ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಕೆ. ಶಾಮಸುಂದರ

By Super
|
Google Oneindia Kannada News

Kerala government and AKKA has moved away from promises
ಬೆಂಗಳೂರು : ಈಟಿವಿ ಚಾನಲ್‌ನಲ್ಲಿ ನಿನ್ನೆ ರಾತ್ರಿ ಬಿತ್ತರವಾಗುತ್ತಿದ್ದ ಒಂದು ಸುದ್ದಿ-ಚಿತ್ರ ಕಣ್ಣಿಗೆ ಬಿತ್ತು. ರಾಷ್ಟ್ರಕವಿ ಗೋವಿಂದಪೈಗಳ ಸ್ಮರಣೆಗಾಗಿ ಕಾಸರಗೋಡಿನಲ್ಲಿ ಸ್ಥಾಪನೆಯಾಗಿರುವ ಪೈಗಳ ಸ್ಮಾರಕದ ದುರವಸ್ಥೆಯ ಚಿತ್ರವನ್ನು ಆ ಸುದ್ದಿಚಿತ್ರ ಎತ್ತಿ ತೋರಿಸುತ್ತಿತ್ತು. ಪೈಗಳು ಬದುಕಿ ಬಾಳಿದ ಮನೆಯ ಕಾಂಪೌಂಡಿನಲ್ಲಿ ಇವತ್ತು ಮುಳ್ಳುಗಿಡಗಳು ಬೆಳೆದಿವೆ. ಮನೆಯ ಒಳಗೆ ಧೂಳು ಮತ್ತು ತರಗೆಲೆ ಹರಡಿದೆ. ಸುದ್ದಿಯ ನಿರೂಪಕ ಹೇಳುತ್ತಿದ್ದ :

'ಈ ಸ್ಮಾರಕವನ್ನು ಮುತುವರ್ಜಿಯಿಂದ ನೋಡಿಕೊಳ್ಳುವವರಿಲ್ಲ. ಕರ್ನಾಟಕ ಮತ್ತು ಕೇರಳ ಸರಕಾರಗಳು ವಾರ್ಷಿಕ 5 ಲಕ್ಷ ರೂಪಾಯಿ ಅನುದಾನ ಕೊಡುವುದೆಂಬ ಆಶ್ವಾಸನೆಯ ಮೇಲೆ ಸ್ಮಾರಕ ಅಸ್ತಿತ್ವಕ್ಕೆ ಬಂತು. ಆದರೆ, 1997 ರಿಂದ ಕೇರಳ ಅನುದಾನ ಕೊಡುವುದನ್ನು ನಿಲ್ಲಿಸಿದೆ. ಆ ಬಗ್ಗೆ ಯಾರೂ ಚಕಾರ ಎತ್ತಿಲ್ಲ. ಸ್ಥಳೀಯ ಕನ್ನಡಿಗರು ಸ್ಮಾರಕದ ದುರವಸ್ಥೆಯ ಬಗ್ಗೆ ತುಂಬಾ ಬೇಜಾರು ಮಾಡಿಕೊಂಡಿದ್ದಾರೆ. ಈ ಊರಿನಲ್ಲಿ ಕನ್ನಡದ ಬಗ್ಗೆ ಕಳಕಳಿ ಇರುವ ಕನ್ನಡ ನಾಯಕರು ಬೇಕಾದಷ್ಟಿದ್ದಾರೆ. ಆದರೆ, ಅವರ ಗಮನವೆಲ್ಲ ಅವರಿಗೆ ಪ್ರಿಯವಾದ ಪ್ರಚಾರದ ಕಡೆ ಇರುತ್ತದೆಯೇ ವಿನಾ ಕೆಲಸಕಾರ್ಯಗಳ ಕಡೆ ಕೇಂದ್ರೀಕೃತವಾಗಿರುವುದಿಲ್ಲ . ಕನ್ನಡದ ಹೆಸರು ಹೇಳಿಕೊಂಡು ಇಲ್ಲಿರುವವರೆಲ್ಲ ತಮ್ಮ ಬೇಳೆಕಾಳು ಬೇಯಿಸಿಕೊಳ್ಳುತ್ತಿದ್ದಾರೆ.'

