• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫ್ಲಾರಿಡಾ ವಿಶ್ವ ಕನ್ನಡ ಸಮ್ಮೇಳನಕ್ಕೆ ತೆರೆ

By Staff
|

ಮೂರು ದಿನಗಳ ಕನ್ನಡ ಉತ್ಸವದ ನಂತರ ಹಿಂತಿರುಗಿ ನೋಡಿದಾಗ ಪ್ರದರ್ಶನ ಮುಗಿದ ನಂತರದ ರಂಗಭೂಮಿಯಂತೆ ಒರ್ಲಾಂಡೊ ಕಾಣಿಸುತ್ತಿದೆ. ಭಣಭಣಗುಟ್ಟುವ ಈ ಸಮ್ಮಿಲನ ನೆಲದ ಮೂಲಕ ಅದೆಷ್ಟು ಕನ್ನಡದ ಪರಾಗಗಳ ಸಂಪರ್ಕ ದಿಕ್ಕುದಿಕ್ಕಿಗೆ ನಡೆದಿದೆ ಎನ್ನುವುದನ್ನು ನೆನೆದಾಗ ಅಚ್ಚರಿಯಾಗುತ್ತದೆ. ಮೇಲ್ನೋಟಕ್ಕೆ ಹಬ್ಬದಂತೆ ಕಾಣುವ ಒಂದು ಸಮ್ಮೇಳನದ ಗರ್ಭದಲ್ಲಿ ಅದೆಷ್ಟು ಸಾಧ್ಯತೆಗಳಿರುತ್ತವೆ, ಅಲ್ಲವಾ ?

ಎಸ್.ಕೆ. ಶಾಮಸುಂದರ

ಒರ್ಲಾಂಡೊದಲ್ಲಿನ ಮೂರನೇ 'ಅಕ್ಕ-ವಿಶ್ವಕನ್ನಡ ಸಮ್ಮೇಳನ"ಕ್ಕೆ ತೆರೆ ಬಿದ್ದಿದೆ. ಈಗ ನೆನಪುಗಳ ಮೆಲುಕು ಹಾಕುವ ಸಮಯ. ಸಮ್ಮೇಳನದ ಖುಷಿ- ಸಂಭ್ರಮ ಹಾಗೂ ಕಹಿ ಅನುಭವಗಳನ್ನು ಹಂಚಿಕೊಳ್ಳುವ ಸಮಯ. ಆದರೆ ಒರ್ಲಾಂಡೊ ಸಮ್ಮೇಳನದಲ್ಲಿ ಕಹಿ ಅನುಭವಗಳು ಎದುರಾದದು ನಗಣ್ಯ ಎನ್ನುವಷ್ಟು ಕಡಿಮೆ: ಅಲ್ಲಿಯದು ಸವಿನೆನಪುಗಳ ಸರಿಮಗ ಸಂಭ್ರಮ. ಚಂಡಮಾರುತದ ಸವಾಲಿನ ಹಾದಿಯಲ್ಲಿ ಕನ್ನಡದ ಪಲ್ಲಕ್ಕಿಯ ಜಂಬೂ ಸವಾರಿ. ಈ ಸಾಧನೆಯ ಹಾದಿಯನ್ನು ಮೆಚ್ಚದಿರುವುದಾದರೂ ಹೇಗೆ ?

ಸಮ್ಮೇಳನದ ಸಾರ್ಥಕತೆ ಹಾಗೂ ನಿರರ್ಥಕತೆಗಳನ್ನು ಪಟ್ಟಿ ಮಾಡುತ್ತಾ ಹೋಗುವುದು ಸುಲಭ. ಸಮ್ಮೇಳನದ ಕುರಿತು ಟೀಕೆಗಳನ್ನು ಪೋಣಿಸುತ್ತಾ ಹೋಗುವುದು, ಆಯೋಜಕರನ್ನು ಹಳಿಯುತ್ತಾ ಹೋಗುವುದು- ಇವುಗಳನ್ನು ಯಾರು ಬೇಕಾದರೂ ಮಾಡಬಹುದು. ಆದರೆ, ಸಮ್ಮೆಳನ ನಡೆಸುವ ಕಷ್ಟ ಹಾಗೂ ಅದನ್ನು ದಡ ಮುಟ್ಟಿಸುವ ಸಾಹಸವಿದೆಯಲ್ಲ ಅದು ಸುಲಭದ ಮಾತಲ್ಲ . ನಮ್ಮ ಬಹುತೇಕ ಟೀಕಾಕಾರರು ಇಂಥ ಅನನುಭವಿಗಳೂ ಎಳಸುಗಳೂ ಆಗಿರುತ್ತಾರೆ. ಸಮ್ಮೇಳನದ ಸಾಧ್ಯತೆಗಳನ್ನು ವರ್ತಮಾನದ ಸವಾಲಿನಲ್ಲಿ ಅರಗಿಸಿಕೊಳ್ಳುವ ಅತಿ ಮುಖ್ಯವಾದ ಹಾಗೂ ಕನ್ನಡದ ಮಟ್ಟಿಗೆ ಅತ್ಯಂತ ಜರೂರಿನದಾದ ಕೆಲಸಕ್ಕೆ ಕೈಹಚ್ಚುವವರು ಕಡಿಮೆ.

