• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುಟ್ಟಣ್ಣನವರ ಚಿತ್ರಗೀತೆಗಳಲ್ಲಿ ಕರುನಾಡಿನ ಐಸಿರಿ

By Staff
|

ಪುಟ್ಟಣ್ಣನವರ ಚಿತ್ರಗೀತೆಗಳಲ್ಲಿ ಕರುನಾಡಿನ ಐಸಿರಿ

ಲೋಕೇಷನ್‌ಗಳನ್ನು ಹುಡುಕಿಕೊಂಡು, ನಮ್ಮ ಸ್ಯಾಂಡಲ್‌ವುಡ್‌ನ ಇತ್ತೀಚಿನ ನಿರ್ದೇಶಕರು ವಿದೇಶಗಳಿಗೆ ಹಾರುತ್ತಿದ್ದಾರೆ. ಹಾಡುಗಳಿಗಾಗಿ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡುತ್ತಿದ್ದಾರೆ. ಆದರೆ ಹಾಡನ್ನು ಎರಡು ಕ್ಷಣ ಸಹಾ ಕೇಳಲು ಕಷ್ಟವಾಗುತ್ತದೆ. ಆದರೆ ಪುಟ್ಟಣ್ಣನವರ ಚಿತ್ರಗಳಲ್ಲಿನ ಹಾಡುಗಳನ್ನು ಮರೆಯುವುದಾದರೂ ಹೇಗೆ?

sampige_srinivas2 ಸಂಪಿಗೆ ಶ್ರೀನಿವಾಸ, ಬೆಂಗಳೂರು
ಕಳೆದ ಜೂನ್‌ 5ರಂದು ಪುಟ್ಟಣ್ಣ ಕಣಗಾಲ್‌ ಅವರ ಪುಣ್ಯತಿಥಿಯಂದು ವಾಣಿ ರಾಮದಾಸ್‌, ‘ಪುಟ್ಟಣ್ಣ ಮತ್ತೊಮ್ಮೆ ಹುಟ್ಟಿ ಬಾರಣ್ಣ...’ ಎಂಬ ಲೇಖನ ಬರೆದಿದ್ದರು. ಅದು ಉತ್ತಮವಾಗಿ ಮೂಡಿಬಂದಿತ್ತು. ಈ ಲೇಖನವನ್ನು ಓದುತ್ತಲೇ ಪುಟ್ಟಣ್ಣನವರ ಚಿತ್ರಗಳೆಲ್ಲ ಕಣ್ಣಮುಂದೆ ಬಂದು ನಿಂತವು. ಪುಟ್ಟಣ್ಣನವರು ಭಾರತ ಚಿತ್ರರಂಗ ಕಂಡ ಅತ್ಯಂತ ಶ್ರೇಷ್ಠ ನಿರ್ದೇಶಕರೆಂಬುದರಲ್ಲಿ ಸಂಶಯವಿಲ್ಲ.

ಅವರ ನಿರ್ದೇಶನದ ಚಿತ್ರಗಳಲ್ಲಿ ಒಳ್ಳೆಯ ಕಥೆ, ಚಿತ್ರಕಥೆ, ಛಾಯಾಗ್ರಹಣ, ಸಂಭಾಷಣೆ, ಸಂಗೀತ ಮತ್ತು ಗೀತೆಗಳು ಹೀಗೆ ಚಿತ್ರನಿರ್ಮಾಣದ ಎಲ್ಲಾ ವಿಭಾಗಳಿಗೂ ಪ್ರಾಶಸ್ತ್ಯವಿತ್ತು. ಇವುಗಳೆಲ್ಲದಕ್ಕಿಂತ ಮಿಗಿಲಾಗಿ ಪುಟ್ಟಣ್ಣನವರು ತಮ್ಮ ಚಿತ್ರಗಳಲ್ಲಿ ಕನ್ನಡನಾಡಿನ ಪ್ರಕೃತಿಯ ಸೊಬಗನ್ನು ಅತಿಸುಂದರವಾಗಿ ಚಿತ್ರೀಕರಿಸಿದ್ದಾರೆ. ಹಾಗೇ ಕನ್ನಡನಾಡಿನ ಇತಿಹಾಸ ಮತ್ತು ಸಂಸ್ಕೃತಿಯನ್ನೂ ತಮ್ಮ ಚಿತ್ರಗಳಲ್ಲಿ ಉತ್ತಮವಾಗಿ ಅಳವಡಿಸಿಕೊಂಡಿದ್ದರು. ಈಗ ಪುಟ್ಟಣ್ಣನವರ ಚಿತ್ರಗಳ ಗೀತೆಗಳಲ್ಲಿ ಕರುನಾಡಿನ ಐಸಿರಿಯನ್ನು ಸವಿಯೋಣ ಬನ್ನಿ.

