ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸ್ಕೃತ ಭಾಷೆ ನಿಜಕ್ಕೂ ಸತ್ತ ಭಾಷೆಯೇ? - ಒಂದು ಜಿಜ್ಞಾಸೆ

By Staff
|
Google Oneindia Kannada News

ಸಂಸ್ಕೃತ ಭಾಷೆ ನಿಜಕ್ಕೂ ಸತ್ತ ಭಾಷೆಯೇ? - ಒಂದು ಜಿಜ್ಞಾಸೆ
ಸಂಸ್ಕೃತಕ್ಕೆ ಮನ್ನಣೆ ಕೊಟ್ಟು ಕನ್ನಡ ಭಾಷೆಗೆ ಅಗೌರವ ತೋರಿಸುವುದು ಸರಿಯಲ್ಲ. ಹಾಗೆಯೇ ಸಂಸ್ಕೃತ ಸತ್ತ ಭಾಷೆ-ಪುರೋಹಿತಶಾಹಿ ಭಾಷೆ ಎಂದು ಹೀಯಾಳಿಸುವುದೂ ಸರಿಯಲ್ಲ. ವಿವಿಧ ಭಾರತೀಯ ಭಾಷೆಗಳಲ್ಲಿ ಮತ್ತು ವಿಶ್ವದ ಬಹಳಷ್ಟು ಭಾಷೆಗಳಲ್ಲಿ, ಸಂಸ್ಕೃತದ ಅನೇಕ ಪದಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬಳಕೆಯಲ್ಲಿರುವಾಗ, ಸಂಸ್ಕೃತ ಸತ್ತ ಭಾಷೆ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ?

sampige_srinivas2 ಸಂಪಿಗೆ ಶ್ರೀನಿವಾಸ, ಬೆಂಗಳೂರು
[email protected]

ಸಂಸ್ಕೃತ ಭಾಷೆ ಬಗ್ಗೆ ಮಾತನಾಡಲು ಹೊರಟರೆ ನಮಗೆ ಬರುವ ಮೊದಲ ಪ್ರತಿಕ್ರಿಯೆ, ಅದು ಸತ್ತ ಭಾಷೆ ಎಂದು! ಸಂಸ್ಕೃತ ಎಂದ ಕೂಡಲೇ ಇನ್ನೂ ಕೆಲವರಿಗೆ ನಾವು ಪುರೋಹಿತಶಾಹಿಗಳಾಗಿ ಬಿಡುತ್ತೇವೆ! ಮತ್ತೆ ಕೆಲವರು ಸಂಸ್ಕೃತ ದೇವ ಭಾಷೆ ಎಂದು ಗೌರವಿಸಿ, ದೇಶದ ಇತರ ಜನಪದ ಭಾಷೆಗಳ ಬಗ್ಗೆ ತಾತ್ಸಾರ ತೋರುವುದನ್ನೂ ಕಾಣುತ್ತೇವೆ! ನಮ್ಮ ದೇಶದ ಪ್ರಾಚೀನ ಭಾಷೆಯ ಬಗ್ಗೆ ಹಲವರಿಗೆ ಹಲವು ರೀತಿಯ ಅಭಿಪ್ರಾಯ. ಇರಲಿ ಈಗ ನಾವು ಸಂಸ್ಕೃತ ನಿಜಕ್ಕೂ ಸತ್ತ ಭಾಷೆಯೇ ಎಂಬುದನ್ನು ವಿಚಾರ ಮಾಡೋಣ.

