ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಕೆ. ಶಾಮಸುಂದರ

By Staff
|
Google Oneindia Kannada News

ಸಂಧ್ಯಾ ರವೀಂದ್ರನಾಥ್‌ರ ‘ಮರಳಿ ಬರು-ವೆ ನಾ ಮತ್ತು ಇತರ ಕಥೆಗಳು’ ಸಂಕಲನದ ಕಥೆಗಳ ಕುರಿತೊಂದು ಆತ್ಮೀಯ ಬರಹ. ಸಂವಾದ ರೂಪದಲ್ಲಿರುವ ಈ ಲೇಖನ ಪುಸ್ತಕ ವಿಮರ್ಶೆಯಲ್ಲ ; ಕತೆಗಳು ಕೊಟ್ಟ ಸಂತೋಷ ಮತ್ತು ನೆನಪಿಸಿದ ಸಂಗತಿಗಳನ್ನು ಹಂಚಿಕೊಳ್ಳುವ ಕ್ರಿಯೆ.

S.K.Shamasundara, Editor ಎಸ್ಕೆ. ಶಾಮಸುಂದರ
[email protected]

ಅವನು ಸದಾ ಅದೇ ಕ್ಷೌರಿಕನ ಹತ್ತಿರ ಹೇರ್‌ ಕಟಿಂಗ್‌ ಮಾಡಿಸಿಕೊಳ್ಳಲು ಹೋಗುತ್ತಿರುತ್ತಾನೆ. ಕ್ಷೌರಿಕನ ಬಗ್ಗೆ ಈತನಿಗೆ ಪ್ರೀತಿ ಮತ್ತು ಅನುಮಾನ. ಅವನ ಜೊತೆಗೆ ಮಾತಾಡುವುದು ತನ್ನ ಮಾನವೀಯತೆಗೆ ಸಾಕ್ಷಿ ಎಂದು ಅವನು ಅಂದುಕೊಂಡಿರುತ್ತಾನೆ.

ಹೀಗಿರುತ್ತಿರಬೇಕಾದರೆ ಒಂದು ದಿನ ಆ ಕ್ಷೌರಿಕ ಈತನ ಹತ್ತಿರ ಸ್ವಲ್ಪ ಸಾಲ ಕೇಳುತ್ತಾನೆ. ಈತನಿಗೆ ಅವನು ಮೋಸಗಾರ ಇರಬಹುದು ಅನ್ನಿಸುತ್ತದೆ. ಸಾಲ ಕೊಟ್ಟಿದ್ದನ್ನು ವಾಪಸ್ಸು ಕೊಡದೇ ಹೋದರೆ, ವಂಚಿಸಿದರೆ? ಹೀಗೆ ಅನುಮಾನಿಸುತ್ತಾ ಒಂದೆರಡು ದಿನ ತಳ್ಳುತ್ತಾನೆ. ಮತ್ತೊಂದು ದಿನ ಕ್ಷೌರಿಕನ ಹತ್ತಿರ ಸಾಲ ಯಾಕೆ ಬೇಕು ಅಂತಲೂ ಕೇಳುತ್ತಾನೆ. ಕ್ಷೌರಿಕ ತನ್ನ ಮಗನಿಗೆ ಆರೋಗ್ಯ ಸರಿಯಿಲ್ಲ ಅನ್ನುತ್ತಾನೆ. ಅದೂ ಸುಳ್ಳಿರಬಹುದು ಅನ್ನಿಸುತ್ತದೆ ಈತನಿಗೆ.

ಸಾಲವನ್ನು ಕೊಡದೇ ಕೊಡೋದಿಲ್ಲ ಅಂತ ಹೇಳಲಿಕ್ಕೂ ಆಗದೇ ಆತನನ್ನು ಒಂದಷ್ಟು ದಿನ ಅಲೆದಾಡಿಸುತ್ತಾನೆ. ಕೊನೆಗೊಂದು ದಿನ ಮನೆ ಹತ್ತಿರ ಬಾ ಅನ್ನುತ್ತಾನೆ. ಕ್ಷೌರಿಕ ಮನೆಗೆ ಬಂದಾಗ ಮತ್ತೆ ದ್ವಂದ್ವ ಕಾಡುತ್ತದೆ. ಈತ ನಿಜಕ್ಕೂ ಮೋಸಗಾರನಿರಬಹುದು ಅನ್ನಿಸಿ ಮನೆಯಾಳಗಿದ್ದೂ ಇಲ್ಲ ಅನ್ನಿಸಿಕೊಳ್ಳುತ್ತಾನೆ.

