ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರದಿಮ್ಮಮ್ಮನ ಕಣಿವೆಮುಖದಲ್ಲಿ ಸಾಧು ಸುಬ್ರಮಣಿಯೊಂದಿಗೆ

By
|
Google Oneindia Kannada News

ಮೂರನೆಯ ದಿನ (18.12.2021) ಸಂಜೆ 4 ಗಂಟೆಗೆ ಚಿಕ್ಕಬಳ್ಳಾಪುರ-ಗೌರಿಬಿದನೂರು ಮಾರ್ಗದಲ್ಲಿನ ವೀರದಿಮ್ಮಮ್ಮನ ಕಣಿವೆಯತ್ತ ಹೊರಟೆ. ಯಾವುದಾದರೂ ಗಿಡಮರಗಳು ನನ್ನೆದೆಗೆ ಏನಾದರು ಹೇಳೀಯಾವೆಂಬ ನಿರೀಕ್ಷೆ ಮನಸ್ಸಿನಲ್ಲಿತ್ತು. ಕಣಿವೆಯ ಪೂರ್ವಮುಖದಿಂದ ಇಳಿಯುತ್ತಿದ್ದಾಗ, ಹಿಂದಿರುಗುವಾಗ ತಿರುವುಗಳ ಏರನ್ನು ತ್ರಿಚಕ್ರದ ಸ್ಕೂಟಿ ಎಳೆದು ಸಮತಟ್ಟು ರಸ್ತೆಗೆ ಸುಗಮವಾಗಿ ಬಂದೀತೆ ಎಂಬ ಅಳುಕು ಹುಟ್ಟಿತು. 'ನಿನ್ನ ಮೊಂಡುಧೈರ್ಯದ ಹುಚ್ಚು ಸಾಹಸ ಅಲ್ಲಿ ಮಾಡಬೇಡವೆಂದು, ಹೋಗುವುದಿದ್ದರೆ ಜೊತೆಗೆ ಯಾರಾದರೂ ಇರಲಿ' ಎಂದು ಗೆಳೆಯರು ಹೇಳಿದ್ದು ನೆನಪಿಗೆ ಬಂದು ಅಳುಕನ್ನು ಹೆಚ್ಚಿಸಿತು.

ಒಮ್ಮೆ ಪ್ರಯತ್ನಿಸಿ ನೋಡುವ ಅಂದುಕೊಂಡೆ. ಆದರೆ ಅಳುಕು ತಡೆ ಹಾಕಿತು. ಹಿಂದಿರುಗಿದೆ. ಕಣಿವೆಯ ಬಾಯಿಯಿಂದ ಹೊರಬಂದು ನಿಂತ ಕೊಂಚ ಸಮಯಕ್ಕೆ ಸಾಧುವೊಬ್ಬರು ಕಣಿವೆಯತ್ತ ನಡೆದು ಬರುತ್ತಿರುವುದು ಕಂಡಿತು. ಅಭ್ಯಾಸಬಲದಲ್ಲಿ ಫೋಟೋ ತೆಗೆದೆ. ಆತ ಹತ್ತಿರಬರುತ್ತಲೇ ಫೋಟೋ ತೆಗೆದಿದ್ದು ಯಾಕೆ? ಹಾಗೆಲ್ಲ ತೆಗೆಯಬಾರದು ಎಂದು ಆಕ್ಷೇಪಿಸಿದ. ಸಾಧುಗಳ ಬಗೆಗಿನ ನನ್ನ ಆಸಕ್ತಿಯನ್ನು ಅರಿಕೆ ಮಾಡಿದೆ. ಇರಬಹುದು. ನನ್ನ ಫೋಟೋ ತೆಗೆದದ್ದು ತಪ್ಪು ಎಂದು ನನ್ನ ಸಮಜಾಯಷಿಗಳನ್ನು ನಿರಾಕರಿಸಿದ. ಕೈವಾರ ತಾತಯ್ಯನ ಪ್ರಸ್ತಾಪದೊಂದಿಗೆ ಆತನನ್ನು ಮೆತ್ತಗಾಗಿಸಬಹುದೆಂದು, ತಾತಯ್ಯನ ಪದಗಳನ್ನು, ಪೋತಲೂರಿ ವೀರಬ್ರಹ್ಮಂರ ತತ್ವಪದ, ಕಾಲಜ್ಞಾನಪದಗಳನ್ನು ಕನ್ನಡಕ್ಕೆ ಅನುವಾದಿಸಿದ ಬಗ್ಗೆ ಹೇಳಿಕೊಂಡೆ. ಆತ ಮೆತ್ತಗಾಗುವ ಬದಲು ಕಠಿಣನಾಗಿ ನನ್ನಲ್ಲಿ ಆಸಕ್ತಿ ಕೆರಳಿಸಿದ.

