ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ರಕ್ಷಣಾ ವೇದಿಕೆ : ಕನ್ನಡಿಗರ ಆಶಾಕಿರಣ

By Staff
|
Google Oneindia Kannada News

ಕರ್ನಾಟಕ ರಕ್ಷಣಾ ವೇದಿಕೆ : ಕನ್ನಡಿಗರ ಆಶಾಕಿರಣ
ಕನ್ನಡವೇ ನಮ್ಮ ಧರ್ಮ, ಕನ್ನಡವೇ ನಮ್ಮ ಜಾತಿ, ಕನ್ನಡವೇ ನಮ್ಮ ಬದುಕು -ಇದು ಕರ್ನಾಟಕ ರಕ್ಷಣಾ ವೇದಿಕೆಯ ಮೂಲಮಂತ್ರ. ಕನ್ನಡ ಸಂಘಟನೆಗಳು ಜೀವ ಕಳೆದುಕೊಳ್ಳುತ್ತಿರುವ ಹೊತ್ತಿನಲ್ಲಿ, ವೇದಿಕೆ ಮುಗ್ಗರಿಸದೇ ಮುನ್ನುಗುತ್ತಿದೆ. ವೇದಿಕೆಯ ಹೋರಾಟ ಫಲಿಸಲಿ.. ಕನ್ನಡಿಗರು ಸಮಾಧಾನದಿಂದ ಉಸಿರಾಡಲಿ..

sampige_srinivas2 ಸಂಪಿಗೆ ಶ್ರೀನಿವಾಸ, ಬೆಂಗಳೂರು
[email protected]

1999ರಲ್ಲಿ ಬೆಂಗಳೂರಿನ ಎಜಿ ಕಚೇರಿಯಲ್ಲಿ ಕನ್ನಡ ಅಭ್ಯರ್ಥಿಗಳನ್ನು ಕಡೆಗಣಿಸಿ, ತಮಿಳುನಾಡಿನ 23 ಜನ ಅಭ್ಯರ್ಥಿಗಳನ್ನು ನೇಮಕ ಮಾಡಲಾಗಿತ್ತು. ಈ ಕನ್ನಡ ವಿರೋಧಿ ಕ್ರಮದ ವಿರುದ್ಧ ನಾರಾಯಣ ಗೌಡರ ನೇತೃತ್ವದಲ್ಲಿ ಕೆಲವು ಯುವಕರು ಸೇರಿಕೊಂಡು, ಎ.ಜಿ ಕಚೇರಿ ಎದುರು ತೀವ್ರ ಪ್ರತಿಭಟನೆ ನಡೆಸಿದರು. ನೇಮಕಾತಿ ವಿರುದ್ಧ ಆಗ ಕೇಂದ್ರ ಸರ್ಕಾರದಲ್ಲಿ ಗೃಹಮಂತ್ರಿಯಾಗಿದ್ದ ಬಿ.ಜೆ.ಪಿಯ ಎಲ್‌.ಕೆ. ಆಡ್ವಾಣಿಯವರಿಗೆ ಈ ಯುವಕರು ಪತ್ರಬರೆದು, ತಕ್ಷಣ ಈ ನೇಮಕಾತಿಯನ್ನು ರದ್ದುಗೊಳಿಸಿ ಕನ್ನಡಿಗ ಅಭ್ಯರ್ಥಿಗಳ ನೇಮಕಾತಿ ಮಾಡಬೇಕೆಂದು ಉಗ್ರಹೋರಾಟ ಮಾಡಿದರು.

ಇಪ್ಪತ್ತು ದಿನಕ್ಕಿಂತ ಹೆಚ್ಚು ಕಾಲ ನಡೆದ ಈ ಪ್ರತಿಭಟನೆಯ ತೀವ್ರತೆ ಯಾವ ಮಟ್ಟಕ್ಕೆ ಹೋಯಿತೆಂದರೆ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಆತಂಕದಿಂದ ಅಂದಿನ ಕೇಂದ್ರ ಸರ್ಕಾರ ತಮಿಳರ ನೇಮಕಾತಿಯನ್ನು ರದ್ದುಪಡಿಸಿ, ಕನ್ನಡಿಗರನ್ನು ನೇಮಿಸಬೇಕೆಂದು ಆದೇಶ ನೀಡಿತು!

