• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಸ್ಕೆ. ಶಾಮಸುಂದರ

By Staff
|

ಎಸ್ಕೆ. ಶಾಮಸುಂದರ

shami.sk@greynium.com

Original Message- - - -

From: Shailaja Valakatte

To: S.K.Shama Sundara

Sent: Thursday, November 13, 2003 11:57 PM

Subject: Hello...

*

ಶಾಮ್‌ ಅವರಿಗೆ ನಮಸ್ಕಾರಗಳು. ಚೆನ್ನಾಗಿದ್ದೀರಾ? ದಟ್ಸ್‌ಕನ್ನಡ ಡಾಟ್‌ಕಾಂ ಇವತ್ತು ಯಾಕೋ ಬರ್ತಾಇಲ್ಲ.

ದಿನ ಬೆಳಗಾದರೆ ಅದರಿಂದಲೆ ದಿನಚರಿ ಸ್ಟಾರ್ಟಿಂಗ್‌

ಆದರೆ ಆಯ್ತಲ್ಲ ಇವತ್ತು ಅದಿಲ್ಲದಾಗ ಎಲ್ಲ ಮಿಸ್ಸಿಂಗ್‌

ಕಾಯ್ತಿದ್ದೇವೆ ಅದಕ್ಕಾಗಿ ಬರುತ್ತಲ್ಲವೆ ನಾಳೆ ಮಾರ್ನಿಂಗ್‌ ?

ಧನ್ಯವಾದಗಳು

- ಶೈಲಜಾ ವಲಕಟ್ಟೆ

ನ್ಯೂಜರ್ಸಿ

*

ಒಂದು ಪದಾರ್ರ್ಥಕ್ಕೆ ಒಗ್ಗಿಕೊಂಡರೆ ಹೀಗೇ ಆಗುತ್ತದೆ. ಬಿಡಲಾರೆ ಎಂದೂ ನಿನ್ನ .. ಎಂದು ರಾಜ್‌ಕುಮಾರ್‌ ಹಾಡಿದಂತೆ ಅದೊಂದು ಚಟವಾಗಿ ಕಾಡತೊಡಗಿದರೆ ಆಶ್ಚರ್ಯವಿಲ್ಲ. ಕಾಫಿಗೆ, ಸಿಗರೇಟಿಗೆ, ಸಂಗೀತಕ್ಕೆ, ಟಿವಿಗೆ, ಒಂದು ದಿನಪತ್ರಿಕೆಯನ್ನು ಅಂತರ್‌ಜಾಲದಲ್ಲಿ ಪ್ರತಿದಿನ ತೆರೆದು ನೋಡುವುದಕ್ಕೆ ಅಭ್ಯಾಸವಾಗಿಬಿಟ್ಟರೆ ಹೀಗೆಲ್ಲ ಆಗತ್ತೆ. ಒಂದು ದಿನ ‘ಅವನು’ ಅಥವಾ ‘ಅವಳು’ ಕಣ್ತಪ್ಪಿಸಿಕೊಂಡರೆ ಏನೋ ಕಳೆದುಕೊಂಡ ಹಾಗೆ. ಹೃದಯದ ಸಂಗಾತಿ ಯಾರದೋ ಮದುವೆ ಅಂತ ಯಾವುದೋ ಊರಿಗೆ ಹೋದಹಾಗೆ!!

ಇನ್ನೂ ಯಾಕೆ ಬರ್ಲಿಲ್ಲವ್ವ ಬೆಂಗಳೂರವಾ... ನಿತ್ಯ ಬಂದು ನಮ್ಮನ್ನೆಲ್ಲ ಮಾತಾಡ್ಸಿಕೊಂಡ್‌ ಹೋಗೋವಾ...ಎಂದು ನಮ್ಮ ಓದುಗರು ಅದೆಲ್ಲೋ ಕುಳಿತು ಹಾಡುತ್ತಿರುವುದು ನನ್ನ ಕಿವಿಗೆ ಕೇಳಿಸುತ್ತಿದೆ. ಕೆಲವರು ಇಮೇಲ್‌ ಮುಖಾಂತರ ‘ಯಾಕೋ ಬರ್ತಾಯಿಲ್ಲ , ಏನಾಯ್ತು ?’ ಎಂದು ವಿಚಾರಿಸಿಕೊಳ್ಳುತ್ತಿದ್ದಾರೆ. ಶೈಲಜಾ ವಲಕಟ್ಟೆಯಂಥ ಕವಿಗಳು ಉಭಯಕುಶಲೋಪರಿಯ ಸಂಭಾಷಣೆಯನ್ನು ಕವನದ ಮೂಲಕವೇ ಮಾಡುತ್ತಾರೆ !