ಪುಟ್ಟಣ್ಣನವರ ಮೊಟ್ಟಮೊದಲ ಚಿತ್ರವಾದ ‘ಬೆಳ್ಳಿಮೋಡ’ ಚಿತ್ರದಲ್ಲೇ ಅವರ ಪ್ರಕೃತಿಪ್ರೇಮವನ್ನು ನಾವು ನೋಡಬಹುದು. ಈ ಚಿತ್ರದಲ್ಲಿ ಕನ್ನಡದ ವರಕವಿ ದ.ರಾ.ಬೇಂದ್ರೆಯವರ ‘ಮೂಡಲ ಮನೆಯ ಮುತ್ತಿನ ನೀರಿನ ಎರಕವ ಹೊಯ್ದ ನುಣ್ಣನೆ ಎರಕವ ಹೊಯ್ದ...’ ಕವನವನ್ನು ಚಿಕ್ಕಮಗಳೂರಿನ ಮಲೆನಾಡಿನ ಸುಂದರ ಪರಿಸರದಲ್ಲಿ ಬಹಳ ಸುಂದರವಾಗಿ ಚಿತ್ರೀಕರಿಸಿದ್ದಾರೆ. ಬೇಂದ್ರೆಯವರ ಸೊಗಸಾದ ಸಾಹಿತ್ಯ, ವಿಜಯಭಾಸ್ಕರ ಅವರ ಮಧುರ ಸಂಗೀತ, ಸುಂದರ ಛಾಯಾಗ್ರಹಣದಿಂದ ಕೂಡಿದ್ದ ಈ ಗೀತೆಯಲ್ಲೇ ನಾವು ಪುಟ್ಟಣ್ಣನವರಿಗಿದ್ದ ಸದಭಿರುಚಿಯನ್ನು ಕಾಣಬಹುದು.

Puttanna Kanagalಡಾ.ರಾಜ್‌ ಮತ್ತು ಪುಟ್ಟಣ್ಣನವರ ಜೋಡಿಯ ಮೊದಲ ಚಿತ್ರ ‘ಕರುಳಿನ ಕರೆ’ ಚಿತ್ರದಲ್ಲಿ ‘ಅ ಆ ಇ ಈ... ಕನ್ನಡದ ಅಕ್ಷರ ಮಾಲೆ.. ಅಮ್ಮಾ ಎಂಬುದೆ ಕಂದನ ಕರುಳಿನ ಕರೆಯೋಲೆ..’ ಎಂಬ ಗೀತೆಯನ್ನು ಪುಟ್ಟಣ್ಣನವರು ಕಲ್ಪನಾ ಅವರ ಅಭಿನಯದಲ್ಲಿ ಚಿತ್ರೀಕರಿಸಿದ್ದಾರೆ. ಕನ್ನಡ ವರ್ಣಮಾಲೆಯ ಈ ಗೀತೆ ಮಕ್ಕಳಿಗೆ ಸುಲಭವಾಗಿ ಕನ್ನಡ ಕಲಿಸುವ ಗೀತೆಯಾಗಿ ವಿಶಿಷ್ಟವಾಗಿದೆ.

