ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವು ಮತ್ತು ಆಧ್ಯಾತ್ಮಿಕತೆ

By Staff
|
Google Oneindia Kannada News

ನಾವು ಮತ್ತು ಆಧ್ಯಾತ್ಮಿಕತೆ
‘ಊರು ಹೋಗು ಅನ್ನುತ್ತೆ ಕಾಡು ಬಾ ಅನ್ನುತ್ತೆ ’ ಅನ್ನೋ ಮಾತು ಎಲ್ಲರ ಬಾಯಲ್ಲೂ ಕೇಳಿ ಬರುತ್ತದೆ. ಅದು ಸ್ಮಶಾನ ವೈರಾಗ್ಯ. ಅದು ಆ ಕ್ಷಣದ ಹುಸಿ ಆಧ್ಯಾತ್ಮದ ಮನಸ್ಥಿತಿ. ನಿಜಕ್ಕೂ ಆಧ್ಯಾತ್ಮಿಕತೆ ಅಂದ್ರೆ ಏನು?

sampige_srinivas2 ಸಂಪಿಗೆ ಶ್ರೀನಿವಾಸ, ಬೆಂಗಳೂರು
[email protected]

ಆಚಾರ್ಯ ಶ್ರೇಷ್ಠರಾದ ಶ್ರೀ ಶಂಕರರ ಮತ್ತು ಶ್ರೀ ರಾಮಾನುಜರ ಜಯಂತಿಯನ್ನು ನಿನ್ನೆ ಅಂದರೆ ಮೇ 2ರಂದು ಆಚರಿಸಲಾಗಿದೆ. ಈ ಮಹಾನ್‌ ಆಚಾರ್ಯರ ನೆನಪಿನಲ್ಲಿ ಅವರುಗಳು ತೋರಿಸಿದ ಶ್ರೇಷ್ಠ ಆಧ್ಯಾತ್ಮಿಕ ದರ್ಶನಗಳ ಬಗ್ಗೆ ಈ ವಾರದ ಮಂಥನದಲ್ಲಿ ತಿಳಿಯೋಣ ಬನ್ನಿ.

ಇಂದಿನ ಯಾಂತ್ರೀಕೃತ ಯುಗದಲ್ಲಿ ಯುವಕರಿಗೆ ನಮ್ಮ ಧರ್ಮ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಜ್ಞಾನದ ಬಗ್ಗೆ ತಿಳಿದುಕೊಳ್ಳುವ ಸಮಯವಿರುವುದಿಲ್ಲ. ಅಂತಹವರಿಗೆ ನಮ್ಮ ಆಧ್ಯಾತ್ಮಿಕ ಚಿಂತೆನೆಗಳನ್ನು ಪರಿಚಯಿಸುವ ಸಲುವಾಗಿ ಈ ಬರಹ. ಓದುಗರು ಇದನ್ನು ಓದಿ ಆಧ್ಯಾತ್ಮಿಕ ಚಿಂತನೆಗಳಿಗೆ ತಮ್ಮ ಮನಸ್ಸನ್ನು ತೆರೆದುಕೊಳ್ಳಲೀ ಎಂಬುದೇ ಈ ಲೇಖನದ ಆಶಯ.

ಅಧ್ಯಾತ್ಮ ಎಂದರೆ ನಮ್ಮೊಳಗಿರುವ ಆತ್ಮನಿಗೆ ಸಂಬಂಧಿಸಿದ ವಿಚಾರ. ಆಧ್ಯಾತ್ಮಿಕ ಜ್ಞಾನ ಎಂದರೆ ತತ್ವಜ್ಞಾನವೆಂದೂ ಅರ್ಥವಿದೆ. ಆತ್ಮತತ್ವ ಅಥವಾ ಬ್ರಹ್ಮತತ್ವಕ್ಕೆ ಸಂಬಂಧಿಸಿದ ಜ್ಞಾನ ಎಂದೂ ತಿಳಿದುಕೊಳ್ಳಬಹುದು. ಭಾರತೀಯ ಆಧ್ಯಾತ್ಮಿಕ ಚಿಂತನೆ ವಿಶ್ವದಲ್ಲೇ ಅತ್ಯುನ್ನತ ಸ್ಥಾನವನ್ನು, ಹಿರಿಮೆಯನ್ನು ಪಡೆದಿದೆ. ಭಾರತೀಯ ಆಧ್ಯಾತ್ಮಿಕ ಚಿಂತನೆ ಎಂದರೆ ಬಹುಪಾಲು ಅದು ವೇದಾಂತದ ಚಿಂತನೆಯೇ ಆಗಿದೆ. ವೇದಾಂತ(ಉಪನಿಷತ್ತು), ಬಾದರಾಯಣರ ಬ್ರಹ್ಮಸೂತ್ರ ಮತ್ತು ಭಗವದ್ಗೀತೆ ಎಂಬ ಪ್ರಸ್ಥಾನತ್ರಯಗಳ ಆಧಾರ ಅಥವಾ ಪ್ರಮಾಣದ ಮೇಲೆ ಭಾರತೀಯ ಆಧ್ಯಾತ್ಮಿಕ ಚಿಂತನೆ ನೆಲೆಗೊಂಡಿದೆ ಎಂದರೆ ತಪ್ಪಾಗಲಾರದು.

