• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೆಸರು ಪುರಾಣ

By Staff
|
Sampige Srinivas ಸಂಪಿಗೆ ಶ್ರೀನಿವಾಸ, ಬೆಂಗಳೂರು
‘ಹೆಸರಲ್ಲೇನಿದೆ?’ ಎಂದು ಬಹಳ ಜನ ಕೇಳುತ್ತಾರೆ. ಹೆಸರಿನಲ್ಲಿ ಏನೆಲ್ಲಾ ಇದೆ ಎಂದು ತಿಳಿದುಕೊಳ್ಳೋಣ ಬನ್ನಿ. ಹಿಂದೆ ಹೆಸರುಗಳು ವಿಭಿನ್ನವಾಗಿ, ಅರ್ಥಪೂರ್ಣವಾಗಿರುತಿದ್ದವು. ಇಂದಿನ ಜನರ ಹೆಸರುಗಳಲ್ಲಿ ಏನೂ ವಿಶೇಷ ಇಲ್ಲ ಬಿಡಿ. ಗಂಡಾದರೆ ಸಾಮಾನ್ಯವಾಗಿ ವಿಷ್ಣು ಸಹಸ್ರನಾಮದಲ್ಲಿರುವ ಹೆಸರೋ ಇಲ್ಲಾ ಶಿವ ಸಹಸ್ರನಾಮದಲ್ಲಿರುವ ಹೆಸರೋ ಅಥವಾ ಬೇರೇ ಗಂಡು ದೇವರುಗಳ ಹೆಸರೋ ಇರುತ್ತದೆ. ಹೆಣ್ಣಾದರೆ ಲಕ್ಷಿ, ಸರಸ್ವತಿ, ಪಾರ್ವತಿಯರ ಅಷ್ಟೋತ್ತರದಲ್ಲಿರುವ ಹೆಸರೋ ಅಥವಾ ನದಿಗಳ ಹೆಸರೋ ಇರುತ್ತದೆ.

ಈಗೀಗ ಯಾರು ಇಟ್ಟಿರದ ಹೆಸರನ್ನಿಡಬೇಕೆಂದು ಋತುಗಳ ಹೆಸರುಗಳನ್ನು(ಗ್ರೀಷ್ಮ, ವಸಂತ, ಚೈತ್ರ ಇತ್ಯಾದಿ) ಹಾಗೂ ಜನ್ಮನಕ್ಷತ್ರಗಳ ಹೆಸರುಗಳನ್ನು ಮತ್ತು ತಮ್ಮ ಗೋತ್ರದ(ವಿಶ್ವಾಮಿತ್ರ, ಭಾರದ್ವಾಜ, ವಶಿಷ್ಠ ಇತ್ಯಾದಿ) ಹೆಸರನ್ನೂ ಇಡುತ್ತಿದ್ದಾರೆ.

ಹಿಂದೆ ನಮ್ಮ ಪೂರ್ವಜರು ಹೆಸರಿಡುವಲ್ಲೂ, ತಮ್ಮ ಸೃಜನಶೀಲತೆಯನ್ನು, ಬುದ್ಧಿವಂತಿಕೆಯನ್ನು ತೋರಿಸಿದ್ದರು. ದ್ರೋಣ, ಪಾರ್ಥ(ಅರ್ಜುನ), ಕರ್ಣ, ಘಟೋತ್ಕಚ, ಸರ್ವಧಮನ(ಭರತ), ಬಬ್ರುವಾಹನ, ಪರೀಕ್ಷಿತ, ಕುಂತಿ, ಗಾಂಧಾರಿ ಮುಂತಾದವು ಒಂದೊಂದೂ ವಿಶಿಷ್ಟವಾದ ಅರ್ಥಪೂರ್ಣವಾದ ಹೆಸರುಗಳು ಅಲ್ಲವೇ? ದ್ರೋಣ ಎಂದರೆ ಮಣ್ಣಿನ ಮಡಕೆ. ಮಡಕೆಯಲ್ಲಿ ಜನಿಸಿದ್ದಕ್ಕೆ ದ್ರೋಣ ಎಂದು ಹೆಸರಾಯಿತು. ಹಾಗೇ ಘಟೋತ್ಕಚನು ಹುಟ್ಟಿದಾಗ ಅವನ ತಲೆ ದೊಡ್ಡ ಘಟದ ಹಾಗಿತ್ತಂತೆ. ಅದಕ್ಕೆ ಅವನಿಗೆ ಘಟೋತ್ಕಚ ಎಂದು ಹೆಸರಿಟ್ಟರು.

