• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಮನ್ವಂತರ’ದ ಸೀತಾರಾಂ ಮತ್ತು ಹರಿಹರೇಶ್ವರ

By * ಎಸ್ಕೆ. ಶಾಮಸುಂದರ
|

ಕರ್ನಾಟಕದ ಟಿವಿಗಳಲ್ಲಿ ಪ್ರಸಾರವಾಗುವ ಬಹುತೇಕ ಕನ್ನಡ ಸೀರಿಯಲ್‌ಗಳು ರಿಸೈಕಲ್ಡ್‌ ಪ್ಲಾಸ್ಟಿಕ್‌ ಚೀಲದಂತಿರುತ್ತವೆ. ಕಥೆ, ನಿರೂಪಣೆ ಮತ್ತು ಅಭಿನಯ ವಿಭಾಗಳಲ್ಲಿ ಎಷ್ಟು ಕಳಪೆಯಾಗಿರುತ್ತದೆ ಎಂದರೆ ಜನ ಅದನ್ನೇ ನೋಡುತ್ತಾ ಕಾಲ ಹಾಕುತ್ತಾರೆ.

ಶಿಕ್ಷಣ, ಜಾಗೃತಿ, ಮನಸ್ಸನ್ನು ಪ್ರಫುಲ್ಲಗೊಳಿಸುವ ಮನರಂಜನೆ.. ಉಹೂಂ. ದಿನಕ್ಕೆ ಎರಡರಿಂದ ನಾಲ್ಕರಂತೆ ನಾಲ್ಕಾರು ಚಾನಲ್‌ಗಳಲ್ಲಿ ಬಿತ್ತರವಾಗುವ ಸೋಪುಗಳು ವೀಕ್ಷಕರನ್ನು ನಿತ್ಯ ಗೋಳು ಹೊಯ್ದುಕೊಳ್ಳುವುದು ಇತ್ಯೋಪತಿಶ್ಯತಿ ನಡೆದುಬಂದಿದೆ. ಕೆಲವು ಹಾಸ್ಯಮಯ ಧಾರಾವಾಹಿಗಳೂ ಕೂಡ ನೋಡುಗರ ಕಣ್ಣಲ್ಲಿ ನೀರು ತರಿಸುವಂಥ ವಸ್ತು-ವಿಶೇಷಗಳನ್ನು ಉಣಬಡಿಸುವುದು ಕರ್ನಾಟಕದ ಕನ್ನಡಿಗರಿಗೆ ಮಾತ್ರ ಸಿಗುವಂಥದು. ಇವಕ್ಕೆಲ್ಲ ಕಾರಣಗಳನ್ನು ಹುಡುಕುತ್ತಾ ಕೂರಬೇಕಾಗಿಲ್ಲ. ಸರ್ಕಾರದ ಟಿವಿ ಆದರೆ ಸಖತ್‌ ಲಂಚ, ಖಾಸಗಿ ಟಿವಿ ಆದರೆ ವಶೀಲಿ ಬಾಜಿ ಮತ್ತು ಸ್ವಲ್ಪ ಲಂಚದ ಮಂಚದ ಕೆಳಗೆ ಧಾರಾವಾಹಿಗಳು ತೇಲಿ ಬರುವುದರಿಂದ ಹೀಗೆಲ್ಲ ಆಗುತ್ತದೆ.

