ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾಯಣ ವೇದಿಕೆಯಲ್ಲಿ ಕೋಳಿಜಗಳ ಬೀಜ

By ಎಸ್ಕೆ. ಶಾಮಸುಂದರ
|
Google Oneindia Kannada News

ಈ ಗಲಾಟೆಯನ್ನು ಶುರು ಮಾಡಿದವರು ಯಾರು ? ಆ ಗಲಾಟೆ ಮುಂದುವರೆದದ್ದು ಹೇಗೆ ? ಅದು ಸಪ್ತ ಸಮುದ್ರಗಳನ್ನು ದಾಟಿ ಅನಿವಾಸಿ ಕನ್ನಡಿಗರನ್ನು ಈಟಿಯಂತೆ ಚುಚ್ಚಿದ್ದಾದರೂ ಏಕೆ ? ಅನಿವಾಸಿ ಕನ್ನಡಿಗರು ಗಾಯಗೊಂಡ ಹುಲಿಯಂತೆ ಕರ್ನಾಟಕ ಕನ್ನಡಿಗರ ವಿರುದ್ಧ ರೋಷಾವೇಶದಿಂದ ತಿರುಗಿ ಬಿದ್ದ ಪರಿ ಹೇಗೆ ? ಬಿಡಿಬಿಡಿಸಿ ಹೇಳುವುದಕ್ಕೆ ಮುಂಚೆ ಕೆಲವು ಮಾತುಗಳು :

ಉತ್ತರ ಅಮೆರಿಕಾದ ಅಲಬಾಮಾದಲ್ಲಿ ನೆಲೆಸಿರುವ ಒಬ್ಬ ಪ್ರತಿಭಾವಂತ ಲೇಖಕ ವೈ.ಆರ್‌.ಮೋಹನ್‌. ಅವರು 'ನೆನಪುಗಳು' ಮತ್ತು 'ಪಾರ್ಕಿನ್‌ಸನ್‌ ಕಾಯಿಲೆ' ಎಂಬ ಎರಡು ಪುಸ್ತಕ ಬರೆದಿದ್ದಾರೆ. ಸ್ವತಃ ಪಾರ್ಕಿನ್‌ಸನ್‌ ಕಾಯಿಲೆ ಪೀಡಿತರಾದ ನಂತರ ಅವರು, ಆ ಕಾಯಿಲೆಯ ಕುರಿತೇ ಪುಸ್ತಕ ಬರೆದರು ಎನ್ನುವುದನ್ನು ಗಮನಿಸಬೇಕು. ಆನಂತರ ಮೋಹನ್‌ ಅವರು ಬರೆದ ಇನ್ನೊಂದು ಪುಸ್ತಕದ ಹೆಸರು 'ಅಮೆರಿಕಾಯಣ'. ಈ ಪುಸ್ತಕ ಗಾತ್ರದಲ್ಲಿ ದೊಡ್ಡದು. ಬೆಲೆಯಲ್ಲೂ ಕೂಡ. ಈ ಪುಸ್ತಕವನ್ನು ನಾನು ಓದಿಲ್ಲವಾದ ಕಾರಣ ಅದರ ಬಗ್ಗೆ ಏನೂ ಹೇಳುವುದಿಲ್ಲ.

ಒಂದು ಕೃತಿಯ ಹೆಚ್ಚುಗಾರಿಕೆ ಆದನ್ನು ಬರೆದ ಲೇಖಕನ ಪ್ರತಿಭೆ, ಭಾಷಾ ಜ್ಞಾನ ಮತ್ತು ವಿಷಯ ಜ್ಞಾನವನ್ನು ಅವಲಂಬಿಸಿರುತ್ತದೆ. ಆ ದೃಷ್ಟಿಯಿಂದ ನೋಡಿದರೆ ಮೋಹನರ 'ನೆನಪುಗಳು ' ಮಹತ್ವದ ಕೃತಿ. ಸಮಾಜಶಾಸ್ತ್ರದಲ್ಲಿ ಪರಿಣತರಾದ ಅವರ 'ನೆನಪುಗಳು' ಪುಸ್ತಕವನ್ನು ನೀವು ಓದಬೇಕು. ಅಮೆರಿಕಾದಲ್ಲಿರುವ ಮೋಹನ್‌ ಅವರ ಅಭಿಮಾನಿಯಾದ ಕೃಷ್ಣ ಶಾಸ್ತ್ರಿ ಎನ್ನುವವರು ಈ ಕೃತಿಯನ್ನು ಅಮೆರಿಕಾದ ಕನ್ನಡ ಪುಸ್ತಕ ಪ್ರೇಮಿಗಳಿಗೆ ತಲುಪಿಸುವ ಕೆಲಸವನ್ನು ಈಗ ನಿಸ್ವಾರ್ಥವಾಗಿ ಮಾಡುತ್ತಿದ್ದಾರೆ. ನೀವೂ ಒಂದು ಪ್ರತಿ ತರಿಸಿಕೊಳ್ಳಿ.