Coverpage of Sandhya Ravindranths book Marali Baruve Naa Matthu Ithara Kathegaluಇದಾದ ತುಂಬ ದಿನಗಳ ನಂತರ ಆತ ಕ್ಷೌರಿಕನ ಅಂಗಡಿ ಕಡೆಗೆ ಹೋದಾಗ ಅಂಗಡಿಗೆ ಬೀಗ ಹಾಕಿರುತ್ತೆ. ಅವನ ಮಗು ತೀರಿಕೊಂಡಿತು ಎಂದೂ ಆ ನಂತರ ಆತ ಅಂಗಡಿಗೆ ಬಂದಿಲ್ಲವೆಂದೂ ಯಾರೋ ಹೇಳುತ್ತಾರೆ.

ಇದು ನನ್ನ ನೆನಪಲ್ಲಿ ಉಳಿದಿರುವಂತೆ ಪಿ. ಲಂಕೇಶ್‌ ಬರೆದ ‘ಗಿಣಿಯು ಪಂಜರದೊಳಿಲ್ಲ’ ಕತೆ. ಇದನ್ನು ಬರೆಯುವ ಹೊತ್ತಿಗೆ ನಾನು ಅದನ್ನು ಮತ್ತೊಮ್ಮೆ ಓದುವುದಕ್ಕೆ ಹೋಗಲಿಲ್ಲ. ಓದಿದರೆ ಮತ್ತಷ್ಟು ವಿವರಗಳು ಸಿಗುತ್ತಿತ್ತೋ ಏನೋ?

ನಿಮ್ಮ ಕತೆಗಳನ್ನು ಓದುವಾಗ ಥಟ್ಟನೆ ನೆನಪಾದದ್ದು ಲಂಕೇಶರ ಈ ಕತೆ. ಕಾರಣ ಸ್ವಷ್ಟವಾಗಿದೆ. ನಿಮ್ಮ ಕತೆಗಳಲ್ಲೂ ಸ್ಥಾಯಿಯಾಗಿರುವುದು ಪಾಪಪ್ರಜ್ಞೆ ಮತ್ತು ವಿಷಾದ. ನಾನು ಕಾರಣವಲ್ಲ ಅಂತ ಗೊತ್ತಿದ್ದ ಸಂಗತಿಗಳಿಗೂ ಎಲ್ಲೋ ಒಂದು ಕಡೆ ನಾನೇ ಕಾರಣ ಇರಬಹುದೇ ಎಂಬ ವಿಕ್ಷಿಪ್ತ ಅನುಮಾನದಲ್ಲಿ ನಿಮ್ಮ ಕತೆಗಳು ಚಲಿಸುತ್ತವೆ.

ಇದಕ್ಕಾಗಿ ನಾನು ಮೂರು ಕತೆಗಳನ್ನು ಉದಾಹರಿಸಬಲ್ಲೆ. ಕೆಂಪಿ ಎಂಬ ಬಾಲ್ಯದ ಗೆಳತಿಯ ಸುತ್ತ ಸುತ್ತುವ ‘ಬೆಳಕಲ್ಲಿ ಕುರುಡಾಯ್ತೆ ಕಣ್ಣು?’, ದೊಡ್ಡಬಳ್ಳಾಪುರದ ರಾಜೇಶ್ವರಿಯ ಕತೆ, ಒಬ್ಬ ಗುರುತು ಪರಿಚಯವಿಲ್ಲದವನ ಮಾತಿನಿಂದ ವಿಚಲಿತಗೊಂಡವನ ತಲ್ಲಣಗಳನ್ನು ಹೇಳುವ ‘ವಿಮುಕ್ತ’. ಅಷ್ಟೊಂದು ಪಾಪಪ್ರಜ್ಞೆ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತ ಹೇಳಿಕೊಳ್ಳುತ್ತಲೇ ಇವನ್ನೆಲ್ಲ ಓದಿ ಮುಗಿಸಿದೆ. ಥಟ್ಟನೆ ‘ಗಿಳಿಯು ಪಂಜರದೊಳಿಲ್ಲ’ ನೆನಪಿಗೆ ಬಂತು.

