ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಕೆ. ಶಾಮಸುಂದರ

By Staff
|
Google Oneindia Kannada News

ಅಮೆರಿಕದ ಕನ್ನಡ ಸಂಘಗಳಲ್ಲಿ ಹೆಚ್ಚುತ್ತಿರುವ ಹೊಸ ಚಿಗುರಿನ ಸೊಬಗು.

S.K.Shamasundara, Editor ಎಸ್ಕೆ. ಶಾಮಸುಂದರ
[email protected]

Yogesh Devraj, President Elect KKNC 2004 ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ನೂತನ ಅಧ್ಯಕ್ಷರಾಗಿ ಯೋಗೇಶ್‌ ದೇವರಾಜ್‌ ಆಯ್ಕೆ ಆಗಿದ್ದಾರೆ. ನವೆಂಬರ್‌ 22ರ ಶನಿವಾರ ಸ್ಯಾನ್‌ಫ್ರಾನ್ಸಿಸ್‌ಕೊ ಬೇ ಏರಿಯಾದಲ್ಲಿ ನಡೆದ ಕೂಟದ ವಾರ್ಷಿಕೋತ್ಸವ ಮತ್ತು ನೂತನ ಪದಾಧಿಕಾರಿಗಳ ಚುನಾವಣೆಯಲ್ಲಿ ಯೋಗೇಶ್‌ ಆಯ್ಕೆಯಾದರು. ನೂತನ ಅಧ್ಯಕ್ಷರ ಕಾರ್ಯಭಾರ ಜನವರಿ 1, 2004 ರಿಂದ ಆರಂಭವಾಗುತ್ತದೆ.

ವಾರ್ಷಿಕ ಚುನಾವಣೆಯ ಜೊತೆಗೆ ಕೂಟವು (Kannada Koota of North California) ದೀಪಾವಳಿ ಕಾರ್ಯಕ್ರಮವನ್ನೂ ಹಮ್ಮಿಕೊಂಡಿತ್ತು. ಇದೇ ಸಂದರ್ಭದಲ್ಲಿ ಕನ್ನಡ ಕೂಟದ ವತಿಯಿಂದ ಹೊರತಂದ ಸ್ವರ್ಣಸೇತು-ದೀಪಾವಳಿ ವಿಶೇಷಾಂಕ ಬಿಡುಗಡೆ ಕಾರ್ಯಕ್ರಮ ನೆರವೇರಿತು. ಪದ್ಮನಾಭರಾವ್‌ ಮೇಳನಹಳ್ಳಿ ಅವರ ಸಂಪಾದಕತ್ವದಲ್ಲಿ ಸಿದ್ಧವಾದ ಈ ಪುರವಣಿಯನ್ನು ಮಿನೆಸೋಟ ನಿವಾಸಿ, ಕಥೆಗಾರ ಡಾ. ಗುರುಪ್ರಸಾದ್‌ ಕಾಗಿನೆಲೆ ಅನಾವರಣ ಮಾಡಿದರು.

ಬೇ ಏರಿಯಾದ ಕನ್ನಡ ಕುಟುಂಬಗಳು ಹೆಚ್ಚು ಸಂಖ್ಯೆಯಲ್ಲಿ ಕಲೆತು ಸಾಂಸ್ಕೃತಿಕ ಹಬ್ಬ, ಅಕ್ಷರ ಹಬ್ಬ ಮತ್ತು ಕೂಟದ ವರ್ಷಾವರಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.