ಈ ಆಧ್ಯಾತ್ಮಿಕ ಚಿಂತನೆ ಭಾರತದಲ್ಲಿ ಪುರಾತನಕಾಲದಿಂದಲೂ ನಡೆದು ಬಂದಿದ್ದರೂ, ಅದಕ್ಕೆ ಒಂದು ನಿರ್ದಿಷ್ಟ ದರ್ಶನದ ರೂಪ ದೊರಕಸಿಕೊಟ್ಟ ಶ್ರೇಯಸ್ಸು ಎಂಟನೇ ಶತಮಾನದ ಶ್ರೇಷ್ಠ ತತ್ವಜ್ಞಾನಿಗಳೂ, ದಾರ್ಶನಿಕರೂ ಆದ ಶ್ರೀ ಆದಿ ಶಂಕರಾಚಾರ್ಯರಿಗೇ ಸಲ್ಲುತ್ತದೆ. ಶ್ರೀ ಶಂಕರರ ದರ್ಶನವು ಅದ್ವೈತವೆಂದೇ ಜನಪ್ರಿಯವಾಗಿದೆ. ಇವರ ನಂತರ ಹನ್ನೊಂದನೇ ಶತಮಾನದಲ್ಲಿ ಮತ್ತೊಬ್ಬ ಶ್ರೇಷ್ಠ ದಾರ್ಶನಿಕರಾದ ಶ್ರೀ ರಾಮಾನುಜಾಚಾರ್ಯರು ಅದ್ವೈತಕ್ಕಿಂತ ವಿಭಿನ್ನವಾದ ವಿಶಿಷ್ಟಾದ್ವೈತ ದರ್ಶನವನ್ನು ಪ್ರಚುರಪಡಿಸಿದರು.

ದ್ವೈತ ದರ್ಶನವೆಂದು ಪ್ರಸಿದ್ಧವಾಗಿರುವ ಮತ್ತೊಂದು ಆಧ್ಯಾತ್ಮಿಕ ಚಿಂತನೆಯನ್ನು 13ನೇ ಶತಮಾನದಲ್ಲಿ ಕರ್ನಾಟಕದ ಶ್ರೇಷ್ಠ ದಾರ್ಶನಿಕರಾದ ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದರು. ಹೀಗೆ ಅದ್ವೈತ, ವಿಶಿಷ್ಟಾದ್ವೈತ ಮತ್ತು ದ್ವೈತವೆಂಬ ಮೂರು ಪ್ರಮುಖ ವೇದಾಂತ ದರ್ಶನಗಳು ಭಾರತದ ಆಧ್ಯಾತ್ಮಿಕ ಜಿಜ್ಞಾಸುಗಳಿಗೆ ಅಧ್ಯಯನ ಮಾಡಲು, ಆ ಮೂಲಕ ಶ್ರೇಷ್ಠ ಪುರುಷಾರ್ಥವಾದ ಮೋಕ್ಷವನ್ನು ಅಥವಾ ಆತ್ಮಸಾಕ್ಷಾತ್ಕಾರವನ್ನು ಪಡೆಯಲು ಸಹಕಾರಿಯಾಗಿವೆ.

