• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿವಾಜಿನಗರ್ ಗದ್ದಲ ಅಮೆರಿಕನ್ನಡದ ಧ್ಯಾನ

By Staff
|

ಅರಸನಿಗೆ ಅರಸೊತ್ತಿಗೆ ಬಂದರೆ ನಾವು ಮೌಸು ಬೀಸುವುದು ತಪ್ಪುವುದಿಲ್ಲ . ಹಾಗಂತ ಕನ್ನಡಿಗರು ಸುಮ್ಮನಿರುವುದೂ ಇಲ್ಲ . ಧಾರವಾಡದಿಂದ ಕ್ಯಾಲಿಫೋರ್ನಿಯವರೆಗೆ ಕನ್ನಡದ ಕಂಪು ತುಣುಕುತ್ತಲೇ ಇರುತ್ತೆ . ಇದು ಕನ್ನಡದ ಕೊಡದಿಂದ ತುಳುಕಿದ ಹನಿಗಳ ಸುದ್ದಿ ಸಂಚಯ.

ಎಸ್ಕೆ. ಶಾಮಸುಂದರ

ಅವನ ಹೆಸರು ನನ್ನ ಕನ್ನಡ ನಾಲಿಗೆಯಲ್ಲಿ ಸ್ಪಷ್ಟವಾಗಿ ಹೊರಳುವುದೇ ಇಲ್ಲ. ನಂಗೊಬ್ಬನಿಗೇ ಅಲ್ಲ. ಅನೇಕ ಕನ್ನಡಿಗರ ನಾಲಿಗೆಯಲ್ಲಿ ಅವನ ಹೆಸರು ಚಿತ್ರ ವಿಚಿತ್ರವಾಗಿ ಉಲಿಸಿಕೊಳ್ಳುತ್ತದೆ. ಬೆಂಗಳೂರಿನಲ್ಲಿ ಕನ್ನಡದ ಹುಡುಗರು ಆತನನ್ನು ತಮಾಷೆಯಾಗಿ ಶಿವಾಜಿನಗರ್‌ ಶಿವಾಜಿನಗರ್‌ ಅಂತ ಕರೆಯುತ್ತಾರೆ.

ಯಾರು ಈ ಶಿವಾಜಿನಗರ್‌ ?

ಎಷ್ಟೋ ಮಂದಿಗೆ ಈತ NBC ರಿಪೋರ್ಟರ್‌ maria shirver ಗಂಡ ಎಂದು ಗೊತ್ತಿಲ್ಲದಿರಬಹುದು. 'ಕಾನನ್‌ ದಿ ಬಾರ್‌ಬೇರಿಯನ್‌", ' ಟೋಟಲ್‌ ರಿಕಾಲ್‌" ಹೆಸರು ನೆನಪಿಸಿದರೆ ಬೆಂಗಳೂರು ಹೈಕಳಿಗೆ ಚಕ್ಕಂತ ಗೊತ್ತಾಗದಿರಬಹುದು . ಆದರೆ, ಟರ್ಮಿನೇಟರ್‌ ಅನ್ನಿ. ಓ ! ಶಿವಾಜಿನಗರ್‌ ! ಅಂತ ಗುರುತಿಸುತ್ತಾ ತಮ್ಮ ಪಕ್ಕದ ಮನೆ ಹುಡುಗ ಅವನೆಂಬ ರೀತಿ ಪುಳಕಗೊಳ್ಳುತ್ತಾರೆ. ಜಿಮ್ಮಿಗೆ ಹೋಗುವ ಹುಡುಗರಿಗೆ, ಮೋಟರ್‌ ಬೈಕು ಓಡಿಸುವ ಹುಡುಗಿಯರಿಗೆ ಅವನು ಫ್ರೆಂಡು. ಶಾಲಾ ಮಕ್ಕಳ ಹೋಂ ವರ್ಕ್‌ ಪುಸ್ತಕದ ಮೇಲೆ ಅವನು ಸದಾ ಅಂಟಿಕೊಂಡೇ ಇರುತ್ತಾನೆ. ಅಷ್ಟೊಂದು ಹೆಸರುವಾಸಿ ನಮ್ಮ ಶಿವಾಜಿನಗರ್‌ !

