ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಡನೆಂಬ ಪ್ರಾಣಿಯ ಧರ್ಮಸಂಕಟ, ಅವನಿಗಷ್ಟೇ ಗೊತ್ತು!

By Staff
|
Google Oneindia Kannada News

ಗಂಡನೆಂಬ ಪ್ರಾಣಿಯ ಧರ್ಮಸಂಕಟ, ಅವನಿಗಷ್ಟೇ ಗೊತ್ತು!
ಎರಡು ಜಡೆಗಳು ಒಂದೆಡೆ ಸೇರಿದರೆ ಜಗಳ ತಪ್ಪದು ಎಂಬ ಮಾತಿದೆ! ಅತ್ತೆ-ಸೊಸೆಯರ ಜಗಳದಲ್ಲಿ ಬಡವಾಗುವುದು ಕೂಸಲ್ಲ, ಕೂಸಿನ ಅಪ್ಪ! -ನನ್ನ ಈ ಮಾತಿಗೆ, ಲೇಖನ ಓದುತ್ತಿರುವ ಗಂಡಸರೆಲ್ಲರೂ ಹೌದಪ್ಪ ಅನ್ನುತ್ತಿದ್ದಾರೆಂದು ನಾನು ಭಾವಿಸಿದ್ದೇನೆ? ನೀವೇನಂತಿರಾ ವೀರಮಹಿಳೆಯರೇ?

sampige_srinivas2 ಸಂಪಿಗೆ ಶ್ರೀನಿವಾಸ, ಬೆಂಗಳೂರು
[email protected]

ಗಂಡನೆಂಬ ಪ್ರಾಣಿಯ ಧರ್ಮಸಂಕಟ ಗಂಡಂದಿರಿಗೆ ಮಾತ್ರ ಗೊತ್ತು!!! ಈ ಧರ್ಮಸಂಕಟ ಬಹುಪಾಲು ಗಂಡಂದಿರ ಅನುಭವ ಎಂದರೆ ತಪ್ಪಾಗಲಾರದು. ಬಹಳಷ್ಟು ಗಂಡಂದಿರು ಇದಕ್ಕೆ ಸಹಮತ ವ್ಯಕ್ತಪಡಿಸುತ್ತಾರೆ ಎಂದು ನಂಬಿ, ನನ್ನ ಅನಿಸಿಕೆಗಳನ್ನು ಅನುಭವಗಳನ್ನು ಹಂಚಿಕೊಳ್ಳುತ್ತಿದ್ದೇನೆ.

ಕಷ್ಟಪಟ್ಟು ಓದಿ ಕೆಲಸಗಿಟ್ಟಿಸಿಕೊಂಡ ಗಂಡು, ಜೀವನದಲ್ಲಿ ಮುಂದೆ ಇನ್ನೂ ಮಹತ್ತರವಾದ ಸಂತೋಷದ ಕ್ಷಣಗಳು ಕಾದಿವೆ ಎಂದು ಸುಂದರವಾದ ಕನಸುಗಳನ್ನು ಕಾಣುತ್ತಿರುತ್ತಾನೆ. ತನ್ನ ಮುಂದಿನ ಜೀವನದ ಸುಖ-ದು:ಖ ಹಂಚಿಕೊಳ್ಳುವ ಬಾಳಸಂಗಾತಿಯ ಬರುವಿಗಾಗಿ ಅವನ ಮನಸ್ಸು ಹಾತೊರೆಯುತ್ತಿರುತ್ತದೆ. ಬಾಳಸಂಗಾತಿಯನ್ನು ಹುಡುಕುವ ಆ ಸಮಯದಲ್ಲಿ ಗಂಡಿನ ಮನಸ್ಸು ಒಂದು ಸುಂದರವಾದ ಆಶಾಗೋಪುರವನ್ನು ಕಟ್ಟುತ್ತಿರುತ್ತದೆ.