ನಮ್ಮ ಸಮಾಜದ ಅಂತರಂಗದ ಬೇಡಿಕೆಗಳನ್ನು, ಒಳಮನಸ್ಸುಗಳನ್ನು, ಸವಾಲುಗಳನ್ನು ಕೇಳಿಸಿಕೊಳ್ಳದ ಒಬ್ಬ ನಿರ್ದೇಶಕ ಮತ್ತು ಅವನನ್ನು ಕೆಲಸಕ್ಕೆ ನೇಮಿಸಿಕೊಂಡ ನಿರ್ಮಾಪಕ ಮತ್ತು ಆತನಿಗೆ ಗುತ್ತಿಗೆ ಕೊಟ್ಟ ಚಾನಲ್‌ ಮ್ಯಾನೇಜರ್‌ಗಳಿಂದಾಗಿ ಗುಣಮಟ್ಟ ಕೆಟ್ಟುಕೆರ ಹಿಡಿಯುತ್ತದೆ. ಗುಣಮಟ್ಟದ ಸರಕು ವೀಕ್ಷರಿಗೆ ಬಿಟ್ಟು ಬೇರಾರಿಗೂ ಬೇಕಾಗಿರುವುದಿಲ್ಲ ಎನ್ನುವುದು ಈ ಉದ್ಯಮದಲ್ಲಿ ಹಗಲೂ ಇರುಳೂ ದುಡಿಯುವವರಿಗೆ ಚೆನ್ನಾಗಿ ಗೊತ್ತಿದೆ. ನೋಡುತ್ತಾರೋ ಬಿಡುತ್ತಾರೋ ಅಂತೂ ಟಿವಿ ಬಡಿದುಕೊಳ್ಳುತ್ತಿರುತ್ತದೆ, ಕರೆಂಟು ಪೋಲಾಗುತ್ತಿರುತ್ತದೆ, ಧಾರಾವಾಹಿಯ ಹಿಂದೆ ಯಾರೋ ಪುಣ್ಯಾತ್ಮ ದುಡ್ಡುಕಾಸು ಮಾಡಿಕೊಳ್ಳುತ್ತಿರುತ್ತಾನೆ. ಕೊನೆಗೂ ಆಗುವ ಲಾಭಗಳೆಂದರೆ, ಕೆಲವೊಂದು ಧಾರಾವಾಹಿಗಳು ಮಧ್ಯಾನ್ಹ ಉಂಡು ಮಲಗುವವರಿಗೆ ತೊಂದರೆ ಕೊಟ್ಟರೆ ಇನ್ನು ಕೆಲವು ಸಂಜೆಯ ವಾಕಿಂಗ್‌ ಮತ್ತು ಶಾಪಿಂಗ್‌ ಕೆಲಸಕಾರ್ಯಗಳಿಗೆ ಅಡ್ಡಿಯುಂಟುಮಾಡುತ್ತವೆ. ಪರಿಸ್ಥಿತಿ ಹೀಗಿರುವಾಗ ಬಿಟ್ಟ ಕಣ್ಣು ತೆರೆದ ಬಾಯಿ ಎನ್ನುವಂತೆ ಕನ್ನಡಿಗರು ತದೇಕ ಚಿತ್ತದಿಂದ ಬಿಟ್ಟೂಬಿಡದೆ ಒಂದು ಧಾರಾವಾಹಿಯನ್ನು ಸತತ 500 ದಿವಸ ನೋಡಿದರು ಎಂದರೆ ನಂಬುವುದು ಕಷ್ಟ.