ನೀವು ‘ಬೆಳಕಲ್ಲಿ ಕುರುಡಾಯ್ತೆ ಕಣ್ಣು?’ ಕತೆಯನ್ನು ಅರ್ಧಕ್ಕೇ ನಿಲ್ಲಿಸಿಬಿಡಬಹುದಿತ್ತು. ಮೈಸೂರಿನಿಂದ ಬೆಂಗಳೂರಿಗೆ ಹೋಗುವ ದಾರಿಯಲ್ಲಿ ಸಿಗುವ ಭಿಕ್ಷುಕಿ ಬಾಲ್ಯದ ಗೆಳತಿಯೂ ಇರಬಹುದೇನೋ ಎಂಬ ಅನುಮಾನ ಕಥಾನಾಯಕಿಯನ್ನು ಕಾಡುತ್ತದೆ. ಅದೇ ಗುಂಗಿನಲ್ಲಿ ಆಕೆ ಪ್ರಯಾಣ ಮುಂದುವರಿಸುತ್ತಾಳೆ. (ಅಂದಹಾಗೆ, ಕೋರೈಸುವ ಲಾರಿಯ ಬೆಳಕಲ್ಲಿ ಕೆಂಪಿಯ ಆಕೃತಿ ಕರಗಿಹೋಗುವ ರೂಪಕ ಸೊಗಸಾಗಿದೆ.) ಮತ್ತೆ ತಿರುಗಿ ಹೋಗಿ ಆಕೆಯನ್ನು ನೋಡೋಣ ಅನ್ನಿಸುತ್ತದೆ. ನೀವು ಬರೆಯುತ್ತೀರಿ;

‘ಚಿಕ್ಕವಯಸ್ಸಿನಲ್ಲಿ ಇದ್ದ ಆ ಕಂಪ್ಯಾಷನ್‌ ಏನಾಯಿತು ಈಗ ? ಪ್ರಾಕ್ಟಿಕಲ್ಲಾಗಿ ಯೋಚಿಸುವುದಕ್ಕೆ ಶುರು ಮಾಡಿ ಬಿಟ್ಟಿದ್ದೀನಲ್ಲ... ಆ ಕರುಣೆ, ಮುಗ್ಧತೆ ಎಲ್ಲ ಏನಾಯಿತು? ಬೆಳೀತಾ ಬೆಳೀತಾ ಆ ದಯೆ ಕನಿಕರ ಎಲ್ಲ ಎಲ್ಲಿಗೆ ಹೋಯಿತು? ನಾನು ಬೆಳೆದು ದೊಡ್ಡವಳಾದಷ್ಟೂ ಬದುಕಿನ ಸರಳತೆಯಿಂದ, ಅನುಕಂಪ, ಆರ್ದ್ರತೆಯಿಂದ ದೂರಾಗುತ್ತಿದ್ದೀನಿಯೇ?

ಈ ಕತ್ತಲಲ್ಲಿ ಮತ್ತೆ ವಾಪಸ್ಸು ಹೋಗುವುದೇ?’

Sandhya Ravindranathಈ ದ್ವಂದ್ವದಲ್ಲಿ ಕತೆ ನಿಂತಿದ್ದರೆ ಅದು ಹೊರಡಿಸುವ ಅರ್ಥಗಳೇ ಬೇರೆ ಇದ್ದವು. ಅಲ್ಲೊಂದು ambiguity ಸಾಧ್ಯವಾಗುತ್ತಿತ್ತು. ಕೆಂಪಿಯನ್ನು ಹೋಗಿ ನೋಡಿ ಮಾತಾಡಿ ಅವಳಿಗೆ ನೆರವಾಗುವ ಸಾಧ್ಯತೆಯಿದ್ದೂ ಹಾಗೆ ಮಾಡಲಿಲ್ಲ ಎಂಬ ಪಾಪಪ್ರಜ್ಞೆ ಕತೆಯ ಆಯಾಮಗಳನ್ನು ವಿಸ್ತರಿಸುತ್ತಿತ್ತು. heard melodies are sweet, but those unheard are sweeter ಅಂತಾರಲ್ಲ , ಹಾಗೆ. ಆದರೆ ನಾಯಕಿ ಆಕೆಯನ್ನು ಭೇಟಿಯಾಗಿ ಗುರುತು ಹಿಡಿದು ಆಕೆಗೆ ಹಣ ಕೊಟ್ಟು ಬರುವಲ್ಲಿಗೆ ಕತೆ ಸರಳವಾಗಿದೆ, ವಾಚ್ಯವಾಗಿದೆ.