ಇನ್ನು ಪೃಥೆಯ ಮಗ ಪಾರ್ಥನಾದ, ಹುಟ್ಟಿದಾಗಲೇ ಕರ್ಣಕುಂಡಲಗಳನ್ನು ಹೊಂದಿದ್ದರಿಂದ ಕರ್ಣ ಎಂಬ ಹೆಸರಾಯಿತು, ಅತ್ಯಂತ ಧೈರ್ಯಶಾಲಿಯಾಗಿ ಸರ್ವರನ್ನು ಧಮನ ಮಾಡಲು ಶಕ್ತನಾದ ಶಾಂಕುಂತಲೆಯ ಮಗ ಸರ್ವಧಮನನಾದ, ಪಾಂಡವರ ಕುಲವೇ ಪರೀಕ್ಷಿತವಾಗುತ್ತಿದ್ದ ಅಂದರೆ ನಾಶವಾಗುತ್ತಿದ್ದ ಸಮಯದಲ್ಲಿ ಹುಟ್ಟಿದ ಅಭಿಮನ್ಯುವಿನ ಮಗನಿಗೆ ಪರೀಕ್ಷಿತನೆಂದು ಹೆಸರಿಟ್ಟರು, ಕುಂತಿಭೋಜ ರಾಜನ ಮಗಳಿಗೆ ಕುಂತಿ ಎಂದು ಹೆಸರಿಟ್ಟರು, ಗಾಂಧಾರ ದೇಶದ ರಾಜನ ಮಗಳಿಗೆ ಗಾಂಧಾರಿ ಎಂದು ಹೆಸರಾಯಿತು. ಅರ್ಜುನ/ಚಿತ್ರಾಂಗದೆಯ ಮಗನಿಗೆ ರಾಜಪುರೋಹಿತರು ಬಬ್ರುವಾಹನ ಎಂದು ವಿಶಿಷ್ಟವಾದ ನಾಮಕರಣ ಮಾಡಿದರು. ಹೀಗೆ ನಮ್ಮ ಪೂರ್ವಜರ ಹೆಸರುಗಳು ಅಧ್ಯಯನಕ್ಕೆ ಯೋಗ್ಯವಾಗಿವೆ.

ಆದರೆ ಇಂದಿನಕಾಲದಲ್ಲಿ ನಾವು ಹೆಸರಿಡುವುದಕ್ಕೆ ನಮ್ಮ ಪೂರ್ವಜರಷ್ಟು ಬುದ್ಧಿವಂತಿಕೆ ತೋರುತ್ತಿಲ್ಲ. ಮಗು ಹುಟ್ಟಿದಾಗ ತಂದೆ ತಾಯಂದಿರು ಅದಕ್ಕೆ ಹೆಸರಿಡಲು ಮಗು ಹುಟ್ಟುವ ಮುಂಚೆಯೇ ತಮ್ಮ ಆರಾಧ್ಯ ದೇವರುಗಳ ಹೆಸರನ್ನು ಇಡಲು ನಿರ್ಧರಿಸಿರುತ್ತಾರೆ. ದೇವರ ಹೆಸರುಗಳನ್ನು ಸಾಮಾನ್ಯ ಮನುಷ್ಯರಿಗೆ ಇಡುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ಚರ್ಚಾಸ್ಪದ ವಿಷಯ.

