• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಸ್‌.ಕೆ. ಶಾಮಸುಂದರ

By Staff
|

ಅಮೆರಿಕದ ಪ್ರವಾಸ ಜ್ಞಾನಮುಖಿಯಾಗಿತ್ತು , ಮನುಷ್ಯ ಸಂಬಂಧಗಳನ್ನು ವೃದ್ಧಿಸಿಕೊಳ್ಳುವ ಮಾರ್ಗವಾಗಿತ್ತು ; ಇಂಥದೊಂದು ಮಾರ್ಗಕ್ಕೆ ಕಾರಣವಾದುದು ಆರ್‌ಲ್ಯಾಂಡೊ ಸಮ್ಮೇಳನ. ಯಶಸ್ವಿ ಕನ್ನಡಮೇಳಕ್ಕೂ ಎಷ್ಟೊಂದು ಅಡೆತಡೆಗಳಿದ್ದವು ಗೊತ್ತಾ ?

S.K.Shama Sundara ಎಸ್‌.ಕೆ. ಶಾಮಸುಂದರ

shami.sk@greynium.com

ಬೆಂಗಳೂರೆಲ್ಲಿ, ಅಮೆರಿಕಾ ಎಲ್ಲಿ, ಕನ್ನಡ ಪತ್ರಿಕೋದ್ಯಮ ಎಲ್ಲಿ ? ಒಂದಕ್ಕೊಂದು ಸುತರಾಂ ಸಂಬಂಧ ಇಲ್ಲದ ಕಾಲಘಟ್ಟವೊಂದಿತ್ತು. ಯಾವ ಕಾಲದಲ್ಲೇ ಆಗಲೀ ಸಂಬಂಧಗಳು ಇರುವುದೇ ಇಲ್ಲ. ನೀವೇ ಪರೀಕ್ಷಿಸಿ ಕಂಡುಕೊಳ್ಳಿ. ಸಂಬಂಧ-ಸಾರಿಗೆಯನ್ನು ಇಷ್ಟಪಟ್ಟು ನಾವೇ ರೂಢಿಸಿಕೊಳ್ಳಬೇಕು. ಏಕಪ್ರಕಾರವಾದ ಶ್ರದ್ಧೆ ಹಾಗೂ ತೆಳುವಾಗದ ಪ್ರೀತಿಯಿಂದ ಸಾಧ್ಯವಾಗುವ ಸಂಬಂಧಗಳು ಕೊಡುವ ಸಂತೋಷ ದೊಡ್ಡದು. ಆ ಸಂತೋಷವನ್ನು ಅಂತರ್‌ಜಾಲ ಕ್ಷೇತ್ರದಲ್ಲಿ ನಿರ್ಮಿಸಿದವರು ಕೇವಲ ಇಬ್ಬರು. ದಟ್ಸ್‌ಕನ್ನಡ ಮತ್ತು ನೀವು.