ತಾನು ಮದುವೆಯಾಗುವ ಹುಡುಗಿ ಹೀಗಿರಬೇಕು ಹಾಗಿರಬೇಕು ಎಂದು ಮನದಲ್ಲೇ ಚಿಂತಿಸುತ್ತ ವಧುಪರೀಕ್ಷೆಗೆ ಸಿದ್ಧವಾಗುತ್ತಾನೆ. ಬದಲಾದ ಇಂದಿನ ಕಾಲದಲ್ಲಿ ವಧುವೂ ತಾನು ಮದುವೆಯಾಗಬಯಸುವ ಗಂಡನ್ನು ಅಂದರೆ ವರನನ್ನು ಪರೀಕ್ಷಿಸಲು ಮೊದಲೇ ಸಿದ್ದಾವಾಗಿರುತ್ತಾಳೆ. ಹೀಗೆ ಗಂಡು ಹೆಣ್ಣುಗಳ ಸಂದರ್ಶನ/ಗಳು ನಡೆದು ಕೊನೆಗೊಂದು ಸಂದರ್ಶನದಲ್ಲಿ ಇಬ್ಬರೂ ಇಷ್ಟಪಟ್ಟು ಬಾಳಸಂಗಾತಿಗಳಾಗಲು ಒಪ್ಪಿಕೊಂಡಾಗ ಇಬ್ಬರಿಗೂ ಸ್ವರ್ಗ ಮೂರೇಗೇಣು!

ಸರಿ ಸಂಭ್ರಮದಿಂದ ಎರಡೂ ಕಡೆ ತಂದೆ-ತಾಯಂದಿರು, ಬಂಧುಬಳಗದವರು ಗಂಡು ಹೆಣ್ಣುಗಳನ್ನು ತಮ್ಮ ಸಂಪ್ರದಾಯದಂತೆ ಮದುವೆ ಮಾಡಿ ತಮ್ಮ ಜವಾಬ್ದಾರಿ ಕಳೆಯಿತೆಂದು ನಿಟ್ಟುಸಿರುಬಿಡುತ್ತಾರೆ. ಮದುವೆಯಾದ ಗಂಡುಹೆಣ್ಣಿಗಂತೂ ಮದುವೆಯ ಶಾಸ್ತ್ರದಲ್ಲಿ ಪಾಲ್ಗೊಂಡ ಆಯಾಸವಿದ್ದರೂ ತಮ್ಮ ಮದುವೆ ಸಂಭ್ರಮದಿಂದ ನಡೆದುದನ್ನು ನೆನೆದು ಸಂತಸಗೊಂಡಿರುತ್ತಾರೆ. ಸಂತೋಷದಿಂದ ಮಧುಚಂದ್ರಕ್ಕೂ ಹೋಗಿಬರುತ್ತಾರೆ. ಮುಂದೆ ತನಗೆ ದೊಡ್ಡ ಗಂಡಾಂತರ ಕಾದಿದೆ ಎಂಬ ಎಳ್ಳಷ್ಟು ಅನುಮಾನವೂ ಗಂಡಿಗೆ ಇರುವುದಿಲ್ಲ.

ಸಂತೋಷದಿಂದ ಮಗನ ಮದುವೆಯನ್ನು ಮಾಡಿ ಸೊಸೆಯನ್ನು ಮನೆಗೆ ತುಂಬಿಸಿಕೊಂಡ ತಾಯಿ ಮತ್ತು ತನ್ನ ತವರನ್ನು ಬಿಟ್ಟು ಗಂಡನ ಮನೆಗೆ ಬಂದ ಹೆಣ್ಣು ಒಂದೆರಡು ದಿನ ಅನೋನ್ಯವಾಗಿರುತ್ತಾರೆ. ಸೊಸೆಯನ್ನು ಮಗಳಂತೆ ಕಾಣುವ ಅತ್ತೆ ಹಾಗೂ ಅತ್ತೆಯನ್ನು ತನ್ನ ತಾಯಿಯಂತೆ ಕಾಣುವ ಸೊಸೆಯಿದ್ದರೆ ಮದುವೆಯಾದ ಗಂಡಿಗೆ ಯಾವ ಸಮಸ್ಯೆಯೂ ಇರುವುದಿಲ್ಲ. ಆದರೆ ನಿಜಜೀವನದಲ್ಲಿ ಈ ರೀತಿ ಇರುವ ಅತ್ತೆ ಸೊಸೆಯರು ಬಹಳ ಅಪರೂಪ!

