• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜನ್‌-ನಾಗೇಂದ್ರ ಹರಿಸಿದ ಜೇನಿನ ಹೊಳೆ ಹಾಲಿನ ಮಳೆ

By Staff
|

ರಾಜನ್‌-ನಾಗೇಂದ್ರ ಹರಿಸಿದ ಜೇನಿನ ಹೊಳೆ ಹಾಲಿನ ಮಳೆ

ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ಸಂಗೀತ ನಿರ್ದೇಶಕ ಜೋಡಿ ಎಂದರೆ, ರಾಜನ್‌-ನಾಗೇಂದ್ರ ಜೋಡಿ. ಅದು ಮಾಡಿದ ಮೋಡಿ ಅದ್ಭುತ. ಈ ಜೋಡಿ, 1965 ರಿಂದ 1990 ರವರೆಗೆ ಕನ್ನಡ ಚಿತ್ರ ರಸಿಕರಿಗೆ ಸುಮಧುರ ಗೀತೆಗಳನ್ನು ನೀಡಿದೆ. ಈ ಅವಧಿಯಲ್ಲಿ ಬಂದ ಅಸಂಖ್ಯ ಗೀತೆಗಳು ವರುಷಗಳು ಉರುಳಿದರೂ ಮನಸ್ಸಿನಲ್ಲಿ ಮಾರ್ದನಿಸುತ್ತವೆ

ಸಂಪಿಗೆ ಶ್ರೀನಿವಾಸ, ಬೆಂಗಳೂರು
‘ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ, ಕಣ್ಣಲ್ಲೇ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ’ ನಾ ನಿನ್ನ ಮರೆಯಲಾರೆ ಚಿತ್ರದ ಈ ಹಾಡನ್ನು ಸಂಪಿಗೆ ಚಿತ್ರಮಂದಿರದಲ್ಲಿ ನೋಡಿದಾಗ ನನಗಿನ್ನೂ ಮೀಸೆ ಚಿಗುರಿರಲಿಲ್ಲ! ಆದರೆ ಈ ಹಾಡು ಮತ್ತು ಅದರ ಮಧುರ ಸಂಗೀತ ಸವಿನೆನಪಾಗಿ ನನ್ನನ್ನು ಇನ್ನೂ ಕಾಡುತ್ತಿದೆ. ಅಣ್ಣಾವ್ರು ಮತ್ತು ಲಕ್ಷ್ಮೀ ಈ ಯುಗಳ ಗೀತೆಯನ್ನು ಚಿತ್ರದಲ್ಲಿ ಹಾಡುತ್ತಿದ್ದಾಗ ಅಭಿಮಾನಿಗಳಿಂದ ಅದೇನು ಶಿಳ್ಳೆ! ಅದೇನು ಚಪ್ಪಾಳೆ!. ನಾನಿನ್ನೂ ಮರೆತಿಲ್ಲ ಆ ಕ್ಷಣ. ಈ ಹಾಡಿಗೆ ಸುಮಧುರ ಸಂಗೀತ ಸಂಯೋಜಿಸಿದ್ದು ಕನ್ನಡ ಚಿತ್ರರಂಗ ಕಂಡ ಅತ್ಯಂತ ಯಶಸ್ವಿ ಮತ್ತು ಪ್ರತಿಭಾನ್ವಿತ ಸಂಗೀತ ನಿರ್ದೇಶಕ ಜೋಡಿ ‘ರಾಜನ್‌-ನಾಗೇಂದ್ರ’.