ನಮ್ಮ ಹಿರಿಯರು ಹೇಳುವಂತೆ ತಮ್ಮ ಮಕ್ಕಳಿಗೆ ದೇವರ ಹೆಸರನ್ನು ಇಡುವುದರಿಂದ ದೇವರ ನಾಮಸ್ಮರಣೆಯನ್ನು ಮಾಡಿದಂತಾಗುತ್ತದೆ. ಅದರಲ್ಲೂ ತಮ್ಮ ಕೊನೆಗಾಲದಲ್ಲಿ ಮರಣಶಯ್ಯೆಯಲ್ಲಿರುವಾಗ ದೇವರ ಹೆಸರಿರುವ ತಮ್ಮ ಮಕ್ಕಳನ್ನು ಕರೆವಾಗ ದೇವರ ನಾಮ ಸ್ಮರಿಸುವುದರಿಂದ ಇಹಲೋಕವನ್ನು ತೊರೆದಮೇಲೆ ಆ ದೇವರ ಸಾನಿಧ್ಯವನ್ನು ಸೇರುತ್ತೇವೆ ಎನ್ನುವ ಅಚಲವಾದ ನಂಬಿಕೆ ನಮ್ಮಲ್ಲಿದೆ. ಆದಕಾರಣ ಹೆಚ್ಚಾಗಿ ದೇವರುಗಳ ಹೆಸರನ್ನು ನಾವು ನೋಡಬಹುದು. ಆದರೆ ದೇವರ ಹೆಸರನ್ನು ಇಟ್ಟರೆ ಆ ಮನುಷ್ಯ ದೇವರಾಗಿ ಬಿಡುವುದಿಲ್ಲ ಅಲ್ಲವೇ! ಮನುಷ್ಯರಿಗೆ ದೇವರುಗಳ ಹೆಸರನ್ನಿಡುವುದು ಒಂದು ರೀತಿಯ ಮುಜುಗರದ ಸನ್ನಿವೇಶಕ್ಕೂ ಎಡೆ ಮಾಡಿಕೊಡುತ್ತದೆ. ಉದಾಹರಣೆಗೆ ಕೃಷ್ಣ ಎಂದು ಹೆಸರಿರುವನೊಬ್ಬ ಕಳ್ಳತನ ಮಾಡುತ್ತಾನೆ ಅಥವಾ ಕೊಲೆಯನ್ನೇ ಮಾಡುತ್ತಾನೆ. ಆಗ ಅವನನ್ನು ಬಯ್ಯುವಾಗ ದೇವರ ಹೆಸರಾದ ಕೃಷ್ಣನಿಗೆ ಎಲ್ಲರ ಬೈಗುಳ ಸಲ್ಲುತ್ತದೆ.

