು ಪುರುಸೊತ್ತಿರಲಿಲ್ಲ. ಗಡಿಬಿಡಿ ಗಡಿಬಿಡಿ ಗಡಿಬಿಡಿ. ಯಾವುದೇ ಒಂದು ದೇಶ ಬಿಟ್ಟು ಇನ್ನೊಂದು ದೇಶಕ್ಕೆ ಕಡೇ ಗಳಿಗೆಯಲ್ಲಿ ಹೊರಟು ನಿಲ್ಲುವುದೆಂದರೆ ತಮಾಷೀನಾ? ಸಮಯ, ಸಂಪನ್ಮೂಲ, ವೀಸಾ, ಒಂದಾ ಎರಡಾ? ಡೆಲ್ಲಿಯಲ್ಲಿ ವೀಸಾ ಇಂಟರ್‌ವ್ಯೂ, ಕುರಿದೊಡ್ಡಿ ಕುರುಕ್ಷೇತ್ರ ಖ್ಯಾತಿಯ ಏರ್‌ ಇಂಡಿಯಾ, ಎಕಾನಮಿ ಕ್ಲಾಸ್‌ ಪ್ರಯಾಣವೇ ದುಬಾರಿ ಎನಿಸುವ ಲುಫ್ತಾನ್ಸ , ಒಂದು ತಿಂಗಳ ಮುಂಚೆಯೇ ಸೋಲ್ಡ್‌ ಔಟ್‌ ಬೋರ್ಡ್‌ ನೇತುಹಾಕಿಕೊಂಡಿರುವ ಬ್ರಿಟಿಷ್‌ ಏರ್‌ವೇಸ್‌.. ಏನಪ್ಪಾ ಗತಿ ಎನ್ನುವುದು ನನ್ನ ಯೋಚನೆ. ಎಲ್ಲೂ ಸೀಟು ಸಿಗದಿದ್ದರೆ ಕೊನೆಗೆ ಬಿಟಿಎಸ್‌ ಬಸ್ಸು ಹತ್ತಿಕೊಂಡಾದರೂ ಅಮೆರಿಕಾಗೆ ಹೊರಡುವುದೆಂದು ಭೀಷ್ಮ ಪ್ರತಿಜ್ಞೆ ಮಾಡಿದ್ದ ನನಗೆ ಕೊನೆಗೆ ಡೆಲ್ಟ ಏರ್‌ಲೈನ್ಸ್‌ನಲ್ಲಿ ಅಂತೂ ಇಂತು ಒಂದು ಸೀಟು ಖಾತ್ರಿ ಆಗುವ ಹೊತ್ತಿಗೆ ಸಾಕುಬೇಕಾಯಿತು. ಆಳಾಗಲೀ ಅರಸನಾಗಲೀ ಬದುಕು ಯಾರಿಗೂ ಸುಸೂತ್ರವಲ್ಲ. ಹಾಗಾಗಿ ಇದನ್ನೆಲ್ಲ ನಾನು ಫಜೀತಿ ಎಂದು ಭಾವಿಸುವುದಿಲ್ಲ. ಯಾಕೆಂದರೆ, ಬದುಕು ಸಾಗುವುದೇ ಇಂಥ ಫಜೀತಿಗಳ ನಡುವೆ. ಆದ್ದರಿಂದ ನಾವೆಲ್ಲರೂ ಇವತ್ತಿನಿಂದಲೇ ಫಜೀತಿಗಳನ್ನು ಪ್ರೀತಿಸುತ್ತಾ ಅದರೊಂದಿಗೆ ಬದುಕಲು ಪ್ರಾರಂಭಿಸೋಣ!