ಕನ್ನಡದ ಪ್ರಖ್ಯಾತ ಭಾಷಾವಿದ್ವಾಂಸರಾದ ಜಿ.ವೆಂಕಟಸುಬ್ಬಯ್ಯನವರು ಪ್ರತಿ ಭಾನುವಾರ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯ ‘ಇಗೋ ಕನ್ನಡ’ ಅಂಕಣದಲ್ಲಿ ವಿದ್ವತ್ಪೂರ್ಣವಾಗಿ ಕನ್ನಡ ಪದಗಳ ವ್ಯುತ್ಪತ್ತಿ ಸಹಿತ ಅರ್ಥವಿವರಣೆಯನ್ನೂ ನೀಡುತ್ತಿರುವುದು, ಕನ್ನಡ ಪದಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇರುವವರಿಗೆ ಬಹಳ ಉಪಯೋಗವಾಗಿದೆ. ಇದನ್ನು ಓದಿದವರಿಗೆ ತಿಳಿಯುವ ಒಂದು ಸಾಮಾನ್ಯ ವಿಷಯವೆಂದರೆ, ಬಹಳಷ್ಟು ಕನ್ನಡ ಪದಗಳ ಮೂಲ ಸಂಸ್ಕೃತವಾಗಿರುವುದು! ಇದು ಕನ್ನಡಕ್ಕಷ್ಟೇ ಸೀಮಿತವಲ್ಲ. ತಮಿಳರು ಪ್ರಾಚೀನ ಹಾಗೂ ಸ್ವತಂತ್ರ ಭಾಷೆ ಎಂದು ಒಣಜಂಭದಿಂದ ಹೇಳಿಕೊಳ್ಳುವ ತಮಿಳು ಭಾಷೆಯೂ ಸೇರಿ ಎಲ್ಲಾ ಭಾರತೀಯ ಭಾಷೆಗಳೂ ಸಂಸ್ಕೃತದಿಂದ ಪ್ರಭಾವ ಹೊಂದಿ, ಸಂಸ್ಕೃತದಿಂದ ಅನೇಕ ಶಬ್ದಗಳನ್ನು ಎರವಲು ಪಡೆದಿರುವುದು ಎಲ್ಲಾ ಭಾಷಾತಜ್ಞರಿಗೂ ತಿಳಿದಿರುವ ವಿಚಾರವೇ.

ಎಲ್ಲರ ನಾಲಿಗೆಯ ಮೇಲೆ ದಿನವೂ ಕ್ಷಣವೂ ನಲಿದಾಡುವ ಬಹಳಷ್ಟು ಹಿಂದೂ ಧರ್ಮದವರ ಹೆಸರುಗಳು ಅಪ್ಪಟ ಸಂಸ್ಕೃತ ಪದಗಳೇ! ಶಾಲೆಯಲ್ಲಿ ಕನ್ನಡದ ವ್ಯಾಕರಣ ಶಾಸ್ತ್ರ ಓದಿದಾಗ ತತ್ಸಮ-ತದ್ಭವಗಳ ಬಗ್ಗೆ ನಾವು ಕೇಳಿರುತ್ತೇವೆ. ಸಂಸ್ಕೃತದ ಪದವನ್ನು ಅದು ಹೇಗಿದೆಯೋ ಹಾಗೆ ಕನ್ನಡದಲ್ಲಿ ಬಳಸುವುದನ್ನು ವ್ಯಾಕರಣಕಾರರು ತತ್ಸಮವೆಂದರು. ಅದನ್ನು ಸ್ವಲ್ಪ ಬದಲಿಸಿ ಅಂದರೆ ಕನ್ನಡೀಕರಿಸಿ ಬಳಸುವುದಕ್ಕೆ ತದ್ಭವಗಳೆಂದು ಕರೆದರು. ಉದಾಹರಣೆಗೆ ಶಿವ, ರಾಮ, ಶ್ರೀನಿವಾಸ, ಲಕ್ಷ್ಮಿ, ಸರಸ್ವತಿ ಮುಂತಾದ ನಾಮಪದಗಳು ಸಂಸ್ಕೃತದಲ್ಲಿ ಹೇಗಿವೆಯೋ ಹಾಗೆ ನಾವು ಕನ್ನಡದಲ್ಲಿ ಬಳಸುವುದರಿಂದ ತತ್ಸಮಗಳಾಗುತ್ತವೆ. ಸಂಸ್ಕೃತದ ಚಂಪಕ ಕನ್ನಡದಲ್ಲಿ ಸಂಪಿಗೆಯಾದಾಗ ಅದು ತದ್ಭವವಾಗುತ್ತದೆ. ಇದೇ ರೀತಿ ಮಲ್ಲಿಕಾ- ಮಲ್ಲಿಗೆ, ಶ್ರೀ- ಸಿರಿ, ವಸ್ತ್ರ - ಬಟ್ಟೆ, ವರ್ಣ- ಬಣ್ಣ, ಪರ್ವ- ಹಬ್ಬ, ಇತ್ಯಾದಿ ಬಹಳಷ್ಟು ಸಂಸ್ಕೃತದ ಪದಗಳನ್ನು ತದ್ಭವಗಳಾಗಿ, ಅವು ಕನ್ನಡದ ಪದಗಳೇ ಎಂದು ಭಾವಿಸಿ ಉಪಯೋಗಿಸುತ್ತೇವೆ.