ಸಾಕ್ಷಾತ್ಕಾರ ಚಿತ್ರದಲ್ಲಿ ‘ಒಲವೇ ಜೀವನ ಸಾಕ್ಷಾತ್ಕಾರ...’ ಗೀತೆಯ ಚಿತ್ರೀಕರಣ ಮಲೆನಾಡಿನ ಸುಂದರ ಪ್ರಕೃತಿಯನ್ನು ತೆರೆದಿಡುತ್ತದೆ. ‘ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲೂ ಘಮ್ಮನೆ ಹೊಮ್ಮಿರುವ ಹೊಸಹೂವಿನಲ್ಲೂ..’, ‘ಈ ಮಲೆನಾಡಿನ ಭೂರಮೆ ಶೃಂಗಾರ...’ ಹೀಗೆ ಈ ಗೀತೆಯಲ್ಲಿನ್ನ ಸಾಲುಗಳಲ್ಲಿ ಪ್ರಕೃತಿಯ ವೈಭವವನ್ನು ಹಾಡಿಹೊಗಳಿದ್ದಾರೆ. ಈ ಗೀತೆಯನ್ನು ಪುಟ್ಟಣ್ಣನವರ ಸೋದರರಾದ ಕಣಗಾಲ್‌ ಪ್ರಭಾಕರ ಶಾಸ್ತ್ರಿಗಳು ಬರೆದು, ಎಂ.ರಂಗರಾವ್‌ ಅವರು ಸುಮಧುರವಾದ ಸಂಗೀತವನ್ನು ಸಂಯೋಜಿಸಿದ್ದಾರೆ.

ಇದೇ ಚಿತ್ರದ ‘ಜನ್ಮ ಜನ್ಮದ ಅನುಬಂಧ ಹೃದಯ ಹೃದಯಗಳ ಪ್ರೇಮಾನುಬಂಧ...’ ಗೀತೆಯಲ್ಲೂ ಪ್ರಕೃತಿಯ ಸಿರಿ ವಿಜೃಂಭಿಸುತ್ತದೆ. ಈ ಗೀತೆಯಲ್ಲಿ ಹೃದಯ ಹೃದಯಗಳ ಸಂಗಮವನ್ನು ‘ತುಂಗಭದ್ರಾ ಸಂಗಮದಂತೆ’ ಎಂದು ಹೇಳಿ ಕನ್ನಡನಾಡಿನ ಪ್ರಮುಖ ಜೀವನದಿಯಾದ ತುಂಗಭದ್ರೆಯನ್ನು ನೆನೆದಿದ್ದಾರೆ. ಇದೇ ಗೀತೆಯಲ್ಲಿ ಬರುವ ‘ಕನ್ನಡ ಜನರ ಔದಾರ್ಯದಂತೆ..’ ಸಾಲಿನಲ್ಲಿ, ಗಂಡು-ಹೆಣ್ಣಿನ ಹೃದಯ ಹೃದಯಗಳ ಪ್ರೇಮವನ್ನು ಕನ್ನಡಿಗರ ಔದಾರ್ಯಕ್ಕೆ ಹೋಲಿಸಿದ್ದಾರೆ!

ಪುಟ್ಟಣ್ಣನವರ ಅತ್ಯಂತ ಪ್ರಸಿದ್ಧ ಚಿತ್ರ ಶರಪಂಜರದಲ್ಲಂತೂ ಅವರ ಗೀತೆಗಳ ಚಿತ್ರೀಕರಣ ಅತ್ಯುತ್ತಮವಾಗಿವೆ. ‘ಕೊಡಗಿನ ಕಾವೇರಿ.. ಕಾವೇರಿ ನೀ ಬೆಡಗಿನ ಒಯ್ಯಾರಿ... ಕನ್ನಡ ಕುಲನಾರಿ ಕಾವೇರಿ ನೀ ಸೊಬಗಿನ ಸಿಂಗಾರಿ’ ಗೀತೆಯನ್ನು ಮೊದಲಿಗೆ ತಲಕಾವೇರಿಯಲ್ಲಿ ಕಾವೇರಿ ಕುಂಡಿಕೆಯಲ್ಲಿ ಕಲ್ಪನಾ ಮತ್ತು ಗಂಗಾಧರ್‌ ಮೀಯುವ ದೃಶ್ಯದೊಂದಿಗೆ ಪ್ರಾರಂಭಿಸಿರುವುದು, ಕನ್ನಡನಾಡಿನ ಜೀವನದಿ ಕಾವೇರಿಯ ಮೇಲಿನ ಅವರ ಅಭಿಮಾನವನ್ನು ಎತ್ತಿತೋರಿಸುತ್ತದೆ. ಬ್ರಹ್ಮಗಿರಿಯಲ್ಲಿ ಗೀತೆಯ ಚಿತ್ರೀಕರಣವನ್ನು ಮುಂದುವರೆಸಿದ್ದಾರೆ.