ತನ್ನ ತಂದೆ-ತಾಯಂದಿರ ಬಗ್ಗೆ ಅತಿಯಾದ ಪ್ರೀತಿಯನ್ನೂ, ಗೌರವವನ್ನು ಹೊಂದಿ ಅವರ ಮನಸ್ಸಿಗೆ ಎಳ್ಳಷ್ಟೂ ನೋವಾಗಬಾರದೆಂಬ ಮನಸ್ಥಿತಿಯನ್ನು ಹೊಂದಿರುವ ಗಂಡನಿದ್ದರೆ ಹೆಂಡತಿಗೆ ಕಷ್ಟ. ತಾನು ಮದುವೆಯಾದ ಹೆಂಡತಿಯೇ ಸರ್ವಸ್ವ. ಅವಳ ಮನಸ್ಸಿಗೆ ನೋವಾಗುವುದನ್ನು ಸಹಿಸಿಕೊಳ್ಳದ ಮನಸ್ಥಿತಿಯಿರುವ ಮಗನಿದ್ದರೆ ತಂದೆ-ತಾಯಂದಿರಿಗೆ ಕಷ್ಟ. ಆದರೆ ತಂದೆ-ತಾಯಂದಿರ ಬಗೆಯೂ ಅತಿಯಾದ ಪ್ರೀತಿಯನ್ನು ಹೊಂದಿ, ಮದುವೆಯಾದ ಹೆಂಡತಿಯ ಬಗ್ಗೆಯೂ ಅಷ್ಟೇ ಪ್ರೀತಿಯಿರುವ ಗಂಡನಿಗೆ ಆಗುವುದೇ ಧರ್ಮಸಂಕಟ.

ಸಾಮಾನ್ಯವಾಗಿ ಹೊಸದಾಗಿ ಮದುವೆಯಾದವರ ಮನೆಯಲ್ಲಿ ಸಮಸ್ಯೆ ಪ್ರಾರಂಭವಾಗುವುದೇ ಅಡುಗೆ ಮನೆಯಲ್ಲಿ. ಏಕೆಂದರೆ ಇಷ್ಟುದಿನ ತನ್ನ ಕುಟುಂಬದವರಿಗೆ ಅಡಿಗೆ ಮಾಡಿ ಬಡಿಸುತ್ತಿದ್ದ ತಾಯಿಗೆ, ಬೇರೆ ಮನೆಯಿಂದ ಬಂದ ಹೆಣ್ಣೊಬಳ ಜೊತೆಗೆ ಒಟ್ಟಿಗೆ ಕೆಲಸಮಾಡುವುದು ಹಾಗೇ ಮದುವೆಯಾದ ಹೆಣ್ಣಿಗೂ ಅತ್ತೆಯೊಂದಿಗೆ ಹೊಂದಿಕೊಂಡು ಹೋಗುವುದು ಅಷ್ಟು ಸುಲಭವಲ್ಲ. ಚಿಕ್ಕ ಚಿಕ್ಕ ವಿಷಯಕ್ಕೆ ಮನಸ್ತಾಪಗಳು ಶುರುವಾಗುತ್ತವೆ.

