• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾವ್ಯಾಕೆ ಹೀಗೆ? ನಮ್ಮಲ್ಲಿ ನಾಗರಿಕ ಪ್ರಜ್ಞೆ ಮೂಡುವುದು ಯಾವಾಗ?

By Staff
|
Sampige Srinivas ಸಂಪಿಗೆ ಶ್ರೀನಿವಾಸ, ಬೆಂಗಳೂರು

sampiges@hotmail.com

ಮಧ್ಯರಾತ್ರಿ 1 ಗಂಟೆಯಾಗಿತ್ತು. ಬಿಕೋ ಎನ್ನುತ್ತಿದ್ದ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದೆ. ಸ್ವಲ್ಪ ದೂರದಲ್ಲಿ ಟ್ರಾಫಿಕ್‌ ಸಿಗ್ನಲ್‌ ಕೆಂಪು ದೀಪ ತೋರಿಸುತ್ತಿತ್ತು. ಮುಂದೆ ಒಂದು ಕಾರು ಹಸಿರು ದೀಪಕ್ಕಾಗಿ ಕಾದು ನಿಂತಿತ್ತು. ಆ ರಸ್ತೆಯಲ್ಲಿ ಬೇರೆ ಯಾವ ವಾಹನ ಸಂಚಾರ ಇಲ್ಲದಿದ್ದರೂ ಆ ಕಾರಿನ ಚಾಲಕ ಕೆಂಪುದೀಪವನ್ನು ಗೌರವಿಸಿ ವಾಹನವನ್ನು ನಿಲ್ಲಿಸಿದ್ದ! ಆ ಚಾಲಕನಿಗೆ ತಲೆ ಕೆಟ್ಟಿರಬೇಕು ಎಂದು ನೀವು ಚಿಂತಿಸುತ್ತಿರಬಹುದು ಅಲ್ಲವೇ?

ಈ ಘಟನೆ ನಡೆದದ್ದು ಇಂಗ್ಲೆಂಡಿನ ಒಂದು ಪುಟ್ಟ ಊರಾದ ರೆಡ್ಡಿಂಗ್‌ ಎಂಬಲ್ಲಿ. ಖಂಡಿತ ಇದನ್ನು ನಾವು ಭಾರತದ ಮಹಾನಗರಗಳಲ್ಲಿ ಊಹಿಸಲೂ ಸಾಧ್ಯವಿಲ್ಲ. ಆ ಘಟನೆಯ ಬಗ್ಗೆ ಅಚ್ಚರಿ ಮತ್ತು ಪಾಶ್ಚಾತ್ಯ ದೇಶದವರ ನಾಗರಿಕ ಪ್ರಜ್ಞೆ (ಸಿವಿಕ್‌ ಸೆನ್ಸ್‌) ಬಗ್ಗೆ ಮೆಚ್ಚಿಗೆ ಮೂಡಿತು. ನಮ್ಮ ಭಾರತದಲ್ಲಿನ ಪರಿಸ್ಥಿತಿ ನೆನೆಸಿಕೊಂಡಾಗ ನಾವು ಭಾರತೀಯರು ಯಾಕೆ ಹೀಗೆ? ನಮ್ಮಲ್ಲಿ ನಾಗರಿಕ ಪ್ರಜ್ಞೆ ಮೂಡುವುದು ಯಾವಾಗ ಎಂದು ಚಿಂತಿಸತೊಡಗಿದೆ.