ಕಾವೇರಿ ನದಿಯು ತಲಕಾವೇರಿಯ ಬ್ರಹ್ಮಗಿರಿ ಶಿಖರಗಳಿಂದ ಇಳಿದು ಭಾಗಮಂಡಲದ ತ್ರಿವೇಣಿಸಂಗಮದಲ್ಲಿ ಹರಿದು, ನಂತರ ಬಯಲುಸೀಮೆಯನ್ನು ಪ್ರವೇಶಿಸಿ ಮೈಸೂರಿನ ಕೃಷ್ಣರಾಜನಗರದ ಬಳಿಯ ಚುಂಚನಕಟ್ಟೆಯಲ್ಲಿ ಮೊದಲ ಜಲಪಾತವನ್ನು ಸೃಷ್ಟಿಸುತ್ತಾಳೆ. ಈ ಗೀತೆಯ ಮುಂದಿನ ಚಿತ್ರೀಕರಣವನ್ನು ಚುಂಚನಕಟ್ಟೆಯ ಸುಂದರ ಜಲಪಾತದಲ್ಲಿ ಚಿತ್ರೀಕರಿಸಿದ್ದಾರೆ. ಇನ್ನೂ ಮುಂದುವರೆದು ಮಂಡ್ಯದ ಬತ್ತದ ಹಾಗೂ ಕಬ್ಬಿನ ಗದ್ದೆಗಳನ್ನೂ ಈ ಗೀತೆಯಲ್ಲಿ ಅಳವಡಿಸಿಕೊಂಡಿದ್ದಾರೆ. ಹೀಗೆ ಒಂದೇ ಗೀತೆಯಲ್ಲಿ ಮಲೆನಾಡಿನ ಮತ್ತು ಬಯಲುಸೀಮೆಯ ಪ್ರಕೃತಿಯೆರಡನ್ನೂ ಸುಂದರವಾಗಿ ಚಿತ್ರೀಕರಿಸಿದ್ದಾರೆ ಪುಟ್ಟಣ್ಣನವರು.

ಪುಟ್ಟಣ್ಣನವರು ಶರಪಂಜರದ ಮತ್ತೊಂದು ಮಧುರ ಗೀತೆ ‘ಬಿಳಿಗಿರಿ.. ರಂಗಯ್ಯ.. ನೀನೇ.. ಕೇಳಯ್ಯ...’ ಹಾಡಿನ ಸನ್ನಿವೇಶವನ್ನು ಬಿಳಿಗಿರಿರಂಗನ ಬೆಟ್ಟದ ನಯನಮನೋಹರವಾದ ಪ್ರಕೃತಿಯ ಮಡಿಲಲ್ಲೇ ಸುಂದರವಾಗಿ ಚಿತ್ರೀಕರಿಸಿದ್ದಾರೆ. ಇದೇ ಚಿತ್ರದಲ್ಲಿ ವರಕವಿ ಬೇಂದ್ರೆಯವರ ‘ಉತ್ತರಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ..’ ಗೀತೆಯನ್ನು ಮಡಿಕೇರಿಯಲ್ಲಿ ಮತ್ತು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಿತ್ರೀಕರಿಸಿದ್ದಾರೆ. ಹೀಗೆ ಶರಪಂಜರದ ಗೀತೆಗಳು ಪುಟ್ಟಣ್ಣನವರ ಕೈಯಲ್ಲಿ ದೃಶ್ಯಕಾವ್ಯವಾಗಿವೆ. ವಿಜಯಭಾಸ್ಕರ್‌ ಅವರ ಸಂಗೀತದ ಈ ಗೀತೆಗಳನ್ನು ಕೇಳುತ್ತಿದ್ದರೆ ರೋಮಾಂಚನವಾಗುತ್ತದೆ.

ಪುಟ್ಟಣ್ಣನವರು ನಾಗರಹಾವು ಚಿತ್ರದಲ್ಲಿ ಚಿತ್ರದುರ್ಗದ ಏಳುಸುತ್ತಿನ ಕೋಟೆ ಮತ್ತು ಸುತ್ತಮುತ್ತಲ ಪರಿಸರವನ್ನು ಬಹಳ ಪರಿಣಾಮಕಾರಿಯಾಗಿ ಚಿತ್ರೀಕರಿಸಿದ್ದಾರೆ. ಈ ಚಿತ್ರದ ‘ಕನ್ನಡನಾಡಿನ ವೀರರಮಣಿಯು ಗಂಡು ಭೂಮಿಯ ವೀರನಾರಿಯ’ ಗೀತೆಯಲ್ಲಿ ಚಿತ್ರದುರ್ಗದ ವೀರವನಿತೆ ಒನಕೆ ಓಬ್ಬವನ ಚರಿತ್ರೆಯನ್ನು ಕಣ್ಣಿಗೆ ಕಟ್ಟುವಂತೆ ಸೊಗಸಾಗಿ ಚಿತ್ರಿಸಿದ್ದಾರೆ.

