• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಖಪುಟ

By Staff
|

Jogiಪ್ರಿಯ ಶಾಮ್‌,

ಒಂದು ನೆಲೆಯಲ್ಲಿ ಕಂಬಾರರ ಕುರಿತ ಟಿಪ್ಪಣಿಯಂತಿರುವ, ಇನ್ನೊಂದು ವಿಸ್ತಾರವಾದ ನೆಲೆಯಲ್ಲಿ ಇವತ್ತಿನ ಕನ್ನಡ ಸಂದರ್ಭದ ಕುರಿತ ಒಳನೋಟಗಳುಳ್ಳ ಟೀಕೆಯಂತಿರುವ ನಿಮ್ಮ ಬರಹ ಓದಿದೆ. ಕನ್ನಡ ಸಾಹಿತಿಗಳ ಕುರಿತು ನೀವು ಅತ್ಯಂತ ಸಂಕೋಚದಿಂದ ಆಡಿರುವ ಮಾತುಗಳು, ಅದರ ಅತ್ಯಂತ ಪರಾಕಾಷ್ಠ ನೆಲೆಯಲ್ಲೂ ನಿಜ. ನಮ್ಮ ಲೇಖಕರಲ್ಲಿ ಬಹುತೇಕ ಮಂದಿ ಕಂಪ್ಯೂಟರ್‌ ನೋಡುವುದಿಲ್ಲ. ಈ-ಮೇಲ್‌ ತೆರೆಯುವುದಿಲ್ಲ. ಕಳೆದ ನಾಲ್ಕೈದು ವರುಷಗಳಿಂದ ಕಂಪ್ಯೂಟರ್‌ನಲ್ಲೊಂದು ಕನ್ನಡ ಪತ್ರಿಕೆ ಬರುತ್ತದೆ ಎಂದರೆ ಅದನ್ನು ತೆರೆದು ಓದುವ ವ್ಯವಧಾನ ಅವರಿಗಿಲ್ಲ. ಕಂಬಾರರೂ ಇದಕ್ಕೆ ಹೊರತೇನಲ್ಲ. ಅವರು ತಮ್ಮ ಹೊರತು ಬೇರೆಯವರ ಬಗ್ಗೆ ಬಂದ ಲೇಖನಗಳನ್ನೋ ಬೇರೆಯವರ ಕತೆಗಳನ್ನೋ ಪತ್ರಿಕೆಗಳಲ್ಲಾದರೂ ಓದುತ್ತಾರೆ ಎಂಬ ಬಗ್ಗೆ ನನಗೆ ಅನುಮಾನಗಳಿವೆ, ಅದು ಬೇರೆ ವಿಷಯ.

ಇವರನ್ನೆಲ್ಲ ನೋಡುವಾಗ ಗಾಬರಿಯಾಗುತ್ತದೆ. ನಮ್ಮ ಸಾಹಿತಿಗಳು ಹೇಗೆ ಕಂಪ್ಯೂಟರ್‌ ಕಂದಾಚಾರಿಗಳಾಗಿದ್ದಾರೆ ಎನ್ನುವುದನ್ನು ನಾನೇ ಕಣ್ಣಾರೆ ಕಂಡಿದ್ದೇನೆ. ನಮ್ಮೆಲ್ಲರಿಗಿಂತಲೂ ಕಂಪ್ಯೂಟರ್‌ ಕಂಡವರು ಪೂರ್ಣಚಂದ್ರ ತೇಜಸ್ವಿ. ಇಂಟರ್‌ನೆಟ್‌ನ ಜಗತ್ತೇ ಬೇರೆ ಅಂತ ಅವರು ಎಂಟು ವರುಷಗಳ ಹಿಂದೆ ಹೇಳಿದಾಗ ನಾನು ನಂಬಿರಲಿಲ್ಲ. ಇವತ್ತು ಅದೇ ನಿಜವಾಗಿದೆ. ಅವರನ್ನು ಬಿಟ್ಟರೆ ನಾಲ್ಕೈದು ಮಂದಿ ತರುಣ ಬರಹಗಾರರಿಗೆ ಇಂಟರ್‌ನೆಟ್‌ ಗೊತ್ತು. ಉಜಿರೆಯಲ್ಲಿ ಕುಳಿತ ಕೆಟಿ ಗಟ್ಟಿ ನಿಮ್ಮ ಸೈಟು ನೋಡುತ್ತಾರೆ. ಅನಂತಮೂರ್ತಿ ಈ- ಮೇಲ್‌ನಲ್ಲೇ ವ್ಯವಹರಿಸೋದಕ್ಕೆ ಶುರುಮಾಡಿದ್ದಾರೆ.

ಆದರೆ, ಇವರ್ಯಾರಿಗೂ ನಿಮ್ಮ ಪತ್ರಿಕೆಗೊಂದು ಲೇಖನ ಕಳುಹಿಸಬೇಕು ಅಥವಾ ಒಂದು ಪ್ರತಿಕ್ರಿಯೆ ಕಳುಹಿಸಬೇಕು ಅಂತ ಅನ್ನಿಸಿಲ್ಲ ನೋಡಿ, ಅದನ್ನು ಏನಂತ ಕರೀತೀರಿ? ಇವತ್ತು ಮತ್ತೊಂದು ಪತ್ರಿಕೆ ಶುರುವಾದರೆ, ಅದರ ಒಂದು ಪ್ರತಿಯನ್ನು ಉಚಿತವಾಗಿ ಸಾಹಿತಿಗಳಿಗೆ ಕಳುಹಿಸಿಕೊಟ್ಟು ನಿಮ್ಮ ಪ್ರತಿಕ್ರಿಯೆ ತಿಳಿಸಿ ಎಂದರೆ ಎಲ್ಲರೂ ನಾಲ್ಕು ಸಾಲು ಬರೆಯುತ್ತಾರೆ. ಆದರೆ, ತಾವೇ ತಾವಾಗಿ ಒಂದಕ್ಷರವನ್ನೂ ಗೀಚುವುದಿಲ್ಲ. ಒಂದು ಒಳ್ಳೆಯ ಕೆಲಸವನ್ನು ಒಳ್ಳೆಯ ಕೆಲಸ ಅಂತ ಹೇಳುವುದಕ್ಕೂ ಇವರಿಗೆ ಬಾಹ್ಯಪ್ರೇರಣೆ ಬೇಕು. ಯಾರಾದರೂ ಒತ್ತಾಯಿಸಬೇಕು. ಇವರಿಗಿಂತ ನಿಮ್ಮ ಅಮೆರಿಕನ್ನಡಿಗ ಲೇಖಕರೇ ಮೇಲು.

