• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಯೋವಾ ಪ್ರವಾಸ ಕಥನ

By Staff
|

ಅಣ್ಣನ ಬಯ್ಗುಳದಿಂದ ಅಯೋವಾದ ಜೋಳದ ಪಾಳಿಯವರೆಗೆ ಎಷ್ಟೊಂದು ನೆನಪುಗಳು. ಈ ಮನಸ್ಸೇ ಹೀಗೆ, ಕನ್ನಡನೆಲದಲ್ಲಿದ್ದಾಗ ಪಶ್ಚಿಮದ ಬಣ್ಣಗಳ ತನನ, ಅಮೆರಿಕ ನೆಲದಲ್ಲಿ ನಿಂತಾಗ ಕನ್ನಡದ ಧ್ಯಾನ. ಒಂದಂತೂ ನಿಜ, ದೇಶಕೋಶ ಬದಲಾಗಬಹುದು ; ಮನುಷ್ಯಬದಲಾಗುವುದಿಲ್ಲ . ಮನುಷ್ಯನ ಪ್ರೀತಿ, ದ್ವೇಷ, ಸಣ್ಣತನ, ಆಸೆಗಳು, ಮಣ್ಣು ಹಾಗೂ ಪ್ರಕೃತಿಯ ಬಗೆಗಿನ ಸೆಳೆತ, ಇವೆಲ್ಲ ಎಲ್ಲಿದ್ದರೂ ಒಂದೇ. ಇತ್ತೀಚಿನ ಅಮೆರಿಕ ಪ್ರವಾಸದ ಹಿನ್ನೆಲೆಯ ಕೆಲವು ನೆನಪುಗಳಿವು. ಮೊದಲು ಕಣ್ಮುಂದೆ ಸುಳಿಯುತ್ತಿದೆ, ಅಯೋವಾ!

* ಎಸ್‌.ಕೆ. ಶಾಮಸುಂದರ

ಈ ಕಾಲದ ಮಕ್ಕಳು ತುಂಬಾ ಸ್ಪೆಷಲ್‌. ತಪ್ಪು ಮಾಡಿದಾಗಲೂ ಕೂಡ ಅವರನ್ನು ಪೋಷಕರು ಬಯ್ಯುವಂತಿಲ್ಲ, ಹೆದರಿಸುವಂತಿಲ್ಲ , ಬೆದರಿಸುವಂತಿಲ್ಲ. ಸ್ಪಲ್ಪ ಬಿಡುವು ಮಾಡಿಕೊಂಡು ಮಕ್ಕಳಿಗೆ ಬುದ್ಧಿವಾದ ಹೇಳಲು ಪ್ರಯತ್ನಿಸಿ ನೋಡಿ; ನಿಮಗೇ ಎದುರು ವಾದಿಸುತ್ತಾರೆ. ಅವರು ಕೇಳಿದ ವಸ್ತುಗಳನ್ನು ಕ್ಷಣಾರ್ಧದಲ್ಲಿ ತೆಗೆಸಿಕೊಡಬೇಕು. ಇಲ್ಲದಿದ್ದರೆ 'ವೈ ಡ್ಯಾಡಿ, ವಾಟ್ಸ್‌ದ ಪ್ರಾಂಬ್ಲಂ ಮ " ಎಂದು ಮರು ಪ್ರಶ್ನೆ ಹಾಕಿ ಅಪ್ಪ ಅಮ್ಮನನ್ನು ಸಂದಿಗ್ಧ ಪರಿಸ್ಥಿತಿಗೆ ದೂಡುತ್ತಾರೆ. ಆ ಸಂದರ್ಭದಲ್ಲೇ ಗಂಡ ಹೆಂಡತಿ ನಡುವೆ ಒಂದು ಚಿಕ್ಕ ಡಿಬೇಟು ಶುರುವಾಗುತ್ತದೆ. ಡಿಬೇಟು ಸಣ್ಣ ಪ್ರಮಾಣದ ಜಗಳಕ್ಕೆ ತಿರುಗಿ ವಾತಾವರಣ ಕ್ರಮೇಣ ಬಿಗಿಯಾಗತೊಡಗುತ್ತದೆ. ಅಷ್ಟರಲ್ಲಿ ಬೇರೆ ಇನ್ನಾವುದೋ ಕೆಲಸ ನೆನಪಾಗಿ Stop it ಅಂತ ಗಂಡನೂ, you are really not responsible ಅಂತ ಹೆಂಡತಿಯೂ ಒದರುವುದರೊಂದಿಗೆ ಪರಸ್ಪರ ಬಯ್ದಾಡುವ ಆಟ ಆವತ್ತಿಗೆ ಅಲ್ಲಿಗೆ ನಿಲ್ಲುತ್ತದೆ.