ಅಲ್ಲೇ ಇನ್ನೊಂದು ಅಂಶವೂ ನನಗೆ ಇಷ್ಟವಾಯ್ತು. ಇತ್ತೀಚೆಗೆ ಕವಿತಾ ಲಂಕೇಶ್‌ ನಿರ್ದೇಶಿಸಿದ ‘ಪ್ರೀತಿ ಪ್ರೇಮ ಪ್ರಣಯ’ ನೋಡುತ್ತಿದ್ದೆ. ಅಲ್ಲಿ ಒಂದು ಕಡೆ ಒಂದು ಮಾತು ಬರುತ್ತದೆ. ; ಮಕ್ಕಳಿಗೆ ಮತ್ತು ಮುದುಕರಿಗೆ ಅರ್ಥವಾಗೋದು ಈ ನಡುವಿನ ತಲೆಮಾರಿಗೆ ಯಾಕೆ ಅರ್ಥವಾಗೋದಿಲ್ಲ ಎಂಬ ಪ್ರಶ್ನೆ ಅದು. ಅದಿತಿಗೆ ಅರ್ಥವಾಗೋದು ಆ ಕತೆಯಲ್ಲಿ ಇನ್ಯಾರಿಗೂ ಅರ್ಥವೇ ಆಗೋದಿಲ್ಲ. ದಟ್ಸ್‌ ವಂಡರ್‌ಫುಲ್‌!

ಕಾಲ ನಿಜಕ್ಕೂ ಕ್ರೂರಿ.

ನಿಮ್ಮ ರಂಗಪ್ರವೇಶ ಕತೆಯನ್ನು ಓದಿದಾಗ ಗದ್ಗದಿತನಾದೆ. ತುಂಬ ಸರಳವಾದ ಕತೆ ಅದು. ಆರಂಗೇಂಟ್ರಂ ಸಂಭ್ರಮ, ಆತಂಕ, ತಲ್ಲಣ ಮತ್ತು ಸ್ನೇಹವನ್ನು ಹೇಳುವ ಕತೆ ಅದು. ಬಹುಶಃ ಹತ್ತು ವರುಷದ ಹಿಂದೆ ಓದಿದ್ದರೆ ಕಣ್ಣು ಮಂಜಾಗುತ್ತಿರಲಿಲ್ಲ. ಆದರೆ ಈ ಹೊತ್ತಿಗೆ ನನಗೆ ಅಂಥ ಸಂಭ್ರಮಗಳ ಕ್ಷಣಿಕತೆ ಅರಿವಾಗಿದೆ. ತುಂಬ ಚೆನ್ನಾಗಿ ಸಿದ್ಧತೆ ಮಾಡಿಕೊಂಡ ಪಲ್ಲವಿ, ರೇಜಿಗೆ ಪಡುವ ಸೋನಿಯಾ-ಇವರಿಬ್ಬರ ಅಕಳಂಕಿತ ಸ್ನೇಹ. ಇವನ್ನೆಲ್ಲ ಸ್ವಲ್ಪ ಹೆಚ್ಚೇ ಭಾವುಕತೆಯಿಂದ ಬರೆದಿದ್ದೀರಿ. ಭಾವುಕತೆಯನ್ನು ಮೀರಿದವರು ನಾವು ಎಂಬ ಭ್ರಮೆ ಬೇಡ. ಭಾವುಕರಾಗಬೇಕಾಗಿ ಬಂದಾಗ ಒಂದು ಹನಿ ಕಣ್ಣೀರು ಜಾರಲಿ. ಅದಕ್ಕೇನಂತೆ.