ಆಫೀಸಿನಿಂದ ಮನೆಗೆ ಬಂದವರು ಶೂಸ್‌ ಕಳಚದೆ ಹಾಗೇ ಸೋಫಾದ ಮೇಲೆ ಕುಳಿತುಬಿಡುತ್ತಿದ್ದರು. ಹೆಣ್ಣುಮಕ್ಕಳು ಕುಕ್ಕರ್‌ ಕೂಗಿಸಿ ಒಗ್ಗರಣೆ ಆಮೇಲೆ ಹಾಕಿದರಾಯಿತು ಎಂದುಕೊಂಡು ಟಿವಿ ಮುಂದೆ ಕುಳಿತು ಬಿಟ್ಟರೆ ಕಾಲಿಂಗ್‌ ಬೆಲ್‌ ಹೊಡೆದುಕೊಳ್ಳುವುದಾಗಲೀ, ಫೋನು ಚಚ್ಚಿಕೊಳ್ಳುವುದಾಗಲೀ ಪಾಪ, ಕಿವಿಗೆ ಬೀಳುತ್ತಲೇ ಇರಲಿಲ್ಲ. ಎಷ್ಟೋ ಸಲ ಮಕ್ಕಳು ಹಸಿವಿನಿಂದ ಹಾಗೇ ಮಲಗಿಕೊಂಡರೂ ನಮ್ಮ ತಂದೆತಾಯಿಗಳಿಗೆ ಗೊತ್ತೇ ಆಗುತ್ತಿರಲಿಲ್ಲ. ಒಂದು ನೂರು ವಾರಗಳ ಕಾಲ ಕರ್ನಾಟಕದ ಮನೆಮನೆಗಳಲ್ಲಿ ಬದುಕು ಹೀಗೇ ಸಾಗಿತು. ಇದರಿಂದ ಯಾರಿಗಾದರೂ ತೊಂದರೆ ಅಥವಾ ಮನರಂಜನೆ ಅಥವಾ ಮನೋವಿಕಾಸ ಆಗಿದ್ದರೆ ಅದಕ್ಕೆಲ್ಲ ಕಾರಣ ಈ ಸೀತಾರಾಂ. ಮುಂಚೆ ಲಂಕೇಶ್‌ಪತ್ರಿಕೆಯಲ್ಲಿ ಬರೆಯುತ್ತಿದ್ದರಲ್ಲ ಆ ಸೀತಾರಾಂ. ಟಿ.ಎನ್‌. ಸೀತಾರಾಂ, ಗೌರಿಬಿದನೂರು.

'ಬದಲಾವಣೆ ಎಲ್ಲರಿಗೂ ಬೇಕು. ಅದು ಇಲ್ಲೇ ಎಲ್ಲೋ ಇದೆ. ನಿಮ್ಮ ಕಾಲ ಕೆಳಗೇ ಇದ್ದರೂ ಇದ್ದೀತು. ಸ್ವಲ್ಪ ಬಗ್ಗಿ ನೋಡಿ. ಇವತ್ತಲ್ಲ ನಾಳೆ ಬದುಕು ಬದಲಾವಣೆಯ ಹಾದಿ ಹಿಡಿಯುತ್ತದೆ. ಆ ಹಾದಿ ನಿಮಗೆ ಕಾಣಿಸಿದರೆ ತನ್ನ ಈ ಶ್ರಮ ಸಾರ್ಥಕ " ಎಂದು ಸೀತಾರಾಂ ವಾರಕ್ಕೆ ಐದು ದಿನದಂತೆ ಈಟಿವಿ ಚಾನಲ್‌ನಲ್ಲಿ ಪಾಠ ಮಾಡಿದರು. ಸಂಜೆ ಎಂಟು ಗಂಟೆಗೆ ಕರೆಂಟು ಹೋದ ಏರಿಯಾಗಳಲ್ಲಿನ ಜನಕ್ಕೆ ಪಾಠ ತಪ್ಪಿಹೋಗಬಾರದು ಎಂದು ರಾತ್ರಿ 11 ಗಂಟೆಗೆ ಸ್ಪೆಷಲ್‌ ಕ್ಲಾಸುಗಳನ್ನು ಕೂಡ ಇಟ್ಟುಕೊಂಡರು.