Kannada Rakshana Vedike Inaugurationಅಂದು ಕನ್ನಡಿಗರಿಗೆ ಆದ ಅನ್ಯಾಯವನ್ನು ಪ್ರತಿಭಟಿಸಿ ಕನ್ನಡಿಗರಿಗೆ ನ್ಯಾಯ ದೊರಕಿಸಲು ಹೋರಾಡಿದ ಈ ಯುವಕರೆಲ್ಲ ಸೇರಿ ಕನ್ನಡ, ಕನ್ನಡಿಗ, ಕರ್ನಾಟಕದ ಏಳಿಗೆಗಾಗಿ ಹೋರಾಡಲು ಒಂದು ಪ್ರಾಮಾಣಿಕ ಕನ್ನಡ ಪರ ಸಂಘಟನೆಯನ್ನು ಕಟ್ಟಿದರು. ಅದುವೇ ಕರ್ನಾಟಕ ರಕ್ಷಣಾ ವೇದಿಕೆ! ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎನ್ನುವುದು ಕರ್ನಾಟಕ ರಕ್ಷಣಾ ವೇದಿಕೆಯ ಮೂಲಮಂತ್ರವಾಯಿತು.

ಕನ್ನಡವೆಂದರೆ ಬರಿ ಭಾಷೆಯಲ್ಲ. ಕನ್ನಡದ ನೆಲ, ಕನ್ನಡಿಗರ ಪರಿಸರ, ಕನ್ನಡಿಗರ ಬದುಕು. ಕನ್ನಡ ಪರ ಹೋರಾಟವೆಂದರೆ ಬರಿ ಭಾಷಾ ಹೋರಾಟವೆಂದು ಮೂಗು ಮುರಿಯುವುದನ್ನು ಕನ್ನಡಿಗರು ಬಿಡಬೇಕು. ಈ ನಿಟ್ಟಿನಲ್ಲಿ ನಿರಂತರವಾದ, ದಿಟ್ಟವಾದ ಹೋರಾಟವನ್ನು ರೂಪಿಸಿ ಸರ್ಕಾರ, ಸಂಸ್ಥೆಗಳು, ವ್ಯಕ್ತಿಗಳು ಅಥವಾ ಸಂಬಂಧಪಟ್ಟವರ ಮುಂದೆ ನ್ಯಾಯಕ್ಕಾಗಿ ಆಗ್ರಹಿಸಿ, ಕನ್ನಡಿಗರ ವಿರುದ್ಧ ನಡೆಯುತ್ತಿರುವ ಅನ್ಯಾಯ, ಅಕ್ರಮ, ಅನೀತಿಗಳನ್ನು ತಪ್ಪಿಸುವುದು ವೇದಿಕೆಯ ಪರಮ ಗುರಿಯಾಯಿತು.

ಆಶಯ :

1. ಕನ್ನಡ ಭಾಷೆಯ ಸಾರ್ವಭೌಮತ್ವ
2. ಕನ್ನಡಿಗರಿಗೆ ಉದ್ಯೋಗ
3. ಕನ್ನಡಿಗರಿಗೆ ಶಿಕ್ಷಣ ಸೌಲಭ್ಯಗಳು
4. ಕನ್ನಡಿಗರಿಗೆ ವಸತಿ ಸೌಲಭ್ಯಗಳು
5. ಕನ್ನಡಿಗರಿಗೆ ಸ್ವೌದ್ದಿಮೆ, ಸ್ವೌದ್ಯೋಗಕ್ಕೆ ನೆರವು
6. ಕರ್ನಾಟಕಕ್ಕೆ ಸ್ವಾಭಿಮಾನದ ಸ್ವಾತಂತ್ರ್ಯ
7. ರಾಜ್ಯದ ನೆಲ, ಜಲ, ಸಂಪತ್ತಿನ ಸಂರಕ್ಷಣೆ
8. ಗಡಿ ಪ್ರದೇಶ ಮತ್ತು ಗಡಿ ಕನ್ನಡಿಗರ ಭದ್ರತೆ
9. ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆ ರಕ್ಷಣೆ
10. ಕನ್ನಡ ಚಲನಚಿತ್ರಗಳು ರಾಜ್ಯ ಹಾಗೂ ನೆರೆರಾಜ್ಯಗಳಲ್ಲಿ ಪ್ರದರ್ಶನ

Jatha by KRVಈ ಹತ್ತು ಅಂಶಗಳಲ್ಲಿ ಸಮಗ್ರ ಕನ್ನಡದ, ಕನ್ನಡಿಗರ, ಕರ್ನಾಟಕದ ಆಶಯಗಳು, ಸಮಸ್ಯೆಗಳು ಮತ್ತು ಭವಿಷ್ಯಗಳು ಅಡಗಿರುವುದರಿಂದ, ಇವುಗಳ ವಿಷಯದಲ್ಲಿ ನ್ಯಾಯ ಪಡೆಯುವಂತಾಗಬೇಕು ಎಂಬುದೇ ಕರ್ನಾಟಕ ರಕ್ಷಣಾ ವೇದಿಕೆಯ ಮೂಲ ಆಶಯವಾಯಿತು.