1965 ರಿಂದ 1990 ರವರೆಗೆ ಕನ್ನಡ ಚಿತ್ರ ರಸಿಕರಿಗೆ ಸುಮಧುರ ಗೀತೆಗಳನ್ನು ರಾಜನ್‌-ನಾಗೇಂದ್ರ ಅವರು ನೀಡಿದ್ದಾರೆ. ಇವರು ಸಂಗೀತ ಸಂಯೋಜಿಸಿದ ಒಂದೊಂದು ಗೀತೆಗಳೂ ವರುಷಗಳು ಉರುಳಿದರೂ ಇನ್ನೂ ಮನಸ್ಸಿನಲ್ಲಿ ಗುನುಗುವಂತೆ ಹಸಿರಾಗಿವೆ. ಎರಡು-ಕನಸು ಚಿತ್ರದ ‘ಎಂದೆಂದೂ ನಿನ್ನನು ಮರೆತು ಬದುಕಿರಲಾರೆ’, ‘ತಂನಂ ತಂನಂ ಮನಸು ಮಿಡಿಯುತಿದೆ... ’ ಎಂಬ ಯುಗಳ ಗೀತೆಗಳಿರಿಲಿ ಅಥವಾ ‘ಪೂಜಿಸಲೆಂದೇ ಹೂಗಳ ತಂದೆ... ’, ‘ಇಂದು ಎನಗೆ ಗೊವಿಂದ...’ ಎಂಬ ಭಕ್ತಿರಸದಿಂದ ಕೂಡಿದ ಗೀತೆಗಳಿರಲಿ, ಎಲ್ಲ ತರಹದ ಗೀತೆಗಳ ಸಂಗೀತ ಸಂಯೋಜನೆಯಲ್ಲೂ ಇವರದು ಎತ್ತಿದಕೈ.

ರಾಜನ್‌-ನಾಗೇಂದ್ರ ಅವರು ಸಂಗೀತ ಸಂಯೋಜನೆಯಲ್ಲಿ ಮಧುರ ರಾಗ ಸಂಯೋಜನೆಯ ಜೊತೆಗೆ, ಲಯಬದ್ಧ ತಾಳಕ್ಕೂ ಪ್ರಾಮುಖ್ಯತೆ ನೀಡುತ್ತಿದ್ದರು. ಇವರ ಸಂಗೀತ ಸಂಯೋಜನೆಯ ಶೈಲಿ ಆ ಕಾಲದಲ್ಲಿ ಅವರದೇ ಬ್ರ್ಯಾಂಡ್‌ ಆಗಿ ಗುರುತಿಸಲ್ಪಟ್ಟಿತ್ತು. ಚಿತ್ರಗೀತೆಯ ಪಲ್ಲವಿಯನ್ನು ಕೇಳುತ್ತಲೇ ಅದು ಅವರದೇ ಸಂಗೀತ ಸಂಯೋಜನೆ ಎಂದು ಜನರು ಗುರುತಿಸುವ ಮಟ್ಟಿಗೆ ಜನಪ್ರಿಯವಾಗಿದ್ದವು. ರಾಜನ್‌-ನಾಗೇಂದ್ರ ಸಂಗೀತ ಸಂಯೋಜನೆಯ ವಿಶಿಷ್ಟತೆ ಎಂದರೆ, ಆ ಕಾಲದಲ್ಲಿ ಜನಪ್ರಿಯವಾಗಿದ್ದ ಪಾಶ್ಚಿಮಾತ್ಯ ವಾದ್ಯಗಳಾದ ಡ್ರಮ್ಸ್‌ಗಳ ಹಾಗೂ ಗಿಟಾರ್‌ಗಳ ಉಪಯೋಗ. ಡ್ರಮ್ಸ್‌ಗಳ ಮತ್ತು ಗಿಟಾರ್‌ಗಳ ಹಿಮ್ಮೇಳವನ್ನು ಇವರಷ್ಟು ಪರಿಣಾಮಕಾರಿಯಾಗಿ ಕನ್ನಡ ಚಿತ್ರಸಂಗೀತದಲ್ಲಿ ಅಳವಡಿಸಿಕೊಂಡವರು ಆ ಕಾಲದಲ್ಲಿ ಇಲ್ಲವೆಂದೇ ಹೇಳಬೇಕು.