ಒಂದು ಭಾಷಾ ಸಮುದಾಯ ಒಗ್ಗಟ್ಟಾಗಿ ಹೆಜ್ಜೆ ಹಾಕುವುದಕ್ಕೆ ನಾನಾ ಉದ್ದೇಶಗಳಿರುತ್ತವೆ. ಸಂಘಟನೆ, ಸ್ನೇಹ ಸಂಪಾದನೆ, ವ್ಯವಹಾರ, ನುಡಿಪ್ರಜ್ಞೆಯ ನವೀಕರಣ, ಹೀಗೆ. ಉತ್ತರ ಅಮೆರಿಕ ಪ್ರಾಂತ್ಯಗಳಲ್ಲಿ ನೆಲೆಗೊಂಡಿರುವ ಕನ್ನಡಿಗರು ಇಂಥ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಕನ್ನಡ ಧ್ವಜದಡಿ ಮೊದಲ ಬಾರಿ ಒಂದಾಗಿದ್ದು 1998ರಲ್ಲಿ . ಆ ಒಗ್ಗೂಡುವಿಕೆಗೆ ಆಶ್ರಯ ಕೊಟ್ಟಿದ್ದು ಹುಲುಸಾದ ದೇಶದ ಮರಳುಗಾಡು ಅರಿಜೋನಾದ ಫೀನಿಕ್ಸ್‌ ನಗರ. (ಕನ್ನಡದ ಮಟ್ಟಿಗೆ 'ಫೀನಿಕ್ಸ್‌" ಅರ್ಥಪೂರ್ಣ ಹಾಗೂ ಆಸೆ ಹುಟ್ಟಿಸುವ ರೂಪಕ). ಫೀನಿಕ್ಸ್‌ನಲ್ಲಿ ಏನಾಯಿತು ಎನ್ನುವುದು ವರದಿಮಾಡುವುದಕ್ಕೆ ನಾನು ಅಲ್ಲಿರಲಿಲ್ಲ ಮತ್ತು ನಿಮ್ಮ ಮನೆಮಾತು ದಟ್ಸ್‌ಕನ್ನಡ ಇನ್ನೂ ಕಣ್ಣು ತೆರೆದಿರಲಿಲ್ಲ . ಈ ಸಮ್ಮೇಳನದಲ್ಲೇ ಜನ್ಮ ತಾಳಿದ್ದು 'ಅಕ್ಕ". ಸಂಸ್ಥೆಯನ್ನು ಯಾರು ಆರಂಭಿಸಿದರು, ಅವರ ಕನಸುಗಳು ಏನಿತ್ತು ಎನ್ನುವುದು ಚರ್ಚಾಸ್ಪರ್ಧೆಯ ವಿಷಯವಾದೀತು. ಕಾಲದ ಓಟದಲ್ಲಿ ಸಂಘಟನೆಯ ಉದ್ದೇಶಗಳು ಹಾಗೂ ವ್ಯಕ್ತಿಗಳು ಬದಲಾಗುತ್ತಾ ಹೋಗುವುದನ್ನು ನಾವು ನೋಡುತ್ತಲೇ ಇದ್ದೇವೆ. ಪರಂತು ಅಮೆರಿಕನ್ನಡಿಗರಿಗೆ ಎಲ್ಲರನ್ನೂ ಒಟ್ಟಿಗೆ ಸೇರಿಸಿ ಮುನ್ನಡೆಯಲು ಒಂದು ದಾರಿ ಕಲ್ಪಿಸುವ ಒಂದು ಉದ್ದೇಶವು 'ಅಕ್ಕ"ಳಿಗೆ ಇದ್ದದ್ದು ಸ್ಪಷ್ಟ . ಈ ಉದ್ದೇಶದ ಅಭಿವ್ಯಕ್ತಿ ರೂಪವೇ ಕನ್ನಡ ಸಮ್ಮೇಳನಗಳು.

