• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಂಗ್ಯಮ್ಮ ನಗುವಾಗ...

By Staff
|

ತಂಗ್ಯಮ್ಮ ನಗುವಾಗ...

ಅಣ್ಣ ತಂಗಿಯರ ಸಂಬಂಧ ಈ ಮಣ್ಣಿನ ವಿಶೇಷತೆ. ಪುರಾಣ, ಜಾನಪದ, ಸಿನಿಮಾಗಳಲ್ಲಿ ಅಣ್ಣತಂಗಿಯರ ಬಾಂಧವ್ಯ ಅರಳಿ ಚೆಂದದ ಹೂವಾಗಿದೆ. ಸೌರಭ ಸೂಸಿದೆ. ರಕ್ಷಾಬಂಧನದ ಹಿನ್ನೆಲೆಯಲ್ಲಿ ಅಣ್ಣತಂಗಿಯರ ಬಂಧವನ್ನು ನೀವು ಇನ್ನಷ್ಟು ಬಲಗೊಳಿಸಿ. ಆ ಪರಿಣಾಮ ದಕ್ಕುವ ಸಕಲ ಸುಖ ನಿಮ್ಮದಾಗಲಿ.

sampige_srinivas2 ಸಂಪಿಗೆ ಶ್ರೀನಿವಾಸ, ಬೆಂಗಳೂರು

sampiges@hotmail.com

ಹೋದವಾರ ನಾಗರ ಪಂಚಮಿ ಹಬ್ಬ. ಇಂದು ರಕ್ಷಾಬಂಧನ. ಅಣ್ಣತಂಗಿಯರ, ಅಕ್ಕತಮ್ಮಂದಿರ ಪವಿತ್ರ ಬಾಂಧವ್ಯವನ್ನೇ ಹಬ್ಬವಾಗಿ ಆಚರಿಸುವುದು ಇವುಗಳ ವಿಶೇಷತೆ. ಸೋದರ ಸೋದರಿಯರ ನಡುವಿನ ಪರಮಪವಿತ್ರ ಸಂಬಂಧವನ್ನು ನೆನಸಿಕೊಂಡು ಸಂಭ್ರಮದಿಂದ ಆಚರಿಸುವ ಈ ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ. ಈ ಸೋದರ ಪ್ರೇಮ ಬರೀ ಒಡಹುಟ್ಟಿದವರಿಗಷ್ಟೇ ಮಾತ್ರ ಸೀಮಿತವಾಗಿಲ್ಲ. ಒಡಹುಟ್ಟಿದ ಸೋದರ-ಸೋದರಿಯರಿಲ್ಲದಿದ್ದರೂ ಬೇರೆಯವರಲ್ಲೇ ಆ ಸೋದರ ಪ್ರೇಮವನ್ನು ಈ ಹಬ್ಬಗಳ ಮೂಲಕ ಕಾಣುವ ಒಂದು ಸುಂದರ ಸಂಸ್ಕೃತಿಯನ್ನು ನಮ್ಮ ಹಿರಿಯರು ನಮಗೆ ಬಿಟ್ಟು ಹೋಗಿದ್ದಾರೆ.