ಸ್ಮಾರಕದ ಕಥೆ-ವ್ಯಥೆ ಮತ್ತು ಹೊಸ ಗಾಳಿ ಬೀಸುವ ಇನ್ನೊಂದು ಪ್ರಯತ್ನದ ದಟ್ಸ್‌ಕನ್ನಡ ವರದಿ ಓದಿ:

*ಇನ್ನೊಬ್ಬ ರಾಷ್ಟ್ರ ಕವಿ ಕುವೆಂಪು ಅವರ ಹುಟ್ಟಿದ ಊರು ಕುಪ್ಪಳ್ಳಿಯಲ್ಲಿ ನಿರ್ಮಿಸಲಾಗಿರುವ ಸ್ಮಾರಕವನ್ನು ನಾನು ನೋಡಿಲ್ಲ. ಅವರ ಮಗ ತೇಜಸ್ವಿಯವರ ಕೆಲವು ಮಿಜಿಮಿಜಿ ಎನಿಸುವ ಧೋರಣೆಗಳನ್ನು ಹೊರತುಪಡಿಸಿದರೆ ಸ್ಮಾರಕ ಚೆನ್ನಾಗಿದೆ ಎಂದು ಕೇಳಿಪಟ್ಟಿದ್ದೇನೆ. ಕುವೆಂಪು ಅವರ ಹೆಸರನ್ನಿಟ್ಟುಕೊಂಡು ಜನ್ಮತಾಳಿದ ಸಂಘ-ಸಂಸ್ಥೆಗಳಿಗೆ ಕರ್ನಾಟಕದಲ್ಲಿ ಬರಗಾಲವಿಲ್ಲ. ಕುವೆಂಪು ಅವರ ಹೆಸರನ್ನು ಮಲೆನಾಡಿನಲ್ಲಿ ತಲೆಯೆತ್ತಿದ ವಿಶ್ವವಿದ್ಯಾಲಯಕ್ಕೇ ಇಟ್ಟಿರುವುದರಿಂದ ಅವರ ಹೆಸರು ಅಜರಾಮರ.

ಹೆಸರಿನ ಬಲವಿದ್ದರೂ ಕಟ್ಟಡಗಳೇನೂ ಮಾತನಾಡುವುದಿಲ್ಲ. ಕವಿಯಾಬ್ಬ ಮಾತನಾಡುವುದು ಕೊನೆಗೂ ಅವನ ಕೃತಿಗಳ ಮೂಲಕವೇ. ಕವಿಯ ಅಭಿಮಾನಿಗಳಿಗೆ ಕವಿಯ ಹೆಸರೇ ಆಪ್ಯಾಯಮಾನವಾದರೆ ಓದುಗನಿಗೆ ಆ ಕವಿಯ ಕೃತಿಗಳು ಮುಖ್ಯವಾಗುತ್ತದೆ. ಹಾಗಾಗಿ ಕವಿಯ ಕೃತಿಗಳು ಸಮಗ್ರ ಸಂಪುಟದ ರೂಪದಲ್ಲಿ ಅಥವಾ ಹೇಗಾದರೂ ಓದುಗರ ಕೈಸೇರಬೇಕು. ಸಂಪುಟಗಳು ಪುನರ್‌ ಮುದ್ರಣ ಕಾಣುತ್ತಿರಬೇಕು.