ನಾವು ಭಾರತೀಯರು, ಅದರಲ್ಲೂ ಇಂದಿನ ವಿದ್ಯಾವಂತ ಯುವಜನಾಂಗ ಭಾರತೀಯ ಸಂಸ್ಕೃತಿಯನ್ನು ಬಿಟ್ಟು ಪಾಶ್ಚಾತ್ಯ ಸಂಸ್ಕೃತಿಯನ್ನು ಅಪ್ಪಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹುಟ್ಟು ಹಬ್ಬ ಆಚರಿಸುವಾಗ ಪಾಶ್ಚಾತ್ಯರಂತೆ ಕೇಕ್‌ ಕತ್ತರಿಸಿ ಕೇಕೆ ಹಾಕುತ್ತೇವೆ, ‘ಹ್ಯಾಪಿ ಬರ್ತ್‌ಡೇ ಟು ಯೂ’ ಎಂದು ಅವರ ಭಾಷೆಯಲ್ಲೇ ಶುಭಾಶಯ ಹೇಳುತ್ತೇವೆ, ಅವರ ವೇಷ ಭೂಷಣಗಳನ್ನು ಅನುಕರಿಸುತ್ತೇವೆ, ಅವರಂತೆ ಕುಡಿದು ಕುಣಿದು ಕುಪ್ಪಳಿಸಿ ಅವರ ಹೊಸವರ್ಷವನ್ನು ಸಂಭ್ರಮದಿಂದ ಸ್ವಾಗತಿಸುತ್ತೇವೆ. ಅವರಲ್ಲಿರುವ ದುಶ್ಚಟಗಳನ್ನೆಲ್ಲಾ ಕಲಿಯುತ್ತೇವೆ. ಆದರೆ ಅವರ ನಾಗರಿಕ ಪ್ರಜ್ಞೆಯನ್ನೇಕೆ ನಾವು ಕಲಿಯುತ್ತಿಲ್ಲ?

