• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಮಾಯಣದ ಪ್ರತ್ಯಕ್ಷ ಸಾಕ್ಷಿಯಾದ ಶ್ರೀರಾಮಸೇತುವೆ ಉಳಿಯುವುದೇ?

By Staff
|

ರಾಮಾಯಣದ ಪ್ರತ್ಯಕ್ಷ ಸಾಕ್ಷಿಯಾದ ಶ್ರೀರಾಮಸೇತುವೆ ಉಳಿಯುವುದೇ?

ಕೇಂದ್ರ ಮತ್ತು ತಮಿಳುನಾಡು ಸರ್ಕಾರಗಳು ಪರಿಸರವಾದಿಗಳು ಮತ್ತು ವಿಜ್ಞಾನಿಗಳ ಎಚ್ಚರಿಕೆಗಳನ್ನೂ ಕಡೆಗಣಿಸಿ, ಕಾಲುವೆಯಾಂದರ ನಿರ್ಮಾಣ ಯೋಜನೆಯನ್ನು ಮುಂದುವರೆಸಿವೆ. ನಮ್ಮ ಸರ್ಕಾರಗಳಿಗೆ ಭಾರತದ ಐತಿಹಾಸಿಕ ಸ್ಮಾರಕವಾದ ಶ್ರೀರಾಮಸೇತುವೆಯನ್ನು ರಕ್ಷಿಸಬೇಕೆಂದು ಅನಿಸದಿರುವುದು ನೋವಿನ ಸಂಗತಿ.

sampige_srinivas2 ಸಂಪಿಗೆ ಶ್ರೀನಿವಾಸ, ಬೆಂಗಳೂರು
ಶ್ರೀಮದ್ರಾಮಾಯಣದ ಸೀತಾನ್ವೇಷಣೆಯ ಸನ್ನಿವೇಶ. ಹನುಮಂತನು ಸೀತೆಯನ್ನು ಹುಡುಕಲು ನೂರು ಯೋಜನಗಳಷ್ಟು ವಿಸ್ತಿರ್ಣವಾದ ಸಮುದ್ರವನ್ನು ದಾಟಿ ರಾವಣನ ಲಂಕಾಪುರಿಯನ್ನು ಸೇರಿದನು. ಅಲ್ಲಿ ಅಶೋಕವನದಲ್ಲಿ ಸೀತೆಯನ್ನು ಕಂಡು, ಶ್ರೀರಾಮನ ಗುರುತಿನ ಉಂಗುರವನ್ನು ಕೊಟ್ಟನು. ಸೀತಾಮಾತೆಗೆ ರಾಮನ ಸಂದೇಶವನ್ನು ತಿಳಿಸಿ ಸಮಾಧಾನ ಪಡಿಸಿ, ರಾವಣ ಪುತ್ರ ಅಕ್ಷಯಕುಮಾರನನ್ನು ಕೊಂದು ಇಡೀ ಲಂಕಾಪುರಿಯನ್ನೇ ತನ್ನ ಬಾಲದ ಬೆಂಕಿಯಿಂದ ಸುಟ್ಟು ಮತ್ತೆ ಸಾಗರವನ್ನು ದಾಟಿ ಹಿಂತಿರುಗಿ ಶ್ರೀರಾಮನಿಗೆ ಸೀತೆಯನ್ನು ಕಂಡು ಹಿಡಿದ ಪ್ರಿಯವಾರ್ತೆಯನ್ನು ತಿಳಿಸಿದನು. ಸಂತೋಷಭರಿತನಾದ ಶ್ರೀರಾಮನು ರಾವಣನ ಸೆರೆಯಿಂದ ಸೀತೆಯನ್ನು ಬಿಡಿಸಿ ತರಲು ಸುಗ್ರೀವಾದಿ ವಾನರ ಸೈನ್ಯದ ಸಮೇತ ಈಗಿನ ರಾಮೇಶ್ವರದ ಬಳಿಯಿರುವ ಧನುಷ್ಕೋಟಿಯ ಸಮುದ್ರತೀರಕ್ಕೆ ಬಂದನು.

ಎದುರಿಗೆ ವಿಶಾಲವಾದ ಮಹಾಸಾಗರ. ರಾಮನಿಗೆ ಸೀತೆಯನ್ನು ರಾವಣನ ಸೆರೆಯಿಂದ ಬಿಡಿಸಲು ಈ ಮಹಾಸಮುದ್ರವನ್ನು ವಾನರ ಸೈನ್ಯದೊಂದಿಗೆ ಹೇಗೆ ದಾಟಬೇಕೆಂಬ ಚಿಂತೆ ಶುರುವಾಯಿತು. ಆ ಮಹಾಸಮುದ್ರವನ್ನು ದಾಟಲು ಸಹಾಯಮಾಡುವಂತೆ ರಾಮಚಂದ್ರ ಸಮುದ್ರರಾಜನನ್ನೇ ಪ್ರಾರ್ಥಿಸಿದನು. ಮೂರುದಿನ ಪ್ರಾರ್ಥಿಸಿದರೂ ಸಮುದ್ರರಾಜನು ಪ್ರತ್ಯಕ್ಷವಾಗದಿದ್ದಾಗ ಶ್ರೀರಾಮನು ಅತ್ಯಂತ ಕೋಪಾವೇಶದಿಂದ ಸಮುದ್ರವನ್ನೇ ತನ್ನ ಬಾಣಗಳಿಂದ ಇಂಗಿಸುವುದಾಗಿ ಬಿಲ್ಲನೆತ್ತಿದನು. ಆಗ ಭಯದಿಂದ ಸಮುದ್ರರಾಜನು ರಾಮನ ಮುಂದೆ ಪ್ರತ್ಯಕ್ಷನಾಗಿ ಸಮುದ್ರವನ್ನು ದಾಟಲು ಸಾಧ್ಯವಾಗುವಂತೆ ಸಲಹೆ ನೀಡುತ್ತಾನೆ. ವಾನರಸೈನ್ಯದಲ್ಲಿ ವಿಶ್ವಕರ್ಮನ ಮಗನಾದ ನಳನೆಂಬ ವಾನರನನ್ನು ತೋರಿಸಿ, ಆತನು ತನ್ನ ತಂದೆಯಂತೆಯೇ ಅರಮನೆ, ಸೇತುವೆ ಇತ್ಯಾದಿಗಳನ್ನು ಕಟ್ಟುವಲ್ಲಿ ಮಹಾನಿಪುಣ. ಆತನು ತನಗೆ ಸೇತುವೆಯನ್ನು ಕಟ್ಟಲಿ, ಅದನ್ನು ತಾನು ಮುಳುಗದಂತೆ ಧರಿಸುವೆನು ಎಂದು ಹೇಳಿ ಸಮುದ್ರರಾಜನು ಅದೃಶ್ಯನಾದನು.