ಅಂಥ ಒಬ್ಬ ಕವಿಯ ಒಂದು ಮಹೋನ್ನತ ಕೃತಿಯನ್ನು ಅಚ್ಚುಕಟ್ಟಾಗಿ ಹೊರತಂದಿರುವ ಹೆಮ್ಮೆ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲುತ್ತದೆ. ಕುವೆಂಪು ಅವರ ಸಮಗ್ರ ಕಾವ್ಯವನ್ನೊಳಗೊಂಡ ಎರಡು ಬೃಹತ್‌ ಸಂಪುಟಗಳನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿ ಅನೇಕರಿಗೆ ಸಂತೋಷ ತಂದುಕೊಟ್ಟಿದೆ. ಎರಡು ಸಂಪುಟಗಳ ಈ ಪುಸ್ತಕ ಬೆಳಕು ಕಂಡು ನಾಲಕ್ಕು ವರ್ಷ ಕಳೆಯುತ್ತಾ ಬಂದಿದೆ. ಆದರೆ, ಈ ಸಂಪುಟ ಪ್ರಕಾಶನಕ್ಕೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದ ಉತ್ತರ ಅಮೆರಿಕಾ ಕನ್ನಡ ಕೂಟಗಳ ಆಗರ ( ಅಕ್ಕ) ಇದುವರೆವಿಗೂ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ ಎನ್ನುತ್ತಾರೆ ವಿಶ್ವವಿದ್ಯಾಲಯದ ಕುಲಸಚಿವ ಡಾ. ಕೆ.ವಿ. ನಾರಾಯಣ.

ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಅವರು ಕರ್ನಾಟಕ ಸರಕಾರದ ಆಶ್ರಯದಲ್ಲಿ ಅಕ್ಟೋಬರ್‌ ಎರಡನೇ ವಾರ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದ ನಿಮಿತ್ತ ಪತ್ರಕರ್ತರ ದಂಡು ಹೊಸಪೇಟೆಗೆ ಹೋಗಿತ್ತು. ಜನಸ್ಪಂದನ ಕಾರ್ಯಕ್ರಮಕ್ಕೆ 10ನೇ ತಾರೀಕು ಬಿಡುವು. ಅನಿರೀಕ್ಷಿತ ವಿರಾಮ ಸಮಯದ ಸದುಪಯೋಗಕ್ಕಾಗಿ ಪತ್ರಕರ್ತರ ತಂಡ ಹಂಪಿ ದರ್ಶನಕ್ಕೆ ಹೊರಟಿತು. ವಿರೂಪಾಕ್ಷನ ದರ್ಶನವಾದ ನಂತರ ಕನ್ನಡ ವಿಶ್ವವಿದ್ಯಾಲಯ ಭೇಟಿಯೂ ಸಾಧ್ಯವಾಯಿತು. ಕುಲಪತಿ ಪ್ರೊ. ಲಕ್ಕಪ್ಪ ಗೌಡರು ಇದೇ ಸಂದರ್ಭದ ಪೂರ್ಣ ಪ್ರಯೋಜನ ಪಡೆದರು. ಬೆಂಗಳೂರಿನಿಂದ ಆಗಮಿಸಿದ್ದ ಪತ್ರಕರ್ತರ ತಂಡಕ್ಕೆ ವಿಶ್ವವಿದ್ಯಾಲಯ ಅನುಭವಿಸುತ್ತಿರುವ ಸಂಕಟಗಳ ಕುರಿತು ಪಾಠ ಮಾಡಿದರು. ಮುಖ್ಯವಾಗಿ ಯೂನಿವರ್ಸಿಟಿ ಹಣಕಾಸು ಮುಗ್ಗಟ್ಟು ಎದುರಿಸುತ್ತಿದೆ. ಸರಕಾರ ಕೊಡುವ 4 ಕೋಟಿ ರೂ ಅನುದಾನದಲ್ಲಿ ಶೇಕಡ 85 ಭಾಗ ಸಂಬಳ ಸಾರಿಗೆಗೆ ಖರ್ಚಾಗುತ್ತದೆ. ಉಳಿಯುವ 60 ಲಕ್ಷ ರೂಪಾಯಿಯಲ್ಲಿ ಕನ್ನಡದ ಕೆಲಸಗಳು ನಡೆಯಬೇಕಾಗಿದೆ. ಸೀಮಿತ ಸಂಪನ್ಮೂಲ ಇಟ್ಟುಕೊಂಡು ಗಮನಾರ್ಹ ಕೆಲಸ ಮಾಡುವುದು ಹೇಗೆ ? ಇದು ಲಕ್ಕಪ್ಪಗೌಡರು ಹಾಕುವ ಮಿಲಿಯನ್‌ ಡಾಲರ್‌ ಪ್ರಶ್ನೆ.