ಕನ್ನಡ ಕೂಟದ ಕಾರ್ಯಕಾರಿ ಮಂಡಳಿಯ ಅವಧಿ ಜನವರಿಯಿಂದ ಡಿಸೆಂಬರ್‌ವರೆಗೆ. ಇದೀಗ ನಿರ್ಗಮಿಸುತ್ತಿರುವ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಸುರೇಶ್‌ ಬಾಬು. ಬಾಬು ಮತ್ತು ಅವರ ಉತ್ಸಾಹಿ ತಂಡ ಪ್ರಸಕ್ತ ವರ್ಷದಲ್ಲಿ ಹಲವಾರು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುವುದರ ಮೂಲಕ ಸಿಲಿಕಾನ್‌ ಕಣಿವೆಯಲ್ಲಿ ಕನ್ನಡ -ಕರ್ನಾಟಕ ಪ್ರಜ್ಞೆಯನ್ನು ಜೀವಂತವಿರಿಸಿದೆ. ಭಾರತೀಯ ಹಬ್ಬಹರಿದಿನಗಳು ಮಾತ್ರವಲ್ಲದೆ, ಭಾರತದ ನಾಡಹಬ್ಬ, ಕನ್ನಡನಾಡ ಹಬ್ಬ, ಕನ್ನಡನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಕೆಕೆಎನ್‌ಸಿ ಅನೂಚಾನವಾಗಿ ಏರ್ಪಡಿಸುತ್ತಾ ಬಂದಿದೆ. ವರ್ಷವಿಡೀ ಶ್ರದ್ಧೆಯಿಂದ ಕೂಟಕ್ಕಾಗಿ ತಮ್ಮ ಅಮೂಲ್ಯ ಸಮಯ ಮತ್ತು ಅವ್ಯಾಜ ಪ್ರೀತಿಯನ್ನು ಮೀಸಲಿಟ್ಟು ಇದೀಗ ನಿರ್ಗಮಿಸುತ್ತಿರುವ ಕನ್ನಡ ಕೂಟದ ಕಾರ್ಯಕಾರಿ ಮಂಡಳಿಗೆ ಎಲ್ಲ ಸದಸ್ಯರಿಗೆ ಶುಭಕಾಮನೆಗಳು.

Well Done Team KKNC-2003

ಕನ್ನಡ ಮಮತೆಯ ಮಗಧೀರ -ಯೋಗೇಶ್‌ ದೇವರಾಜ್‌ [email protected]

ಕೂಟದ ಅಧ್ಯಕ್ಷಗಾದಿಗೆ ಆರಿಸಿಬಂದಿರುವ ಯೋಗೇಶ್‌ ಉತ್ಸಾಹಿ ಯುವಕ. ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಅಪಾರವಾಗಿ ಪ್ರೀತಿಸುವ ಇವರು ಲೇಖಕರೂ ಹೌದು. ಅವರು ಬರೆದ ವರದಿ, ಪುಸ್ತಕ ವಿಮರ್ಶೆಗಳು ನಮ್ಮ ಅಂತರ್‌ಜಾಲ ಪತ್ರಿಕೆಯಲ್ಲಿ ಪ್ರಕಟಗೊಂಡಿರುವುದುಂಟು. ಬೆಂಗಳೂರಿನ ಆರ್‌.ವಿ. ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಶಿಕ್ಷಣ (B.E in Computer Science) ಪಡೆದ ಯೋಗೇಶ್‌ ಮೂಲತಃ ಮೈಸೂರಿನವರು. ಕನ್ನಡದ ಸಾಹಿತ್ಯ ಪ್ರಕಾರಗಳ ಅಧ್ಯಯನ ಮಾಡುವುದು, ರಾಜಕೀಯ ದಿಕ್ಕು-ದೆಸೆಗಳನ್ನು ಗಮನಿಸುವುದಲ್ಲದೆ ಪ್ರಪಂಚದ ಆಗುಹೋಗುಗಳನ್ನು ಗ್ರಹಿಸುವುದು ಅವರ ಆಸಕ್ತ ಕ್ಷೇತ್ರಗಳು.

