ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆಲುವಯ್ಯನ ಮೇಲುಕೋಟೆ

By Staff
|
Google Oneindia Kannada News

Melkote Cheluva Narayana
ಇತ್ತೀಚೆಗಷ್ಟೆ ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಉತ್ಸವ ಅದ್ಧೂರಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಚೆಲುವನಾರಾಯಣನ ಪುರಾಣ, ಉತ್ಸವದ ವೈಶಿಷ್ಟ್ಯತೆ ಬಗ್ಗೆ ಒಂದಿಷ್ಟು ವಿವರ. ಜೊತೆಗಿಷ್ಟು ನೆನಪುಗಳು.

* ಸಂಪಿಗೆ ಶ್ರೀನಿವಾಸ, ಬೆಂಗಳೂರು

ಮೇಲುಕೋಟೆ ಎಂದಾಕ್ಷಣ ಶ್ರೀ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಉತ್ಸವ ಕಣ್ಣುತುಂಬಿ ಕೊಳ್ಳುತ್ತದೆ. ಮೇಲುಕೋಟೆಯ ಶ್ರೀ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ ಕರ್ನಾಟಕದ ದಕ್ಷಿಣದ ಪ್ರದೇಶದ ಅತ್ಯಂತ ಜನಪ್ರಿಯ ಉತ್ಸವ/ಜಾತ್ರೆಗಳಲ್ಲಿ ಒಂದಾಗಿದೆ. ಈ ವೈರಮುಡಿ ಉತ್ಸವಕ್ಕೆ ಕರ್ನಾಟಕದ ಸಾವಿರಾರು ಭಕ್ತರ ಜೊತೆಗೆ ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದಲೂ ಭಕ್ತರು ಬಂದು ಪಾಲ್ಗೊಳ್ಳುವುದು ವಿಶೇಷ.

ಮೇಲುಕೋಟೆ ಭವ್ಯ ಪುರಾಣೇತಿಹಾಸವನ್ನು ಹೊಂದಿರುವ ಸ್ಥಳ. ಕೃತಯುಗುದಲ್ಲಿ ಇಲ್ಲಿಯೇ ದತ್ತಾತ್ರೇಯಸ್ವಾಮಿಯು ವೇದಗಳನ್ನು ಉಪದೇಶಿಸಿದ್ದರಿಂದ ಇದಕ್ಕೆ ವೇದಾದ್ರಿಯೆಂದೂ ಹೆಸರು.

ತ್ರೇತಾಯುಗದಲ್ಲಿ ಇದು ನಾರಾಯಣಾದ್ರಿಯಾಗಿತ್ತು. ಬ್ರಹ್ಮನು ತನ್ನ ನಿತ್ಯಪೂಜೆಗಾಗಿ ನಾರಾಯಣನ ಅರ್ಚಾವಿಗ್ರಹ ಬೇಕೆಂದು ಕೋರಲು ವಿಷ್ಣುವು ನಾರಾಯಣನ ಸುಂದರ ಮೂರ್ತಿಯನ್ನು ಬ್ರಹ್ಮನಿಗೆ ನೀಡಿದನು. ಅದೇ ಮೂರ್ತಿಯನ್ನು ತನ್ನ ಮಾನಸಪುತ್ರರದ ಸನತ್ಕುಮಾರರಿಗೆ ಅವರ ಭೂಲೋಕ ಯಾತ್ರೆಯ ಸಮಯದಲ್ಲಿ ಪೂಜೆಗೆಂದು ಬ್ರಹ್ಮನು ಕೊಟ್ಟನು. ಸನತ್ಕುಮಾರರು ಆ ಸುಂದರವಾದ ನಾರಾಯಣ ಮೂರ್ತಿಯನ್ನು ಇಂದಿನ ಮೇಲುಕೋಟೆಯಲ್ಲಿ ಪ್ರತಿಷ್ಠಾಪಿಸಿದರು. ಆದ್ದರಿಂದ ಈ ಕ್ಷೇತ್ರಕ್ಕೆ ನಾರಾಯಣಾದ್ರಿಯೆಂದೂ ಹೆಸರಾಯಿತು.