***

ನಮಗೆ ಸಾಕಷ್ಟು ಗೊಂದಲಗಳಿವೆ. ಒಂದು ಕತೆಯನ್ನು ಹೇಗೆ ನೋಡಬೇಕು ಎಂಬ ಬಗ್ಗೆ, ಎಷ್ಟು ಮೆಚ್ಚಿಕೊಳ್ಳಬೇಕು ಎಂಬ ಬಗ್ಗೆ, ಯಾಕೆ ಇಷ್ಟಪಡಬೇಕು ಎಂಬ ಬಗ್ಗೆ ಅನುಮಾನಗಳಿವೆ. ಖಾಸಗಿಯಾಗಿ ಮೆಚ್ಚಿಕೊಂಡು ಅದಕ್ಕೋಸ್ಕರ ಸಾರ್ವಜನಿಕವಾಗಿ ಸಂಕೋಚಪಡುತ್ತೇವೆ. ಸಾರ್ವಜನಿಕವಾಗಿ ಮೆಚ್ಚಿಕೊಂಡು ಖಾಸಗಿಯಾಗಿ ತೆಗಳುತ್ತೇವೆ.

ಕಥೆಗಳನ್ನು ಕಥೆಗಳಾಗಿಯೇ ನೋಡಬೇಕು ಅನ್ನುವವನು ನಾನು. ಅವು ಒಂದು ಬದುಕಿನ ಚಿತ್ರಣವನ್ನು ಮುಂದಿಡಬೇಕಾಗಿಲ್ಲ. ಒಂದು ಕ್ಷಣವನ್ನು ಹಿಡಿದು ನಿಲ್ಲಿಸಿದರೆ ಸಾಕು. ಅವು ಜೀವನಚಿತ್ರಗಳಲ್ಲ , ರೈಲಿನಲ್ಲಿ ಹೋಗುತ್ತಿರುವ ಫಕ್ಕನೆ ಕಂಡು ಕಣ್ಮರೆಯಾಗುವ ಸುಂದರಿಯ ಮುಖದಂತೆ ಫಕ್ಕನೆ ಮಿಂಚಿ ಮಾಯವಾಗುತ್ತವೆ. ಅವುಗಳ ನೆನಪಷ್ಟೇ ಸುದೀರ್ಘವಾಗಿ ಉಳಿಯುತ್ತದೆ, ಉಳಿಯಬೇಕು.

ಹೀಗಾಗಿ ಫಾರಂ, ಕಂಟೆಂಟು, ತಂತ್ರ, ಬದ್ಧತೆ, ಇಸಮ್ಮು ಇವುಗಳಿಗಿಂತ ಒಂದು ಕತೆ ನನಗೆ ಏನನ್ನು ಹೇಳುತ್ತದೆ ಅನ್ನುವುದನ್ನು ನಾನು ನೋಡುತ್ತೇನೆ. ನಾನು ಮರೆತ ಭಾವ, ನನ್ನೊಳಗೇ ಹುದುಗಿಹೋದ ಒಂದು ಸಂವೇದನೆ, ನಾನು ಮರೆಯಲೆತ್ನಿಸುವ ಒಂದು ನೋವಿನಲ್ಲೂ ಇರಬಹುದಾದ ನಲಿವು, ಬಾಲ್ಯದಲ್ಲಿ ಕಳೆದುಹೋದ ಒಂದು ಗಳಿಗೆ- ಇವುಗಳನ್ನೆಲ್ಲ ಕತೆ ನೆನಪಿಗೆ ತಂದರೆ ಸಾಕು. ಬದ್ಧತೆಗೆ ಬೆಂಕಿ ಬೀಳಲಿ.