ನಾಮಪದಗಳಷ್ಟೇ ಅಲ್ಲ ಸಂಸ್ಕೃತದ ಅನೇಕ ಕ್ರಿಯಾಪದಗಳು ಕನ್ನಡ ಭಾಷೆಯಲ್ಲಿ ಹೆಚ್ಚಾಗಿ ಪ್ರಯೋಗದಲ್ಲಿದೆ. ಈ ಲೇಖನದಲ್ಲೇ ಸಂಸ್ಕೃತದ ಅನೇಕ ನಾಮಪದಗಳನ್ನು, ಕ್ರಿಯಾಪದಗಳನ್ನು, ಗುಣವಾಚಕಗಳನ್ನು ನೀವು ಕಾಣಬಹುದು! ಹೀಗೆ ಕನ್ನಡ ಭಾಷೆಯಲ್ಲಿ ಸಂಸ್ಕೃತ ಇನ್ನೂ ಜೀವಂತವಾಗಿದೆ. ಆದರೆ ಅಪ್ಪಟ ಸಂಸ್ಕೃತದ ಹೆಸರಿರುವ ಕನ್ನಡದ ಟ್ಯಾಬ್ಲಾಯ್ಡ್‌ು ಪತ್ರಿಕೆಯೊಂದನ್ನು ನಡೆಸುತ್ತಿರುವ ಸಂಸ್ಕೃತದ್ದೇ ಹೆಸರಿನವರು ಸಂಸ್ಕೃತ ಭಾಷೆಗೆ ವಿರೋಧ ಮಾಡುತ್ತಿರುವುದು ವಿರೋಧಾಭಾಸವೆನಿಸುತ್ತದೆ!

ಸಂಸ್ಕೃತವನ್ನು ವಿರೋಧಿಸುವ ತಮಿಳರು ಕೂಡ ತಮಗೆ ಅರಿವಿಲ್ಲದಂತೆ ಸಂಸ್ಕೃತ ಪದಗಳನ್ನು ಉಪಯೋಗಿಸುತ್ತಿರುವುದು ವಿಪರ್ಯಾಸವೆನಿಸುತ್ತದೆ. ಉದಾಹರಣೆಗೆ ತಮಿಳಿನಲ್ಲಿ ಹಳ್ಳಿಗೆ ಗ್ರಾಮಂ ಎಂದು ಇನ್ನೂ ಬಳಕೆಯಲ್ಲಿದೆ. ಈ ಗ್ರಾಮಂ ಅಪ್ಪಟ ಸಂಸ್ಕೃತ ಶಬ್ದ! ಶಿವ, ಶಕ್ತಿ, ಕೃಷ್ಣ ಮುಂತಾದ ದೇವರ ಹೆಸರುಗಳನ್ನು ತಮಿಳೀಕರಿಸಿ ಸಿವನ್‌, ಸಕ್ತಿ, ಕಣ್ಣನ್‌ ಎಂದು ಬಳಸುತ್ತಾರೆ. ಕರುಣಾನಿಧಿ ಎಂದು ಅಪ್ಪಟ ಸಂಸ್ಕೃತ ಹೆಸರಿಟ್ಟುಕೊಂಡಿರುವವರೂ ತಮಿಳುನಾಡಿನಲ್ಲಿ ಸಂಸ್ಕೃತಕ್ಕೆ ಅಗೌರವ ತೋರುತ್ತಾರೆ!