ಆನಂತರ ನಮ್ಮ ಕನ್ನಡ ಪೋರ್ಟಲ್‌ಗಾಗಿ ವಿಶೇಷ ಸಂದರ್ಶನ ನೀಡಿದ ಕುಲ ಸಚಿವ ಕೆ.ವಿ.ನಾರಾಯಣ್‌, ಕುವೆಂಪು ಸಮಗ್ರ ಕಾವ್ಯ ಸಂಪುಟದ ಕಥೆಯನ್ನು ಸಮಗ್ರವಾಗಿ ವಿವರಿಸಿದರು. 'ಕುವೆಂಪು ಅವರ ಸಮಗ್ರ ಕಾವ್ಯಗಳನ್ನು ಕಲೆಹಾಕುವುದು, ಸಂಪಾದಿಸುವುದು ಮತ್ತು ಪ್ರಕಟಿಸುವುದು ನಮ್ಮ ವಿವಿಯ ಜವಾಬ್ದಾರಿ ಆಗಿತ್ತು. ಈ ಯೋಜನೆಗೆ ತಗಲುವ ವೆಚ್ಚದಲ್ಲಿ ಹತ್ತು ಲಕ್ಷ ರೂಪಾಯಿಗಳನ್ನು ತಾನು ಭರಿಸುವುದಾಗಿ ಅಕ್ಕ ವಾಗ್ದಾನ ಮಾಡಿತ್ತು. ಮೊದಲ ಸಂಪುಟ ಬೇಗ ತಯಾರಾಯಿತು. ಕೃತಿ ಹ್ಯೂಸ್ಟನ್‌ ಕನ್ನಡ ಸಮ್ಮೇಳನದಲ್ಲಿ ಬಿಡುಗಡೆಯ ಭಾಗ್ಯವನ್ನೂ ಕಂಡಿತು. ಅದಾದ ನಂತರದ ಕೆಲವೇ ಸಮಯದಲ್ಲಿ ಎರಡನೇ ಸಂಪುಟವೂ ಬಿಡುಗಡೆ ಆಯಿತು. ಆದರೆ, ಹತ್ತು ಲಕ್ಷ ರೂಪಾಯಿ ಬಾಬತ್ತಿನಲ್ಲಿ ಹತ್ತು ರೂಪಾಯಿಯನ್ನೂ ಅಕ್ಕ ಕೊಟ್ಟಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಕೊಟ್ಟ ಮಾತಿಗೆ ತಪ್ಪಿ ನಡೆಯದ ಅಕ್ಕ ಹೀಗೇಕೆ ಮಾಡಿತು ? ಎನ್ನುವ ಪ್ರಶ್ನೆಗೆ ನಾರಾಯಣ್‌ ಹೇಳುತ್ತಾರೆ : 'ಏನಾಯಿತೋ ನಮಗೆ ಗೊತ್ತಿಲ್ಲ. ವಿ. ಎಂ. ಕುಮಾರ ಸ್ವಾಮಿ ಎನ್ನುವ ವ್ಯಕ್ತಿಯಾಬ್ಬರು ಕುವೆಂಪು ಸಮಗ್ರ ಕಾವ್ಯ ಸಂಪುಟ ಯೋಜನೆಗೆ ಅಕ್ಕ ವತಿಯಿಂದ ಹಣ ಸಂಗ್ರಹ ಮಾಡುತ್ತಿದ್ದಾರೆ, ಒಂದಿಷ್ಟು ಹಣ ಸಂಗ್ರಹವಾಗಿದೆ. ಕ್ರಮೇಣ ಆ ಹಣ ವಿಶ್ವವಿದ್ಯಾಲಯಕ್ಕೆ ಸಂದಾಯವಾಗುತ್ತದೆ ಎನ್ನು ವ ವರ್ತಮಾನ ನಮ್ಮ ಗಮನಕ್ಕೆ ಬಂದು ವರುಷಗಳೇ ಸಂದುಹೋದವು. ಆನಂತರ ಯಾರಿಂದಲೂ ನಮಗೆ ಏನೊಂದೂ ಸುದ್ದಿಯೂ ಇಲ್ಲ , ಹಣವೂ ಇಲ್ಲ . ಅಕ್ಕ ವತಿಯಿಂದ ಹಣ ಬರುತ್ತದೆ ಎಂಬ ಆಶ್ವಾಸನೆಯಿಂದ ಸಾವಿರ ರೂಪಾಯಿಗೆ ಎರಡು ಸಂಪುಟ ಮಾರುವ ಕಡೆ ನಾವು 500 ರೂಪಾಯಿಗೆ ಎರಡು ಸಂಪುಟದಂತೆ ಮಾರಾಟ ಮಾಡಿದೆವು. '