*

ನವೆಂಬರ್‌ ತಿಂಗಳ ಬೆಂಗಳೂರು ಸಮಯ ಗುರುವಾರ 13ನೇ ತಾರೀಕು ಸಂಜೆ 7 ಗಂಟೆಯಿಂದ ಶುಕ್ರವಾರ ಮಧ್ಯಾಹ್ನ 2.30ರವರೆಗೆ ನಮ್ಮ ಪೋರ್ಟ್‌ಲ್‌ನ ಅಂತರಿಕ್ಷದ ಬಾಗಿಲು ತೆರೆಯಲಿಲ್ಲ . ನ್ಯೂಜರ್ಸಿಯಲ್ಲಿರುವ www.thatstskannada.com ಸರ್ವರ್‌ನಲ್ಲಿ ಕಾಣಿಸಿಕೊಂಡ ಹಾರ್ಡ್‌ವೇರ್‌ ತಾಂತ್ರಿಕ ದೋಷಗಳಿಂದಾಗಿ ದಟ್ಸ್‌ಕನ್ನಡ ವಾಹಿನಿ ನಿಸ್ತೇಜವಾಗಿತ್ತು. ನಮ್ಮ ಕೈಮೀರಿದ ಕಾರಣಗಳಿಂದಾಗಿ ಓದುಗರಿಗೆ ಉಂಟಾದ ನಿರಾಶೆಗೆ, ಅನಾನುಕೂಲತೆಗೆ ತೀವ್ರವಾಗಿ ವಿಷಾದಿಸುತ್ತೇನೆ.

*

ಶೈಲಜಾ ಅವರಂತೆ ನೂರಾರು ಮಂದಿ ಓದುಗರು ಪತ್ರ ಬರೆದಿದ್ದಾರೆ. ಪತ್ರ ಬರೆದು ಕ್ಷೇಮ ಸಮಾಚಾರ ವಿಚಾರಿಸಿಕೊಂಡ ನನ್ನೆಲ್ಲ ಮಿತ್ರರಿಗೆ ಈ ಮೂಲಕ ಥ್ಯಾಂಕ್ಸ್‌ ಹೇಳುತ್ತಿದ್ದೇನೆ. ನಮ್ಮ ಓದುಗ ಮಿತ್ರರಿಗೆ ಸಾಧ್ಯವಾದಷ್ಟು ಉತ್ತರಿಸಿ ಪರಿಸ್ಥಿತಿಯನ್ನು ವಿವರಿಸಿದ್ದೇನೆ. ವೈಯಕ್ತಿಕವಾಗಿ ಪ್ರತಿಯಾಬ್ಬರಿಗೂ ಇಮೇಲ್‌ ಬರೆಯಲಾಗಲಿಲ್ಲ , ಕ್ಷಮಿಸಿ.

ನಿಮ್ಮ ಕನ್ನಡ ಓದು ನಿರಾತಂಕವಾಗಿರಲಿ !