ಬಹುಶಃ ನನ್ನ ಫಜೀತಿಗಳು ಯಾವ ಪ್ರಕಾರದಲ್ಲಿ ಇವೆ ಎಂದು ಶಶಿಕಲಾ ಅವರಿಗೆ ಅರ್ಥವಾಗಿರಬೇಕು. ಅದಕ್ಕೇ ಅವರು ‘ಪುಸ್ತಕ ಬಿಡುಗಡೆಗೆ ಬನ್ನಿ’ ಎಂದು ತುಮಕೂರಿನಿಂದ ಮತ್ತೆ ಫೋನು ಮಾಡಲಿಲ್ಲ. ಅತ್ತ ನಾಗತಿಹಳ್ಳಿ ಚಂದ್ರಶೇಖರ್‌ ಅವರ ಅಭಿವ್ಯಕ್ತಿ ಪ್ರಕಾಶನ ಪ್ರತಿವರ್ಷ ಸ್ವಾತಂತ್ರದಿನದಂದು ಏರ್ಪಡಿಸುವ ಸಮಾರಂಭದಲ್ಲಿ ಶಶಿಕಲಾ ಚಂದ್ರಶೇಖರ್‌ ಅವರ ಚೊಚ್ಚಲ ಕೃತಿಯ ಹೆರಿಗೆ ಸಾಂಗವಾಗಿ ನೆರವೇರುತ್ತಿದ್ದರೆ ಇತ್ತ , ಅಮೆರಿಕಾ ಬಸ್ಸು ಹತ್ತಲು ನಾನು ರೆಡಿಯಾಗುತ್ತಿದ್ದೆ. ಈ ನಡುವೆ ಏನೇನಾಯಿತು ಎಂಬುದನ್ನು ಆಮೇಲೆ ನಿಮಗೆ ಹೇಳುತ್ತೇನೆ.

ಭೇಟಿ ಆಗಬೇಕು, ಭೇಟಿಮಾಡಿ ಕನ್ನಡದಲ್ಲಿ ನಾಲಕ್ಕು ಮಾತನಾಡಬೇಕು, ಬೈಟು ಕೊಲಂಬಿಯಾ ಕಾಫಿ ಕುಡಿಯಬೇಕು ಎಂಬ ಆಸೆ ಇದ್ದರೆ, ಆಸೆ ಹೇಗಾದರೂ ಕೈಗೂಡತ್ತೆ. ಟಾಂಪದಿಂದ ವಿಮಾನ ಹತ್ತಿ ದವನು ಬಾಲ್ಟಿಮೋರ್‌ ಏರ್‌ಪೋರ್ಟ್‌ನಲ್ಲಿಳಿದು ಸೀದಾ ಶ್ರೀನಾಗೇಶ್‌/ಶಾಲಿನಿ ಅವರ ಜರ್ಮನ್‌ ಟೌನ್‌ ಮನೆಗೆ ಹೋದೆ. ಅಲ್ಲಿಗೆ ತಲುಪುವ ಹೊತ್ತಿಗೆ ಭೂಮಿಕಾ ಬಳಗದ ವಿಜಯ ಮನೋಹರ್‌ (ಅವರನ್ನು ವಾಷಿಂಗ್‌ಟನ್‌ ಡಿಸಿ ಏರಿಯಾದ ಕನ್ನಡಿಗರು ಪ್ರೀತಿಯಿಂದ ವಿಜಯಮ್ಮಾ ಎಂದು ಕರೆಯುತ್ತಾರೆ) ಅವರ ಇ-ಮೇಲ್‌ ಬಂದಿತ್ತು. ಸೆಪ್ಟೆಂಬರ್‌ 12ರ ಭಾನುವಾರ ಮಧ್ಯಾನ್ಹ ಭೂಮಿಕಾ ಚಾವಡಿಯಲ್ಲಿ ನನ್ನ ಭಾಷಣ ಕಾರ್ಯಕ್ರಮ ಏರ್ಪಡಿಸಿದ್ದರು.