ಪುರಾಣ : ಮೇಲುಕೋಟೆಯ ನಾರಾಯಣನ ಮೂಲ ಮೂರ್ತಿ ಅತಿಸುಂದರವಾಗಿದೆ. ಈ ಕಾರಣದಿಂದಲೇ ದೇವರನ್ನು ಚೆಲುವನಾರಾಯಣನೆಂದು ಕರೆಯುವುದು. ಚೆಲುವಯ್ಯನನ್ನು ನೋಡುತ್ತಿದ್ದರೆ ನೋಡುತ್ತಲೇ ಇರಬೇಕೆನ್ನುವಷ್ಟು ಸುಂದರವಾಗಿದ್ದಾನೆ.

ದ್ವಾಪರಯುಗದಲ್ಲಿ ಶ್ರೀ ಕೃಷ್ಣ ಬಲರಾಮರು ಚೆಲುವನಾರಾಯಣನ ಭಕ್ತರಾಗಿದ್ದು ಇಲ್ಲಿ ಬಂದು ಮೂಲಮೂರ್ತಿಯನ್ನು ಪೂಜಿಸಿದ್ದರೆಂದು ಐತಿಹ್ಯವಿದೆ. ಆದ್ದರಿಂದ ದ್ವಾಪರ ಯುಗದಲ್ಲಿ ಈ ಸ್ಥಳವು ಯಾದವಾದ್ರಿ ಎಂದು ಪ್ರಸಿದ್ಧವಾಗಿತ್ತು. ಕಲಿಯುಗದಲ್ಲಿ ಶ್ರೀ ರಾಮಾನುಜರ ತಪೋಭೂಮಿಯಾಗಿ ಯದುಶೈಲವೆಂದೂ ಹೆಸರಾಗಿದೆ. ಇದು ಸಮುದ್ರಮಟ್ಟದಿಂದ 900 ಮೀಟರ್‌ಗಳಷ್ಟು ಅಂದರೆ ಸುಮಾರು 3000 ಅಡಿಗಳಷ್ಟು ಎತ್ತರವಾದ ಗಿರಿಪ್ರದೇಶ. ಈ ಎತ್ತರವಾದ ಸ್ಥಳದಲ್ಲಿ ಮೈಸೂರಿನ ಒಡೆಯರು ಕೋಟೆಯನ್ನು ನಿರ್ಮಿಸಿದ್ದರಿಂದ ಇದು ಮೇಲುಕೋಟೆಯೆಂದೇ ಜನಪ್ರಿಯವಾಗಿದೆ. ಇಷ್ಟೇ ಅಲ್ಲ ಇದು ದಕ್ಷಿಣಬದರಿ ಎಂದೂ ಪ್ರಸಿದ್ಧ. ಏಕೆಂದರೆ ಮುಖ್ಯ ದೇವಸ್ಥಾನದ ಎದುರಿಗೆ ಒಂದು ಪುರಾತನ ಬದರಿ ವೃಕ್ಷವಿದೆ ಮತ್ತು ಆ ಬದರಿ ವೃಕ್ಷದ ಕೆಳಗೆ ಬದರಿನಾರಾಯಣನ ದೇವಾಲಯವೂ ಇದೆ.

ಹೋಗುವುದು ಹೇಗೆ? : ಮೇಲುಕೋಟೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿದೆ. ಬೆಂಗಳೂರಿನಿಂದ ಇಲ್ಲಿಗೆ ಬರಲು ಎರಡು ಮಾರ್ಗವಿದೆ. ಬೆಂಗಳೂರಿನಿಂದ ಮೈಸೂರು ರಸ್ತೆಯಲ್ಲಿ ಮಂಡ್ಯಕ್ಕೆ ಬಂದು ಅಲ್ಲಿ ಮೇಲುಕೋಟೆಗೆ ಬಲಗಡೆ