ನಾನಿನ್ನ ಬಿಡಲಾರೆ ಚಿತ್ರದ ‘ಎಂದೆಂದಿಗೂ ನಾ ನಿನ್ನ... ಬಿಡಲಾರೆ ಬಾ ಚಿನ್ನ’ ಮತ್ತು ಸಿಂಗಪೂರಿನಲ್ಲಿ ರಾಜಾ ಕುಳ್ಳ ಚಿತ್ರದ ‘ಪ್ರೇಮ ಪ್ರೀತಿ ನನ್ನುಸಿರು’ ಗೀತೆಗಳು ಇದಕ್ಕೆ ಅತ್ಯುತ್ತಮ ಉದಾಹರಣೆಗಳು. ಈಗಿನ ಇಲೆಕ್ಟ್ರಾನಿಕ್‌ ಯುಗದ ಡಿಜಿಟಲ್‌ ಡ್ರಮ್ಸ್‌ಗಳು ಆಗ ಇದ್ದಿದ್ದರೆ, ಈಗ ತಮಿಳಿನ ಎ.ಆರ್‌.ರೆಹಮಾನ್‌ ನೀಡುತ್ತಿರುವ ಸಂಗೀತವನ್ನು ಈ ಜೋಡಿ ಆಗಲೆ ನೀಡುತ್ತಿದ್ದರೋ ಏನೋ? ಉದಾಹರಣೆಗೆ ಗುರುಕಿರಣ್‌ ಅವರು ಇತ್ತೀಚೆಗೆ ತುಂಟಾಟ ಎಂಬ ಚಿತ್ರಕ್ಕಾಗಿ ರೀಮಿಕ್ಸ್‌ ಮಾಡಿದ ‘ಸುತ್ತಮುತ್ತ ಯಾರೂ ಇಲ್ಲ’ ಹಾಡನ್ನು ಕೇಳಿದವರಿಗೆ ತಿಳಿಯುತ್ತದೆ, ರಾಜನ್‌-ನಾಗೇಂದ್ರ ಅವರ ಸಂಗೀತದ ಆಧುನಿಕ ಶೈಲಿ ಹೇಗಿದ್ದಿರಬಹುದು ಎಂದು!

ಗಾಳಿಮಾತು ಚಿತ್ರದ ‘ಬಯಸದೆ ಬಳಿ ಬಂದೆ’ ಹಾಡಿರಬಹುದು ಅಥವಾ ಹೊಂಬಿಸಿಲು ಚಿತ್ರದ ‘ಜೀವವೀಣೆ ಮೀಡು ಮಿಡಿತದ ಸಂಗೀತ’ ಅಥವಾ ‘ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು’ ಹಾಡಿರಬಹುದು, ಇವೆಲ್ಲಾ ಗೀತೆಗಳ ಸಂಗೀತ ಅತ್ಯುತ್ತಮ ಲಯದಿಂದ ಕೂಡಿ ಕೇಳುಗರಿಗೆ ಮೋಡಿಯನ್ನು ಮಾಡುತ್ತವೆ. ‘ಜೀವವೀಣೆ ಮೀಡು ಮಿಡಿತದ ಸಂಗೀತ’ ಹಾಡಿನ ಆರಂಭದ ಸಂಗೀತವಂತೂ ಬಹಳ ಆಕರ್ಷಕವಾಗಿದೆ. ಈಗಲೂ ಈ ಗೀತೆಗಳು ಆಕಾಶವಾಣಿ ಅಥವಾ ದೂರದರ್ಶನದಲ್ಲಿ ಬಂದಾಗ ಮನಸ್ಸಿನಲ್ಲಿ ಗುನುಗುವಂತೆ ಮಾಡಿ ಮತ್ತೊಮ್ಮೆ ಕೇಳಬೇಕೆನಿಸುವಷ್ಟು ಇಂಪಾಗಿವೆ.