1998 ರಿಂದ 2000 ಇಸವಿಯ ಅವಧಿಯಾಳಗೆ ಹರಿದ ನೀರಿನ ಹರಹನ್ನು ನಾನು ಕಂಡವನಲ್ಲ . 'ಅಕ್ಕ" ಬಳಗ ಸುದ್ದಿಯಲ್ಲಿತ್ತಾದರೂ ಆಗಿನ್ನೂ ಜನರ ನಾಲಗೆಯಲ್ಲಿ ನಲಿದಾಡುತ್ತಿರಲಿಲ್ಲ . ಅಕ್ಕ ಮತ್ತೊಮ್ಮೆ ಸುದ್ದಿಗೆ ಬಂದದ್ದು 2000ರಲ್ಲಿ. ಜಯರಾಮ ನಾಡಿಗರ ಉಮೇದು ಮತ್ತು ಹ್ಯೂಸ್ಟನ್‌ ಕನ್ನಡಿಗರ ಉತ್ಸಾಹದ ಫಲವಾಗಿ ಮೊದಲನೆ ಅಧಿಕೃತ ಅಕ್ಕ ಸಮ್ಮೇಳನ ನಡೆಯಿತು. ಹ್ಯೂಸ್ಟನ್‌ ಸಮ್ಮೇಳನದ ಕೆಲವು ತುಣುಕುಗಳನ್ನು ನಮ್ಮ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟಿಸಿದೆವು. ಈ ಪ್ರಕಟಣೆಯ ಉತ್ಸಾಹಕ್ಕೆ ನೆರವಾದವರು ಶಿಕಾರಿಪುರ ಹರಿಹರೇಶ್ವರ.

ಹ್ಯೂಸ್ಟನ್‌ ಸಮ್ಮೇಳನದ ನಂತರ ಅಕ್ಕ ಬಾಲ್ಯಾವಸ್ಥೆಯಿಂದ ಕಿಶೋರಾವಸ್ಥೆ ತಲುಪಿತು. ಆ ಕಿಶೋರಾವಸ್ಥೆಯ ಕೆಲವು ಚಲನವಲನಗಳನ್ನು ನಾನು ಕಂಡದ್ದು ಡೆಟ್ರಾಯಿಟ್‌ನಲ್ಲಿ. ಅದು 2002ರಲ್ಲಿ ನಡೆದ ಎರಡನೇ ವಿಶ್ವಕನ್ನಡ ಸಮ್ಮೇಳನ. ಡೆಟ್ರಾಯಿಟ್‌ ಸಮ್ಮೇಳನದ ಪ್ರತ್ಯಕ್ಷ ವರದಿಯನ್ನು ದಟ್ಸ್‌ಕನ್ನಡ ನಿಮಗೆ ತಲುಪಿಸಿದುದು ನೆನಪಿದೆಯಷ್ಟೆ. ಏನಕೇನ ಪ್ರಕಾರೇಣ ಡೆಟ್ರಾಯಿಟ್‌ ಸಮ್ಮೇಳನದಿಂದಾಗಿ ಅಕ್ಕ ಜಗದ್ವಿಖ್ಯಾತವಾಯಿತು. ಕನ್ನಡಕ್ಕಾಗಿ ಟೊಂಕ ಕಟ್ಟಿ ಕೆಲಸ ಮಾಡುವವರು ಒಂದು ಕಡೆ, ಮೂರುಕಾಸಿನ ಕೆಲಸಕ್ಕೆ ಆರು ಕಾಸಿನ ಪ್ರಚಾರಕ್ಕೆ ಹಪಹಪಿಸುವ ಸುದ್ದಿಶೂರರು ಇನ್ನೊಂದೆಡೆ ಎಂಬಂಥ ಪರಿಸ್ಥಿತಿಯಿಂದಾಗಿ ಅಕ್ಕ ನಲುಗಿದಳು, ಪತ್ರಿಕೆ ಓದುವ ಕುಗ್ರಾಮದ ಓದುಗನ ಬಾಯಿಗೂ ಮುಟ್ಟಿದಳು. ಅಮೆರಿಕನ್ನಡಿಗರ ಆಶೋತ್ತರಗಳ ಪ್ರತೀಕವಾಗಿ ಕಾರ್ಯೋನ್ಮುಖವಾಗಬೇಕಾಗಿದ್ದ ಅಕ್ಕ ಕವಲುದಾರಿಯಲ್ಲಿ ಬಂದು ನಿಂತದ್ದು ಆಗಲೇ. ಅಂತೂ ಅಕ್ಕ ಸುದ್ದಿಮನೆ ಹೊಕ್ಕಿದ್ದಾಯಿತು. ಒಳ್ಳೆಯದು ಕೆಟ್ಟದ್ದು , ಎರಡಕ್ಕೂ ಗ್ರಾಸವಾಗಿದ್ದೂ ಆಯಿತು.