ತಿರುವು ತೆಗೆದುಕೊಳ್ಳಬೇಕು. ಮಂಡ್ಯದಿಂದ ಮೇಲುಕೋಟೆ ಸುಮಾರು 40 ಕಿ.ಮಿ. ದೂರವಿದೆ. ಮತ್ತೊಂದು ಮಾರ್ಗ ಹೀಗಿದೆ. ನೆಲಮಂಗಲದಿಂದ ಹಾಸನ ಮಾರ್ಗದಲ್ಲಿ ಪಯಣಿಸಿ ನೆಲ್ಲಿಗೆರೆ ಎಂಬಲ್ಲಿ ನಾಗಮಂಗಲಕ್ಕೆ ಹೋಗುವ ರಸ್ತೆಯಲ್ಲಿ ಎಡಕ್ಕೆ ತಿರುಗಬೇಕು. ನಾಗಮಂಗಲದಿಂದ ಜರಗನಹಳ್ಳಿ ಕ್ರಾಸ್‌ಗೆ ಬಂದು ಅಲ್ಲಿ ಬಲಗಡೆ ತಿರುಗಿ ಐದು ಕಿ.ಮಿ. ಸಾಗಿದರೆ ಮೇಲುಕೋಟೆ ಸಿಗುತ್ತದೆ. ಮೈಸೂರಿನಿಂದ ಬರುವವರು ಶ್ರೀರಂಗಪಟ್ಟಣಕ್ಕೆ ಬಂದು ಅಲ್ಲಿ ಪಾಂಡವಪುರಕ್ಕೆ ಹೋಗುವ ತಿರುವಿನಲ್ಲಿ ಪ್ರಯಾಣಮಾಡಿ ಜರಗನಹಳ್ಳಿ ಕ್ರಾಸ್‌ಗೆ ಬರಬೇಕು.

ಮೇಲುಕೋಟೆಯಲ್ಲಿ ಚೆಲುವನಾರಾಯಣನ ದೇವಸ್ಥಾನ ಮತ್ತು ಬೆಟ್ಟದಮೇಲಿನ ಯೋಗಾನರಸಿಂಹ ಸ್ವಾಮಿಯ ದೇವಸ್ಥಾನ ಯಾತ್ರಿಕರು ವೀಕ್ಷಿಸಬೇಕಾದ ಎರಡು ಪ್ರಮುಖ ದೇವಸ್ಥಾನಗಳಾಗಿವೆ.

ರಾಮಾನುಜರ ನಂಟು : 12ನೇ ಶತಮಾನದಲ್ಲಿ ಮೇಲುಕೋಟೆಗೆ ಬಂದ ಶ್ರೀ ರಾಮಾನುಜಾಚಾರ್ಯರು ಶಿಥಿಲವಾಗಿದ್ದ ಚೆಲುವನಾರಾಯಣ ಸ್ವಾಮಿಯ ದೇವಾಲಯವನ್ನು ಹೊಯ್ಸಳ ವಿಷ್ಣುವರ್ಧನ ಮಹಾರಾಜರ ನೆರವಿನೊಂದಿಗೆ ಪುನರುಜ್ಜೀವನಗೊಳಿಸಿದರು. ಇಲ್ಲಿ ಅವರು 12 ವರುಷಗಳ ಕಾಲ ಇದ್ದು ಶ್ರೀವೈಷ್ಣವಮತವನ್ನು ಪ್ರಚುರಗೊಳಿಸಿದರು.

ರಾಮಾನುಜರಿಗೆ ಮೇಲುಕೋಟೆ ಬಹಳ ಪ್ರಿಯವಾದ ಸ್ಥಳವಾಗಿತ್ತು. ಇದನ್ನು ಅವರು ಜ್ಞಾನಮಂಟಪ ಎಂದು ಕರೆದಿರುತ್ತರೆ. ಶ್ರೀವೈಷ್ಣವರ ನಾಲ್ಕು ಪ್ರಮುಖ ತೀರ್ಥಕ್ಷೇತ್ರಗಳಲ್ಲಿ ಮೇಲುಕೋಟೆಯೂ ಒಂದು. ಇನ್ನುಳಿದ ಮೂರು ಕ್ಷೇತ್ರಗಳು ತಮಿಳುನಾಡಿನ ಶ್ರೀರಂಗ ಮತ್ತು ಕಾಂಚಿಪುರ ಮತ್ತು ಆಂದ್ರದ ವೆಂಕಟಾದ್ರಿ(ತಿರುಪತಿ).

ಶ್ರೀರಂಗ ಮಂಗಲ ಮಣಿಂ ಕರುಣಾನಿವಾಸಂ
ಶ್ರೀವೆಂಕಟಾದ್ರಿ ಶಿಖರಾಲಯ ಕಾಲಮೇಘಂ
ಶ್ರೀಹಸ್ತಿಶೈಲ ಶಿಖರೋಜ್ವಲ ಪಾರಿಜಾತಂ
ಶ್ರೀಶಂನಮಾಮಿ ಶಿರಸಾ ಯದುಶೈಲದೀಪಂ।।

ರಾಮಾನುಜರೇ ರಚಿಸಿದ ಮೇಲಿನ ಸಂಸ್ಕೃತ ಶ್ಲೋಕದಲ್ಲಿನ ಯದುಶೈಲವೇ ಮೇಲುಕೋಟೆ.