ನಳನ ಮೇಲ್ವಿಚಾರಣೆಯಲ್ಲಿ ಲಕ್ಷಗಟ್ಟಲೆ ವಾನರವೀರರು ಕಾಡಿಗೆ ಹೋಗಿ ಅನೇಕ ವಿಧವಾದ ಮರಗಳನ್ನು ಕಿತ್ತುತಂದು ಸಮುದ್ರಕ್ಕೆ ತುಂಬಿದರು. ಮಹಾಬಲರಾದ ವಾನರರು ಆನೆಯಗಾತ್ರದ ಕಲ್ಲುಗಳನ್ನು, ಪರ್ವತಗಳನ್ನು ಕಿತ್ತು ಯಂತ್ರಗಳ (ತ್ರೇತಾಯುಗದ ಕಾಲದಲ್ಲೂ ಆಧುನಿಕ ಇಂಜಿನಿಯರ್‌ಗಳಂತೆ ವಾನರರು ಯಂತ್ರಗಳನ್ನು ಉಪಯೋಗಿಸಿದ್ದರೆಂದು ಶ್ರೀಮದ್ವಾಲ್ಮೀಕಿ ಮುನಿಗಳು ಹೇಳಿರುವುದು ಆಶ್ಚರ್ಯಕರವಾದರೂ ಸತ್ಯವಾಗಿದೆ) ಸಹಾಯದಿಂದ ಸಾಗಿಸಿ ಸಮುದ್ರದಲ್ಲಿ ತುಂಬಿದರು. ವಾನರರು ತಂದು ಹಾಕಿದ ಬೃಹತ್‌ ಮರಗಳನ್ನೂ, ಬಂಡೆಗಳನ್ನೂ, ಪರ್ವತಗಳನ್ನೂ ಜೋಡಿಸಿ ನಳನು ಸಾಗರಕ್ಕೆ ಮಹಾಸೇತುವೆಯನ್ನು ಕಟ್ಟಿದನು. ಮೊದಲನೆಯ ದಿವಸ 14 ಯೋಜನ ಉದ್ದದ ಸೇತುವೆಯನ್ನು, ಎರಡನೆಯ ದಿವಸ 20 ಯೋಜನ, ಮೂರನೆಯ ದಿವಸ 21 ಯೋಜನ, ನಾಲ್ಕನೆಯ ದಿವಸ 22 ಯೋಜನ ಮತ್ತು ಐದನೆಯ ದಿವಸ 23 ಯೋಜನ, ಒಟ್ಟು 100 ಯೋಜನ ಉದ್ದದ ಸೇತುವೆಯನ್ನು ರಾಮೇಶ್ವರದಿಂದ ರಾವಣನ ಲಂಕಾಪುರಿಗೆ ವಾನರವೀರರು ಕಟ್ಟಿದರು! ಆಮೇಲೆ ಈ ಸೇತುವೆಯನ್ನು ರಾಮಲಕ್ಷ್ಮಣರು ಸಮಸ್ತ ವಾನರ ಸೈನ್ಯದೊಂದಿಗೆ ದಾಟಿ ರಾವಣನ್ನು ಕೊಂದು ಸೀತೆಯೊಂದಿಗೆ ಅಯೋಧ್ಯೆಗೆ ಹಿಂತಿರುಗುತ್ತಾರೆ, ಇತ್ಯಾದಿ ರಾಮಾಯಣ ಮುಂದುವರೆಯುತ್ತದೆ.

*

ನಿಮಗೆಲ್ಲ ಕುತೂಹಲವಾಗಿರಬಹುದು. ಭಾರತ ದೇಶದ ಮೂಲೆ ಮೂಲೆಯಲ್ಲೂ ಪ್ರತಿಯೊಬ್ಬರೂ ಒಮ್ಮೆಯಾದರೂ ಕೇಳಿರುವ ರಾಮಾಯಣ ಕಥೆಯನ್ನೇಕೆ ನಾನು ಹೇಳುತ್ತಿದ್ದೇನೆ ಎಂದು? ಇದಕ್ಕೆ ಕಾರಣವಿದೆ. ಮುಂದಿನ ಮುಖ್ಯವಾದ ವಿಷಯದ ಬಗ್ಗೆ ನಿಮಗೆಲ್ಲ ತಿಳಿಸುವುದಕ್ಕೆ ಈ ಪೀಠಿಕೆ ಹಾಕಿದ್ದೇನೆ!

ಮೇಲೆ ತಿಳಿಸಿದಂತೆ ತ್ರೇತಾಯುಗದಲ್ಲಿ ಅಂದರೆ ಸುಮಾರು ಹದಿನೇಳು ಲಕ್ಷವರ್ಷಗಳಷ್ಟು ಹಿಂದೆ ನಡೆದ ರಾಮಾಯಣದಲ್ಲಿ ಭಾರತದ ದಕ್ಷಿಣದ ರಾಮೇಶ್ವರ ದ್ವೀಪದಿಂದ ರಾವಣನ ಲಂಕೆಗೆ ವಾನರವೀರರು ಕಟ್ಟಿರುವ ಸೇತುವೆ, ಕಲಿಯುಗದ ಇಂದಿನ ದಿನವೂ ನಮ್ಮ ಕಣ್ಣೆದುರಿಗೇ ಇದೆ ಎಂದರೆ ನಂಬುತ್ತೀರ! ?