ಈಗ ಈ ಮೂರೂ ಆಧ್ಯಾತ್ಮಿಕ ಚಿಂತನೆಗಳನ್ನು ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಳ್ಳೋಣ ಬನ್ನಿ.

ಅದ್ವೈತ : ಮೊದಲಿಗೆ ಶ್ರೀ ಶಂಕರರ ಅದ್ವೈತವನ್ನು ತೆಗೆದುಕೊಳ್ಳೋಣ. ಅದ್ವೈತವೆಂದರೆ ಎರಡಲ್ಲ ಒಂದು ಎಂದರ್ಥ. ಅಂದರೆ ಈ ಜಗತ್ತಿನಲ್ಲಿ ಒಂದೇ ಒಂದು ತತ್ವ ಸತ್ಯವಾದುದು. ಅದುವೇ ಬ್ರಹ್ಮ ಅಥವಾ ಪರಬ್ರಹ್ಮ ತತ್ವ. ಮಿಕ್ಕೆಲ್ಲವೂ ಅಸತ್ಯ, ಮಿಥ್ಯ ಎಂಬುದೇ ಅದ್ವೈತ ಸಿದ್ಧಾಂತ.

ಬ್ರಹ್ಮ ಮತ್ತು ಜೀವಿಗಳು ಬೇರೆಯಲ್ಲ, ಎರಡೂ ಒಂದೇ ಎಂಬ ಆತ್ಮಜ್ಞಾನವೇ ಮೋಕ್ಷ ಎನ್ನುವುದನ್ನು ಅದ್ವೈತ ಸಿದ್ಧಾಂತ ಪ್ರತಿಪಾದಿಸುತ್ತದೆ. ಅಂದರೆ ನಮ್ಮ ಕಣ್ಣಿಗೆ ಕಾಣಿಸುತ್ತಿರುವ, ನಾವು ಜೀವಿಸುತ್ತಿರುವ ಈ ಜಗತ್ತೆಲ್ಲವೂ ನಮಗೆ ಅವಿದ್ಯೆಯಿಂದ ಆಗಿರುವ ಭ್ರಮೆಯಷ್ಟೇ. ಈ ಸಂಸಾರವೆಲ್ಲ ಅವಿದ್ಯೆಯಿಂದ ಕಾಣುವ ಮಾಯೆ. ಈ ಅವಿದ್ಯೆ ನಾಶವಾದರೆ ಎಲ್ಲವೂ ಬ್ರಹ್ಮ ಸ್ವರೂಪವೇ ಆಗಿದೆ ಎಂಬುದರ ಅರಿವಾಗುತ್ತದೆ. ಈ ಬ್ರಹ್ಮಸ್ವರೂಪವನ್ನು ಅರಿತವನು ಜೀವನ್ಮುಕ್ತನಾಗುತ್ತಾನೆ ಎಂಬುದು ಈ ಸಿದ್ಧಾಂತದ ನಿಲುವು.

‘ಸರ್ವಂ ಹ್ಯೇತದ್‌ ಬ್ರಹ್ಮ ಅಯಮಾತ್ಮ ಬ್ರಹ್ಮ’ (ಮಾಂಡೂಕ್ಯ ಉಪನಿಷತ್ತು) ಮತ್ತು ‘ಅಹಂ ಬ್ರಹ್ಮಾಸ್ಮಿ’ ಎಂಬ ಎರಡು ಉಪನಿಷದ್ವಾಕ್ಯಗಳೇ ಅದ್ವೈತ ಸಿದ್ಧಾಂತದ ಮೂಲ. ಮೊದಲಿನ ವಾಕ್ಯದ ಅರ್ಥ -‘ಇದೆಲ್ಲವೂ ಬ್ರಹ್ಮವೇ ನಮ್ಮ ಆತ್ಮನು ಬ್ರಹ್ಮವೇ’ . ಎರಡನೆಯದು ‘ನಾನೇ ಬ್ರಹ್ಮ’.

ಈ ರೀತಿಯಲ್ಲಿ ಬ್ರಹಾತ್ಮೈಕತ್ವವನ್ನು ಕಾಣುವುದೇ ಅದ್ವೈತ ದರ್ಶನ. ಇದೇ ಅದ್ವೈತ ದೃಷ್ಟಿ.

