• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಸ್ಕೆ. ಶಾಮಸುಂದರ

By Super
|

ನೆ ಮುಂದಲ ಜಗಲಿಯಲ್ಲಿ ಕೂತ ಅಜ್ಜ /ಅಜ್ಜಿ ಆ ಮನೆಯನ್ನು ಕಾಯುವ ದೇವತೆಗಳಂತೆ ಕಾಣುತ್ತಾರೆ. ಮಕ್ಕಳಷ್ಟೇ ಅಲ್ಲ , ಮುದುಕರೂ ಮನೆಗೆ ಭೂಷಣ. ಇಂಥ ಹಿರಿಜೀವಗಳ ಎದೆಯಲ್ಲಿ ಹೆಪ್ಪುಗಟ್ಟಿದ ಭಾವಗಳನ್ನು ಎಂದಾದರೂ ಗಮನಿಸಿದ್ದೀರಾ? ಹಿರಿಯ ಜೀವದೊಂದಿಗೆ ಸಂವಾದಕ್ಕೆ ಕೂತಿದ್ದೀರಾ ? ಅಂಥದೊಂದು ಪ್ರಯತ್ನ ಬೆಂಗಳೂರಿನಲ್ಲಿ ನಡೆಯುತ್ತಿದೆ. ಅದು ಹಿರಿಯರ ಪ್ರಪಂಚ.

ಬೆಂಗಳೂರಿನ ಜಯನಗರ ಬಡಾವಣೆಯ ನಾಲ್ಕನೇ ಹಂತದಲ್ಲಿನ ಕಾಂಪ್ಲೆಕ್ಸ್‌ ಆಸುಪಾಸಲ್ಲಿ ಸಂಜೆ ವೇಳೆ ಓಡಾಡಿದ್ದೀರಾ ? ಹಾಗಿದ್ದಲ್ಲಿ ಷಾಪಿಂಗ್‌ ಕಾಂಪ್ಲೆಕ್ಸಿನ ಬಳಿಯ ಬಣ್ಣಬಣ್ಣದ ಜಾತ್ರೆಯನ್ನು ನೋಡಿಯೇ ಇರುತ್ತೀರಿ : ಚಿಟ್ಟೆಗಳಂತೆ ಸುಳಿದಾಡುವ ಹುಡುಗಿಯರು- ಅವರೊಂದಿಗೇ ಅಲೆಯಾಗುವ ವಿವಿಧ ಅತ್ತರಿನ ಗಮಲು. ಕಳೆಗೆಟ್ಟ , ಮುಚ್ಚಿದ ಬಾಗಿಲ ಪುಟ್ಟಣ್ಣ ಚಿತ್ರಮಂದಿರ, ಪಾಪ್‌ಕಾರ್ನ್‌, ಗೋಬಿ ಮಂಚೂರಿ, ಪೀಟ್ಝಾ , ಸೀಬೆಹಣ್ಣು , ಪೆಪ್ಸಿಕೋಲಾ, ವಿವಿಧ ಹಣ್ಣಿನ ಬಣ್ಣದ ಷರಬತ್ತು - ಇವುಗಳೊಂದಿಗೆ ಜಗತ್ತಿನ ಸಕಲ ವಸ್ತುಗಳನ್ನೂ ಬಿಕರಿ ಮಾಡುವ ಅಂಗಡಿಗಳು.... ಪ್ರತಿಯಾಂದರ ಮುಂದೆಯೂ ಜನ ಜನ ಜನ. ನೋಡಿದಷ್ಟೂ ತೀರದಷ್ಟು ಜನಜಾತ್ರೆ.

ನೀವು ಸ್ವಲ್ಪ ಆರ್ದ್ರ ಹೃದಯಿಗಳಾಗಿದ್ದಲ್ಲಿ ಕಾಂಪ್ಲೆಕ್ಸ್‌ನ ಒಂದುಬದಿಯ ‘ಕಟ್ಟೆ’ಯನ್ನು ನೋಡಿಯೇ ಇರುತ್ತೀರಿ. ಹಳ್ಳಿಯ ಅರಳಿಕಟ್ಟೆಯನ್ನು ಒಂದುರೀತಿಯಲ್ಲಿ ಹೋಲುವ ಈ ಕಟ್ಟೆಯಲ್ಲಿಯೂ ಜನ. ಆದರೆ ಅಲ್ಲೊಂದು ವಿಶೇಷವಿದೆ. ಕಟ್ಟೆ ಮೇಲೆ ಕುಳಿತವರಲ್ಲಿ ಬಹುತೇಕರು ಹಿರಿಯ ನಾಗರಿಕರು. ಹಾಗಾಗಿಯೇ ಅದು ‘ಹಿರಿಯರ ಕಟ್ಟೆ’ !