ಅಣ್ಣತಂಗಿಯರ ಸಂಬಂಧವನ್ನು ನಮ್ಮ ದೇಶದ ಮಹಾಕಾವ್ಯವಾದ ಮಹಾಭಾರತದಲ್ಲೇ ಬಹಳ ಮನೋಜ್ಞವಾಗಿ ಚಿತ್ರಿಸಿರುವುದನ್ನು ನಾವು ಕಾಣಬಹುದು. ಕೌರವರಿಂದ ಅನೇಕ ರೀತಿಯಲ್ಲಿ ಸಂಕಷ್ಟಗಳನ್ನು ಅನುಭವಿಸಿದವಳು ಪಂಚಪಾಂಡವರ ಪತ್ನಿ ದ್ರೌಪದಿ. ತುಂಬಿದ ಸಭೆಯಲ್ಲಿ ದುರುಳ ದುಶ್ಯಾಸನ ಪತಿವ್ರತೆಯಾದ ದ್ರೌಪದಿಯನ್ನು ಎಳೆದು ತಂದು ಅವಳ ವಸ್ತ್ರಾಪಹರಣ ಮಾಡುತ್ತಿದ್ದಾಗ, ತನ್ನ ಐವರು ಗಂಡಂದಿರೂ ಅವಳ ಸಹಾಯಕ್ಕೆ ಬರಲಾಗದೆ ತಲೆತಗ್ಗಿಸಿರುತ್ತಾರೆ. ಆಗ ಅವಳಿಗೆ ಬೇರೆ ಗತಿ ಕಾಣದೆ ತನ್ನ ಅಣ್ಣನಂತೆ ಇರುವ ಶ್ರೀಕೃಷ್ಣನ ನೆನಪಾಗಿ, ರಕ್ಷಿಸುವಂತೆ ಅವನನ್ನೇ ಪ್ರಾರ್ಥಿಸುತ್ತಾಳೆ. ಶ್ರೀಕೃಷ್ಣ ತನ್ನ ತಂಗಿಯಾದ ದ್ರೌಪದಿಯು ಕಷ್ಟವನ್ನು ಕಂಡು ಅಕ್ಷಯಾಂಬರವನ್ನು ಕರುಣಿಸಿ ಅವಳ ಮಾನ ಕಾಪಾಡುತ್ತಾನೆ. ಹೀಗೆ ತಂಗಿಯ ಸಹಾಯಕ್ಕೆ ಒದಗಿ ಬಂದ ಅಣ್ಣನಾಗಿ ಶ್ರೀಕೃಷ್ಣ ಎಲ್ಲರ ಮೆಚ್ಚುಗೆಗೆ ಪಾತ್ರನಾಗುತ್ತಾನೆ.

Raksha Bandhana : Bond of Love Between Brother and Sisterಪಾಂಡವರು ವನವಾಸದಲ್ಲಿದ್ದಾಗ ದುರ್ಯೋಧನ ಕುತಂತ್ರದಿಂದ ಕೋಪಿಷ್ಠ ದೂರ್ವಾಸ ಮುನಿಗಳನ್ನು ಪಾಂಡವರಲ್ಲಿಗೆ ಭೋಜನಕ್ಕೆ ಹೋಗುವಂತೆ ಮಾಡುತ್ತಾನೆ. ಆಗ ಪಾಂಡವರು ರಾತ್ರಿಯೂಟವನ್ನು ಮುಗಿಸಿ, ದ್ರೌಪದಿ ಅಕ್ಷಯ ಪಾತ್ರೆಯನ್ನು ತೊಳೆದು ಇಟ್ಟಿರುತ್ತಾಳೆ. ಈ ಅಕ್ಷಯಪಾತ್ರೆ ತೊಳೆದಿಟ್ಟ ಮೇಲೆ ಮರುದಿನ ಬೆಳಗ್ಗೆಯವರೆಗೆ ಅದರಲ್ಲಿ ಏನು ಸಿಗುತ್ತಿರಲಿಲ್ಲ. ಇಂತಹ ಸಮಯದಲ್ಲಿ ದೂರ್ವಾಸರು ತನ್ನ ಸಾವಿರಾರು ಶಿಷ್ಯರೊಡನೆ ಧರ್ಮರಾಯನಲ್ಲಿಗೆ ಬಂದು, ಎಲ್ಲರಿಗೂ ಭೋಜನವೇರ್ಪಡಿಸಬೇಕೆಂದು ಕೇಳುತ್ತಾರೆ. ಆಗ ದ್ರೌಪದಿಗೆ ಮತ್ತೆ ತನ್ನ ಅಣ್ಣ ಕೃಷ್ಣ ನೆನಪಾಗುತ್ತಾನೆ. ಕೃಷ್ಣ ತಕ್ಷಣ ಪ್ರತ್ಯಕ್ಷವಾಗಿ ತಂಗಿಯಾದ ದ್ರೌಪದಿಯನ್ನು ಹಸಿವಾಗಿದೆ ತಿನ್ನಲು ಏನಾದರು ನೀಡೆಂದು ನಾಟಕವಾಡುತ್ತಾನೆ. ದ್ರೌಪದಿ ಹುಸಿಕೋಪದಿಂದ ತೊಳೆದಿಟ್ಟ ಅಕ್ಷಯಪಾತ್ರೆಯನ್ನು ಶ್ರೀಕೃಷ್ಣನಿಗೆ ತೋರಿಸುತ್ತಾಳೆ. ಶ್ರೀಕೃಷ್ಣ ಆ ಅಕ್ಷಯಪಾತ್ರೆಯಲ್ಲಿ ಅಂಟಿಕೊಂಡಿದ್ದ ಒಂದು ಅಗುಳು ಅನ್ನವನ್ನೇ ತೆಗೆದುಕೊಂಡು ತಿಂದು ತೇಗುತ್ತಾನೆ. ಆಗ ಹೊಳೆಯಲ್ಲಿ ಮಿಂದುಬರಲು ಹೋಗಿದ್ದ ದೂರ್ವಾಸರು ಹಾಗೂ ಅವರ ಶಿಷ್ಯರೆಲ್ಲರಿಗೂ ಹೊಟ್ಟೆ ತುಂಬಿದಂತಾಗಿ ಅವರೂ ತೇಗುತ್ತಾರೆ! ಹೀಗೆ ತನ್ನ ತಂಗಿಯು ನೆರವಿಗೆ ಶ್ರೀಕೃಷ್ಣ ಮತ್ತೊಮ್ಮೆ ಬರುತ್ತಾನೆ.