ಬೆಂಗಳೂರಿನಲ್ಲಿ ರಸ್ತೆ ಸರಿಯಿಲ್ಲ, ಯಾವಾಗಲೂ ಎಲ್ಲಿ ನೋಡಿದರೂ ಟ್ರಾಫಿಕ್‌ ಜಾಮ್‌, ರಾಜ್ಯ ಸರ್ಕಾರ ಏನೂ ಮಾಡುತ್ತಿಲ್ಲ ಎಂದೆಲ್ಲಾ ಬೊಬ್ಬೆ ಹೊಡೆಯುತ್ತೇವೆ. ಆದರೆ ಬೆಂಗಳೂರಿನ ನಾಗರಿಕರಾದ ನಾವು ನಮ್ಮ ನಾಗರಿಕ ಕರ್ತವ್ಯ ಪಾಲಿಸುತ್ತಿದ್ದೇವೆಯೇ ಎಂಬುದರ ಬಗ್ಗೆ ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ರಸ್ತೆಯಲ್ಲಿ ವಾಹನ ಚಲಿಸುವಾಗ ರಸ್ತೆ ಸಂಚಾರ ನಿಯಮಗಳನ್ನು ನಾವು ಪಾಲಿಸುವುದಿರಲಿ ಅಪರೂಪಕ್ಕೆ ನಿಯಮ ಪಾಲಿಸಲು ಯತ್ನಿಸುವವರನ್ನು ನೋಡಿ ನಗುತ್ತೇವೆ, ಗದರಿಸಿ ಹಾರ್ನ್‌ ಮಾಡುತ್ತೇವೆ. ರಸ್ತೆ ಕೂಡು(ಜಂಕ್ಷನ್‌) ಗಳಲ್ಲಿಹಸಿರು ದೀಪ ಬರುವ ಮುಂಚೆಯೇ ಅವಸರದಲ್ಲಿ ಮುನ್ನುಗ್ಗುತ್ತೇವೆ. ಲೇನ್‌ ನಿಯಮಗಳನ್ನು ಪಾಲಿಸದೆ ಲೇನ್‌ ಬದಲಾಯಿಸುತ್ತೇವೆ. ಸಿಗ್ನಲ್‌ ಇಲ್ಲದ ರಸ್ತೆಕೂಡುಗಳಲ್ಲಿ ಸ್ವಲ್ಪ ನಿಂತು ಬೇರೆ ಯಾವುದೇ ವಾಹನ ಬರುತ್ತಿಲ್ಲವೆಂದು ಖಾತರಿಮಾಡಿಕೊಂಡು ಬಲಕ್ಕೆ ತಿರುಗುವ ಇಲ್ಲ ಕೂಡು ದಾಟುವ ಪ್ರಜ್ಞೆಯಿಲ್ಲದಿರುವುದು ಬಹಳಷ್ಟು ಬಾರಿ ಅಪಘಾತಗಳಿಗೆ ಕಾರಣವಾಗಿರುವುದೂ ಉಂಟು. ಕೆಲವರಂತೂ ಕೂಡುಗಳಲ್ಲಿ ಬಲಕ್ಕೆ ತಿರುಗುವಾಗ ಆ ಕಡೆಯಿಂದ ವಾಹನಗಳು ಬರಬಹುದು ಎಂಬ ಅರಿವು ಇಲ್ಲದೆ ರಸ್ತೆಯ ಬಲತುದಿಗೆ ತಮ್ಮ ವಾಹನವನ್ನು ಚಲಿಸುತ್ತಾರೆ. ಇದು ಎಷ್ಟು ಅಪಾಯಕಾರಿ ಎಂದರೆ, ಅತ್ತಕಡೆಯಿಂದ ಬಿರುಸಾಗಿ ಬಂದು ಎಡಕ್ಕೆ ತಿರುಗುವ ವಾಹನಗಳಿಗೆ ಮುಖಾಮುಖಿ ಡಿಕ್ಕಿಹೊಡೆಯುವುದು ಸಾಮಾನ್ಯವಾಗಿದೆ. ರಸ್ತೆಕೂಡುಗಳಲ್ಲಿ, ವೃತ್ತಗಳಲ್ಲಿ ಬಲಗಡೆಯಿಂದ ಬರುವ ವಾಹನಗಳಿಗೆ ಮೊದಲು ದಾರಿಬಿಡಬೇಕು ಎಂಬ ನಿಯಮವನ್ನು ಗಾಳಿಗೆ ತೂರಿದ್ದೇವೆ(ಈ ನಿಯಮ ಇರುವುದು ಬಹಳಷ್ಟು ಜನರಿಗೆ ತಿಳಿದಿದೆಯೋ ಇಲ್ಲವೋ. ಏಕೆಂದರೆ ಲಂಚಕೊಟ್ಟು ಕಲಿಕೆಯ ಪರವಾನಗಿಯನ್ನು ಪಡೆದುಕೊಳ್ಳುವವರೇ ಹೆಚ್ಚಾಗಿರುವಾಗ ರಸ್ತೆ ಸಂಚಾರ ನಿಯಮಗಳನ್ನು ಓದಿ ತಿಳಿದುಕೊಳ್ಳುವ ಮಂದಿ ಕಡಿಮೆ!).