ಡಾ. ರಾಜ್‌ ಅವರ ಅನೇಕ ಚಿತ್ರಗಳಿಗೆ ರಾಜನ್‌-ನಾಗೇಂದ್ರ ಜೋಡಿ ಅತ್ಯುತ್ತಮ ಸಂಗೀತ ಸಂಯೋಜಿಸಿದ್ದಾರೆ. ಬಂಗಾರದ ಹೂವಿನ ‘ಓಡುವ ನದಿ ಸಾಗರವ ಸೇರಲೆ ಬೇಕು’, ಮೇಯರ್‌ ಮುತ್ತಣ್ಣ ಚಿತ್ರದ ‘ಹಳ್ಳಿಯಾದರೇನು ಶಿವಾ... ದಿಳ್ಳಿಯಾದರೇನು ಶಿವಾ...’, ನ್ಯಾಯವೇ ದೇವರು ಚಿತ್ರದ ‘ಆಕಾಶವೆ ಬೀಳಲಿ ಮೇಲೆ ನಾನೆಂದು ನಿನ್ನವನು’, ಗಂಧದಗುಡಿಯ ಅತ್ಯಂತ ಪ್ರಸಿದ್ಧ ‘ನಾವಾಡುವ ನುಡಿಯೇ ಕನ್ನಡ ನುಡಿ’ , ಶ್ರೀನಿವಾಸ ಕಲ್ಯಾಣ ಚಿತ್ರದ ‘ಪವಡಿಸು ಪರಮಾತ್ಮ ಶ್ರೀ ವೆಂಕಟೇಶ’ ಎಂಬ ಭಕ್ತಿರಸಪೂರಿತ ಗೀತೆ, ಭಾಗ್ಯವಂತರು ಚಿತ್ರದ ‘ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯ ಹಾಡಿತು’ ಎಂಬ ಮನಮಿಡಿಯುವಂಥ ಗೀತೆ, ಗಿರಿಕನ್ಯೆ ಚಿತ್ರದ ‘ನಗು ನಗುತಾ ನೀ ಬರುವೆ’, ‘ಏನೆಂದು ನಾ ಹೇಳಲಿ ಮಾನವನಾಸೆಗೆ ಕೊನೆಯೆಲ್ಲಿ’ ಗೀತೆಗಳು, ನಾ ನಿನ್ನ ಮರೆಯಲಾರೆ ಚಿತ್ರದ ‘ಸಿಹಿಮುತ್ತು ಸಿಹಿಮುತ್ತು ಇನ್ನೊಂದು’, ‘ನನ್ನಾಸೆಯಾ ಹೂವೆ ಬೆಳದಿಂಗಳಾ ಚೆಲುವೆ’ ಮತ್ತು ‘ನಾ ನಿನ್ನ ಮರೆಯಲಾರೆ’ ಗೀತೆಗಳು, ನಾನೊಬ್ಬ ಕಳ್ಳ ಚಿತ್ರದ ‘ಅರಳುತಿದೆ ಮೋಹ, ಹೃದಯದಲಿ ದಾಹ’, ‘ಆಸೆಯು ಕೈಗೂಡಿತು ಆಸರೆ ದೊರೆತಾಯಿತು’ ಮತ್ತು ಚಲಿಸುವ ಮೋಡಗಳು ಚಿತ್ರದ ‘ಜೇನಿನ ಹೊಳೆಯೋ ಹಾಲಿನ ಮಳೆಯೋ.. ಸುಧೆಯೋ ಕನ್ನಡ ಸವಿನುಡಿಯೋ’ ಗೀತೆಗಳು, ರಾಜನ್‌-ನಾಗೇಂದ್ರ ಅವರು ಡಾ. ರಾಜ್‌ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ ಕೆಲವು ಮರೆಯಲಾರದ ಗೀತೆಗಳು. ಗಂಧದ ಗುಡಿ ಚಿತ್ರದ ‘ನಾವಾಡುವ ನುಡಿಯೇ ಕನ್ನಡ ನುಡಿ’ ಮತ್ತು ಚಲಿಸುವ ಮೋಡಗಳು ಚಿತ್ರದ ‘ಜೇನಿನ ಹೊಳೆಯೋ ಹಾಲಿನ ಮಳೆಯೋ’ ಗೀತೆಗಳಂತೂ ಎಷ್ಟು ಜನಪ್ರಿಯವಾದವೆಂದರೆ, ಅವು ಒಂದು ರೀತಿಯಲ್ಲಿ ಕನ್ನಡದ ನಾಡಗೀತೆಗಳಾಗಿ ಬಿಟ್ಟಿವೆ.