Arnold Schwarzeneggerಕನ್ನಡದಲ್ಲಿ ಸ್ಪಷ್ಟವಾಗಿ ಆತನ ಹೆಸರು ಉಚ್ಚರಿಸಿದರೆ ಶ್ವಾಸನೇಗರ್‌ ಎಂದು ಕೇಳಿಸತ್ತೆ. ಟರ್ಮಿನೇಟರ್‌-1 ಟರ್ಮಿನೇಟರ್‌- 2 ಚಿತ್ರಗಳು ಬೆಂಗಳೂರಿನಲ್ಲಿ ತೆರೆಕಂಡಾಗ ಗಾಂಧೀಬಜಾರು ಮತ್ತು ಶಿವಾಜಿನಗರದ ಹುಡುಗ ಹುಡುಗಿಯರು ಚಿತ್ರವನ್ನು ಒಂದೇ ಉಸಿರಿನಲ್ಲಿ ನೋಡಿ ಆನಂದಿಸಿದ್ದಾರೆ. ಈಗ ಟರ್ಮಿನೇಟರ್‌-3 ಸದ್ದು ಮಾಡುತ್ತಿದೆ. ಹತ್ತು ಕನ್ನಡದ ಚಿತ್ರಗಳು ಸಂಪಾದಿಸುವುದನ್ನು ಅದೊಂದೇ ಸಂಪಾದಿಸಿಕೊಂಡು ಬೆವರ್‌ಲಿ ಹಿಲ್ಸ್‌ಗೆ ವಾಪಸ್ಸು ಹೋಗತ್ತೆ. ಖಂಡಿತ.

ಈ ಬಗೆಯ ಶ್ವಾಸನೇಗರ್‌ ಇವತ್ತು ಬೇರೊಂದು ಬಗೆಯ ಸುದ್ದಿಯಲ್ಲಿದ್ದಾನೆ. ಕ್ಯಾಲಿಫೋರ್ನಿಯದ ಗವರ್ನರ್‌ ಹುದ್ದೆಗೆ ಸ್ಪರ್ಧಿಸುವುದಾಗಿ NBC ಚಾನಲ್‌ನ the tonight show with jay leno ಕಾರ್ಯಕ್ರಮದಲ್ಲಿ ಬಹಿರಂಗಗೊಳಿಸಿದ್ದಾನೆ. ಅಷ್ಟೇ ಅಲ್ಲ. 'ಕ್ಯಾಲಿಫೋರ್ನಿಯ ಕೆಟ್ಟು ಕೇಸು ಹಿಡಿದಿದೆ. ಹೇಳುವವರಿಲ್ಲ, ಕೇಳುವವರಿಲ್ಲ. ಪ್ರಜೆಗಳಿಗೂ ರಾಜಕೀಯಕ್ಕೂ ಏನೇನೂ ಸಂಬಂಧವೇ ಇಲ್ಲವೇನೋ ಎನ್ನುವಂತಾಗಿದೆ, ಇಲ್ಲಿನ ರಾಜಕಾರಣಿಗಳು ಕೆಲಸವೊಂದನ್ನು ಬಿಟ್ಟು ಬೇರೆಲ್ಲ ಮಾಡುತ್ತಿದ್ದಾರೆ ಎಂದು ಗುಟುರು ಹಾಕುತ್ತಿರುವ ಶ್ವಾಸನೇಗರ್‌ ಕಣ್ಣು ಗ್ರೇ ಡೇವಿಸ್‌ ಮೇಲಿದೆ.