*

ಸುಖವಿರಲಿ, ಕಷ್ಟವೇ ಇರಲಿ. ನಮ್ಮೊಂದಿಗೆ ಏಕಪ್ರಕಾರವಾಗಿ ನಡೆದುಕೊಳ್ಳುತ್ತಿರುವ ಓದುಗ ವರ್ಗವನ್ನು ಸಂಪಾದಿಸಿಕೊಂಡ ಸಾರ್ಥಕತೆ ನಮ್ಮ ಪತ್ರಿಕೆಯ ಪಾಲಾಗಿದೆ. ದೂರದ ಊರುಗಳಿಂದ, ದೇಶಗಳಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವ ಮುನ್ನ ಇಮೇಲ್‌ನಲ್ಲಿ ನಮ್ಮ ಕಚೇರಿಯ ವಿಳಾಸ, ದೂರವಾಣಿ ಸಂಖ್ಯೆಯನ್ನು ಕೇಳಿ ಪಡೆದುಕೊಂಡು ವಿಮಾನ, ರೈಲು ಹತ್ತುವ ಅನೇಕರನ್ನು ನಾನು ಕಂಡಿದ್ದೇನೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಮನೆ ತಲುಪಿದ ಕೂಡಲೇ ಫೋನು ಮಾಡಿ ನಮ್ಮ ಕ್ಷೇಮಸಮಾಚಾರ ವಿಚಾರಿಸಿಕೊಂಡು ಆನಂತರ ಜೆಟ್‌ಲ್ಯಾಗ್‌ ನಿವಾರಿಸಿಕೊಳ್ಳುವ ದಟ್ಸ್‌ಕನ್ನಡ ಓದುಗ ಬಂಧುಗಳನ್ನು ಕಂಡು ನಾನು ಎಷ್ಟೋ ಬಾರಿ ಪುಳಕಿತನಾಗಿರುವುದುಂಟು. ಒಂದು ಪತ್ರಿಕೆಯನ್ನು ಸಜ್ಜುಗೊಳಿಸಿ ಅದನ್ನು ಇಂಟರ್‌ನೆಟ್‌ ಗೋಡೆಯ ಮೇನೆ ಅಂಟಿಸಿಬಿಟ್ಟರೆ ಅಲ್ಲಿಗೆ ಕೆಲಸ ಮುಗಿಯುವುದಿಲ್ಲ. ಓದುಗರೊಂದಿಗೆ, ಬರಹಗಾರರೊಂದಿಗೆ , ಕೊಳ್ಳುವವರೊಂದಿಗೆ, ಮಾರುವವರೊಂದಿಗೆ ಬಿಟ್ಟೂಬಿಡದ ಸಂಪರ್ಕ ಸಾಧ್ಯವಾಗಬೇಕು. ಓದುಗರೆಲ್ಲೋ, ಬರೆಯುವವರೆಲ್ಲೋ ಎನ್ನುವಂತಾದರೆ ಹೇಗೆ? ನೀನೆಲ್ಲೋ ನಾನಲ್ಲೆ ಎಂಬಂತೆ ಫೀಡ್‌ಬ್ಯಾಕ್‌ ಕೊಳವೆಯಿಂದ ಪತ್ರಗಳು ಮತ್ತು ಪೋರ್ಟ್‌ಲ್‌ ತುದಿಯಿಂದ ಒಂದೆರಡು ಸಾಲು ಉತ್ತರಗಳ ವಿನಿಮಯ ಆಗುತ್ತಿರಬೇಕು. ಆನ್‌ಲೈನ್‌ ಜರ್ನಲಿಸಂನ ಮೂಲ ಮಂತ್ರಗಳಲ್ಲಿ ಇದು ಪ್ರಾಮುಖ್ಯವಾದದ್ದು.