ವೃತ್ತಿಯಿಂದ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿರುವ ಯೋಗೇಶ್‌, ಸ್ಯಾನ್‌ಹೋಸೆಯಲ್ಲಿರುವ ಸಿಸ್ಕೊ ಸಿಸ್ಟಂ ಕಂಪನಿಯಲ್ಲಿ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

ಯೋಗೇಶ್‌ ಅವರು ತಮ್ಮ ಬಿಡುವಿನ ವೇಳೆಯನ್ನು ಸಮಾಜಸೇವೆಗೂ ಮೀಸಲಿಟ್ಟಿರುವುದು ಗಮನಾರ್ಹ. ಭಾರತಕ್ಕೆ ನೆರವಾಗುವ ಸಂಘ, ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಪರೋಕ್ಷವಾಗಿ, ಅಪರೋಕ್ಷವಾಗಿ ಅವರು ಭಾಗಿಯಾಗುತ್ತಾರೆ.

ಸದ್ಯಕ್ಕೆ ಯೋಗೇಶ್‌ ಅವರು ಶಂಕರ ನೇತ್ರ ಪ್ರತಿಷ್ಠಾನದ (http://www.giftofvision.org) ಆರೋಗ್ಯದಾನ ಕಾರ್ಯಕ್ರಮದಲ್ಲಿ ಭಾಗಿ. ಶಂಕರ ನೇತ್ರ ಪ್ರತಿಷ್ಠಾನವು ಅಂಧರಿಗೆ ಚಿಕಿತ್ಸೆ ಮೂಲಕ ಬೆಳಕನ್ನು ಕರುಣಿಸುವ ಕಾಯಕದಲ್ಲಿ ನಿರತವಾಗಿದೆ.

ಕನ್ನಡ ಭಾಷೆ , ಸಂಸ್ಕೃತಿಯನ್ನು ಪೋಷಿಸಿಕೊಂಡು ಬರುವುದರ ಜತೆಗೆ ಸಮಾಜಸೇವೆಯನ್ನೂ ತಮ್ಮ ಬದುಕಿನ ಒಂದಂಗವನ್ನಾಗಿ ಸ್ವೀಕರಿಸಿರುವ ಯೋಗೇಶ್‌ ಅವರಿಗೆ ಸ್ಫೂರ್ತಿ ಅವರ ತಂದೆ ಎನ್‌. ದೇವರಾಜ್‌. ದೇವರಾಜ್‌ ಅವರು ಚೆನ್ನೈನ ಅಯನಾರ್‌ ಕನ್ನಡ ಸಂಘದ ಸ್ಥಾಪಕ ಸದಸ್ಯರಲ್ಲೊಬ್ಬರು.

ಸನ್ನಿವೇಲ್‌ನಲ್ಲಿ ನೆಲೆಸಿರುವ ಯೋಗೇಶ್‌ ಪುಟಾಣಿ ಅಂಜಲಿಯ ತಂದೆ. ಪತ್ನಿ ಮಾಲಿನಿ.

ಯುವಶಕ್ತಿ , ಅನುಭವ ಮತ್ತು ಕತೃತ್ವ ಶಕ್ತಿ

Out Going President Suresh Babuಸಾಮಾನ್ಯವಾಗಿ ಹಿರಿಯರೇ ಅಂದರೆ ‘ವಯಸ್ಸಾದವರೇ’ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದ ಕಾಲ ಈಗ ಹಿಂದೆ ಸರಿಯುತ್ತಿದೆ. ಯುವಕರು, ಯುವತಿಯರು ಕನ್ನಡ ಸಂಘ / ಕೂಟದ ಕಾರ್ಯಕಾರಿ ಸಮಿತಿಯ ಸದಸ್ಯರಾಗುವ ಮೂಲಕ ಸ್ವಯಂಪ್ರೇರಿತವಾಗಿ ಜವಾಬ್ದಾರಿ ಹೊರುವ ಟ್ರೆಂಡ್‌ ಉತ್ತರ ಅಮೆರಿಕಾ ಕನ್ನಡಿಗರ ವಲಯಗಳಲ್ಲಿ ಎದ್ದು ಕಾಣುತ್ತಿದೆ. ಕೆಕೆಎನ್‌ಸಿಯ ನೂತನ ಅಧ್ಯಕ್ಷ ಯೋಗೇಶ್‌ ಯುವಕ. ನಿಕಟ ಪೂರ್ವ ಅಧ್ಯಕ್ಷ ಸುರೇಶ್‌ ಬಾಬು ಕೂಡ ಯುವಕರೇ. ಅದರ ಹಿಂದಿನ ವರ್ಷ ಅಧ್ಯಕ್ಷರಾಗಿದ್ದ ಹಿನ್ನೆಲೆ ಗಾಯಕ, ಕನ್ನಡ ಚಿತ್ರ ನಿರ್ಮಾಪಕ ರಾಮ್‌ಪ್ರಸಾದ್‌ ಕೂಡ ಯುವಪ್ರತಿಭೆಗೆ ಉದಾಹರಣೆ.