ಕೆಲವು ಬಾರಿ ದೇವರ ಹೆಸರಿಟ್ಟುಕೊಂಡಿರುವವನಿಗೆ ಕೆಟ್ಟ ಭಾಷೆಯ ಬೈಗುಳಗಳನ್ನು ನಾವು ಕೇಳುತ್ತೇವೆ. ಆ ವೆಂಕಟೇಶ ಒಬ್ಬ ಕುಡುಕ, ಆ ಮಂಜುನಾಥ ಬಲು ಮೋಸಗಾರ, ಅವಳು ಮಿಟಕಲಾಡಿ ಮೀನಾಕ್ಷಿ ಮುಂತಾದ ಬೈಗುಳಗಳೂ ಸಾಮಾನ್ಯ. ವಿದ್ಯಾ ಎಂದು ಹೆಸರಿರುವ ಹೆಣ್ಣಿಗೆ ವಿದ್ಯೆಯೇ ತಲೆಗೆ ಹತ್ತುವುದಿಲ್ಲ. ಲಕ್ಷ್ಮಿ ಎಂದು ಹೆಸರಿರುವ ಹೆಣ್ಣು ಕಡುಬಡತನದಲ್ಲಿರುತ್ತಾಳೆ. ತ್ರಿಪುರಸುಂದರಿ ಎಂದು ಹೆಸರಿರುವ ಹೆಣ್ಣು ಅತಿ ಕುರೂಪಿಯಾಗಿರುತ್ತಾಳೆ. ಈ ರೀತಿಯಲ್ಲಿ ಮನುಷ್ಯರಿಗೆ ದೇವರ ಹೆಸರನ್ನಿಡುವುದು ಅನರ್ಥಕ್ಕೆ ಎಡೆಮಾಡಿಕೊಟ್ಟಿರುವ ಉದಾಹರಣೆಗಳು ಇಲ್ಲದಿಲ್ಲ. ‘ದುಡ್ಡಿಲ್ಲ, ಕಾಸಿಲ್ಲ ಸಂಪತ್ತೈಂಗಾರಿ!’ ಎನ್ನುವ ಗಾದೆಯೇ ಇದೆ ಅಲ್ಲವೆ. ನಮ್ಮ ಪೂರ್ವಜರು ನಮಗಿಂತ ಹೆಚ್ಚು ಬುದ್ಧಿಶಾಲಿಗಳಾಗಿದ್ದರು ಎನ್ನಲು ಅರ್ಥಪೂರ್ಣ ಹೆಸರಿಡುವಲ್ಲಿನ ಅವರ ಚಾಣಾಕ್ಷತೆಯೇ ಸಾಕ್ಷಿ.

ಮಕ್ಕಳಿಗೆ ಹೆಸರಿಡುವಾಗ ಒಳ್ಳೆಯಗುಣದ ರಾಮ, ಲಕ್ಷ್ಮಣ, ಕೌಸಲ್ಯ, ಸುಮಿತ್ರಾ ಮುಂತಾದವರ ಹೆಸರುಗಳನ್ನಿಡುವುದು ಸಾಮಾನ್ಯ. ಆದರೆ ಕೆಟ್ಟಗುಣದ ಕೈಕೇಯಿ, ಮಂಥರೆಯರ ಹೆಸರನ್ನಿಟ್ಟಿರುವುದು ನನಗೆ ಕಂಡುಬಂದಿಲ್ಲ. ಆದರೆ ಇದಕ್ಕೊಂದು ಅಪವಾದವಿದೆ. ನಮ್ಮ ಹಿರಿಯ ಸಾಹಿತಿ ಪತ್ರಕರ್ತರಾದ ದಿವಂಗತ ಲಂಕೇಶರ ಹೆಸರು ರಾಮಾಯಣದ ದಾನವ ರಾವಣನದು! ಇನ್ನು ಅವರ ಮಗ ಖ್ಯಾತ ಚಿತ್ರನಿರ್ದೇಶಕರ ಹೆಸರು ರಾವಣನ ಮಗನಾದ ಇಂದ್ರಜಿತ್‌ನದು! ಸದ್ಯ ಕಂಸ ಎಂದೋ, ಶಕುನಿ ಎಂದೋ, ದುರ್ಯೋದನ, ದು:ಶಾಸನ ಅಥವಾ ಕೀಚಕ ಎಂದೋ ತಮ್ಮ ಮಕ್ಕಳಿಗೆ ಯಾರು ಹೆಸರಿಟ್ಟಿಲ್ಲ. ಆದರೆ ಮುಂದಿನ ದಿನಗಳಲ್ಲಿ ಹೆಸರುಗಳು ವಿಶಿಷ್ಟವಾಗಿರಲಿ ಎಂದು ಇಂತಹ ಹೆಸರುಗಳನ್ನೂ ಇಡುವ ಕಾಲ ಬರಬಹುದು !