ಈ ವಿಷಯವನ್ನು ಒತ್ತಿ ಹೇಳುವುದಕ್ಕೆ ಸಾಕಷ್ಟು ಕಾರಣಗಳಿವೆ. ಇಸವಿ 2000 ತನಕ ಮುದ್ರಣ ಪತ್ರಿಕೋದ್ಯಮದಲ್ಲಿದ್ದ ನಾನು ಓದುಗರು ಮತ್ತು ವಿಶೇಷವಾಗಿ ಬರಹಗಾಗರು ಅನಾಥರಾಗಿರುವುದನ್ನು ಕಣ್ಣಾರೆ ಕಂಡಿದ್ದೇನೆ. 14 ಪುಟಗಳ ಪತ್ರಿಕೆಯಲ್ಲಿ ಅಚ್ಚಾಗುವ ಸುದ್ದಿ-ಸಂಗತಿಗಳನ್ನು ಓದಿ ಸಂತೋಷಗೊಂಡ ಮತ್ತು ಗಲಿಬಿಲಿಗೊಂಡ ಓದುಗರು ಬರೆದುಕೊಳ್ಳುವ ಪತ್ರಗಳು ಪತ್ರಿಕಾ ಕಚೇರಿಗೆ ರಾಶಿರಾಶಿಯಾಗಿ ಬಂದು ಬೀಳುತ್ತವೆ. ಅವುಗಳನ್ನು ಸಂಪಾದಕ ಎನಿಸಿಕೊಂಡವರು ದೇವರಾಣೆ ಓದುವುದಿಲ್ಲ. ಆಕಸ್ಮಾತ್‌ ಓದಿದರೆ ಹಿಂದಿನ ದಿನ ಅಚ್ಚಾದ ಸುದ್ದಿ ತಪ್ಪಾದುದಕ್ಕೆ ಯಾರೋ ಒಬ್ಬರು ಝಾಡಿಸಿ ಬರೆದಿರಬೇಕು. ಅಥವಾ ಮಾನನಷ್ಟ ಮೊಕದ್ದಮೆ ಹೂಡುವ ಎಚ್ಚರಿಕೆಯ ಪತ್ರವಾಗಿರಬೇಕು. ‘ನನಗೆ ಕನ್ನಡದಲ್ಲೇ ಬರೆಯುವುದು ಇಷ್ಟ. ವೃದ್ಧಾಶ್ರಗಳಲ್ಲಿ ಹಿರಿಯರು ಅನುಭವಿಸುವ ಒಂಟಿತನ’ ವಿಷಯದಲ್ಲಿ ಸಂಶೋಧನೆ ಮಾಡುತ್ತಿದ್ದೇನೆ. ಅದರ ಬಗೆಗೆ ಲೇಖನ ಬರೆದು ಕೊಟ್ಟರೆ ನಿಮ್ಮ ಪತ್ರಿಕೆಯಲ್ಲಿ ಹಾಕುತ್ತೀರಾ?’ ಎಂದು ಕನ್ನಡ ದಿನಪತ್ರಿಕೆಗೆ ಅಥವಾ ವಾರಪತ್ರಿಕೆಗೆ ನೀವೊಂದು ಪತ್ರ ಬರೆದು ನೋಡಿ. ಆ ಪತ್ರವನ್ನು ಒಬ್ಬ ಉಪಸಂಪಾದಕ ಓದಿರುತ್ತಾನೆ. ಅವನಿಗೆ ಅಥವಾ ಅವಳಿಗೆ ಉತ್ತರ ಬರೆಯುವ ಅಧಿಕಾರ ಇರುವುದಿಲ್ಲ. ಇದ್ದರೂ, ನಿರ್ದಿಷ್ಟವಾದ ಉತ್ತರ ಬರೆಯುವುದಕ್ಕೆ ಹೆದರುತ್ತಾರೆ. ಒಂದು ವೇಳೆ ಲೇಖನವನ್ನು ತರಿಸಿಕೊಂಡು ಆನಂತರ ಮೇಲಿನವರಿಗೆ ಅದು ಇಷ್ಟವಾಗದಿದ್ದರೆ ಫಜೀತಿಯಾಗುತ್ತದೆ ಎನ್ನುವುದು ಉಪಸಂಪಾದಕರ ಆತಂಕ. ಒಂದೊಮ್ಮೆ ಲೇಖನ ತರಿಸಿಕೊಂಡು ಪ್ರಕಟಮಾಡಿ ಲೇಖಕನಿಗೆ ಸಂಭಾವನೆ ಚೆಕ್‌ ರವಾನೆ ಆಗದಿದ್ದರೆ ಪ್ರಕಟಿಸುವ ನಿರ್ಧಾರ ಕೈಗೊಂಡ ಪತ್ರಕರ್ತ ತಲೆಮರೆಸಿಕೊಂಡು ಓಡಾಡಬೇಕಾಗುತ್ತದೆ.

ಇವೆಲ್ಲ ಯಾಕೆ ಹೇಳುತ್ತಿದ್ದೇನೆ ಎಂದರೆ ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಇಂತಹ ಗೋಜಲುಗಳನ್ನು ನಿವಾರಿಸಿಕೊಳ್ಳುವುದಕ್ಕೆ ಅಗತ್ಯವಾದ ಸಲಕರಣೆಗಳಿವೆ. ‘ಆದರೆ ಆಗುತ್ತದೆ, ಇಲ್ಲದಿದ್ದರೆ ಇಲ್ಲ ’ ಎಂದು ಖುಲ್ಲಂಖುಲ್ಲ , ತಡಮಾಡದೆ ಹೇಳಿಬಿಡುವ ವ್ಯವಸ್ಥೆ ಇದೆ, ಇರಬೇಕು. ಅಂಥ ವ್ಯವಸ್ಥೆಯ ಪ್ರಯೋಜನವನ್ನು ದಟ್ಸ್‌ಕನ್ನಡ ಮೂಲಕ ಪಡೆದುಕೊಂಡ ಕನ್ನಡಿಗರು ಭೂಮಂಡಲದ ಈ ತುದಿಯಿಂದ ಆ ತುದಿಯವರೆವಿಗೂ ಇದ್ದಾರೆ. ಅದಕ್ಕೆ ನಾನೇ ಸಾಕ್ಷಿ.