ಸೂರ್ಯ ಪಶ್ಚಿಮದಲ್ಲಿ ಕರಗುತ್ತಿರುವಂತೆಯೇ ಜಯನಗರ ಷಾಪಿಂಗ್‌ ಕಾಂಪ್ಲೆಕ್ಸ್‌ನ ಕಟ್ಟೆಯಲ್ಲಿ ಅಜ್ಜಂದಿರ ಮೀಟಿಂಗು ಶುರುವಾಗುತ್ತದೆ. ಸಂಜೆಯ ವೇಳೆಯ ಪಕ್ಷಿಗಳ ಮೇಳ ಇರುತ್ತದಲ್ಲ ; ಈ ಅಜ್ಜಂದಿರದೂ ಅಂಥದ್ದೇ ಮೇಳ. ಅಲ್ಲಿ ಮನೆವಾರ್ತೆಗಳು ಬಿಚ್ಚಿಕೊಳ್ಳುತ್ತವೆ, ದೇಶಕೋಶದ ಘನಗಂಭೀರ ವಿಷಯಗಳಿಗೆ ಪರಿಹಾರ ಚರ್ಚೆಯಾಗುತ್ತದೆ.... ಲೇಟಾಗಿ ಬರುವ ಮಗಳ ಕಥಾನಕದಿಂದ ಹಿಡಿದು ಮೊನ್ನೆ ಮೊಣಕಾಲು ಹಠ ಮಾಡಿದವರೆಗಿನ ಸಮಸ್ತ ಸಂಗತಿಗಳೂ ಅದಲುಬದಲಾಗುತ್ತವೆ. ಅಜ್ಜಂದಿರಿಗೆ ಮಾತನಾಡುವ ಖುಷಿ.

ಆ ಅಜ್ಜಂದಿರೆಲ್ಲ ಜಯನಗರದ ವಾಸಿಗಳೇನೂ ಅಲ್ಲ . ಬೆಂಗಳೂರಿನ ಎಂಟೂಮೂಲೆಗಳ ಅಜ್ಜಂದಿರು ಈ ಕಟ್ಟೆಯ ಅತಿಥಿಗಳು. ಸಂಜೆಯಾಯಿತೆಂದರೆ ಕಟ್ಟೆಯಲ್ಲಿ ಅವರ ಹಾಜರಾತಿ. ಈ ಕಟ್ಟೆಯೆಂದರೆ ಅಜ್ಜಂದಿರ ಪಾಲಿಗೆ ಒಂದು ರೀತಿಯ ಆಕರ್ಷಣೆ, ಕಕ್ಕುಲಾತಿ. ಅದೇನು ಹಂಚಿಕೊಳ್ಳುತ್ತಾರೋ, ಅದೇನು ಕಥೆಯೋ, ಅಜ್ಜಂದಿರಿಗೇ ಗೊತ್ತು !

ಹಿರಿಯ ನಾಗರಿಕರ ಸಮಸ್ಯೆಗಳು ಒಂದೆರಡಲ್ಲ . ಹದಗೆಟ್ಟ ಆರೋಗ್ಯ. ಮಗಳಿಗೆ ಕೂಡಿಬರದ ಕಂಕಣ. ಡಿಗ್ರಿ ಮುಗಿಸಿ ಬೀದಿ ಅಲೆಯುತ್ತಿರುವ ಮಗ. ಸೊಸೆಯ ಯಜಮಾನಿಕೆಯಿಂದಾಗಿ ‘ಹಂಗು’ ಎನ್ನಿಸುತ್ತಿರುವ ಅನ್ನ . ಮಂಜಾಗುತ್ತಿರುವ ದೃಷ್ಟಿ . ಹೀಗೆ ಒಂದಲ್ಲಾ ಒಂದು ಕಿತ್ತುತಿನ್ನುವ ಸಮಸ್ಯೆಗಳಿಂದ ಬಳಲುವ ಹಿರಿಯ ಜೀವಗಳ ಮನಸ್ಸು ದೇಹದೊಂದಿಗೆ ಹಣ್ಣಾಗಿರುತ್ತದೆ. ಕಣ್ಣಮುಂದೆಯೇ ಸಂಗಾತಿ ಅಗಲಿದ್ದರಂತೂ, ಅವರ ಪಾಡು ದೇವರಿಗೇ ಪ್ರೀತಿ.