ಅದು ತಪ್ಪು. ತೆಲುಗು ಲಿಪಿಯಲ್ಲಿರುವುದನ್ನು ಕನ್ನಡ ಲಿಪಿಯಲ್ಲಿ ಕೊಡಬೇಕಷ್ಟೆ ಎಂದು ವಿಚಿತ್ರ ವಾದಕ್ಕೆ ನಿಂತ. ಏಕೆ ಎಂದೆ. ಅದಷ್ಟೆ ಅಂದ. ಹೀಗೆಂದರೆ ಹೇಗೆ? ಅನುವಾದಿಸಬಾರದು ಅನ್ನುವ ನೀನೇ ತಾನೆ ಕಾರಣ ಕೊಡಬೇಕು ಅಂದೆ. ನನ್ನ ಮನಸ್ಸಿಗೆ ಸರಿಯಲ್ಲ ಅನ್ನಿಸುತ್ತೆ ಅಷ್ಟೆ. ಮೊದಲು ನನ್ನ ಫೋಟೋ ಅಳಿಸಿ ಹಾಕು ಅಂದ. ಆಯಿತು ಅಳಿಸಿ ಹಾಕುತ್ತೇನೆ. ಅನುವಾದಿಸುವುದು ಏಕೆ ಬೇಡವೆಂದು ಹೇಳದಿದ್ದರೆ ತಪ್ಪು ನಿನದಾಗುತ್ತೆ ಅಂದೆ. ಆಕಾಶ ದಿಟ್ಟಿಸುತ್ತ, ಮಂತ್ರ ಬಿಗಿತಪ್ಪತ್ತೆ ಅಂದ. ಪದಗಳು ಮಂತ್ರಗಳಲ್ಲವೆಂದು ಚರ್ಚೆಗಿಳಿದೆ. ಪದಗಳೇ ಮಂತ್ರಗಳೆಂದ. ಇದು ಯಾವ ಸೀಮೆಯ ವಾದವೆಂದು ಪ್ರಶ್ನೆ ಮುಂದಿಟ್ಟೆ. ನನ್ನ ಕೆರಳಿಸ್ತಿದ್ದಿ. ತಾತಯ್ಯ ನಿನ್ನ ಕ್ಷಮಿಸಲ್ಲವೆಂದ. ಪ್ರಶ್ನೆ ಕೆರಳಿಸುವುದಕ್ಕಲ್ಲ, ತಿಳಿದುಕೊಳ್ಳುವುದಕ್ಕೆ ಅಂದೆ.

With Sadhu Subramani in the face of the Veeradhammam kanive

ತಿಳಿಬೇಕಿದ್ದರೆ ತಾತಯ್ಯನ ಭಕ್ತನಾಗು ಹೋಗು. ಅವನು ಸೂತ್ರಗಳನ್ನು ಹೇಳುತ್ತಾನೆ ಕೇಳಿಸಿಕೊ. ವೇಮನ, ತಾತಯ್ಯ, ಬ್ರಹ್ಮಂ ಇವರೇ ನಿಜವಾದ ಗುರುಗಳೆಂದು, ಒಂದಿಬ್ಬರ ಹೆಸರುಗಳನ್ನು ಹೇಳಿ, ಅವರ ಪದಗಳು ಕೆಲಸ ಮಾಡಲ್ಲ. ಅವರು ವರಪ್ರಸಾದಿಗಳೇನು ಹೇಳೋಕೆ? ನನ್ನ ಫೋಟೋ ಅಳಿಸಿದೆಯ ಅಂದ. ಆಗಲೇ ಅಳಿಸಿ ಹಾಕಿದೆ ಅಂದೆ. ತೋರಿಸೆಂದ. ಬೇರೊಂದು ಫೋನು ತೋರಿಸಿ, ನೋಡು ಅಳಿಸಿಹಾಕಿದ್ದೇನೆ ಅಂದೆ. ನಿನಗೆ ತಾತಯ್ಯ ಒಳ್ಳೆಬುದ್ದಿಕೊಟ್ಟ. ನನ್ನ ಫೋಟೊ ಇಟ್ಟು ಪೂಜೆ ಮಾಡಿದರೆ ನಿನಗೇನೂ ಸಿಗೊಲ್ಲ. ಕೈವಾರಕ್ಕೆ ಹೋಗು. ವಸ್ತರ(ವಸ್ತ್ರ)ದಾನ ತಗೊ. ಅವನು ಸೂತ್ರಗಳನ್ನು ಹೇಳುತ್ತಾನೆ ಕೇಳಿಸಿಕೊ ಎಂದು ಪುನರಾವರ್ತಿಸಿದ. ನನ್ನನ್ನು ಕೈವಾರಕ್ಕೆ ಕಳುಹಿಸುವ ಗಟ್ಟಿ ಇರಾದೆ ಅವನದೆಂದು ಅರ್ಥವಾಯಿತು.