ಹಸಿರು ದೀಪ ಹೋಗಿ ಕೆಂಪು ದೀಪ ಬಂದರೂ ವಾಹನ ನಿಲ್ಲಿಸದೆ ಸಿಗ್ನಲ್‌ ಜಂಪ್‌ ಮಾಡುತ್ತೇವೆ! ಅದೇನು ಅವಸರವೋ ತಿಳಿಯದು. ಒಂದೆರಡು ನಿಮಿಷ ಕಾಯಲು ನಮಗೆ ತಾಳ್ಮೆಯಿಲ್ಲ. ಈಗೀಗ ಬೆಂಗಳೂರಿನಲ್ಲಿ ವಾಹನದಟ್ಟನೆ ಎಷ್ಟು ಹೆಚ್ಚಿದೆಯೆಂದರೆ ಜಾಮ್‌ ಆಗಿರದ ರಸ್ತೆ ಕೂಡುಗಳೇ ಅಪರೂಪವಾಗಿಬಿಟ್ಟಿವೆ. ಅದರಲ್ಲೂ ರಸ್ತೆ ವಿಭಜಕವಿಲ್ಲದಿರುವ ರಸ್ತೆಗಳಲ್ಲಂತೂ ಎರಡು ಬದಿ ವಾಹನಗಳು ಅತ್ತಲೂ ಹೋಗಲಾಗದೆ ಇತ್ತಲೂ ಬರಲಾಗದೆ ತಾಸುಗಟ್ಟಲೆ ಸಾಲಾಗಿ ನಿಂತಿರುತ್ತವೆ. ಒಂದೇ ಲೇನ್‌ನಲ್ಲಿ ಒಂದರ ಹಿಂದೆ ಒಂದು ವಾಹನ ಚಲಿಸಿದರೆ ಜಾಮ್‌ ಆಗುವ ಪ್ರಮೇಯವೇ ಬರುವುದಿಲ್ಲ. ವಾಹನ ಸಂಚಾರ ಸುಗಮವಾಗಿ ಸಾಗುತ್ತದೆ. ಆದರೆ ನಮಗೆಷ್ಟು ಅವಸರವೆಂದರೆ ನಮ್ಮ ವಿರುದ್ಧ ದಿಕ್ಕಿನಲ್ಲಿ ಬರುವ ವಾಹನಗಳಿಗೆ ಜಾಗ ಬಿಡದೆ ಇಡೀ ರಸ್ತೆಯನ್ನು ಆಕ್ರಮಿಸಿ ಬಿಟ್ಟಿರುತ್ತೇವೆ! ಎದುರಿನಿಂದ ಬರುವವರಿಗೆ ದಾರಿಬಿಡಬೇಕೆಂಬ ಸಾಮಾನ್ಯ ಪ್ರಜ್ಞೆ (ಕಾಮನ್‌ ಸೆನ್ಸ್‌) ನಮ್ಮಲ್ಲಿ ಜಾಗೃತವಾಗುವುದೇ ಇಲ್ಲ. ಈ ಜಂಜಾಟವನ್ನು ಬಿಡಿಸಲು ಟ್ರಾಫಿಕ್‌ ಪೋಲಿಸರು ಹರಸಾಹಸ ಮಾಡುವುದನ್ನ ದಿನನಿತ್ಯ ನೋಡುತ್ತೇವೆ. ಆದರೂ ಮಾಡಿದ ತಪ್ಪನ್ನೇ ನಾವು ಮತ್ತೆ ಮತ್ತೆ ಮಾಡುತ್ತೇವೆ.

ಇನ್ನು ದ್ವಿಚಕ್ರ ವಾಹನ ಚಾಲಕರಿಗೆ ಎಷ್ಟು ಅವರಸರವೆಂದರೆ ಪಾದಚಾರಿ ಮಾರ್ಗಗಳಲ್ಲೂ ಸರ್ಕಸ್‌ ಮಾಡುತ್ತ ಅಪಾಯಕಾರಿಯಾಗಿ ತಮ್ಮ ವಾಹನಗಳನ್ನು ನುಗ್ಗಿಸುತ್ತಾರೆ. ರೋಗಿಗಳನ್ನು ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಆಂಬುಲೆನ್ಸ್‌ಗಳು, ಅಗ್ನಿಶಾಮಕ ವಾಹನಗಳು ದಾರಿಗಾಗಿ ಸೈರನ್‌ ಕೂಗಿಸುತ್ತಿದ್ದರೂ ಅವಕ್ಕೆ ದಾರಿಬಿಡಬೇಕೆಂಬ ಪ್ರಜ್ಞೆ ನಮ್ಮಲ್ಲಿ ಬಹಳ ಜನರಿಗೆ ಇಲ್ಲ. ಮತ್ತೆ ಅನಾವಶ್ಯಕವಾಗಿ ಹಾರ್ನ್‌ ಮಾಡುತ್ತೇವೆ. ಕೆಲವರಿಗಂತೂ ಹಾರ್ನ್‌ ಮಾಡದೇ ತಮ್ಮ ವಾಹನ ಚಲಿಸಲು ಬರುವುದಿಲ್ಲವೇನೋ ಎನ್ನುವಷ್ಟು ಹಾರ್ನ್‌ ಮಾಡುತ್ತಲೇ ಇರುತ್ತಾರೆ! ಇನ್ನು ಕೆಲವರು ಮೊಬೈಲ್‌ನಲ್ಲಿ ಮಾತನಾಡುತ್ತ ಅಥವಾ ಸಿಗರೇಟು ಸೇದುತ್ತ ವಾಹನ ಚಲಾಯಿಸುತ್ತಾರೆ. ಈ ರೀತಿಯಲ್ಲಿ ವಾಹನ ಚಲಿಸುವುದು ಅಪಘಾತಕ್ಕೆ ಕಾರಣವಾಗುತ್ತದೆ ಎಂದು ತಿಳಿದೂ ತಪ್ಪು ಮಾಡುತ್ತಾರೆ. ಆಶ್ಚರ್ಯವೆಂದರೆ ಈ ರೀತಿ ರಸ್ತೆ ಸಂಚಾರಿ ನಿಯಮಗಳನ್ನು ಗಾಳಿಗೆ ತೂರುವವರಲ್ಲಿ ವಿದ್ಯಾವಂತರೇ ಹೆಚ್ಚಾಗಿರುವುದು ವಿಪರ್ಯಾಸ.