ವ್ಯಾವಹಾರಿಕ ದೃಷ್ಟಿಯಿಂದ ನೋಡಿದರೆ ಪ್ರಪಂಚದಲ್ಲಿ ಅನೇಕ ಜೀವಿಗಳು ಸಂಸಾರ ಬಂಧನದಲ್ಲಿ ದು:ಖವನ್ನು ಅನುಭವಿಸುತ್ತಿರುವಂತೆ ಕಾಣುತ್ತದೆ. ಅದ್ವೈತ ಸಿದ್ಧಾಂತವು ಇದನ್ನೇ ಅವಿದ್ಯೆ ಎನ್ನುತ್ತದೆ. ವೇದಾಂತದ ಉಪದೇಶವನ್ನು ಅಧ್ಯಯನಮಾಡಿ ಆತ್ಮನಲ್ಲಿ ಅನೇಕತ್ವವಿಲ್ಲ ಎಂದು ಕಂಡುಕೊಂಡಾಗ ಶೋಕಮೋಹಗಳೆಲ್ಲ ಇನ್ನಿಲ್ಲವಾಗುವುವು. ಇಲ್ಲಿಯೇ ಬ್ರಹ್ಮತ್ವವನ್ನು ಪಡೆದುಕೊಂಡು ಜೀವನ್ಮುಕ್ತರಾಗುವೆವು ಎಂದು ಅದ್ವೈತ ದರ್ಶನ ತಿಳಿಸುತ್ತದೆ. ಆದರೆ ಯಾರು ಅವಿದ್ಯೆಯನ್ನು ಕಳೆದು ಕೊಳ್ಳದೆ ಆತ್ಮನಲ್ಲಿ ಅನೇಕತ್ವವನ್ನೇ ನೋಡುತ್ತಾನೋ ಅವನು ಈ ಸಂಸಾರದಲ್ಲಿ ಮತ್ತೆ ಮತ್ತೆ ಹುಟ್ಟುತ್ತಿರುತ್ತಾನೆ ಎಂದು ಈ ಸಿದ್ಧಾಂತ ವಿಶದಪಡಿಸುತ್ತದೆ.

ಅದ್ವೈತ ದರ್ಶನದ ಪ್ರಕಾರ ಈ ಅವಿದ್ಯೆ ಅನಾದಿ. ಆತ್ಮಜ್ಞಾನದಿಂದ ಈ ಅನಾದಿಯಾದ ಅವಿದ್ಯೆಯನ್ನು ಕಳೆದುಕೊಳ್ಳುವುದೇ ಮುಕ್ತಿ. ಶ್ರೀ ಶಂಕರರು ಭಗವದ್ಗೀತೆಯ ಆಧಾರದಿಂದ ಶ್ರೀಮನ್ನಾರಾಯಣನೇ ಪರಬ್ರಹ್ಮ ತತ್ವ ಎಂದು ತಿಳಿಸಿದ್ದಾರೆ ಎಂದು ಅದ್ವೈತ ಸಿದ್ಧಾಂತಿಗಳನೇಕರು ಹೇಳುತ್ತಾರೆ. ಇದಕ್ಕೆ ಶ್ರೀ ಶಂಕರರು ಬರೆದಿರುವ ಭಜಗೋವಿಂದಂ ಸ್ತೋತ್ರ ಒಂದು ಉದಾಹರಣೆ. ಆದರೆ ವ್ಯಾವಹಾರಿಕವಾಗಿ ಅದ್ವೈತ ಸಿದ್ಧಾಂತವು ಆರು ದೇವತೆಗಳ ಉಪಾಸನೆಯನ್ನು ಪ್ರತಿಪಾದಿಸುತ್ತದೆ. ಸೂರ್ಯ, ವಿಷ್ಣು, ಶಿವ, ಶಕ್ತಿ, ಗಣೇಶ ಮತ್ತು ಸುಬ್ರಹ್ಮಣ್ಯರೇ ಆ ಆರು ದೇವತೆಗಳು.