ತೆಲುಗು, ಮಲಯಾಳಂ ಭಾಷೆಗಳಲ್ಲಂತೂ ಸಂಸ್ಕೃತ ಪದಗಳನ್ನು ಕನ್ನಡ ಭಾಷೆಗಿಂತ ಹೆಚ್ಚು ಬಳಸುತ್ತಾರೆ. ಇನ್ನು ಉತ್ತರ ಭಾರತದ ಭಾಷೆಗಳಾದ ಹಿಂದಿ, ಬಂಗಾಲಿ, ಮರಾಠಿ, ಗುಜರಾತಿ ಮುಂತಾದ ಭಾಷೆಗಳಲ್ಲೂ ಸಂಸ್ಕೃತದ ಪದಗಳು ನೇರವಾಗಿ ಇಲ್ಲವೇ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಬಳಕೆಯಲ್ಲಿವೆ. ಅಪ್ಪಟ ಹಿಂದಿ ಭಾಷೆ ಕೇಳಿದರೆ ಅದು ಬಹುಪಾಲು ಸಂಸ್ಕೃತವನ್ನೇ ಹೋಲುತ್ತದೆ ಎಂದರೆ ತಪ್ಪಾಗಲಾರದು. ರಾಮಾಯಣ ಮತ್ತು ಮಹಾಭಾರತದ ಜನಪ್ರಿಯ ಧಾರಾವಾಹಿಗಳಲ್ಲಿನ ಹಿಂದಿ ಭಾಷೆ ಇದಕ್ಕೆ ಅತ್ಯುತ್ತಮ ಉದಾಹರಣೆ. ಆದರೆ ಈಗಿನ ಹಿಂದಿ ಸಿನಿಮಾಗಳಲ್ಲಿ ಹಿಂದಿ ಎನ್ನಲಿಕ್ಕೇ ಅಗದಷ್ಟು, ಉರ್ದು ಭಾಷೆಯ ಪದಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಈಗ ಅಪ್ಪಟ ಹಿಂದಿ ಮಾತನಾಡುವವರೂ ಸಿಗುವುದಿಲ್ಲ ಬಿಡಿ!

ಇನ್ನು ಆಂಗ್ಲಭಾಷೆ ಅಥವಾ ಯೂರೋಪಿನ ಇತರ ಭಾಷೆಗಳಾದ ಫ್ರೆಂಚ್‌, ಜರ್ಮನ್‌ ಇತ್ಯಾದಿ ಭಾಷೆಗಳ ಮೇಲೂ ಸಂಸ್ಕೃತದ ಪ್ರಭಾವ ಇರುವುದನ್ನು ಬಹಳಷ್ಟು ಭಾಷಾತಜ್ಞರು ಒಪ್ಪಿಕೊಂಡಿದ್ದಾರೆ. ಆದರೆ ಇಲ್ಲಿಯೂ ಸಂಸ್ಕೃಕ್ಕೆ ನ್ಯಾಯ ಸಿಕ್ಕಿಲ್ಲ. ಹೇಗೆ ಆರ್ಯರು ಮಧ್ಯಏಷಿಯಾದಿಂದ ಭಾರತಕ್ಕೆ ವಲಸೆ ಬಂದರೆಂಬ ಮಿಥ್ಯಾವಾದವನ್ನು ಪಾಶ್ಚಾತ್ಯರು ಮಂಡಿಸಿದ್ದಾರೋ ಹಾಗೇ ಸಂಸ್ಕೃತವನ್ನು ಇಂಡೋ-ಯೂರೋಪಿಯನ್‌ ಪಂಗಡದ ಭಾಷೆ ಎಂದು ವರ್ಗೀಕರಿಸಿದ್ದಾರೆ. ಸಂಸ್ಕೃತವೂ ಸೇರಿ ಯೂರೋಪಿನ ಬಹಳಷ್ಟು ಭಾಷೆಗಳು ಒಂದು ಪ್ರಾಚೀನ ಪ್ರೋಟೋ-ಇಂಡೋ- ಯೂರೋಪಿಯನ್‌ ಭಾಷೆಯಿಂದ ಜನ್ಮ ತೆಳೆದಿವೆ ಎಂಬುದು ಅವರ ಅಭಿಪ್ರಾಯ. ಆದರೆ ಇದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಭಾಷಾತಜ್ಞರಿಗೆ ಬಿಟ್ಟ ವಿಚಾರ. ಸಂಸ್ಕೃತ ಭಾಷೆಯ ನಿಜವಾದ ಮೂಲದ ಬಗ್ಗೆ ಭಾರತೀಯ ಭಾಷಾವಿದ್ವಾಂಸರಿಂದ ಇನ್ನೂ ಹೆಚ್ಚಿನ ಸಂಶೋಧನೆಗಳಾಗಬೇಕಿದೆ.