ತಂಗಿ ಸುಭದ್ರೆಯ ಮಗುವಾದ ಅಭಿಮನ್ಯುವಿನ ಶುಶ್ರೂಷೆಯನ್ನೂ ಬಹಳ ಮುತುವರ್ಜಿಯಿಂದ ಶ್ರೀಕೃಷ್ಣ ಮಾಡುತ್ತಾನೆ ಎಂದು ಮಹಾಭಾರತದಲ್ಲಿ ಶ್ರೀ ವೇದವ್ಯಾಸರು ಚಿತ್ರಿಸಿದ್ದಾರೆ. ಹೀಗೆ ಅಣ್ಣಂದಿರಲ್ಲಿ ಶ್ರೇಷ್ಠನಾದವನನ್ನು ಹೆಸರಿಸ ಹೊರಟರೆ ಆದಿಶಕ್ತಿಯನ್ನೇ ತಂಗಿಯಾಗಿ ಪಡೆದಿರುವ ಶ್ರೀಕೃಷ್ಣನೇ ಮೊದಲಿಗೆ ನಮ್ಮ ಮನಸ್ಸಿಗೆ ಬರುತ್ತಾನೆ.

ಅಣ್ಣ-ತಂಗಿ ಸಿನಿಮಾಗಳು :

Many films have been made with brother sister sentiments in Kannadaಸೋದರ ಪ್ರೇಮವನ್ನೇ ಬಂಡವಾಳ ಮಾಡಿಕೊಂಡಿರುವ ಕನ್ನಡ ಚಿತ್ರಗಳು ಕಡಿಮೆಯೇನಿಲ್ಲ. ಅಣ್ಣತಂಗಿಯರ ನಡುವಿನ ಪ್ರೀತಿಯ ಸಂಬಂಧವನ್ನು ನಿರೂಪಿಸುವ ಕನ್ನಡ ಚಲನಚಿತ್ರಗಳಲ್ಲಿ ಮೊದಲಿಗೆ ನೆನಪಾಗುವುದು ‘ದೇವರು ಕೊಟ್ಟ ತಂಗಿ’ ಚಿತ್ರ. ಈ ಚಿತ್ರದಲ್ಲಿ ಡಾ. ರಾಜ್‌ಕುಮಾರ್‌ ಅಣ್ಣನ ಪಾತ್ರದಲ್ಲಿ ನಟಿಸಿದ್ದಾರೆ.