The way we think and act

ಮೋಹನ್‌ ಅವರ 'ಅಮೆರಿಕಾಯಣ' ಪುಸ್ತಕವನ್ನು ಅಲಬಾಮಾದಲ್ಲಿ ಕುಳಿತು ಬರೆದರು. ಆದರೆ, ಆ ಪುಸ್ತಕ ಪ್ರಕಾಶವಾದದ್ದು ಮಾತ್ರ ಭಾರತದಲ್ಲಿ. ಪುಸ್ತಕವನ್ನು ಶ್ರದ್ಧೆಯಿಂದ ಪ್ರಕಟಿಸುವ ವ್ಯಕ್ತಿ ಸಂಸ್ಥೆಗಳಿಗೆ ಒಪ್ಪಿಸಬೇಕು. ಆ ಕೆಲಸವನ್ನು ಬೆಂಗಳೂರಿನಲ್ಲಿ ಯಾರು ಮಾಡುತ್ತಾರೆ? ಪ್ರಕಾಶನ ಸಂಸ್ಥೆಗೆ ಹಸ್ತಪ್ರತಿ ಒಪ್ಪಿಸಿದ ಮಾತ್ರಕ್ಕೆ ಕೆಲಸ ಆಯಿತೆನ್ನುವಂತಿಲ್ಲ. ಆಗಾಗ ಪ್ರೆಸ್ಸಿಗೆ ಹೋಗಬೇಕು. ಅಲ್ಲಿ ಕರೆಂಟು ಇಲ್ಲದಿದ್ದರೆ ಮತ್ತೆ ಹೋಗಬೇಕು. ಒಳ್ಳೆಯ ಕಾಗದದ ಆಯ್ಕೆಗೆ ಸಿಟಿ ಮಾರ್ಕೆಟ್ಟಿನ ಸಂದಿಗೊಂದಿಯಲ್ಲಿ ಅಲೆಯಬೇಕು. ಕರಡು ತಿದ್ದಬೇಕು. ಮುಖಪುಟಕ್ಕೆ ಒಳ್ಳೆಯ ಚಿತ್ರ-ವಿನ್ಯಾಸ ರೂಪಿಸುವ ಕಲಾವಿದನ್ನು ಹುಡುಕಬೇಕು. ಕಲಾವಿದ ಕೃತಿಯನ್ನು ಕೊಡುವತನಕ ಅವನ ಮನೆಗೆ ಅಲೆಯಬೇಕು. ಹೀಗೆ. ಒಂದು ಕೃತಿಯನ್ನು ಬೆಳಕು ಕಾಣಿಸುವುದು ಅದನ್ನು ಬರೆಯುವುದಕ್ಕಿಂತಲೂ ಕಷ್ಟದ ಕೆಲಸ.