ವಿಶ್ವದ ನಾನಾ ಭಾಗಗಳಲ್ಲಿ ಹರಿದು ಹಂಚಿಹೋಗಿರುವ ಕನ್ನಡಿಗರನ್ನು ಒಂದೆಡೆ ಕಲೆಹಾಕುವ ಪ್ರೀತಿ-ಪತ್ರಿಕೋದ್ಯಮ ಇವತ್ತು ನಮ್ಮನ್ನು ಇಲ್ಲಿಯವರೆಗೆ ಕೈಹಿಡಿದು ನಡೆಸಿಕೊಂಡು ಬಂದಿದೆ. ತಂತ್ರಜ್ಞಾನ ಆಧಾರಿತ ಈ ಮಾಧ್ಯಮದಲ್ಲಿ ಕೂಡ ಮನುಷ್ಯ ಸಂಬಂಧಗಳು ಅರಳುವುದೆಂದು ನನಗೆ ಗೊತ್ತೇ ಇರಲಿಲ್ಲ. ನಿಮಗೆ ಗೊತ್ತಿತ್ತಾ? ಹೀಗೆ ಅರಳಿದ ಸಂಬಂಧಗಳ ಸಮೀಪ ದರ್ಶನ ಮಾಡುವ ಉದ್ದೇಶದಿಂದ ನಾನು ಕೈಗೊಂಡ ಎರಡನೆ ಅಮೆರಿಕಾ ಯಾತ್ರೆಯು ಪತ್ರಿಕೋದ್ಯಮಕ್ಕೆ ಪೂರಕವಾಗುವ ಅನೇಕ ಪಾಠಗಳನ್ನು ಕಲಿಸಿದೆ. ಕಲಿಯುವ ಮತ್ತು ಕಲಿತ ಕೆಲವು ಸಂಗತಿಗಳನ್ನು ಮರೆಯುವ ಅವಕಾಶ ಕೊಟ್ಟ ಮೂರನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ( ಶ್ರೀಗಂಧ ಕನ್ನಡ ಕೂಟ, ಫ್ಲಾರಿಡಾ) ನನ್ನ ಹೃತ್ಪೂರ್ವಕ ಧನ್ಯವಾದಗಳು.

ಮೂರು ದಿವಸಗಳ ಮೂರನೇ ವಿಶ್ವ ಕನ್ನಡ ಸಮ್ಮೇಳನವನ್ನು ವರದಿ ಮಾಡಲು ಆರ್‌ಲ್ಯಾಂಡೋಗೆ ಹೋದವನು ಆ ದೇಶದಲ್ಲಿ ಮೂವತ್ತು ದಿವಸಗಳ ‘ರಾಜ್ಯಭಾರ ಮಾಡಿದೆ’. ಉತ್ತರ ಅಮೆರಿಕೆಯ ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಕೇಂದ್ರಭಾಗದ ಒಟ್ಟು ಏಳು ರಾಜ್ಯಗಳನ್ನು ದರ್ಶಿಸುವ ಅವಸರದಲ್ಲಿ ಒಟ್ಟು 50 ಸಾವಿರ ಕಿಲೋಮೀಟರ್‌ ಪ್ರಯಾಣ ಕೈಗೊಂಡೆ . ಅಮೆರಿಕಾ ಚುನಾವಣೆಯ ನಿಮಿತ್ತ ಕತ್ತೆ ಪರವಾಗಿಯೋ, ಆನೆ ಪರವಾಗಿಯೋ ಚುನಾವಣಾ ಏಜೆಂಟಾಗಿ ಇಂಥ ಪ್ರವಾಸ-ಪ್ರಚಾರ ಮಾಡಿದ್ದಿದ್ದರೆ ಖಾಲಿಯಾಗಿರುವ ನನ್ನ ಬ್ಯಾಂಕ್‌ ಬ್ಯಾಲೆನ್ಸ್‌ ಸ್ಟೇಟ್‌ಮೆಂಟಿನಲ್ಲಿ ಅಂಕಿಗಳು ಮೂಡುತ್ತಿದ್ದವು! ಹಣವನ್ನು ಹಿಂದಿಕ್ಕಿ ಮುಂದೆ ಸಾಗುವ ಋಣ ನನ್ನ ಪಾಲಿಗಿತ್ತು. ಪ್ರಯಾಣದ ಉದ್ದಕ್ಕೂ ಸಾವಿರಾರು ಕನ್ನಡ ಜನರೊಂದಿಗೆ ಒಡನಾಟ, ಕನ್ನಡ ಮನಸ್ಸುಗಳೊಂದಿಗೆ ಮಿಲನ ಸಾಧ್ಯವಾಯಿತು. ಡಾಲರುಗಳ ಪ್ರಪಂಚಕ್ಕೆ ಅಭಿಮಾನ ದಂಡೆತ್ತಿ ಬಂದು ವಿಶ್ವಾಸದ ತಿಜೋರಿ ಭರ್ತಿ ಆಯಿತು.