ಪಾಶ್ಚಾತ್ಯರು ಸಂಚಾರ ನಿಯಮಗಳನ್ನು ಹೇಗೆ ಕಟ್ಟು ನಿಟ್ಟಾಗಿ ಪಾಲಿಸುತ್ತಾರೆ ಎಂದು ಒಮ್ಮೆ ಅಲ್ಲಿಗೆ ಹೋಗೇ ನೋಡಬೇಕು. ಬ್ರಿಟನ್‌ ದೇಶದಲ್ಲಿ Give way to right ಎಂಬ ನಿಯಮವನ್ನು ಚಾಚೂ ತಪ್ಪದೆ ಎಲ್ಲರೂ ಪಾಲಿಸುತ್ತಾರೆ. ಅನಾವಶ್ಯಕವಾಗಿ ಹಾರ್ನ್‌ ಮಾಡುವುದಿಲ್ಲ. ಅಕಸ್ಮಾತ್‌ ಹಾರ್ನ್‌ ಮಾಡಿದರೆ ಮುಂದೆ ಚಲಿಸುತ್ತಿರುವ ವಾಹನ ಚಾಲಕ ಏನೋ ತಪ್ಪು ಮಾಡಿದ್ದಾನೆ ಎಂಬ ಅರ್ಥವಿರುತ್ತದೆ. ಪಾದಚಾರಿಗಳಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಾರೆ. ಅಂದರೆ ಯಾರಾದರೂ ಪಾದಚಾರಿ, ರಸ್ತೆಯನ್ನು ದಾಟುತ್ತಿದ್ದರೆ ತಮ್ಮ ವಾಹನವನ್ನು ನಿಲ್ಲಿಸಿ ಅವರು ರಸ್ತೆಯನ್ನು ಸುರಕ್ಷಿತವಾಗಿ ದಾಟುವವರೆಗೆ ಕಾದು ನಂತರ ಚಲಿಸುತ್ತಾರೆ. ಇನ್ನು ಪಾದಚಾರಿಗಳೂ ಅಷ್ಟೇ. ಎಲ್ಲೆಂದರಲ್ಲಿ ರಸ್ತೆ ದಾಟುವುದಿಲ್ಲ ಅದಕ್ಕಾಗಿ ಮೀಸಲಾಗಿರುವ ಸ್ಥಳಗಳಲ್ಲಿ ಸಿಗ್ನಲ್‌ ಒತ್ತಿ ಹಸಿರು ದೀಪ ಬರುವವರೆಗೂ ಕಾದು ರಸ್ತೆ ದಾಟುತ್ತಾರೆ. ಬೇಕಾಬಿಟ್ಟಿಯಾಗಿ ರಸ್ತೆಗಳಲ್ಲಿ ನಡೆದು ವಾಹನ ಸವಾರರಿಗೆ ತೊಂದರೆ ಕೊಡದೆ ಪಾದಚಾರಿಗಳಿಗೆ ಮೀಸಲಾಗಿರುವ ಪಾದಚಾರಿ ಮಾರ್ಗಗಳಲ್ಲೇ ನಡೆಯುತ್ತಾರೆ! ಇಲ್ಲಿ ನಮ್ಮ ನಗರಗಳಲ್ಲಿ ಪಾದಚಾರಿಮಾರ್ಗಗಳೇ ಸರಿಯಿಲ್ಲ ಎಂಬುದು ಬೇರೆ ವಿಷಯ ಬಿಡಿ. ಆದರೂ ನಾವು ಪಾಶ್ಚಾತ್ಯರಿಂದ ಕಲಿಯಬೇಕಾದ ನಾಗರಿಕ ಪ್ರಜ್ಞೆ ಬಹಳಷ್ಟಿದೆ.