ತನ್ನ ಒಡಹುಟ್ಟಿದ ತಂಗಿ ಆಕಸ್ಮಿಕವಾಗಿ ತೀರಿಕೊಂಡಾಗ ಅಣ್ಣನಿಗೆ ಲೋಕವೇ ಬೇಡವೆನಿಸಿ ಸಾಯಲು ಹೊರಟಾಗ, ಅವನಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿರುವ ಒಬ್ಬಳು ಹೆಣ್ಣು ಮಗಳು ಕಾಣಿಸುತ್ತಾಳೆ. ಅವಳನ್ನು ಅವನು ಕಾಪಾಡುತ್ತಾನೆ. ತನ್ನನ್ನು ಕಾಪಾಡಿದವನನ್ನೇ ಅಣ್ಣ ಎಂದು ಕರೆಯುತ್ತಾಳೆ. ಆಕೆಯನ್ನೇ ‘ದೇವರು ಕೊಟ್ಟ ತಂಗಿ’ ಎಂದು ಭಾವಿಸಿ ತನ್ನ ಸತ್ತ ತಂಗಿಯನ್ನು ಅವಳಲ್ಲೇ ಕಾಣುತ್ತಾನೆ. ಹೀಗೆ ಅಣ್ಣ-ತಂಗಿಯರ ಪವಿತ್ರ ಪ್ರೇಮದ ಕಥೆ ಸಾಗುತ್ತದೆ. ಇದೇ ಚಿತ್ರದ ಈ ಗೀತೆಯಲ್ಲಿ ನಾಗರಪಂಚಮಿ ಹಬ್ಬದ ದಿವಸ ತಂಗಿ ಅಣ್ಣನ ಒಳಿತಿಗಾಗಿ ತನಿಯೆರೆಯುವ ಗೀತೆ, ಅಣ್ಣ-ತಂಗಿಯರ ನಡುವಿನ ಪವಿತ್ರ ಪ್ರೇಮದ ಭಾವವನ್ನು ಮನಮುಟ್ಟುವಂತೆ ಚಿತ್ರಿಸುತ್ತದೆ.