ಸೊಸೆಗೆ ಸರಿಯಾಗಿ ಅಡಿಗೆ ಮಾಡಲು ಬರದಿದ್ದರಂತೂ ಅತ್ತೆಗೆ ಇನ್ನಿಲ್ಲದ ಕೋಪ. ಆ ಕೋಪವನ್ನು ಕೆಲವರು ಮನಸ್ಸಿನಲ್ಲೇ ಇಟ್ಟುಕೊಂಡರೆ ಇನ್ನು ಕೆಲವರು ಸೊಸೆಯ ಮುಖಕ್ಕೆ ಹೊಡೆದಂತೆ ಹೇಳುತ್ತಾರೆ. ಸೊಸೆಗೆ ಸರಿಯಾಗಿ ಅಡಿಗೆ ಮಾಡಲು ಹೇಳಿಕೊಡುವ ಮನಸ್ಸು ಅತ್ತೆಗೆ ಇರುವುದಿಲ್ಲ. ಮದುವೆಗೆ ಮುಂಚೆ ಸರಿಯಾಗಿ ಅಡಿಗೆ ಮಾಡುವುದನ್ನು ಕಲಿತಿರದ ಸೊಸೆಯಂದಿರು, ಗಂಡನ ಮನೆಗೆ ಬಂದಮೇಲೆ ಅಡಿಗೆ ಮಾಡಲು ಹಿಂಜರಿಯುತ್ತಾರೆ. ಇನ್ನು ಕೆಲವು ಸೊಸೆಯಂದಿರಿಗೆ ಯಾವುದೇ ಕೆಲಸಮಾಡಲು ಇಷ್ಟವಿಲ್ಲದ ಮೈಗಳ್ಳತನ. ಟಿ.ವಿಯಲ್ಲಿ ಬರುವ ಧಾರಾವಾಹಿಗಳನ್ನು ನೋಡಿಕೊಂಡು ಹಾಯಾಗಿ ಕಾಲಕಳೆಯುತ್ತಾರೆ!

ಇನ್ನು ಹೊರಗೆ ಕೆಲಸಕ್ಕೆ ಹೋಗುವ ಸೊಸೆಯಂದಿರಿಗೆ ಹೊರಗೂ ಕೆಲಸ ಮನೆಯ ಒಳಗೂ ಕೆಲಸ. ಅಂತಹ ಸೊಸೆಯರ ಪಾಡು ನಾಯಿಪಾಡಾಗಿರುತ್ತದೆ. ಕೆಲವರು ಅತ್ತೆಯಂದಿರು ಸೊಸೆ ಮಾಡುವ ಎಲ್ಲ ಕೆಲಸಕ್ಕೂ ಗೊಣಗುತ್ತಿರುತ್ತಾರೆ. ಮೃದುಮನಸ್ಸಿನ ಸೊಸೆಯಂದಿರು ಅತ್ತೆ ಏನೇ ಗೊಣಗಿಕೊಂಡರೂ ಸುಮ್ಮನಿದ್ದು ಬಿಡುತ್ತಾರೆ. ಆದರೆ ಇನ್ನು ಕೆಲವು ಸೊಸೆಯಂದಿರು ಅತ್ತೆಯ ವಿರುದ್ಧ ದನಿಯೆತ್ತುತ್ತಾರೆ. ಗಂಡನಿಗೆ ಚಾಡಿ ಹೇಳುತ್ತಾರೆ. ಆಗ ಗಂಡನೆಂಬ ಪ್ರಾಣಿಗೆ ಇತ್ತ ತನ್ನ ತಾಯಿ ಪರವಹಿಸಬೇಕೋ ಇಲ್ಲ ಹೆಂಡತಿಯ ಪರವಹಿಸಬೇಕೋ ಎಂದು ತಿಳಿಯದೇ ಒದ್ದಾಡುತ್ತಾನೆ.