ಇದೇ ಚಿತ್ರದ ಅತಿಮಧುರವಾದ ಗೀತೆ ‘ಬಾರೇ.. ಬಾರೇ.. ಚೆಂದದ ಚೆಲುವಿನ ತಾರೆ...’ ಗೀತೆಯನ್ನು ಚಿತ್ರದುರ್ಗದ ಜೋಗಿನಮಟ್ಟಿ ಅರಣ್ಯದ ಬೆಟ್ಟಸಾಲಿನ ಹುಲ್ಲುಗಾವಲಿನಲ್ಲಿ ವಿಷ್ಣುವರ್ಧನ್‌ ಮತ್ತು ಆರತಿಯವರ ಅಭಿನಯದಲ್ಲಿ ಮನೋಜ್ಞವಾಗಿ ಸೆರೆಹಿಡಿದ್ದಾರೆ. ಈ ಗೀತೆಯಲ್ಲಿ ಪುಟ್ಟಣ್ಣನವರು ಆರತಿಯವರ ನಲಿದಾಟವನ್ನು ‘ಸ್ಲೋ ಮೋಷನ್‌’ ತಂತ್ರಜ್ಞಾನ ಬಳಸಿ ಬಹಳ ಮೋಹಕವಾಗಿ ಚಿತ್ರಿಸಿದ್ದಾರೆ. ಬಹುಶ: ಕನ್ನಡ ಚಿತ್ರಗೀತೆಯ ಚಿತ್ರೀಕರಣದಲ್ಲಿ ‘ಸ್ಲೋ ಮೋಷನ್‌’ ತಂತ್ರಜ್ಞಾನ ಬಳಸಿದವರಲ್ಲಿ ಪುಟ್ಟಣ್ಣನವರೇ ಮೊದಲಿಗರಿರಬೇಕು.

ನಂತರ ‘ಎಡಕಲ್ಲು ಗುಡ್ಡದಮೇಲೆ’ ಚಿತ್ರದಲ್ಲಿನ ಜಯಂತಿಯವರ ಅಭಿನಯದ ‘ವಿರಹ ನೂರು ನೂರು ತರಹ’ ಗೀತೆಯಲ್ಲೂ ಪುಟ್ಟಣ್ಣನವರ ಕೌಶಲ್ಯ ಎದ್ದುಕಾಣುತ್ತದೆ. ಈ ಗೀತೆಯನ್ನು ಅವರು ಮಡಿಕೇರಿಯ ಸುಂದರ ಪರಿಸರದಲ್ಲಿ, ಸಂಜೆಸೂರ್ಯನ ಹೊಂಬೆಳಕಿನಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ.

ಇದರ ನಂತರ ಬಂದ ಉಪಾಸನೆ ಚಿತ್ರವನ್ನು ಮಲೆನಾಡಿನ ಶೃಂಗೇರಿಯಲ್ಲಿ ಚಿತ್ರೀಕರಿಸಿದ್ದಾರೆ. ಇದರ ಮತ್ತೊಂದು ವಿಶೇಷವೆಂದರೆ ಭರತ ಖಂಡದ ದಕ್ಷಿಣ ತುದಿಯಾದ ಕನ್ಯಾಕುಮಾರಿಯಲ್ಲಿ ಚಿತ್ರೀಕರಿಸಿದ ‘ಭಾರತ ಭೂಶಿರ ಮಂದಿರ ಸುಂದರಿ ಭುವನ ಮನೋಹರಿ ಕನ್ಯಾಕುಮಾರಿ’ ಎಂಬ ಗೀತೆ.