ಕಂಬಾರರು ಅಮೆರಿಕಕ್ಕೆ ಹೋಗಿದ್ದರಿಂದ, ಅಲ್ಲಿ ನಿಮ್ಮ ಪೋರ್ಟಲ್‌ನ ಜನಪ್ರಿಯತೆ ಗೊತ್ತಾಗಿದ್ದರಿಂದ ನಿಮಗೆ ಫೋನಿಸಿದರು. ಆದರೆ ಇಂಥದ್ದೊಂದು ಉಜ್ವಲವಾದ ವೆಬ್‌ಪತ್ರಿಕೆಯ ಕುರಿತು ತಿಳಿಯುವುದಕ್ಕೆ ಅವರು ಅಮೆರಿಕಾಕ್ಕೆ ಯಾಕೆ ಹೋಗಬೇಕಾಗಿತ್ತು? ಇಚ್ಛೆಯಿದ್ದರೆ ಇಲ್ಲೇ ತಿಳಿಯಬಹುದಿತ್ತಲ್ಲ ? ನಿಮ್ಮ ಜೊತೆ ಮಾತಾಡಿ, ಅಮೆರಿಕಾದ ಕನ್ನಡಿಗರು ಒಗ್ಗಟ್ಟಾಗಿರಬೇಕು ಎಂದು ಭಾಷಣ ಬಿಗಿಯುವ ಬದಲು ಒಂದು ಚೊಕ್ಕ ಲೇಖನ ಬರೆದು ಕೊಡಬಹುದಿತ್ತಲ್ಲ?

ಆಕ್ಪೇಪಣೆಗಳು ಅನೇಕವಿವೆ, ಸದ್ಯಕ್ಕೆ ಇಷ್ಟು ಸಾಕು.

ಒಂದು ಹೊಸ ಮಾಧ್ಯಮವನ್ನು ಕಟ್ಟುವುದರ ಹಿಂದಿರುವ ಶ್ರಮ, ತತ್ಪರತೆ, ಪ್ರೀತಿ ಮತ್ತು ತ್ಯಾಗವನ್ನು ನೀವು ಮತ್ತು ನಿಮ್ಮ ತಂಡದಲ್ಲಿ ನಾವು, ನಾಲ್ಕೈದು ಗೆಳೆಯರು ಮತ್ತು ನಿಮ್ಮ ನಿತ್ಯ ಓದುಗರು, ಕಂಡಿದ್ದೇವೆ. ಅದನ್ನು ಈ ಸೋಮಾರಿ ಮತ್ತು ಕಂಪ್ಯೂಟರ್‌ ಕಂದಾಚಾರಿಗಳು ಕಂಡುಕೊಂಡರೋ ಇಲ್ಲವೋ ನಮಗೆ ಮುಖ್ಯವಲ್ಲ.

ಇದನ್ನೆಲ್ಲ ಯಾವತ್ತೋ ಬರೆಯಬೇಕಿತ್ತು. ಇವತ್ತು ನಿಮ್ಮ ‘ಕೆಂಡಸಂಪಿಗೆ’ ಬರೆಸಿತು. ಕಟುವಾಗಿದ್ದರೆ, ಅದು ಸಕಾರಣ.

ನಿಮ್ಮ,

ಜೋಗಿ

ಬೆಂಗಳೂರು

ಮಂಗಳವಾರ, ನವೆಂಬರ್‌ ನಾಲ್ಕು.

ಮರೆತದ್ದು : ಅಗೋಳಿ ಮಂಜಣ್ಣನ ಪ್ರಸಂಗವನ್ನು ನೆನಪಿಸಿದ್ದಕ್ಕೆ ಜೋಶಿಯವರಿಗೆ ಥ್ಯಾಂಕ್ಸ್‌. ನಮ್ಮೂರಿನಿಂದ ಮೂರು ಕಿಲೋಮೀಟರ್‌ ದೂರದ ಬೆಳ್ತಂಗಡಿಯಲ್ಲಿ ಗಡಾಯಿಕಲ್ಲು ಎಂಬೊಂದು ದುರ್ಗವಿದೆ. ಅಷ್ಟು ಗಾತ್ರದ ಇಡ್ಲಿಯನ್ನು ಅಗೋಳಿ ಮಂಜಣ್ಣ ತಿನ್ನುತ್ತಿದ್ದ ಅಂತ ನಮ್ಮಮ್ಮ ಕತೆ ಹೇಳುತ್ತಿದ್ದರು. ಇಡ್ಲಿಯಾಕಾರದ ಗಡಾಯಿ ಕಲ್ಲು ನೋಡುವಾಗ ಈಗಲೂ ಅದು ನೆನಪಾಗುತ್ತದೆ.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more