ಆಂಗ್ಲ ಭಾಷೆಯಲ್ಲಿ ಬಳಕೆಯಲ್ಲಿರುವ ಸಂಸ್ಕೃತ ಪದಗಳ ಬಗ್ಗೆ ಗಮನ ಹರಿಸೋಣ ಬನ್ನಿ. ಸಾಮಾನ್ಯವಾಗಿ ಆಂಗ್ಲ ಭಾಷೆಯಲ್ಲಿ ಉಪಯೋಗಿಸುವ ಸರ್‌ ಪದ ಸಂಸ್ಕೃತದ ಶ್ರೀ ಪದದ ಅಪಭ್ರಂಶವಾಗಿರಬಹುದೆಂದು ಅನ್ನಿಸುತ್ತದೆ. ಹೇಗೆ ಕನ್ನಡದಲ್ಲಿ ’ಶ್ರೀ’ ಸಿರಿಯಾಗಿದೆಯೋ ಹಾಗೆಯೇ ಆಂಗ್ಲ ಭಾಷೆಯಲ್ಲಿ ಅದು ‘ಸರ್‌’ ಆಗಿರಬಾರದೇಕೇ...? ನಾಮ - ನೇಮ್‌, ಕಫ - ಕಾಫ್‌, ಮಾನವ - ಮ್ಯಾನ್‌, ಮಿಥ್ಯ - ಮಿಥ್‌, ಮಾತೃ- ಮದರ್‌, ಪಿತೃ- ಫಾದರ್‌, ಭ್ರಾತೃ - ಬ್ರದರ್‌, ನವ- ನ್ಯೂ, ತ್ರಿ- ತ್ರೀ, ಶರಣಂ - ಸರೆನ್‌ಡರ್‌, ದಶ -ಡೆಸಿ/ಡೆಕಾ, ಯುವ - ಯೂತ್‌, ಶರ್ಕರ -ಸುಕ್ರೊಸ್‌-ಶುಗರ್‌, ಮಾಧ್ಯಮ-ಮೀಡಿಯಮ್‌! ... ಹೀಗೆ ಅನೇಕ ಸಂಸ್ಕೃತ- ಆಂಗ್ಲ ಭಾಷೆಗಳ ಪದಗಳಲ್ಲಿ ಬಹಳಷ್ಟು ಸಾಮ್ಯತೆಗಳಿರುವುದನ್ನು ನಾವು ಕಾಣಬಹುದು. ಯೂರೋಪಿನ ಭಾಷೆಗಳ ಮೇಲೆ ಸಂಸ್ಕೃತ ಭಾಷೆಯ ಪ್ರಭಾವವಾಗಲು, ಬಹುಶಃ ಪ್ರಾಚೀನ ಭಾರತದಿಂದ ಯೂರೋಪಿನ ಕಡೆ ವಲಸೆ ಹೋದ ವೈದಿಕ ಸಂಸ್ಕೃತ ಭಾಷೆ ಮಾತನಾಡುತ್ತಿದ್ದ ಒಂದು ಗುಂಪು ಕಾರಣವಾಗಿರಬಹುದು. ಇದರ ಮೇಲೆ ಇತಿಹಾಸ ಸಂಶೋಧಕರು ಮತ್ತು ಭಾಷಾ ವಿದ್ವಾಂಸರು ಬೆಳಕು ಚೆಲ್ಲಬೇಕಾಗಿದೆ.