ಮೊದಲೇ ಆರ್ಥಿಕವಾಗಿ ಬಲಹೀನವಾಗಿರುವ ವಿಶ್ವವಿದ್ಯಾಲಯ ಕಾರ್ಯಗತವಾಗದ ಆಶ್ವಾಸನೆಗಳ ಭಾರದಲ್ಲಿ ತತ್ತರಿಸಿ ಹೋಗಿದೆ. ಆದರೂ ಕವಿ ಕುವೆಂಪು ಅವರಲ್ಲಿ ಗೌರವ ಮಡಗಿಕೊಂಡಿರುವ ವಿಶ್ವವಿದ್ಯಾಲಯ ಕುವೆಂಪು ಅವರ ಸಮಗ್ರ ಗದ್ಯ ಸಂಪುಟ ( ಕಾದಂಬರಿ ಹೊರತುಪಡಿಸಿ) ಪ್ರಕಟಿಸುವ ಯೋಜನೆ ಹಾಕಿಕೊಂಡಿದೆ. ಮೊದಲ ಸಂಪುಟದ ಡಿಟಿಪಿ ಕೆಲಸ ಈಗ ನಡೆಯುತ್ತಿದೆ ಎಂದು ನಾರಾಯಣ್‌ ಹೇಳಿದರು.

ಕನ್ನಡಕ್ಕಾಗಿ ಅಹರ್ನಿಶಿ ದುಡಿದ ಪ್ರಾತಃಸ್ಮರಣೀಯರ ಮನೆ-ಚಿಂತನೆ-ಕೃತಿಗಳನ್ನು ಜತನವಾಗಿಟ್ಟುಕೊಳ್ಳಬೇಕೆಂಬ ಮಾತುಗಳು ಆಗಾಗ ನಮ್ಮ ಕಿವಿಗೆ ಬೀಳುತ್ತವೆ. ಹಾಗೆ ಮಾಡುವುದು ನಾವು ನಮ್ಮ ಗುರು-ಹಿರಿಯರಿಗೆ ನೀಡುವ ಗೌರವದ ದ್ಯೋತಕ. ಕನ್ನಡಕ್ಕಾಗಿಯೇ ಬಾಳು ಸವೆಸಿದ ಅನೇಕ ಮಹನೀಯರನ್ನು ನಾವು ಮರೆತು ಎಷ್ಟೋ ಕಾಲವಾಯಿತು. ಇನ್ನು ಕೆಲವು ಮಹನೀಯರಿಗಾಗಿ ನಿರ್ಮಿಸಿದ ಸ್ಮಾರಕಗಳು ಅಲ್ಲಲ್ಲಿ ಇವೆ. ಅವುಗಳಲ್ಲಿ ಕೆಲವು ' ಎಲ್ಲರಿಗೂ ಬೇಕು ಆದರೆ ಯಾರಿಗೂ ಬೇಡ ' ಎಂಬಂತಾಗಿದೆ.