Tomorrows Citizenತಮ್ಮನ್ನು ತಾವೇ ಬಯ್ದುಕೊಳ್ಳುವುದು ಹಾಗಿರಲಿ, ಇನ್ನೊಬ್ಬರನ್ನು ಬಯ್ಯುವುದಕ್ಕೆ ಕನಿಷ್ಠ ಎರಡು ಉದ್ದೇಶಗಳಿರುತ್ತೆ. ಅವನು ತನ್ನ ತಪ್ಪನ್ನು ತಿದ್ದಿಕೊಳ್ಳಲಿ ಎನ್ನುವುದು ಒಂದು ಉದ್ದೇಶವಾದರೆ, ಮನಸಾರೆ ಬಯ್ಯುವುದರ ಮೂಲಕ ನಮ್ಮ ಅಹಂ ಅನ್ನು ನಾವೇ ಸಂತೈಸಿಕೊಳ್ಳುವುದು ಇನ್ನೊಂದು ಉದ್ದೇಶ.

ಯಾರ ಮೇಲಾದರೂ ಜಾಸ್ತಿ ಸಿಟ್ಟು ಬಂದಾಗ ಅವರನ್ನ ನೀವು ಏನಂತ ಬಯ್ಯುತ್ತೀರಿ? ಬಯ್ಯುವುದಕ್ಕೆ ನಾನಾಭಾಷೆಯಲ್ಲಿ ಒಳ್ಳೊಳ್ಳೆ ಪದಪುಂಜಗಳಿವೆ. ಬಯ್ಗುಳದ ಭಾಷೆ ಅವರವರ ವಿದ್ಯೆ, ಸಂಸ್ಕೃತಿ ಮತ್ತು ಭಾಷಾ ಪ್ರೌಢಿಮೆಯನ್ನು ಅವಲಂಬಿಸಿರುತ್ತದೆ. ಕೆಲವರು ಜಾತಿ-ಉದ್ಯೋಗ ಸೂಚಕ ಪದಗಳನ್ನು ಬಳಸಿ (ಬಿರಿಯಾ ಉಂಡ ಬ್ರಾಹ್ಮಣ.., ಹೆಗಲ ಮೇಲೆ ಟವಲ್‌ ಅರ್ಥಾತ್‌ ಹಳ್ಳಿ ದೊಡ್ಡಬೋರೇಗೌಡ, ಕೆಲಸವಿಲ್ಲದ ಬಡಗಿ, ಯಾವ ಊರಿನ ಹಜಾಮ.. ಮುಂತಾದವು) ನಿಂದಿಸಿದರೆ ಇನ್ನು ಕೆಲವರು ಪ್ರಾಣಿ ಸೂಚಕ ಪದಗಳನ್ನು ( ಕಪಿ, ಕತ್ತೆ, ಗುಳ್ಳೇ ನರಿ, ನಾಯಿ ಮುಂಡೇದೇ.. ಇತ್ಯಾದಿ) ಆರಿಸಿಕೊಂಡು ಮೂದಲಿಸುತ್ತಾರೆ. ಕಸ್ತೂರಿ ಕನ್ನಡ ಪದಗಳನ್ನು ಜಾಗರೂಕತೆಯಿಂದ ಆಯ್ದುಕೊಳ್ಳುತ್ತಾ ಬಯ್ಯುವ ಕಲೆಯನ್ನು ಕರಗತ ಮಾಡಿಕೊಂಡವರಿಗೆ ಬಯ್ಯುವುದೆಂದರೆ ಹಬ್ಬ. ಅವರು ಬಯ್ಯುವ ವಿಧಾನಗಳನ್ನು ತಿಳಿಯಬೇಕಾದರೆ ಸ್ವತಃ ಬೈಯಿಸಿಕೊಂಡು ಅನುಭವಿಸಬೇಕು. ಕರ್ನಾಟಕದಲ್ಲಿ ಒಬ್ಬ ಮಹಾನುಭಾವ ಬಯ್ಗುಳ ಭಾಷೆಯ ಬಗ್ಗೆ ಪ್ರಬಂಧ ಬರೆದು ಪಿಎಚ್‌ಡಿ ಗಿಟ್ಟಿಸಿದ್ದಾನೆ. ಬಯ್ಯುವುದೆಂದರೆ ನಮ್ಮಂಥ ಪಾಮರರಿಗೆ ಅಷ್ಟು ಸಲೀಸಲ್ಲ. ಅದೊಂದು ಮಹಾ ಪ್ರಪಂಚ. ಬಯ್ಯುವುದಕ್ಕೆ ಮುಂಚೆ ಕಾಲ, ದೇಶ, ಪರಿಸರವನ್ನು ಅರ್ಥಮಾಡಿಕೊಂಡು ಆನಂತರ ಪದಗಳನ್ನು ಎಚ್ಚರಿಕೆಯಿಂದ ಆರಿಸಿಕೊಂಡು ಬಯ್ಯಲು ಶುರು ಮಾಡಬೇಕು. ಆಗ ಬಯ್ದದವರಿಗೂ ಬಯ್ಯಿಸಿಕೊಂಡವರಿಗೂ ಅವಿನಾಭಾವ ಸಂಬಂಧ ಏರ್ಪಡುತ್ತದೆ. ಸರಿಯಾಗಿ ಬಯ್ಯದಿದ್ದರೆ ಬಯ್ದಾದರೂ ಏನು ಪ್ರಯೋಜನ?