ಭಾನುವಾರ ಬೆಳಗ್ಗೆ ಬೇಗ , ಅಂದರೆ ಚುಮುಚುಮು 8 ಗಂಟೆ ಏಳಬೇಕು. ಎಷ್ಟು ಬೇಗ ಬೇಕಾದರೂ ಏಳಬಹುದು ಎದ್ದು ರೆಡಿಯಾಗುವುದಿದೆ ನೋಡಿ, ಅದೇ ತುಂಬ ಕಷ್ಟ. ಆದರೆ, ಸಾರಥಿ ಶ್ರೀವತ್ಸ ಜೋಶಿ ಎಂಟುವರೆ ಅಂದರೆ ಎಂಟುವರೆಗೆ ಬರುವ ಆಸಾಮಿ. ನಾನು ಎದ್ದೇಳುವ ಹೊತ್ತಿಗೆ ಅವರ ಅರ್ಧ ದಿನದ ಶಿಸ್ತುಬದ್ಧ ಜೀವನ ಮುಗಿದಿರುತ್ತೆ. ಈ ಮಧ್ಯೆ ವಿಕಟಕವಿ ಎಂ.ಎಸ್‌ ನಟರಾಜ್‌ ಅವರ ಮನೆಯಲ್ಲಿ ಬ್ರಂಚ್‌ ಕಾರ್ಯಕ್ರಮದ ಲೈನ್‌-ಅಪ್‌ ಆಗಿದೆ. ಜೋಶಿ ಅವರಿಗೆ ಹೆದರಿಕೊಂಡು ಬೇಗಬೇಗ ರೆಡಿ ಆಗಿ ಎರಡು ದೊಡ್ಡ ಕಪ್‌ ಕಾಫಿಯ ಬ್ರೇಕ್‌ ಫಾಸ್ಟ್‌ ಮುಗಿಸಿ ಕಾರಿನಲ್ಲಿ ಕರಾರುವಾಕ್‌ ಸಮಯಕ್ಕೆ ಕುಳಿತೆ, ಕುಳಿತು ಬೆಲ್ಟ್‌ ಹಾಕಿಕೊಳ್ಳುವುದನ್ನು ಯಥಾಪ್ರಕಾರ ಮರೆತೆ.

ಗೀತಾ ನಟರಾಜ್‌ ಅವರ ಪಾಕಶಾಲೆಯಿಂದ ಚುಂಯ್‌ ಅಂತ ಚಿಮ್ಮಿಬರಲಿರುವ ಬರುವ ಬ್ರಂಚ್‌ ಇರುವುದು 11.30ಕ್ಕೆ. ಅಷ್ಟರೊಳಗೆ ಶಶಿಕಲಾ ಚಂದ್ರಶೇಖರ್‌ ಅವರ ಮನೆಗೆ ಫ್ಲ್ಯಾಷ್‌ ವಿಸಿಟ್‌ ಕೊಡುವುದೆಂದು ನಿಷ್ಕರ್ಷವಾಗಿತ್ತು. ಅದರಂತೆ ಒಂಬತ್ತೂವರೆಗೆ ಸರಿಯಾಗಿ ದಟ್ಸ್‌ಕನ್ನಡದ ಇನ್ನೊಬ್ಬ ಲೇಖಕಿ-ಗೆಳತಿಯ ಮನೆ ತಲುಪಿದ್ದಾಯಿತು.