'ಮರಳಿ ಬಾ ಮನ್ವಂತರವೇ ಕಂಬನಿಗಳ ಬಳಿಗೆ, ಮರಳಿಸು ಹೊಸ ಚೇತನವ ಬಳಲಿದ ಮನಗಳಿಗೆ" ಎಂದು ಸಿ. ಅಶ್ವಥ್‌ ಹಾಡುತ್ತಿದ್ದರೆ ವಠಾರದ ಎಲ್ಲ ಮನೆ-ಮನಸ್ಸುಗಳ ಬದುಕಿನ ಪುಟಗಳ ನಡುವೆ ನೆನಪಿನ ನವಿಲುಗರಿಗಳನ್ನು ಸಿಕ್ಕಿಸುತ್ತಿದ್ದರು ಈ ಸೀತಾರಾಂ. ಇಂಥ ಸೀತಾರಾಮು ಮೊನ್ನೆ ಮೈಸೂರಿನಲ್ಲಿ ಸಿಕ್ಕಿಬಿದ್ದರು !ಸಿಕ್ಕಿಬಿದ್ದದ್ದೇ ತಡ ಜನ ಜಮಾಯಿಸಿದರು. ಧಾರಾವಾಹಿಯ ಕಥಾವಸ್ತುವಿನಿಂದ ಹಿಡಿದು ಪಾತ್ರಪೋಷಣೆ, ಕಥೆಯ ತಿರುವು, ಬಳಕು ಬಾಗುಗಳ ಬಗ್ಗೆ ಚರ್ಚೆಗೆ ಶುರುವಿಟ್ಟುಕೊಂಡರು. 'ಅವರ ಪಾತ್ರ ಚೆನ್ನಾಗಿತ್ತು, ಈ ಎಪಿಸೋಡ್‌ನಲ್ಲಿ ನೀವು ಹೀಗೆಲ್ಲ ಮಾಡಬಾರದಾಗಿತ್ತು , ಸರಕಾರದ ಸವಲತ್ತುಗಳನ್ನು ಸ್ವೀಕರಿಸಲು ಅವಳೇಕೆ ಹಿಂದುಮುಂದು ನೋಡಬೇಕಾಗಿತ್ತು?" ಎಂದು ಮುಂತಾದ ಪ್ರಶ್ನೆ, ಸಂದೇಹಗಳನ್ನು ಸೀತಾರಾಂ ಅವರ ಮುಂದಿಟ್ಟು ಅವರ ಉತ್ತರಗಳಿಗಾಗಿ ಕಾದರು. ಆದರೆ, ಅಂದು ಸೀತಾರಾಂ ಮಾತನಾಡಿದರೆ ವಿನಾ ಉತ್ತರಗಳನ್ನು ಕೊಡಲಿಲ್ಲ. ಯಾಕೆಂದರೆ, ಏನು ಉತ್ತರ ಕೊಡಬೇಕಾಗಿತ್ತೋ ಅವನ್ನೆಲ್ಲ ಅವರು ಧಾರಾವಾಹಿಯಲ್ಲೇ ಹೇಳಿಬಿಟ್ಟಿದ್ದರು.

ಮನ್ವಂತರ ಧಾರಾವಾಹಿಯ ಬಗ್ಗೆ ಬೆಂಗಳೂರಿನಲ್ಲಿ ಸೀತಾರಾಂ ಒಂದು ಸಂವಾದ ಕಾರ್ಯಕ್ರಮವನ್ನು ನಡೆಸಿದ್ದು ನಿಮಗೆ ಗೊತ್ತಿರಬಹುದು. ನ್ಯಾಯಾಲಯದ ದೃಶ್ಯಗಳು ಸಮರ್ಪಕವಾಗಿಲ್ಲ, ನ್ಯಾಯವಾದಿಗಳು ಹಾಕಿಕೊಳ್ಳುವ ಕಾಸ್ಟ್ಯೂಮ್‌ ಮೇಯರ್‌ ಹಾಕಿಕೊಳ್ಳುವ ಗೌನಿನಂತಿದೆ ಎನ್ನುವಂಥ ಕೆಲವು ಆಕ್ಷೇಪಣೆಗಳನ್ನು ಹೊರತು ಪಡಿಸಿದರೆ, ಸಂವಾದ, ಧಾರಾವಾಹಿಯ ಕಥಾವಸ್ತು, ಸಂಭಾಷಣೆ, ಮತ್ತು ಕಥೆಯ ಒಳನೋಟಗಳ ಕುರಿತು ಸಬ್ಜೆಕ್ಟಿವ್‌ ಚರ್ಚೆ ನಡೆಸಿತು. ಇದೆಲ್ಲ ನಡೆದದ್ದು ಬೆಂಗಳೂರಿನಲ್ಲಿ. ಇದಕ್ಕೂ ಮುನ್ನ ರಾಜ್ಯದ ಅನೇಕ ನಗರ ಪಟ್ಟಣಗಳಲ್ಲಿ ಮನ್ವಂತರದ ಸಂವಾದ ಕಾರ್ಯಕ್ರಮಗಳು ನಡೆದಿದ್ದವು. ಜನ ಜಾತ್ರೆಯಂತೆ ಬಂದಿದ್ದರು. ಇದಕ್ಕೂ ಮುನ್ನ 'ಮಾಯಾಮೃಗ" ಧಾರಾವಾಹಿ ಸಂದರ್ಭದಲ್ಲಿ ಸೀತಾರಾಂ ಇಂಥ ಸಂವಾದಗಳನ್ನು ನಡೆಸಿದ್ದರು. ಆದರೆ ಎಷ್ಟೂ ಊರುಗಳಲ್ಲಿ ಸಂವಾದ ನಡೆಸಲು ಸಾಧ್ಯವಾದೀತು. ಇಂಥ ಸಂವಾದಗಳು ನಮ್ಮೂರಲ್ಲೂ ನಡೆಯಲಿ ಎಂದು ಆಸೆಪಡುವ ಜನ ಕರ್ನಾಟಕದ ಎಲ್ಲ ಊರು ಕೇರಿಗಳಲ್ಲೂ ಇದ್ದಾರೆ. ಆದರೆ ಅವರಿಗೆ ಆ ಭಾಗ್ಯವಿಲ್ಲ ಎನ್ನುವಾಗ 'ಮನ್ವಂತರ" ಸಂವಾದ ಮೈಸೂರಿನ ಕದ ತಟ್ಟಿದ್ದು ಮೊನ್ನೆ ಬುಧವಾರ.

ಜೂನ್‌ 18ರ ಸಂಜೆ ಶಿಕಾರಿಪುರ ಹರಿಹರೇಶ್ವರ ಅವರ ಸರಸ್ವತಿಪುರಂ ಮನೆಯಲ್ಲಿ ಸಂವಾದಕ್ಕಿಂತ ಹೆಚ್ಚಾಗಿ ಸೀತಾರಾಂ ಅವರನ್ನು ನೋಡುವುದಕ್ಕೆಂತಲೇ ಜನ ಬಂದಿದ್ದರು. ಹರಿ ಅವರು 120 ಜನಕ್ಕೆ ಆಹ್ವಾನ ಕೊಟ್ಟಿದ್ದರೆ, 'ವಿಷಯ ಗೊತ್ತಾಯಿತು ನಾನೂ ಬರಬಹುದಾ ಸಾರ್‌" ಅಂತ ಕೇಳಿಕೊಂಡು ಜನ ಬಂದಿದ್ದರು. ಮನ್ವಂತರದ ಗೊತ್ತುಗುರಿಗಳ ಬಗ್ಗೆ ಹೆಚ್ಚು ಮಾತಾಡಲು ಇಷ್ಟಪಡದ ಸೀತಾರಾಮು, ಅಮೆರಿಕದಲ್ಲಿ ಹರಿಯವರ ಕನ್ನಡ ಸೇವೆಯನ್ನು ಹಾಡಿಹೊಗಳಲು ಅರ್ಧಗಂಟೆಯಷ್ಟು ಸಮಯವನ್ನು ತೆಗೆದುಕೊಂಡದ್ದು ಕೆಲವರಿಗಾದರೂ ಬೇಸರ ತಂದಿರಬೇಕು. ತದನಂತರ ಸಭಿಕರ ಮನ್ವಂತರದ ಸಂದೇಹಗಳಿಗೆ ಸೀತಾರಾಂ ಸಮಾಧಾನಕಾರ ಉತ್ತರಗಳನ್ನು ಕೊಡುತ್ತಾ ಹೋದರು. ಅಷ್ಟಕ್ಕೂ ಅಂದಿನ ಸಮಾರಂಭ ಒಂದು ಸಾಂಸ್ಕೃತಿಕ ಚೌಕಟ್ಟಿನ ಆತ್ಮೀಯ ವಾತಾವರಣದಲ್ಲಿ ಏರ್ಪಾಟಾಗಿದ್ದರಿಂದ, ಸಮಾರಂಭದ ಅಧ್ಯಕ್ಷತೆಯನ್ನು ಸಂಗೀತ ಅಕಾಡಮಿ ಅಧ್ಯಕ್ಷೆ ಎಚ್‌. ಆರ್‌. ಲೀಲಾವತಿಯವರು ವಹಿಸಿಕೊಂಡಿದ್ದರಿಂದ ಸಂವಾದದ ನೆಲೆ ಬೆಲೆ ಜಾಡು ಬಿಟ್ಟು ಹೆಚ್ಚು ಅಲುಗಾಡಲಿಲ್ಲ. ಪ್ರೊಫೆಸರ್‌ ರಾಜನ್‌, ಡಾ. ಸುಧಾರಾಣಿ, ರಜೆ ಕಳೆಯಲು ಅಮೆರಿಕಾದ ಮಿನೆಸೊಟದಿಂದ ತವರಿಗೆ ಬಂದಿರುವ ಕಥೆಗಾರ ಡಾ.ಗುರುಪ್ರಸಾದ್‌ ಕಾಗಿನೆಲೆ ಮುಂತಾದವರು ಅಲ್ಲಿದ್ದರು. ಮನೆಮಟ್ಟಿಗೆ ಎನಿಸುಂಥ ಕಾರ್ಯಕ್ರಮ ಊರ ಬಯಲಿನ ತನಕ ಬಂದದ್ದಕ್ಕೆ ಕಾರಣ ಹರಿಹರೇಶ್ವರ ಮತ್ತು ನಾಗಲಕ್ಷ್ಮಿ ಅವರ 'ಊರ ಉಸಾಬರಿಯ ಪ್ರೇಮ".

ಕರ್ನಾಟಕ ಸರಕಾರದವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಹರಿಕಾರರನ್ನು ಕರೆಸಿ ಕನ್ನಡ ಭವನದ ನಯನ ಸಭಾಂಗಣದಲ್ಲಿ 'ಮನೆಯಂಗಳದ ಮಾತುಕತೆ" ಕಾರ್ಯಕ್ರಮವನ್ನು ತಿಂಗಳಿಗೊಮ್ಮೆ ನಡೆಸುತ್ತದೆ. ಹರಿಯವರಾದರೋ ತಮ್ಮ ಮನೆಗೇ ಸಾಹಿತಿ ಕಲಾವಿದರನ್ನು ಬರ ಮಾಡಿಕೊಂಡು ಚರ್ಚೆ, ಸಂವಾದ, ಗಾಯನ ಗೋಷ್ಠಿಗಳನ್ನು ಏರ್ಪಾಟು ಮಾಡುತ್ತಾರೆ. ಕಳೆದ ತಿಂಗಳು ಅವರ ಮನೆಯಂಗಳಕ್ಕೆ ಆಗಮಿಸಿದ್ದ ಅತಿಥಿ ನಂದಳಿಕೆ ಬಾಲಚಂದ್ರ. ಮುದ್ದಣನ ಊರಿಗೆ ಹೊಸನೋಟಗಳನ್ನು ಕಲ್ಪಿಸಿದವರು ಈ ಬಾಲಚಂದ್ರ. ಮುದ್ದಣನ ಸಮಗ್ರ ಗ್ರಂಥ ಪ್ರಕಟಣೆಯಲ್ಲದೆ ಮನೋರಮೆಯ ರಮಣನ ಹೆಸರಲ್ಲಿ ಪ್ರಶಸ್ತಿಯನ್ನು ಸ್ಥಾಪಿಸುವುದರ ಮೂಲಕ ಆಧುನಿಕ ಕನ್ನಡ ಗದ್ಯದ ಗರಡಿಯಾಳುವಿನ ಸ್ಮರಣೆಯನ್ನು ಮುಂದಿನ ಪೀಳಿಗೆಗೆ ರವಾನಿಸುತ್ತಿರುವವರು ಬಾಲಚಂದ್ರ. ಸೀತಾರಾಂರವರ ಮನ್ವಂತರ ಟಿವಿ ಸೆಟ್ಟುಗಳಿಂದ ಕಣ್ಮರೆಯಾಯಿತು. ನಮ್ಮ ಸಾಮಾಜಿಕ ಸಮಸ್ಯೆಗಳು ಇನ್ನೂ ಅಲ್ಲೇ ಇವೆಯೋ ಅಥವಾ ಮುಂದಿನ ಪೀಳಿಗೆಗೆ ಉಡುಗೊರೆಯಾಗಿ ರವಾನೆ ಆಯಿತೋ ? ಆ ಕತೆಗಳನ್ನೆಲ್ಲ ಹೇಳುವುದಕ್ಕೆ ಇನ್ನೊಂದು 'ಮನ್ವಂತರ" ಬೇಕು. ಸೀತಾರಾಂ ಅಂಥ ಇನ್ನೊಂದು ಮನ್ವಂತರ ಕೊಡುತ್ತಾರಾ?

ಕೊಡಿ ಎನ್ನುತ್ತಿದೆ ಈಟಿವಿ. ಟೆಲಿ ಧಾರಾವಾಹಿ ಏಕೆ ? ಸಿನಿಮಾ ಮಾಡಿ , ನಾವು ದುಡ್ಡು ಹಾಕುತ್ತೇವೆ ಅನ್ನುತ್ತಿದ್ದಾರೆ ನಿರ್ಮಾಪಕರು. ಇನ್ನೂ ಯಾವ ನಿರ್ಧಾರಕ್ಕೂ ಬರದ ಸೀತಾರಾಂ ಕೊನೆಗೆ ಈಟಿವಿಯ ರಾಮೋಜಿರಾವ್‌ಗೆ ಒಲಿಯುತ್ತಾರೋ ಅಥವಾ ಅಮರ್‌ನಾಥ್‌ ಗೌಡ, ತುಮಕೂರು ದಯಾನಂದ, ದಿಲೀಪ್‌ ಮುಂತಾದ ನಿರ್ಮಾಪಕ ವೃಂದದ ಕರೆಗೆ ಓಗೊಡುತ್ತಾರೋ.. ನೋಡಬೇಕು.'ಮನ್ವಂತರ"ದ ನಂತರ 'ಗೋಡ್ಸೆಯ ಆತ್ಮಹತ್ಯೆ" ಎನ್ನುವ ಸಿನಿಮಾ ಮಾಡುತ್ತೇನೆ ಎಂದಿದ್ದರು ಸೀತಾರಾಂ. ಸದ್ಯಕ್ಕೆ ಅವರು ಸಿನಿಮಾ ಬಗ್ಗೆ ಮಾತಾಡುತ್ತಿಲ್ಲ , ಧಾರಾವಾಹಿ ಬಗ್ಗೆ ಮಾತಾಡುತ್ತಿಲ್ಲ . ಸೀತಾರಾಂ ಮೌನಿಯಾಗಿದ್ದಾರೆ. ಇಂಥ ಮೌನದ ಗರ್ಭದಲ್ಲೇ ಅಲ್ಲವೇ- ಸೃಷ್ಟಿಶೀಲ ವಿಸ್ಮಯಗಳು ಅಡಗಿರುವುದು!

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary
S.K.Harihareshwara organizes a discussion about tele serial Manvantara in Mysore with the director T. N. seetaram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X