ಎಲ್ಲಾ ಭಾಷೆಗಳ ಥರ ಇಂಗ್ಲಿಷ್‌ನಲ್ಲಿ ಯೂ ಬಯ್ಯುವುದಕ್ಕೆ ಸಾಕು-ಬೇಕಾದಷ್ಟು ಪದಗಳಿವೆ. ಕೆಲವರು ಹಸಿಹಸಿಯಾಗಿ ಬಯ್ದರೆ ಇನ್ನು ಕೆಲವರು ನಯವಾದ ಪದಗಳನ್ನು ಬಳಸಿ ನಾಜೂಕಾಗಿ ಬಯ್ಯುತ್ತಾರೆ. ಆ ಭಾಷೆಯಲ್ಲಿ ತುಂಬಾ ಸಿಂಪಲ್ಲಾಗಿ ಬಯ್ಯುವುದೆಂದರೆ 'ಶಟ್‌ಅಪ್‌" ಅಥವಾ 'ಈಡಿಯಟ್‌". ಅಷ್ಟು ಮಾತ್ರ ಬಯ್ದು ಸುಮ್ಮನಾಗದ ಹಠವಾದಿಗಳು ನೀನೊಬ್ಬ Loaferru, Raskallu, Dude, Ass Holu, Crapu, Dead Skunku ಎಂದು ಮುಂತಾಗಿ ಉಗಿಯುತ್ತಾ ಹೋಗುತ್ತಾರೆ. ಬಯ್ಯುವುದು ಮನುಷ್ಯನ ಮೂಲ ಸ್ವಭಾವಗಳಲ್ಲೊಂದು ಎನ್ನುವುದು ನನ್ನ ಭಾವನೆ. ಅದು ಬಾಲ್ಯದಿಂದಲೇ ಬಂದಂತಹ ವಿದ್ಯೆ. ಆದರೆ, ಎಷ್ಟು ಬಯ್ದರೂ ಸ್ವಲ್ಪನಾರ ತಿದ್ದಿಕೊಳ್ಳದವರನ್ನು ಮತ್ತೆ ಮತ್ತೆ ಬಯ್ಯದಿರುವುದು ಬುದ್ಧಿವಂತಿಕೆ.

ನನ್ನ ಅಣ್ಣ ರಾಮಮೂರ್ತಿ ಅಂತ. ಅವನಿಗೋ ಯಾವಾಗಲೂ ಮೂಗಿನ ತುದಿಯಲ್ಲೇ ಕೋಪ. ನನಗೆ ಸಿಕ್ಕಾಪಟ್ಟೆ ಬಯ್ಯುತ್ತಿದ್ದ. ಈಗಲು ಛಾನ್ಸ್‌ ಕೊಟ್ಟರೆ ನನ್ನ ಮೇಲೆ ಒಂದೆರಡು ಮಂತ್ರಾಕ್ಷತೆ ಎಸೆಯದೆ ಬಿಡುವುದಿಲ್ಲ. ಮ್ಯಾಥಮ್ಯಾಟಿಕ್ಸ್‌ನಲ್ಲಿ ನಲವತ್ತು ಮಾರ್ಕ್ಸ್‌ ತೆಗೆದವರಿಗೆ ಭವಿಷ್ಯವೇ ಇಲ್ಲ ಎಂದು ಅವನು ನಂಬಿದ್ದ. ಅದಕ್ಕೇ ನಾನು ಎಸ್‌ಎಸ್‌ಎಲ್‌ಸಿನಲ್ಲಿ ಮೂವತ್ತು ಅಂಕ ಪಡೆದೆ. ಅಂಕಪಟ್ಟಿ ನೋಡಿದೊಡನೆ 'ಹೊಟ್ಟೆಗೆ ಏನು ತಿನ್ನುತ್ತೀಯಾ?" ಅಂತ ಉಗಿದು ಉಪ್ಪಿನಕಾಯಿ ಹಾಕುತ್ತಾ ಕಪಾಳಕ್ಕೆ ಎರಡು ಬಿಟ್ಟ. ಹೊಡೆತ ತಡೆದುಕೊಂಡೆ, ಆದರೆ 'ಹೊಟ್ಟೆಗೆ ಏನು ತಿನ್ನುತ್ತೀಯಾ ?" ಎಂಬ ಪ್ರಶ್ನೆಗೆ ಆಗ ಉತ್ತರ ಹೊಳೆಯಲಿಲ್ಲ.

ಯಥಾಪ್ರಕಾರ ನಮ್ಮ ಅಮ್ಮ ಅಡುಗೆ ಮಾಡಿ ಪ್ರೀತಿಯಿಂದ ಬಡಿಸುತ್ತಿದ್ದರು. ಲಾಗಾಯ್ತಿನಿಂದ ನಾನು ಸಂತೋಷದಿಂದ ತಿನ್ನುತ್ತಾ ಬದುಕಿರುವ ಆಹಾರಗಳಲ್ಲಿ ಮೂರು ಬಗೆಯುಂಟು. ಒಂದು ಮುಖ್ಯ ಆಹಾರ ಇನ್ನೊಂದು ಉಪಾಹಾರ ಮತ್ತೊಂದು ಕೋತಿನಾಷ್ಠ . ಅಕ್ಕಿ, ಗೋಧಿ, ರಾಗಿ, ಹಾಲು, ಮೊಸರು ಜತೆಗೊಂದು ಮಿಳ್ಳೆ ಅಬಿಗಾರ ಮುಖ್ಯ ಆಹಾರದ ಮೂಲಧಾತುಗಳಾದರೆ ; ಇಡ್ಲಿ-ವಡೆ, ಉಪ್ಪಿಟ್ಟು , ದೋಸೆ, ಚಪಾತಿ, ಅಕ್ಕಿ ರೊಟ್ಟಿ, ಬ್ರೆಡ್‌, ಮಂಡಕ್ಕಿ ಉಸಳಿ ಇತ್ಯಾದಿಗಳು ಉಪಾಹಾರ ವಿಭಾಗಕ್ಕೆ ಬರುತ್ತದೆ. ಕೋತಿನಾಷ್ಠಕ್ಕೆ ಮಿತಿಯೇ ಇಲ್ಲ. ಚಕ್ಕುಲಿ ಕೋಡುಬಳೆ, ತೇಂಗೋಳು ಮುಚ್ಛೋರೆ, ಕಾಂಗ್ರೆಸ್ಸು ಕಡಲೆಕಾಯಿ ಬೀಜ ಮೊದಲ್ಗೊಂಡು ತುಪ್ಪದಲ್ಲಿ ಹುರಿದನಂತರ ಉಪ್ಪು ಅಚ್ಚಕಾರದ ಪುಡಿಯನ್ನು ಪ್ರೀತಿಯಿಂದ ನೇವರಿಸಿದ ಗೋಡಂಬಿ ಬಾದಾಮಿ ಪಟ್ಟದಕಲ್ಲಿನವರೆಗೆ ಹೆಚ್ಚು ಜಿಡ್ಡಿಲ್ಲದ ಯಾವುದೇ ಕುರುಕರುಮ ತಿಂಡಿಯಾದರೂ ನಡೆಯುತ್ತದೆ. ಇದು ಕೋತಿ ನಾಷ್ಠ.

ಈ ಪದಾರ್ಥಗಳನ್ನು ಹೊರತು ಪಡಿಸಿದರೆ ಇತ್ತಿತ್ತಲಾಗಿ ಬೆಂಗಳೂರಿನಲ್ಲಿ ಲಭ್ಯವಿರುವ ಹೊಸ ನಮೂನೆಯ ತಿಂಡಿಗಳು ನಂಗೊಂಚೂರು ಹಿಡಿಸದು. ಪಾನಿ ಪೂರಿ, ಭೇಲು ಪೂರಿ, ಮಸಾಲ ಪೂರಿ, ಗಲ್ಲಿಗಲ್ಲಿಗಳಲ್ಲಿ ಮಾರಾಟವಾಗುತ್ತಿರುವ ಗೋಬಿ ಮಂಚೂರಿ, ನೂಡಲ್ಸ್‌ , ಪೀಜಾ ಪಾಸ್ತಾ.. ಉಹೂಂ. ನನ್ನ ಪ್ರೀತಿಯ ಕೋತಿನಾಷ್ಠ ವಾದ ಕಾಂಗ್ರೆಸ್‌ ಕಡಲೆಕಾಯಿ ಬೀಜ ಡಿವಿಜಿ ರಸ್ತೆಯ ಶ್ರೀನಿವಾಸ ರೊಟ್ಟಿ ಅಂಗಡಿಯಲ್ಲಿ ಸಿಕ್ಕತ್ತೆ. ಮಂಡಕ್ಕಿ ಮತ್ತು ಕರಿದ ಮೆಣಸಿನಕಾಯಿ ಬೊಂಡ ತಿನ್ನಬೇಕಾದರೆ ಉತ್ತರ ಕರ್ನಾಟಕ್ಕೆ ಹೋಗಬೇಕು. ಇನ್ನು ಫುಡ್‌ವ್ಯಾಲ್ಯೂ ಕಡಿಮೆ ಇರುವ, ಎಣ್ಣೆಯ ಹಂಗಿಲ್ಲದ ಮಾತು ಮಾತು ಮಥಿಸುತ್ತಾ ಮೆಲ್ಲಬಹುದಾದ ಪಾಪ್‌ಕಾರ್ನ್‌ ಮೃದು ಮಧುರವಾಗಿರತ್ತೆ. ವಿಪರ್ಯಾಸವೆಂದರೆ ಅದು ಬೇಕೆಂದಾಗ ಸಿಗದು, ಎದುರಿಗಿದ್ದಾಗ ಬೇರೇನೋ ಭಾವ, ತಿನ್ನಕ್ಕೆ ಮನಸ್ಸಾಗದು. ಇಂಥ ಪಾಪ್‌ಕಾರ್ನ್‌ ಬಗ್ಗೆ ವಿಚಿತ್ರಾನ್ನ ಅಂಕಣದಲ್ಲಿ ಶ್ರೀವತ್ಸ ಜೋಶಿ ಸವಿಸ್ತಾರವಾಗಿ ಬರೆದಿದ್ದಾರೆ.