ವಿಶಿಷ್ಟಾದ್ವೈತ : ಈಗ ಶ್ರೀ ರಾಮಾನುಜರ ವಿಶಿಷ್ಟಾದ್ವೈತ ಸಿದ್ಧಾಂತವನ್ನು ತಿಳಿಯೋಣ. ವಿಶಿಷ್ಟಾದ್ವೈತ ಸಿದ್ಧಾಂತ ಅದ್ವೈತ ಸಿದ್ಧಾಂತಕ್ಕೆ ವಿರುದ್ಧವಾಗಿ ಮೂರು ಬೇರೆ ಬೇರೆ ತತ್ವಗಳನ್ನು ಪ್ರತಿಪಾದಿಸುತ್ತದೆ. ಪರಮಾತ್ಮ, ಜೀವಾತ್ಮ ಮತ್ತು ಪ್ರಕೃತಿ ಎಂಬುವೇ ಈ ಮೂರು ತತ್ವಗಳು. ಪರಮಾತ್ಮ ಅಥವಾ ಪರಬ್ರಹ್ಮ ವಸ್ತುವೇ ಈ ಮೂರು ತತ್ವಗಳಲ್ಲಿ ಅತ್ಯಂತ ಪ್ರಮುಖವಾದುದೆಂದೂ, ಜೀವಾತ್ಮರು ಮತ್ತು ಪ್ರಕೃತಿ ಪರಬ್ರಹ್ಮ ತತ್ವಕ್ಕಿಂತ ಭಿನ್ನವಾಗಿದ್ದರೂ ಅದಕ್ಕೆ ಅದೀನವಾಗಿವೆ ಎಂಬುದು ಈ ಸಿದ್ಧಾಂತದ ನಿಲುವು. ಅಂದರೆ ಜೀವಾತ್ಮರು ಮತ್ತು ಪ್ರಕೃತಿ ಪರಬ್ರಹ್ಮನ ಅಂಶವೇ ಆಗಿವೆ. ಈ ಜಗತ್ತನ್ನೂ, ಸಕಲ ಜೀವಾತ್ಮರನ್ನೂ ಪರಬ್ರಹ್ಮತತ್ವ ವ್ಯಾಪಿಸಿಕೊಂಡು ನಿಯಂತ್ರಿಸುತ್ತಿದೆ ಎಂಬುದನ್ನು ಈ ದರ್ಶನ ತಿಳಿಸುತ್ತದೆ.

ವಿಶಿಷ್ಟಾದ್ವೈತದ ಪ್ರಕಾರ ಅನಾದಿಯಾದ ಕರ್ಮುಬಂಧನವೇ ಜೀವಾತ್ಮರು ಸಂಸಾರ ಚಕ್ರದಲ್ಲಿ ಅಂದರೆ ಹುಟ್ಟು-ಸಾವಿನ ಚಕ್ರದಲ್ಲಿ ಸಿಲುಕಿಕೊಂಡು ದು:ಖ ಅನುಭವಿಸಲು ಕಾರಣ. ಈ ಕರ್ಮಬಂಧನವನ್ನು ಕಳಚಿಕೊಂಡು ಪರಬ್ರಹ್ಮವನ್ನು ಸೇರುವುದೇ ಮೋಕ್ಷ ಎಂಬುದು ಈ ಸಿದ್ಧಾಂತದ ನಿಲುವು. ಅದ್ವೈತ ಸಿದ್ಧಾಂತದಂತೆ ಪರಬ್ರಹ್ಮವನ್ನು ಬಿಟ್ಟು ಉಳಿದುದೆಲ್ಲ ಮಿಥ್ಯೆ ಎಂಬುದನ್ನು ಈ ಸಿದ್ಧಾಂತ ಒಪ್ಪುವುದಿಲ್ಲ.

ಕೋಟ್ಯಂತರ ಜೀವಾತ್ಮರು ಮತ್ತು ಪ್ರಕೃತಿ, ಪರಬ್ರಹ್ಮನಿಗಿಂತ ಭಿನ್ನವಾಗಿದ್ದರೂ ಅವು ಪರಬ್ರಹ್ಮನ ಅಂಶವೇ ಆಗಿವೆ. ಉದಾಹರಣೆಗೆ ದೇಹದಲ್ಲಿ ಕೈ, ಕಾಲು, ಕಣ್ಣು, ಕಿವಿ, ಮೂಗು ಹೀಗೆ ಬೇರೆ ಬೇರೆಯಾಗಿದ್ದರೂ ಒಂದೇ ದೇಹವಾಗಿರುವಂತೆ, ಜೀವಾತ್ಮರು ಹಾಗೂ ಪ್ರಕೃತಿ ಬೇರೆ ಬೇರೆಯಾಗಿದ್ದರೂ ಪರಬ್ರಹ್ಮನ ದೇಹವೇ ಆಗಿದ್ದಾರೆ. ಒಂದು ರೀತಿ ಈ ಮೂರು ತತ್ವಗಳು ವಿಶಿಷ್ಟವಾಗಿ ಒಂದೇ ಆಗಿವೆ. ಅದಕ್ಕೆ ಈ ಸಿದ್ಧಾಂತ