ಸರಿ. ಯಾವುದಾದರೊಂದು ಪ್ರಕಾಶನ ಸಂಸ್ಥೆ ಹಸ್ತ ಪ್ರತಿಗೆ ಅಂತಿಮವಾಗಿ ಪುಸ್ತಕ ರೂಪ ಕೊಡುತ್ತದೆ ಎಂದಿಟ್ಟುಕೊಳ್ಳಿ. ಆದರೆ, ಬೆನ್ನು ಬಿದ್ದು ಪ್ರಕಾಶನದ ಕೆಲಸ ಮಾಡಿಸಿಕೊಳ್ಳುವುದಕ್ಕೆ ಪ್ರತಿಯಾಂದು ಪುಸ್ತಕಕ್ಕೂ ಒಬ್ಬ ದಾತ ಬೇಕಾಗುತ್ತಾನೆ. ಮೋಹನರ ಅಮೆರಿಕಾಯಣ ಪುಸ್ತಕ ಹೆರಿಗೆಗೆ ದಾತನ, ಅಂದರೆ ಸೂಲಗಿತ್ತಿಯ ಕೆಲಸವನ್ನು ಮಾಡಿದವರು ಇನ್ನೊಬ್ಬ ಅಮೆರಿಕನ್ನಡಿಗ ನಾಗ ಐತಾಳ. ನಾಗ ಐತಾಳರು ಅಮೆರಿಕಾದ ಒಂದು ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ ಕೆಲಸಮಾಡಿ ನಿವೃತ್ತರಾದವರು. ಅವರಿಗೆ ಕಣ್ಣು ಬೇನೆ ಇದೆ. ಸಾಹಿತ್ಯದಲ್ಲಿ ಆಸಕ್ತಿ ಇದೆ. ಸ್ವತಃ ಲೇಖಕರೂ ಕೂಡ. ಎಪ್ಪತ್ತು ದಾಟಿರುವುದರಿಂದ ಮತ್ತು ಕಣ್ಣು ಬೇನೆ ಇರುವುದರಿಂದ ಅವರಿಗೆ ಡ್ರೆೃವ್‌ ಮಾಡುವುದಕ್ಕೆ ಆಗುವುದಿಲ್ಲ. ಮನೆಯಲ್ಲೇ ಇದ್ದುಕೊಂಡು ಏನನ್ನಾದರೂ ಓದುತ್ತಾ ಬರೆಯುತ್ತಾ ಕಾಲ ಹಾಕುತ್ತಾರೆ. ಸದ್ಯಕ್ಕೆ ಅವರ ವಿಳಾಸ , ಲಾಸ್‌ ಏಂಜಲಿಸ್‌ನಲ್ಲಿರುವ ಅವರ ಮಗಳ ಮನೆ.

ಐತಾಳರು ಮೋಹನರ ಅಮೆರಿಕಾಯಣ ಹಸ್ತಪ್ರತಿ ಹಿಡಿದುಕೊಂಡು ಬೆಂಗಳೂರಿಗೆ ಬಂದರು. ಒಳ್ಳೆಯ ಪ್ರಕಾಶನ ಸಂಸ್ಥೆ ಗೆ ಕೆಲಸ ಒಪ್ಪಿಸಿದರು. ಅಲ್ಲಿಗೆ ಕೆಲಸ ಮುಗಿಯುವುದಿಲ್ಲ. ಬೆಂಗಳೂರಿನಲ್ಲಿ ಪುಸ್ತಕದ ಕರಡನ್ನು ಹಿಡಿದು ಓಡಾಡುವುದಕ್ಕೆ ಇನ್ನೊಬ್ಬ ದಾತ ಬೇಕು. ಈ ದಾತನಿಗೆ ಕರಡು ಓದುವ, ತಿದ್ದುವ ಜಾಣ್ಮೆ ಇರಬೇಕು. ಭಾಷಾ ಜ್ಞಾನ ಇರಬೇಕು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಕವಿ-ಪುಸ್ತಕ-ಪ್ರಕಟಣೆ-ಬಿಡುಗಡೆ-ಮುನ್ನಡಿ-ಬೆನ್ನುಡಿಯ ಜೊತೆಗೆ ಪುಸ್ತಕ ವಿಮರ್ಶೆಯನ್ನೂ ಮಾಡುವ ಸವಾಲುಗಳನ್ನು ಇಡಿಇಡಿಯಾಗಿ ನುಂಗಿ ಜೀರ್ಣಿಸಿಕೊಳ್ಳಬಲ್ಲ ಡಾ. ಎನ್‌. ಎಸ್‌. ಲಕ್ಷ್ಮಿನಾರಾಯಣ ಭಟ್ಟರು, ನಾಗಐತಾಳರಿಗೆ ಬೆಂಗಳೂರು ಬಂಧುವಾಗಿ ಹಾಜರಾದದ್ದರಲ್ಲಿ ಆಶ್ಚರ್ಯವೇನಿಲ್ಲ. ಅವರು ಕವಿಗಳು, ವಿಮರ್ಶಕರು, ಕನ್ನಡ ಸೇವಕರು... ಎಲ್ಲದಕ್ಕಿಂತ ಹೆಚ್ಚಾಗಿ ಅನಿವಾಸಿ ಕನ್ನಡಿಗರ ಸ್ನೇಹ ಸಂಪಾದಿಸಿದವರು. ನಾಗ ಐತಾಳರಿಗೆ ಖಾಸಾ ಖಾಸಾ ಎನಿಸಿಕೊಂಡವರು. ಕರಡನ್ನು ಹಲವು ಹತ್ತು ಬಾರಿ ಓದಿ , ತಿದ್ದಿ ತೀಡಿದ ನಂತರ ಪುಸ್ತಕಕ್ಕೆ ಡಾ.ಪ್ರಭುಶಂಕರ್‌ ಅವರ ಮುನ್ನುಡಿಯ ಲಾಭವೂ ಪ್ರಾಪ್ತವಾಯಿತು. ಇನ್ನೇನು ಬೇಕು ?