ಕೆಲವು ವರ್ಷಗಳ ಹಿಂದೆ ಅಮೆರಿಕದ ‘ನಾಸಾ’ ಬಾಹ್ಯಾಕಾಶ ಸಂಸ್ಥೆಯು ತೆಗೆದ ಉಪಗ್ರಹ ಚಿತ್ರಗಳು ಈ ಸೇತುವೆಯ ಇರುವಿಕೆಯನ್ನು ದೃಢಪಡಿಸಿವೆ. ಕೆಳಗಿನ ಚಿತ್ರಗಳನ್ನು ನೋಡಿ.

ಭಾರತದ ತಮಿಳುನಾಡಿನ ರಾಮೇಶ್ವರ ದ್ವೀಪದಿಂದ ಶ್ರೀಲಂಕಾದ ಮನ್ನಾರ್‌ ದ್ವೀಪದ ನಡುವೆ ಹರಡಿರುವ ಪಾಕ್‌ ಜಲಸಂಧಿಯಲ್ಲಿ ಬಂಡೆಕಲ್ಲುಗಳ ಸೇತುವೆಯೊಂದು(ಬಿಳಿ ಗೆರೆ) ಹಾದು ಹೋಗಿರುವ ದೃಶ್ಯವನ್ನು ನೀವು ಮೇಲಿನ ಚಿತ್ರಗಳಲ್ಲಿ ಕಾಣಬಹುದು. ಶ್ರೀರಾಮನು ಕಟ್ಟಿಸಿದ್ದ ‘ಶ್ರೀರಾಮ ಸೇತುವೆ’ ಅಥವಾ ‘ನಳ ಸೇತುವೆ’ಗೆ ನಾಸಾದವರು ‘ಆಡಮ್ಸ್‌ ಬ್ರಿಡ್ಜ್‌’ ಎಂದು ಹೆಸರಿಟ್ಟಿದ್ದಾರೆ! ಈ ಸೇತುವೆಗೆ ಶ್ರೀರಾಮ ಸೇತುವೆ ಎಂಬ ಹೆಸರನ್ನು ಬದಲಾಯಿಸಿ ಯಾವುದೋ ಆಡಮ್ಸ್‌ ಬ್ರಿಡ್ಜ್‌ ಎಂದು ಕರೆದಿರುವುದು ನಮ್ಮ ಭಾರತ ಸಂಸ್ಕೃತಿಗೆ, ರಾಮನಿಗೆ ಮಾಡಿರುವ ಅಪಚಾರ. ಇದನ್ನು ಎಲ್ಲರೂ ಪ್ರತಿಭಟಿಸಬೇಕಾಗಿದೆ.

ಈ ಸೇತುವೆಯ ಪುರಾತನತೆಯ ಬಗ್ಗೆ ಭಾರತದ ಮತ್ತು ಪಾಶ್ಚಾತ್ಯ ಭೂಗರ್ಭ ತಜ್ಞರು/ವಿಜ್ಞಾನಿಗಳೂ ಸಂಶೋಧನೆ ನಡೆಸಿದ್ದಾರೆ. ಇದು ಮಾನವ ನಿರ್ಮಿತ ಸೇತುವೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆಯಂತೆ. ಆದರೆ ಪಾಶ್ಚಾತ್ಯ ವಿಜ್ಞಾನಿಗಳು ಈ ಸೇತುವೆ ರಾಮಾಯಣ ಕಾಲದ್ದೆಂದು ಇನ್ನೂ ನಂಬಲು ತಯಾರಿಲ್ಲ!