ಮತ್ತೊಂದು ಚಕ್ರ ಉರುಳಿದೆ. ಎಡರುಗಳನ್ನು ಒಂದೊಂದಾಗಿ ಕಳಚಿಕೊಳ್ಳುತ್ತ 'ಅಕ್ಕ" ತನ್ನ ಬಲವರ್ಧನೆಯ ಪ್ರಯತ್ನಗಳನ್ನು ನಡೆಸಿ, ಅದರಲ್ಲಿ ಯಶಸ್ವಿಯೂ ಆಗಿದೆ. ಇದಕ್ಕೆ ಸಾಕ್ಷಿ ಒರ್ಲಾಂಡೊ ಸಮ್ಮೇಳನ.

ಸಮ್ಮೇಳನ ಮಾಡುವುದೇ 'ಅಕ್ಕ" ಕೂಟದ ಏಕಮಾತ್ರ ಸಾಧನೆ-ಉದ್ದೇಶವೇ ಎಂದು ಜನ ಇವತ್ತಿಗೂ ಮಾತಾಡಿಕೊಳ್ಳುವುದುಂಟು. ಅಂಥ ಮಾತುಗಳ ನಡುವೆಯೇ ಒರ್ಲಾಂಡೊ ಸಮ್ಮೇಳನದಲ್ಲಿ ಭಾಗವಹಿಸಿದ್ದೂ ಆಯಿತು.

ಒರ್ಲಾಂಡೊ ಸಮ್ಮೇಳನದಲ್ಲಿ ಭಾಗವಹಿಸಿದಾಗ ಅನ್ನಿಸಿದ್ದು : ಸಮ್ಮೇಳನದ ರೂಪದಲ್ಲಿ 'ಅಕ್ಕ" ಇತರ ಕೆಲಸಗಳಿಗೂ ಪ್ರೇರಕವಾಗುತ್ತಿದೆ ಎನ್ನುವುದು. ಅಕ್ಕ ಸಮ್ಮೇಳನ ಅಮೆರಿಕನ್ನಡಿಗರ ವಿಹಾರಕೂಟವಲ್ಲ ಎನ್ನುವ ವಿಷಯವನ್ನು ಜಾಗತಿಕ ಕನ್ನಡಿಗರು ಮರೆಯಬಾರದು. ತವರು ಹಾಗೂ ಅನಿವಾಸಿ ಕನ್ನಡಿಗರ ನಡುವಿನ ಸ್ನೇಹಸೇತುವಾಗಿ ಈ ಸಮ್ಮೇಳನ ನಿಧಾನವಾಗಿಯಾದರೂ ರೂಪಾಂತರಗೊಳ್ಳುತ್ತಿದೆ. ಈ ಮೂಲಕ ಕನ್ನಡದ ಚಟುವಟಿಕೆಗಳು ವಿಸ್ತಾರಗೊಳ್ಳುತ್ತಿವೆ. ಕನ್ನಡ ಕಲಾವಿದರು ಬರಹಗಾರರು ತಮ್ಮ ಸಾಧ್ಯತೆಗಳ ವಿಸ್ತರಿಸಿಕೊಳ್ಳುತ್ತಿದ್ದಾರೆ. ಕರಾವಳಿಯ ಒಬ್ಬ ಯಕ್ಷಗಾನ ಕಲಾವಿದ, ಕೋಲಾರದ ಮತ್ತೊಬ್ಬ ಕಲಾವಿದ ಅಮೆರಿಕದ ನೆಲದಲ್ಲಿ ತನ್ನ ಕಲೆಯನ್ನು ಹೆಮ್ಮೆಯಿಂದ ಪ್ರದರ್ಶಿಸುವುದಕ್ಕೆ ಅಕ್ಕ ಸಮ್ಮೇಳನಗಳು ವೇದಿಕೆ ಒದಗಿಸಿವೆ.