ಇನ್ನು ಕನ್ನಡದ ಮತ್ತೊಬ್ಬ ಖ್ಯಾತ ನಟರಾದ ವಿಷ್ಣುವರ್ಧನ ಅವರ ಅನೇಕ ಚಿತ್ರಗಳಿಗೂ ರಾಜನ್‌-ನಾಗೇಂದ್ರ ಜೋಡಿ ಸಂಗೀತ ನೀಡಿದ್ದಾರೆ. ಹೊಂಬಿಸಿಲು ಚಿತ್ರದ ಮಧುರ ಗೀತೆಗಳು ; ದೇವರಗುಡಿ ಚಿತ್ರದ ‘ಮಾಮರವೆಲ್ಲೋ ಕೋಗಿಲೆಯೆಲ್ಲೋ’, ‘ಕಣ್ಣು ಕಣ್ಣು ಒಂದಾಯಿತು’ ಮತ್ತು ‘ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ’ ಗೀತೆಗಳು ; ಕಳ್ಳಕುಳ್ಳ ಚಿತ್ರದ ‘ನಾ ಹಾಡಲು ನೀನು ಹಾಡ ಬೇಕು’ ಮತ್ತು ‘ಸುತ್ತಮುತ್ತ ಯಾರೂ ಇಲ್ಲ’ ಗೀತೆಗಳು ; ಸಿಂಗಪೂರಿನಲ್ಲಿ ರಾಜಾಕುಳ್ಳ ಚಿತ್ರದ ‘ನಿನ್ನೆ ನಿನ್ನೆಗೆ ನಾಳೆ ನಾಳೆಗೆ’ ಮತ್ತು ‘ಪ್ರೇಮ ಪ್ರೀತಿ ನನ್ನುಸಿರು’ ಗೀತೆಗಳು ; ಬಿಳಿಗಿರಿಯ ಬನದಲ್ಲಿ ಚಿತ್ರದ ‘ತಾರೆಯು ಬಾನಿಗೆ ತಾವರೆ ನೀರಿಗೆ’ ಗೀತೆ ; ಅವಳ ಹೆಜ್ಜೆ ಚಿತ್ರದ ‘ನೆರಳನು ಕಾಣದ ಲತೆಯಂತೆ’, ‘ಬಂದೆಯ ಬಾಳಿನ ಬೆಳಕಾಗಿ’ ಮತ್ತು ‘ದೇವರ ಆಟ ಬಲ್ಲವರಾರು’ ಗೀತೆಗಳು ; ಹೃದಯಗೀತೆ ಚಿತ್ರದ ‘ಯುಗಯುಗಗಳೆ ಸಾಗಲಿ ನಮ್ಮ ಪ್ರೇಮ ಶಾಶ್ವತ’ ಮುಂತಾದ ಗೀತೆಗಳು, ಇವರು ಸಂಗೀತ ನೀಡಿದ ವಿಷ್ಣು ಅವರ ಅಭಿನಯದ ಅತ್ಯಂತ ಜನಪ್ರಿಯ ಗೀತೆಗಳು.

ಇದಲ್ಲದೇ ವಿಷ್ಣು ಹಾಗೂ ಶ್ರೀನಾಥ ಜೋಡಿಯ ಕಿಲಾಡಿ-ಜೋಡಿ, ಪ್ರೀತಿ ಮಾಡು ತಮಾಷೆ ನೋಡು ಚಿತ್ರದ ಗೀತೆಗಳಿಗೂ ಮಧುರವಾದ ಸಂಗೀತವನ್ನು ಈ ಜೋಡಿ ನೀಡಿದ್ದಾರೆ. ಇವರೇ ಸಂಗೀತ ನೀಡಿದ ಪ್ರಣಯ ರಾಜ ಶ್ರೀನಾಥ ಅವರ ಪಾವನ ಗಂಗ ಚಿತ್ರದ ‘ಆಕಾಶ ದೀಪವು ನೀನು... ನಿನ್ನ ಕಂಡಾಗ ಸಂತೋಷವೇನು’ ಮತ್ತು ‘ಮೊದಲನೆ ದಿನವೆ ಒಲಿದೆ... ನಿನ್ನ ನಡೆಗೆ ಸವಿನುಡಿಗೆ’ ಗೀತೆಗಳನ್ನು ಎಷ್ಟು ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.