ರಾಮಾನುಜರ ಕಾಲದಲ್ಲಿ ಮತ್ತೊಂದು ಸ್ವಾರಸ್ಯಕರ ಘಟನೆಗೆ ಮೇಲುಕೋಟೆ ಸಾಕ್ಷಿಯಾಯಿತು. ರಾಮಾನುಜರಿಗೆ ಕನಸಿನಲ್ಲಿ ಬಂದ ಚೆಲುವನಾರಾಯಣನು ತನ್ನ ಉತ್ಸವ ಮೂರ್ತಿಯೂ ದೆಹಲಿಯ ಸುಲ್ತಾನನ ಮಗಳ ಬಳಿಯಿದೆಯೆಂದು ಅದನ್ನು ತಂದು ಮೇಲುಕೋಟೆಯುಲ್ಲಿ ಪೂಜಿಸಬೇಕೆಂದು ಆಜ್ಞೆ ಮಾಡಿದನು. ಆಗ ಮೇಲುಕೋಟೆಯಿಂದ ಅಲ್ಲಿನ ಗ್ರಾಮಸ್ಥರನ್ನು ಜೊತೆಯಾಗಿ ಕರೆದುಕೊಂಡು ದೆಹಲಿಗೆ ಹೊರಟ ರಾಮಾನುಜರು, ದೆಹಲಿ ಸುಲ್ತಾನನ ಮಗಳ ಬಳಿಯಿದ್ದ ನಾರಾಯಣನ ಉತ್ಸವಮೂರ್ತಿಯನ್ನು ಸುಲ್ತಾನನಿಂದ ಪಡೆದುಕೊಂಡು ಬಂದರು. ಆದರೆ ಸುಲ್ತಾನನ ಮಗಳು ಆ ಮೂರ್ತಿಯನ್ನು ಬಾಲ್ಯದಿಂದ ಭಕ್ತಿಯಿಂದ ಪೂಜಿಸಿಕೊಂಡಿದ್ದರಿಂದ ಅದನ್ನು ಬಿಟ್ಟು ಇರಲಾಗದೆ, ಅದನ್ನು ಹುಡುಕಿಕೊಂಡು ಮೇಲುಕೋಟೆಗೆ ಬಂದಳು.

ಸುಲ್ತಾನನ ಮಗಳಿಗೆ ನಾರಾಯಣನ ಮೇಲೇ ಎಷ್ಟು ಭಕ್ತಿಯೆಂದರೇ ಅವಳು ಜೆಲುವನಾರಾಯಣನ ಪಾದದಲ್ಲೇ ಐಕ್ಯವಾದಳು ಎಂದು ಪ್ರತೀತಿ. ಈಗಲೂ ಚೆಲುವನಾರಾಯಣನ ಉತ್ಸವಮೂರ್ತಿಯ ಪಾದದ ಬಳಿ ಸುಲ್ತಾನನ ಮಗಳಾದ ಬೀಬಿನಾಚ್ಚಿಯಾರ್‌ ವಿಗ್ರಹವಿದೆ. ತ್ರೇತಾಯುಗದಲ್ಲಿ ಶ್ರೀರಾಮಚಂದ್ರನಿಗೆ ಬಹಳ ಪ್ರಿಯವಾಗಿದ್ದ ಈ ಉತ್ಸವಮೂರ್ತಿಯನ್ನು ರಾಮಪ್ರಿಯನೆಂಬ ಹೆಸರಿನಿಂದಲೂ ಕರೆಯುತ್ತಾರೆ.