ಶಶಿಕಲಾ ಚಂದ್ರಶೇಖರ್‌ ಅವರು ಮೂಲತಃ ತುಮಕೂರಿನ ತಂಗಿ. ಲೇಖಕಿಯಾಗಿ, ಕನ್ನಡ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಅನುಭವವಿರುವ ಕಾರ್ಯಕರ್ತೆ. ಗಣೇಶನ ಹಬ್ಬ ಬಂದಾಗ ಅವರು ಸ್ವತಃ ಗಣೇಶನ ಮೂರ್ತಿಯನ್ನು ತಯಾರಿಸುತ್ತಾರೆ. ಹಾಗೆ ಮಾಡುವುದು ಕಲೆ ಮತ್ತು ಕುಶಲಗಾರಿಕೆ ಹಾಗೂ ಹೆಚ್ಚುಗಾರಿಕೆಯೂ ಹೌದು. ತಮ್ಮ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕಾಗಿರುವ ಅಮೆರಿಕಾ ಸಮಾಜದ ದರ್ದೂ ದೌದು. ಅಮೆರಿಕಾದಲ್ಲಿ ಜೀವನ ಮಾಡಬೇಕಾದರೆ ಗಣೇಶನ್ನು ತಯಾರಿಸುವುದು ಹೇಗೆ ಎನ್ನುವುದನ್ನೂ ಕಲಿಯಬೇಕು, ಷಣ್ಮುಖನನ್ನು ತಯಾರಿಸುವುದನ್ನೂ ಕಲಿಯಬೇಕಾಗತ್ತೆ. ಗಣೇಶನನ್ನು ತಾನೇ ಮಾಡಿಕೊಳ್ಳುವ ಗೌರಿಯರಲ್ಲಿ ಶಶಿಕಲಾ ಒಬ್ಬರಾಗಿರಬಹುದಷೆ ್ಟ. ಸಮಾಜಮುಖಿಯೂ ತಾನಾಗಿರುವ ಶಶಿ ಅವರ ಅನುಭವ ಬುತ್ತಿಯಲ್ಲಿ ಕಾವೇರಿ ಕನ್ನಡ ಸಂಘದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಅಗಳುಗಳೂ ಇವೆ. ಅವರ ಸಣ್ಣ ಕಥೆಗಳು ನಮ್ಮ ಪೋರ್ಟಲ್‌ ಅಲ್ಲದೆ ಕನ್ನಡನಾಡಿನ ಅನೇಕ ಪತ್ರಿಕೆ - ನಿಯತ ಕಾಲಿಕೆಗಳಲ್ಲಿ ಬೆಳಕು ಕಂಡಿವೆ. ಕನ್ನಡ ಪ್ರಜ್ಞೆಯನ್ನು ಜೋಪಾನವಾಗಿ ಇಟ್ಟುಕೊಳ್ಳುವುದರ ಜತೆಗೆ ಕರ್ನಾಟಕ ಮತ್ತು ಅಮೆರಿಕಾ ಜೀವನವನ್ನು ಪ್ರತಿಫಲಿಸುವ ಅವರ ಸಣ್ಣ ಕತೆಗಳನ್ನು ನೀವೊಮ್ಮೆ ಓದಬೇಕು. ಗದ್ಯದ ಜತೆಗೆ ಅವರ ಪದ್ಯವೂ ಹೃದ್ಯವಾಗಿರುವುದೊಂದು ವಿಶೇಷ.

ಒಬ್ಬ ಬರಹಗಾರನ ಅಥವಾ ಬರಹಗಾರ್ತಿಯ ಬರಹಗಳನ್ನು ಓದುತ್ತಿದ್ದ ಹಾಗೆ ಆ ಲೇಖಕರ ಬಗ್ಗೆ ಓದುಗನಲ್ಲಿ ತನ್ನದೇ ಆದ ವ್ಯಕ್ತಿ ಚಿತ್ರಗಳು ಮೂಡತೊಡಗುತ್ತವೆ. ಓದಿನ ಗುಣ ಅಂಥದು. ನಗೆ ಉಕ್ಕಿಸುವ ಹಾಸ್ಯ ಬರಹಗಾರ ಸ್ವಭಾವತಃ ಗಂಭೀರವದನನಾಗಿ ಇರಬಲ್ಲ. ಗಂಭೀರ ಬರವಣಿಗೆಯಿಂದ ಓದುಗನ ಮನಸ್ಸು ಮತ್ತು ವಿವೇಚನಾ ಶಕ್ತಿಯನ್ನು ನೇವರಿಸಬಲ್ಲ ಬರಹಗಾರ್ತಿ ಸ್ವಭಾವದಿಂದ ‘ಹರಟೆ ಮಲ್ಲಿ‘ಯೂ ಆಗಿರಬಹುದು.