ತನ್ನಿರೆ ಹಾಲ ತನಿ ಎರೆಯೋಣ

ತಾಯ ಹಾಲ ಋಣ ತೀರಿಪ ಇಂದೇ ಪುಣ್ಯ ದಿನ

ತಣ್ಣಗಿರಲಿ ಬೆನ್ನು ಉದರ ಅಣ್ಣ ತಮ್ಮದಿರ

ಕಾಯ ನೀಡಿದ ತಾಯಿ ಕರುಳು ನೋಯದಿರಲೆಂದು

ತವರಿನ ಕೀರ್ತಿ ಘನತೆ ಬೆಳಗಲೆಂದೆಂದು ।।

ಒಂದೆ ಬಸಿರು ಒಂದೆ ಉಸಿರು ಅಂಟಿಕೊಂಡಂಥ

ನನ್ನ ಅಣ್ಣನ ಬಾಳ ಬಳ್ಳಿ ಬಾಡದಿರಲೆಂದು

ನಲಿವಿನ ತುಂಬು ಜೀವನ ಆಗಲೆಂದೆಂದು ।।

ತಂದೆ ಯಾರೋ ತಾಯಿ ಯಾರೋ ಯಾವುದೂ ಅರಿಯೇ

ದೇವರಂಥ ಅಣ್ಣನಿರಲು ಸಂತಸಕೆ ಕೊರೆಯೇ

ಆತನ ಪ್ರೀತಿ ಆದರ ಎಂದಿಗೂ ಮರೆಯೇ ।।

ಮತ್ತೊಂದು ಹಳೆಯ ಕನ್ನಡ ಚಿತ್ರದಲ್ಲಿ ನಟಿ ಚಂದ್ರಕಲಾ ತಂಗಿಯಾಗಿ ಕೆ.ಎಸ್‌. ಅಶ್ವಥ್‌ ಮತ್ತು ಇತರ ಅಣ್ಣಂದಿರ ಮುಂದೆ ಕುಣಿಯುತ್ತ, ನಲಿಯುತ್ತ ಹಾಡುವ ಒಂದು ಹಾಡು ಬಲುಸೊಗಸಾಗಿದೆ. ಆದರೆ ಆ ಹಾಡು ನನಗೆ ನೆನಪಿಗೆ ಬರುತ್ತಿಲ್ಲ. ಈ ಅಣ್ಣ ತಂಗಿ ಸೆಂಟಿಮೆಂಟ್‌ ಬರೀ ಹಳೆಯ ಚಿತ್ರಗಳಿಗಷ್ಟೇ ಸೀಮಿತವಾಗಿಲ್ಲ. ಅಣ್ಣ ತಂಗಿಯರ ಪವಿತ್ರ ಪ್ರೇಮವನ್ನೇ ಮುಖ್ಯ ಕಥಾವಸ್ತುವಾಗುಳ್ಳ ಅನೇಕ ಹೊಸ ಚಿತ್ರಗಳು ಬಂದು ಭರ್ಜರಿಯಾಗಿ ಯಶಸ್ವಿಯಾಗಿವೆ. ಉದಾಹರಣೆಗೆ ಮುತ್ತಣ್ಣ, ತವರಿಗೆ ಬಾ ತಂಗಿ, ತವರಿನ ತೊಟ್ಟಿಲು, ಅಣ್ಣ ತಂಗಿ ಇತ್ಯಾದಿ.

ಆದರೆ ಈ ಅಣ್ಣತಂಗಿಯ ಪವಿತ್ರ ಸಂಬಂಧವನ್ನು ಇನ್ನೂ ಹೆಚ್ಚು ಸೊಗಸಾಗಿ ಚಿತ್ರಿಸಿರುವುದನ್ನು ನಾವು ಜಾನಪದ ಗೀತೆಗಳಲ್ಲಿ ಕಾಣಬಹುದು. ನಾಗರಪಂಚಮಿ ಹಬ್ಬಕ್ಕೆ ತನ್ನನ್ನು ತವರಿಗೆ ಕರೆದುಕೊಂದು ಹೋಗಲು ಅಣ್ಣ ತಡವಾಗಿ ಬಂದದ್ದೇಕೆಂದು ನೋವಿನಿಂದ ಕೇಳುವ ತಂಗಿಯ ಈ ನುಡಿಗಳು ಮನಮಿಡಿಯುವಂತಿವೆ.