Farmers inspecting Maize cropಪಾಪ್‌ಕಾರ್ನ್‌ ಎಂದ ಕೂಡಲೇ ಅಮೆರಿಕಾ ನೆನಪಾಯಿತು. ಹಾಲು ಆಕಳ ಮೊಲೆಯಿಂದ ಹರಿದು ಬರುತ್ತದೆ ಎಂದೂ, ಪಾಪ್‌ಕಾರ್ನ್‌ ಮೆಕ್ಕೆ ಜೋಳದಿಂದ ಮೂಡಿಬರುತ್ತದೆ ಎಂದೂ ಗೊತ್ತಿರದ ಮಕ್ಕಳು ಅಲ್ಲಿದ್ದಾರೆ. ಮೇಲು ನೋಟಕ್ಕೆ ತೀರಾ ಸಿಂಪಲ್ಲಾಗಿ ಕಾಣುವ ಈ ವಿಷಯ ತಿಳಿಯದಿರುವುದು ಅಮೆರಿಕಾ ಮಕ್ಕಳ ತಪ್ಪಲ್ಲ. ಅಮೆರಿಕಾ ಇರುವುದೇ ಹಾಗೆ. ದೇಶ ಹೇಗೋ ಮಕ್ಕಳು ಹಾಗೆ. ಅಂಥ ಅಮೆರಿಕಾ ದೇಶಕ್ಕೆ ಇತ್ತೀಚೆಗೆ ಹೋಗಿ ಬಂದೆ. ಅಮೆರಿಕಾ 'ಮುಂದುವರೆದ ದೇಶ" ಎಂದು ಮತ್ತೆ ಬೇರೆ ಹೇಳಬೇಕಾಗಿಲ್ಲ. ಆದರೂ ರೈತಾಪಿ ಜನರೇ ಹೆಚ್ಚಾಗಿರುವ ಅಯೋವಾ ರಾಜ್ಯ ನೋಡಿದನಂತರ ಅಮೆರಿಕಾದಲ್ಲೇ ಮುಂದುವರೆದ-ಹಿಂದುಳಿದ ರಾಜ್ಯಗಳಿವೆ ಎಂದು ಹೇಳಬೇಕಾಗುತ್ತೆ. ಮೂಲಭೂತ ಸೌಕರ್ಯಗಳಿಗೆ ಅಯೋವಾ ರಾಜ್ಯದಲ್ಲಾಗಲೀ ಅಥವಾ ಉತ್ತರ ಅಮೆರಿಕಾದ ಇನ್ನಾವುದೇ ಪ್ರಾಂತ್ಯದಲ್ಲಾಗಲೂ ಕೊರತೆ ಇರುವುದಿಲ್ಲ. ಇಷ್ಟಾಗಿಯೂ ಮೂಲಭೂತ ಸೌಕರ್ಯ ಎಂದರೆ ಯಾವುದು ಎಂದು ಮಾತ್ರ ಓದುಗರು ಕೇಳಬಾರದು. ಒಬ್ಬೊಬ್ಬರಿಗೆ ಒಂದೊಂದು ಮೂಲಭೂತ ಸೌಕರ್ಯವಾಗಿ ಕಾಣತ್ತೆ. ಅಷ್ಟರಮಟ್ಟಿಗೆ ಅಯೋವಾ 'ಹಿಂದುಳಿದ ಪ್ರಾಂತ್ಯ"

ಅಯೋವಾ ಪ್ರಧಾನವಾಗಿ ಬೇಸಾಯ ನಂಬಿ ಬದುಕುವ ರಾಜ್ಯ. ಬೇಸಾಯ ಬಿಟ್ಟರೆ , ಅಲ್ಲಿರುವ ಏಕೈಕ ಅತಿ ದೊಡ್ಡ ಕಾರ್ಖಾನೆ ಜಾನ್‌ಡೀರ್‌. ಸಗಣಿ ಹಾಕದ ಭಾರೀ ಎತ್ತುಗಳನ್ನು ಉತ್ಪಾದಿಸುವ ಈ ಕಾರ್ಖಾನೆಗೆ ಇದೀಗ 175 ವರ್ಷ. ಟ್ರ್ಯಾಕ್ಟರ್‌ ಫ್ಯಾಕ್ಟರಿಯ ಉದ್ಯೋಗ ನೆಚ್ಚಿಕೊಂಡು ಜೀವನ ಸಾಗಿಸುತ್ತಿರುವ ಮಂದಿಯನ್ನು ಹೊರತು ಪಡಿಸಿದರೆ ಅಯೋವಾದ ಇನ್ನೊಂದು ಆಕರ್ಷಣೆ ಅಯೋವಾ ವಿಶ್ವವಿದ್ಯಾಲಯ. ಅಲ್ಲಿ ನಾನು ಭೇಟಿಯಾಗಿದ್ದ ಸ್ನೇಹಿತರೊಬ್ಬರು ಹೇಳುತ್ತಿದ್ದರು: 'ಈ ರಾಜ್ಯಕ್ಕೆ ದೂರದ ಊರುಗಳಿಂದ ಯುವಕರು ಬರುವುದು ಕಡಿಮೆ. ಬಂದರೂ ಒಂದೆರಡು ವರ್ಷದಲ್ಲೇ ಕಾಲು ಕೀಳುತ್ತಾರೆ. ಮುಂದುವರೆದ ಅಧ್ಯಯನ, ಎತ್ತರಕ್ಕೆ ಬೆಳೆಯುವ ಅವಕಾಶವುಳ್ಳ ನೌಕರಿ ಮತ್ತು ನಗರ ಜೀವನದ ಆಕರ್ಷಣೆಗಳನ್ನು ಹೊತ್ತುಕೊಂಡು ಅವರು ಪೂರ್ವ ದಿಕ್ಕಿಗೋ ಪಶ್ಚಿಮ ದಿಕ್ಕಿಗೋ ಜಾಗ ಬದಲಾಯಿಸುತ್ತಾರೆ. ಅಯೋವಾದಲ್ಲೇನಿದೆ ಬರೀ ಮಣ್ಣು !"