ಮೇಲುಕೋಟೆಯ ಚೆಲುವಯ್ಯನ ಬಗ್ಗೆ, ಸುಲ್ತಾನನ ಮಗಳ ನಾರಾಯಣ ಭಕ್ತಿಯ ಬಗ್ಗೆ ಕನ್ನಡದ ಅನೇಕ ಜನಪದ ಗೀತೆಗಳು ಪ್ರಸಿದ್ಧವಾಗಿದೆ. ಚೆಲುವಯ್ಯ ಚೆಲುವೋ ತಾನಿತಂದಾನ... ಎಂಬ ಜನಪದ ಗೀತೆ ಮೇಲುಕೋಟೆಯ ಚೆಲುವಯ್ಯನ ಕುರಿತದ್ದಾಗಿದೆ. ಹೀಗೆ ದೆಹಲಿಯಿಂದ ನಾರಾಯಣನ ಉತ್ಸವಮೂರ್ತಿಯಾದ ಸಂಪತ್‌ಕುಮಾರನನ್ನು ತೆಗೆದುಕೊಂಡು ಬರಲು ಸಹಾಯಮಾಡಿದ ಮೇಲುಕೋಟೆಯ ಹರಿಜನರನ್ನು ಕಂಡರೆ ರಾಮಾನುಜರಿಗೆ ಅತ್ಯಂತ ಪ್ರೀತಿ. ಆಗಿನ ಕಾಲದಲ್ಲಿ ದೇವಸ್ಥಾನಕ್ಕೆ ಹರಿಜನರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ರಾಮಾನುಜರು ಹರಿಜನರನ್ನು ಲಕ್ಷ್ಮಿಯ ಕುಲದವರು ಎಂದು ಕರೆದು ಅವರಿಗೆ ದೇವಸ್ಥಾನ ಪ್ರವೇಶಕ್ಕೆ ಎಲ್ಲರ ವಿರೋಧದ ನಡುವೆಯೂ ವ್ಯವಸ್ಥೆಮಾಡಿದರು. ವೈರಮುಡಿ ಉತ್ಸವದ ಸಮಯದಲ್ಲಿ ಅವರಿಂದ ವಿಶೇಷ ಸೇವೆ ಈಗಲೂ ನಡೆಯುತ್ತಿದೆ.

ಈ ರೀತಿ ಬಸವಣ್ಣನವರ ಸಮಕಾಲೀನರಾದ ರಾಮಾನುಜರು ಬಸವಣ್ಣನವರ ಹಾಗೇ ಜಾತಿಮತಗಳನ್ನು ಅಲ್ಲಗಳೆದು ಮಾನವತೆಯನ್ನು ಮೆರೆದಿರುತ್ತಾರೆ.

ವೈರಮುಡಿ : ಪ್ರತಿವರ್ಷ ಮಾರ್ಚ್‌/ಏಪ್ರಿಲ್‌ ತಿಂಗಳಿನಲ್ಲಿ ನಡೆಯುವ ವೈರಮುಡಿ ಉತ್ಸವ ಮೇಲುಕೋಟೆಯ ಅತ್ಯಂತ ವೈಭವದ ಜನಪ್ರಿಯ ಉತ್ಸವ. ಸಂಸ್ಕೃತದ ವಜ್ರ ತದ್ಬವವಾದಾಗ ವಯಿರ ಅಥವಾ ವೈರ ಎಂದಾಗುತ್ತದೆ. ಮುಡಿ ಎಂದರೆ ಕಿರೀಟ. ಆದ್ದರಿಂದ ವೈರಮುಡಿ ಎಂದರೆ ವಜ್ರದ ಕಿರೀಟ ಎಂದರ್ಥ. ಇದು ವಜ್ರಗಳಿಂದಲೂ ರತ್ನಗಳಿಂದಲೂ ಶೋಭಿಸುವ ಸುಂದರವಾದ ಕಿರೀಟ.

ಈ ವೈರಮುಡಿಯ ಬಗ್ಗೆ ಒಂದು ಪುರಾಣೋಕ್ತ ಕಥೆಯಿದೆ. ಒಬ್ಬ ರಾಕ್ಷಸನು ವೈಕುಂಠದಿಂದ ವೈರಮುಡಿಯನ್ನು ಕದ್ದು ಪರಾರಿಯಾಗುತ್ತಾನೆ. ಆಗ ವಿಷ್ಣುವಿನ ವಾಹನವಾದ ಗರುಡನು ರಾಕ್ಷಸನನ್ನು ಬೆನ್ನತ್ತಿ ಅವನಿಂದ ಈ ವಜ್ರದಮುಡಿಯನ್ನು ಹಿಂಪಡೆದು ಅದನ್ನು ವೈಕುಂಠಕ್ಕೆ ತರುತ್ತಿರಬೇಕಾದರೆ, ಮೇಲುಕೋಟೆಯ ಚೆಲುವನಾರಾಯಣನ ಉತ್ಸವಮೂರ್ತಿಗೆ ಸರಿಯಾಗಿ ಹೊಂದುವಂತೆ ಇದ್ದುದ್ದರಿಂದ ಅದನ್ನು ಚೆಲುವನಾರಾಯಣನಿಗೆ ಸಮರ್ಪಿಸಿದನೆಂದು ಪ್ರತೀತಿ.