ಈ ನಡುವೆ ಸಣ್ಣಕತೆ ಸಾಕಷ್ಟು ದೂರ ಕ್ರಮಿಸಿದೆ. ಹದಿನೆಂಟನೆ ಶತಮಾನದಲ್ಲಿ ಸಣ್ಣಕತೆ ಜಗತ್ತಿನ ಯಾವ ಭಾಷೆಯಲ್ಲೂ ಅಂಥ ಜನಪ್ರಿಯ ಸಾಹಿತ್ಯ ಪ್ರಕಾರ ಆಗಿರಲಿಲ್ಲ. ಹತ್ತೊಂಬತ್ತನೆ ಶತಮಾನದ ಹೊತ್ತಿಗೆ ಸಂಕ್ಷಿಪ್ತ ಕಾದಂಬರಿಯೆಂಬಂತೆ ಅದು ಓದಿಸಿಕೊಂಡಿತು. ಅಂದರೆ ಕಾದಂಬರಿ ಬರೆಯಲು ಬಿಡುವಿಲ್ಲದ ಲೇಖಕನ ಟಿಪ್ಪಣಿಗಳೆಂದು ಕರೆಸಿಕೊಂಡಿತು. ಕ್ರಮೇಣ ಅದೊಂದು ಪ್ರತ್ಯೇಕ ಪ್ರಕಾರ ಅಂತ ಗುರುತಿಸಿದವರು ಅದರ ಅನುಕೂಲ ಮತ್ತು ಶಕ್ತಿಗಳನ್ನು ಅರ್ಥಮಾಡಿಕೊಂಡರು.

ಪತ್ರಿಕೆಗಳೂ ವಾರಪತ್ರಿಕೆಗಳೂ ಹೆಚ್ಚಿದಂತೆ ಸಣ್ಣಕತೆಗೆ ಇನ್ನಿಲ್ಲದ ಬೇಡಿಕೆ ಬಂತು. ಇವತ್ತು ದಿನಪತ್ರಿಕೆಗಳಿಗೆ ವಾರಕ್ಕೊಂದು, ವಾರಪತ್ರಿಕೆಗಳಿಗೆ ವಾರಕ್ಕೆರಡು, ಮಾಸಪತ್ರಿಕೆಗಳಿಗೆ ತಿಂಗಳಿಗೆ ಹತ್ತು , ವಾರ್ಷಿಕ ವಿಶೇಷಾಂಕಗಳಿಗೆ ವರುಷಕ್ಕೆ ಹದಿನೈದು ಕತೆಗಳು ಬೇಕು. ಈ ಲೆಕ್ಕದಲ್ಲಿ ಹೋದರೆ ಒಂದು ವರುಷಕ್ಕೆ ಕನ್ನಡದಲ್ಲಿ ಏನಿಲ್ಲವೆಂದರೂ ವರುಷಕ್ಕೆ ಎಂಟುನೂರು ಕತೆಗಳು ಬರುತ್ತವೆ. ಈ ಎಂಟುನೂರು ಕತೆಗಳೂ ಒಟ್ಟಿಗೆ ಓದುವುದಕ್ಕೆ ಸಿಗುವುದಿಲ್ಲ. ಅವುಗಳಲ್ಲಿ ಸಂಕಲನಕ್ಕೆ ಒಗ್ಗುವುದು ನೂರಕ್ಕೂ ಕಡಿಮೆ. ಉಳಿದವು ದಿವಂಗತವಾಗುತ್ತವೆ.

ಪತ್ರಿಕೆಗಳಲ್ಲಿ ಪ್ರಕಟವಾಗುವ ಈ ಎಂಟುನೂರು ಕತೆಗಳಲ್ಲಿ ಒಂದೂ ಪ್ರಾತಿನಿಧಿಕವಲ್ಲ. ಕನ್ನಡ ಸಣ್ಣಕತೆಗಳ ಪರಂಪರೆಗೆ ಅವು ಸೇರುವುದೇ ಇಲ್ಲ. ಸಾಹಿತ್ಯ ಚರಿತ್ರೆಯನ್ನು ಸೇರುವ ಕತೆಗಳೇ ಬೇರೆ ಇದ್ದಾವೆ. ಆ ಲೇಖಕರೇ ಬೇರೆ ಇದ್ದಾರೆ. ಅದರ ಬಗ್ಗೆ ಇಲ್ಲಿ ಪ್ರಸ್ತಾಪ ಬೇಕಾಗಿಲ್ಲ.