ಮಿನೆಸೋಟ, ವಿಸ್ಕಾನ್‌ಸಿನ್‌ ಮತ್ತು ಇಲಿನಾಯ್‌ ರಾಜ್ಯಗಳಿಂದ ಅಯೋವಾ ಪ್ರಾಂತ್ಯಕ್ಕೆ ಚಲಿಸುವ ದಾರಿಗಳುದ್ದಕ್ಕೂ ನಿಮಗೆ ಕಾಣುವುದು ಮೆಕ್ಕೆಜೋಳದ ವಿಶಾಲ ಹೊಲಗಳು ಮಾತ್ರ. ಲಕ್ಷಾಂತರ ಹೆಕ್ಟೇರ್‌ ಹೊಲಗಳಲ್ಲಿ ಮುಸುಕಿನ ಜೋಳದ ತೆನೆ ತೂಗುತ್ತದೆ. ಜೋಳ ಬೆಳೆದು ಬೆಳೆದು ರೈತರು ಗುಡ್ಡೆ ಹಾಕುತ್ತಾರೆ. ಅಕ್ಟೋಬರ್‌ ವೇಳೆಗೆ ಜೋಳ ಕುಯಿಲಾಗಿ ಅಯೋವಾವನ್ನು ಶೀತ ಅಮರಿಕೊಳ್ಳುತ್ತಿರುವಂತೆ ರೈತರು ಆಕಳು ಮತ್ತು ಹಂದಿಯ ಮೈ ಮಾಲೀಷು ಮಾಡಲು ತೊಡಗುತ್ತಾರೆ.

'ನೀವು ಈ ಬಾರಿ ಮೆಕ್ಕೆ ಜೋಳ ಬೆಳೆಯಬೇಡಿ, ನಿಮ್ಮ ಉಪಕಾರಕ್ಕೆ ನಾವು ನಿಮಗೆ ದುಡ್ಡು ಕೊಡುತ್ತೇವೆ" ಎನ್ನುತ್ತದೆ ಅಲ್ಲಿನ ಫೆಡರಲ್‌ ಸರಕಾರ. ಅಷ್ಟೊಂದು, ಅಂದರೆ ಇಡೀ ಪ್ರಪಂಚ ತಿಂದು ತೇಗುವಷ್ಟು ಜೋಳ ಅಮೆರಿಕಾದ ಕೇಂದ್ರಭಾಗದಲ್ಲಿ ಉತ್ಪತ್ತಿ ಆಗುತ್ತದೆ. ಈ ಪಾಟಿ ಬೆಳೆದ ಮೆಕ್ಕೆ ಜೋಳವನ್ನು ಅಮೆರಿಕಾ ವೇಸ್ಟ್‌ ಮಾಡುವುದಿಲ್ಲ. ಅರ್ಧದಷ್ಟು ಜೋಳವನ್ನು ನಮ್ಮ ಮೀನುಗಳು ತಿಂದು ಸುಖವಾಗಿರಲಿ ಎಂದು ಪ್ರೀತಿಯಿಂದ ಪೆಸಿಫಿಕ್‌ ಮತ್ತು ಅಟ್ಲಾಂಟಿಕ್‌ ಸಮುದ್ರಕ್ಕೆ ಸುರಿಯುತ್ತಾರೆ. ಇನ್ನು ಸ್ಪಲ್ಪ ಜೋಳ ಆಫ್ರಿಕಾ ಖಂಡದ ಬಡದೇಶಗಳಿಗೆ ಬಳುವಳಿಯಾಗಿ ರವಾನೆ ಆಗುತ್ತದೆ. ಎಷ್ಟು ವಿಲೇವಾರಿ ಮಾಡಿದರೂ ಇನ್ನೂ ಉಳಿಯುವ ಮೆಕ್ಕೆಜೋಳವನ್ನು ಏನು ಮಾಡುವುದು? ಪೆಟ್ರೋಲ್‌ ಅಂಶ ಎಥನಾಲ್‌ ಉತ್ಪಾದನೆಗೆ ಒಂದಿಷ್ಟು, ಆಕಳು ಮತ್ತು ಹಂದಿ ಮೇಯ್ದು ಕೊಬ್ಬಲಿ ಎಂದು ಒಂದಿಷ್ಟು . ಹೀಗೆ ಖರ್ಚಾಗಿ ಇನ್ನೂ ಉಳಿಯುವ ಜೋಳವನ್ನು ಬ್ರೆಡ್‌ ಬಿಸ್ಕತ್‌ ಮಾಡಿದ ನಂತರವೂ ಕರಗದ ಜೋಳ ಪಾಪ್‌ಕಾರ್ನ್‌ ಮೆಷೀನಿನ ಬಳಿ ಬಂದು ಚಟಪಟ ಸದ್ದು ಮಾಡುತ್ತದೆ. ಅಂತೂ ಈ ಮುಸುಕಿನ ಜೋಳ ಫ್ರೀ ವೇಗಳ ಮೂಲಕ, ಐವೇಗಳ ಮೂಲಕ, ಪಾರ್ಕ್‌ವೇಗಳ ಮೂಲಕ ಚಲಿಸಿ ಪ್ರತಿಯಾಬ್ಬ ಅಮೆರಿಕ ನಿವಾಸಿಗಳ ಹೊಟ್ಟೆಯನ್ನು ಹೇಗೋ ಸೇರಿಕೊಳ್ಳುವುದು ಖಂಡಿತ.