ಇನ್ನು ನಮ್ಮ ನಗರವನ್ನು, ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟು ಕೊಳ್ಳಬೇಕೆಂಬ ನಾಗರಿಕ ಪ್ರಜ್ಞೆ ನಮ್ಮಲ್ಲಿ ಇಲ್ಲವೇ ಇಲ್ಲ. ನಮ್ಮ ಮನೆಯನ್ನು ಹೇಗೆ ಸ್ವಚ್ಛವಾಗಿ ಇಟ್ಟುಕೊಳ್ಳುತ್ತೇವೆಯೋ ಹಾಗೆ ನಮ್ಮ ನಗರದ ಪರಿಸರವನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕೆಂಬ ಪ್ರಜ್ಞೆ ಪಾಶ್ಚಾತ್ಯರಲ್ಲಿದೆ. ಅದನ್ನೂ ನಾವು ಅಳವಡಿಸಿಕೊಂಡಿಲ್ಲ. ಎಲ್ಲೆಂದರಲ್ಲಿ ಕಸ ಹಾಕುತ್ತೇವೆ. ತಿಂಡಿತಿನಿಸುಗಳನ್ನು ತಿಂದಮೇಲೆ ಅವುಗಳ ಪೊಟ್ಟಣಗಳನ್ನು ರಸ್ತೆಬದಿಯಲ್ಲೋ, ಇಲ್ಲಾ ಅಂಗಡಿಗಳ ಮುಂದೋ ಎಸೆದು ಮುಂದೆ ಹೋಗುತ್ತೇವೆ. ಅದಕ್ಕಾಗಿ ಮೀಸಲಿರಿಸಿದ ಕಸದ ಬುಟ್ಟಿ/ಡಬ್ಬಿಗಳಲ್ಲಿ ಹಾಕಬೇಕೆಂಬ ನಾಗರಿಕ ಪ್ರಜ್ಞೆ ಇರುವವರು ಕೆಲವೇ ಮಂದಿ ಇರುತ್ತಾರೆ. ಅದರಲ್ಲೂ ಸುಂದರವಾದ ಪ್ರಕೃತಿಯ ಮಡಿಲಿಗೆ ಪ್ರವಾಸ ಕೈಗೊಂಡಾಗ ಅಲ್ಲಿನ ಪರಿಸರವನ್ನು ಎಷ್ಟು ಹಾಳು ಮಾಡಿರುತ್ತಾರೆ ಎಂದರೆ ಅದನ್ನು ನೋಡಿ ಅಲ್ಲಿನ ಪ್ರಕೃತಿಯ ಸುಂದರ ದೃಶ್ಯಗಳನ್ನು ಸವಿಯುವ ಮನಸ್ಸೇ ಹಾಳಾಗಿ ಬಿಟ್ಟಿರುತ್ತದೆ. ಪ್ರಾಕೃತಿಕ ಸ್ಥಳಗಳಿಗೆ ಪ್ರವಾಸ ಹೋದಾಗ ಅಲ್ಲಿ ತಿಂದು/ಕುಡಿದು ಖಾಲಿಮಾಡುವ ಪ್ಲಾಸ್ಟಿಕ್‌ ಪೊಟ್ಟಣಗಳನ್ನು, ಡಬ್ಬಿಗಳನ್ನು, ಬಾಟಲಿಗಳನ್ನು ಒಂದು ಚೀಲದಲ್ಲಿ ತುಂಬಿಸಿ ಅದನ್ನು ವಾಪಸ್‌ ಮನೆಗೆ ತಂದು ಕಸದ ತೊಟ್ಟಿಗೆ ಹಾಕುವ ಪಾಶ್ಚಾತ್ಯರ ನಾಗರಿಕ ಪ್ರಜ್ಞೆ ನಮ್ಮಲ್ಲಿ ಯಾವಾಗ ಜಾಗೃತಗೊಳ್ಳುತ್ತದೋ?