ಇಲ್ಲಿ ಹೆಂಡತಿಯೇ ಸರಿಯಾಗಿದ್ದರೂ, ತನ್ನನ್ನು ಹೆತ್ತುಹೊತ್ತು, ಸಾಕಿಸಲಹಿದ ತಾಯಿಗೆ ವಿರುದ್ಧವಾಗಿ ಮಾತನಾಡಲು ಸಂಕಟಪಡುತ್ತಾನೆ. ಹೆಂಡತಿಯದೇ ತಪ್ಪಿದ್ದರೂ ಕಾಯಾ ವಾಚಾ ಮನಸಾ ಧರ್ಮಪತ್ನಿ ಎಂದು ಸ್ವೀಕರಿಸಿದ ಹೆಂಡತಿಯು ಮನನೋಯಿಸಲು ಅವನಿಗೆ ಕಷ್ಟವಾಗುತ್ತದೆ. ಇತ್ತ ತಂದೆ-ತಾಯಿಯರನ್ನೂ, ತನ್ನವರನ್ನೆಲ್ಲಾ ಬಿಟ್ಟು ತನ್ನನ್ನೇ ನಂಬಿ ತನ್ನ ಜೊತೆ ಬಾಳಲು ಬಂದ ಹೆಂಡತಿ, ಅತ್ತ ತನ್ನನ್ನು ಅಕ್ಕರೆಯಿಂದ ಸಾಕಿಸಲಹಿದ ತಾಯಿ. ಇಬ್ಬರೂ ಬೇಕು ಅವನಿಗೆ. ಇಂತಹ ಧರ್ಮಸಂಕಟ ಅನುಭವಿಸಿದವರಿಗೆ ಗೊತ್ತು ಅದರ ನೋವು. ಹಂಸಲೇಖರ ‘ತುತ್ತಾ? ಮುತ್ತಾ?’ ಹಾಡು ನೆನಪಿಸಿಕೊಳ್ಳಿ!

ದಿನದಿಂದದಿನಕ್ಕೆ ಅತ್ತೆಸೊಸೆಯರ ಮಧ್ಯೆ ಮನಸ್ತಾಪಗಳು ಹೆಚ್ಚಾಗುತ್ತ ಹೋದಂತೆ ಗಂಡನೆಂಬ ಪ್ರಾಣಿಗೆ ಮದುವೆಯ ಮುಂಚೆ ಕಟ್ಟಿಕೊಂಡಿದ್ದ ಆಶಾಗೋಪುರ ಕುಸಿಯುತ್ತಿರುವಂತೆ ಭಾಸವಾಗುತ್ತದೆ. ಏಕಾದರೂ ಮದುವೆಯಾದೆನೋ ಎನ್ನಿಸಿಬಿಡುವಷ್ಟು ಮನಸ್ಸಿಗೆ ಬೇಸರವಾಗಿಬಿಡುತ್ತದೆ.

ಅತ್ತೆಸೊಸೆಯರು ತಮ್ಮತಮ್ಮ ಪ್ರತಿಷ್ಠೆಯನ್ನು ಬದಿಗಿಟ್ಟು ಸಹಕರಿಸಿ ನಡೆದರೆ ಯಾವ ಸಮಸ್ಯೆಯೂ ಇರುವುದಿಲ್ಲ. ಆದರೆ ಆ ರೀತಿ ಹೊಂದಿಕೊಂಡು ಬಾಳುವ ಮನಸ್ಸು ಅತ್ತೆಗಿದ್ದರೆ ಸೊಸೆಗೆ ಇರುವುದಿಲ್ಲ, ಸೊಸೆಗಿದ್ದರೆ ಅತ್ತೆಗೆ ಇರುವುದಿಲ್ಲ. ಅತ್ತೆಸೊಸೆ ಇಬ್ಬರೂ ಹೊಂದಿಕೊಂಡು ಬಾಳುವ ಮನೆಯಿದ್ದರೆ ಅದೇ ನಂದಗೋಕುಲವಾಗುತ್ತದೆ!