ಅನಿವಾಸಿ ಕನ್ನಡಿಗರ ತವಕ ತಲ್ಲಣಗಳಿಗೂ ವಿಶ್ವ ಕನ್ನಡ ಸಮ್ಮೇಳನಗಳು ಸ್ಪಂದಿಸಿವೆ. 'ಮಿಸ್‌ ಅಮೆರಿಕನ್ನಡತಿ ಸೌಂದರ್ಯ ಸ್ಪರ್ಧೆ" ಸೇರಿದಂತೆ ಅನೇಕ ಚಟುವಟಿಕೆಗಳನ್ನು ಯುವ ಜಾಣಜಾಣೆಯರಿಗಾಗಿಯೇ 'ಅಕ್ಕ" ಏರ್ಪಡಿಸಿದ್ದನ್ನು ಇಲ್ಲಿ ಗಮನಿಸಬೇಕು. ಬಹುಶಃ, ಅಮೆರಿಕದಲ್ಲಿನ ಹೊಸ ಪೀಳಿಗೆಯಲ್ಲಿ ಕನ್ನಡ ಬೀಜದ ಬಿತ್ತನೆಗೆ ಇಂಥ ಸಮ್ಮೇಳನಗಳು ಹದನೆಲವಾಗಿ ನೆರವಾಗುತ್ತವೆ ಅನ್ನಿಸುತ್ತದೆ.

ಒರ್ಲಾಂಡೊ ಸಮ್ಮೇಳನದ ವರದಿಯಲ್ಲಿ ಮಾಧ್ಯಮಗಳ ಪೈಕಿ ದಟ್ಸ್‌ಕನ್ನಡ ಮುಂಚೂಣಿಯಲ್ಲಿದೆ. ಸಮ್ಮೇಳನದ ಎಲ್ಲ ಮುಖಗಳನ್ನು ವರದಿ ಮಾಡುವ ಆಶಯ ನಮ್ಮದು. ಆದರದು ಸದ್ಯದ ಮಟ್ಟಿಗೆ ಎಟುಕದ ಗುರಿಯಾಗಿತ್ತು. ನಾನು ಶಾಮಸುಂದರ, ಹಾಗೂ ನಮ್ಮ ವಾಹಿನಿಯ ಶ್ರಮಜೀವಿ ಬರಹಗಾರ ಶ್ರೀವತ್ಸ ಜೋಶಿ ಸಮ್ಮೇಳನ ವರದಿಗಳನ್ನು ಸಚಿತ್ರವಾಗಿ ನಿಮಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಸಮ್ಮೇಳನಕ್ಕಾಗಿಯೇ ವಿಶೇಷ ಪುಟಗಳನ್ನು ದಟ್ಸ್‌ನ್ನಡ ತೆರೆದಿದೆ. ಇಲ್ಲೊಂದು ಮಾತನ್ನು ಸ್ಪಷ್ಟಪಡಿಸಬೇಕು : ಸಮ್ಮೇಳನದ ಕುರಿತಂತೆ ಓದುಗರಿಗೆ ವರ್ತಮಾನಗಳನ್ನು ತಲುಪಿಸುವುದು ನಮ್ಮ ವರದಿಗಾರಿಕೆಯ ಉದ್ದೇಶವೇ ಹೊರತು ತೀರ್ಮಾನಗಳನ್ನಲ್ಲ . ನಮ್ಮ ಈ ನಿಲುವನ್ನು ದಟ್ಸ್‌ಕನ್ನಡದ ಜಾಗತಿಕ ಹಾಗೂ ಜಾಗರೂಕ ಓದುಗ ಬಳಗ ಮುಂಚಿನಿಂದಲೂ ಗುರ್ತಿಸಿ ಗೌರವಿಸಿದೆ. ಓದುಗರ ಬೆಂಬಲದಿಂದಲೇ ಅಂತರ್ಜಾಲದಲ್ಲಿ ಕನ್ನಡದ ಸಾಧ್ಯತೆಗಳನ್ನು ದಟ್ಸ್‌ಕನ್ನಡ ಅನವರತವಾಗಿ ವಿಸ್ತರಿಸುತ್ತಲೇ ನಡೆಯುತ್ತಿದೆ.

ಒರ್ಲಾಂಡೊ ನಂತರ ಮುಂದೇನು ? ಮತ್ತೊಂದು ಸಮ್ಮೇಳನವಂತೂ ಇದ್ದೇ ಇದೆ. ಆದರೆ ಸಮ್ಮೇಳನಗಳ ನಡುವೆ ಕನ್ನಡಮುಖಿಯಾಗಿ 'ಅಕ್ಕ" ಇನ್ನಷ್ಟು ಬೆಳೆಯಬೇಕು. ಆ ಉತ್ಸಾಹ ಹಾಗೂ ಚೈತನ್ಯ 'ಅಕ್ಕ" ಬಳಗದಲ್ಲಿದೆ. ಕನ್ನಡದೊಂದಿಗೆ ತಾನೂ ಬೆಳೆಯುವ 'ಅಕ್ಕ" ಬಳಗದ ನಾಳೆಯ ಬಗ್ಗೆ ಆಸೆಗಳನ್ನು ಉಳಿಸಿಕೊಳ್ಳೋಣ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more