ಪುಟ್ಟಣ್ಣನವರು ‘ಧರ್ಮಸೆರೆ’ ಚಿತ್ರದಲ್ಲಿ ‘ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ’ಎಂಬ ಅತಿಮಧುರ ಗೀತೆಯನ್ನು ಮಲೆನಾಡಿನ ಅಡಿಕೆ ತೋಟಗಳ ಮಧ್ಯೆ ಶ್ರೀನಾಥ ಮತ್ತು ಅರತಿಯವರ ಅಭಿನಯದಲ್ಲಿ ಅತ್ಯಂತ ರಮಣೀಯವಾಗಿ ಚಿತ್ರಿಸಿದ್ದಾರೆ. ಈ ಗೀತೆಗೆ ಮಧುರವಾದ ಸಂಗೀತ ನೀಡಿದವರು ಉಪೇಂದ್ರಕುಮಾರ್‌. ‘ರಂಗನಾಯಕಿ’ ಪುಟ್ಟಣ್ಣನವರ ಮತ್ತೊಂದು ಮಹೋನ್ನತ ಚಿತ್ರ. ಈ ಚಿತ್ರದಲ್ಲಿ ಹಂಪೆಯು ಐತಿಹಾಸಿಕ ಸ್ಥಳಗಳನ್ನು ಸೆರೆಹಿಡಿದಿದ್ದಾರೆ. ‘ಕನ್ನಡನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ ರಂಗನಾಯಕಿ’ ಗೀತೆ ಅಂಬರೀಷ್‌ ಅವರ ಅಭಿನಯದಲ್ಲಿ ಸುಂದರವಾಗಿ ಮೂಡಿಬಂದಿದೆ.

ಮಾನಸ ಸರೋವರ ಚಿತ್ರ ಪುಟ್ಟಣ್ಣವರ ಅತ್ಯುತ್ತಮ ಚಿತ್ರಗಳಲ್ಲಿ ಒಂದು. ಈ ಚಿತ್ರದಲ್ಲಿ ಶ್ರೀನಾಥ ಅವರ ಅಭಿನಯ ಮನೋಜ್ಞವಾಗಿದೆ. ಈ ಚಿತ್ರವನ್ನು ಬಯಲುಸೀಮೆಯ ಮಲೆನಾಡಾದ ಬಳ್ಳಾರಿ ಜಿಲ್ಲೆಯ ಸಂಡೂರು ಪ್ರದೇಶದಲ್ಲಿ ಚಿತ್ರಿಕರಿಸಿದ್ದಾರೆ. ಮಾನಸ ಸರೋವರ ಚಿತ್ರದ ‘ಮಾನಸ ಸರೋವರ.. ನೀ ನನ್ನ ಮನಕೆ ಮಾನಸ ಸರೋವರ’ ಗೀತೆಯನ್ನು ಮತ್ತು ‘ವೇದಾಂತಿ ಹೇಳಿದನು.. ಹೊನ್ನೆಲ್ಲ ಮಣ್ಣು ಮಣ್ಣು.. ಕವಿಯೊಬ್ಬ ಹಾಡಿದನು.. ಮಣ್ಣೆಲ್ಲ ಹೊನ್ನು ಹೊನ್ನು..’ ಎಂಬ ಶಿವರುದ್ರಪ್ಪನವರ ಗೀತೆಯನ್ನು ಮತ್ತು ಇನ್ನುಳಿದ ಎಲ್ಲಾ ಹಾಡುಗಳನ್ನೂ ಪುಟ್ಟಣ್ಣನವರು ಸಂಡೂರು ಸುತ್ತಮುತ್ತಲ ರಮಣೀಯ ಪ್ರಕೃತಿಯಲ್ಲಿ ಸೆರೆಹಿಡಿದಿದ್ದಾರೆ. ದು:ಖದ ವಿಷಯವೆಂದರೆ ಸಂಡೂರಿನ ಸುಂದರ ಪರಿಸರ ಅಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಗಣಿಗಾರಿಕೆಯಿಂದಾಗಿ ಅವನತಿಯತ್ತ ಸಾಗಿದೆ.