ಇನ್ನು ಗಂಡನ ಮನೆಯಲ್ಲಿ ನಾದಿನಿಯರು, ಮೈದುನರು ಇದ್ದರಂತೂ ಹೆಂಡತಿಗೆ ಅವರೊಂದಿಗೂ ಹೊಂದಿಕೊಂಡು ಹೋಗಬೇಕಾದ ಅನಿವಾರ್ಯತೆ ಇರುತ್ತದೆ. ಕೆಲವೊಮ್ಮೆ ಅತ್ತೆಸೊಸೆಯರ ಮಧ್ಯೆ ಸಂಬಂಧ ಬಿಗಡಾಯಿಸಿದರೆ, ಒಟ್ಟಿಗೆ ಬಾಳುವುದು ಕಷ್ಟವೆನಿಸಿದರೆ ಗಂಡನಿಗೆ ವಿಧಿಇಲ್ಲದೆ ಬೇರೆ ಮನೆ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಹೆಂಡತಿಗಾಗಿ ತನ್ನ ತಂದೆ ತಾಯಿಯರನ್ನು ದೂರಮಾಡಿಕೊಂಡ ಕಳಂಕವನ್ನು ಸಮಾಜ ಗಂಡನಿಗೆ ಹೊರಿಸುತ್ತದೆ. ತನಗಾಗಿ ಎಲ್ಲವನ್ನೂ ಬಿಟ್ಟು ಬಂದಿರುವ ಹೆಂಡತಿಯನ್ನು ಆದರಿಸದ ಗಂಡಂದಿರೂ ಇರುತ್ತಾರೆ. ಅಂತಹ ಗಂಡನನ್ನು ಪಡೆದ ಹೆಣ್ಣಿಗೆ ಬಾಳು ನರಕವೆನಿಸುತ್ತದೆ.

ಆದರೆ ತಂದೆತಾಯಂದಿರಿಗೆ ಒಬ್ಬನೇ ಮಗನಾಗಿದ್ದರೆ, ಜೊತೆಗೆ ತಂದೆಯೂ ಗತಿಸಿದ್ದರೆ ತಾಯಿಯನ್ನು ಒಂಟಿಯಾಗಿ ಬಿಟ್ಟು ಬೇರೆ ಮನೆಮಾಡಲು ಗಂಡನಿಗೆ ಸರಿಯೆನಿಸುವುದಿಲ್ಲ. ಆಗ ಹೆಂಡತಿಗೆ ಅತ್ತೆಯೊಂದಿಗೆ ಹೊಂದಿಕೊಂಡು ಹೋಗಲೇ ಬೇಕಾದ ಅನಿವಾರ್ಯತೆ ಇರುತ್ತದೆ. ತಾಯಿಯೂ ತನ್ನ ಮಗನ ನೆಮ್ಮದಿಗಾಗಿ ಸೊಸೆಯೊಂದಿಗೆ ಸಹಕರಿಸಿದರೆ ಗಂಡನೆಂಬ ಪ್ರಾಣಿಗೆ ಅದಕ್ಕಿಂತ ಬೇರೆ ಸು:ಖ ಬೇಕಿಲ್ಲ.

ಕುಟುಂಬದಲ್ಲಿ ಸಾಮಾನ್ಯವಾಗಿ ಅತ್ತೆ-ಸೊಸೆಯರ ಮಧ್ಯೆಯೇ ಸಂಬಂಧ ಬಿಗಡಾಯಿಸಿದರೂ, ಕೆಲವು ಕುಟುಂಬಗಳಲ್ಲಿ ಮಾವನಿಗೂ ಸೊಸೆಗೂ ಮನಸ್ತಾಪವೇರ್ಪಡುತ್ತದೆ. ಯಾರಮಧ್ಯೆ ಮನಸ್ತಾಪ ಶುರುವಾದರೂ ಗಂಡನೆಂಬ ಪ್ರಾಣಿಗೆ ನೆಮ್ಮದಿಯಿರುವುದಿಲ್ಲ. ಒಟ್ಟಿನಲ್ಲಿ ಮದುವೆಯಾದ ಮೇಲೆ ತುತ್ತಾ? ಮುತ್ತಾ? ಎಂಬ ಧರ್ಮಸಂಕಟ ಗಂಡನೆಂಬ ಪ್ರಾಣಿಗೆ ಕಟ್ಟಿಟ್ಟ ಬುತ್ತಿ! ಯಾಕಾದರೂ ಮದುವೆಯಾದೆನೋ ಎಂದು ನಿಮಗೂ ಒಮ್ಮೆ ಅನಿಸಿರಬೇಕಲ್ಲವೇ?

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X