ಯುವಶಕ್ತಿ ವಿಜೃಂಭಿಸುವ ಉದಾಹರಣೆಗೆ ನೀವು ಪೂರ್ವ ಕರಾವಳಿ ತೀರದ ಕಡೆಗೂ ಕಣ್ಣ ಹಾಯಿಸಬಹುದು. ಕಾವೇರಿ ಕನ್ನಡ ಸಂಘದ ಅಧ್ಯಕ್ಷರು ಯುವಕ ಸಂಜಯ್‌ರಾವ್‌. ಕಳೆದ ವರ್ಷ ರವಿ ಡೆಂಕಣಿಕೋಟೆ, ಅದರ ಹಿಂದಿನ ಸಾಲಿನಲ್ಲಿ ಕೆ.ಸಿ. ನಾಗಶಂಕರ್‌....ಹೀಗೆ ..ಮುಂತಾದವರು...

ಯುವಶಕ್ತಿ ಮತ್ತು ಕತೃತ್ವದ ಜತೆಗೆ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವಾಮೃತವೂ ಬೆರೆತರೆ ಉಮೇದು ಹಾಗೂ ಆಡಳಿತದಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ಪರಿಪಕ್ವತೆ ಹದವಾಗಿ ಕೂಡಿಕೊಳ್ಳುವ ಸಾಧ್ಯತೆ ಹೆಚ್ಚು. ಇಂಥ ಅನೇಕ ಮೆಟ್ಟಿಲುಗಳನ್ನು ಏರಿ ಬಂದ ಅನೇಕ ಹಿರಿಯ ಕನ್ನಡಿಗರು, ಕನ್ನಡ ಸಂಘಗಳ ಆಯಕಟ್ಟಿನ ಸ್ಥಾನಗಳಲ್ಲಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಉದಾಹರಣೆಗೆ ದಕ್ಷಿಣ ಕ್ಯಾಲಿಫೋರ್ನಿಯಾ ಸಾಂಸ್ಕೃತಿಕ ಸಂಘದ ( ಲಾಸ್‌ಏಂಜಲಿಸ್‌) ಅಧ್ಯಕ್ಷ ಬಿ. ಎನ್‌. ನಾಗರಾಜ್‌, ತ್ರಿವೇಣಿ ಕನ್ನಡ ಕೂಟದಲ್ಲಿ ಹನಸೋಗೆ ಅಶ್ವಥ್‌ನಾರಾಯಣ, ನ್ಯೂಯಾರ್ಕ್‌ ಕನ್ನಡ ಕೂಟದಲ್ಲಿ ರವಿ ಕಸಬ... ಹೀಗೆ ಮುಂತಾದವರು.

ಹಳೆಬೇರಿನ ಬಲದಲ್ಲಿ ಹೊಸ ಚಿಗುರಿನ ವಿಸ್ತಾರದಲ್ಲಿ , ಕನ್ನಡ ಅಮೆರಿಕದ ಪರಿಸರದಲ್ಲಿ ಹಬ್ಬಲಿ.


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X