ಈಗ ಹೆಸರಿನ ಮತ್ತೊಂದು ಆಯಾಮವನ್ನು ನೋಡೋಣ ಬನ್ನಿ. ಸಾಮಾನ್ಯವಾಗಿ ಬೆಂಗಳೂರು, ಮೈಸೂರಿನ ಕಡೆಯವರು ತಮ್ಮ ಹೆಸರಿನ ಜೊತೆ ಇನಿಶಿಯಲ್ಸ್‌ ಇರಲಿ ಎಂದು ತಮ್ಮ ಊರಿನ ಹೆಸರನ್ನು, ತಂದೆಯವರ ಹೆಸರನ್ನು ಇಟ್ಟುಕೊಳ್ಳುವುದು ರೂಡಿ. ಇದು ಎಷ್ಟು ತೊಂದರೆ ಕೊಡುತ್ತದೆ ಎಂದು ನಾವು ಪಾಸ್‌ಪೋರ್ಟಗಾಗಿ ಅರ್ಜಿ ತುಂಬಿಸುವಾಗ ಗೊತ್ತಾಗುತ್ತದೆ. ಉದಾಹರಣೆಗೆ ನನ್ನ ಹೆಸರನ್ನು ಪಾಸ್‌ಪೋರ್ಟ್‌ ಅರ್ಜಿಯಲ್ಲಿ ತುಂಬಿಸಿದಾಗ ಇನಿಶಿಯಲ್ಸ್‌ಗಳನ್ನು ವಿಸ್ತರಿಸಿ ಬರೆಯಬೇಕಾಯಿತು. ನನ್ನ ಹೆಸರು ಕ.ಪು.ಸಂಪಿಗೆ ಶ್ರೀನಿವಾಸ. ಇದನ್ನು ವಿಸ್ತರಿಸಿದರೆ ಕಡಬ ಪುಂಡರಿಕಾಕ್ಷ ಸಂಪಿಗೆ ಶ್ರೀನಿವಾಸ ಎಂದು ರೈಲುಬಂಡಿಯ ಹಾಗೆ ಉದ್ದವಾಗುತ್ತದೆ. ಇದರಲ್ಲಿ ಮೊದಲ ಹೆಸರು ಯಾವುದು ಕೊನೆಯ ಹೆಸರು ಯಾವುದು ಎನ್ನುವ ಗೊಂದಲವಾಯಿತು.

ಅರ್ಜಿಯಲ್ಲಿನ ನಿಯಮದಂತೆ ಮೊದಲ ಹೆಸರು -ಕಡಬ ಪುಂಡರೀಕಾಕ್ಷ ಎಂದೂ ಕೊನೆಯ ಹೆಸರು -ಸಂಪಿಗೆ ಶ್ರೀನಿವಾಸ ಎಂದೂ ಬರೆದೆ. ಬೆಂಗಳೂರಿನಿಂದ ಲಂಡನ್‌ಗೆ ಮೊದಲ ಬಾರಿ ಕಾರ್ಯನಿಮಿತ್ತ ಪ್ರಯಾಣ ಬೆಳೆಸಿದಾಗ, ಅಲ್ಲಿನ ವಿಮಾನನಿಲ್ದಾಣದ ತಪಾಸಣಾ ಅಧಿಕಾರಿಗಳು -ಕಡಬ ಪುಂಡರಿಕಾಕ್ಷ ಎಂದು ನನ್ನನ್ನು ಕರೆದಾಗ ನನಗೆ ನಗು ತಡೆಯಲಾಗಲಿಲ್ಲ. ಇದಕ್ಕಿಂತ ಹೆಚ್ಚು ತಮಾಷೆಯೆನಿಸಿದ್ದು ನನ್ನ ಸ್ನೇಹಿತನದ್ದು.