ಒಂದು ಕಾಲದಲ್ಲಿ ಅನಂತ್‌ನಾಗ್‌ ಮತ್ತು ಲಕ್ಷ್ಮೀ ಅವರ ಜನಪ್ರಿಯ ಜೋಡಿಯ ಚಿತ್ರಗಳು ರಾಜನ್‌-ನಾಗೇಂದ್ರ ಜೋಡಿಯ ಸುಮಧುರ ಸಂಗೀತದಿಂದಲೇ ಅತ್ಯಂತ ಯಶಸ್ವಿಯಾಗಿದ್ದವು ಎಂದರೆ ತಪ್ಪಾಗಲಾರದು. ಚಂದನದ ಗೊಂಬೆ ಚಿತ್ರದ ‘ಆಕಾಶದಿಂದ ಧರೆಗಿಳಿದ ರಂಭೆ’ , ನಾ ನಿನ್ನ ಬಿಡಲಾರೆ ಚಿತ್ರದ ‘ನಾನು ನೀನು ಒಂದಾದ ಮೇಲೆ ಹೀಗೇಕೆ ದೂರ ಹೋಗುವೆ’, ‘ಮನೆಯನು ಬೆಳಗಿದೆ ಇಂದು ನೀ ಬಂದು’ ; ಮತ್ತು ಬೆಂಕಿಯಬಲೆ ಚಿತ್ರದ ‘ಬಿಸಿಲಾದರೇನು ಮಳೆಯಾದರೇನು’ ಗೀತೆಗಳು ಇವರ ಸಂಗೀತದ ಅತ್ಯಂತ ಜನಪ್ರಿಯ ಗೀತೆಗಳು.

ಅನಂತ್‌ನಾಗ್‌-ಕಲ್ಪನಾ ಅಭಿನಯದ ಬಯಲು ದಾರಿ ಚಿತ್ರದ ಗೀತೆಗಳಂತೂ ಒಂದಕ್ಕಿಂತ ಒಂದು ಸೊಗಸಾಗಿವೆ. ‘ಎಲ್ಲಿರುವೇ ಮನವ ಕಾಡುವ ರೂಪಸಿಯೇ’ ಹಾಡು ಪ್ರೇಮಿಯೋರ್ವ ತನ್ನ ಪ್ರೇಯಸಿಯನ್ನು ಹುಡುಕುತ್ತಿರುವ ಒಂದು ಸುಂದರ ಗೀತೆಯಾಗಿ ಇಂದಿಗೂ ಪ್ರೇಮಿಗಳ ಬಾಯಲ್ಲಿ ನಲಿಯುತ್ತಿವೆ. ‘ಬಾನಲ್ಲೂ ನೀನೆ... ಬುವಿಯಲ್ಲೂ ನೀನೆ...’ ಹಾಡಿನ ಸಾಹಿತ್ಯ ಮತ್ತು ಲಯ ಹೆಣ್ಣಿನ ಮನಸ್ಸಿನಲ್ಲಿನ ಪ್ರಿಯಕರನ ಮೇಲಿನ ಪ್ರೀತಿಯನ್ನು ಪರಿಣಾಮಕಾರಿಯಾಗಿ ಹೊರಗೆಡವುತ್ತದೆ. ಇದೇ ಚಿತ್ರದ ‘ಕನಸಲೂ ನೀನೆ... ಮನಸಲೂ ನೀನೆ...’ ಗೀತೆಯಂತೂ ಯುವ ಪ್ರೇಮಿಗಳ ಮನಸ್ಸಲ್ಲಿ ಇಂದಿಗೂ ರೋಮಾಂಚನ ಮೂಡಿಸುತ್ತದೆ.