*

Suresh Ramachandraಮೊನ್ನೆ ಮಂಗಳವಾರ ಕಾವೇರಿ ಸದಸ್ಯ ಸುರೇಶ್‌ ರಾಮಚಂದ್ರ ನಮ್ಮ ಕಚೇರಿಗೆ ಬಂದಿದ್ದರು. ವಾಷಿಂಗ್‌ಟನ್‌ನಿಂದ ಬೆಂಗಳೂರಿಗೆ ಹೊರಡುವ ಮುನ್ನ ನನ್ನ ಸೆಲ್‌ ನಂಬರ್‌ ಕೇಳಿ ಪಡೆದಿದ್ದರು. ದುರದೃಷ್ಟವಶಾತ್‌ ಜೆಎಫ್‌ಕೆ ವಿಮಾನ ನಿಲ್ದಾಣದಲ್ಲಿ ಅವರ ಸೂಟ್‌ಕೇಸ್‌ ಕಳುವಾಗಿ ಡೈರಿ, ಕಾಗದ ಪತ್ರಗಳೆಲ್ಲ ಕಳೆದುಕೊಂಡಿದ್ದಾರೆ. ಸುರೇಶ್‌ ಅವರು ಬೆಂಗಳೂರಿಗೆ ಬಂದಮೇಲೆ ದಟ್ಸ್‌ಕನ್ನಡ ಪುಟಗಳನ್ನು ತೆರೆದು ಕಚೇರಿ ದೂರವಾಣಿಗೆ ಫೋನು ಮಾಡಿ ನನ್ನ ಸೆಲ್‌ ನಂಬರ್‌ ಪಡೆದು ಫೋನಾಯಿಸಿದರು. ನಾನು ಆವತ್ತು ಬೆಳಗ್ಗೆ ತಾನೆ ಧಾರವಾಡದಿಂದ ಬಂದಿದ್ದೆ. ಇವತ್ತೇ ಆಗಿಬಿಡಲಿ ಎಂದುಕೊಂಡು ಮಂಗಳವಾರವೇ (ನ. 11) ಅವರ ದಟ್ಸ್‌ಕನ್ನಡ ಕಚೇರಿ ಭೇಟಿಯನ್ನು ಗೊತ್ತುಮಾಡಿದೆ.

ನಮ್ಮ ಸಂಪಾದಕೀಯ ಮಂಡಳಿ ಹಾಗೂ ಸಿಇಓ ಬಿ.ಜಿ.ಮಹೇಶ್‌ ಜತೆಗೆ ಸುರೇಶ್‌ ಸುಮಾರು ಒಂದು ಗಂಟೆ ಕಾಲ ಅನೌಪಚಾರಿಕ ಮಾತುಕತೆಯಲ್ಲಿ ಪಾಲ್ಗೊಂಡರು. ಕಾವೇರಿ ಕನ್ನಡ ಸಂಘದಲ್ಲಿ ನಿರಂತರವಾಗಿ ನಡೆಯುವ ಕನ್ನಡಪರ ಚಟುವಟಿಕೆಗಳ ಬಗ್ಗೆ ಅವರು ಹೆಮ್ಮೆ ಯಿಂದ ವಿವರಿಸಿದರು. ನಮ್ಮ ಮಾತುಕತೆಯಲ್ಲಿ ತೇಲಿಬಂದ ಮುಖ್ಯ ಸಂಗತಿಯೆಂದರೆ ಕಾವೇರಿ ಕುಟುಂಬಗಳಲ್ಲಿ ನೆಲೆಸಿರುವ ಅನ್ಯೋನ್ಯತೆ. ಅಲ್ಲಿ ಅಧಿಕಾರ ರಾಜಕೀಯ ಎಂಬುದಿಲ್ಲ. ಆಡಳಿತ ಮಂಡಳಿಯಲ್ಲಿ ಯಾರೇ ಇದ್ದರೂ ಸದಸ್ಯರೆಲ್ಲ ಒಮ್ಮತದಿಂದ ನಿರ್ಧಾರಗಳನ್ನು ಕೈಗೊಳ್ಳುವುದು ಹಾಗೂ ಕೈಗೆತ್ತಿಕೊಂಡ ಕಾರ್ಯಕ್ರಮಗಳನ್ನು ಸಾಂಗವಾಗಿ ನೆರವೇರಿಸುವುದು. 1971 ರಲ್ಲಿ ಜಸಿದ ಕಾವೇರಿ ಇದುವರೆವಿಗೆ 32 ಅಧ್ಯಕ್ಷರನ್ನು ಕಂಡಿದೆ. ಮಾಜಿ ಅಧ್ಯಕ್ಷರೆಲ್ಲ ಈಗ ಗ್ರೂಪ್‌ ಇಮೇಲಿನಲ್ಲಿ ಸೇರುತ್ತಾರೆ. ಕನ್ನಡ ಸಂಘದ ಹಿತಾಸಕ್ತಿಗಳ ಬಗ್ಗೆ ಮುಕ್ತ ಮನಸ್ಸಿನಿಂದ ಚರ್ಚಿಸುತ್ತಾರೆ.