ಬರುವ ಅಕ್ಟೋಬರ್‌ನಲ್ಲಿ ಚುನಾವಣೆಗಳು ನಡೆಯುತ್ತವೆ. ಶ್ವಾಸನೇಗರ್‌ ಸಿಲಿಕಾನ್‌ ಕಣಿವೆಯ ಗವರ್ನರ್‌ ಪಟ್ಟಕ್ಕೆ ಏರುತ್ತಾನಾ ? ಭಾರತೀಯರು ಅವನಿಗೆ ಓಟು ಹಾಕುತ್ತಾರಾ ? ಹೇಗೂ ಆಗಲಿ. ಆತನ ರಾಜಕೀಯ ಪ್ರವೇಶ ಮಾತ್ರ ಜಗತ್ತಿನಾದ್ಯಂತ ಇವತ್ತು ಸುದ್ದಿಯಾಗಿದೆ.

ಕ್ಯಾಲಿಫೋರ್ನಿಯಾದಲ್ಲಿರುವ ನಮ್ಮ ಕನ್ನಡಿಗರು ಈ ಸುದ್ದಿಗಳನ್ನೆಲ್ಲ ಟಿವಿಯಲ್ಲಿ ನೋಡಿ ಸುಮ್ಮನಾಗುತ್ತಾರೆ. ಅರಸನಿಗೆ ಅರಸೊತ್ತಿಗೆ ಬಂದರೆ ನಾವು ಮೌಸು ಬೀಸುವುದು ತಪ್ಪುವುದಿಲ್ಲ ಎನ್ನುವುದು ಅವರ ತೀರ್ಮಾನ. ತಲೆತಗ್ಗಿಸಿ ಹಗಲೂ ಮೂರುಹೊತ್ತು ಕಂಪ್ಯೂಟರ್‌ ಮುಂದೆ ದುಡಿಯುವ ಸಿಲಿಕಾನ್‌ ಕಣಿವೆಯ ಕನ್ನಡಿಗರು ಆಗಾಗ ಕನ್ನಡ ಭಾಷೆ, ಸಂಸ್ಕೃತಿಗೆ ಸಂಬಂಧಿಸಿದ ಸುದ್ದಿಯನ್ನು ಮಾಡುತ್ತಿರುತ್ತಾರೆ. ಆ ಸುದ್ದಿಗಳೆಲ್ಲ losangeles times, SFO chronicle, San Jose Mercury News, SFO examiner, msn.com ಪತ್ರಿಕೆಗಳಲ್ಲಿ ಪ್ರಕಟವಾಗುವುದಿಲ್ಲ ವಾದ್ದರಿಂದ ನಾನು ವರದಿ ಮಾಡುತ್ತೇನೆ J

ಬೇ ಏರಿಯಾದಲ್ಲಿ 'ಅಪ್ಪಟ ಕನ್ನಡ ಸಾಹಿತ್ಯ"ಕ್ಕೆ ಮೀಸಲಾದ ಸಾಹಿತ್ಯಾಸಕ್ತರ ಗುಂಪು ಇದೆ. ಈ ಚಾವಡಿಯಲ್ಲಿ ನಡೆಯುವ ಸಾಹಿತ್ಯಿಕ ಚಟುವಟಿಕೆಗಳ ಬಗ್ಗೆ ನಮ್ಮ ಓದುಗರಿಗೆ ವಿಪುಲವಾದ ಮಾಹಿತಿಯನ್ನು ನಾವು ಆಗಾಗ ಕೊಡುತ್ತಿರುತ್ತೇವೆ. ಚಾವಡಿಯ ಹೆಸರು ಸಾಹಿತ್ಯಗೋಷ್ಠಿ. ಗೋಷ್ಠಿಯ ಸ್ಥಾಪಕರು ವಿಶ್ವನಾಥ್‌ ಹುಲಿಕಲ್‌. ಅವರು ಈಗ ಸುದ್ದಿಯಲ್ಲಿದ್ದಾರೆ. ಮಿನೆಸೋಟಾದ ಡಾ. ಗುರುಪ್ರಸಾದ್‌ ಕಾಗಿನೆಲೆ ಮತ್ತು ಬೇ ಏರಿಯಾದ ಕನ್ನಡತಿ ಸಂಧ್ಯಾ ರವೀಂದ್ರನಾಥ್‌ ಅವರ ಕಥಾಸಂಕಲನಗಳು ಕನ್ನಡದ ನೆಲದಲ್ಲಿ ಬಿಡುಗಡೆಗೊಂಡ ನೆನಪು ಇನ್ನೂ ಹಸಿರಾಗಿರುವಾಗಲೇ ವಿಶ್ವನಾಥ್‌ ಅವರ ಕಥಾಸಂಕಲನ 'ಹೃದಯ" ಗಂಡುಮೆಟ್ಟಿದ ನಾಡು ಧಾರವಾಡದಲ್ಲಿ ಬಿಡುಗಡೆಗೊಳ್ಳುವುದಕ್ಕೆ ಸಜ್ಜಾಗಿದೆ.