ಶಶಿ ಜತೆಗೆ ಮಾತಾಡುತ್ತಾ ಕೂತರೆ ಮೂರು ದಿವಸ ಕಳೆದರೂ ಒಂದು ಚಾಪ್ಟರ್‌ ಕಂಪ್ಲೀಟ್‌ ಆಗುವುದಿಲ್ಲ . ಆಕೆ ಪಾಪ್‌ಕಾರ್ನ್‌ ಸಿಡಿದ ಹಾಗೆ ಚಟಪಟಪಟ ಸಿಡಿಯುತ್ತಿರುತ್ತಾರೆ. ಮಾತಾಡುವ ಮುಂಚೆ, ಮಾತಿನ ಮಧ್ಯೆ ಮತ್ತು ಮಾತು ಮುಗಿಸಿದ ಮೇಲೆ ಅವರು ನಗುತ್ತಾರೆ. ನಾನು, ಜೋಶಿ ಮತ್ತು ಶಶಿ ಹಾಗೂ ಹಾಗೂ ಭಾರತದಿಂದ ಚಿಕಿತ್ಸೆಗೆಂದು ಬಂದಿರುವ ಶಶಿಕಲಾ ಅವರ ಅಕ್ಕ, ಹೀಗೇ ಗಪ್ಪ ಹೊಡೆಯುತ್ತಿರುವಾಗ ಶಶಿಯ ಬೆಟರ್‌ ಆಫ್‌ ಚಂದ್ರು ಅಟ್ಟದಿಂದ ಖಣ್ಣು ಉಜ್ಜಿಕೊಳ್ಳುತ್ತಾ ಇಳಿದು ಬಂದರು. ಯಾರಾದರೂ ನನ್ನ ನಿದ್ದೆ ಗೆ ಅಡ್ಡಬಂದರೆ ‘ವಂಶ ಹಾಳಾಗ’ ಎಂತ ಒಳಗೊಳಗೇ ಬಯ್ದುಕೊಳ್ಳುವ ನಾನು, ಅಮೆರಿಕಾ ಯಾತ್ರೆಯಲ್ಲಿ ಅನೇಕರ ನಿದ್ರಾ ಸುಖವನ್ನು ಹಾಳುಗೆಡವಿ ಪಾಪ ಕಟ್ಟಿಕೊಂಡಿದ್ದೇನೆ.

ಚಂದ್ರಶೇಖರ್‌ ನನ್ನ ಹಾಗೆ ನಿದ್ದೆ ಕೆಡಿಸುವವರ ವಂಶದ ಹೆಸರು ಹೇಳಿ ಬಯ್ಯುವವರಲ್ಲ . ವಂಶವಾಹಿಗಳನ್ನು ಕೆದಕಿ-ಬೆದಕಿ ನೋಡುವುದು ಅವರ ವೃತ್ತಿ. ಸುದೀರ್ಘ ಸಂಶೋಧನೆಯ ಫಲವಾಗಿ ವಂಶವಾಹಿಯಾಂದನ್ನು ಕಂಡುಹಿಡಿದ ಖ್ಯಾತಿ ಚಂದ್ರು ಅವರದ್ದು. ಮಾತು ಕಡಿಮೆ, ಹೆಚ್ಚೆಂದರೆ ಒಂದು ಎಕಾನಮಿ ಕ್ಲಾಸ್‌ ನಗೆ. ಸ್ವಭಾವದಲ್ಲಿ ಅರ್ಧಾಂಗಿಗೆ ರೈಟ್‌ ಆಪೋಸಿಟ್ಟು. ಶಶಿಕಲಾ ಹೇಳುತ್ತಿದ್ದರು : ಚಂದ್ರುಗೆ ಸದಾ ವಂಶವಾಹಿಗಳದ್ದೇ ಗುಂಗು . ಬೆಳಗಿನಿಂದ ಬೈಗಿನವರೆಗೆ ಜೀನುಗಳ ಲೋಕದಲ್ಲೇ ವಿಹರಿಸುತ್ತಾರೆ. At the end of the day he comes to the conclusion that human beings are after all a bundle of molecules.

ಆ ವಿಚಾರಕ್ಕೆ ಬಂದರೆ ಹೆಂಡತಿ ಗಂಡನಿಗೆ ಮತ್ತೆ ತದ್ವಿರುದ್ಧ. ಅವನು ವಸ್ತು ನಿಷ್ಠ, ಇವಳು ಭಾವಜೀವಿ. ಬಳಸಿಕೊಂಡರದನೆ ಅದಕು ಇದಕು ಎದಕು.