ಅರವತ್ತು ದಾಟಿರಬಹುದಾದ ಆ ಸಾಧುವಿನ ಹೆಸರು ಸುಬ್ರಮಣಿ. ಶಿಡ್ಲಘಟ್ಟದವನು. ಸುಮಾರು ಇಪ್ಪತ್ತೈದು ಕಿಲೋಮೀಟರು ಕಾಲ್ನಡಿಗೆಯಲ್ಲಿ ವೀರದಿಮ್ಮನ ಕಣಿವೆಗೆ ಹೊರಟಿದ್ದ. ಸಂಜೆಗೆ ಅವನ ಸಹಸಾಧುಗಳು ಅಲ್ಲಿನ ಗುಡಿಯಲ್ಲಿ ಸೇರುವವರಿದ್ದರು. ಭಂಗಿ ಸೇದುತ್ತ ಪದಗಳನ್ನು ಹಾಡುವುದು ಅವರ ಕಾರ್ಯಕ್ರಮವಾಗಿತ್ತು. ಮುಂದಿನ ಮುಕ್ತಿಗಾಗಿ ಅವರಿಗೆ ಭಂಗಿಯ ಹೊಗೆ ವೈಕುಂಠದ ದಾರಿ ತೋರಿಸುವುದಂತೆ. ಭಂಗಿ 'ಅವನ' ಪ್ರಸಾದವಂತೆ!

ಎಷ್ಟು ದಿನ ಅಲ್ಲಿರುತ್ತೀರೆಂದು ಕೇಳಿದ್ದಕ್ಕೆ ಗೊತ್ತಿಲ್ಲವೆಂದು, ನೀನು ಬರ್ತೀಯಾ ಅಂದ. ಬರಬಹುದು ಎಂದೆ. ಬಾ ಅಂದ. ನಾಳೆ ಬರುತ್ತೇನೆಂದೆ. ನಾಳೆ ಅಂದ್ಮೇಲೆ ನೀನು ಬರೋನಲ್ಲ ಬಿಡು ಅಂದು, ನಿಧಾನವಾಗಿ ಹೆಜ್ಜೆ ಹಾಕುತ್ತ ಕಣಿವೆಯ ಇಳಿಜಾರು ರಸ್ತೆಯಲ್ಲಿ ಕಣ್ಮರೆಯಾದ.

ಮನೆಯತ್ತ ಹೊರಟ ನನ್ನ ಕಣ್ಣ ಮುಂದೆ ಇಂದಿನ ಹುಣ್ಣಿಮೆರಾತ್ರಿಯಲ್ಲಿ ಅವರ ಶ್ವಾಸಕೋಶ ತುಂಬಿ ಹೊರಬಂದು ಅವರಿಗೆ ವೈಕುಂಠದ ದಾರಿ ತೋರಿಸಲು ಗಗನಕ್ಕೇರುವ ಭಂಗಿಯ ಧೂಮ್ರಲೀಲೆ ಕಾಣತೊಡಗಿತು.

Recommended Video

Heavy Rain in Karnataka: ಕರ್ನಾಟಕದಲ್ಲಿ ಭಾರೀ ಮಳೆ , ಶಾಲೆಗಳಿಗೆ ರಜೆ | Oneindia Kannada

English summary
On the third day (18.12.2021) at 4 pm, we set out for the Veeradimmamma valley on the Chikkaballapur-Gauribidanur route. The expectation that any of the trees has ever been to me, He saw someone Sadhu coming in the valley.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X