ವಿಶಿಷ್ಟ + ಅದ್ವೈತ = ವಿಶಿಷ್ಟಾದ್ವೈತವೆಂದೇ ಜನಪ್ರಿಯವಾಗಿದೆ.

ಸರ್ವಧಮಾನ್‌ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ
ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚ: ।। ಭ.ಗೀ 18-66

ಶ್ರೀ ಕೃಷ್ಣಪರಮಾತ್ಮನ ಈ ಭಗವದ್ಗೀತಾ ವಾಕ್ಯವೇ ರಾಮಾನುಜರ ವಿಶಿಷ್ಟಾದ್ವೈತ ಸಿದ್ಧಾಂತಕ್ಕೆ ಮೂಲ.

ಮೇಲಿನ ಶ್ಲೋಕದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ಹೀಗೆ ಹೇಳುತ್ತಾನೆ ‘ಸರ್ವಧರ್ಮಗಳನ್ನು ಪರಿತ್ಯಜಿಸಿ(ಬಿಟ್ಟು) ನನ್ನನ್ನೇ ಶರಣು ಹೊಂದು. ನಾನು ನಿನ್ನ ಎಲ್ಲಾ ಪಾಪಗಳನ್ನು(ಕರ್ಮಬಂಧನಗಳನ್ನು) ನಾಶಮಾಡಿ ನಿನಗೆ ಮೋಕ್ಷವನ್ನು ಕೊಡುತ್ತೇನೆ, ಶೋಕಿಸಬೇಡ’ ಹೀಗೆ ಪರಬ್ರಹ್ಮನಾದ ಶ್ರೀ ಕೃಷ್ಣ ಅಥವಾ ನಾರಾಯಣನಿಗೆ ಪ್ರಪತ್ತಿ(ಶರಣಾಗತಿ) ಮಾಡಿದರೆ ಶ್ರೀಮನ್ನಾರಾಯಣನು ಜೀವಾತ್ಮರಿಗೆ ಮೋಕ್ಷವನ್ನು ದಯಪಾಲಿಸುತ್ತಾನೆ ಎಂಬುದು ಈ ದರ್ಶನದ ಪ್ರಮುಖ ನಿಲುವು.

ದ್ವೈತ : ಇನ್ನು ಶ್ರೀ ಮಧ್ವರ ದ್ವೈತದರ್ಶನ ಬಹುಮಟ್ಟಿಗೆ ರಾಮಾನುಜರ ದರ್ಶನವನ್ನು ಹೋಲುವಂತೆ ಕಂಡರೂ ಕೆಲವು ತತ್ವ ವಿಚಾರಗಳಲ್ಲಿ ಭಿನ್ನವಾಗಿದೆ. ದ್ವೈತ ಎಂದರೆ ಎರಡು ಎಂದರ್ಥ. ವಿಶಿಷ್ಟಾದ್ವೈತದಂತೆ ದ್ವೈತವೂ ಪರಬ್ರಹ್ಮ ಮತ್ತು ಜೀವಾತ್ಮರೂ, ಪ್ರಕೃತಿಯೂ ಬೇರೆ ಬೇರೆ ತತ್ವಗಳು ಎಂದು ತಿಳಿಸುತ್ತದೆ.