ಈ ಉದ್ದೇಶಗಳನ್ನಿಟ್ಟುಕೊಂಡು ಟಿ.ಎ. ನಾರಾಯಣಗೌಡರ ಸಮರ್ಥ ನಾಯಕತ್ವದಲ್ಲಿ, ವೇದಿಕೆ ನಡೆಸಿದ ಕನ್ನಡ ಪರ ಹೋರಾಟಗಳು ಅನೇಕ. ಅವುಗಳಲ್ಲಿ ಮುಖ್ಯವಾಗಿ ನಾವು ಕೆಲವನ್ನು ಇಲ್ಲಿ ಸ್ಮರಿಸಬಹುದು.

* 515 ಭೂಸೇನಾ ಕಾರ್ಯಾಗಾರದಲ್ಲಿ ಕನ್ನಡಿಗರಿಗಾದ ಅನ್ಯಾಯದ ವಿರುದ್ಧ ಹೋರಾಟ.
* ಆಲಮಟ್ಟಿ ಹಾಗೂ ಕೃಷ್ಣಾ ನದಿ ನೀರಿನ ವಿಚಾರವಾಗಿ ಆಂಧ್ರದ ವಿರುದ್ಧ ಹೋರಾಟ.
* ಕೇಂದ್ರದ ರೈಲ್ವೇ ಮುಂಗಡ ಪತ್ರದಲ್ಲಿ ರಾಜ್ಯಕ್ಕೆ ಕೇಂದ್ರದ ಮಲತಾಯಿಧೋರಣೆ ವಿರುದ್ಧ ರೈಲು ತಡೆ ಚಳವಳಿ.
* ಬೆಂಗಳೂರಿನಲ್ಲಿ ತಿರುವಳ್ಳುವರ್‌ ಪ್ರತಿಮೆ ಸ್ಥಾಪನೆ ವಿರುದ್ಧ ಯಶಸ್ವಿ ಹೋರಾಟ.
* ಉತ್ತರ ಕರ್ನಾಟಕಕ್ಕೆ ಉಚ್ಛನ್ಯಾಯಾಲಯದ ಪೀಠ ಸ್ಥಾಪಿಸಬೇಕೆಂದು ಒತ್ತಾಯಿಸಿ ಧರಣಿ.
* ರಾಜ್‌ಕುಮಾರ ಅಪಹರಣದ ವಿರುದ್ಧ ಹೋರಾಟಗಳು.
* ಮತಪತ್ರವನ್ನು ತಮಿಳುಭಾಷೆಯಲ್ಲಿ ಮುದ್ರಿಸಬೇಕೆಂಬ ಬೇಡಿಕೆ ವಿರುದ್ಧ ಉಗ್ರ ಪ್ರತಿಭಟನೆ.
* ಕನ್ನಡ ಚಿತ್ರರಂಗದಲ್ಲಿ ರೀಮೇಕ್‌ ಸಂಸ್ಕೃತಿ ವಿರೋಧಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯೆದುರು ಪ್ರತಿಭಟನೆ.
* ಪ್ಲೇವಿನ್‌ ಲಾಟರಿ ಹಾವಾಳಿ ವಿರುದ್ಧ ಯಶಸ್ವಿ ಪ್ರತಿಭಟನೆ.
* ರಾಷ್ಟ್ರದ್ರೋಹಿ ನೆಡುಮಾರನ್‌ಗೆ ಬೆಂಗಳೂರಿನಲ್ಲಿ ಸನ್ಮಾನದ ವಿರುದ್ಧ ಯಶಸ್ವಿ ಪ್ರತಿಭಟನೆ.
* ಬಾಗೇಪಲ್ಲಿಯ ಚಿತ್ರಾವತಿ ಅಣೆಕಟ್ಟೆ ವಿಷಯದಲ್ಲಿ ಆಂಧ್ರದ ಪಿತೂರಿ ವಿರೋಧಿಸಿ ಬೆಂಗಳೂರಿನಿಂದ ಚಿತ್ರಾವತಿವರೆಗೂ ಪಾದಯಾತ್ರೆ.
* ಕನ್ನಡ ವಿರೋಧಿ ನಿರ್ಣಯ ಕೈಗೊಂಡ ಬೆಳಗಾವಿ ಮೇಯರ್‌ಗೆ ಮಸಿ ಬಳಿದು ಪ್ರತಿಭಟನೆ.
* ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವ ಇನ್ಫೋಸಿಸ್‌ ಸಂಸ್ಥೆ ವಿರುದ್ಧ ಪ್ರತಿಭಟನೆ.
* ಎಫ್‌.ಎಂ ರೇಡಿಯೋ ವಾಹಿನಿಗಳ ಕನ್ನಡ ವಿರೋಧಿ ನೀತಿ ವಿರುದ್ಧ ಪ್ರತಿಭಟನೆ.

ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಗಳಿಗಷ್ಟೇ ತನ್ನ ಚಟುವಟಿಕೆಗಳನ್ನು ಸೀಮಿತಗೊಳಿಸಿಕೊಂಡಿಲ್ಲ. ಅನೇಕ ಸಾಂಸ್ಕೃತಿಕ ಚಟುವಟಿಕೆಗಳನ್ನೂ ಹಾಗೂ ಸಮಾಜಸೇವಾ ಕಾರ್ಯಗಳನ್ನೂ ನಡೆಸುತ್ತಿದೆ. ಕುವೆಂಪು ಜನ್ಮಶತಮಾನೋತ್ಸವ ಸಮಾರಂಭವನ್ನು ನಡೆಸಿ, ಉಚಿತ ಸಾಮೂಹಿಕ ವಿವಾಹ ಏರ್ಪಡಿಸಿ ರಾಷ್ಟ್ರಕವಿ ಕುವೆಂಪು ಅವರಿಗೆ ಗೌರವ ಸಲ್ಲಿಸಿದೆ.

ಅಂಧರ ಆಶ್ರಮದ ಬಡ ಅಂಧಮಕ್ಕಳಿಗೆ ಸಹಾಯಹಸ್ತ , ಬಡ ಅಂಗವಿಕಲರಿಗೆ ಗಾಲಿ ಕುರ್ಚಿ ವಿತರಣೆ ಕಾರ್ಯಕ್ರಮ ನಡೆಸುತ್ತಿದೆ. ಪ್ರತಿವರ್ಷ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕನ್ನಡ ಸ್ವಾಭಿಮಾನಿ ಸಮಾವೇಶ ನಡೆಸುತ್ತಿದೆ. ಆ ಮೂಲಕ ಕನ್ನಡ ಕೈಂಕರ್ಯವನ್ನು ಸಲ್ಲಿಸುತ್ತಿದೆ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಕನ್ನಡ ಸಂಘಟನೆಗಳ ಪ್ರತಿಭಟನೆಗಳು ಕೆಂಪೇಗೌಡ ರಸ್ತೆಯ ಮೈಸೂರು ಬ್ಯಾಂಕ್‌ ವೃತ್ತಕ್ಕೆ ಸೀಮಿತವಾಗಿರುತ್ತವೆ. ಆದರೆ ಕರ್ನಾಟಕ ರಕ್ಷಣಾ ವೇದಿಕೆ ತನ್ನ ನಾಲ್ಕನೇ ರಾಜ್ಯಮಟ್ಟದ ಸ್ವಾಭಿಮಾನಿ ಕನ್ನಡಿಗರ ಜಾಥಾವನ್ನು ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆ ಹಾಗೂ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ರಸ್ತೆಯಲ್ಲಿ ನಡೆಸಿ ಅಲ್ಲಿನ ಪರಭಾಷಿಕರಿಗೆ ಕನ್ನಡ ಸಂಸ್ಕೃತಿಯ ಪರಿಚಯ ಹಾಗೂ ಕನ್ನಡಿಗರ ಬಲ ಪ್ರದರ್ಶನವನ್ನೂ ಮಾಡಿಸಿತು!