ಸಂಸ್ಕೃತ ಈಗ ಆಡು ಭಾಷೆಯಾಗಿ ಉಪಯೋಗದಲ್ಲಿ ಇರದಿದ್ದರೂ, ದೇವಸ್ಥಾನಗಳಲ್ಲಿ, ಹಿಂದೂ ಧರ್ಮೀಯರ ಧಾರ್ಮಿಕ ಆಚರಣೆಗಳಲ್ಲಿ ಸಂಸ್ಕೃತ ಭಾಷೆ ಇಂದಿಗೂ ಜೀವಂತವಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಕರ್ನಾಟಕದ ಶಿವಮೊಗ್ಗ ಬಳಿಯ ಮತ್ತೂರು ಎಂಬ ಹಳ್ಳಿಯಲ್ಲಿ ಕೆಲವು ವರ್ಷಗಳಿಂದ ಜನಸಾಮಾನ್ಯರ ಆಡುಭಾಷೆಯಾಗಿ ಸಂಸ್ಕೃತ ಪ್ರಯೋಗದಲ್ಲಿರುವುದು ಭಾರತದಲ್ಲೇ ಅಪರೂಪವಾಗಿದೆ. ಸಂಸ್ಕೃತ ಭಾಷೆಯಿಂದಲೇ ದೇವರನ್ನು ಪ್ರಾರ್ಥಿಸಬೇಕು ಎನ್ನುವುದು ಶುದ್ಧ ಮೂರ್ಖತನ. ಏಕೆಂದರೆ ದೇವರಿಗೆ ಭಕ್ತಿಭಾವ ಮುಖ್ಯವೇ ಹೊರತು ಭಾಷೆಯಲ್ಲ. ಈ ನಿಟ್ಟಿನಲ್ಲಿ ಹನ್ನೆರಡನೇ ಶತಮಾನದಲ್ಲೇ ಕ್ರಾಂತಿಪುರುಷ ಬಸವಣ್ಣನವರು ಸರಳ ಕನ್ನಡದಲ್ಲೇ ಶಿವಪೂಜೆಯನ್ನು ಆರಂಭಿಸಿದ್ದು ಒಂದು ಅತ್ಯುತ್ತಮ ಉದಾಹರಣೆ. ದಾಸರು, ಶಿವಶರಣರು ಜನಸಾಮಾನ್ಯರ ಭಾಷೆಯಾದ ಕನ್ನಡದಲ್ಲೇ ಪದಗಳನ್ನು, ವಚನಗಳನ್ನು ಹಾಡಿರುವುದು ವಿಶಿಷ್ಟವಾಗಿದೆ. ಇತ್ತೀಚೆಗೆ ಹಿರೇಮಗಳೂರಿನ ಕೋದಂಡರಾಮ ದೇವಸ್ಥಾನದಲ್ಲಿ ಕನ್ನಡದಲ್ಲೇ ಪೂಜೆ ನಡೆಯುತ್ತಿರುವುದು ಒಂದು ಅತ್ಯುತ್ತಮ ಬೆಳವಣಿಗೆಯಾಗಿದೆ. ಹಾಗೇ ತಮಿಳುನಾಡಿನ ವೈಷ್ಣವ ದೇವಾಲಯಗಳಲ್ಲಿ ಸಂಸ್ಕೃತದ ಮಂತ್ರಗಳ ಜೊತೆ ಆಳ್ವಾರರ ತಮಿಳು ಪ್ರಬಂಧಗಳನ್ನು ಹಾಡುವುದು ರೂಢಿಯಲ್ಲಿದೆ.

ನಮ್ಮ ದೇಶದ ಪ್ರಾಚೀನ, ಶ್ರೀಮಂತ ಭಾಷೆಯಾದ ಸಂಸ್ಕೃತ ಭಾಷೆ ಬಗ್ಗೆ ನಾವು ಹೇಗೆ ಹೆಮ್ಮೆ ಪಡಬೇಕೋ ಹಾಗೇ ನಮ್ಮ ದೇಶದ ಪ್ರಾಚೀನವಾದ ಸ್ಥಳೀಯ ಜನಪದ ಭಾಷೆಗಳಿಗೂ ಅಷ್ಟೇ ಪ್ರಾಮುಖ್ಯತೆ ಕೊಡಬೇಕಾಗಿದೆ. ಸಂಸ್ಕೃತಕ್ಕೆ ಮನ್ನಣೆ ಕೊಟ್ಟು ಕನ್ನಡ ಭಾಷೆಗೆ ಅಗೌರವ ತೋರಿಸುವುದೂ ಸರಿಯಲ್ಲ, ಹಾಗೇ ಸಂಸ್ಕೃತವನ್ನು ಸತ್ತ ಭಾಷೆ ಎಂದು, ಪುರೋಹಿತಶಾಹಿ ಭಾಷೆ ಎಂದು ಹೀಯಾಳಿಸುವುದು ಸರಿಯಲ್ಲ. ಸಂಸ್ಕೃತದಿಂದ ಕನ್ನಡವೂ ಸೇರಿದಂತೆ ಭಾರತದ ಎಲ್ಲಾ ಭಾಷೆಗಳು ಶ್ರೀಮಂತವಾಗಿವೆ ಎಂಬುದನ್ನು ನಾವು ಮರೆಯಬಾರದು.

ಇಂದು ವಿವಿಧ ಭಾರತೀಯ ಭಾಷೆಗಳಲ್ಲಿ ಮತ್ತು ವಿಶ್ವದ ಬಹಳಷ್ಟು ಭಾಷೆಗಳಲ್ಲಿ, ಸಂಸ್ಕೃತ ಭಾಷೆಯ ಅನೇಕ ಪದಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬಳಕೆಯಲ್ಲಿರುವಾಗ ಸಂಸ್ಕೃತ ಸತ್ತ ಭಾಷೆ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ? ನೀವೇ ಹೇಳಿ.

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X