ಈ ವೈರಮುಡಿಯನ್ನು ಮಂಡ್ಯದ ಜಿಲ್ಲಾಖಜಾನೆಯಲ್ಲಿ ಭದ್ರವಾಗಿ ಇಟ್ಟಿರುತ್ತಾರೆ. ಇದರ ಜೊತೆಗೆ ಮೈಸೂರಿನ ರಾಜಒಡೆಯರು ಚೆಲುವನಾರಾಯಣನಿಗೆ ಅರ್ಪಿಸಿದ ರಾಜಮುಡಿಯನ್ನೂ ಮತ್ತು ದೇವರ ಇತರ ಆಭರಣಗಳನ್ನು ಇಟ್ಟಿರುತ್ತಾರೆ. ವೈರಮುಡಿಯ ದಿವಸ ಇದನ್ನೆಲ್ಲ ಮಂಡ್ಯದಿಂದ ಮೇಲುಕೋಟೆಗೆ ಉತ್ಸವದ ಮೂಲಕ ತರುತ್ತಾರೆ. ಇದು ಬರುವ ದಾರಿಯಲ್ಲಿನ ಹಳ್ಳಿಗಳಲ್ಲಿ ಜನರು ವೈರಮುಡಿಯನ್ನು ಆದರದಿಂದ ಪೂಜಿಸಿ ಮೇಲುಕೋಟೆಗೆ ಕಳಿಸಿಕೊಡುತ್ತಾರೆ.

ಈ ವೈರಮುಡಿಯನ್ನು ದೇವರಿಗೆ ಅಲಂಕರಿಸದೆ ಬರಿಗಣ್ಣಿನಿಂದ ನೋಡುವುದು ಕಣ್ಣಿಗೆ ಹಾನಿಮಾಡುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದ ಮಂಡ್ಯದಿಂದ ಮೇಲುಕೋಟೆಗೆ ತಂದ ವೈರಮುಡಿಯನ್ನು ದೇವಸ್ಥಾನದ ಪ್ರದಾನ ಅರ್ಚಕರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅದನ್ನು ಚೆಲುವನಾರಾಯಣನ ಉತ್ಸವಮೂರ್ತಿಗೆ ಅಲಂಕರಿಸಿ ನಂತರ ವೈರಮುಡಿಯಿಂದ ಅಲಂಕೃತಗೊಂಡ ಆ ಮೂರ್ತಿಯನ್ನು ನೋಡುತ್ತಾರೆ.

ಹೀಗೆ ವಜ್ರಖಚಿತ ವೈರಮುಡಿಯಿಂದ ಅಲಂಕೃತಗೊಂಡ ಚೆಲುವನಾರಾಯಣನ್ನು ಗರುಡವಾಹನದಲ್ಲಿ ಮೇಲುಕೋಟೆಯ ಬೀದಿಗಳಲ್ಲಿ ಮೆರವಣಿಗೆ ಮಾಡಿಸುತ್ತಾರೆ. ಇದೇ ವೈರಮುಡಿ ಉತ್ಸವ. ವೈರಮುಡಿಯಿಂದ ಅಲಂಕೃತಗೊಂಡ ಚೆಲುವನಾರಾಯಣನ ಚೆಲುವನ್ನು ನೋಡಿದ ಭಕ್ತರು ಆನಂದಪರವಶರಾಗುತ್ತಾರೆ. ಅವರ ಕಂಗಳಲ್ಲಿ ಆನಂದಬಾಷ್ಪ ಹರಿಯುತ್ತದೆ.