ಯಾರು ನಂಬದಿದ್ದರೇನಂತೆ ಶ್ರೀಮದ್ವಾಲ್ಮೀಕಿ ಮಹರ್ಷಿಗಳು ರಚಿಸಿದ ಶ್ರೀರಾಮಾಯಣ ಮಹಾಕಾವ್ಯವನ್ನು ಇತಿಹಾಸವೆಂದೇ ನಂಬಿರುವ ಭಾರತೀಯ ಆಸ್ತಿಕ ಮನಸುಗಳು ಈ ಸೇತುವೆಯ ಉಪಗ್ರಹ ಚಿತ್ರದ ಪ್ರತ್ಯಕ್ಷ ಸಾಕ್ಷಿ ಕಂಡ ಮೇಲಂತೂ ಈ ಸೇತುವೆಯ ಮೇಲೆ ಮೊದಲಿಗಿಂತ ಹೆಚ್ಚು ಅಭಿಮಾನ ಹೊಂದುತ್ತಿದ್ದಾರೆ.

ಆದರೆ ಅತ್ಯಂತ ದು:ಖದ ವಿಷಯವೆಂದರೆ ನಮ್ಮ ದೇಶದ ಪ್ರಾಚೀನ ವೈಭವಯುತ ಇತಿಹಾಸದ ಪಳೆಯುಳಿಕೆಯಂತಿರುವ ಈ ಸೇತುವೆಯನ್ನು ನಮ್ಮವರೇ ನಾಶಮಾಡಲು ಹೊರಟಿರುವುದು! ಭಾರತ ಮತ್ತು ಶ್ರೀಲಂಕಾ ದ್ವೀಪದ ಮಧ್ಯೆ ಇರುವ ಪಾಕ್‌ ಜಲಸಂಧಿ ಅಷ್ಟೇನು ಆಳವಿಲ್ಲದ ಸಮುದ್ರ ಪ್ರದೇಶ. ಈಗ ಇರುವ ಸೇತುವೆಯ ಭಾಗ ನೀರಿನಲ್ಲಿ ಮುಳುಗಿದ್ದರೂ ಈ ಪ್ರದೇಶದ ಅತ್ಯಂತ ಕಡಿಮೆ ಆಳದ ಪ್ರದೇಶವಾಗಿದೆ.

ಕೆಲವು ದಶಕಗಳ ಹಿಂದೆ ಭಾರತದಿಂದ ಶ್ರೀಲಂಕಾವರೆವಿಗೂ ಈ ಸೇತುವೆಯ ಮೇಲೆ ನಡೆದೆ ಹೋಗುವಷ್ಟು ಸಮುದ್ರದ ಮಟ್ಟ ಕಡಿಮೆ ಇತ್ತಂತೆ! ಇಂತಹ ಪ್ರದೇಶದಲ್ಲಿ ಈಗ ದೊಡ್ಡ ಹಡಗುಗಳು ಹೋಗಲು ಸಾಧ್ಯವಾಗುವಂತೆ, ಸೇತುವೆಯನ್ನು ಒಡೆದು ಕಾಲುವೆ ಕೊರೆಯಲು ಭಾರತ ಸರ್ಕಾರ ತಮಿಳುನಾಡು ಸರ್ಕಾರದ ಸಹಯೋಗದೊಂದಿಗೆ ಯೋಜನೆಯನ್ನು ರೂಪಿಸಿ, ಪರಿಸರವಾದಿಗಳ ಮತ್ತು ನಮ್ಮ ಇತಿಹಾಸದ, ಸಂಸ್ಕೃತಿಯ ಕುರುಹಾದ ಈ ಸೇತುವೆಯನ್ನು ಕಾಪಾಡುವ ಮನಸುಳ್ಳ ಜನರ ಪ್ರತಿಭಟನೆಯ ನಡುವೆಯೂ, ಈ ಯೋಜನೆಗೆ ಚಾಲನೆಯನ್ನು ನೀಡಿದೆ! ಇದಕ್ಕೆ ಅವರು ಕೊಡುವ ಕಾರಣ ಕೆಳಕಂಡಂತಿದೆ.