***

ಸಂಧ್ಯಾ,

ನೀವು ಕವಿತೆಗಳನ್ನು ಮಾತ್ರ ಬರೆಯುತ್ತೀರಿ ಅಂದುಕೊಂಡಿದ್ದೆ. ಸಣ್ಣ ಕಥೆಗಳನ್ನು ಬರೆದಿದ್ದು ಅವನ್ನು ಸಂಕಲನ ರೂಪದಲ್ಲಿ ತರಲು ನಿಶ್ಚಯಿಸಿದ ಸಂಗತಿ ತಿಳಿದಾಗ ದಿಗ್ಗನೆ ಎದ್ದು ಕುಳಿತೆ. ನಿಮ್ಮ ಕತೆಗಳು ಕೊಟ್ಟ ಸಂತೋಷ ಮತ್ತು ನೆನಪಿಸಿದ ಸಂಗತಿಗಳನ್ನು ಹಂಚಿಕೊಂಡಿದ್ದೇನೆ. ನಿಮ್ಮ ಕತೆಗಳು ತುಂಬ ಕಡಿಮೆ ಬರೆಯುವ ನನ್ನನ್ನು ಇಷ್ಟನ್ನು ಬರೆಯುವುದಕ್ಕೆ ಪ್ರೇರೇಪಿಸಿವೆ ಅನ್ನುವ ಕಾರಣಕ್ಕೆ ನಿಮಗೆ ಥ್ಯಾಂಕ್ಸ್‌. ಕತೆಗಳನ್ನು ಒಳ್ಳೆಯವು ಕೆಟ್ಟವು ಎಂದು ವಿಂಗಡಿಸುವುದಕ್ಕೆ ನಾನು ಹೋಗುವುದಿಲ್ಲ ; ಅದು ವಿಮರ್ಶಕರ ಕೆಲಸ. ಓದುಗರು ಯಾವತ್ತೂ ಕತೆಯನ್ನು ವಿಂಗಡಿಸಿ ಓದುವುದಿಲ್ಲ ; ಓದಿ ವಿಂಗಡಿಸುವುದೂ ಇಲ್ಲ. ಒಂದು ಕತೆ ಕೊಡುವ ಸಂತೋಷವನ್ನು ಸುಮ್ಮನೆ ಸ್ವೀಕರಿಸುತ್ತಾರೆ. ನನಗೂ ಹಾಗಿರಲು ಇಷ್ಟ. ಹಾಗಿರುತ್ತೇನೆ.

ಕೊನೆಗೊಳಿಸುವ ಮುಂಚೆ ಒಂದು ಮಾತು.

ಬೊಂಬೆಯಾಟ ಕತೆ ಚೆನ್ನಾಗಿದೆ. ಕಾರಣ ಕೊಡುವುದಿಲ್ಲ . ಹೀಗೆ ವಿನಾಕಾರಣ ಇಷ್ಟವಾಗುವ ಕತೆಗಳು ನಮಗೆ ಬೇಕು. ವಿನಾಕಾರಣ ಇಷ್ಟವಾಗುವ ಗೆಳೆಯರು ಬೇಕು.

*

ಕೃತಿ : ಮರಳಿ ಬರುವ ನಾ ಮತ್ತು ಇತರ ಕಥೆಗಳು
ಲೇಖಕಿ : ಸಂಧ್ಯಾ ರವೀಂದ್ರನಾಥ್‌, ಕ್ಯಾಲಿಫೋರ್ನಿಯಾ
ಮೊದಲ ಮುದ್ರಣ : ಜುಲೈ 2003
ಪುಟ : 152+16 , ಬೆಲೆ : 70 ರುಪಾಯಿ.
ಪ್ರಕಾಶಕರು : ಅನ್ವೇಷಣೆ ಪ್ರಕಾಶನ, 32/2 ಎ, ನಿಸರ್ಗ, ನಾಗರಬಾವಿ ರಸ್ತೆ , ವಿಜಯನಗರ, ಬೆಂಗಳೂರು- 560 040.

(‘ಮರಳಿ ಬರುವೆ ನಾ ಮತ್ತು ಇತರ ಕಥೆಗಳು’ ಸಂಕಲನದ ಮುನ್ನುಡಿ)

ಪೂರಕ ಓದಿಗೆ-

ಪುಸ್ತಕ ಪ್ರಸವದ ಸಾರ್ಥಕ ಕ್ಷಣಗಳು..


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X