ಮೊನ್ನೆ ಭಾನುವಾರ 2006 ಆಗಸ್ಟ್‌ 20ರಂದು ಗಡಿಜಿಲ್ಲೆಯಾದ ಬಳ್ಳಾರಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಐದನೇ ಸ್ವಾಭಿಮಾನಿ ಕನ್ನಡಿಗರ ಸಮಾವೇಶ ಬಹಳ ಅದ್ಧೂರಿಯಾಗಿ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ಕರ್ನಾಟಕ ರಕ್ಷಣಾ ವೇದಿಕೆಯ ಲಕ್ಷಾಂತರ ಕಾರ್ಯಕರ್ತರು ಪಾಲ್ಗೊಂಡಿದ್ದರು. ಬಳ್ಳಾರಿಯ ಪ್ರಮುಖ ಬೀದಿಗಳಲ್ಲಿ ವಿವಿಧ ಜಾನಪದ ತಂಡಗಳೊಂದಿಗೆ ವೈಭವದ ಸಾಂಸ್ಕೃತಿಕ ಜಾಥಾ ನಡೆಯಿತು. ಬೆಳಗಾವಿಯ ಮೊಟ್ಟಮೊದಲ ಕನ್ನಡಿಗ ಮಹಾಪೌರರಾಗಿದ್ದ ಕನ್ನಡ ಹೋರಾಟಗಾರ ಸಿದ್ಧನಗೌಡ ಪಾಟೀಲರಿಗೆ ಸ್ವಾಭಿಮಾನಿ ಕನ್ನಡಿಗ ಬಿರಿದು ನೀಡಿ ವೇದಿಕೆ ಗೌರವಿಸಿತು.

ಹೀಗೆ ಒಂದು ದೃಢ ಸಿದ್ಧಾಂತದೊಂದಿಗೆ ಜನ್ಮ ತಳೆದಿರುವ ಕರ್ನಾಟಕ ರಕ್ಷಣಾ ವೇದಿಕೆ ಕೆಲವೇ ವರ್ಷಗಳ ಅವಧಿಯಲ್ಲಿ ಕರ್ನಾಟಕದ ಒಂದು ಬೃಹತ್‌ ಸಂಘಟನೆಯಾಗಿ ಬೆಳೆದಿದೆ. ಕನ್ನಡ ಸಂಘಟನೆಯೆಂದರೆ ಅದು ಬೆಂಗಳೂರು, ಮೈಸೂರಿಗಷ್ಟೇ ಸೀಮಿತ, ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಬೆಂಗಳೂರು ಮಂದಿ ಸ್ಪಂದಿಸುವುದಿಲ್ಲ ಎಂಬ ಭಾವನೆ ಅನೇಕರಲ್ಲಿದೆ. ಆ ಭಾವನೆಯನ್ನು ಹೋಗಲಾಡಿಸಿದ ಕೀರ್ತಿ ಕರ್ನಾಟಕ ರಕ್ಷಣಾ ವೇದಿಕೆಗೇ ಸಲ್ಲಬೇಕು.

ಮಹಾಜನ್‌ ವರದಿ ಪ್ರಕಾರ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂದು ನಿರ್ಧಾರವಾಗಿ ಅನೇಕ ವರ್ಷಗಳೇ ಆಗಿವೆ. ಬೆಳಗಾವಿಯ ಮರಾಠಿಗರಲ್ಲಿ ಗಡಿ ವಿವಾದದ ವಿಷಬೀಜವನ್ನು ನೆಟ್ಟು ತಮ್ಮ ರಾಜಕೀಯು ಬೇಳೆ ಬೇಯಿಸಿಕೊಳ್ಳಲು ವಿನಾಕಾರಣ ಮಹಾರಾಷ್ಟ್ರ ಏಕೀಕರಣ ಸಮಿತಿ ಯತ್ನಿಸುತ್ತಿದೆ. ಅದರ ಕುತಂತ್ರದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದೆ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಕರ್ನಾಟಕ ವಿರೋಧಿ ನಿರ್ಣಯ ಕೈಗೊಂಡ ಬೆಳಗಾವಿ ನಗರದ ಮಹಾಪೌರ, ಮಹಾರಾಷ್ಟ್ರ ಏಕೀಕರಣ ಸಮಿತಿಯ ಮೋರೆಯ ಮೋರೆಗೆ ವೇದಿಕೆಯ ಕಾರ್ಯಕರ್ತರು ಮಸಿಬಳಿದು ತಮ್ಮ ಸಿಟ್ಟನ್ನು ಪ್ರದರ್ಶಿಸಿದ್ದಾರೆ.