ಮೆಕ್ಕೆ ಜೋಳದ ಮೆಕ್ಕಾ ಅಯೋವಾದಲ್ಲಿ ಎರಡು ದಿವಸ ಇದ್ದರೂ ಪಾಪ್‌ಕಾರ್ನ್‌ ಮೇಯುವ ಅವಕಾಶ ನನಗೆ ಸಿಗಲಿಲ್ಲ. ಇದಕ್ಕೆ ಕಾರಣ , ನಮ್ಮ ಪ್ರೀತಿಯ ಕನ್ನಡಿಗರು ನೀಡಿದ ಮಸಾಲೆ ದೋಸೆ, ಕಟ್ಲೆಟ್‌, ಉಪ್ಪಿಟ್ಟು, ಪುಳಿಯೋಗರೆಗಳಲ್ಲೇ ನನ್ನ ಹೊಟ್ಟೆ ಮತ್ತು ಮನಸ್ಸು ತುಂಬಿಬಂತು. ಕನ್ನಡ ಎನಿಸಿಕೊಳ್ಳುವ ಎಲ್ಲವನ್ನೂ ಆದರದಿಂದ ಮೈದಡವೊ ಕನ್ನಡಿಗರು ಇಲ್ಲುಂಟು. ಸಂಖ್ಯೆಯಲ್ಲಿ ಕಡಿಮೆ ಇರಬಹುದು ಆದರೆ ಗುಣಾತ್ಮಕ ಅಂಶ ದೊಡ್ಡದು. ಇಷ್ಟೊಂದು ಪ್ರೀತಿಯ ಜನರನ್ನೂ ಲೇವಡಿಮಾಡುವ ಜನ ಇದ್ದಾರೆ ಎಂದರೆ ನೀವು ನಂಬುತ್ತೀರಾ?

ಅಯೋವಾ ಪ್ರಾಂತ್ಯಕ್ಕೆ ಹೊಂದಿಕೊಂಡಿರುವ ರಾಜ್ಯಗಳು ನಾನು ಆಗಲೇ ಹೇಳಿದ ಹಾಗೆ ಮುಂದುವರೆದ ರಾ ಜ್ಯಗಳ ಸಾಲಿಗೆ ಸೇರುತ್ತವೆ. ಅಯೋವಾದ ಒಬ್ಬ ರೈತ ಜೋಳದ ಸುಗ್ಗಿಯಾದ ನಂತರ ಮಿನೇಸೋಟಕ್ಕೋ ಚಿಕಾಗೊಗೋ ಅಥವಾ ಇನ್ನಾವುದೋ ಅಬ್ಬರ ತುಂಬಿದ ನಗರಕ್ಕೆ ಹೋದಾಗ ರಸ್ತೆಯಲ್ಲಿ ದಾರಿ ತಪ್ಪುತ್ತಾನೆ. ಯಾವುದೋ ಐವೇನಲ್ಲಿ ಹೋಗಬೇಕಾಗಿದ್ದವನು ಇನ್ನಾವುದೋ ಐವೇಗೆ ನುಗ್ಗಿ ಮತ್ತಾವುದೋ ಎಗ್ಸಿಟ್‌ನಲ್ಲಿ ನುಸುಳಿ ಗುರಿಕಾಣದೆ ಒಂದು ಕಡೆ ಕಾರ್‌ ನಿಲ್ಲಿಸಿ ಡೈರೆಕ್ಷನ್ಸ್‌ ಕೇಳುತ್ತಾನೆ. ಓ.. ಇವನು ಅಯೋವಾದ ಗಮಾರನೇ ಇರಬೇಕು ಎಂದು ಭಾವಿಸುವ ಮುಂದುವರೆದ ಜನ ಅವನಿಗೆ ದಾರಿ ತೋರಿಸಿದನಂತರ ಜತೆಗಾರರೊಂದಿಗೆ ತಮಾಷೆ ಮಾಡತೊಡಗುತ್ತಾರೆ. ಅವನೊಬ್ಬ IOWA (I Owe The World an Apology)