ಸಮ್ಮೇಳನ ಚೆನ್ನಾಗಿತ್ತು. ಒಂದು ಸಂಗತಿಯನ್ನು ವರ್ಣಿಸುವುದಕ್ಕೆ ಚೆನ್ನಾಗಿತ್ತು ಎನ್ನುವ ಒಂಟಿಕಾಲಿನ ಪದ ಸಾಕಾಗುವುದಿಲ್ಲ. ಎರಡು ವರ್ಷ ಕಾಲದ ಸುದೀರ್ಘ ಅವಧಿಯ ಯೋಜನೆ ಮತ್ತು ದಕ್ಷ ನಿರ್ವಹಣೆಯ ಫಲಶ್ರುತಿ ಆರ್‌ಲ್ಯಾಂಡೊ ಸಮ್ಮೇಳನ. ಚಂಡಮಾರುತದ ಪ್ರಚಂಡ ನರ್ತನ ಮತ್ತು ಮೊಸರಲ್ಲಿ ನಿತ್ಯ ಕಲ್ಲು ಹುಡುಕುವದರಲ್ಲೇ ಕಾಲ ಕಳೆಯುವ ಒಂದಿಬ್ಬರು ‘ಕಿಲಾಡಿ ಕನ್ನಡಿಗರ’ ಉಪದ್ವ್ಯಾಪಗಳ ನಡುವೆಯೂ ಸಮ್ಮೇಳನ ಸಾಂಗವಾಗಿ ನೆರವೇರಿತು. ತಾವೂ ಕೆಲಸ ಮಾಡಬಾರದು, ಮಾಡುವವರಿಗೆ ಕಿರುಕುಳ ಕೊಡದೆ ಬಿಡಬಾರದು ಎಂಬುದನ್ನೇ ತಮ್ಮ ಜೀವನದ ಧ್ಯೇಯವಾಕ್ಯ ಮಾಡಿಕೊಂಡಿರುವ ಈ ‘ರಂಗ ಮತ್ತು ಬಿಲ್ಲ’ ಎಂಬುವವರು ಸ್ವಯಂಘೋಷಿತ ಸತ್ಯ ಹರಿಶ್ಚಂದ್ರರಂತೆ ನಿತ್ಯ ಬಡಾಯಿಕೊಚ್ಚಿಕೊಳ್ಳುತ್ತಾರೆ. ಇವರನ್ನು ಅಮೆರಿಕನ್ನಡಿಗರು ‘ಕಲಿಗಾಲದ ಕರಟಕ-ದಮನಕ’ ಎಂದು ಬಣ್ಣಿಸಿ ಕಿಸಕ್ಕನೆ ನಕ್ಕು ಸುಮ್ಮನಾಗಿಬಿಡುತ್ತಾರೆ. ಮೂರು ಕಾಸಿನ ಕೆಲಸ ಮಾಡದೆ, ಎರಡು ಸೆಂಟು ಖರ್ಚು ಮಾಡದೆ ಸದಾ ಮುತ್ತೆೈದೆಯ ಪೋಸು ಕೊಡುವ ಈ ಕನ್ನಡ ಕಂಟಕರ ಬಗ್ಗೆ ಯಾವತ್ತಾದರೂ ಬರೆಯುತ್ತೇನೆ. ನಿಧಾನಿಸಿ. ಮನೆಯಲ್ಲಿ ಒಂದು ಮಂಗಳ ಕಾರ್ಯ ನಡೆದಾಗ ನೆಂಟರು ಅತಿಥಿಗಳಿಗೆ ಆಮಂತ್ರಣ ಕೊಡುತ್ತೇವೆ. ಆಮಂತ್ರಿತರಲ್ಲಿ ‘ಬಂದವರು ನಮ್ಮವರು, ಬಾರದಿದ್ದವರು ದೇವರು’ ಎನ್ನುತ್ತದೆ ಗಾದೆಮಾತು. ಫ್ಲಾರಿಡಾಗೆ ಬಂದವರು ಸಂಭ್ರಮ ಕಂಡು ಸಂತೋಷಪಟ್ಟರೆ ಬರಲು ಸಾಧ್ಯವಾಗದಿದ್ದವರು www.thatskannada.com ಮತ್ತು ‘ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ಓದಿ ತಿಳಿದುಕೊಂಡಿದ್ದಾರೆ.