ಹುಲಿಕಲ್‌ ಅವರ ಕಥಾಸಂಕಲನ ಹೊರಬರುತ್ತಿರುವುದು ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಮನೋಹರ ಗ್ರಂಥಮಾಲೆಯ (ರಮಾಕಾಂತ ಜೋಶಿ, 08362441822) ಪುಸ್ತಕ ಕುಲುಮೆಯಿಂದ. ಆಗಸ್ಟ್‌ 15ರ ಶುಕ್ರವಾರ ಬೆಳಗ್ಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಕೃತಿ ಬಿಡುಗಡೆ ಆಗುತ್ತಿದೆ. ಮಾಜಿ ಮುಖ್ಯಮಂತ್ರಿ, ಸಾಹಿತಿ ವೀರಪ್ಪ ಮೊಯಿಲಿ ಅವರು ಕೃತಿ ಬಿಡುಗಡೆ ಮಾಡುತ್ತಾರೆ. ಸಮಾರಂಭದ ಅಧ್ಯಕ್ಷತೆ ವಹಿಸುವವರು ಖ್ಯಾತ ವಿಮರ್ಶಕ ಜಿ.ಎಸ್‌. ಆಮೂರ.

ವಿಶ್ವನಾಥ್‌ ಅವರ ಪುಸ್ತಕ ಬರೆದು ಪ್ರಕಟಿಸುತ್ತಿರುವುದು ಇದೇ ಮೊದಲಲ್ಲ. 'ಮಂಥನ " ಮತ್ತು ' ಸೌರಭ " ಎಂಬ ಎರಡು ಕೃತಿಗಳು ಈ ಮುಂಚೆ ಪ್ರಕಟವಾಗಿವೆ. ಆದರೆ ಆ ಪುಸ್ತಕಗಳು ಹೆಚ್ಚು ಸುದ್ದಿ ಮಾಡಿಲ್ಲ. ಅವರ ಹೊಸ ಪುಸ್ತಕ ' ಹೃದಯ" ಮಾರುಕಟ್ಟೆಯಲ್ಲಿ ಸದ್ದು ಮಾಡಲಿ, ಕನ್ನಡ ಓದುಗರ ಹೃದಯ ತಟ್ಟಲಿ.

*

ಇದು ಉತ್ತರ ಕ್ಯಾಲಿಫೋರ್ನಿಯ ಕನ್ನಡಿಗರ ಸಮಾಚಾರವಾದರೆ, ದಕ್ಷಿಣ ಕ್ಯಾಲಿಫೋರ್ನಿಯಾ ಕನ್ನಡಿಗರು ಕನ್ನಡಪರ ಚಟುವಟಿಕೆಯನ್ನು ಹಮ್ಮಿಕೊಳ್ಳುವುದರಲ್ಲಿ ಹಿಂದೆ ಬಿದ್ದಿಲ್ಲ. ಡೈಮಂಡ್‌ಬಾರ್‌ ಪ್ರದೇಶದಲ್ಲಿ ವೃಥಾ ರಾಜಕೀಯ ಮಾಡುವ ಒಬ್ಬಿಬ್ಬರು ಕನ್ನಡಿಗರನ್ನು ಹೊರತುಪಡಿಸಿದರೆ, ಉಳಿದಂತೆ ಕನ್ನಡ ಕುಟುಂಬಗಳ ಉತ್ಸಾಹ ಮೆಚ್ಚುವಂಥದ್ದು. ಮೊನ್ನೆ ತಾನೆ ವಾರ್ಷಿಕ ಪಿಕ್‌ನಿಕ್‌ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ ಕೆಸಿಎ ಕನ್ನಡಿಗರ ಒಗ್ಗಟ್ಟು ಶ್ಲಾಘನೀಯ.