ಅವನ ಹೆಸರು ಬೆಂಗಳೂರು ಸುರೇಶ್‌ ಎಂದು. ಪಾಸ್‌ಪೋರ್ಟನಲ್ಲಿ ಅವನ ಮೊದಲ ಹೆಸರು ಬ್ಯಾಂಗಲೂರ್‌ ಆಗಿತ್ತು. ವಿಮಾನ ನಿಲ್ದಾಣದ ಅಧಿಕಾರಿಗಳು ಅವನನ್ನು Mr. ಬ್ಯಾಂಗಲೂರ್‌ ಎಂದು ಕರೆದಾಗ ನಾವೆಲ್ಲಾ ನಕ್ಕಿದ್ದೇ ನಕ್ಕಿದ್ದು. ಹೆಸರುಗಳು ಹೇಗೆ ತಮಾಷೆಯ ಪ್ರಸಂಗಗಳನ್ನು ಸೃಷ್ಟಿಸುತ್ತೆ ನೋಡಿ. ಇವೆಲ್ಲಾ ಗೊಂದಲಗಳೇ ಬೇಡ ಎಂದು ನನ್ನ ಮಗಳಿಗೆ ಸರಿಯಾಗಿ ಮೊದಲ ಹೆಸರು ಮತ್ತು ಕೊನೆಯ ಹೆಸರನ್ನು ಇಡಬೇಕೆಂದು ನಿರ್ಧರಿಸಿ, -ಸಂಜನ ಸಂಪಿಗೆ ಎಂದು ನಾಮಕರಣ ಮಾಡಿದೆ.

ಮನುಷ್ಯರ ಹೆಸರುಗಳು ಇರಲಿ, ಸಾಕುಪ್ರಾಣಿಗಳಿಗೂ ದೇವರ ಹೆಸರುಗಳನ್ನಿಡುವ ಬುದ್ಧಿವಂತರಿದ್ದಾರೆ ನಮ್ಮಲ್ಲಿ. ರಾಮು, ಕಿಟ್ಟು(ಕೃಷ್ಣ), ನಾಣಿ(ನಾರಾಯಣ) ಇತ್ಯಾದಿ. ಇದು ಒಂದು ರೀತಿ ಪ್ರಾಣಿಗಳಲ್ಲೂ ದೇವರ ರೂಪವನ್ನು ನೋಡುವ ಕೆಲವರ ಒಳ್ಳೆಯ ಗುಣವಿದ್ದರೂ ಇರಬಹುದು.

ಅದೆಲ್ಲಾ ಸರಿ, ಹೆಸರುಗಳನ್ನು ಇಟ್ಟ ಮೇಲೇ ಆ ಹೆಸರಿನಿಂದ ಕರೆಯುತ್ತಾರೆಯೇ? ಇಲ್ಲಾ, ಅದಕ್ಕೆ ಕತ್ತರಿಪ್ರಯೋಗಿಸಿ ಮುದ್ದಾಗಿ ಕರೆಯುವುದು ವಾಡಿಕೆ. ಉದಾಹರಣೆಗೆ ಪರಿಮಳ ಪಮ್ಮಿ, ನಿರ್ಮಲ ನಿಮ್ಮಿ, ಪಾರ್ವತಿ ಪಾತು, ಶ್ರೀನಿವಾಸ ಶ್ರೀನಿ ಅಥವಾ ಸೀನು, ಕೃಷ್ಣ ಕಿಟ್ಟಿ ಆಗುತ್ತಾರೆ. ಇದು ಕೆಲವೊಮ್ಮೆ ಹೇಗೆ ಹಾಸ್ಯದ ಸನ್ನಿವೇಶ ಸೃಷ್ಟಿಸುತ್ತೆ ನೋಡಿ. ಯಾವುದೋ ಹಾಸ್ಯಮೇಳದಲ್ಲಿ ಗಂಗಾವತಿ ಬೀಚಿಯವರು ಪ್ರಸ್ತುತ ಪಡಿಸಿದ ಒಂದು ಪ್ರಸಂಗ. ಮಂದಾಕಿನಿ ಎನ್ನುವ ಹುಡುಗಿಯನ್ನ ಪ್ರೀತಿಯಿಂದ ಮಂದಿ.. ಮಂದಿ.. ಎಂದು ಅವರ ಮನೆಯವರು ಕರೆಯುತ್ತಿದ್ದರಂತೆ. ಅವಳಿಗೆ ಮದುವೆಯಾದಾಗ ಅವಳ ಗಂಡನನ್ನು -ಮಂದಿ ಗಂಡ! ಎಂದರಂತೆ. ಮುಂದೆ ಮಗುವಾದಾಗ ಯಾರೋ ಕೇಳಿದರಂತೆ. -ಇದು ಯಾರ ಮಗು? ಎಂದು. ಆಗ ತಕ್ಷಣ ಉತ್ತರ ಬಂತಂತೆ -ಇದು ಮಂದಿ ಮಗು!