ಪುಸ್ತಕ ಬಿಡುಗಡೆ ಕಾರ್ಯಕ್ರಮ ಭರ್ಜರಿ ಆಗಬೇಕು. ಬರೀ ಪುಸ್ತಕ ಬಿಡುಗಡೆ ಕಾರ್ಯಕ್ರಮ ಎಂದರೆ ಪುಳಿಚಾರು ಅಂದಾರು ಜನ. ಅದರ ಜತೆಗೆ ನೆಂಚಿಕೊಳ್ಳಲು ಏನಾದರೊಂದು ವ್ಯಂಜನ ಇರಬೇಕು. ಆಗ ಹೊಳೆದದ್ದು 'ಹೊರದೇಶಗಳಲ್ಲಿ ಕನ್ನಡದ ಸ್ಥಿತಿಗತಿ' ಕುರಿತೊಂದು ವಿಚಾರ ಸಂಕಿರಣ.

ಅದಕ್ಕೇನಂತೆ, ಆಗಲಿ ಎಂದರು ನೆರೆಹೊರೆಯವರು. ಕನ್ನಡ ಭವನದಲ್ಲಿ ಬಿಡುಗಡೆಯ ಕಾರ್ಯಕ್ರಮ ನಿಗದಿ ಆಯಿತು. ವಿಚಾರ ಸಂಕಿರಣಕ್ಕೆ ಯಾರನ್ನು ಕರೆಯಬೇಕು ? ಅದೂ ನಿಗದಿಯಾಯಿತು.ಸದ್ಯಕ್ಕೆ, ಅವತ್ತು ಅಲ್ಲಿ ನಡೆದದ್ದು ವಿಚಾರ ಸಂಕಿರಣ ಎಂತಲೇ ಕರೆಯೋಣ. ' ಕರೆಯೋಣ' ಎಂಬ ಪದ ಇಲ್ಲಿ ಯಾಕೆ ಬಳಸಲಾಗಿದೆ ಎಂದು ಆನಂತರ ಚರ್ಚಿಸೋಣ.ಅಂದಹಾಗೆ, ಸಂಕಿರಣದಲ್ಲಿ ಪಾಲ್ಗೊಂಡವರೆಲ್ಲ ವಯೋವೃದ್ಧರು ಮತ್ತು ಜ್ಞಾನವೃದ್ಧರು. (ಮುಂದುವರೆಯುವುದು)

ಸೋಮವಾರ : ವಯೋವೃದ್ಧರ ಮತ್ತು ಜ್ಞಾನವೃದ್ಧರ ಸಮ್ಮುಖದಲ್ಲಿ

English summary
A Series of articles on contemporary history. An open house about relationship between resident kannadigas and non resident kannadigas
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X