ಅದು ಇದು ಹರಟೆ ಹೊಡೆಯುತ್ತಾ ಹೊಡೆಯುತ್ತಾ ಚಿತ್ರಾನ್ನದ ಪ್ಲೇಟು ಖಾಲಿಯಾಗುತ್ತಿದ್ದಂತೆಯೇ ಬೆಂಗಳೂರಿನಲ್ಲಿ ಬಿಡುಗಡೆ ಆದ ಅವರ ಚೊಚ್ಚಲ ಕಥಾ ಸಂಕಲನ ನನ್ನ ಕೈತುಂಬಿತು. ಬೈಟು ಕಾಫಿ ಹೀರಿ ಶಶಿ-ಚಂದ್ರಗೆ ಬೈಬೈ ಹೇಳಿ ಭೂಮಿಕಾ ಕಾರ್ಯಕ್ರಮದಲ್ಲಿ ಭಾಷಣ ಬಿಗಿಯಲು ಹೊರಟೆ. ಇದಾಗಿ ಮೂರು ವಾರ ತುಂಬಿಬಂದಿದೆ. ಇವತ್ತು ಮತ್ತೆ ವಾಷಿಂಗ್‌ಟನ್‌ ಕಡೆ ತಿರುಗಿ ನೋಡಿದರೆ ಶಶಿಕಲಾ ಮತ್ತೆ ಪ್ರತ್ಯಕ್ಷ!

ನಾಳೆಯಲ್ಲ ನಾಡಿದ್ದು ಅಕ್ಟೋಬರ್‌ 10, ಭಾನುವಾರ ಮಧ್ಯಾನ್ಹ 2 ಗಂಟೆಗೆ ಭೂಮಿಕಾ ಚಾವಡಿಯಲ್ಲಿ ಶಶಿಕಲಾ ಅವರ ಕಾರ್ಯಕ್ರಮ ಫಿಕ್ಸ್‌ ಆಗಿದೆ. ‘ನಾನು ಈ ಕಥೆಗಳನ್ನು ಯಾಕೆ ಬರೆದೆ?’ ತಮ್ಮ ಕಥಾ ಸಂಕಲದ ಆಶಯಗಳ ಕುರಿತು .. ಶಶಿಕಲಾ ಅಲ್ಲಿ ಮಾತಾಡುತ್ತಾರೆ, ನೀವೂ ಹೋಗಿ ಬನ್ನಿ. ಕಳೆದ ತಿಂಗಳು ನಾನು ಕುಳಿತು ಮಾತನಾಡಿದ ಕುರ್ಚಿಯಲ್ಲಿ ಶಶಿಕಲಾ ಆಸೀನರಾಗಿ ಕನ್ನಡ ಕಥಾಲೋಕಕ್ಕೆ ನಿಮ್ಮನ್ನು ಕರೆದೊಯ್ಯುತ್ತಾರೆ.

ಬರುವ ಭಾನುವಾರ ಮಧ್ಯಾನ್ಹ ಬಾವರ್‌ ಕಮ್ಮುನಿಟಿ ಹಾಲ್‌ನಲ್ಲಿ ನೀವು ಒಂದೆರಡು ಗಂಟೆ ಕಾಲ ಕಳೆಯಬಹುದು. ಕಥಾ ಸಂಕಲನದ ಶೀರ್ಷಿಕೆ ‘ದೀಪವೂ ನಿನ್ನದೆ ಗಾಳಿಯೂ ನಿನ್ನದೆ..’. ‘ದೀಪವೂ ನಿನ್ನದೆ ಗಾಳಿಯೂ ನಿನ್ನದೆ, ಆರದಿರಲಿ ಬೆಳಕು...’ (You are the architect of your own future - My best wishes) ಒಂದು ಕವನದ ಸಾಲು. ಕವಿ ಕೆ. ಎಸ್‌. ನರಸಿಂಹಸ್ವಾಮಿ.

ಅಂಗೈಯಲ್ಲಿ ಅಮೆರಿಕ !

ಜೋಳದ ಸಿರಿಬೆಳಕಿನಲ್ಲಿ ಮಿಸ್ಸಿಸಿಪ್ಪಿಯ ಬಳುಕಿನಲ್ಲಿ ...

ಡಾಲರ್‌ಗಳ ಪ್ರಪಂಚಕ್ಕೆ ಅಭಿಮಾನ ದಂಡೆತ್ತಿ ಬಂದಾಗ ವಿಶ್ವಾಸದ ತಿಜೋರಿ ಭರ್ತಿ

Thank you for choosing Thatskannada.com

shami.sk@greynium.com

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X