ಲಾಸ್‌ಏಂಜಲಿಸ್‌ನಲ್ಲಿರುವ ಕನ್ನಡ ಸಾಹಿತ್ಯಕ್ಕೆ ಮೀಸಲಾದ ಸಂಸ್ಥೆ 'ಅಂಜಲಿ" ವತಿಯಿಂದ ಒಂದು ಕಾರ್ಯಕ್ರಮ ಏರ್ಪಾಟಾಗಿದೆ. ಆದರ ಬಗ್ಗೆ ಮಿತ್ರ ವಲ್ಲೀಶ ಶಾಸ್ತ್ರಿಗಳು ನನಗೆ ಕನ್ನಡದಲ್ಲಿ ಮಾಹಿತಿ ಕೊಟ್ಟಿದ್ದಾರೆ. ಅವರ ಮಾತುಗಳಲ್ಲೇ ಓದಿ:

ಮನೆಯಂಗಳದಲ್ಲಿ ಸಾಹಿತ್ಯಿಕ ಮಾತುಕತೆ

'ಅಂಜಲಿ" ಸಾಹಿತ್ಯಾಸಕ್ತ ಗೆಳೆಯರ ಗುಂಪು. ಬನ್ನಿ, ಸಾಹಿತ್ಯದ ಬಗ್ಗೆ ಹರಟೆ ಹೊಡೆಯುವ... ಇಲ್ಲಿ ಯಾವ ರಾಜಕೀಯವಿಲ್ಲ. ಅಪ್ಪಟ ಸಾಹಿತ್ಯ. ನಿಮ್ಮ ಕವನ ತನ್ನಿ ಓದೋಣ. ನಿಮ್ಮ ಕಥೆ, ನಾಟಕ ಕಳುಹಿಸಿ ಅದನ್ನು ಓದಿ ವಿಮರ್ಶಿಸೋಣ. ಹೊಸ ಕಥೆ, ಕವನ ಬಿಡುಗಡೆಯಾಗಿದ್ದರೆ ಹೇಳಿ ಅದನ್ನೂ ಓದೋಣ. ಇದೇ ಈ ಗುಂಪಿನ ಉದ್ದೇಶ.

ಈ ಉದ್ದೇಶಗಳನ್ನೊಳಗೊಂಡ ಈ ಗುಂಪು ಪ್ರತಿ ತಿಂಗಳೂ ಸೇರಬೇಕೆಂಬ ಇಚ್ಛೆ. ಆದ್ದರಿಂದ ಆಗಸ್ಟ್‌ ತಿಂಗಳ ಹರಟೆ ನಮ್ಮ ಮನೆಯಲ್ಲಿ ನಡೆಯುತ್ತದೆ. ಪ್ರತಿ ತಿಂಗಳೂ ಒಬ್ಬೊಬ್ಬರ ಮನೆಯಲ್ಲಿ ನಡೆಸುವ ಉದ್ದೇಶ. ಅದರ ವೇಳೆ ಮತ್ತು ದಿನಾಂಕ ಕೆಳಗೆ ಕಂಡಂತೆ ಇರುತ್ತದೆ. ಮನೆಗೆ ಬರುವುದಕ್ಕೆ ದಾರಿ, ಕನ್ನಡದಲ್ಲೇ ಬರೆಯೋಣವೆಂದಿದ್ದೆ, ಆದರೆ ಆ ದಾರಿಯಲ್ಲಿ ಹೋದರೆ ಎಲ್ಲಿ ಸ್ಯಾಂಡಿಯಾಗೋ ತಲಪಿಬಿಡುತ್ತೀರೋ ಎಂಬ ಭಯ. ಅದಕ್ಕೆ ಅದನ್ನು ಆಂಗ್ಲ ಭಾಷೆಯಲ್ಲಿ ಬರೆಯುತ್ತಿದ್ದೇನೆ.