ಮತ್ತೊಂದು ಮುಖ್ಯವಾದ ನಾಗರಿಕ ಪ್ರಜ್ಞೆ ಬಹಳಷ್ಟು ಭಾರತೀಯರಲ್ಲಿ ಇಲ್ಲದಿರುವುದೆಂದರೆ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವಿದ್ದರೂ ಅದನ್ನು ಉಲ್ಲಂಘಿಸಿ ಧೂಮಪಾನ ಮಾಡುವುದು. ಧೂಮಪಾನ ಮಾಡುವುದರಿಂದ ತಮ್ಮ ಆರೋಗ್ಯವನ್ನು ಹಾನಿಮಾಡಿಕೊಳ್ಳುವುದರ ಜೊತೆ, ಇತರರ ಆರೋಗ್ಯವನ್ನೂ ಹಾಳು ಮಾಡುತ್ತಿದ್ದೇವೆ ಎನ್ನುವ ಪಾಪಪ್ರಜ್ಞೆ ಇಲ್ಲದಿರುವುದು ಅತ್ಯಂತ ಖಂಡನೀಯವಾದುದು.

ಉದಾಹರಣೆಗೆ ಬಸ್ಸು, ರೈಲುಗಳಲ್ಲಿ, ಸಿನಿಮಾಮಂದಿರಗಳಲ್ಲಿ, ಹೋಟೆಲ್ಲುಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರ ವಿರುದ್ಧ ಪ್ರತಿಭಟಿಸುವ ತಮ್ಮ ಹಕ್ಕನ್ನು ಬಹಳಷ್ಟು ಜನ ಚಲಾಯಿಸುವುದಿಲ್ಲ. ಇದರಿಂದ ತಮಗೆ ತೊಂದರೆ ಆಗುತ್ತಿದ್ದರೂ, ತಮ್ಮ ಆರೋಗ್ಯಕ್ಕೆ ಕೆಡುಕನ್ನು ಉಂಟುಮಾಡುತ್ತದೆ ಎಂದು ತಿಳಿದಿದ್ದರೂ ಸಹಿಸಿಕೊಂಡಿರುತ್ತಾರೆ. ನಮ್ಮ ಕಣ್ಣ ಮುಂದೆ ನಡೆಯುವ ಇಂತಹ ಅನೇಕ ಅನ್ಯಾಯಗಳನ್ನು ಪ್ರಶ್ನಿಸುವ ಪ್ರಜ್ಞೆಯೇ ನಮ್ಮಲ್ಲಿ ಬಹಳ ಮಂದಿಗೆ ಇಲ್ಲಾ!