ಸಾಮಾನ್ಯವಾಗಿ ಹಿರಿಯ ನಾಗರಿಕರೆಲ್ಲರನ್ನು ‘ಒಂಟಿತನ’ ಬೇತಾಳದಂತೆ ಬೆನ್ನೇರಿರುತ್ತದೆ. ಅವರ ಕಥೆಯ ಕೇಳಲಿಕ್ಕೆ ಪುರುಸೊತ್ತಾದರೂ ಯಾರಿಗಿದೆ ? ಜನರೇಷನ್‌ ಗ್ಯಾಪ್‌ ಎನ್ನುವ ಅಮಾನವೀಯ ಪರಿಕಲ್ಪನೆ ಕೂಡ ಮುದುಕರನ್ನು ಮೂಲೆಯಲ್ಲಿ ಕೂರಿಸಿದೆ. ಇಂಥದೊಂದು ಒಂಟಿತನದಿಂದಾಗಿಯೇ ಮುದುಕರು ಜಯನಗರದ ಕಟ್ಟೆಯನ್ನು ಹುಡುಕಿಕೊಂಡು ಬರುತ್ತಾರೆ ; ಹಳ್ಳಿಗಳಲ್ಲಿನ ಊರಮುಂದಲ ಕಟ್ಟೆಗಳಲ್ಲಿ ಮುದುಕರ ಮೀಟಿಂಗು ಸೇರುತ್ತದಲ್ಲ , ಹಾಗೆ. ಆ ಕಟ್ಟೆಯಲ್ಲಿ ಹಿರಿಯ ನಾಗರಿಕರು ಎದೆಯ ಭಾರ ಇಳಿಸಿಕೊಳ್ಳುತ್ತಾರೆ.

ಅದು ಕಲ್ಲು ಕರಗುವ ಸಮಯ !

ಅಜ್ಜ /ಅಜ್ಜಿಯರು ಹಾಗೂ ಜಯನಗರದ ಅಜ್ಜಂದಿರ ಕಟ್ಟೆ ನೆನಪಾಗಲಿಕ್ಕೆ ಕಾರಣ- ಬೆಂಗಳೂರಿನ ‘ಹಿರಿಯ ಪ್ರಜೆಗಳ ಕ್ಷೇಮಾಭ್ಯುದಯ ವೇದಿಕೆ’.

ಮೇ 22, 2004ರ ಶನಿವಾರ ರಾಜ್ಯ ಮಟ್ಟದ ಹಿರಿಯ ಪ್ರಜೆಗಳ ಸಮ್ಮೇಳನವೊಂದನ್ನು ‘ಹಿರಿಯ ಪ್ರಜೆಗಳ ಕ್ಷೇಮಾಭ್ಯುದಯ ವೇದಿಕೆ’ ಹಾಗೂ ರಾಜ್ಯ ನಿವೃತ್ತ ನೌಕರರ ಸಂಘ ಜಂಟಿಯಾಗಿ ನಡೆಸುತ್ತಿವೆ. ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಡೆಯುವ ಈ ಸಮ್ಮೇಳನ- ಹಿರಿಯ ಪ್ರಜೆಗಳ ತವಕ ತಲ್ಲಣ, ಸಮಸ್ಯೆಗಳು, ಪರಿಹಾರ, ಇತ್ಯಾದಿಗಳ ಕುರಿತು ಬೆಳಕು ಚೆಲ್ಲಲಿದೆ. ಒಟ್ಟಿನಲ್ಲಿ ವೃದ್ಧರ ಜೀವನದ ಎಲ್ಲ ಮುಖಗಳ ಮೇಲೂ ಸಮ್ಮೇಳನದ ಕ್ಷಕಿರಣಗಳು ಹಾಯಲಿವೆ.