‘ಗಂಧದ ಗುಡಿ - ಭಾಗ 2’ ಇವರು ಸಂಗೀತ ನೀಡಿದ ಇತ್ತೀಚಿನ ಚಿತ್ರ. ಇದರ ವಿಶೇಷತೆಯೆಂದರೆ ರಾಜನ್‌-ನಾಗೇಂದ್ರ ಅವರು, ಗಂಧದಗುಡಿಯಲ್ಲಿ ಪಿ.ಬಿ.ಶ್ರೀನಿವಾಸ್‌ ಅವರು ಹಾಡಿದ ‘ನಾವಾಡುವ ನುಡಿಯೆ ಕನ್ನಡ ನುಡಿ’ ಜನಪ್ರಿಯ ಗೀತೆಯನ್ನು ಡಾ. ರಾಜ್‌ ಅವರ ಕಂಠದಲ್ಲಿ ಸ್ವಲ್ಪ ವಿಭಿನ್ನವಾಗಿ ರಾಗ ಸಂಯೋಜಿಸಿ ಹಾಡಿಸಿದ್ದಾರೆ.

ಮೇಲೆ ಪ್ರಸ್ತಾಪಿಸಿದ ರಾಜನ್‌-ನಾಗೇಂದ್ರ ಅವರ ಎಲ್ಲಾ ಗೀತೆಗಳು ನನಗೆ ಅತ್ಯಂತ ಅಚ್ಚುಮೆಚ್ಚು. ಹಾಗೆಯೇ ನನ್ನಂತೆ ಬಹಳಷ್ಟು ಕನ್ನಡ ಚಿತ್ರರಸಿಕರಿಗೂ ಕೂಡ. ನೀವು ಈ ಗೀತೆಗಳನ್ನು ಕೇಳಿರದಿದ್ದರೆ www.kannadaaudio.comನಲ್ಲಿ ಕೇಳಿ ಆನಂದಿಸಿ, ನಿಮ್ಮ ಅನಿಸಿಕೆ ತಿಳಿಸಿ.

ಕನ್ನಡದ ಪ್ರತಿಭಾವಂತ ಗೀತ ರಚನೆಕಾರರಾದ ದಿವಂಗತ ಚಿ.ಉದಯ್‌ುಶಂಕರ್‌ ಮತ್ತು ರಾಜನ್‌-ನಾಗೇಂದ್ರ ಜೋಡಿ ಸೇರಿ ಕನ್ನಡ ಚಿತ್ರರಂಗಕ್ಕೆ ಅತಿಮಧುರವಾದ ಗೀತ-ಸಂಗೀತದ ಹೊಸ ಯುಗವನ್ನೇ ಸೃಷ್ಟಿಸಿದರು. ಒಟ್ಟಿನಲ್ಲಿ ಹೇಳಬೇಕೆಂದರೆ ರಾಜನ್‌-ನಾಗೇಂದ್ರ ಜೋಡಿ ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ಸಂಗೀತ ನಿರ್ದೇಶಕ ಜೋಡಿ ಎಂದರೆ ತಪ್ಪಲ್ಲ. ಕನ್ನಡ ಚಿತ್ರರಸಿಕರಿಗೆ ಮಧುರ ಗೀತೆಗಳ ಮೂಲಕ ಮರೆಯಲಾರದ ಕಾಣಿಕೆಯನ್ನು ನೀಡಿ, ಅವರ ಹೃದಯದಲ್ಲಿ ವಿಶಿಷ್ಟ ಸ್ಥಾನ ಪಡೆದ್ದಿದ್ದಾರೆ.

ಕೆಲವು ವರ್ಷಗಳ ಹಿಂದೆ ನಾಗೇಂದ್ರ ಅವರ ನಿಧನದಿಂದ ರಾಜನ್‌-ನಾಗೇಂದ್ರ ಜೋಡಿಯ ಕೊಂಡಿಯೊಂದು ಕಳಚಿದರೂ, ಈ ಜೋಡಿ ಸಂಗೀತ ನೀಡಿದ ಹಾಡುಗಳು ಈಗಲೂ ಕೇಳಲು ಇಂಪಾಗಿ ಕನ್ನಡ ಚಿತ್ರ ರಸಿಕರ ಮನಸ್ಸಿನಲ್ಲಿ ಹಚ್ಚಹಸಿರಾಗಿವೆ. ದಿವಂಗತ ನಾಗೇಂದ್ರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತ ಈ ಲೇಖನವನ್ನು ಮುಗಿಸುತ್ತೇನೆ.

ǚ⠓ݢo / A쑜|Wݙݡ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more