ಇನ್ನು ಕೆಲವರು ಇಟ್ಟಿರುವ ಹೆಸರಿಗೆ ಸಂಬಂಧವಿರದ ಅಮ್ಮು, ಅಪ್ಪು, ಪುಟ್ಟು, ಪುಟ್ಟಿ, ಚಿನ್ನು , ಮರಿ ಮುಂತಾಗಿ ಮುದ್ದಾಗಿ ಕರೆಯುತ್ತಾರೆ. ಈ ಮುದ್ದಿನ ಹೆಸರುಗಳು ಮಕ್ಕಳ, ಸೋದರ-ಸೋದರಿಯರ ಅಥವಾ ಗಂಡ-ಹೆಂಡಿರ ಬಗೆಗಿನ ಪ್ರೀತಿಯನ್ನು, ಮಮತೆಯನ್ನು ತೋರಿಸಲು ಬಹಳ ಸಹಕಾರಿಯಲ್ಲವೇ?

ಕೆಲವು ಹೆಸರುಗಳು ಕೆಲವರಿಗೆ ಬಹಳ ಆಪ್ಯಾಯಮಾನವಾಗುತ್ತವೆ. ಇದಕ್ಕೆ ಆ ಹೆಸರಿನ ಪ್ರಭಾವಕ್ಕಿಂತ ಆ ವ್ಯಕ್ತಿಯ ಮೇಲಿನ ಪ್ರೀತಿಯೇ ಕಾರಣ ಎಂದು ನನ್ನ ಅನಿಸಿಕೆ. ಉದಾಹರಣೆಗೆ ಒಬ್ಬ ಪ್ರೇಮಿಗೆ ತನ್ನ ಪ್ರೇಯಸಿಯ ಹೆಸರಿನ ಮೇಲಿರುವಷ್ಟು ಪ್ರೀತಿ ಆ ಪ್ರೀತಿಯನ್ನು ಅನುಭವಿಸಿದವರಿಗೆ ತಿಳಿಯುತ್ತದೆ ! ಪ್ರೇಯಸಿಯ ಅಥವಾ ಪ್ರಿಯಕರನ ಹೆಸರನ್ನು ಸಿಕ್ಕಿದೆಡೆಯೆಲ್ಲಾ ಬರೆದುಕೊಳ್ಳುವುದು, ಆ ಹೆಸರು ಕೇಳಿದ ತಕ್ಷಣ ರೋಮಾಂಚಿತರಾಗುವುದು, ಕೆಲವು ಸಲ ಇನ್ನೂ ಅತಿರೇಕಕ್ಕೆ ಹೋಗಿ ತನ್ನ ರಕ್ತದಲ್ಲೇ ಪ್ರೇಯಸಿಯ ಅಥವಾ ಪ್ರಿಯಕರನ ಹೆಸರನ್ನು ಬರೆದು ಉಗ್ರ ಪ್ರೀತಿ ತೋರ್ಪಡಿಸುವುದನ್ನು ಕಂಡಿದ್ದೇವೆ.