ಸಾಮಾನ್ಯವಾಗಿ ಸಂಜೆ ಏಳುಗಂಟೆ ಸುಮಾರಿಗೆ ಪ್ರಾರಂಭವಾಗುವ ಚೆಲುವನಾರಾಯಣನ ವೈರಮುಡಿ ಉತ್ಸವ ನಿಧಾನವಾಗಿ ಮೇಲುಕೋಟೆಯ ದೇವಸ್ಥಾನದ ಸುತ್ತಾ ಪ್ರದಕ್ಷಿಣೆ ಬಂದು, ಸುತ್ತ ನೆರೆದಿರುವ ಲಕ್ಷಾಂತರ ಭಕ್ತರಿಗೆ ದರ್ಶನ ನೀಡುವಮೂಲಕ ನಿಧಾನವಾಗಿ ಮುಂದೆ ಸಾಗುತ್ತದೆ. ಈ ಸಮಯದಲ್ಲಿ 'ಚೆಲುವನಾರಾಯಣ ಸ್ವಾಮಿ ಗೋವಿಂದ ಗೋವಿಂದ" ಜಯಘೋಷ ಮುಗಿಲು ಮುಟ್ಟುತ್ತದೆ.

ವೈರಮುಡಿ ಉತ್ಸವದ ಮುಂದೆ ವೀರಗಾಸೆ, ಡೊಳ್ಳುಕುಣಿತ, ನಂದಿಕೋಲು ಕುಣಿತ ಮುಂತಾದ ವಿವಿಧ ಜಾನಪದ ತಂಡಗಳು ಸಂಭ್ರಮದಿಂದ ಮೆರವಣಿಗೆಯಲ್ಲಿ ಸಾಗುತ್ತವೆ. ಅಂದು ಮೇಲುಕೋಟೆ ಭೂವೈಕುಂಠದಂತೆ ಕಂಗೊಳಿಸುತ್ತದೆ. ಹೆಚ್ಚುಕಡಿಮೆ ಮಧ್ಯರಾತ್ರಿವರೆಗೂ ಉತ್ಸವ ನಡೆಯುತ್ತದೆ. ಇದಾದ ನಂತರ ದೇವರಿಗೆ ರಾಜಮುಡಿಯನ್ನು ತೊಡಿಸುತ್ತಾರೆ.

ಸಂಭ್ರಮ : ಮಂಡ್ಯ ಮತ್ತು ಸುತ್ತಮುತ್ತಲ ಜಿಲ್ಲೆಗಳಿಂದ ಬಂದ ಹಳ್ಳಿಜನರಿಗೆ ಇದು ಸಂಭ್ರಮದ ಜಾತ್ರೆ. ಮೇಲುಕೋಟೆಯ ಬೀದಿಗಳ ತುಂಬ ಜಾತ್ರೆಯ ಸಡಗರ. ಕಡ್ಲೇಪುರಿ, ಬತ್ತಾಸು, ಜಿಲೇಬಿ, ಮೈಸೂರುಪಾಕುಗಳಿಂದ ಹಿಡಿದು, ಹೆಣ್ಣುಮಕ್ಕಳ ಬಳೆ, ಸರ, ಮಕ್ಕಳ ವಿವಿಧ ಬಗೆಯ ಆಟದ ಸಾಮಾನುಗಳನ್ನು ಮಾರುವ ವ್ಯಾಪಾರಸ್ಥರಿಂದ ಮೇಲುಕೋಟೆ ಕಿಕ್ಕಿರಿದು ತುಂಬಿರುತ್ತದೆ. ರಸ್ತೆಯಲ್ಲಿ ಕಾಲಿಡಲು ಸಾಧ್ಯವಾಗದಷ್ಟು ಜನರಿಂದ ಮೇಲುಕೋಟೆ ತುಂಬಿ ತುಳುಕುತ್ತಿರುತ್ತದೆ.

ರಾಜ್ಯರಸ್ತೆ ಸಾರಿಗೆ ಸಂಸ್ಥೆಯು ಮಂಡ್ಯ, ಬೆಂಗಳೂರು ಹಾಗೂ ಮೈಸೂರುಗಳಿಂದ ವಿಶೇಷ ಬಸ್ಸುಗಳನ್ನು ವೈರಮುಡಿ ಜಾತ್ರೆಗಾಗಿ ನಿಯೋಜಿಸಿರುತ್ತಾರೆ. ಅಂದು ಮೇಲುಕೋಟೆಯ ಎಲ್ಲಾ ಮಠಗಳಲ್ಲೂ, ಛತ್ರಗಳಲ್ಲೂ ಭೋಜನದ ವ್ಯವಸ್ಥೆ ಇರುತ್ತದೆ.