ದಟ್ಸ್‌ಕನ್ನಡದೊಂದಿಗೆ ಮಾತನಾಡಿದ ವೇದಿಕೆಯ ಅಧ್ಯಕ್ಷ ವೈ.ಎನ್‌.ರಾಮನಾಥ್‌, ಸಮ್ಮೇಳನದ ಕುರಿತು ವಿವರಗಳನ್ನು ನೀಡಿದರು. ಹಿರಿಯ ಪ್ರಜೆಗಳಿಗಾಗಿಯೇ ನಡೆಯುತ್ತಿರುವ ಈ ಅಪರೂಪದ ಸಮ್ಮೇಳನದಲ್ಲಿ ಸುಮಾರು 300 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಬೆಂಗಳೂರಿನ ಕಬ್ಬನ್‌ ಪಾರ್ಕ್‌ನಲ್ಲಿರುವ ಸಚಿವಾಲಯ ಕ್ಲಬ್‌ನಲ್ಲಿ ಮೇ 22ರಂದು ಇಡೀ ದಿನ ಸಮ್ಮೇಳನ ನಡೆಯಲಿದೆ. ಸುಪ್ರಿಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ ಸಮ್ಮೇಳನವನ್ನು ಉದ್ಘಾಟಿಸುವರು.

‘ಹಿರಿಯ ಪ್ರಜೆಗಳ ಕ್ಷೇಮಾಭ್ಯುದಯ ವೇದಿಕೆ’ ಪತ್ರಿಕೆಯಾಂದನ್ನು ಹೊರತರುತ್ತಿದೆ. ‘ಹಿರಿಯ ಪ್ರಜೆ’ ಎನ್ನುವ ಈ ಮಾಸಪತ್ರಿಕೆ, ಹಿರಿಯ ಪ್ರಜೆಗಳ ಲೋಕಕ್ಕೆ ಸಂಬಂಧಿಸಿದ್ದು , ಕಿರಿಯರಿಗೂ ಉಪಯುಕ್ತವಾದದ್ದು . ಸಮ್ಮೇಳನದ ದಿನದಂದು ಪತ್ರಿಕೆಯ ವಿಶೇಷ ಸಂಚಿಕೆ ಪ್ರಕಟವಾಗಲಿದೆ. ಆಸಕ್ತರು ಸಂಘಕ್ಕೆ, ಪತ್ರಿಕೆಗೆ ಚಂದಾದಾರರಾಗಬಹುದು. ಒಂದು ನೂರು ರುಪಾಯಿ (100 ರು.) ಶುಲ್ಕವನ್ನು ಕಳುಹಿಸುವ ಮೂಲಕ ‘ಹಿರಿಯ ಪ್ರಜೆಗಳ ಕ್ಷೇಮಾಭಿವೃದ್ಧಿ ವೇದಿಕೆ’ಯ ಸದಸ್ಯತ್ವ ಪಡೆಯಬಹುದಾಗಿದೆ.

ಹಣ ಕಳುಹಿಸಲು ಹಾಗೂ ವಿವರಗಳಿಗೆ ಸಂಪರ್ಕಿಸಬೇಕಾದ ವಿಳಾಸ :

ವೈ.ಎನ್‌.ರಾಮನಾಥ್‌, ಅಧ್ಯಕ್ಷರು,

‘ಹಿರಿಯ ಪ್ರಜೆಗಳ ಕ್ಷೇಮಾಭ್ಯುದಯ ವೇದಿಕೆ’

1023, 6 ನೇ ಕ್ರಾಸ್‌, 2ನೇ ಬ್ಲಾಕ್‌,

ಬನಶಂಕರಿ ಮೊದಲನೇ ಹಂತ,

ಬೆಂಗಳೂರು- 560 056.

ದೂರವಾಣಿ : 080-26526330.

ಸಮ್ಮೇಳನದಲ್ಲಿ ಭಾಗವಹಿಸಲು ಬಯಸುವವರು ತಕ್ಷಣ ಮೇಲಿನ ವಿಳಾಸವನ್ನು ಸಂಪರ್ಕಿಸಿ.

ಹಿರಿಯ ಪ್ರಜೆಗಳ ಸಮ್ಮೇಳನ ಯಶಸ್ವಿಯಾಗಲಿ. ಸಂಜೆ ಬದುಕಿನವರ ಬಾಳು ಬೆಳಗಲಿ.

English summary
A State level One day conference of Senior Citizens, organized by Hiriya Prajegala Kshemabhudaya Vedike, on May 22, in Secretariat Club, Cubbon Park, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more