ಜತೆಗಾರ ಪ್ರಜೆಗಳನ್ನು ನಯವಾಗಿ ಲೇವಡಿ ಮಾಡುವ ಅಮೆರಿಕನ್ನರ ಸ್ಟೈಲು ಹೀಗೂ ಇರುತ್ತದೆ. ಪಾಪ ಇದರಲ್ಲಿ ಅವರದೇನು ತಪ್ಪಿಲ್ಲ. ಮನೆಯಲ್ಲಿ ಮಕ್ಕಳನ್ನು ಬಯ್ಯುವಂತಿಲ್ಲ, ಗಂಡ ಹೆಂಡತಿಯನ್ನೂ, ಹೆಂಡತಿ ಗಂಡನನ್ನೂ ಬಯ್ಯುವಂತಿಲ್ಲ. ಇಂಥ ಪರಿಸ್ಥಿತಿಯನ್ನು ತಂದುಕೊಂಡ ತಮ್ಮನ್ನು ತಾವೇ ಹಳಿದುಕೊಳ್ಳುವುದಕ್ಕೆ ಮನಸ್ಸಾದರೂ ಹೇಗೆ ಬರತ್ತೆ? ಅದಕ್ಕೇ ರಸ್ತೆಯಲ್ಲೇ ನಮ್ಮ ಎಲ್ಲ ಕೋಪ ತಾಪಗಳು ಶಮನವಾಗಬೇಕು. Bumper to Bumper Traffic ಇದ್ದಾಗ Whats The Heck .. ಎಂದು ಹಳಿದುಕೊಳ್ಳುತ್ತಾ ಇನ್ನೊಂದು ಎಗ್ಸಿಟ್‌ ತೆಗೆದುಕೊಳ್ಳಲು ಕಾಯುತ್ತಿರಬೇಕು..

ಮಿನೆಸೋಟದಿಂದ ಅಯೋವಾಗೆ ನಾನು ಮತ್ತು ನನ್ನ ಸ್ನೇಹಿತ ಡ್ರೆೃವ್‌ ಮಾಡಿಕೊಂಡು ಬರುವಾಗ ಹೀಗೇ ಆಯಿತು.

ಐಷಾರಾಮಿ ರೇಸು ಕುದುರೆಗಳ ಸ್ವರ್ಗ ವೇವರ್‌ಲೀ ದಾಟಿ ಆಲ್‌ಬರ್ಟ್‌ಲೀ ಟೌನ್‌ ಪ್ರವೇಶಿಸುತ್ತದ್ದಂತೆಯೇ ನಾವು ದಾರಿ ತಪ್ಪಿದೆವು. ಎಷ್ಟು ಸುತ್ತು ಹಾಕಿದರೂ ನಾವು ಮುಂಚೆಯೇ ಗುರುತು ಹಾಕಿಕೊಂಡಿದ್ದ ಮೆಕ್‌ಡೊನಾಲ್ಡ್‌ ಸಿಗುತ್ತಲೇ ಇಲ್ಲ. ಕೊನೆಗೂ ಮೆಕ್‌ಡೊನಾಲ್ಡ್‌ ಸಿಕ್ಕಿತು, ಕೃಷ್ಣ ಶಾಸ್ತ್ರಿಗಳ ದರ್ಶನವಾಯಿತು. ಶಾಸ್ತ್ರಿಗಳು ಅಯೋವಾದ ಹಿರಿಯ ಪ್ರಜೆ. ನಾನು ಶ್ರಮ ಜೀವಿಗಳ ರಾಜ್ಯದಲ್ಲಿ ಕನ್ನಡದ ಅತಿಥಿ. ಆದ್ದರಿಂದ ನಾವು ಪ್ರಪಂಚದ ಕ್ಷಮೆಯಾಚಿಸುವ ಅಗತ್ಯವಿಲ್ಲ.!

ಡೆಟ್ರಾಯಿಟ್‌ ವಿಶ್ವ ಕನ್ನಡ ಸಮ್ಮೇಳದಲ್ಲಿ ಮುಖ್ಯ ಅತಿಥಿಯಾಗಿದ್ದ ಕವಿ ನಿಸಾರ್‌ ಅಹಮದ್‌ರೂ ನನ್ನಂತೆಯೇ ಅಮೆರಿಕಾದಲ್ಲಿ ವಿಸ್ತುತವಾಗಿ ಪ್ರವಾಸ ಮಾಡಿದವರು. ಅವರೂ ಕೂಡ ಅಯೋವಾಗೆ ಬಂದಿದ್ದರೆಂದು ತಿಳಿಯುತ್ತೇನೆ.

ಅಯೋವಾದ ಹಿರಿಮೆಯನ್ನು ಕಂಡು ನಿಸಾರರು ಪುಳಕಿತರಾಗಿದ್ದರೆ ಅವರ ಮುಂದಿನ ಕವನ ಹೀಗಿರಬಹುದೇ?

ಜೋಳದ ಸಿರಿ ಬೆಳಕಿನಲ್ಲಿ

ಮಿಸ್ಸಿಸಿಪ್ಪಿಯ ತೆನೆ ಬಳುಕಿನಲ್ಲಿ

ನಿತ್ಯೋತ್ಸವ , ತಾಯೆ

ನಿನಗೆ ನಿತ್ಯೋತ್ಸವ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more