ಹಾಗೆಯೇ, ಆತಿಥೇಯ ಅಷ್ಟಕ್ಕೇ ಬಿಡುತ್ತಾನೆಯೇ? ನಿಮ್ಮ ತಲೆ ತಿನ್ನಲಿಕ್ಕೆ ಅವನು ಬಿಡುವಿನ ವೇಳೆಯಲ್ಲಿ ಬರೆದ ಒಂದು ಕಥೆಯನ್ನು ಕಳುಹಿಸಿದ್ದಾನೆ. ಅದನ್ನು ಬರಹ 5.0 ದಲ್ಲಿ ಬರೆದಿದ್ದಾನೆ. ದಯವಿಟ್ಟು ಓದಿಕೊಂಡು ಬನ್ನಿ. ಅದರ ಬಗ್ಗೆ ಮಾತನಾಡೋಣ. ಚೆನ್ನಾಗಿದ್ದರೆ ಹೊಗಳಿ, ಇಲ್ಲವಾದರೆ ತೆಗಳಿ, ಎರಡೂ ಅಲ್ಲದಿದ್ದರೆ ತಿದ್ದಿ.

ಮುಂದೆ, ನೀವು ಯಾವುದಾದರೂ ಕವನ, ಚುಟುಕ, ಹರಟೆ ಬರೆದಿದ್ದರೆ ತನ್ನಿ. ಓದಿ. ಎಲ್ಲರೂ ಕೇಳಲಿ. ಅವರ ಅನಿಸಿಕೆಗಳನ್ನು ಹೇಳಲಿ. ಕಾರ್ಯಕ್ರಮ ದಿನಾಂಕ : 16 ಆಗಸ್ಟ್‌, 2003 ಶನಿವಾರ ಬೆಳಿಗ್ಗೆ 10.00 ರಿಂದ 12.00 ಗಂಟೆ ವರೆಗೆ. (ಕಾಫಿ, ಟೀ ಮತ್ತು ಉಪಹಾರದ ವ್ಯವಸ್ಥೆ ಇದೆ)

ಸ್ಥಳ : ವಲ್ಲೀಶ ಶಾಸ್ತ್ರಿಗಳ ಮನೆ. ನೀವೂ ಬನ್ನಿ, ನಿಮ್ಮ ಮನೆಯವರನ್ನೂ ಕರೆದುಕೊಂಡು ಬನ್ನಿ, ನಿಮ್ಮ ಕನ್ನಡ ಸ್ನೇಹಿತರನ್ನೂ ಕರೆದು ತನ್ನಿ.

ಇತಿ ನಿಮ್ಮವ

ವಲ್ಲೀಶ ಮತ್ತು ವಿದ್ಯಾ ಶಾಸ್ತ್ರಿ

'ಅಂಜಲಿ" ಪರವಾಗಿ

Address: 16352, Willowmist Ct, Chino Hills, CA 91709 (ph: 909 597 9394)

Directions: Traveling from Riverside (towards From 91W) or Cerritos (Towards 91E)

Take 71 N, exit Soquel PKWY

Take left at the ramp traffic light.

Pass 4 more traffic lights.

Take the left turn at Carrington Dr after the fourth light

At gate (Los Serranos Ranch) enter *2575

or search for Shastry in the directory & follow the instruction.

Pass the gate and end take left, next end take left

next take first left. 2nd house at the left.

Traveling from LA (Towards 60E)

Take 71 S and take Soquel PKWY exit

Take right & follow the above.

*

ಇತ್ತೀಚೆಗೆ ದಕ್ಷಿಣ ಕ್ಯಾಲಿಫೋರ್ನಿಯಾದ ಕನ್ನಡ ಚಿತ್ರ ಪ್ರೇಮಿಗಳು 'ಕನ್ನಡ ಪಿಕ್ಚರ್‌ ಕ್ಲಬ್‌" ಸ್ಥಾಪಿಸುವ ಇಂಗಿತ ವ್ಯಕ್ತಪಡಿಸಿದ್ದರು. ಅವರ ನಿರೀಕ್ಷೆ ಅತಿಬೇಗ ಕೈಗೂಡುತ್ತಿದೆ. ಶುಭಾಶಯಗಳು.

Kavitha Lankesh'ಪ್ರೀತಿ ಪ್ರೇಮ ಪ್ರಣಯ " ಚಿತ್ರದ ನಿರ್ದೇಶಕಿ ಕವಿತಾ ಲಂಕೇಶ್‌ ಇದೀಗ ಅಮೆರಿಕಾಗೆ ಹಾರಿದ್ದಾರೆ. ಇತ್ತ ಕಮರ್ಷಿಯಲ್ಲೂ ಅಲ್ಲದ ಅತ್ತ ಆರ್ಟೂ ಅಲ್ಲದ, ಇವೆರಡರ ನಡುವಿನ ಬ್ರಿಜ್‌ ಸಿನಿಮಾ ಎಂದು ಕೂಡ ಕರೆಯಿಸಿಕೊಳ್ಳದ ಪಿಪಿಪಿ, ಲಾಸ್‌ಏಂಜಲೀಸ್‌ನಲ್ಲಿ ತೆರೆ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಕವಿತಾ ಅವರು ಈ ಪ್ರದೇಶದ ' ಕನ್ನಡ ಪಿಕ್ಚರ್‌ ಕ್ಲಬ್‌" ಅನ್ನು ಉದ್ಘಾಟನೆ ಮಾಡುತ್ತಿದ್ದಾರೆ. ಕ್ಲಬ್‌ ಚೆನ್ನಾಗಿ ನಡೆಯಲಿ.

ಪಿಪಿಪಿ ತೆರೆ ಕಾಣುತ್ತಿರುವುದು ಆಗಸ್ಟ್‌ 23ರ ಶನಿವಾರ . ಸ್ಥಳ : ನಾಜ್‌ 8 ಸಿನೆಮಾ. 6440 ಇ. ಸೌತ್‌ ಸ್ಟ್ರೀಟ್‌, ಲೇಕ್‌ವುಡ್‌, ಸಿಎ 90713

ಅಂದಹಾಗೆ ಸಿನಿಮಾಗೆ ಪ್ರವೇಶ ಉಚಿತ. ಕೆಸಿಎ ಸದಸ್ಯರಲ್ಲದವರಿಗೆ 10 ಡಾಲರ್‌.

*

ಕನ್ನಡ ಚಲನ ಚಿತ್ರಗಳ ಡಿವಿಡಿ ದೊರೆಯುವುದಿಲ್ಲ ಎನ್ನುವುದು ಕನ್ನಡಿಗರ ಒಕ್ಕೊರಲ ಕೂಗು. ಆದರೆ, ನಂದಾವರ್‌ ಮೋಹನ್‌ ಅವರು ಮತದಾನ ಚಿತ್ರದ ಡಿವಿಡಿ, ಅಮೆರಿಕನ್ನಡಿಗರಿಗೆ ಲಭ್ಯವಾಗಿಸಿದ್ದಾರೆ. ಅಮೆರಿಕಾ ಮತ್ತು ಕೆನಡಾದ ಅಂಗಡಿಗಳಲ್ಲಿ ಸೀತಾರಾಂ ಅವರ 'ಮತದಾನ " ಚಿತ್ರದ ಡಿವಿಡಿ ಈಗ ಸಿಗುತ್ತಿವೆ. ಕೊಳ್ಳಿ.

ಭೇಟಿ ಕೊಡಿ :

www.kannadadvd.net

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more