ಆದರೆ ವಿಶಿಷ್ಟಾದ್ವೈತದಲ್ಲಿ ಜೀವಾತ್ಮರಿಗೆ ಭೇದವನ್ನು ಕಲ್ಪಿಸಿರುವುದಿಲ್ಲ. ಅಂದರೆ ಆತ್ಮಸ್ವರೂಪದಲ್ಲಿ ಜೀವಾತ್ಮರಲ್ಲಿ ಸಾಮ್ಯತೆಯನ್ನು ವಿಶಿಷ್ಟಾದ್ವೈತ ಹೇಳಿದರೆ, ದ್ವೈತ ದರ್ಶನವು ಜೀವಾತ್ಮರ ನಡುವೆಯೂ ಭೇದವಿದೆ ಎಂದು ಹೇಳುತ್ತದೆ. ಹಾಗೇ ಪ್ರಕೃತಿಯಲ್ಲಿಯೂ ಭೇದವಿದೆ ಎಂದು ತಿಳಿಸುತ್ತದೆ.

ಪರಬ್ರಹ್ಮ - ಜೀವಾತ್ಮ, ಪರಬ್ರಹ್ಮ-ಪ್ರಕೃತಿ, ಜೀವಾತ್ಮ-ಜೀವಾತ್ಮ, ಜೀವಾತ್ಮ-ಪ್ರಕೃತಿ ಮತ್ತು ಪ್ರಕೃತಿ - ಪ್ರಕೃತಿ ಹೀಗೆ ಪಂಚಭೇದಗಳನ್ನು ದ್ವೈತದರ್ಶನ ಪ್ರತಿಪಾದಿಸುತ್ತದೆ. ವಿಶಿಷ್ಟಾದ್ವೈತದಂತೆ ಪರಬ್ರಹ್ಮ ವಸ್ತುವನ್ನು ಸೇರುವುದೇ ಮೋಕ್ಷವೆಂದೂ ದ್ವೈತದರ್ಶನ ಹೇಳುತ್ತದೆ. ಆದರೆ ಮುಖ್ಯ ವ್ಯತ್ಯಾಸವೆಂದರೆ ಪ್ರತಿಯೊಂದು ಜೀವಾತ್ಮವೂ ತನ್ನ ಅರ್ಹತೆಗೆ ತಕ್ಕಂತೆ ಬೇರೆ ಬೇರೆ ದರ್ಜೆಯ ಮೋಕ್ಷಾನಂದವನ್ನು ಹೊಂದುತ್ತವೆ. ಇನ್ನು ಕೆಲವು ಜೀವಾತ್ಮರಿಗೆ ಮೋಕ್ಷವೇ ಇಲ್ಲ, ಅವು ನಿತ್ಯಸಂಸಾರಿಗಳು ಎಂದು ದ್ವೈತ ದರ್ಶನ ಪ್ರತಿಪಾದಿಸುತ್ತದೆ ಎಂದು ಹೇಳುತ್ತಾರೆ.

ವಿಶಿಷ್ಟಾದ್ವೈತದಂತೆ ನಾರಾಯಣನೆ ಪರಬ್ರಹ್ಮನೆಂದೂ ದ್ವೈತ ದರ್ಶನ ಪ್ರತಿಪಾದಿಸುತ್ತದೆ. ಆದರೆ ವಿಶಿಷ್ಟಾದ್ವೈತದಂತೆ ಲಕ್ಷ್ಮಿಯನ್ನು ನಾರಾಯಣನಿಗೆ ಸಮನಾಗಿ ನೋಡುವುದಿಲ್ಲ. ಅಂದರೆ ರಾಮಾನುಜ ಸಿದ್ಧಾಂತದಲ್ಲಿ ಲಕ್ಷ್ಮಿಗೂ ನಾರಾಯಣನಷ್ಟೇ ಸ್ಥಾನವಿದೆ. ಅಂದರೆ ಲಕ್ಷ್ಮಿನಾರಾಯಣ ದಿವ್ಯದಂಪತಿಗಳಿಬ್ಬರೂ ಸೇರಿ ಪರಬ್ರಹ್ಮವಾಗಿದ್ದಾರೆ. ಆದರೆ ದ್ವೈತ ಸಿದ್ಧಾಂತದಲ್ಲಿ ನಾರಾಯಣನೊಬ್ಬನೇ ಪರಬ್ರಹ್ಮ. ಅದಕ್ಕೇ ದ್ವೈತಾನುಯಾಯಿಗಳನ್ನು ವೈಷ್ಣವರೆಂದೂ, ವಿಶಿಷ್ಟಾದ್ವೈತ ಅನುಯಾಯಿಗಳನ್ನು ಶ್ರೀವೈಷ್ಣವರೆಂದೂ ಕರೆಯುವುದು ವಾಡಿಕೆ. ಹೀಗೆ ದ್ವೈತಕ್ಕೂ, ವಿಶಿಷ್ಟಾದ್ವೈತಕ್ಕೂ ಕೆಲವು ವಿಚಾರಗಳಲ್ಲಿ ಸಾಮ್ಯತೆಯಿದ್ದರೆ, ಕೆಲವೊಂದರಲ್ಲಿ ಭಿನ್ನತೆಯಿದೆ.