ಬೆಳಗಾವಿಯ ವೇದಿಕೆ ಶಾಖೆಯ ಕಾರ್ಯಕರ್ತರೊಂದಿಗೆ, ಬೆಂಗಳೂರು ಹಾಗೂ ಇತರ ಜಿಲ್ಲೆಗಳಿಂದ ಬಂದ ಸಾವಿರಾರು ಕಾರ್ಯಕರ್ತರು ಸೇರಿ ಬೆಳಗಾವಿ ನಗರದಲ್ಲಿ ಇತ್ತೀಚೆಗೆ ನಾರಾಯಣಗೌಡರ ನೇತೃತ್ವದಲ್ಲಿ ಬೃಹತ್‌ ರ್ಯಾಲಿ ನಡೆಸಿ ಬೆಳಗಾವಿ ಕನ್ನಡಿಗರಲ್ಲಿ ಧೈರ್ಯ ತುಂಬಿದ್ದಾರೆ. ಬೆಂಗಳೂರಿನ ಕನ್ನಡ ಸಂಘಟನೆಯೊಂದು ತಮ್ಮ ಜಿಲ್ಲೆಯ ಒಳಿತಿಗಾಗಿ ಹೋರಾಡಿದ್ದು ಬೆಳಗಾವಿಯ ಕನ್ನಡಿಗರಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಮೇಲೆ ಅಭಿಮಾನ ಮೂಡಿಸಿದೆ.

ಇದಕ್ಕೂ ಮುಂಚೆ ಕೃಷ್ಣಾ ನದಿಯ ಆಲಮಟ್ಟಿ ಅಣೆಕಟ್ಟೆ ವಿವಾದದಲ್ಲಿ ಆಂಧ್ರದ ವಿರುದ್ಧ ಹಾಗೂ ಹುಬ್ಬಳ್ಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಒತ್ತಾಯಿಸಿ ವೇದಿಕೆ ಹೋರಾಟ ನಡೆಸಿತ್ತು. ಹೀಗೆ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸ್ಪಂದಿಸಿದ ಕರ್ನಾಟಕ ರಕ್ಷಣಾ ವೇದಿಕೆ ಅಲ್ಲಿಯ ಸ್ಥಳೀಯ ಕಾರ್ಯಕರ್ತರನ್ನು ಹುರಿದುಂಬಿಸಿ ನಿಮ್ಮ ಜೊತೆ ನಾವಿದ್ದೇವೆಂದು ಧೈರ್ಯತುಂಬಿ ತನ್ನ ಪ್ರಭಾವವನ್ನು ಕರ್ನಾಟಕದ ಉತ್ತರದ ಜಿಲ್ಲೆಗಳಲ್ಲೂ ಪಸರಿಸಿಕೊಂಡಿದೆ.

ಕರ್ನಾಟಕ ರಾಜ್ಯಾದ್ಯಂತ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ತನ್ನ ಶಾಖೆಗಳನ್ನು ವಿಸ್ತರಿಸಿಕೊಂಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಕೊಡಗು, ದಕ್ಷಿಣಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ರಾಯಚೂರು, ಕೊಪ್ಪಳ, ಗದಗ, ಧಾರವಾಡ, ಹಾವೇರಿ, ವಿಜಾಪುರ, ಬೀದರ್‌, ಬೆಳಗಾವಿ, ಕಲ್ಬುರ್ಗಿಗಳಲ್ಲಿ ವೇದಿಕೆಯು ಶಾಖೆಗಳು ಸ್ಥಳೀಯ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೆ ನ್ಯಾಯ ದೊರಕಿಸಲು ಪ್ರಾಮಾಣಿಕ ಹೋರಾಟ ನಡೆಸುತ್ತಿದೆ.

ಸಮಸ್ತ ಕನ್ನಡಿಗರ ಆಶಾಕಿರಣವಾಗಿ ವೇದಿಕೆ ಬೆಳೆದಿರುವುದು, ಬೆಳೆಯುತ್ತಿರುವುದು ಶ್ಲಾಘನೀಯ ವಿಚಾರ. ವೇದಿಕೆ ರಾಜ್ಯದ ಹಿತಕಾಯುವ ಬಲಿಷ್ಠ ಪ್ರಾದೇಶಿಕ ಪಕ್ಷವಾಗಿ ರೂಪುಗೊಳ್ಳಲಿ.. ಕನ್ನಡ ಧ್ವಜವನ್ನು ಇನ್ನಷ್ಟು ಎತ್ತರದಲ್ಲಿ ಎತ್ತಿ ಹಿಡಿಯಲಿ.. ಇದು ಎಲ್ಲರ ಆಶಯ.ವೇದಿಕೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X