ಅಂದಹಾಗೆ ಕಾವೇರಿಯಲ್ಲಿ ಸದ್ಯದಲ್ಲೇ ಚುನಾವಣೆಗಳು ನಡೆಯಲಿವೆ. ಸಂವಿಧಾನಕ್ಕೆ ತಿದ್ದುಪಡಿಗಳನ್ನು ತರಲಾಗಿದೆ. ಈ ಬಾರಿಯ ಚುನಾವಣೆಗೆ ನೇಮಕವಾಗಿರುವ ಮೂವರು ಚುನಾವಣಾ ಅಧಿಕಾರಿಗಳಲ್ಲಿ ಸುರೇಶ್‌ ರಾಮಚಂದ್ರನ್‌ ಒಬ್ಬರು.

ಹಾಲಿ ಅಧ್ಯಕ್ಷ ಸಂಜಯ್‌ರಾವ್‌ ಅವರ ಮುಖಂಡತ್ವದಲ್ಲಿ ಈ ಬಾರಿ ಅನೇಕಾರು ಅರ್ಥಪೂರ್ಣ ಕನ್ನಡ ಭಾಷೆ ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆದಿವೆ. ಬರಲಿರುವ ಕಾರ್ಯಕಾರಿ ಸಮಿತಿಯೂ ಸಹ ಅರ್ಥಪೂರ್ಣ ಕಾರ್ಯಕ್ರಮಗಳ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತದೆ ಎನ್ನುವ ಭರವಸೆಯನ್ನು ಸುರೇಶ್‌ ವ್ಯಕ್ತಪಡಿಸಿದರು.

ಅಣ್ಣನ ಮಗನ ಮದುವೆಗೋಸ್ಕರ ಒಂದು ವಾರದ ಅವಧಿಗೆ ಭಾರತ ಪ್ರವಾಸ ಕೈಗೊಂಡಿರುವ ಸುರೇಶ್‌ ದಟ್ಸ್‌ಕನ್ನಡ ಕವಿ ಪಂಕ್ತಿಯಲ್ಲಿ ಸ್ಥಾನ ಪಡೆದುಕೊಂಡವರು. ನಾಸಾ ಕನ್ಸಲ್‌ಟೆಂಟ್‌ ಆಗಿರುವ ಸುರೇಶ್‌ ಪದೇಪದೇ ವಿಶ್ವದ ನಾನಾ ದೇಶಗಳಿಗೆ ಸಂಚಾರ ಹೋಗುತ್ತಾರೆ. ಏರೋಪ್ಲೇನಿನಲ್ಲಿ ದಕ್ಕುವ ಶಾಂತ ಸಮಯದಲ್ಲಿ ಕನ್ನಡ ಓದುತ್ತಾರೆ. ಅಲ್ಲೇ ಕುಳಿತು ದಟ್ಸ್‌ಕನ್ನಡ ಡಾಟ್‌ಕಾಂಗೊಂದೆರಡು ಕವನ ಬರೆಯುತ್ತಾರೆ!

ಈ ಬರಹ ಅಂತರಿಕ್ಷದಲ್ಲಿ ತೇಲಿಹೋಗುವ ಮುನ್ನ ಬಂದ ಇಮೇಲ್‌. ಅದನ್ನು ಹಾಗೇ ಕೊಡುತ್ತಿದ್ದೇನೆ :

Original Message- - - -

From: sesha chala

To: Srivathsa Joshi

Sent: Thursday, November 13, 2003 10:55 PM

Subject: about thatskannada.com

srivathsajoshiyavre.

nimage ei dhina amdhare thursday website nalli " Thatskannada" bartha idhya? namage bartha illa. namagella thumba bejargogidhe, nanna hendthigamthu thale kettogidhe. 20 sarthi comtuter on madi nodtha idhale. adhakke DvD nodtha idhivi. nimage thilisabekenisithu adhakke kelidhe, aste nimage sariyagi bartha idhre thilisi Anytha bhavisabedi

iti

seshachala, Los Angeles

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more