ನಾರೀಯ ನೀ ಕಳಿಸಿ ಆರು ತಿಂಗಳು ಕಳದು

ಮರೆತೀರಿ ನಿಮ್ಮ ತಂಗೀಯ । ಯಾಕಣ್ಣ

ಕರುಣಿಲ್ಲವೇನ ನಿಮಗಿಷ್ಟು

ಅವ್ವ ಮರೆತದ್ಯಾಕೆ ಅಪ್ಪ ಬರಲಿಲ್ಯಾಕೆ

ಹಡದವರ ಮಗಳ ಮರತಾರ । ಇಲದಿರಕ

ಮನ ಯಾಕ ಅಣ್ಣ ತಡದಾವ

ನಾಳೆ ಪಂಚಮಿ ಹಬ್ಬ ಇಂದು ಬಂದಿರಿ ನೀವು

ತಡವ ಮಾಡಿದ್ಯಾಕ ಅಣ್ಣಯ್ಯ । ಕೇಳೊ

ತೌರವರ ಜರೆದು ಊರೆಲ್ಲ

ಉಪವಾಸ ಇಟ್ಟಾರ ನೂರೆಂಟು ಶಪಿಶಾರ

ಅಪವಾದ ಹೊರೆಸಿ ಮೆರಿಸ್ಯಾರ । ಅಣ್ಣಯ್ಯ

ನೆಪಮಾಡಿ ನನ್ನ ಹೊಡೆದಾರ

ಹೆಣ್ಣಿನ ಜನುಮಕ್ಕ ಅಣ್ಣ ತಮ್ಮರು ಬೇಕು

ಕಣ್ಣೀರನೊರಸಿ ನುಡಿದಾಕ । ಅಣ್ಣಗಳು

ನಾವಿಲ್ಲವೇನೆ ನಿನಗಂತ

ಅಕ್ಕ ತಂಗಿಯರನ್ನ ಹಾಡಿಹೊಗಳುವ ಅಣ್ಣ ತಮ್ಮಂದಿರ ಈ ಜನಪದ ಗೀತೆ ಸೋದರ ಪ್ರೇಮದ ಸವಿನುಡಿಗಳಾಗಿವೆ. ಅಕ್ಕ ತಂಗಿಯರನ್ನು ಅವ್ವನ್ನಂತೆ ಕಾಣುವ ಜನಪದರ ಈ ಭಾವನೆ ಎಷ್ಟು ಚೆಂದ ಅಲ್ಲವೇ?

ಬಾಳಿ ಪಟ್ಟಿಯ ಸೀರಿ ಬಾಯಿ ತುಂಬಿದ ವೀಳ್ಯ

ಬಾಜಾರದಾಗ ಬರುವಂಥ । ಅಕ್ಕಯ್ನ ಬಾಯ್ಗೆ

ಒಪ್ಯಾವ ದಾಳಿಂಬರಂಥ ಹಲ್ಲು

ಅರಮನಿಯ ಒತ್ತೀಗೆ ಸೇದೊ ಬಾವಿಯ ನೀರು

ಜರತಾರದಗ್ಗ ಕೊಡಪಾನ । ತಂಗೆವ್ವ

ಸೇದೂತ ಶಿವನ ನೆನೆದಾಳ

ಗಂಡ ಹೆಂಡರು ಚಂದ ಗಂಧ ಕುಂಕುಮ ಚೆಂದ

ಬಂಗಾರದಾಗ ಬಳಿಚಂದ । ತಂಗೆವ್ವ

ಕಂದನೆತ್ತುವ ನಿನ್ನ ನಡ ಚಂದ

ಪರಸ್ತ್ರೀಯರನ್ನು ಅಕ್ಕ ತಂಗಿಯರಂತೆ ಕಾಣಬೇಕೆಂದು ಹೇಳುವ ನಮ್ಮ ಭಾರತದ ಸಂಸ್ಕೃತಿ ಅತಿ ವಿಶಿಷ್ಟವಾಗಿದೆ. ಪಾಶ್ಚಾತ್ಯ ಸಂಸ್ಕೃತಿಯ ದಾಳಿಯಲ್ಲಿ ಇಂತಹ ಉತ್ತಮವಾದ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಹೊಣೆ ನಮ್ಮದು. ನಮ್ಮ ಹಿರಿಯರು ಸಾಂಪ್ರದಾಯಿಕವಾಗಿ ಆಚರಣೆಗೆ ತಂದಿರುವ ನಾಗರಪಂಚಮಿ ಹಾಗೂ ರಕ್ಷಾಬಂಧನ ಹಬ್ಬಗಳು ನಮ್ಮ ಈ ವಿಶಿಷ್ಟ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಹಕಾರಿಯಾಗಿವೆ.

ಅಣ್ಣ ತಂಗಿಯರ ಸೋದರ ಪ್ರೇಮ ನನ್ನನು ಭಾವುಕನನ್ನಾಗಿಸುತ್ತದೆ. ನನಗೆ ಒಡಹುಟ್ಟಿದ ಮುದ್ದಿನ ತಂಗಿಯ ಜೊತೆ ರಕ್ಷಾಬಂಧನ ಕಟ್ಟಿ ಮುದ್ದಿನ ತಂಗಿಯರಾದವರು ಇದ್ದಾರೆ. ನನ್ನ ಮುದ್ದಿನ ಅಕ್ಕ-ತಂಗಿಯರೆಲ್ಲರಿಗೂ ಈ ಲೇಖನ ಅರ್ಪಿಸುತ್ತಿದ್ದೇನೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more