ನಯನ ಮನೋಹರ : ಮೇಲುಕೋಟೆ ವೈರಮುಡಿ ಉತ್ಸವಕ್ಕೆ ಹೇಗೆ ಪ್ರಸಿದ್ಧವೋ, ಅಲ್ಲಿನ ಕಲ್ಯಾಣಿಗಳು(ಕೊಳಗಳು) ಅಷ್ಟೇ ಪ್ರಸಿದ್ಧ. ಇಲ್ಲಿ ನೂರಕ್ಕೂ ಹೆಚ್ಚು ಕೊಳಗಳಿವೆ ಎಂದು ಸ್ಥಳೀಯರು ಹೇಳುತ್ತಾರೆ. ಮೇಲುಕೋಟೆಯ ನರಸಿಂಹಸ್ವಾಮಿಯ ಬೆಟ್ಟದಮೇಲಿರುವ ದೇವಸ್ಥಾನದ ಹಿನ್ನೆಲೆಯಲ್ಲಿ ದೊಡ್ಡ ಕಲ್ಯಾಣಿಯನ್ನು ಹಾಡುಗಳ ದೃಶ್ಯಗಳಲ್ಲಿ ಅನೇಕ ಕನ್ನಡ ಚಲನಚಿತ್ರಗಳಲ್ಲಿ ಚಿತ್ರಿಸಿದ್ದಾರೆ.

ನರಸಿಂಹಸ್ವಾಮಿ ಬೆಟ್ಟದ ಮೇಲಿನಿಂದ ಮೇಲುಕೋಟೆಯ ವಿಹಂಗಮ ನೋಟ ಕಾಣಸಿಗುತ್ತದೆ. ಚೆಲುವರಾಯನ ದೇವಸ್ಥಾನದ ಸಮೀಪದಲ್ಲೇ ಇರುವ ಅಕ್ಕ-ತಂಗಿಯರ ಕೊಳವೆಂದು ಜನಪ್ರಿಯವಾಗಿರುವ ಜೋಡಿ ಕಲ್ಯಾಣಿಯೂ ನೋಡಲು ಬಹಳ ಸುಂದರವಾಗಿದೆ.

ಮೇಲುಕೋಟೆಯ ಗಿರಿಶ್ರೇಣಿಯ ದಕ್ಷಿಣದ ತುದಿಯಲ್ಲಿ ಧನುಷ್ಕೋಟಿ ಎನ್ನುವ ನೀರಿನ ಕೊಳವಿದೆ. ಇದನ್ನು ಶ್ರೀರಾಮನು ವನವಾಸದ ಸಮಯದಲ್ಲಿ ತನ್ನ ಬಾಣದಿಂದ ಸೃಷ್ಟಿಸಿದ್ದೆಂದು ಹೇಳುತ್ತಾರೆ. ಧನುಷ್ಕೋಟಿಗೆ ಹೋಗಲು ನೀಲಗಿರಿ ತೋಪಿನಲ್ಲಿ ಸ್ವಲ್ಪ ದೂರು ನಡೆದು ಹೋಗಬೇಕು. ಅಲ್ಲಿಂದ ಕಾಣುವ ಸುತ್ತಮುತ್ತಲಿನ ಮಂಡ್ಯದ ಬಯಲುಸೀಮೆಯ ನೋಟ ಬಲುಚೆಂದ.

ಮೇಲುಕೋಟೆಯ ಬಗ್ಗೆ ಬರೆಯಲು ಇನ್ನೂ ಸಾಕಷ್ಟಿದೆ. ಸದ್ಯಕ್ಕೆ ಇಷ್ಟು ಸಾಕು. ನೀವೂ ಒಮ್ಮೆ ಕನ್ನಡನಾಡಿನ ಪ್ರಸಿದ್ಧ ಯಾತ್ರಾ ಸ್ಥಳ ಮತ್ತು ಸುಂದರ ಗಿರಿಪ್ರದೇಶವಾದ ಮೇಲುಕೋಟೆಯನ್ನೂ, ಇಲ್ಲಿನ ಸುಂದರ ಕಲ್ಯಾಣಿಗಳನ್ನು, ದೇವಸ್ಥಾನಗಳನ್ನೂ ಮತ್ತು ಇಲ್ಲಿನ ಒಡೆಯ ಚೆಲುವಯ್ಯನನ್ನೂ ನೋಡಬನ್ನಿ.

English summary
Melkote also known as Thiru Narayan Puram is one of the most sacred centers of Sri Vaishnavam in India. An article about Melkote Cheluva Narayana Swamy, famous temple in Karnataka by Sampige Srinivas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X