ಇನ್ನು ಸರತಿಸಾಲಿನಲ್ಲಿ ನಿಲ್ಲುವ ತಾಳ್ಮೆಯಂತೂ ಕೆಲವರಿಗೆ ಇರುವುದೇ ಇಲ್ಲ. ದೇವಸ್ಥಾನದಲ್ಲಿ ದೇವರ ದರ್ಶನಕ್ಕಾಗಿ ನಿಂತಿರುವ ಸರತಿಸಾಲಿನಲ್ಲೋ, ಸಿನಿಮಾ ಟಿಕೆಟ್‌ಗಾಗಿ ನಿಂತಿರುವ ಸರತಿಸಾಲಿನಲ್ಲೋ ಅಥವಾ ಬಸ್ಸು/ರೈಲುಗಳ ಟಿಕೆಟ್‌ ಕಾದಿರಿಸಲು ನಿಂತಿರುವಾಗಲೋ ಮಧ್ಯೆ ನುಗ್ಗುವವರನ್ನು ನೋಡುತ್ತಿರುತ್ತೇವೆ. ಸರತಿಯಲ್ಲಿ ನಿಲ್ಲುವುದೂ ಒಂದು ನಾಗರಿಕ ಪ್ರಜ್ಞೆ ಅಲ್ಲವೇ? ಇದು ತಿಳಿದಿದ್ದರೂ ನಮ್ಮಲ್ಲಿ ನೆಲೆನಿಂತಿರುವ, ಎಲ್ಲರೂ ನಿಯಮವನ್ನು ಉಲ್ಲಂಘಿಸುತ್ತಿರುವಾಗ ನಾವು ಮಾತ್ರ ಯಾಕೆ ಸರಿಯಾಗಿರಬೇಕು, ಪ್ರಾಮಾಣಿಕವಾಗಿರಬೇಕು, ನಿಯಮಪಾಲಿಸಬೇಕು ಎಂಬ ಮನಸ್ಥಿತಿ ಬಹುಶಃ ಈ ರೀತಿ ಅನಾಗರಿಕವಾಗಿ ವರ್ತಿಸುವಂತೆ ಮಾಡುತ್ತದೆ ಎಂದು ನನ್ನ ಅನಿಸಿಕೆ. ಇನ್ನು ದೇಶದಲ್ಲಿ ತಾಂಡವವಾಡುತ್ತಿರುವ ಲಂಚಗುಳಿತನಕ್ಕೂ, ಭ್ರಷ್ಟಾಚಾರಕ್ಕೂ ನಮ್ಮಲ್ಲಿರುವ ಇಂತಹ ಮನಸ್ಥಿತಿಯೇ ಕಾರಣ ಎಂದರೆ ತಪ್ಪಾಗಲಾರದು.

ಇಷ್ಟೆಲ್ಲಾ ನ್ಯೂನತೆಗಳು ನಮ್ಮಲ್ಲೇ ಇರುವಾಗ ಎಲ್ಲದಕ್ಕೂ ಸರ್ಕಾರದ ಮೇಲೇ ಗೂಬೆ ಕೂರಿಸುವುದು ಎಷ್ಟು ಸರಿ. ನಿಜ ಸರ್ಕಾರಗಳೂ ತಮ್ಮ ಕರ್ತವ್ಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆದರೆ ಮೊದಲು ನಾವು ಸರಿಯಾದರೆ ನಮ್ಮ ಸರ್ಕಾರಗಳೂ ಸರಿಯಾಗುತ್ತವೆ. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳನ್ನು ಅಧಿಕಾರಕ್ಕೆ ತರುವವರು ನಾವೇ, ಅದರಲ್ಲಿರುವವರೂ ನಾವೇ, ನಮ್ಮನ್ನು ಆಳುವವರೂ ನಾವೇ ಅಲ್ಲವೇ?

ನಾವ್ಯಾಕೆ ಹೀಗೆ? ಎಂಬ ಪ್ರಶ್ನೆ ನನಗೆ ಇನ್ನೂ ಕಾಡುತ್ತಿದೆ. ನಿಮಗೆ?

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more