ಭಾರತದ ಪಶ್ಚಿಮ ತೀರದಿಂದ, ಪೂರ್ವ ತೀರಕ್ಕೆ ಹಡುಗುಗಳು ಸಾಗಬೇಕೆಂದರೆ ಶ್ರೀಲಂಕಾದ್ವೀಪವನ್ನು ಸುತ್ತಿ ಹೋಗಬೇಕು. ಇದು ಬಹಳ ದೂರ ಹಾಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆಯಾದ್ದರಿಂದ, ಭಾರತ ಮತ್ತು ಶ್ರೀಲಂಕಾನಡುವೆ ಕಾಲುವೆ ಕೊರೆದರೆ ಕಡಿಮೆ ಸಮಯದಲ್ಲಿ, ಕನಿಷ್ಠ ದೂರದಲ್ಲಿ ಹಡಗುಗಳು ಪಶ್ಚಿಮದಿಂದ ಪೂರ್ವಕ್ಕೆ ಸಾಗಬಹುದು. ಇದರಲ್ಲಿ ತಮಿಳುನಾಡಿನ ಆಸಕ್ತಿಯ ವಿಷಯವೇನೆಂದರೆ ಅದರ ಪೂರ್ವತೀರದಲ್ಲಿರುವ ತೂತ್ತುಕುಡಿ(ಟ್ಯೂಟಿಕಾರಿನ್‌) ಬಂದರು ಈ ಕಾಲುವೆಯಿಂದ ಹೆಚ್ಚು ಅಭಿವೃದ್ಧಿ ಹೊಂದುತ್ತದೆ ಎಂಬುದೇ ಆಗಿದೆ.

ಈಗ ಶ್ರೀಲಂಕಾದ ಕೊಲಂಬೋ ಬಂದರಿನಲ್ಲಿ ಬಂದಿಳಿಯುವ ವಿದೇಶಿ ಹಡಗುಗಳು ಈ ಕಾಲುವೆ ನಿರ್ಮಾಣವಾದರೆ ತೂತ್ತುಕುಡಿ ಬಂದರಿಗೆ ಬರುವಂತೆ ಆಕರ್ಷಿಸಬಹುದು ಮತ್ತು ಸರಕುಸಾಗಣೆ ವಹಿವಾಟು ಹೆಚ್ಚಿ ಈ ಬಂದರು ತಮಿಳುನಾಡಿಗೆ ಲಾಭದಾಯಕವಾಗುತ್ತದೆ ಎಂದು ಈ ಕಾಲುವೆ ನಿರ್ಮಾಣಕ್ಕೆ ತಮಿಳುನಾಡು ಸರ್ಕಾರ ತುದಿಗಾಲ ಮೇಲೆ ನಿಂತಿದೆ! ತನ್ನ ರಾಜಕೀಯ ಬಲದಿಂದ ಕೇಂದ್ರ ಸರ್ಕಾರವನ್ನು ಒಪ್ಪಿಸುವಲ್ಲಿ ಯಶಸ್ವಿಯೂ ಆಗಿದೆ.

ಆದರೆ ಈ ಕಾಲುವೆಯಿಂದ ಎಲ್ಲಾ ಒಳಿತಾಗುತ್ತದೆ ಎನ್ನುವುದು ಸರಿಯಲ್ಲ ಎಂದು ಪರಿಸರವಾದಿಗಳು ತಕರಾರು ತೆಗೆದಿದ್ದಾರೆ. ಈ ಕಾಲುವೆ ನಿರ್ಮಾಣದಿಂದ ಅಲ್ಲಿನ ಸೂಕ್ಷ್ಮ ಪರಿಸರಕ್ಕೆ ಹಾನಿಯಾಗುತ್ತದೆಯೆಂದೂ, ಸುನಾಮಿಯೇನಾದರು ಸಂಭವಿಸಿದರೆ ಹಿಂದೂಗಳ ಪವಿತ್ರ ತೀರ್ಥಕ್ಷೇತ್ರವಾದ ರಾಮೇಶ್ವರ ಪಟ್ಟಣ ನಾಶವಾಗುತ್ತದೆಯೆಂದೂ ಮತ್ತು ಈ ಪ್ರದೇಶದ ಸಮುದ್ರದ ಮೀನುಗಾರಿಕೆಯ ಮೇಲೂ ಹೊಡೆತ ಬೀಳುತ್ತದೆಯೆಂದೂ ಎಚ್ಚರಿಸಿದ್ದಾರೆ. ಆದರೆ ಕೇಂದ್ರ ಮತ್ತು ತಮಿಳುನಾಡು ಸರ್ಕಾರಗಳು ಈ ಎಲ್ಲಾ ಎಚ್ಚರಿಕೆಗಳನ್ನೂ ಕಡೆಗಣಿಸಿ ಕಾಲುವೆ ನಿರ್ಮಾಣ ಯೋಜನೆಯನ್ನು ಮುಂದುವರೆಸಿವೆ.