ಮೈಸೂರು ಮಲ್ಲಿಗೆ ದಾಂಪತ್ಯ ಗೀತೆಗಳ ಖ್ಯಾತಿಯ ಕವಿ ಕೆ.ಎಸ್‌. ನರಸಿಂಹಸ್ವಾಮಿಯವರು ತಮ್ಮ ಪತ್ನಿಯ ಹೆಸರಿನ ಬಗ್ಗೆಯೇ ಒಂದು ಸೊಗಸಾದ ಕವನ ಬರೆದಿರುವುದು, ಪ್ರೀತಿ ಮಾಡುವವರಿಗೆ ತಮ್ಮ ಪ್ರಿಯಕರನ ಅಥವಾ ಪ್ರೇಯಸಿಯ ಹೆಸರಿನ ಮೇಲೇ ಎಷ್ಟು ಒಲುಮೆ ಇರುತ್ತದೆ ಎಂಬುದಕ್ಕೆ ಸಾಕ್ಷಿ.

ಸಿರಿಗೆರೆಯ ನೀರಿನಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು

ಗುಡಿಯ ಗೋಪುರದಲ್ಲಿ ಮೆರೆವ ದೀಪಗಳಲ್ಲಿ ಬೆಳಕಾಗಿ ನಿನ್ನ ಹೆಸರು

ಜೋಯಿಸರ ಹೊಲದೊಳಗೆ ಕುಣಿವ ಕೆಂಗರುವಿನ ಕಣ್ಣಲ್ಲಿ ನಿನ್ನ ಹೆಸರು

ತಾಯಮೊಲೆಯಲ್ಲಿ ಕರು ತುಟಿಇಟ್ಟು ಚೆಲ್ಲಿಸಿದ ಹಾಲಲ್ಲಿ ನಿನ್ನ ಹೆಸರು

ಹೂಬನದ ಬಿಸಿಲಲ್ಲಿ ನರ್ತಿಸುವ ನವಿಲಿನ ದನಿಯಲ್ಲಿ ನಿನ್ನ ಹೆಸರು

ಹೊಂದಾಳೆ ಹೂವಿನಲಿ ಹೊರಟ ಪರಿಮಳದಲ್ಲಿ ಉಯ್ಯಾಲೆ ನಿನ್ನ ಹೆಸರು

ಮರೆತಾಗ ತುಟಿಗೆ ಬಾರದೆ ಮೋಡ ಮರೆಯೊಳಗೆ ಬೆಳ್ದಿಂಗಳೋ ನಿನ್ನ ಹೆಸರು

ನೆನೆದಾಗ ಕಣ್ಣ ಮುಂದೆಲ್ಲಾ ಹುಣ್ಣಿಮೆಯೊಳಗೆ ಹೂಬಾಣ ನಿನ್ನ ಹೆಸರು

ವಾಹ್‌! ಎಷ್ಟು ಸೊಗಸಾಗಿದೆ ಅಲ್ಲವೇ ಹೆಸರಿನ ಬಗ್ಗೆ ನರಸಿಂಹಸ್ವಾಮಿಯವರ ಈ ಕವನ?

ಹೆಸರೆಂದರೆ ಕೀರ್ತಿ ಎಂದು ಮತ್ತೊಂದು ಅರ್ಥ. ಒಳ್ಳೆಯ ಹೆಸರು ಸಂಪಾದಿಸುವುದಕ್ಕಾಗಿ ಯಾರು ತಾನೇ ಇಷ್ಟಪಡುವುದಿಲ್ಲ ಹೇಳಿ. ಹೆಸರಿಗೆ ಎಷ್ಟು ಪ್ರಾಮುಖ್ಯತೆ ಇದೆ ನೋಡಿ.

ಈ ಪುರಾಣವನ್ನು ಓದಿದವರಿಗೆ, ಕೇಳಿದವರಿಗೆ, ಹೇಳಿದವರಿಗೆ ಆ ದೇವರು ಒಳ್ಳೆಯ ಹೆಸರನ್ನು ನೀಡುತ್ತಾನೆ ಎಂಬಲ್ಲಿಗೆ ಈ ‘ಹೆಸರು ಪುರಾಣ’ ಸಮಾಪ್ತಿಯಾಗುತ್ತದೆ!

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more