*

ರಾಜ್ಯದಲ್ಲಿ ಈ ಹೊತ್ತು ವಿಶ್ವವಿದ್ಯಾಲಯಗಳು ಸುದ್ದಿ ಮಾಡುತ್ತಿವೆ. ಆಡಳಿತ ಕೆಟ್ಟು, ಲಂಚ ರುಷುವತ್ತು ಹೆಚ್ಚಾಗಿದೆ ಎನ್ನುವುದು ಮೈಸೂರು ವಿವಿ ಎದುರಿಸುತ್ತಿರುವ ಆರೋಪ. ಬೀದರ್‌ನಲ್ಲಿ ಪಶುಸಂಗೋಪನೆ ವಿವಿ ಸ್ಥಾಪನೆ ಮಾಡುವುದಾಗಿ ಕರ್ನಾಟಕ ಸರಕಾರ ಪ್ರಕಟಿಸಿದೆ. ಬಿಜಾಪುರದಲ್ಲಿ ನೆಲೆವೀಡಾಗಿರುವ ಮಹಿಳಾ ವಿಶ್ವವಿದ್ಯಾಲಯಕ್ಕೆ ಕುಲಪತಿಯ ನೇಮಕ ಕುರಿತ ಪ್ರಕಟಣೆ ಯಾವ ಕ್ಷಣದಲ್ಲಾದರೂ ಹೊರಬೀಳಲಿದೆ. ಕುವೆಂಪು ವಿಶ್ವವಿದ್ಯಾಲಯ ಇನ್ನಷ್ಟು ಸಧೃಡವಾಗಲು ತವಕಿಸುತ್ತಿದೆ. ಕುವೆಂಪು ಶತಮಾನೋತ್ಸವ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಲು ಸಜ್ಜಾಗಿರುವ ಕುಲಪತಿ ಡಾ. ಚಿದಾನಂದ ಗೌಡರು ಭಗೀರಥ ಪ್ರಯತ್ನ ಮಾಡುತ್ತಿದ್ದಾರೆ. ತುಮಕೂರಿನಲ್ಲಿ ಹೊಸ ವಿವಿ ಸ್ಥಾಪನೆಗೆ ಮುಖ್ಯಮಂತ್ರಿ ಕೃಷ್ಣ ಒಪ್ಪಿದ್ದಾರೆ. ಈ ಕ್ರಮದಿಂದ 450 ಕಾಲೇಜುಗಳ ಭಾರದಿಂದ ಬಸವಳಿದಿರುವ ಬೆಂಗಳೂರು ವಿಶ್ವವಿದ್ಯಾಲಯದ ಜವಾಬ್ದಾರಿ ಇನಿತು ಕಡಿಮೆ ಆಗುತ್ತದೆ.

ಕೊನೆಗೆ: ಮಾಡುವುದಕ್ಕೆ ಕೆಲಸವಿಲ್ಲದ ಕಾಲೇಜು ಶಿಕ್ಷಣ ಮಂಡಳಿಯನ್ನು (collegiate education board) ರದ್ದು ಮಾಡುವುದಾಗಿ ಶಿಕ್ಷಣ ಸಚಿವ ಡಾ. ಜಿ. ಪರಮೇಶ್ವರ್‌ ಸೋಮವಾರ ಪ್ರಕಟಿಸಿದ್ದಾರೆ. ಸ್ವಾಗತ.

English summary
Kerala government and AKKA has moved away from promises
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X