ಮಸಣದ ಹೂವು ಚಿತ್ರದಲ್ಲಿ ಪುಟ್ಟಣ್ಣನವರು ಕನ್ನಡನಾಡಿನ ಕರಾವಳಿ ಸೀಮೆಯನ್ನು ಪರಿಚಯಿಸಿದ್ದಾರೆ. ‘ಕನ್ನಡನಾಡಿನ ಕರಾವಳಿ.. ಕನ್ನಡದೇವಿಯ ಪ್ರಭಾವಳಿ..’ ಗೀತೆಯ ‘ಧರ್ಮವ ಸಾರುವ ಧರ್ಮಸ್ಥಳ.. ಉಡುಪಿಯೇ ವೈಕುಂಠ..ಗೋಕರ್ಣ ಕೈಲಾಸ’ ಎಂಬ ಸಾಲುಗಳಲ್ಲಿ ಕರಾವಳಿ ಜಿಲ್ಲೆಗಳ ಪ್ರಸಿದ್ಧ ಪುಣ್ಯಕ್ಷೇತ್ರಗಳನ್ನೂ ಮತ್ತು ಅಲ್ಲಿನ ಸುಂದರ ಕಡಲ ತೀರಗಳನ್ನೂ ಸೆರೆಹಿಡಿದಿದ್ದಾರೆ.

ಇದೇ ಚಿತ್ರದ ‘ಹಿಂದುಸ್ಥಾನವು ಎಂದೂ ಮರೆಯದ ಭಾರತರತ್ನವು ನೀನಾಗು.. ಕನ್ನಡಹಿರಿಮೆಯ ಮಗನಾಗು ಕನ್ನಡನುಡಿಯ ಸಿರಿಯಾಗು..’ ಎಂಬ ಗೀತೆಯಲ್ಲಿ ಕನ್ನಡನಾಡಿನ ಮಕ್ಕಳು ಕನ್ನಡ ತಾಯಿಗೂ, ಭಾರತಮಾತೆಗೂ ಕೀರ್ತಿ ತರುವ ಪ್ರಜೆಗಳಾಗಿ ಬಾಳಲಿ ಎಂಬ ಸಂದೇಶವನ್ನು ನೀಡಿದ್ದಾರೆ.

ಹೀಗೆ ಪುಟ್ಟಣ್ಣನವರ ತಮ್ಮ ಚಿತ್ರಗಳಲ್ಲಿ ಕನ್ನಡನಾಡಿನ ರಮಣೀಯ ಪ್ರಕೃತಿ ಸಿರಿಯನ್ನು ಹಾಗೂ ಕನ್ನಡತನವನ್ನು ಬಹಳ ಸುಂದರವಾಗಿ ಅಳವಡಿಸಿಕೊಂಡಿದ್ದರು. ಕನ್ನಡದ ಕಾದಂಬರಿಗಳನ್ನು ಆಧರಿಸಿಯೇ ಚಿತ್ರಕಥೆಯನ್ನು ರಚಿಸಿ ಚಿತ್ರ ನಿರ್ಮಿಸುತ್ತಿದ್ದ ಪುಟ್ಟಣ್ಣನವರು ಇಂದಿನ ನಿರ್ದೇಶಕರಿಗೆ ಆದರ್ಶಪ್ರಾಯರಾಗಿದ್ದಾರೆ. ಕನ್ನಡದಲ್ಲಿ ಒಳ್ಳೆ ಕಥೆಗಳಿಲ್ಲ ಎನ್ನುವ ಇಂದಿನ ಚಿತ್ರನಿರ್ಮಾಪಕರು, ನಿರ್ದೇಶಕರು ಪುಟ್ಟಣ್ಣನವರು ಹಾಕಿಕೊಟ್ಟ ಮಾದರಿಯನ್ನು ಅಳವಡಿಸಿಕೊಂಡು ರೀಮೇಕ್‌ ಸಂಸ್ಕೃತಿ ಬಿಟ್ಟು ಕನ್ನಡದ ಸೊಗಡಿರುವ ಚಿತ್ರಗಳನ್ನು ಕನ್ನಡ ಚಿತ್ರಾಭಿಮಾನಿಗಳಿಗೆ ನೀಡಲಿ ಎಂಬುದೇ ನಮೆಲ್ಲರ ಆಶಯ.

ಒಟ್ಟಿನಲ್ಲಿ ಕನ್ನಡಕ್ಕೊಬ್ಬನೇ ಪುಟ್ಟಣ್ಣ ಎಂದರೆ ತಪ್ಪಲ್ಲ. ಇಂತಹ ಮಹನೀಯರನ್ನು ಪಡೆದ ಕನ್ನಡ ಚಿತ್ರರಂಗ ಧನ್ಯ.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more