ಸೆಪ್ಟೆಂಬರ್‌ 5ರಂದು ಸಮ್ಮೇಳನ ಮುಗಿಯುತ್ತಿದ್ದಂತೆಯೇ ಟಾಂಪದಿಂದ ಚಿಕಾಗೊವರೆಗೆ ಸಾಗಿದ ನನ್ನ ಜನಸ್ಪಂದನ ಕಾರ್ಯಕ್ರಮಗಳುದ್ದಕ್ಕೂ ನಾನು ಕೇಳಿಸಿಕೊಂಡ ಪ್ರಶ್ನೆಗಳಲ್ಲಿ ಸರ್ವೇಸಾಮಾನ್ಯವಾಗಿದ್ದುದು : ಮುಂದಿನ ಸಮ್ಮೇಳನ ಎಲ್ಲಂತೆ? ಮೊನ್ನೆ ತಾನೆ ಸಮ್ಮೇಳನ ಮುಗಿದಿದೆ. ಈಗಲೇ ಯಾಕೆ ನಾಳೆಯ ಚಿಂತೆ ಎಂದು ಕೆಲವರಾದರೂ ಕೇಳಬಹುದು. ಡೆಟ್ರಾಯಿಟ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಜನಸ್ತೋಮದಿಂದ ಉಂಟಾದ ಗೊಂದಲದಿಂದ ಅನೇಕರು ನಿರಾಶರಾಗಿ ಸಮ್ಮೇಳನದ ಆಸೆ ಬಿಟ್ಟಿದ್ದರು. ಆರ್‌ಲ್ಯಾಂಡೊಗೆ ಟಿಕೆಟ್‌ಬುಕ್‌ ಮಾಡಿ ಗಂಟು ಮೂಟೆ ಕಟ್ಟಿಕೊಂಡು ರೆಡಿಯಾಗಿದ್ದ ಅನೇಕರು ಹರಿಕೇನ್‌ ಭಯದಿಂದಾಗಿ ಮನೆಯಲ್ಲೇ ಉಳಿಯುವಂತಾಯಿತು. ಆದರೆ, ಫ್ಲಾರಿಡಾ ಸಮ್ಮೇಳನ ಚೆನ್ನಾಗಿತ್ತಂತೆ ಎಂದು ಬಾಯಿಯಿಂದ ಬಾಯಿಗೆ ತಲುಪಿದ ಅಭಿಪ್ರಾಯದ ಅಲೆಯಿಂದಾಗಿ Where Next ಪ್ರಶ್ನೆ ಯನ್ನು ಜನ ಈಗ ಕೇಳತೊಡಗಿದ್ದಾರೆ.

ಮುಂದಿನ ಸಮ್ಮೇಳನ ಯಾವ ಊರಲ್ಲಿ ನಡೆಯುತ್ತದೆ ? ನನಗೆ ಗೊತ್ತಿಲ್ಲ. ನಿಮ್ಮ ಕಿವಿಗೇನಾದರೂ ಸಮಾಚಾರ ಬಿತ್ತಾ?

ಅಂಗೈಯಲ್ಲಿ ಅಮೆರಿಕ !

ಜೋಳದ ಸಿರಿಬೆಳಕಿನಲ್ಲಿ ಮಿಸ್ಸಿಸಿಪ್ಪಿಯ ಬಳುಕಿನಲ್ಲಿ ...

Thank you for choosing Thatskannada.com

shami.sk@greynium.com

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more