ನಮ್ಮ ಸರ್ಕಾರಗಳಿಗೆ ಭಾರತದ ಐತಿಹಾಸಿಕ ಸ್ಮಾರಕವಾದ ಶ್ರೀರಾಮಸೇತುವೆಯನ್ನು ರಕ್ಷಿಸಬೇಕೆಂದು ಅನಿಸದಿರುವುದು ಅತ್ಯಂತ ವಿಷಾದದ ಸಂಗತಿಯಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತದ ಇತಿಹಾಸ, ಸಂಸ್ಕೃತಿಯನ್ನು ಬಿಂಬಿಸುವ, ಆಸ್ತಿಕ ಜನರ ನಂಬಿಕೆಯ ಶ್ರೀರಾಮಸೇತುವೆಯನ್ನು ಉಳಿಸಲು ಶ್ರೀರಾಮಕರ್ಮಭೂಮಿ ಆಂದೋಲನವನ್ನು (http://www.ramkarmabhoomi.blogspot.com/) ಕೆಲವರು ಪ್ರಾರಂಭಿಸಿದ್ದಾರೆ.

ಉತ್ತರದ ಅಯೋಧ್ಯೆಯ ರಾಮಜನ್ಮಭೂಮಿಯಷ್ಟೇ, ದಕ್ಷಿಣದ ರಾಮೇಶ್ವರದ ಶ್ರೀರಾಮಕರ್ಮಭೂಮಿಯೂ ಅತ್ಯಂತ ಪವಿತ್ರವಾಗಿದೆ. ಈ ರಾಮಕರ್ಮಭೂಮಿಯನ್ನು ಉಳಿಸಲು ಎಲ್ಲಾ ರಾಮಭಕ್ತರೂ, ಹಿಂದು ಧರ್ಮದಲ್ಲಿ, ಸನಾತನ ಸಂಸ್ಕೃತಿಯಲ್ಲಿ ನಂಬಿಕೆಯಿಟ್ಟವರೂ, ನಮ್ಮ ದೇಶದ ಪ್ರಾಚೀನ ಐತಿಹಾಸಿಕ ಸ್ಮಾರಕವನ್ನು ರಕ್ಷಿಸಬೇಕೆಂಬ ಮನಸುಳ್ಳವರೂ ಈ ಆಂದೋಲನದಲ್ಲಿ ಭಾಗವಹಿಸಬೇಕಾಗಿದೆ.

ಬನ್ನಿ ಇದರ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸಿ ನಮ್ಮ ಪುರಾತನ ಸಂಸ್ಕೃತಿಯ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿರುವ ಶ್ರೀರಾಮ ಸೇತುವೆಯನ್ನು ರಕ್ಷಿಸೋಣ. ಈ ನಿಟ್ಟಿನಲ್ಲಿ ಶ್ರೀರಾಮಚಂದ್ರ ಮತ್ತು ಶ್ರೀರಾಮೇಶ್ವರರು ನಮ್ಮೆಲ್ಲರನ್ನೂ ಪ್ರೇರೇಪಿಸಲಿ!

ಹೆಚ್ಚಿನ ಮಾಹಿತಿಗೆ

http://www.gauranga.org/ramayana_bridge.htm

http://en.wikipedia.org/wiki/Adams_Bridge

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more