ಅಧ್ಯಾತ್ಮ ಜಿಜ್ಞಾಸುಗಳಾಗಬಯಸುವವರಿಗೆ ಅಥವಾ ಮುಮುಕ್ಷುಗಳಿಗೆ(ಮೋಕ್ಷಾಪೇಕ್ಷಿಗಳಿಗೆ) ಪರಿಚಯ ರೂಪವಾಗಿ ಅದ್ವೈತ, ವಿಶಿಷ್ಟಾದ್ವೈತ ಮತ್ತು ದ್ವೈತ ಸಿದ್ಧಾಂತದ ಬಗ್ಗೆ ನಾನು ಓದಿ, ಕೇಳಿ ತಿಳಿದಿರುವ ಕೆಲವು ವಿಚಾರಗಳನ್ನು ತಿಳಿಸಿದ್ದೇನೆ. ಇದರಲ್ಲೇನಾದರೂ ತಪ್ಪಿದ್ದರೆ ಓದುಗಮಿತ್ರರು ಸಂಕೋಚವಿಲ್ಲದೆ ತಿಳಿಸಬೇಕೆಂದು ಕೋರುತ್ತೇನೆ.

ಈ ಮೂರು ಸಿದ್ಧಾಂತಗಳಲ್ಲಿನ ವಿಚಾರಭೇದಗಳನ್ನು ತಿಳಿಸಿದ್ದೇನೆಯೇ ಹೊರತು, ಇದರಲ್ಲಿ ಯಾವುದು ಹೆಚ್ಚು, ಯಾವುದು ಸರಿ ಎಂದು ವಿಮರ್ಶೆ ಮಾಡಿಲ್ಲ. ಈ ಸಿದ್ಧಾಂತಗಳನ್ನು ಇನ್ನೂ ಆಳವಾಗಿ ತಿಳಿಯಬಯಸುವವರು ಆಯಾ ಸಿದ್ಧಾಂತದ ವಿದ್ವಾಂಸರ ಪುಸ್ತಕಗಳನ್ನು ಓದಿ ತಿಳಿದುಕೊಳ್ಳಬಹುದು.

ಅದ್ವೈತದ ಸಾರವನ್ನು ತಿಳಿದುಕೊಳ್ಳಲಿಚ್ಚಿಸುವವರಿಗೆ ಹೊಳೆನರಸೀಪುರದ ಅಧ್ಯಾತ್ಮ ಪ್ರಕಾಶ ಕಾರ್ಯಾಲಯ ಪ್ರಕಟಿಸಿರುವ ಶ್ರೀಶ್ರೀಸಚ್ಚಿದಾನಂದೇಂದ್ರ ಸರಸ್ವತಿಸ್ವಾಮಿಗಳವರ ‘ಶಾಂಕರವೇದಾಂತಸಾರ’ ಬಹಳ ಉಪಯುಕ್ತವಾಗಿರುತ್ತದೆ ಎಂದು ನನ್ನ ಅನಿಸಿಕೆ. ವಿಶಿಷ್ಟಾ ದ್ವೈತ ಸಿದ್ಧಾಂತದ ಬಗ್ಗೆ ಎನ್‌. ಎಸ್‌. ಅನಂತರಂಗಾಚಾರ್‌ ಅವರ ರಾಮನುಜರ ‘ವೇದಾಂತದೀಪ’ ಪುಸ್ತಕವನ್ನು ಓದಬಹುದು. ಹಾಗೇ ಎಸ್‌.ಎಮ್‌.ಎಸ್‌ ಚಾರಿಯವರ ‘ವೈಷವಿಸಂ’ ಆಂಗ್ಲ ಪುಸ್ತಕವು ಬಹಳ ಉಪಯುಕ್ತವಾಗಿರುತ್ತದೆ.

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X